ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ಗೋಲ್ಡನ್ ಟೆಂಪಲ್
ಬಂಗಾರದ ನೀರಲ್ಲಿ
ಅದ್ದಿ ತೊಳೆದ
ಮಂದಿರದ ಬೆರಗು
ಕಂಡು ಒಂದು ಕ್ಷಣ
ನಾನು ಬೆರಗಾಗಿ ಹೋದೆ
ಅದೇ ಕ್ಷಣ ನೀನು
ತಲೆಗೆ ದುಪಟ್ಟಾ ಹೊದ್ದು ಮಂದಿರದ ಎದುರು ನಿಂತೆ
ಬಿಸಿಲ ತಾಪದ ಜಳ
ಅಥವಾ
ಅವಮಾನದ ತಾಪವೋ
ಮಂದಿರ ಕಿಚ್ಚತ್ತಿ ಕೆಂಡವಾಗಿತ್ತು
ಭಕ್ತರೆಲ್ಲ ಭಾವಪರವಶರಾಗಿ
ಕೇಳಿಕೊಂಡರು
ದೇವರೆ ‘ಹೊಳೆವ ಎರಡು ಮಂದಿರಗಳಲ್ಲಿ
ನೀನೆಲ್ಲಿರುವೆ’ಎಂದು…?
ಅವಳಿರುವಾಗ
ಕೆಲಸವೇನು ನನಗಿಲ್ಲಿ…?
ಟೆಂಪಲ್ ದೇವರ ಕೇಳಿತು
ಮೊದಲ ಸಲ
ಟೆಂಪಲ್ ಮತ್ತಷ್ಟು ಮಿರ ಮಿರ
ಮಿಂಚುತ್ತಿತ್ತು
ಕಳಸ, ಗುಂಬಜ್ ಮೇಲೆಲ್ಲಾ
ಅವಳದೇ ಪ್ರತಿ ನೆರಳು
ಗೋಲ್ಡನ್ ಟೆಂಪಲ್
ಮೊದಲ ಬಾರಿ ಹಿನ್ನಡೆ
ಅನುಭವಿಸಿದಂತಿತ್ತು
ಅವಳ ಹೊಂಬಣ್ಣ
ಪ್ರತಿಫಲಿಸಿ
ಅವಳಷ್ಟೆ
ಫಳ ಫಳ ಹೊಳೆಯಲು
ತಿಣುಕಾಡುತಿತ್ತು
ಅವಳು ಅಲ್ಲಿಂದ ದೂರ ಸರಿದಿದ್ದಾಳೆ
ಟೆಂಪಲ್ ಮತ್ತೆ ಬಣ್ಣ ತುಂಬಿಕೊಂಡಿದೆ
ಟೆಂಪಲ್ ಅವಳು ಬರುವ ದಾರಿ ಕಾಯುತ್ತಿದೆ
ಮತ್ತಷ್ಟು ಹೊಳೆವೆನೆಂದು
ಟಿ.ದಾದಾಪೀರ್ ತರೀಕೆರೆ