ಅನುಭವ ಸಂಗಾತಿ
ಪೂರ್ಣಿಮಾ ಯಲಿಗಾರ
ಅನುಭವವೇ ಬದುಕಿಗೊಂದು ದೊಡ್ಡ ಪಾಠ-
ಸೌಮ್ಯ ಒಬ್ಬ ಪ್ರತಿಭಾವಂತ ಹುಡುಗಿ ತುಂಬಾ ಚೆನ್ನಾಗಿ ಹಾಡುವುದನ್ನು ರೂಡಿಸಿಕೊಂಡಿದ್ದಳು ಇದೀಗ ತಾನೇ ಅವಳ ಪ್ರತಿಭೆ ಬೆಳಕಿಗೆ ಬರುತ್ತಿತ್ತು. ಒಂದೆರಡು ಕಾರ್ಯಕ್ರಮಗಳಲ್ಲಿ ಹಾಡಿ ಜನ ಮೆಚ್ಚುಗೆಯನ್ನು ಗಳಿಸಿದ್ದಳು. ಅವಳ ಗೆಳತಿ ಕುಸುಮ ಒಬ್ಬಳು ಇವಳ ಒಂದು ಗಾಯನದಿಂದ ಪ್ರಭಾವಿತಗೊಂಡು ತಾನು ಹಾಡಲು ಬಯಸಿ ಅಲ್ಪ ಸ್ವಲ್ಪ ಹಾಡುವುದನ್ನು ರೂಡಿಸಿಕೊಂಡಿದ್ದಳು. ತಾನು ಕೂಡ ಕಾರ್ಯಕ್ರಮದಲ್ಲಿ ಹಾಡಬೇಕು ಎನ್ನುವ ಇಚ್ಛೆಯನ್ನು ಸೌಮ್ಯಾಗೆ ತಿಳಿಸಿದಳು.ಸೌಮ್ಯಳ ಒಂದು ಉತ್ತಮ ಸ್ವಭಾವವೆಂದರೆ ತಾನು ಬೆಳೆಯುವುದರ ಜೊತೆಗೆ ಮತ್ತೊಬ್ಬರನ್ನು ಬೆಳೆಸಬೇಕೆನ್ನುವ ಹಂಬಲ. ತುಂಬಾ ಮುಗ್ದೆ. ಕಪಟವನ್ನೇ ಅರಿಯದ ಸೂಕ್ಷ್ಮ ಮನದ ಹುಡುಗಿ. ಹೀಗಿರಲು ಹೇಗಾದರೂ ಮಾಡಿ ಕುಸುಮಳನ್ನು ಕೂಡ ತನ್ನ ಜೊತೆಗೆ ಬೆಳಕಿಗೆ ತರಬೇಕೆಂಬ ಬಯಕೆ ಸೌಮ್ಯಳದು. ಹೀಗಿರಲು ದೊಡ್ಡ ಕಾರ್ಯಕ್ರಮವೊಂದು ಏರ್ಪಡಿಸಲಾಯಿತು ಅದರಲ್ಲಿ ಸೌಮ್ಯಳಿಗೆ ಅವಕಾಶ ಸಿಗುವುದೇ ಕಷ್ಟವಾಗಿತ್ತು. ಅಂತದರಲ್ಲೂ ಕೂಡ ತನ್ನ ಗೆಳತಿಗೆ ಒಂದು ಅವಕಾಶ ಕೊಡಬೇಕೆಂದು ಅವಳನ್ನು ಜೊತೆಗೆ ಕರೆದುಕೊಂಡು ಹೋಗಿ ಆಯೋಜಕರಲ್ಲಿ ವಿನಂತಿಸಿಕೊಂಡಳು. ಆಯೋಜಕರು ನೋಡೋಣ ಅವತ್ತಿನ ದಿವಸ ಇಬ್ಬರೂ ಬನ್ನಿ ಅವಕಾಶ ಮಾಡಿಕೊಡುವೆ ಅಂತ ಹೇಳಿದ್ರು. ಆ ದಿನ ತುಂಬಾ ಆಸೆಯಿಂದ ಸೌಮ್ಯ ತನ್ನ ಗೆಳತಿಯನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಹೋದಳು. ಅಲ್ಲಿ ತುಂಬಾ ಕಲಾವಿದರು ಇರುವುದರಿಂದ ಆಯೋಜಕರು ಇವಳ ಕಡೆ ಗಮನವನ್ನೇ ಕೊಡಲಿಲ್ಲ. ಆದರೆ ಇವಳ ಗೆಳತಿ ಕುಸುಮಳಿಗೆ ಗೊತ್ತಿರುವ ಒಬ್ಬ ದೊಡ್ಡ ವ್ಯಕ್ತಿ ಕಾರ್ಯಕ್ರಮಕ್ಕೆ ಬಂದರು. ಆಗ ಕುಸುಮ ಮಾಡಿರುವುದೇನೆಂದರೆ ತನ್ನೊಬ್ಬಳ ಹೆಸರನ್ನು ಹೇಳಿ ಅಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಳು. ಹಾಗೆ ಸ್ಟೇಜ್ ಮೇಲೆ ಹಾಡಿದಳು ಕೂಡ. ಇವಳಿಗೋಸ್ಕರ ಎರಡು ದಿನದಿಂದ ಆಯೋಜಕರ ಬಳಿ ವಿನಂತಿಸಿಕೊಂಡ ಸೌಮ್ಯಳನ್ನು ಮರೆತೇಬಿಟ್ಟಳು ಆಕೆ.ತನ್ನ ಹೆಸರಿನೊಂದಿಗೆ ಸೌಮ್ಯಳ ಹೆಸರು ಹೇಳಿದ್ದರೆ ಅವಳಿಗೂ ಅವಕಾಶ ಸಿಗುತ್ತಿತ್ತು. ಬೇಕು ಅಂತಲೇ ತನಗೆ ಮಾತ್ರ ಅವಕಾಶ ಸಿಗಲಿ ಎಂಬ ಒಂದು ದುರುದ್ದೇಶದಿಂದ ತನ್ನ ಹೆಸರನ್ನು ಮಾತ್ರ ಹೇಳಿಕೊಂಡು ಅವಕಾಶ ಪಡೆಯುವಲ್ಲಿ ಯಶಸ್ವಿಯಾದಳು. ಇದನ್ನು ಕಂಡ ಸೌಮ್ಯಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತ ಅನುಭವ. ಯಾರಿಗೋಸ್ಕರ ತಾನು ಎರಡು ದಿನದಿಂದ ಅಲೆದಾಡಿದ್ದಳೋ, ಯಾರನ್ನು ಬೆಳೆಸುವುದಕ್ಕೋಸ್ಕರ ತಾನು ಹಂಬಲಿಸಿದ್ದಳೋ ಅವಳೇ ತನಗೆ ಈ ರೀತಿ ಮಾಡಿರುವುದನ್ನು ಕಂಡು ಸೌಮ್ಯದಂಗಾಗಿ ಹೋದಳು.
ಅದರಿಂದ ಆದ ಶಾಕ್ ನಿಂದ ಹೊರಗೆ ಬರಲು ಸೌಮ್ಯಳಿಗೆ ಒಂದು ವಾರ ಸಮಯ ಬೇಕಾಯಿತು. ಅದರಿಂದ ಸೌಮ್ಯ ಜೀವನದಲ್ಲಿ ದೊಡ್ಡ ಪಾಠ ಕಲಿತುಕೊಂಡಳು.
ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಯಾರ ಮನಸ್ಸಿನಲ್ಲಿ ಯಾವ ದುಷ್ಟಬುದ್ಧಿ ಇದೆಯೋ ತಿಳಿಯದು. ಕೈ ಹಿಡಿದು ನಡೆಸುವವರನ್ನೇ ಕಾಲಲ್ಲಿ ಹಾಕಿ ಹೊಸಕಿ ಹಾಕುವ ಜನರಿದ್ದಾರೆ. ತುಂಬಾ ಎಚ್ಚರ ಎಂದು ಅವಳು ಒಳ ಮನಸ್ಸು ಅವಳಿಗೆ ಎಚ್ಚರ ನೀಡುತ್ತಿತ್ತು….. ಬದುಕೊಂದು ಅನುಭವಗಳ ಆಗರ ಪ್ರತಿ ಹೆಜ್ಜೆಯಲ್ಲೂ ಕಲಿಯುವ ಮನಸ್ಸು ನಮ್ಮದಾಗಬೇಕು. ಮೋಸ ಹೋಗುವ ಮುನ್ನ ಎಚ್ಚರಗೊಳ್ಳಬೇಕು.
ಪೂರ್ಣಿಮಾ ಯಲಿಗಾರ