ಚೈತ್ರ ಅವರ ಲೇಖನ-ಅಸ್ತಿತ್ವವೆಂದರೆ ಅಪ್ಪ!!

ಲೇಖನ ಸಂಗಾತಿ

ಚೈತ್ರ

ಅಸ್ತಿತ್ವವೆಂದರೆ ಅಪ್ಪ!!

“ಅಪ್ಪ!!” ಅದೆಂತಹ ಭದ್ರತೆಯ ಭಾವ ಇದೆಯಲ್ಲವಾ ಈ ಎರಡಕ್ಷರದಲ್ಲಿ. ಅಮ್ಮ ಸರಾಗವಾಗಿ ಹೋಲಿಕೆಯ ಬತ್ತಳಿಕೆಯೊಳಗೆ ಇಳಿದು ಬಿಡುತ್ತಾಳೆ. ಅಪ್ಪ?! ಉಹ್ಞೂಂ, ಅವ ಸುಲಭವಾಗಿ ಹೋಲಿಕೆಗೆ ದಕ್ಕಲಾರ. ಅಪ್ಪ ಎಂದರೆ ಬದುಕು, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಸಿಡುಕು, ಅಪ್ಪ ಎಂದರೆ ಗೆಳೆಯ, ಅಪ್ಪ ಎಂದರೆ ಸೂಪರ್ ಹೀರೋ ಹೀಗೆ ಮಕ್ಕಳ‌ ಪಾಲಿಗೆ ಏನೇನೋ ಆಗಿದ್ದಾನೆ ಅಪ್ಪ. ಹೌದು ಅಪ್ಪ ಬದುಕು, ಶಕ್ತಿ, ಭರವಸೆ, ಧೈರ್ಯ, ಸಿಡುಕು, ಗಾಂಭೀರ್ಯ, ಭಯ ಎಲ್ಲಾ… ಎಲ್ಲವೂ. ಆದರೆ  ವರ್ಣನಾತೀತ!

ಎಲ್ಲಾ ಅಪ್ಪಂದಿರೂ ವಿಭಿನ್ನವೇ. ನನ್ನಪ್ಪನೂ ಅದಕ್ಕೆ ಹೊರತಲ್ಲ. ಆದರೂ ಅವ ಎಲ್ಲರಂತಲ್ಲ, ಅಪ್ಪ ನನ್ನ ಅಸ್ತಿತ್ವ!! ವರ್ಣನೆಯ ಗುಡಿಯೊಳಗೆ ತಳ್ಳಲಿಕ್ಕೆ ಅವ ಕಲ್ಪನೆಯಲ್ಲ; ವಾಸ್ತವ! ಆರು ಜನ ಮಕ್ಕಳ ತುಂಬು ಕುಟುಂಬದಲ್ಲಿ ಐದನೆಯವ ನನ್ನಪ್ಪ. ಮೂರು ಅಕ್ಕಂದಿರು, ಒಬ್ಬ ಅಣ್ಣ, ಒಬ್ಬ ತಮ್ಮನ ಪಾಲಿನ ಆಪತ್ಭಾಂಧವ. ಬಡತನದ ಗುಡಿ ಕಟ್ಟಿಕೊಂಡ ಅಜ್ಜ ಅಜ್ಜಿಗೆ ಮಾತ್ರವಲ್ಲ ಯಾರಿಗೂ ಹೆದರದ ಗುಂಡಿಗೆ. ಬೆಳಗು ಗೌರ್ಮೆಂಟ್ ಶಾಲೆಯಲ್ಲೂ, ಇರುಳು ಆಲೆಮನೆಯೊಳಗೂ ತುತ್ತಿನ ಚೀಲ, ಜ್ಞಾನದ ದಾಹಗಳೆರಡನ್ನೂ ನೀಗಿಸಿಕೊಳ್ಳಲು ನಿಂತ ಛಲಗಾರ. ಸಿಗುತ್ತಿದ್ದ ಎಂಟಾಣೆ, ಒಂದಾಣೆಯಲ್ಲಿ ಬೇಕಾಗಿದ್ದನ್ನು ಕೊಂಡು ಅವರವ್ವನ ಕೈಗೂ ಉಳಿದ ಹಣವಿಡುತ್ತಿದ್ದ ಸ್ವಾವಲಂಬಿಯವನು. ಮೇಷ್ಟ್ರಿನ ಅಚ್ಚುಮೆಚ್ಚಿನ ಶಿಷ್ಯನಾಗಿ, ಸ್ಫರ್ಧೆಯಲ್ಲಿ ಗೆದ್ದು ಬೀಗಿದ ಸರ್ಟಿಫಿಕೇಟುಗಳನ್ನೆಲ್ಲಾ ಜತನವಾಗಿ ಕಾಪಿಟ್ಟುಕೊಂಡಿರುವ ನೆನಪುಗಳ ಆಗರ. ಹಳೆಯ ಪುಸ್ತಕಗಳಲ್ಲಿ ಖಾಲಿ ಉಳಿದ ಹಾಳೆಗಳನ್ನು ಹರಿದು ಪುಸ್ತಕ ಮಾಡಿಕೊಂಡ, ಗೆಳೆಯ ಗೆಳತಿಯರು ಕೊಡುತ್ತಿದ್ದ ತಿಂಡಿಯಲ್ಲೇ ಹೊಟ್ಟೆ ತುಂಬಿಸಿಕೊಂಡ, ಅಜ್ಜನ  ಹೊಡೆತದಿಂದ ತಪ್ಪಿಸಿಕೊಳ್ಳಲು ಸುತ್ತಿದ ಚಾಪೆಯೊಳಗೆ ಬಚ್ಚಿಟ್ಟುಕೊಂಡ, ಅವರ ಕಾಲಕ್ಕೆ ಒಂದು ರೂಪಾಯಿಯಲ್ಲಿ ಮೈಸೂರು ಟೂರ್ ಹೋಗಿ ಬಂದ, ಹರಿದ ಬಟ್ಟೆಯನ್ನೇ ಮತ್ತೆ ಮತ್ತೆ ಹೊಲೆದುಕೊಂಡ, ಗೋಣಿಚೀಲ ಹಾಸಿ ಮಲಗುತ್ತಿದ್ದ………. ಇನ್ನೂ ಅದೆಷ್ಟೋ ಗತದ ಹಾಡು ನನ್ನಪ್ಪ.

 ಆಗಿನ (ಅರವತ್ತರ ದಶಕ) ಕಾಲಕ್ಕೆಯೇ ಇಡೀ ಮೈಸೂರು ಬೆಂಗಳೂರು ಸುತ್ತಿ ಬಂದದ್ದನ್ನು, ಯಾರಿಗೂ ಅಂಜದೆ ದಿಟ್ಟವಾಗಿ ಬೆಳೆದ ರೀತಿಯನ್ನು, ಅನ್ಯಾಯ ಕಂಡಾಗ ರೊಚ್ಚಿಗೆದ್ದದ್ದನ್ನು, ಕಾಲೇಜಿನ ಯಾವುದೋ ಕಾರಣಕ್ಕೆ ಪೋಲಿಸಿನವರವರೆಗೂ ಹೋಗಿ ಬಂದ ಕತೆಯನ್ನು ನೆನಪಿನ ಪುಟ ತೆರೆದಾಗಲೆಲ್ಲಾ ರೋಚಕವಾಗಿ ಹೇಳುವಾಗ ಅಪ್ಪನ ಕಂಗಳಲ್ಲಿ ಕಾಣುವ ಹೊಳಪಿದೆಯಲ್ಲ, ಮುಖದಲ್ಲಿ ಮೂಡುವ ಖುಷಿಯಿದೆಯಲ್ಲ, ಮಾತಲ್ಲಿ ತುಳುಕುವ ಉತ್ಸಾಹವಿದೆಯಲ್ಲ ಅವೆಲ್ಲವನ್ನು ಎಲ್ಲಿಂದಲೂ ಕೊಂಡು ತರಲಾಗದು. ಬಾಲ್ಯದಲ್ಲಿ ಎಲ್ಲರಂತೆ ಆಡಿ ಬೆಳೆದವ ಪದವಿ ಓದುವಾಗಲೇನೋ ಕಾಲುವೆಗೆ ಈಜಾಡಲು ಹೋಗಿ ಕಿವಿಗೆ ಬಂಡೆ ಬಡಿದು ಕೇಳುವ ಶಕ್ತಿಯನ್ನು ಕಳೆದುಕೊಂಡನಂತೆ. ಅವ ಕಳೆದುಕೊಂಡದ್ದು ಕೇಳುವ ಶಕ್ತಿಯನ್ನಷ್ಟೆ; ಬದುಕಲು ಬೇಕಿರುವ ಅದಮ್ಯ ಚೈತನ್ಯವನ್ನಲ್ಲ. ಪದವಿ ಮುಗಿಸಿ ಕೆಲಸಕ್ಕೆ ಅಲೆದಾಡಿ ಸಿಕ್ಕ ಸಿಕ್ಕ ಫ್ಯಾಕ್ಟರಿಳಲ್ಲೆಲ್ಲ ದುಡಿದು ಹೈರಣಾದವ ಕೊನೆಗೆ ಭೂ ತಾಯಿಯನ್ನೇ ನಂಬಿಕೊಂಡ. ಅವಳೇನೂ ಕೈ ಬಿಡಲಿಲ್ಲ. ಇದ್ದ ಹತ್ತುಗುಂಟೆಯೊಂದಿಗೆ ಇನ್ನಷ್ಟು ಗೇಣಿ ಭೂಮಿ ಕೊಂಡು ಬೆವರುಣಿಸಿ ಹಸಿರುಟ್ಟಿಸಿ ಮೂರು ಮಕ್ಕಳೊಂದಿಗೆ ಸತಿಯ ಹೊಟ್ಟೆ  ಪೊರೆದ, ಪೊರೆಯುತ್ತಿರುವ ಅನ್ನದಾತನವನು.

ಮೂರರಲ್ಲಿ ಎರಡು ಗಂಡು ಒಂದು ಹೆಣ್ಣು ಸಂತಾನ. ಅಪ್ಪನಾಗಲಿ ಅವ್ವನಾಗಲಿ ಎತ್ತಿ ಆಡಿಸಿದ್ದು ನೆನಪಿಲ್ಲ. ಮೊದಲನೆಯವಳಾದ ನಾನು ಅಜ್ಜಿಯ ಮಡಿಲಲ್ಲಿ ಮಿಂದಾಡಿದ್ದೇ ಹೆಚ್ಚು. ನಡುಕಲವನು ಪದೇ ಪದೇ ಅನಾರೋಗ್ಯದ ಗೂಡಿಗೆ ಸಿಕ್ಕಿ ಅಪ್ಪನ  ಅಸಹನೆಗೆ ಗುರಿಯಾಗುತ್ತಿದ್ದ. ಕೊನೆಯವನ ಮೇಲೆ ಅವರ ಚೂರುಪಾರು ಮುದ್ದು. ಆದರೆ ಈ ಅಪ್ಪ ಎನ್ನುವ ಬಂದೂಕಿನ ಕಿಡಿನೋಟವನ್ನು ಉಂಡಷ್ಟು ಪ್ರೀತಿಯನ್ನುಂಡಿರಲಿಲ್ಲ. ಹಾಗಂತ ಕಟು ಹೃದಯಿಯಲ್ಲ ಅವ. ಎದೆಯೊಳಗೆ ಜತನವಾಗಿ ವಾತ್ಸಲ್ಯದೊರತೆಯನ್ನು ಬಚ್ಚಿಟ್ಟುಕೊಂಡಿರುವ ಹೆಂಗರುಳವನು. ಮೂವರಲ್ಲಿ ಒಬ್ಬರು ಹುಷಾರು ತಪ್ಪಿದರೂ ಅಪ್ಪನೊಳಗಿನ ಅಮ್ಮ ತಳಮಳಿಸಿ‌ ಬಿಡುತ್ತಾಳೆ. ಅಮ್ಮನಂತೆ ನಿತ್ಯ ಹೊಡೆದು ಬಡಿದು ಹಿಪ್ಪೆ ಮಾಡದೆ, ಸುಡು ನೋಟದಲ್ಲೇ ಅಂಕೆಯಲ್ಲಿಟ್ಟು ಕೊಂಡ ಪಿ.ಟಿ ಮೇಷ್ಟ್ರವನು.

ನನ್ನಪ್ಪ ಮನೆಯೊಳಗಿದ್ದದ್ದೇ ಅಪರೂಪ. ಸುಮ್ಮನೆ ಕುಳಿತ ಜಾಯಮಾನ ಅಲ್ಲವೇ ಅಲ್ಲ ಅವನದು. ಕೆಲಸವಿರಲಿ, ಇಲ್ಲದಿರಲಿ ತಾನೆ ಏನಾದರೊಂದು ಹುಡುಕಿಕೊಂಡು ಮಾಡುವ ಕ್ರಿಯಾಶೀಲ ವ್ಯಕ್ತಿತ್ವವದು. ಬಹುತೇಕ ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನೋಡುತ್ತಾರೆ. ತಾವು ಹೇಳಿದಂತೆಯೇ ಕೇಳಬೇಕು, ಮಾಡಬೇಕು ಎನ್ನುವ ನಿರೀಕ್ಷೆ ಹೊಂದಿರುತ್ತಾರೆ. ಆದರೆ ನನ್ನಪ್ಪ ಬುದ್ಧಿ ಬರುವವರೆಗಷ್ಟೆ ಆ‌ ನಿರೀಕ್ಷೆಯ ಆಜುಬಾಜಿನಲ್ಲಿದ್ದ. ವಯಸ್ಸಿಗೆ  ಬಂದ ಮೇಲೆ ಸರಿ ತಪ್ಪುಗಳನ್ನು ಯೋಚಿಸಿ, ನಾವೇ ನಿರ್ಧರಿಸುವ, ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟು, ಕಟ್ಟುಪಾಡುಗಳ ಬಂಧನ ಹೇರದೇ ಸ್ವಚ್ಛಂದವಾಗಿ ಹಾರಲು ಬಿಟ್ಟ. ದಾರಿ ತಪ್ಪಿದಾಗ ತಿದ್ದುವ ಗುರುನಾದ. ನೊಂದಾಗ ಸಂತೈಸುವ ಗೆಳೆಯನಾದ.

ನಾನು ಅಚಾನಕ್ ಶ್ರವಣಶಕ್ತಿ ಕಳೆದುಕೊಂಡಾಗ, ನನಗಿಂತಲೂ ಹೆಚ್ಚು ಕನಲಿ ಬೆಂಡಾದದ್ದು ನನ್ನಪ್ಪನೇ. ಅತಿಯಾಗಿ ಕುಗ್ಗಿ ಹೋಗಿದ್ದ ಮನಸಿಗೆ ಭರವಸೆಯ ನೀರುಣಿಸಿ, ಬದುಕುವ ಕಾರಣಕ್ಕೊಂದು ನೆಪವಾದದ್ದೂ ನನ್ನಪ್ಪನೇ. ಓದಿನ ಮಜಲುಗಳನ್ನು ತಿಳಿವಿಗೆಟುಕಿದಂತೆ ಅರಿತು ಪ್ರಥಮವೋ, ಡಿಸ್ಟಿಂಕ್ಷನ್ನೋ ಬಂದಾಗ ಅಪ್ಪನ ತಲೆಯ‌ ಮೇಲೆ ಕೋಡು ಮೂಡಿದ್ದನ್ನು ಕಂಡಿದ್ದೇನೆ. ಓದಿನ ವಿಷಯದಲ್ಲಿ  ಮೂರು ಮಕ್ಕಳೂ ಹಿಂದುಳಿಯದಿದ್ದದ್ದು ನೆಮ್ಮದಿ. ಕಷ್ಟ ಉಂಡವನಿಗೆ ಸುಖ ಬರುತ್ತದೆಯಂತೆ. ಆದರೆ ನನ್ನಪ್ಪ ಚಿಂತೆಯ ಸುಳಿಯೊಳಗೆ ನಲುಗಿ ಅರೆಘಳಿಗೆಯೂ ನೆಮ್ಮದಿಯಿಂದ ಉಸಿರಾಡಿದ್ದನ್ನು ನಾನು ಇದುವರೆಗೂ ಕಂಡಿಲ್ಲ. ಯಂತ್ರದಂತೆ ದುಡಿಯುವ ಅಪ್ಪನ ದುಡಿಮೆ ತಿನ್ನಲು ಐದು ಬಾಯಿಗಳು ಜಾತಕ ಪಕ್ಷಿಯಾದರೆ ಅಪ್ಪ ಏಕಾಂಗಿ. ದುಡಿಮೆ,‌ ಜವಾಬ್ದಾರಿ, ಸಾಲ, ಮಕ್ಕಳ ಬದುಕಲ್ಲೆದ್ದ ಬಿರುಗಾಳಿ, ಸಂಬಂಧಿಕರ ಉರಿಉರಿ, ಅದೆಲ್ಲ ನಿಭಾಯಿಸಲು ಅವ ಹೆಣಗುವ ಪರಿ, ಉಂಡ ಅವಮಾನದ ಕಿಡಿ ಎಲ್ಲವೂ ಚಿಂತೆಯ ಹುಣ್ಣಾಗಿ ಕಡಿಯ ಹತ್ತಿದಾಗ ಅಪ್ಪನ ನಿದ್ದೆ ಬತ್ತಿ ಹೋಯಿತು. ಊಟ ಸೇರದಾಯಿತು. ದೈಹಿಕ-ಮಾನಸಿಕ ಆರೋಗ್ಯ ಏರುಪೇರಾದವು. ಅವ ಅವನಾಗಿಯೇ ಉಳಿಯಲಿಲ್ಲ. ನಿಜವಾಗಲೂ ಅಪ್ಪ ಕಳೆದು ಹೋಗಿ ಬಿಟ್ಟ. ಒಂಟಿತನದ ಗೋರಂಟಿಗೆ ಜೋತುಕೊಂಡ. ಕೇವಲ ನಮಗಾಗಿಯೇ ಬದುಕಿದ, ಬದುಕುತ್ತಿರುವ ಅಸ್ಥಿಪಂಜರವಾಗಿಬಿಟ್ಟ,

‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ ‘ ಎಂಬ  ಮಾತಿಗೆ ಬದ್ಧನಾಗಿದ್ದರೂ, ಜಾತಿ ಭೇದ ಮದ ಮತ್ಸರ ತುಂಬಿಕೊಂಡ ಹುಟ್ಟೂರಿನ  ಜನರ ಬುದ್ಧಿ ಬಲ್ಲವ ನನ್ನ ನಂತರ  ನನ್ನ ಮಕ್ಕಳು ಯಾರಿಂದಲೂ ಮಾತು ಕೇಳಬಾರದು, ಯಾರ ಬಳಿಯೂ ಕೈಯೊಡ್ಡಬಾರದು, ದಾಯಾದಿಗಳಾಗಬಾರದು ಎಂತಲೇ ಸಾಲ-ಸೋಲ ಮಾಡಿ ಅಂಗೈಯಗಲ ಆಸ್ತಿಯನ್ನೂ ಮಾಡಿದ. ಆದರೆ ತನ್ನ ಉದ್ದೇಶ ಬುಡಮೇಲಾಗುತ್ತದೆ ಎನ್ನುವ ಸತ್ಯ ಅರಿಯದಷ್ಟು ದಡ್ಡನೇನಾಗಿರಲಿಲ್ಲ. ಹೀಗಿದ್ದರೂ ತನ್ನ ಜವಾಬ್ದಾರಿ ಬಿಟ್ಟು ಕೊಡಲೊಲ್ಲ; ಕುಟುಂಬವನ್ನೂ. ಚಿಕ್ಕಂದಿನಲ್ಲಿ ಕಂಡಿರದ ಅಪ್ಪನ ಪ್ರೀತಿ ಎದೆಮಟ್ಟಕ್ಕೆ ಬೆಳೆಯತೊಡಗಿದಾಗ ಢಾಳಾಗಿಯೇ ಕಾಣತೊಡಗಿತು.. ತೋರಿಕೆಯಲ್ಲಲ್ಲ; ಎದೆಯಾಳದಲ್ಲಿ, ಹಾಸಿಗೆ ಹಿಡಿದಾಗ ಕಿಲೋ ಮೀಟರ್ಗಟ್ಠಲೇ  ಸೈಕಲ್ಲಿನಲ್ಲಿ ಕೂರಿಸಿ ತಳ್ಳಿಕೊಂಡು ಹೋಗಿ ಗಂಟೆಗಟ್ಟಲೆ ಕಾದು  ಮೆಡಿಸಿನ್  ಕೊಡಿಸುವುದರಲ್ಲಿ, ದೇವರನ್ನ ಆಗಾಧವಾಗಿ ನಂಬುವವ ಆಸ್ಪತ್ರೆಯ‌ ನಂತರ ದೇವರ ಗುಡಿಗೂ ಕರೆದೊಯ್ದು ತಾಯತ ಕಟ್ಟಿಸಿ ಸಮಾಧಾನ ಪಟ್ಟುಕೊಳ್ಳುವಲ್ಲಿ, ಅವ ತಿನ್ನದಿದ್ದರೂ ನಮಗೆ ತಿನ್ನಲು ಕೊಟ್ಟು ಸಬೂಬು ಹೇಳಿ ಹಸಿದುಕೊಂಡಿರಲು ಹಿಂಜರಿಯದಿರುವಲ್ಲಿ, ಕೇಳದಿದ್ದರೂ ಖರ್ಚಿಗೆ ಇದ್ದಷ್ಟು ದುಡ್ಡಿಟ್ಟು  ಬೆನ್ನು ತಟ್ಟುವಲ್ಲಿ, ನಾನಿದ್ದೇನೆ ಬಾ ಅದೇನಾಗುತ್ತದೋ ಆಗಿ ಬಿಡಲಿ ಎಂದು ಹೆಗಲ ಬಳಸುವಲ್ಲಿ, ನಮಗೆ ಮೂರು ಕತ್ತೆಯ ವಯಸ್ಸಾಗಿದ್ದರೂ ಆಗಾಗ ತುತ್ತಿಡುವಲ್ಲಿ,ಯಾವುದೇ ಗೆಲುವು ಸಂಭ್ರಮಗಳನ್ನು ನಮ್ಮ ಪಾಲಿಗೆ  ಬಿಟ್ಟು ಅವ ಒಂದೆಡೆ ನಿಂತು ಕಣ್ತುಂಬಿಕೊಳ್ಳುವಲ್ಲಿ, ಸಿಡಿಮಿಡಿಗುಟ್ಟುವಲ್ಲಿ, ಯಾವ ಮುಚ್ಚುಮರೆ ಇಲ್ಲದೆ ಕುಟುಂಬದ ಆಗು-ಹೋಗುಗಳನ್ನೆಲ್ಲ ಲೆಕ್ಕ ತಪ್ಪದಂತೆ ನಮ್ಮೊಂದಿಗೆ ಚರ್ಚಿಸುವಲ್ಲಿ, ನಮ್ಮ ನಿರ್ಧಾರಗಳಿಗೆ ಆದ್ಯತೆ ನೀಡುವಲ್ಲಿ, ಅಮ್ಮ ಮಾಡಬೇಕಿರುವುದನ್ನು ಅಪ್ಪನೇ ಮಾಡುವಲ್ಲಿ, ನಾವೆಷ್ಟೇ ನೋವು ಅವಮಾನಗಳನ್ನು ಅವನ ಬತ್ತಳಿಕೆಗೆ ಸುರಿದರೂ ಮನ್ನಿಸಿ ಸಹನೆಯ ಒಡಲಾಗಿ ಮುಂದೋಗುವಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ ಆ ಜೀವ ಮಿಡಿಯುತ್ತಿರುವುದೇ ನಮಗಾಗಿ ಎನ್ನುವ ವಾಸ್ತವದ ಕಡೆಗೀಲಿನಲ್ಲಿ. ಅವನು ಅಮ್ಮನಂತ ಅಪ್ಪನೂ ಹೌದು, ಅಪ್ಪನಂತ ಅಮ್ಮನೂ ಹೌದು!!

ಅಪ್ಪ ಬರಿ ಸಿಡುಕನಲ್ಲ! ಬೈಯ್ಯುವ, ಗೇಲಿ ಮಾಡುವ, ರಮಿಸುವ  ತುಂಟನನ್ನೂ ಕಂಡಿದ್ದೇವೆ.  ಎಂದಿಗೂ ಯಾರ ಮೇಲೂ  ಕೈ ಮಾಡಿದ ಇತಿಹಾಸವಿಲ್ಲ. ಅವ ಭೂಮಿ ತೂಕದವನು. ಅಷ್ಟೇ ಶಾಂತ ಪ್ರಿಯನೂ ಹೌದು. ‘ಮಾತಿಗಿಂತ ಮೌನ ಲೇಸು’ ಎಂದು ಏಕಾಂತವಾಗಿ ಸಮಯ ಕಳೆಯ ಬಯಸುವವನಿಗೆ ಗಿಡಮರಗಳಿರುವ ಕೆಳಗಲ ಮನೆಯೇ ಅತಿ ಪ್ರಿಯ. ಅಲ್ಲಿ ಅವನೊಬ್ಬನದೇ ಏಕಾಂತ ಜಗತ್ತು . ಗೆಳೆಯ ಬಳಗ ಊರು ತುಂಬಾ ಇದೆ. ಆದರೆ ಅಪ್ಪ ಅತಿಯಾಗಿ ಯಾರನ್ನೂ ಹಚ್ಚಿಕೊಂಡನಲ್ಲ. ಸುತ್ತಮುತ್ತ ತನ್ನದೇ ಆದ ಗೌರವ ಗತ್ತನ್ನು ಕಾಪಾಡಿಕೊಂಡು ಬಂದಿರುವ ರೀತಿಗೆ ಸ್ವತಃ  ಅಪ್ಪನಿಗೆಯೇ ಹೆಮ್ಮೆಯಿದೆ. ತನ್ನತನದ ಬಗ್ಗೆ ಅಭಿಮಾನವಿದೆ,. ನೆರೆಯವರ ಸುಖ-ದು:ಖಗಳಿಗೆ ಮಿಡಿಯುವ ಕರುಣೆಯ ಜೊಂಪೆಯಿದೆ. ಟೋಟಲಿ ನನ್ನಪ್ಪ ಹೇಳಿದಷ್ಟೂ ಮುಗಿಯದ ಕೌತುಕ. ಅವನೊಳಗಿನ ತೊಳಲಾಟ ತಿಣುಕಾಟಗಳೆಲ್ಲ ಏನೇ ಇರಲಿ ಅಪ್ಪನಾಗಿ ಅವನ ಜವಾಬ್ದಾರಿಯಿಂದ ಎಂದಿಗೂ ನುಣುಚಿಕೊಂಡಿಲ್. ಆ ಅರವತ್ತು ವರ್ಸದ ಬಡಕಲು ದೇಹದ ಜೀವಂತ ದೈವವನ್ನು ಕಂಡಾಗ ನಿಜವಾಗಲು ಕಣ್ಣಂಚು ಒದ್ದೆಯಾಗುತ್ತದೆ. ಅನುಕಂಪಕ್ಕಲ್ಲ;ಅವ ಬದುಕಿದ್ದೇ ಹಾಗೆ. ಇನ್ನೇನಿದ್ದರೂ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುವ ಗುರಿಯೊಂದಿಗೆ ಉದ್ಯೋಗದ ಗರಿ ಹಿಡಿದಿದ್ದೇವೆ. ಅಪ್ಪ ಇನ್ನಾದರೂ ನೆಮ್ಮದಿಯಾಗಿರಬೇಕು.

ಅಬ್ಬಾ! ಅಪ್ಪ ಬರೆದಷ್ಟೂ ಮುಗಿಯದ ಅಕ್ಷಯ ಪಾತ್ರೆ. ಹೊರಗೆ ಹೋಗಿ ಎಲ್ಲೋ ಯಾರಿಂದಲೋ ಅವಮಾನವೋ, ಸಂಕಟವೋ ಅನುಭವಿಸಿದರೂ ದೃತಿಗೆಡದೆ ಎದೆಗೊಟ್ಟು ನಿಲ್ಲುವ ಅಪ್ಪಂದಿರನ್ನ ಎಂದಿಗೂ ದೂರಬೇಡಿ. ಆ ದೂರಿನ ಹಿಂದಿರುವ ಕಾಳಜಿಯನ್ನೊಮ್ಮೆಫೀಲ್ ಮಾಡಿ ನೋಡಿ. ಭಯಕ್ಕೋ ಮತ್ತೇನಕ್ಕೋ ಅಪ್ಪನನ್ನು ಒಂಟಿಯಾಗಿಸಬೇಡಿ. ಅಟ್ಲೀಸ್ಟ್ ಅವನ ಮನದ ಮಾತುಗಳಿಗೆ ಕಿವಿಯಾಗಿ. ಅಪ್ಪ ಕೊಟ್ಟ ಸಲುಗೆ ಸ್ವಾತಂತ್ರ್ಯಗಳನ್ನು ದುರುಪಯೋಗ ಮಾಡದೇ ಯೋಚಿಸಿ ಬಳಸಿ ಅವನ ಗೌರವದ ಕಳಸಕ್ಕೊಂದು ಗರಿಯಾಗಿ. ಆಗ ಅಪ್ಪ ಎದೆಯುಬ್ಬಿಸಿ ನಿಲ್ಲುವ ಪರಿ ನೋಡಿ. ಅಪ್ಪನ ಕನಸುಗಳು ದೊಡ್ಡ ದೊಡ್ಡವೇನಲ್ಲ, ಅವೆಲ್ಲಾ ನಮ್ಮ ಸುತ್ತಲಿನವೇ. ಅಪ್ಪನೊಂದಿಗೆ ನೀವೂ ಗೆಳೆಯರಾಗಿ ಬೆರೆತು ನೋಡಿ, ಅಪ್ಪನ ಆಸೆ ಕನಸುಗಳೆಲ್ಲ ಎಂತವೆಂದು ತಿಳಿದೀತು. ಸಾಧ್ಯವಾದರೆ ಈಡೇರಿಸಿ  ಅವರ ಖುಷಿಯ ಮೊಬಲಗು ಹೆಚ್ಚಿಸಿ. ಇದೆಲ್ಲ ಮಾಡಲಾಗದಿದ್ದರೂ ಪರವಾಗಿಲ್ಲ ಅವರನೆಂದಿಗೂ ತಿರಸ್ಕರಿಸಬೇಡಿ. ನಮ್ಮ ನೆಲೆಗಾಗಿಯೆ ಅವಿರತ ದುಡಿದು ಒರಟಾದ ಅಪ್ಪನ ಕೈ ಹಿಡಿದು ಚಂದದ ನಗೆ ಬೀರಿ ಅವನದರಲ್ಲೇ ಸಂತೃಪ್ತ. ನಿಮ್ಮ ನಿಮ್ಮ ಅಪ್ಪನನ್ನು ಅರಿತು, ಕಾಯುತ್ತೀರಲ್ಲವಾ?! ನಮ್ಮ ಹುಟ್ಟೇ ಅಪ್ಪನ ಮೂಲ. ಹಾಗಾಗಿ ಅಪ್ಪನಿಲ್ಲದೆ ನಮ್ಮ ಅಸ್ತಿತ್ವ ಗುರುತುಗಳಿಲ್ಲ. ತೋರಿಕೆಗೆ ಹೇಳದೆ ಎದೆಯಾಳದಿಂದ  ಹೇಳಿ – ಅಪ್ಪ ಐ ಲವ್ ಯೂ ಪಾ……….


ಚೈತ್ರ 

Leave a Reply

Back To Top