“ಭಾರತೀಯ ದಂಡ ಸಂಹಿತೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ನೂತನ ಕಾನೂನು”ವೀಣಾ ಹೇಮಂತ್ ಗೌಡ ಪಾಟೀಲ್

ಬಹುಶಹ ಇತ್ತೀಚೆಗೆ ಜಗತ್ತಿನಾದ್ಯಂತ ಅತ್ಯಂತ ದುರ್ಬಳಕೆಯಾಗುತ್ತಿರುವ ವೇದಿಕೆ ಎಂದರೆ ಅದು ಸಾಮಾಜಿಕ ಜಾಲತಾಣಗಳು. ವಿವಿಧ ಸಾಮಾಜಿಕ ತಾಣಗಳಲ್ಲಿ ಕೆಲವರ ಸ್ಟೇಟಸ್ ಗಳನ್ನು, ಸ್ಟೋರಿಗಳನ್ನು ನೋಡಿದರೆ ಸಾಕು ಅವರ ಮನಸ್ಥಿತಿಯ ಅರಿವಾಗುತ್ತದೆ.. ಎಷ್ಟೋ ಬಾರಿ ಜನರು ತಮ್ಮ ಮನಸ್ಸಿನ ಕಹಿಯನ್ನು, ದ್ವೇಷ ಅಸೂಯೆಗಳನ್ನು  ಹೊರಹಾಕಲು ಸ್ಟೇಟಸ್ಗಳ ಬಳಸುತ್ತಾರೆ.ರಾಜಕೀಯ ಪಕ್ಷಗಳ ನಾಯಕರು ಆಡಿದ ಪರ ವಿರೋಧಿ ಮಾತುಗಳ ಮೇಲೆ ದೇಶದ ಪ್ರತಿ ಹಳ್ಳಿ, ಪಟ್ಟಣ, ಶಹರಗಳ ಗಲ್ಲಿ ಗಲ್ಲಿಗಳಲ್ಲಿ ಅಸಹನೆಯ ದ್ವೇಷದ ಹೊಗೆ ಕಾರುವ ಸಂದೇಶಗಳು, ವಿಡಿಯೋಗಳು ಹರಿದಾಡುತ್ತವೆ. ಕೆಲವೊಮ್ಮೆ ತಮಗೆ ಬೇಕಾದಂತೆ ವಿಡಿಯೋಗಳನ್ನು, ಸಂದೇಶಗಳನ್ನು ವಿಕೃತವಾಗಿ ತಿರುಚಲಾಗುತ್ತದೆ.

 ಹಲವು ಬಾರಿ ಹೆಣ್ಣು ಮಕ್ಕಳ ಫೋಟೋಗಳನ್ನು ಇಂದು ಲಭ್ಯವಿರುವ ಹಲವಾರು ಆಪ್ ಗಳ ಸಹಾಯದಿಂದ ಮಾರ್ಪಡಿಸಿ ವಿಕೃತ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಮತ್ತೆ ಕೆಲವೊಮ್ಮೆ ಕೆಲವರು ಮಾತನಾಡಿದ ಮಾತುಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಬೇರೆಯವರಿಗೆ ತೋರಿಸಿ ಅವಹೇಳನ ಮಾಡಲಾಗುತ್ತದೆ. ಎಷ್ಟೋ ಬಾರಿ ಸುಳ್ಳು ಸುದ್ದಿಗಳು ಸತ್ಯದ ಮುಖವಾಡ ಹೊದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತವೆ. ಇದು ಕೆಲವೊಂದು ದುರಂತಗಳಿಗೂ ಕಾರಣವಾಗುತ್ತದೆ.

 ಮೇಲ್ಕಂಡ ಎಲ್ಲ ವಿಷಯಗಳನ್ನು ಮನಗಂಡ ಭಾರತ ಸರ್ಕಾರವು ಇತ್ತೀಚೆಗೆ ಭಾರತೀಯ ನ್ಯಾಯದಂಡ ಸಂಹಿತೆಯಲ್ಲಿ ಕೆಲ ಅಂಶಗಳನ್ನು ಗುರುತಿಸಿ ವಿಧಿಪೂರ್ವಕವಾಗಿ ಅವುಗಳನ್ನು ಜಾರಿಗೆ ತಂದಿದೆ.

ದೇಶದಲ್ಲಿ ಜುಲೈ 1, 2024ಕ್ಕೆ ಅನ್ವಯವಾಗುವಂತೆ ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತೆ ( ಬಿ ಎನ್ ಎಸ್ ) ಯ ಪ್ರಕಾರ ಸಾಮಾಜಿಕ ಜಾಲತಾಣಗಳನ್ನು ಬಳಸುವ  ಪ್ರತಿ ಭಾರತೀಯ ಪ್ರಜೆಯೂ ಕೆಲ ಕಾನೂನು ಪರಿಣಾಮಗಳನ್ನು ಎದುರಿಸದೆ ಇರಲು ಈ ಕೆಳಕಂಡ ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 *ಭಾರತೀಯ ದಂಡ ಸಂಹಿತೆ  (ಐಪಿಸಿ ಸೆಕ್ಷನ್) 153 ಎ ನ ಪ್ರಕಾರ  ಹಿಂಸೆ, ದ್ವೇಷ ಮತ್ತು ಶತ್ರುತ್ವವನ್ನು ಹೆಚ್ಚಿಸುವ ವಿಷಯಗಳನ್ನು, ಭಾಷಣಗಳನ್ನು, ವಿಡಿಯೋ ಕ್ಲಿಪ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದು.

  *ಭಾರತೀಯ ದಂಡ ಸಂಹಿತೆಯ 354 ಎ ಸೆಕ್ಷನ್ ಮೂಲಕ ವೈಯುಕ್ತಿಕ ಮತ್ತು ಅತಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ತಡೆಹಿಡಿಯಬಹುದು.

 *ಭಾರತೀಯ ದಂಡ ಸಂಹಿತೆ  354 ಡಿ ಯ ಪ್ರಕಾರ ಅಂತರ್ಜಾಲದ ಮೂಲಕ ವ್ಯಕ್ತಿಯ ಮಾನಹರಣ  ಮತ್ತು ಸೈಬರ್ ಬೆದರಿಕೆಯಂತಹ ಹಿಂಸಾತ್ಮಕ ಚಟುವಟಿಕೆಗಳು ಶಿಕ್ಷಾರ್ಹ ಅಪರಾಧಗಳಾಗಿವೆ.

 *ಸೆಕ್ಷನ್ 505 ರ ಪ್ರಕಾರ ಯಾವುದೇ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ  ಅವುಗಳ ನಿಖರತೆಯ ಕುರಿತ ಅರಿವನ್ನು ಹೊಂದಿರಬೇಕು.

* ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಪ್ರಕಾರ ರಾಜಕೀಯ ವಿಷಯಗಳ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಿ. ಇದು ದೇಶದ್ರೋಹದ ಆರೋಪಕ್ಕೆ ಕಾರಣವಾಗುತ್ತದೆ.

 * ಸೆಕ್ಷನ್ 63ರ ಪ್ರಕಾರ ಬೇರೆಯವರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಗೌರವಿಸಿ. ಸಂಬಂಧಪಟ್ಟವರ ಅನುಮತಿ ಇಲ್ಲದೆ ಬೇರೊಬ್ಬರ ಕೃತಿಗಳನ್ನು, ಬುದ್ಧಿಮತ್ತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬೇಡಿ ಮತ್ತು ಬಳಸಿಕೊಳ್ಳಬೇಡಿ. ಕೃತಿ ಚೌರ್ಯ ಅಪರಾಧಾರ್ಹ ಶಿಕ್ಷೆ.

* ಸೆಕ್ಷನ್ 292 ರ ಪ್ರಕಾರ ಅಶ್ಲೀಲ ದೃಶ್ಯಗಳು, ವಿಡಿಯೋಗಳನ್ನು ಹಂಚಿಕೊಳ್ಳುವುದು ಅಪರಾಧವೆಂದು ಪರಿಗಣಿಸಲಾಗುವುದು.

* ಐಪಿಸಿ ಸೆಕ್ಷನ್ 420ರ ಪ್ರಕಾರ  ಮೋಸ ಮತ್ತು ವಂಚನೆಯ ಕಾರಣಗಳಿಗಾಗಿ ಸಾಮಾಜಿಕ ಜಾಲತಾಣವನ್ನು ಬಳಸಬಾರದು.

*ಸಂಬಂಧಪಟ್ಟ ಅಧಿಕಾರಿಗಳಿಗೆ ಹಾನಿಕಾರಕ ಮತ್ತು ಆಕ್ಷೇಪಾರ್ಥ ವಿಷಯಗಳನ್ನು ವರದಿ ಒಪ್ಪಿಸಿ.

* ನಿಮ್ಮನ್ನು ನೀವು ನಿರ್ದಿಷ್ಟ ಸಮುದಾಯದೊಂದಿಗೆ ಗುರುತಿಸಿಕೊಳ್ಳಿ. ಆ ಸಮುದಾಯಕ್ಕೆ ಇರುವ ಅರಿವನ್ನು ಹೊಂದಿರಿ.ಇಂದಿನ ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಗಳಲ್ಲಿರುವ ಕ್ಲಿಷ್ಟಕರ ಅಂಶಗಳನ್ನು ಅರಿತುಕೊಂಡು ಭಾರತವೆಂಬ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳನ್ನು ಕಾಪಾಡುವಲ್ಲಿ ನಾವೆಲ್ಲರೂ ಕಟಿಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗೋಣ.


One thought on ““ಭಾರತೀಯ ದಂಡ ಸಂಹಿತೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ನೂತನ ಕಾನೂನು”ವೀಣಾ ಹೇಮಂತ್ ಗೌಡ ಪಾಟೀಲ್

  1. ಹೊಸ ಕಾಯಿದೆ ಬಗೆಗೆ ತಿಳಿಸಲು ಹೋಗಿ, ಭಾರತೀಯ ದಂಡ ಸಂಹಿತೆಯ (IPC) ಬಗೆಗೆ ತಿಳಿಸಿದ್ದಾರೆ?

Leave a Reply

Back To Top