ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ

ಬದುಕು ನೋವು ನಲಿವುಗಳ ಬಣ್ಣದ ತಿನಿಸಂತೆ
ಬೇವು ಬೆಲ್ಲಗಳ ಮಿಶ್ರಣದ ಡಬ್ಬಿಯಂತೆ
ಕಹಿ ಉಂಡಾಗಲೇ ಸಿಹಿ ರುಚಿಯಾಗುವುದಂತೆ

ಕಾಲೆಳೆಯೋರು ಯಾವಾಗಲೂ ಕಾಲಡಿಯೇ ಇರುವರು
ಕೈ ಹಿಡಿದು ಎತ್ತುವವರು ಮೇಲೆಯೇ ಇರುವರು
ಬಗ್ಗುವವರಿದ್ದಷ್ಟು ಗುದ್ದುವವರಿರುವರು

ನಾವು ಏರುತ ಉಳಿದವರ ಎತ್ತಬೇಕು
ದಯೆ ಕರುಣೆ ಅನುಕಂಪ ನಮ್ಮಲ್ಲಿರಬೇಕು
ಕಷ್ಟದಲಿ ಸಹಾಯವು ಇಷ್ಟದಲಿ ಸಹಬಾಳ್ವೆಯು
ಜೊತೆಯಾಗಬೇಕು

ಕತ್ತಲೆಯೊಳ್ ಹಣತೆಯು ಬೀಗಿ ಬೆಳಗುವುದು
ಎಲ್ಲರ ಬುತ್ತಿಯಲೂ ಸಮಪಾಲು ಇರುವುದು
ದಕ್ಕಿದ್ದು ನಮ್ಮದು ತಾಳ್ಮೆಯಿಂದ ನಡೆದು ಬಿಡು

ಎಲ್ಲ ಸಿಗುವುದು ರಾತ್ರಿ ಹಗಲುಗಳ ಸಮತುಲನದಲ್ಲಿ
ಮೊಗದಿ ನಗುವಿರಲಿ ಸಹಕರಿಸುವ ಗುಣವಿರಲಿ
ಇಂದು ಮಾತ್ರ ವಾಸ್ತವ ಅರ್ಥೈಸಿ ಬಾಳುವುದ ಕಲಿ

ಕಾಲದ ಆಟವಿದು ತಿಳಿದು ಬಾಳುವನೇ ಜಾಣ
ನಾವಿಲ್ಲಿ ಅತಿಥಿಗಳು ಎಲ್ಲವೂ ಬಾಡಿಗೆಯ ಸೊತ್ತಣ್ಣ
ಮರಳಿ ಹೋಗುತ ನಿಜ ನೆಲೆಗೆ ಎಲ್ಲವ ತೊರೆಯಬೇಕಣ್ಣ

ಇದ್ದಾಗ ಹಮ್ಮಿರದೆ ಬಿದ್ದಾಗ ಅಳುಕದೆ
ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೆ
ನಿಂದಿಸುವರ ಹಿಂದಿಟ್ಟು ಪ್ರೀತಿಸುವರ ಮುಂದಿಟ್ಟು
ಮಂದಸ್ಮಿತರಂತೆ ನಡೆಯೋಣ

1 thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ

  1. ಬದುಕನ್ನು ಬಂದಂತೆ ಸ್ವೀಕರಿಸಿ– ಕವಿತೆ ಬಹಳ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು Shalini madam.

Leave a Reply