ನಾವು ಮತ್ತು ಅವರು
ಶೋಭಾ ನಾಯ್ಕ. ಹಿರೇಕೈಕಂಡ್ರಾಜಿ.
ನಾವು ಮತ್ತು ಅವರು
ಇಲಿ ಕೊರೆದ ಮನೆ ಗೋಡೆಗೆ
ಮಣ್ಣ ಮೆತ್ತಿಯೇ ಬಂದಿದ್ದಾರಿಲ್ಲಿ
ಮಹಡಿ ಮನೆಗೆರಡು
ಕಂಬ ಎಬ್ಬಿಸಲು
ಅವರ ಮೈ ಬೆವರಿಗಷ್ಟು
ಕೂಡಿಸಿ, ಕಳೆದು ಲೆಕ್ಕಹಾಕಿ
ಕೂಲಿ ಕೊಡುವ ನಾವುಗಳು
ನಮ್ಮ ಮೈ ಬೆವರನ್ನು
ಹೇಳಿದಷ್ಟು ಕಟ್ಟಿ ಇಳಿಸಿ ಬರುತ್ತೇವೆ.
ಸಂಜೆ ಮೀನು ಮತ್ತು
ಮಾರುದ್ದ ಜಡೆಯ ಮಗಳಿಗೆರಡು
ರಿಬ್ಬನ್ನು ಒಯ್ಯುವಾಗ
ನಗುತ್ತವೆ ಅವರ ಕೈಯಲ್ಲಿ
ನಾವೇ ಕೊಟ್ಟ ನೋಟುಗಳು
ಇಲ್ಲಿನ ಬರಕತ್ತಿನ ಬದುಕ ಕಂಡು
ಕೊನೆಗೂ ಕಂಡದ್ದೇನು ಇಲ್ಲಿ?
ಮುಚ್ಚಿದ ಬಾಗಿಲ ಒಳಗಡೆ
ಕೋರೈಸುವ ಗ್ಲಾಸು, ಹೊಳೆಯುವ ಟೆರೇಸು
ಬಿಟ್ಟರೆ, ಹಸಿರ ಕೊಂದು
ಜಾರುವ ನೆಲ ಹಾಸು
ದುಡಿದು ರಾತ್ರಿ ಮನೆ ಸೇರಿದ ಅವರೋ..
ಜೋಗುಳ ಕೇಳಿಸಿಕೊಂಡಂತೆ
ನಿದ್ದೆ ಹೋಗುತ್ತಾರೆ ಜೋಪಡಿಯಲ್ಲಿ
ನಾವೋ…
ದಿಂಬಿನ ಜೊತೆಗೆ, ನಿದ್ದೆಯನ್ನೂ ಮಾರುವವರಿಗಾಗಿ
ಬರ ಕಾಯುತ್ತಿದ್ದೇವೆ ಇಲ್ಲಿ
ಈ ಮಹಡಿ ಮನೆಯಲ್ಲಿ.
*******
ತುಂಬಾ ಧನ್ಯವಾದಗಳು ಸರ್.