ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ
ಶಿವಲೀಲಾ ಹುಣಸಗಿ
ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ
ಇಂದು ಸಮಾನತೆ,ಅಸಮಾನತೆಗಳ ನಡುವೆ ತುಟಿಕಚ್ಚಿ ಹಿಡಿದು ಮೌನದೊಳಗೆ ತನ್ನಾತ್ಮವನ್ನು ಬಿಗಿದು ಒಡಲೊಳಗೆ ಅಗ್ನಿಯನ್ನು ಬಚ್ಚಿಟ್ಟು ನಡೆಯುವ ಸಂಸಾರದ ನೋಗವನ್ನು ಎಳೆಯುವ ಜೀವವೆಂದರೆ ಅದು ಹೆಣ್ಣು… ಸಾಧನೆಯ ಮೆಟ್ಟಿಲೇರಿದ ಮಹಿಳೆಯರ ಸಾಲು ಬೆರಳೆನಿಕೆಯಷ್ಟಿದ್ದರೂ,ಅದೇ ಮಹತ್ತರ ಶಿಖರವೆಂಬಂತೆ ಬಿಂಬಿಸಿ, ಮಹಿಳಾ ಸಬಲೀಕರಣವಾಗಿದೆಯೆಂದು ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ..ನಮ್ಮ ದೇಶ ಪುರುಷ ಪ್ರಧಾನ ಸಮಾಜದ ಅಡಿಯಲ್ಲಿ ಮುಂದುವರೆದಿದ್ದಕ್ಕೆ ಇತಿಹಾಸ ಸಾಕ್ಷಿ….ಆದರೆ ಸಾಧಕರೂ ಇನ್ನೂ ಎಲೆಮರೆಯಕಾಯಿಯಂತೆ ಜೀವನದ ಸಾಗರದಲ್ಲಿ ಬರುವ ಕಷ್ಟಗಳ ನೀಗಿಸುತ್ತ ಹೇಳ ಹೆಸರಿಲ್ಲದೆ ಕಣ್ಮರೆಯಾಗುವ ಸಾವಿರಾರು ಮಹಿಳೆಯರ ಜೀವನ “ಆಟಕ್ಕೂಂಟು ಲೆಕ್ಕಕ್ಕಿಲ್ಲ” ಎಂಬಂತಾಗಿದೆ.
ತಮ್ಮ ದಿನನಿತ್ಯದ ಬದುಕಿನ ಹೋರಾಟಕ್ಕೆ ಮೈಲುಗಟ್ಟಲೇ ಉದ್ಯೋಗ ಅರಸಿ ವಲಸೆ ಬರುವ ಅಸಂಖ್ಯಾತ ಮಹಿಳೆಯರ ಬವಣೆಯನ್ನು ನೀಗಿಸುವುದಿರಲಿ, ಗಮನಿಸುವ ಇಚ್ಛಾಶಕ್ತಿಯು ಸರಕಾರ ನಡೆಸುವ ಜನಪ್ರತಿನಿಧಿಗಳಿಗೂ ಕಂಡು ಬಂದಿಲ್ಲ..! ಬದುಕಿನ ಅನಿವಾರ್ಯತೆಗೆ ಕಟ್ಟ ಬಿದ್ದು ಲಕ್ಷಾಂತರ ಮಂದಿ ಮಹಿಳಾ ಕಾರ್ಮಿಕರಾಗಿ ಗಾರ್ಮೆಂಟ್ಸ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಗಾರ್ಮೆಂಟ್ಸಯೆಂಬ ನರಕ
ನಮ್ಮ ದೇಶದಲ್ಲಿ ಒಂದು ವರದಿ ಪ್ರಕಾರ 28,000 ಸಾವಿರ ಉಡುಪಿನ ಕಾರ್ಖಾನೆಗಳಿವೆ.ಅದರಲ್ಲಿ ಶೇ 70% ರಷ್ಟು ರಫ್ತಿಗಾಗಿ ಉತ್ಪಾದನೆ ಮಾಡುವ ಕಾರ್ಖಾನೆಗಳು. ಬೆಂಗಳೂರಲ್ಲಿ 3800 ಕಾರ್ಖಾನೆಗಳಿವೆ.ಒಟ್ಟಾರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು 8,00,000 ಲಕ್ಷ. ಶ್ರಮದ ಶೋಷಣೆ ತೀವ್ರವಾಗಿದೆ.14 ರಿಂದ 30 ರ ವಯಸ್ಸಿನ ಮಹಿಳೆಯರನ್ನು ಉಡುಪು ಕಾರ್ಖಾನೆಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವರು. 10 ರಿಂದ 12 ಗಂಟೆ ಕೆಲಸಕ್ಕೆ ಒತ್ತಾಯ.
ಮಹಿಳಾ ಕಾರ್ಮಿಕರು ದೈಹಿಕವಾಗಿ ಸದೃಡರಿದ್ದರೂ, ಮನೆಗೆಲಸ ಮುಗಿಸಿ ಕಾರ್ಖಾನೆಗಳಿಗೆ ಬರುವ ಮಹಿಳೆಯರಿಗೆ ನೆಮ್ಮದಿಯಿಲ್ಲ.ಗೇಟಿನಿಂದ ಹಿಡಿದು ಕೆಲಸಕ್ಕೆ ತೊಡಗುವವರೆಗೂ ಸೂಪರ್ ವೈಸರಗಳು,ಪ್ರೊಡಕ್ಷನ್ ಮ್ಯಾನೇಜರ್ ಗಳ ಕಿರುಕುಳವನ್ನು ಸಹಿಸಿಕೊಳ್ಳಲೇಬೇಕು. ಒಂದು ವೇಳೆ ಅವರ ವಿರುದ್ಧ ತಿರುಗಿಬಿದ್ದರೆ ಕೆಲಸ ಕಳೆದುಕೊಳ್ಳುವ ಭಯ ಬೇರೆ.!
ಇನ್ನೂ ಕೈಗಾರಿಕಾ ಪ್ರದೇಶದಲ್ಲಿ 500 ರಿಂದ 600 ಗಾರ್ಮೆಂಟ್ಸಗಳಿವೆ ಅಲ್ಲಿ ದುಡಿಯುವ ಮಹಿಳೆಯರಿಗೆ ತಮ್ಮ ಏಳೆಗೂಸಿಗೆ ಹಾಲು ಕುಡಿಸಲು ಸಮಯ ನೀಡುವುದಿಲ್ಲ. ಹಾಲಿಣಿಸಿ ತಡವಾಗಿ ಬಂದರಂತೂ ಅಶ್ಲೀಲ ಮಾತುಗಳಿಂದ ನಿಂದಿಸುವುದು ಎಂಬುದು ನುಂಗಲಾರದ ಅಸಹನೀಯ ಸನ್ನಿವೇಶ.
ಒತ್ತಡವೆಂಬ ಸಂಕಟ,ನೋವು
ನಮ್ಮ ರಾಜ್ಯದ ಗಾರ್ಮೆಂಟ್ಸನಲ್ಲಿ ಎಂಟು ಲಕ್ಷ ಕಾರ್ಮಿಕರಿದ್ದು.ಅದರಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಶೇಕಡಾ 85% ರಷ್ಟು ಅಂದರೆ 6 ಲಕ್ಷ 80 ಸಾವಿರ ಮಹಿಳೆಯರು ಹಗಲು ರಾತ್ರಿ ಕಣ್ಣಿಗೆ ಸರಿಯಾಗಿ ನಿದ್ರಿಸದೇ ದುಡಿಯುತ್ತಿರುವುದು.ಯ್ಯಾರ ಕಣ್ಣಿಗೂ ಕಾಣಿವುದಿಲ್ಲ.ಏಕೆಂದರೆ ಅವರ ಚಿಂತನೆ ಮನೆಯಂಗಳದಿಂದ ಗಾರ್ಮೆಂಟ್ಸ ವರೆಗೆ ಮಾತ್ರ.ಅಲ್ಲಿಗೆ ಅವರ ಬದುಕು ಮುಗಿಯಿತು.
ಪ್ರತಿನಿತ್ಯ ಕೆಲಸಕ್ಕೆ ಬೆಳಿಗ್ಗೆ ೯. ರಿಂದ ಸಂಜೆ ೫.೩೦.ಆದರೆ ನಿತ್ಯವು ಅರ್ಧಗಂಟೆ ಹೆಚ್ಚು ಕೆಲಸ ಮಾಡಲೇಬೇಕು. ಅದು ಕಡ್ಡಾಯ.ಸಂಜೆ ಸೈರನ ಮೊಳಗಿದ ಮೇಲೆ ಮನೆಯತ್ತ ಹೋಗಲು ತವಕ ಆಗದು, ಏಕೆಂದರೆ ಮ್ಯಾನೇಜರ್ ಗಳು ಗುರುತಿನ ಚೀಟಿಗಳನ್ನು ತಮ್ಮಲ್ಲಿಟ್ಟಿಕೊಂಡು ಅರ್ಧಗಂಟೆ ಹೆಚ್ಚುವರಿ ಕೆಲಸವಾದ ಮೇಲೆ ಚೀಟಿ ನೀಡಿ ಕಳಿಸುವರು.ಹೆಚ್ಚುವರಿ ಕೆಲಸಕ್ಕೆ ವೇತನವಿಲ್ಲ.
ಕಡಿಮೆ ವೇತನ,ಹೆಚ್ಚುಕೆಲಸಕ್ಕೆನೂ ಕೊರತೆಯಿಲ್ಲ.
ಒತ್ತಡಗಳ ನಡುವೆ ನಿಂತವರು ಕುಳ್ಳುವಹಾಗಿಲ್ಲ, ಕುಂತವರು ನಿಲ್ಲುವ ಹಾಗಿಲ್ಲ,ಬೆನ್ನಿಗೆ ಆಸರೆಯು ಇಲ್ಲ.ಎಲ್ಲಿ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣದಿಂದ ಮಹಿಳೆಯರು ನೀರು ಕುಡಿಯುವುದಿಲ್ಲ.ಊಟಕ್ಕೆ ಅರ್ಧಗಂಟೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ…. ಗಾಳಿಯಾಡಲು ಅವಕಾಶವಿಲ್ಲದಿರುವುದರಿಂದ ಬಟ್ಟೆಗಳ ಧೂಳು ಕಾರ್ಮಿಕರ ಶ್ವಾಸಕೋಶ ಸೇರುತ್ತದೆ. ಗಂಟಲು ಕ್ಯಾನ್ಸರ್, ರಕ್ತ ಹೀನತೆ,ನಿದ್ದೆ ಬರದಿರುವುದು.ಕಾಲು ಮತ್ತು ಬೆನ್ನು ನೋವು,ಗರ್ಭಪಾತ ಅತೀ ಸಾಮಾನ್ಯವಾಗಿ ಮಹಿಳಾ ಕಾರ್ಮಿಕರಿಗೆ ಕಂಡುಬರುವಂತಹ ಆತಂಕಗಳು.
ನಾವು ಧರಿಸುವ ಬಟ್ಟೆಯ ಹಿಂದಿರುವ ಯಾತನೆ ಮಹಿಳೆಯ ಬದುಕಿನ ಚಿತ್ರಣವೆಂದರು ತಪ್ಪಾಗದು.
ಅಸಹನೀಯ ಸನ್ನಿವೇಶಕ್ಕೆ ಮಹಿಳೆ ಬಲಿಯಾಗುವುದು.
ವಿಚಿತ್ರವೆಂದರೆ ಕಾರ್ಮಿಕರು ಎಂದರೆ ಯಂತ್ರದಂತೆ ವಿಶ್ರಾಂತಿ ಪಡೆಯದೇ ಗಾಣದೆತ್ತಿನ ಹಾಗೆ ದುಡಿಯುತ್ತಿಬೇಕು.ಮಹಿಳೆಯ ದೇಹದಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗಳನ್ನು ಸಂಪ್ರದಾಯ ಮತ್ತು ಆಚರಣೆಗಳಚೌಕಟ್ಟಿನಲ್ಲಿ ನೋಡುವ ಮಟ್ಟಿಗೆ ಭಾರತದ ಪುರುಷ ಸಮಾಜ ಮತ್ತು ಆಡಳಿತ ವ್ಯವಸ್ಥೆ ನೈತಿಕ ಅವನತಿ ಹೊಂದಿರುವುದಂತೂ ಸತ್ಯ…
ಮಹಿಳೆ ಮತ್ತು ಯುವತಿಯರಿಗೆ ಸಹಜವಾಗಿ ಕಂಡುಬರುವ ಋತುಚಕ್ರದ (ಮುಟ್ಟಿನ )ಸಂದರ್ಭದಲ್ಲಿ ನೋವನ್ನು ಸಹಿಸಿಕೊಳ್ಳುವಂತೆ ಮಾಡುವುದರೊಂದಿಗೆ ಹೆಚ್ಚು ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಕೆಲವು ಗಾರ್ಮೆಂಟ್ಸ ಕಂಪನಿಗಳು ಹೆಸರಿಲ್ಲದ ಅಪಾಯಕಾರಿ ಮಾತ್ರೆಗಳನ್ನು ನೀಡುತ್ತಿರುವ ಆಘಾತಕಾರಿ ಅಂಶ ಚೆನೈನಲ್ಲಿ ಕಂಡುಬಂದಿರುವುದಲ್ಲದೆ..ಕೆಲಸ ಹೆಚ್ಚಿಸಲು ಅನುಸರಿಸುವ ಮಾರ್ಗ, ಪಾಯಕಾರಿಯೆಂದರೆ ತಪ್ಪಿಲ್ಲ.
ಈ ಮಾತ್ರೆ..ನೋವು ನಿರೋಧಕವಾದರೂ ನಿರಂತರ ಸೇವನೆಯಿಂದ ಅಡ್ಡ ಪರಿಣಾಮಗಳನ್ನು ಎದುರಿಸುವವುದಂತೂ ಸತ್ಯವೆಂಬ ಮಾತು ವೈದ್ಯರು ದೃಡಪಡಿಸಿದ್ದು, ಇದು ಸಾಧ್ಯವಾಗಿದ್ದು ಥಾಮಸ್ ರಾಯಿಟರ್ಸ್ ಫೌಂಡೇಶನ್ ನಡೆಸಿದ ಅಧ್ಯಯನ ಸಮೀಕ್ಷೆ ಯಿಂದ, ಕಾರ್ಮಿಕ ಕಾನೂನನ್ನು ಉಲ್ಲಂಘಿಸಿವಿತರಿಸಲಾದ ಮಾತ್ರೆಯಿಂದ ಖಿನ್ನತೆ,ಉದ್ವೇಗ,ಮೂತ್ರದ್ವಾರದ ಸೊಂಕು,ಫೈಬ್ರಾಯಿಡ್ ಮತ್ತು ಗರ್ಭಪಾತ ಸಮಸ್ಯೆಗಳು ಉಂಟಾಗಿರುವುದು,ಅದರಿಂದ ಬಳಲುವ ಮಹಿಳೆಯರ ಸಂಖ್ಯೆ ಹೆಚ್ಚಿದೆ.
ಇನ್ನೂ ಭಾರತದ ಗಾರ್ಮೆಂಟ್ಸ ಪ್ಯಾಕ್ಟರಿಗಳಲ್ಲಿ ಪಾಶ್ಚಾತ್ಯ ಉಡುಪುಗಳಿಗೆ ಇನ್ನಿಲ್ಲದ ಬೇಡಿಕೆ ಹೆಚ್ಚಿರುವುದರಿಂದ ಈ ಬೇಡಿಕೆ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಸಲುವಾಗಿ ಕೆಲಸ ಮಾಡುವ ಮಹಿಳಾ ಕಾರ್ಮಿಕರನ್ನು ಕಠಿಣವಾದ ನಿಯಂತ್ರಣದಲ್ಲಿಡಲಾಗಿದೆ,ಅದು ಎಷ್ಟೆಂದರೇ ಋತುಚಕ್ರದ ಸಮಯದಲ್ಲೂ ಶೌಚಾಲಯಗಳಿಗೂ ಹೋಗಲಾರದಂತಹ ಹೀನಾಯ ಪರಿಸ್ಥಿತಿ ಎದುರಿಸುತ್ತಿರುವುದು ದುರಂತ..!
ಪ್ರೊಡಕ್ಷನ್ಸ್ ಟಾರ್ಗೆಟ್ ನ ಸಂಕಟ ಬೇರೆ..!
ಪ್ರತಿ ಕಾರ್ಮಿಕರಿಗೆ ಗಂಟೆಗೆ 140-150 ಪೀಸ್ ಉತ್ಪಾದನಾ ಗುರಿ ನೀಡಲಾಗುತ್ತದೆ.ದಿನದ 8 ಗಂಟೆಯ ಅವಧಿಗೆ 1000-1100 ಪೀಸ್ ಗುರಿ ತಲುಪಲೇ ಬೇಕು.ಒಂದೊಮ್ಮೆ ಗುರಿ ಮುಟ್ಟದಿದ್ದರೆ.ಮೂವರಿಂದ ಬೈಗುಳ ತಪ್ಪಿದ್ದಲ್ಲ.
ಅಸಂಘಟಿತ ವಲಯದ ಕಾರ್ಮಿಕರ ನಿತ್ಯ ಗೋಳಾಟ…
ಮನುಷ್ಯನೇ ಅನಾರೋಗ್ಯಕ್ಕೆ ಒಳಗಾಗುವಾಗ ಇನ್ನು ಯಂತ್ರಗಳ ಪಾಡೆನು? ಯಂತ್ರಗಳು ಕೆಟ್ಟು ನಿಂತರೆ ಯ್ಯಾರಿಗೂ ಕೆಲಸವಿರುವುದಿಲ್ಲ.ಕೆಲವೊಮ್ಮೆ ಆರ್ಡರ್ ಇರದಿರುವಾಗ ಕಾರ್ಮಿಕರನ್ನು ಮನೆಗೆ ಕಳಿಸುವರು.ಆದರೆ ಕೆಲಸ ಮಾಡದ ಅವಧಿಯನ್ನು ಆಡಳಿತ ಮಂಡಳಿ ದಾಖಲಿಸಿಕೊಂಡು ರಜಾದಿನಗಳಲ್ಲಿ ಬೆಳಿಗ್ಗೆ, ಸಂಜೆ,ಕೆಲಸ ಮಾಡಿ ಬಾಕಿ ಅವಧಿ ತೀರಿಸಲೇ ಬೇಕು.ಇಲ್ಲವಾದರೆ ಬೋನಸ್ ಇಲ್ಲ. ಶ್ರೀಮಂತ ದೇಶಗಳಿಗೆ ರಫ್ತಾಗುವ ಉಡುಪುಗಳಿಗೆ ಇರುವ ಬೆಲೆ,ಬಟ್ಟೆ ತಯಾರಿಸುವ ಮಹಿಳೆಯರಿಗಿಲ್ಲ ಎಂಬುದೇ ಆತಂಕ.
ಬಡ ಮಹಿಳಾ ಕಾರ್ಮಿಕರೆಂದರೆ ಎಲ್ಲವನ್ನು ಬಿಟ್ಟವರೆಂಬ ಭಾವನೆ.ಹೇಳೋರು,ಕೇಳೋರುಯಾರಿಲ್ಲವೆಂಬಂತೆ ಗಾರ್ಮೆಂಟ್ಸ ಫ್ಯಾಕ್ಟರಿ ಗಳಲ್ಲಿ ನಡೆದುಕೊಳ್ಳುವ ರೀತಿಗೆ ನೊಂದು ನುಡಿದು ಮರೆಯಾಗುತ್ತಾರೆ. ಲೈಂಗಿಕ ಕಿರುಕುಳ,
ದೌರ್ಜನ್ಯ ಗಳಿಂದ ಮುಕ್ತರಾಗಿಲ್ಲ.ಮನೆಗೆ ಬರುವ ಸಂದರ್ಭದಲ್ಲಿ ಮೇಲ್ವಿಚಾರಕರು ತಪಾಸಣೆಯ ನೆಪವೊಡ್ಡಿ ಮುಟ್ಟುವುದು ಮಹಿಳೆಯರ ಪಾಲಿಗೆ ಮಾನಸಿಕ ಹಿಂಸೆ.
“ಅನುಷ್ಠಾನಕ್ಕೆ ನೂರೆಂಟು ಲೋಪದೋಷಗಳು.”
ದೌರ್ಜನ್ಯ, ಲೈಂಗಿಕ ಕಿರುಕುಳ,ಖಿನ್ನತೆಗೆ ಒಳಗಾಗುವುದು. ಗಾರ್ಮೆಂಟ್ಸ ಕಾರ್ಮಿಕರಿಗೆ ಸಾಮಾನ್ಯ ಸಂಗತಿಯಾಗಿದೆ.ಎಕೆಂದರೆ ನೋವಿನ ಜ್ವಾಲೆಯ ಮೇಲೆ ಬೆಂದವರು. ಬರಿ ಬೆಂಗಳೂರಲ್ಲೆ ೧೨೦೦ ಗಾರ್ಮೆಂಟ್ಸ ಗಳಿವೆ.೪.೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರು. ಬಹುತೇಕವಾಗಿ ಮಹಿಳೆಯರು.ಗ್ರಾಮಿಣಭಾಗದವರು.ಪ್ರತಿ ಐದು ವರ್ಷಗಳಿಗೊಮ್ಮೆ ಗಾರ್ಮೆಂಟ್ಸ ಕಾರ್ಮಿಕರ ವೇತನ ಪರಿಷ್ಕರಣೆಯಾಗಿಲ್ಲವೆನ್ನುವುದು ವಿಷಾದನೀಯ. ಕನಿಷ್ಠ ವೇತನ ೮.೩೦೦ ರೂಪಾಯಿ ಸಿಗುತ್ತಿದ್ದು.ಕನಿಷ್ಠ ವೇತನ ವನ್ನು ಮೂರು ವರ್ಷಕ್ಕೊಮ್ಮೆಯಾದರು ಪರಿಷ್ಕರಣೆ ಮಾಡದಿರುವುದು ಕಾರ್ಮಿಕರ ಬದುಕಲ್ಲಿ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿದೆ.
ರಾಜ್ಯ ಸರ್ಕಾರ ೨೦೧೮ ರಲ್ಲಿ ಒಟ್ಟು ೮೨ ಶೆಡ್ಯೂಲ್ಡ್ ಉದ್ಯಮಗಳಲ್ಲಿ ಕನಿಷ್ಠ ಮಾಸಿಕ ವೇತನ ೧೧,೫೦೦ ರೂ.ವೇತನ ನಿಗದಿ ಪಡಿಸಿ ಕರುಡು ಅಧಿಸೂಚನೆ ಪ್ರಕಟಿಸಿತ್ತು. ನಂತರ ಏಕೋ ಗಾರ್ಮೆಂಟ್ಸ ವಲಯವನ್ನು ಹೊರಗಿಡಲಾಯಿತು.ಇದರ ಪರಣಾಮ ಕನಿಷ್ಠ ವೇತನ ೮.೩೦೦/ರೂ.ಗಳಲ್ಲಿಯೇ ಮುಂದುವರೆದಿದೆ ಎಂದರೆ ಗಾರ್ಮೆಂಟ್ಸ ಕಂಪನಿಗಳ ಸ್ವಾರ್ಥ,ಲಾಭಿಯೇ ಇದಕ್ಕೆ ಕಾರಣವೆನ್ನಬಹುದು.
“ಪುನಃ ಸಮಾಜದ ಕೆಂಗಣ್ಣಿಗೆ ಗುರಿಯಾದರೆಂಬ ಭಯ“.
*ಸವೋಚ್ಛ ನ್ಯಾಯಾಲಯದ ಸೂಚನೆ ಇದ್ದರೂ ದೂರು ಸಲ್ಲಿಸಲು ಸಮಿತಿಗಳನ್ನು ಸ್ಥಾಪಿಸಿರುವುದು ಕೆಲವೇ ಸಂಸ್ಥೆಗಳು ಮಾತ್ರ.
*ದೂರು ಸಲ್ಲಿಸಿದ ಮಹಿಳೆಯರು ಕ್ರೂರ ಸಮಾಜವನ್ನು ಎದುರಿಸಬೇಕು.ತಪ್ಪಿತಸ್ಥರಿಗೆ ಛೀಮಾರಿ ಹಾಕುವ ಬದಲು ಮಹಿಳೆಯರ ಮೇಲೆ ಗೂಬೆ ಕೂರಿಸಲಾಗುವುದೆಂಬ ಭಯದಿಂದ ಮಹಿಳೆಯರು ದೂರು ಸಲ್ಲಿಸುವುದಿಲ್ಲ.
*ಕೆಲಸ ಕಳೆದು ಕೊಳ್ಳುವ ಭಯ ಮಹಿಳೆಯರನ್ನು ದೂರು ಸಲ್ಲಿಸುವುದರಿಂದ ದೂರವಿಡುತ್ತದೆ.
* ನ್ಯಾಯ ತೀರ್ಮಾನಕ್ಕೆ ಸಮಯಾವಕಾಶ ಅಧಿಕ ಬೇಕು. ಅದೊಂದು ಸಂಕಟ ಅನುಭವಿಸಬೇಕು.
“ಅಭದ್ರತೆಯನ್ನು ನಿವಾರಿಸುವ ಕ್ರಮಗಳು ಅನಿವಾರ್ಯ.
ಕೆಲಸಕ್ಕೆ ಬರುವ ಮಹಿಳೆಯರ ಕೌಟುಂಬಿಕ ಹಿನ್ನೆಲೆ ಸುಖಮಯವಾಗಿರುವುದಿಲ್ಲ.ಯಾವುದೋ ಕಷ್ಟಗಳ ಸುಳಿಗೆ ಸಿಲುಕಿ ಪರಿಹರಿಸಿಕೊಳ್ಳಲು ನೂರಾರು ಕನಸು ಕಂಡು ಸುರಕ್ಷಿತ ಜಾಗದಲ್ಲಿ ನಾವಿದ್ದೇವೆಯೆಂಬ ಭಾವನೆಯಿಂದ ಬಂದಿರುವವರು.ಅವರಿಗೆ ಅಸಹನೀಯ ಸನ್ನಿವೇಶಗಳು,ಲೈಂಗಿಕ ದೌರ್ಜನ್ಯಗಳು,ಕಿರುಕುಳಗಳು,ಮಾನಸಿಕ ಕಿರುಕುಳ ದುಡಿವ ಸ್ಥಳದಲ್ಲಾದರೇ ಎದುರಿಸುವ ಮನೋಬಲವೆಲ್ಲಿ.?
ಹೀಗಾಗಿ ಕಾರ್ಮಿಕ ಕಾಯಿದೆ ಮಹಿಳೆಯರಿಗೂ ಅನ್ವಯವಾಗಬೇಕು…
* ಪ್ಯಾಕ್ಟರಿಯಿಂದ ಮನೆಗೆ ಹೋಗುವ ಮುನ್ನ ತಪಾಸಣೆ ಮಾಡುವವರು ಮಹಿಳೆಯರಾದರೇ ಸೂಕ್ತ.
* ಭಾರತದ ಪ್ಯಾಕ್ಟರಿ ಕಾಯ್ದೆಯನ್ವಯ ವೈದ್ಯಕೀಯ ಔಷಧಿ ಗಳನ್ನು ನುರಿತ ನಸ್೯,ಅಥವಾ ವೈದ್ಯರು ನಿರ್ವಹಿಸಬೇಕು. ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಗೆ ಅವಕಾಶ ನೀಡಬೇಕು.
* ವ್ಯವಸ್ಥಿತ ಶೌಚಾಲಯವಿರಬೇಕು.ಕುಡಿಯೋನೀರು, ಶುದ್ಧಗಾಳಿ,ಅನಾರೋಗ್ಯದವರಿಗೆ ಹಾಗೂ ಬಾಣಂತಿ, ಗರ್ಭಿಣಿಯರಿಗೆ ವಿನಾಯತಿ ನೀಡಬೇಕು.
* ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಹಾಗೂ ಪಿ ಎಪ್ ನ್ನು ಮಾಲಿಕರು ಸರಿಯಾದ ವೇಳೆಗೆ ತುಂಬಿ ಸಿಗುವಂತೆ ಮಾಡಬೇಕು.ಓಟಿಗೆ ವೇತನ ನೀಡಬೇಕು.
* ಇಎಸ್ಐ ಮೂಲಕ ರಜೆಗೆ ಅಲಿಯದೇ ಕಂಪನಿಯಲ್ಲೇ ರಜೆ ಪಡೆವ ಸೌಲಭ್ಯ ಪಡೆಯುವಂತಿರಬೇಕು.
*ಗಾರ್ಮೆಂಟ್ಸ ಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಗೆ ಅವಕಾಶ ನೀಡಿದರೆ ಸಾಲದು,ಅವರ ಭದ್ರತೆ ಕಡೆಗೂ ಹೆಚ್ಚು ಗಮನವಹಿಸಬೇಕು,ಕ್ಯಾಬ್ನಲ್ಲಿ ಭದ್ರತೆ ನೀಡಬೇಕು.
* “ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ಸ ನಲ್ಲಿ ದುಡಿವ ಮಹಿಳಾ ಕಾರ್ಮಿಕರಿಗೆ ಉಚಿತ ಪಾಸ್ ನೀಡುವ ವಿಚಾರ ಜಾರಿಯಲ್ಲಿ ಬರಬೇಕು.
ಉಪಸಂಹಾರ.
ಹೆಣ್ಣು ಮಕ್ಕಳು ಹೊಸಿಲದಾಟಿ ಪುರುಷರಿಗೆ ಸಮನಾಗಿ ಹೆಗಲು ಕೊಟ್ಟು ದುಡಿಯುವುದು ತಮ್ಮ ಸುಖಕಲ್ಲ..! ಮನೆಯು ನೆಮ್ಮದಿಯಿಂದ ಮುಂದೆ ಸಾಗಲು.ಆದರೆ ಇಂದು ದುಡಿವ ಮಹಿಳೆಯ ಕುರಿತು ಚಿಂತಿಸುವ ವರ್ಗ ಮುಂದೆ ನಿಂತು ಬೆಂಬಲಿಸುತ್ತಿಲ್ಲ..ಮಹಿಳೆ,ದುಡಿದು ತರಬೇಕು, ಹೆರಬೇಕು, ಮಾಡಿಹಾಕಬೇಕು.ಈ ಸ್ಥಿತಿ ಕೂಲಿ ಕಾರ್ಮಿಕರಲ್ಲಿ.ಅದರಲ್ಲೂ ಈ ಗಾರ್ಮೆಂಟ್ಸ ಕಾರ್ಖಾನೆಗಳಲ್ಲಿ ಒಳ ಉಡುಪುಗಳನ್ನು ಹೊಲಿಯುವ, ಅಸಂಖ್ಯಾತರ ಮಹಿಳೆಯರ ಬದುಕು ಬೀದಿ ಪಾಲಾಗುತ್ತಿರುವುದನ್ನು ,ಕಂಡು ಕಾಣದಂತೆ ಕುಳಿತಿರುವ ಪ್ರಭುತ್ವಕ್ಕೆ ಏನು ಹೇಳುವುದು. ಅನಾಹುತವಾದರೆ ಸಾಂತ್ವಾನದ ನುಡಿಯುಯಿಲ್ಲ. ಕೆಲಸವೂಇಲ್ಲ,ಎಲ್ಲ ರೀತಿಯ ದೌರ್ಜನ್ಯ ಗಳನ್ನು ಮೌನವಾಗಿ ಎದುರಿಸಿ ಅರಳುವ ಮುನ್ನ ಬಾಡಿ ಹೋಗುವ ವೇದನೆಯ ಹೂಗಳು.ಇನ್ನಾದರೂ ಕಾರ್ಮಿಕರೆಂದರೆ ಪುರುಷರಷ್ಟೇಯಲ್ಲ..ಮಹಿಳೆಯರು ಎಂಬುದನ್ನು ಅರಿತು ಸಮಾನತೆ ಕಾಯ್ದುಕೊಳ್ಳಬೇಕಿದೆ…ಅಂದಾಗ ಕಾರ್ಮಿಕ ದಿನಕ್ಕೊಂದು ಬೆಲೆ…..
ತುಂಬಾ ತುಂಬಾ ಧನ್ಯವಾದಗಳು ಸರ್