ಲಹರಿ ಸಂಗಾತಿ
ಬೆಳಕು ಪ್ರಿಯ ಹೊಸದುರ್ಗ
ದಿಲ್ ಕಿ ಬಾತ್-
‘ಅವಸರವೇನಿತ್ತು ಗೆಳತಿ’
“ನೀ ಹೇಗೆ ನನ್ನ ಮರೆತೆ ಚೆಲುವೆ
ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದೆ ನೀನು”
ಗೆಳತಿ ಬಹುಶಃ ಇದೇ ನನ್ನ ಕೊನೆಯ ಪತ್ರವಿರಬೇಕು ಅದಕ್ಕೆ ನಿನ್ನನ್ನು ಕೇಳಿದ್ದು “ನೀ ಹೇಗೆ ನನ್ನ ಮರೆತೆ” ಎಂದು ಈ ಪತ್ರ ಬರೆಯಲು ಕುಳಿತ ಈ ಹುಡುಗನ ಜೋಳಿಗೆಯಲ್ಲಿ ಬಿಟ್ಟು ಹೋದ ನಿನ್ನ ನೆನಪುಗಳು ಉಳಿದಿವೆ, ನಿನ್ನಡೆಗಿನ ಪ್ರೇಮವಡಗಿದೆ, ಎಂದಿಗೂ ಬತ್ತದ ಪ್ರೀತಿಯಿದೆ, ದೂರವಾಗಿ ಬಿಟ್ಟೆಯಲ್ಲ ಅದಕ್ಕಾಗಿ ಅನುಭವಿಸಲಾಗದ ವಿರಹದ ಜೊತೆ ಜೊತೆಗೆ ನಿನ್ನನ್ನು ಇಷ್ಟಪಟ್ಟ ತಪ್ಪಿಗೆ ಕಣ್ಣಾಲಿಗಳಲ್ಲಿ ಕಣ್ಣೀರು ಗೂಡುಕಟ್ಟಿದೆ. ನೀ ನಡೆದು ಹೋದ ಕಾಲುದಾರಿಯ ಮರಳಿನ ಮೇಲೆ ಮೂಡಿದ ನಿನ್ನೆಜ್ಜೆಯ ಗುರುತಿನ ಮುಂದೆ ಕುಳಿತ ಈ ಹುಡುಗನ ಹೃದಯದಲ್ಲಿ ಭಾರವಾದ ನೋವಿನ ಸುಖವು ಮೋಡಗಟ್ಟಿ, ಬಿಕ್ಕಳಿಕೆಯಾಗಿ.. ಕಣ್ಣ ನೀರಾಗಿ… ಬಿಸಿಯುಸಿರಾಗಿ… ನಿರಾಸೆಯ… ವರ್ಷಧಾರೆ ಹರಿಯುತಿದೆ.
ನನ್ನ ಎದೆಯ ಬಿಸಿಯುಸಿರು ತಟ್ಟದಿರಲಿ ನಿನಗೆ
ಕಹಿ ನೆನಪಾಗಿಯೂ ಬಾರದಿರಲಿ ನಾನು ನಿನ್ನೊಳಗೆ
ನೋಯಬಾರದು ನಾನು ಮೆಚ್ಚಿದ ಹೃದಯ ಇನ್ನಷ್ಟು ಹಾಳದರೂ ಈ ಒಡೆದ ಹೃದಯ
ಹೌದು, ಎಷ್ಟಾದರೂ ನೀನು ನಾನಿಷ್ಟಪಟ್ಟವಳು ತಾನೇ, ಎಂದಿಗೂ ನಿನ್ನ ಬದುಕ ಹಾದಿಯ ನಡುವೆ ಕಹಿ ನೆನಪಾಗಿಯೂ ನನ್ನ ನೆನಪು ಬಾರದಿರಲಿ ನಿನಗೆ. ನೀನೇ ಯೋಚಿಸಿಬಿಡು ನನ್ನದಾದರೂ ತಪ್ಪೇನಿದೆ? ಅದಾವುದೋ ನಕ್ಷತ್ರ ಜಾರಿ ಕೆಳಗೆ ಬೀಳುವ ಮುನ್ನವೇ ಮನದ ಮನೆ ಬಾಗಿಲ ಸರಿಸಿ, ಸೋಮಾರಿತನವನ್ನೇ ಹಾಸಿ ಹೊದ್ದು ಮಲಗಿದ್ದ ನನ್ನಂತಹ ಪರಮ ಪಾಪಿಯೊಬ್ಬನ ನಡುಮನೆಯೊಳಗೆ ಒಂದು ಮಾತು ಕೂಡ ಕೇಳದೆ ಎಡಗಾಲ ಹೆಜ್ಜೆಯಿರಿಸಿ, ಭರವಸೆಯ ಒಲವ ತುಂಬಿ, ಕನಸಿನ ರಂಗವಲ್ಲಿ ಬಿಡಿಸಿ, ಪ್ರೀತಿಯ ದೀಪದ ಬೆಳಕ ಹಚ್ಚಿದವಳು ನೀನಲ್ವಾ..!!…?
ಹೌದು ನೀ ಹಚ್ಚಿದ ದೀಪದ ಬೆಳಕಲ್ಲಿ ನಾ ಕಣ್ತೆರೆಯುವ ಮುನ್ನವೇ ಎಡಗಾಲೋ..? ಬಲಗಾಲೋ…? ಯಾವುದೋ ಹೆಜ್ಜೆ ಮುಂದಿರಿಸಿ ಹೊರಟುಬಿಟ್ಟೆಯಲ್ಲಾ… “ನಿನ್ನೊಲವಿನ ದೀಪ ಬೆಳಗಲು ನನ್ನೆದೆಯ ನಡುಮನೆಯೇ ಬೇಕಿತ್ತಾ…ನಿನಗೆ..!!..?
ನಾನಲ್ಲೇ ನಿಂತಿದ್ದೆ..
ನನ್ನಿಂದ ನೀ ಹಾಗೇ ದೂರ ಸಾಗುತಲಿದ್ದೆ..
ನೀ ಒಮ್ಮೆಯೂ ಹಿಂತಿರುಗಿ ನೋಡದೆ ಹೊರಟಿದ್ದೆ.…
ಒಂದೇ ಒಂದು ಸಲ ಹಿಂತಿರುಗಿ ನೋಡಿ ಮತ್ತೆ ನೋಡದೆ ಹೊರಟ ನಿನ್ನ ಮನಸಲ್ಲಿ, ಮುಗ್ಧ ಹುಡುಗನೊಬ್ಬನ ಹೃದಯದಲ್ಲಿ ಶುದ್ಧ ಕನಸನ್ನು ಬೆಳೆಸಿ, ಬದುಕಿನ ಬಗೆಗೆ ಭರವಸೆ ತುಂಬಿ, ಕ್ಷಣ ಹೊತ್ತಲ್ಲೆ ಅದೆಲ್ಲವನ್ನೂ ಭಗ್ನ ಪ್ರೀತಿಯ ಸಮಾಧಿಯಡಿಯಲ್ಲಿ ಹೂತು, ವಿರಹದ ಸೂತಕದೊಳಗೆ ಸುತ್ತಿ ಬಿಸಾಟಬೇಕೆಂಬ ದುರಾಲೋಚನೆ ಏನಾದರೂ ಮುಂಚೆಯೇ ತಿಳಿದಿತ್ತಾ ನಿನಗೆ, ನಾ ಎಂದಿಗೂ ಮೋಸಗಾತಿ ಎನ್ನಲಾರೆ, ಬೇಕಾದರೆ ಮಂಥರೆ ಎಂದಾದರೂ ಕರೆಯುತ್ತೇನೆ. ಒಮ್ಮೆ ಶ್ರೀರಾಮಚಂದ್ರ ಚಿಕ್ಕವನಿದ್ದಾಗ ಆಗಸದ ನೀಲಗಡಲಲ್ಲಿ ತೇಲುತ್ತಿದ್ದ ಶಶಿಯನ್ನು ಕಂಡು ತನಗೆ ಬೇಕೆಂದು ಹಠ ರಂಪಾಟ ಮಾಡಿದಾಗ ಅವನ ದುಃಖವನ್ನು ಸಹಿಸಿಕೊಳ್ಳಲಾಗದ ಮಂಥರೆ ಪಾತ್ರೆಯೊಳಗೆ ನೀರು ತುಂಬಿ ಶಶಿಯ ಬಿಂಬವನ್ನು ಅದರಲ್ಲಿ ಸೆರೆಹಿಡಿದು ಬಾಲ ರಾಮನ ಕೈಗೆ ಕೊಟ್ಟು ಕೇಕೆ ಹಾಕಿ ನಗುವಂತೆ ಮಾಡಿದವಳು. ಅದೇ ಮಂಥರೆ ಸಂದರ್ಭದ ಇಕ್ಕಟ್ಟಿಗೆ ಸಿಲುಕಿ, ಕೈಕೆಯ ಬುದ್ಧಿಗೆ ಮಂಕುಬೂದಿ ಎರಚಿ ರಾಜಕುವರನನ್ನ ಕಾಡಿನ ಹಾದಿಗೆ ನಡೆಯುವಂತೆ ಮಾಡಿಬಿಟ್ಟಳು. ಅಂತಹದ್ದರಲ್ಲಿ ನೀನು ಕೂಡ ಸಂದರ್ಭ, ಅನಿವಾರ್ಯತೆಗಳ ಸುಳಿಗೆ ಸಿಲುಕಿ ದೂರವಾಗಿರಬಹುದು. ಅಸಲಿಗೆ ಅದಕ್ಕೆ ನನ್ನದೇನು ತಕರಾರಿಲ್ಲ ಗೆಳತಿ.
ದೀಪವು ನಿನ್ನದೇ..ಗಾಳಿಯೂ ನಿನ್ನದೇ…ಆರದಿರಲಿ ಬೆಳಕು
ಎಂದು ಎಲ್ಲವನ್ನೂ ಅಷ್ಟೇಕೆ ನನ್ನಿಡೀ ಬದುಕನ್ನೇ ಸಮರ್ಪಿಸಿದ್ದೆ.
ನನಗೊಂದು ಮಾತು ಕೂಡ ಕೇಳದೆ ಮನದ ಮನೆಯೊಳಗೆ ಬಂದು “ಪ್ರೀತಿಯ ಬೆಳಕ” ಹಚ್ಚಿಟ್ಟ “ಬೆಳಕಿನ ಹುಡುಗಿ” ನೀನು, ಆದರೆ ನೀನಚ್ಚಿಟ್ಟ ಬೆಳಕಲ್ಲಿ ನಾ ಕಣ್ತೆರೆಯುವ ಮುನ್ನವೇ …!!
ನನಗೊಂದು ಮಾತು ಕೇಳದೆ ಬಂದವಳು
ನನಗೊಂದು ಮಾತು ಹೇಳದೆ ಹೊರಟುಬಿಟ್ಟೆಯಲ್ಲಾ… ಅಷ್ಟು ಅವಸರವೇನಿತ್ತು ಗೆಳತಿ…?..!!!
ಪ್ರೀತಿಯಿಂದ.
ಬೆಳಕು ಪ್ರಿಯ ಹೊಸದುರ್ಗ