ಅರ್ಥ ಆಗಲಿಲ್ಲ ಈ ಬದುಕು- ಅಮರಾವತಿ ಹಿರೇಮಠ

ಲೇಖನ ಸಂಗಾತಿ

ಅಮರಾವತಿ ಹಿರೇಮಠ

ಅರ್ಥ ಆಗಲಿಲ್ಲ ಈ ಬದುಕು

ಮಾಗಿದ ಕಾಯ ಹೆಜ್ಜೆ ಇಡಲು ಭಯ ಎಲ್ಲಿ ಜಾರಿ ಬಿದ್ದೆನೋ ; ಒಂಟಿ ಪಯಣ ನೋಡಿ. ಹಾಗಂತ ಅನಾಥೆ ಎಂದು ಕೊಳ್ಳಬೇಡಿ. ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಇದ್ದಾರೆ. ಮಗಳು ಅಳಿಯ ಇದ್ದಾರೆ . ಆಗಾಗ ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ಪಾಪ ಅವರಿಗೆ ಎಲ್ಲಿ ಸಿಗಬೇಕು ಸಮಯ . ಮಕ್ಕಳ ಶಾಲೆ ಕಾಲೇಜು ಅಲ್ಲದೆ ಆಫೀಸು ರಜ ಸಿಗೋದು ಅಪರೂಪ. ಹೀಗಾಗಿ ಯಾರೂ ಈ ಕಡೆ ಬರೋಲ್ಲ. ನನಗೂ ಎಲ್ಲರ ಜೊತೆಗೆ ಇರಬೇಕು ಅಂತ ಆಸೆ. ಆದರೆ ನನ್ನಾಸೆ ಯಾರು ಕೇಳುತ್ತಾರೆ ಬಿಡಿ.
ಅವರವರ ಸಂಸಾರ ಅವರಿಗೆ ಭಾರ . ಇನ್ನೂ ನನ್ನನ್ನು ಕರೆದುಕೊಂಡು ಹೋಗಿ ಅವರೇನು ಮಾಡುತ್ತಾರೆ . ಏಕೆಂದರೆ ವಯಸ್ಸು ಇಲ್ಲ ನೋಡಿ . ಮೊದಲು ಆದರೆ ಎಲ್ಲಾ ಮಕ್ಕಳು ಫೋನ್ ಮಾಡಿ ನಮ್ಮ ಹತ್ತಿರ ಬನ್ನಿ  , ನಮ್ಮ ಹತ್ತಿರ ಬನ್ನಿ ಎಂದು ಕಾಲ ಮಾಡಿದ್ದೆ ಮಾಡಿದ್ದು . ” ಅಲ್ಲಿ ಏನು ಮಾಡುತ್ತಿ ಅಮ್ಮ .‌ಇಬ್ಬರೂ  ಇಲ್ಲಿಗೆ ಬಂದು ಬಿಡಿರಿ ಇಲ್ಲಿಯೇ ಹಬ್ಬ ಮಾಡೋಣ ಅಂತ ಗೋಗರಿತ್ತಿದ್ದರು ” . ಅವಾಗ ಅಂದ್ರೆ ಇಬ್ಬರಿಗೂ ವಯಸ್ಸಿತ್ತು  ಗಂಡ ಹೆಂಡತಿ ನಾಲ್ಕು ದಿನಗಳ ಮುಂಚೆಯೇ ಹೋಗಿ ಎಲ್ಲಾ ಮನೆ ಕೆಲಸ ಮಾಡುತ್ತಿದ್ದೇವು . ಎಲ್ಲಾ ಮಕ್ಕಳು ಒಂದು ಹಬ್ಬಕ್ಕೂ ಬಿಡುತ್ತಿರಲಿಲ್ಲ . ಆದರೆ ಈಗ ನನ್ನ ಗಂಡ ಸ್ವರ್ಗ ಸೇರಿ ಬಿಟ್ಟ . ನನ್ನನ್ನು ಒಂಟಿಯಾಗಿ ಬಿಟ್ಟು ಹೋದ .
ನನಗೂ ಕೆಲಸ ಆಗಲ್ಲ . ಹೀಗಾಗಿ ಯಾರೂ ನನಗೆ ಕರೆಯೋದು ಇಲ್ಲ . ಇಷ್ಟಾದರೂ ಈ ಬದುಕು ಅರ್ಥ ಆಗ್ಲೇ ಇಲ್ಲ.

ನಾನು ಮದುವೆ ಆಗಿ ಬಂದ ಹೊಸತರಲ್ಲಿ ನಮ್ಮ ಮನೆ ತುಂಬಾ ಮಂದಿ. ಅತ್ತೆ ಮಾವ, ಚಿಕ್ಕತ್ತೆ  ಚಿಕ್ಕ ಮಾವಂದಿರು . ಹೆಣ್ಣು ಮಕ್ಕಳು. ನೆಗೆಣಿಯರು  ಭಾವ ಮೈದುನ ಅತ್ತಿಗೆ ನಾದಿನಿಯರು ಮತ್ತು ಸಣ್ಣ ಪುಟ್ಟ ಮಕ್ಕಳು . ಒಂದು ಬುಟ್ಟಿ  ರೊಟ್ಟಿ ಮಾಡಿ ತುಂಬಿ ಇಟ್ಟರು ಒಂದೊಂದು ಸಲ ನಮಗೆ ರೊಟ್ಟಿ ಮೇಲೆ ಪಲ್ಯ  ಇರುತ್ತಿರಲಿಲ್ಲ.  ಖಾರ ಎಣ್ಣಿ ಹಾಕಿಕೊಂಡು ಊಟ ಮಾಡುತ್ತಿದ್ದೇವು . ಆದರೂ ಮನ ತೃಪ್ತಿಯಿಂದ ಇರುತ್ತಿತ್ತು .ರಾತ್ರಿ ಮಲಗಿದ್ದರೆ ಯಾವಾಗ ನಿದ್ದೆಗೆ ಜಾರುತ್ತಿತ್ತು ಗೊತ್ತಾಗುತ್ತಿರಲಿಲ್ಲ . ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರುತ್ತಿರಲಿಲ್ಲ . ಮನೆಯ ಎಲ್ಲಾ  ಮಕ್ಕಳಿಗೆ ಶಿಕ್ಷಣ ಕೊಡಿಸುವುದು .ಅವರ ಮದುವೆ ಮಾಡುವುದು. ಒಂದಿಲ್ಲೊಂದು ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ನೋಡಿ ಕೊಳ್ಳುವುದು  ಇದರಲ್ಲಿಯೇ ಸಮಯ ಕಳೆದುಹೋಗುತ್ತಿತ್ತು .ಆಗಲೂ ಬದುಕಿನ ಬಗ್ಗೆ ಅರ್ಥ ಆಗ್ಲೇ ಇಲ್ಲ.   ಮನೆ ಚಿಕ್ಕದಾದರೂ ಹೊಂದಾಣಿಕೆ ಮಾಡಿಕೊಂಡು ಜೇನು ಗೂಡಿನಂತೆ ಇರುತ್ತಿದ್ದ  ಆ ಮನೆಯ ಸುಂದರ ನೋಟದ  ಮಧುರ ಕ್ಷಣಗಳು ನೆನಪು ಮಾತ್ರ . ಏಕೆಂದರೆ ಮಕ್ಕಳ ಮದುವೆಯ ನಂತರ ಹೊಸ ಹೊಸ ಮನೆಯಿಂದ ಬರುವ ಸೊಸೆಯಂದಿರ ಮನೋಭಾವ ಬೇರೆಯಾಗಿತ್ತು . ಅವರ ಕನಸುಗಳು ಬೇರೆಯಾಗಿದ್ದವು ತಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಹೊರಟರು. ಅವರ ಸ್ವಾರ್ಥಕ್ಕೆ ಮನೆ ಚಿದ್ರವಾಗಿ ಹೋಯಿತು.
ಈ  ಘಟನೆಯಿಂದಾಗಿ ಹಿರಿಯ ಜೀವಗಳು ಹಾರಿ ಹೋದವು.
ನಮ್ಮ ಮನೆಯ ಸಂಸ್ಕಾರ ಸಂಸ್ಕೃತಿ ಸಂಪ್ರದಾಯಗಳು ಮೂಲೆ ಸೇರಿದವು.
ಪಾಶ್ಚಾತ್ಯ ಸಂಸ್ಕೃತಿಗೆ ಶರಣಾದ ಮಕ್ಕಳು ಸೊಸೆಯರು ಮೊಮ್ಮಕ್ಕಳು ತಮ್ಮ ಮನ ಬಂದಂತೆ ನಡೆಯುವುದು. ಅದನೆಲ್ಲಾ ನೋಡಿ ಕೊಂಡು ತೆಪ್ಪಗೆ ಇರಬೇಕು ಇಳಿ ವಯಸ್ಸಿನವರು ಅಷ್ಟೇ ರೀ.

ಅರುವತ್ತರ ಗಡಿ ದಾಟಿದೆ . ಆದರೂ ಬದುಕು ಅರ್ಥ ಆಗ್ಲೇ ಇಲ್ಲ. ಇಲ್ಲಿಯವರೆಗೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ . ಪ್ರಶ್ನೆಯಾಗಿಯೇ ಉಳಿದಿದೆ . ನಾವುಗಳು ಬಾಲ್ಯ ಕಳೆದಿದ್ದೇವೆ ‘  ಆ ಬಾಲ್ಯಕ್ಕೊಂದು ಅರ್ಥ ಇತ್ತು . ಜಾತಿ ಮತ ಧರ್ಮ ಯಾವುದು ತಿಳಿದಿರಲಿಲ್ಲ . ಪ್ರಪಂಚದ ಜ್ಞಾನವೇ ನಮಗೆ ಇರಲಿಲ್ಲ .ಎಲ್ಲರ ಜೊತೆಗೂಡಿ ಆಡುವುದು . ಆಟ ಆಡಿ ಬಂದು ಕೈ ತೊಳೆಯದೆ ಸಿಕ್ಕಿದೆಲ್ಲ್ ತಿಂದು ಬಿಡುವುದು. ಲಿಂಗ ಭೇದವಿಲ್ಲದ ಮೋಜು ಮಸ್ತಿ ತುಂಬಾ ಸಾಮರಸ್ಯದಿಂದ ಕೂಡಿ ಇರುತ್ತಿತ್ತು. ಶಾಲೆಯ ಗುರುಗಳು ಕಂಡರೆ ಭಯ ಭಕ್ತಿ ಇತ್ತು. ಸಂಜೆಯಾಗುತ್ತಿದ್ದಂತೆ ಮನೆಯ ಅಂಗಳದಲ್ಲಿ ಸಭೆ ‌ಸೇರುತ್ತಿತ್ತು .
ಆಗ ನಮ್ಮಗಳ ಜೊತೆಗೆ ನೀತಿ ಕಥೆಗಳ ಪಾಠ ನಡೆಯುತ್ತಿತ್ತು . ಹೀಗಾಗಿ ಚಿಕ್ಕಂದಿನಲ್ಲೇ ಹೊಂದಾಣಿಕೆಯೆನ್ನುವುದು ಬೆಳೆದು ಬರುತ್ತಿತ್ತು .
ಇಂತಹ ಸುಂದರ ಕುಟುಂಬದಲ್ಲಿ ಹುಟ್ಟಿದ ನಾವುಗಳು ಮನೆಯ ಪದ್ದತಿಯಂತೆ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳಿಗೆ ಬದ್ದವಾಗಿ ನಡೆದು ಕೊಳ್ಳುತ್ತಿದ್ದೇವು .
ದೊಡ್ಡ ದೊಡ್ಡ ಹಬ್ಬಗಳು ಬಂದರೆ, ಏನಿಲ್ಲ ಅಂದರೂ ನೂರು ಜನ ಸೇರುವುದು . ಎಂತಹ ಸಂಭ್ರಮ ಸಡಗರದಿಂದ ಹಬ್ಬ ಆಚರಿಸುವುದು . ಈಗ ಎಲ್ಲವೂ ಮಾಯವಾಗಿದೆ. ಹಬ್ಬದಲ್ಲೂ. ಸ್ಮಶಾನದ ವಾತಾವರಣ . ಊರಿಂದ ಬಂದರು ತಮ್ಮ ತಮ್ಮ ಪಾಡಿಗೆ ಇರುವುದು. ಸದಾ ಕೈಯಲ್ಲಿ ಮೊಬೈಲ್ ಹಿಡಿದು ಕೊಂಡು ಓಡಾಡುವ ಮನಸ್ಸುಗಳಿಗೆ ಹಬ್ಬದ ಸಂಭ್ರಮ ಎಲ್ಲಿಂದ ತಿಳಿಯಬೇಕು ರೀ .
ಸೂಟಿ ಇರುವುದರಿಂದ ಬೆಳೆಗೆ ಹನ್ನೊಂದು ಗಂಟೆಗೆ ಏಳುವುದು   . ಮತ್ತು ತಿಂಡಿ ತಿನಿಸುಗಳ ಬಗ್ಗೆ ವಿಚಾರಿಸಿ ಕೈಯಲ್ಲಿ ಪ್ಲೇಟ್ ಹಿಡಿದು ತಿರುಗಾಡುತ್ತಾ ತಿನ್ನುವುದು.
ಹೀಗಾದರೆ ಹಬ್ಬಕ್ಕೆ ಕಳೆ ಎಲ್ಲಿಂದ ಬರಬೇಕು.
ವಯಸ್ಸಾದವರು ಎಂಬ ಕನಿಕರವೂ ಇಲ್ಲದ ಇಂದಿನ ಮಕ್ಕಳಲ್ಲಿ ಎಲ್ಲಿಂದ ಬರಬೇಕು ಸಂಸ್ಕಾರ ಸಂಸ್ಕೃತಿ .
ಹೋಗಲಿ ಬಿಡ್ರಿ. ನಮಗೇನು ಮಾಡುವುದು .ನಮ್ಮ ಪಾಡಿಗೆ ನಾವು
ಕರ್ಮದ ಫಲ ಎಂದು ಕೊಂಡು ಬದುಕುವುದು.
“ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ “
ಇಷ್ಟಾದರೂ ನಮಗೆ ಅರ್ಥ ಆಗಲಿಲ್ಲ ಬದುಕು ನೋಡಿ.
ಭೌತಿಕ ಸಂಪತ್ತಿಗಾಗಿ ಇಡೀ ಜೀವನ ಗಂಧ ತೀಡಿದಂಗ  ತಿದ್ದಿದರು ಏನು ಪ್ರಯೋಜನ ಇಲ್ಲ.
ಎಲ್ಲವೂ ಶೂನ್ಯ ಸಂಪಾದನೆ .
ಅದೇ ನಾವುಗಳು ಆಧ್ಯಾತ್ಮದ ಸಂಪತ್ತಿಗಾಗಿ ಬದುಕಿದರೆ ಸ್ವರ್ಗದಲ್ಲಿ ನಮಗೆ ಸ್ಥಾನವಾದರೂ ಸಿಗುತ್ತಿತ್ತು.
ಎಲ್ಲಾ ಕಳೆದುಕೊಂಡ ಮೇಲೆ ಬುದ್ಧಿ ಬಂತು. ಆದರೂ ಸರಿಯಾಗಿ ಅರ್ಥ ಆಗಲಿಲ್ಲ ಬದುಕು.


ಅಮರಾವತಿ ಹಿರೇಮಠ

Leave a Reply

Back To Top