ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ

ನಾವು ಕಾರ್ಮಿಕರು

ಸಾಯಬಣ್ಣ ಮಾದರ

ನಾವು ಕಾರ್ಮಿಕರು

Coffee estate workers return home to answer poll call - The Hindu

ನಮ್ಮಗರಿವಿಲ್ಲದೆ
ಹಗಲು ಇರುಳು ಚಲಿಸುತ್ತಿವೆ
ಕಷ್ಟಕಾರ್ಪಣ್ಯಕೆ ಬರವಿಲ್ಲದೆ ಚಲಿಸುತ್ತಿದೆ ಜೀವ
ಮುಸುಕು ಹೊದ್ದು
ಹಸುರನುಟ್ಟು
ನಾಳೆ ಎಂಬುವುದು ಭಯವಿಲ್ಲದೆ!
ತಲೆಯೊಡೆದು ಬದಕುವವರು ನಾವಲ್ಲ
ಬರಿ ದುಡಿದು ತಿನ್ನುವರು ನಾವೆಲ್ಲ !

ನಿಮ್ಮ ಗೋಪುರ ಮೀನಾರಗಳಿಗೆ ನಮ್ಮ ಎಲುಬುಗಳೆ ಹಂದರವಾಗಿ
ನಿಮ್ಮ ತೆವಳುವ ಕನಸುಗಳಿಗೆ
ನಮ್ಮ ಸ್ವಪ್ನದೆಲೆಗಳಾಗಿ
ಚಲಿಸುತ್ತಿದ್ದೇವೆ
ಮಾಸಿದ ಬಣ್ಣ ಬಳಿದುಕೊಂಡು
ನಿಮ್ಮ ಭಾಷೆ-ಭಾವಗಳು
ನುಂಗಿ ಹಾಕಿವೆ ಎಷ್ಟೊಂದು ಜೀವಗಳು
ಉಸಿರಿನ ಸಮಾಧಿಗಳ ಮೇಲೆ

ಆಕಾಶದಲ್ಲಿ ಹಾರಾಡಿ
ನೀರಿನಲ್ಲಿ ತೇಲಾಡಿ
ಭೂಮಿಯಲ್ಲಿ ಹುಂಕರಿಸುವವರೆ
ಕಣ ಕಣದ ಕೆಂಬಣ್ಣ ಸುರಿಸಿ
ದೇಶ ಕಟ್ಟಲು ಜೀವ ತೆತ್ತವರು ನಾವು !
ಚಿಗುರಿದ ಹೂವ ಮಾಲೆ ಮಾಡಿಕೊಂಡವರು
ನೀವು!

ಮಲಹೊತ್ತು
ಚಪ್ಲಿ ಹೊಲೆದು
ಚರಂಡಿ ಬಳಿದು
ರೋಡಿಗೆ ಟಾರು ಹೊತ್ತವರು
ನಿಮ್ಮ ಶವಕ್ಕೆ ಮುಕ್ತಿದಾತರು ನಾವು !
ಬರಿ
ಸ್ವಚ್ಛ ಭಾರತ ವಾರಸದಾರರು ನೀವು

ಮಳೆ ಬಿಸಿಲಿಗೆ ಮೈಯೊಡ್ಡಿ
ದಬ್ಬಾಳಿಕೆ ಅವಮಾನಕ್ಕೆ ಕಲ್ಲಾಗಿ
ದುಡುಮೆಯೇ ದೇವರೆಂದು
ಹೊಟ್ಟೆ ತುಂಬುವ ಕನಸಿಗಾಗಿ
ಕಲ್ಲಿಗು ಕಣ್ಣೀರಾದ ಬದಕು ನಮ್ಮದು

ಬೆನ್ನು ಬಾಗಿಸಿ
ಕಣ್ಣು ಪಿಳುಕಿಸಿ
ಚರ್ಮ ಸುಟ್ಟು
ನೆರಿಗೆ ಬಿದ್ದವರು
ಆಸೆಗೋಪುರ ಕಳಚಿ
ಆಕಾಶವೆ ಚಪ್ಪರ ಹೊದ್ದು
ಭೂಮಿಯೇ ಹಾಸಿಗೆ ಮಾಡಿಕೊಂಡು ಬದುಕುವ
ನಮ್ಮ ಬಾಳೆ ಬೆಂಗಾಡು
ನಾವು ಇರದಿದ್ದರೆ
ನಿಮ್ಮ ಬಾಳು ಬರಿ ಗೋಳು !!

******

Leave a Reply

Back To Top