ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!

ಮಿಡಿವ ತುಡಿವ ಕಿಡಿಯೊಂದು
ಸುಡುತ್ತಲೇ ಇರುವುದು ಎದೆಯ.!

ಭಾವಾನುಭಾವಗಳ ಭಾಷ್ಯವೊಂದು
ಕಾಡುತ್ತಲೇ ಇರುವುದು ಮನವ.!

ಕಂಡ ಕೇಳಿದ ಸಂಗತಿಯೊಂದು
ಕದಡುತ್ತಲೇ ಇರುವುದು ಚಿತ್ತವ.!

ಸಂತಸ ಸಂಕಟ ಏನಾದರೊಂದು
ತೀಡುತ್ತಲೇ ಇರುವುದು ಹೃದಯವ.!

ದೂರ ಸನಿಹ ಎಲ್ಲಿಂದಲೋ ಒಂದು
ತಾಕುತ್ತಲೇ ಇರುವುದು ಅಂತರಂಗವ.!

ತನ್ನದೊ ಜಗದ್ದೊ ಯಾವುದೋ ಒಂದು
ಮೀಟುತ್ತಲೇ ಇರುವುದು ಒಳತಂತಿಯ.!

ಲೌಕಿಕ ಅಲೌಕಿಕ ಎಂಥದ್ದೋ ಒಂದು
ಕಲಕುತ್ತಲೇ ಇರುವುದು ಆಂತರ್ಯವ.!

ಕವಿಯೆಂದರೆ ಹೀಗೆ ನಿತ್ಯ ತಲ್ಲಣದೊಡಲು
ಸದಾ ಭೋರ್ಗರೆವ ಸಂವೇದನಾ ಕಡಲು.!

ಜಂಗುಳಿಯಲ್ಲು ಅಪ್ಪಿ ನಿಲ್ಲುವ ಏಕಾಂತ
ಸಂತೆಯಲ್ಲೂ ಏಕಾಗ್ರಚಿತ್ತ ಕಾವ್ಯಸಂತ.!

ಭಾವ ಬಿತ್ತಿ ಭಾಷ್ಯ ಬೆಳೆವ ಪದತಾಂತ್ರಿಕ
ಲೋಕ ಬೆಳದಿಂಗಳಾಗಿಸುವ ಪದ್ಯಮಾಂತ್ರಿಕ.!

ಚಿರ ಮೋಹಿ ಚಿರ ದಾಹಿ ಚಿರ ವಿರಹಿ
ಎದೆ ಬಸಿದು ಬಡಿಸುವ ಕಾವ್ಯ ದಾಸೋಹಿ.!

ಐಶ್ವರ್ಯವಿಲ್ಲದೆಯು ನಗುವ ಅಕ್ಷರ ಶರಣ
ಭಾವದಾರಿದ್ರ್ಯ ಬಂದೊಡನೆ ಅಕ್ಷರಶಃ ಮರಣ.!


Leave a Reply

Back To Top