ಸಂಗಾತಿ ವಾರ್ಷಿಕ ವಿಶೇಷಾಂಕ

ರಮೇಶ್ ಸಿ. ಬನ್ನಿಕೊಪ್ಪ

ಕವಿ ಕವಯತ್ರಿಗಿರಬೇಕಾದ ಸಮಾಜಿಕ ಜವಾಬ್ದಾರಿ…

ಪ್ರೀತಿಯಿಲ್ಲದೆ ಹೂವು ಅರಳಿತು ಹೇಗೆ…?

  • ಜಿ ಎಸ್ ಶಿವರುದ್ರಪ್ಪ

ಕವಿ ಕವತ್ರಿಗೆ ‘ಕಾವ್ಯ’ ಬರೆಯುವ ಜವಾಬ್ದಾರಿ ಹಾಗೂ ಸಾಮಾಜಿಕ ಹೊಣೆಗಾರಿಕೆ ಇಲ್ಲದೆ ಹೋದರೆ ಹೇಗೆ…?? ಆಧುನಿಕ ಕಾಲಘಟ್ಟದಲ್ಲಿ ಕಾವ್ಯ ಬರೆಯುವುದು ಹಿಂದಿಗಿಂತಿಲ್ಲೂ ಅತ್ಯಂತ ತೀವ್ರಗತಿಯಿಂದ ನಡೆಯುತ್ತದೆ. ಪ್ರತಿಯೊಬ್ಬರು ಕೂಡ ಇಂದಿನ ಯುವಕರು ಹಿರಿಯರ ಮಾರ್ಗದರ್ಶನವಿಲ್ಲದೆ, ತಮ್ಮದೇ ಆದ ಧಾಟಿಯಲ್ಲಿ ಬರೆಯುವ ಕಾವ್ಯದ ಅನುಸಂಧಾನಕ್ಕೆ ಒಳಪಡದೆ ಇರುವುದು ವಿಷಾದನೀಯ.

ಕಾವ್ಯವನ್ನು ಹೆಸರು ಮಾಡಲು, ಕೀರ್ತಿ ಗಳಿಸಲು, ತನ್ನನ್ನು ತಾನು ಕಾವ್ಯದಿಂದಲೇ ಗುರುತಿಸಬೇಕು ಎನ್ನುವ ತೆಳುವಾದ ಅಭಿಪ್ರಾಯಕ್ಕಾಗಿಯೋ ಕಾವ್ಯವನ್ನು ಬರೆಯುವ ದೊಡ್ಡ ದಂಡೆಯಿದೆ.

ಕಾವ್ಯ ಅಂದ್ರೆ ಏನು? ಕಾವ್ಯವನ್ನು ಏಕೆ ಬರೆಯಬೇಕು..? ಎನ್ನುವ ಪ್ರಾಥಮಿಕ ತಿಳುವಳಿಕೆ ಇಂದಿನ ನನ್ನಂತಹ ಕವಿಗಳಿಗೆ ಕವಿಯತ್ರಿಗೆ ತಿಳಿಯದೆ ಹೋಗಿರುವುದು ದುರಂತವೆನ್ನಬಹುದು.

ಹಾಗಾದರೆ…

ಕವಿಯಾದವನಿಗೆ ಕವಿತೆಯನ್ನು ಬರೆಯುವಾಗ, ಕವಿತೆಯನ್ನು ಬರೆದು ವಾಚಿಸುವಾಗ ಓದುಗರನ್ನು ಮೆಚ್ಚಿಸಿದರೆ ಕವಿತೆ ಬರೆದ ಸಾರ್ಥಕ ಕ್ಷಣವೆಂದು ಮುಗಿಸಿಬಿಡಬಹುದೇ…?? ಅಥವಾ ಯಾವುದೋ ಒಂದು ಕವಿಗೂಷ್ಠಿಯಲ್ಲಿ ಕವಿತೆಯನ್ನು ವಾಚಿಸಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಸುಂದರವಾದ ಫೋಟೋದೊಂದಿಗೆ ಪ್ರಮಾಣಪತ್ರ ಪಡೆದರೆ ಅಲ್ಲಿಗೆ ಕವಿಯ ಜವಾಬ್ದಾರಿ ಮುಗಿದು ಹೋಯಿತೇ..‌?? ಯಾವುದೋ ರಾಜ್ಯಮಟ್ಟದ ಪತ್ರಿಕೆಯಲ್ಲಿ ಕವಿತೆಯನ್ನು ಬಂದಿರುವುದನ್ನು ಎಲ್ಲಾ ಗುಂಪುಗಳಿಗೆ, ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಂಡರೆ ಕವಿತೆ ಬರೆದದ್ದು ಸಾರ್ಥಕವಾಯಿತು ಎಂದುಕೊಂಡು ಸುಮ್ಮನೆ ಇರುವುದೇ…??

ಹಾಗಾದರೆ ಕವಿತೆ ಬರೆಯುವಾಗ ಕವಿಯಾದವನಿಗೆ ಯಾವ ಜವಾಬ್ದಾರಿ ಇರಬೇಕು..? ಇವೆಲ್ಲವನ್ನೂ ಕವಿತೆ ಬರೆಯುವ ಪ್ರತಿಯೊಬ್ಬರೂ ಕಿರಿಯರಿರಲಿ, ಹಿರಿಯರಿರಲಿ ಎಲ್ಲರೂ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವಿದೆ.

ಹಿಂದೆ ಕವಿತೆ ಬರೆಯುವುದು ಅಥವಾ ಕವಿಯಾಗುವುದು ಎಂದರೆ ಅದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ, ಮೂಢನಂಬಿಕೆಗೆ, ಅಸಮಾನತೆಗೆ, ನೆಡೆಯುವ ದೌರ್ಜನ್ಯಕ್ಕೆ, ತನ್ನ ಸುತ್ತಲಿನ ಪರಿಸರದ ಆಗುಹೋಗುಗಳಿಗೆ ಕಿವಿಗೊಳುವ, ಕಣ್ಣಾಗುವ, ಕರುಳಾಗುವ, ಹೃದಯ ಮಿಡಿಯುವ, ಸಮಸ್ಯೆಗಳಿಗೆ ಸ್ಪಂದಿಸುವ ಗುರುತರವಾದ ಜವಾಬ್ದಾರಿಯನ್ನು ಕವಿ ಹೊತ್ತಿರುತ್ತಿದ್ದ.

ಕಾವ್ಯದ ಸಾಲುಗಳಲ್ಲಿ ಆ ಸಂಕಟಗಳು ಅನಾವರಣಗೊಳ್ಳುತ್ತಿದ್ದವು. ಒಂದು ಸಮುದಾಯದ ನೋವುನಲಿವುಗಳು, ತನ್ನ ವೈಯಕ್ತಿಕ ನೋವುಗಳನ್ನು ಅನುಭವಿಸಿ ಅವುಗಳನ್ನು ಕಾವ್ಯದ ಮೂಲಕ ಪ್ರಸ್ತುತ ಪಡಿಸುವ ಮೂಲಕ ಸಾಹಿತ್ಯಕ್ಕೆ ಹೊಸ ತಿರುವು ಬಂದಿತು. ಎಲ್ಲವನ್ನೂ ಕಾವ್ಯದಲ್ಲಿ ಕಟ್ಟಿಕೊಡುತ್ತಿದ್ದರು.

ಮಹಿಳಾ ತಲ್ಲಣಗಳು, ದಲಿತ ಸಂವೇದನೆಗಳು, ಕಾರ್ಮಿಕ ಸಂವೇದನೆಗಳು, ಶೋಷಣೆಯನ್ನೇ ಕಾವ್ಯವಾಗಿ, ಅಂತಹ ಕಾವ್ಯಗಳನ್ನು ಓದುವಾಗ ಮನಸ್ಸು ವಿಲವಿಲನೇ ಒದ್ದಾಡುತ್ತಿತ್ತು. ಗೊತ್ತಿಲ್ಲದೆ ಕಣ್ಣೀರು ತನ್ನಿಂದ ತಾನೇ ಚಡಪಡಿಯುತ್ತಿತ್ತು.

ಹಿಂದೆ ಒಂದು ಕಾಲದಲ್ಲಿ ದೇವರು, ಧರ್ಮ, ರಾಜರ ಹೊಗಳಿಕೆ,
ಪ್ರಕೃತಿ ಸೌಂದರ್ಯದ ವರ್ಣನೆಯನ್ನು.. ಬರೆಯುವುದೇ ಬಹು ದೊಡ್ಡ ಪರಂಪರೆಯಾಗಿತ್ತು.

ನಂತರ
ವಚನ ಚಳವಳಿ, ನವೋದಯ, ನವ್ಯ, ಬಂಡಾಯ ಸಾಹಿತ್ಯದ ಕಾವ್ಯದ ನೆಲೆಗಳು ಜನ ಸಾಮಾನ್ಯರ ನೋವು ನಲಿವಿಗೆ ಒತ್ತು ಕೊಟ್ಟಿದ್ದವು.

ಜನಸಾಮಾನ್ಯರ ಭಾಷೆ ಪ್ರಾಕೃತ, ಕನ್ನಡ.. ಮುಂತಾದ ಭಾಷೆಯ ಬಳಕೆಯ ಮೂಲಕ ಕಾವ್ಯವನ್ನು ಜನಸಾಮಾನ್ಯರ ಅರ್ಥ ಮಾಡಿಕೊಳ್ಳುವಂತಾಯಿತು. ಆಗ ತಮ್ಮ ಬದುಕಿನ ಅನುಭವಗಳನ್ನೇ ಕಾವ್ಯವಾಗಿಸಿದರು.

ಕೇಳುತ್ತಾ… ಕೇಳುತ್ತಾ… ಓದುತ್ತಾ… ಓದುತ್ತಾ.ಯಾವುದೋ ಒಂದು ಅದ್ಭುತ ಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತಿತ್ತು.

“ಕಾವ್ಯ”ಎಂದರೆ ಕೇವಲ ಸಾಲುಗಳಲ್ಲ..!! ಅದೊಂದು ಅನುಭೂತಿಯನ್ನು ಅನುಭವಿಸಿ, ಬರೆದು ಅನುಭವಿಸಬೇಕು. ಕಾವ್ಯವೆಂದರೆ ಧ್ಯಾನಸ್ಥ ಸ್ಥಿತಿಯ ಉತ್ತಂಗ. ಕಾವ್ಯವೆಂದರೇ ಹೃದಯ ಮಿಡಿಯುವ ಆತ್ಮಸಖ..!!

ಕವಿಯಾಗುವವನು ಮಗುವಾಗಬೇಕು, ಮಗುವಿನ ಮುಗ್ಧತೆಯಿರಬೇಕು. ತಾಯಿಯಾಗಬೇಕು, ತಾಯಿಯಂತಹ ಹೃದಯವಿರಬೇಕು. ತನ್ನ ತಾನು ಅರಿತುಕೊಂಡಿರಬೇಕು. ಕವಿಯಾದವನಿಗೆ ಒಂದು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಣೆಗಾರಿಕೆಯೂ ಇರಬೇಕು. ಸಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕು. ಸಮಾಜಕ್ಕೆ ಮೌಲ್ಯಗಳನ್ನು ಕಟ್ಟಿಕೊಡುವ ಕಾವ್ಯವನ್ನು ಸಾರ್ವತ್ರಿಕರಣಗೊಳಿಸಬೇಕು.

ಕವಿಯಾದವನಿಗೆ ಸಾಮೂದಾಯಿಕ ಪ್ರಜ್ಞೆಯಿರಬೇಕು. ಡಾ. ಸಿದ್ದಲಿಂಗಯ್ಯನವರ ಕಾವ್ಯಗಳು ದಲಿತ ಲೋಕದ ನೋವು ನಲಿವುಗಳ ಅನಾವರಣಗೊಳಿಸುತ್ತವೆ.
“ನನ್ನ ಜನಗಳು…” ಎನ್ನುವ ಕಾವ್ಯದ ಅಂತ:ಕರಣ ಸಾಲುಗಳು, ಅಧಿಕಾರ ಸಿಗದೆ ಶೋಷಣೆ ಮಾಡುವಾಗ ಹುಟ್ಟಿದ “ದಲಿತರು ಬರುವರು
ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ….” ಎನ್ನುವ ಆಕ್ರೋಶದ ಸಾಲುಗಳು..!!

ಇವುಗಳಲ್ಲದೆ ಹಲವಾರು ದಲಿತ ಸಂವೇದನೆಯನ್ನು ಸಾರುವ ಅನೇಕ ಕವಿಗಳ ಕಾವ್ಯ ಜೀವಂತಿಕೆಯನ್ನು ಪಡೆದಿವೆ. ಕವಿಯಾದವರಿಗೆ ಇಂತಹ ಸಾಮುದಾಯಿಕ ಅನುಭವಗಳು ಅಗತ್ಯ.
“ನಾನೊಂದು ಮರವಾಗಿದ್ದರೆ…” ಎನ್ನುವ ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಕಾವ್ಯ ‘ಮನುಷ್ಯ ಪ್ರೀತಿಗಾಗಿ’ ಹಂಬಲಿಸುವ ಅವರು ಮರಕ್ಕಿಂತಲೂ ಕಡೆಯಲ್ಲ ನಾವು… ಕನಿಷ್ಠ ನಾನು ಮನುಷ್ಯನಾಗಿ ಹುಟ್ಟಬಾರದಾಗಿತ್ತು, ನಾನೊಂದು ಮರವಾಗಿ ಹುಟ್ಟುಬೇಕಾಗಿತ್ತೆಂದು ನೋವಿನಿಂದ ಕಾವ್ಯದಲ್ಲಿ ಹೇಳುತ್ತಾರೆ.

ಹಾಗೆಯೇ…

ಮಹಿಳಾಲೋಕದ ತಲ್ಲಣಗಳನ್ನು ಬಿತ್ತರಿಸುವ ಹಲವಾರು ಕವಯತ್ರಿಯರ ಕಾವ್ಯದ ಸಾಲುಗಳನ್ನು ನಾವು ಕಾಣುತ್ತೇವೆ. ಮಹಿಳೆಯ ಶೋಷಣೆ, ದೌರ್ಜನ್ಯ, ಪುರುಷ ಪಾರಪತ್ಯ, ಲೈಂಗಿಕ ಶೋಷಣೆ, ಅವಕಾಶ ವಂಚಕತನ.. ಹೀಗೇ ಮಹಿಳೆ ತನ್ನನ್ನು ತಾನು ಶೋಷಣೆಯ ಜೊತೆಗೆ ಪುರುಷನ ಅಟ್ಟಹಾಸದ ಶೋಷಣೆಯನ್ನು ಅನುಭವಿಸುತ್ತಾ, ಅನುಭವಿಸುತ್ತಾ ಇಡೀ ಒಂದು ಕಾಲಘಟ್ಟಕ್ಕೆ ತನ್ನ ನೋವನ್ನು ಕಾವ್ಯದ ಮೂಲಕ ತೆರೆದಿಡುವ ಸಾಕಷ್ಟು ಕವಯಿತ್ರಿ ಕವಿತೆಯ ಸಾಲುಗಳನ್ನು ಕಾಣಬಹುದು. ವಚನಗಾರ್ತಿ ಅಕ್ಕಮಹಾದೇವಿಯಿಂದ ಹಿಡಿದು ಇಂದಿನ ತಲೆಮಾರಿನ ಪ್ರತಿಭಾ ನಂದಕುಮಾರ ಅವರಂತಹ ಕಾವ್ಯಗಳು ಮನಮಿಡಿಯುತ್ತವೆ.

“ಮನುಷ್ಯ ಪ್ರಜ್ಞೆಯ” ಜೊತೆಗೆ ವಾತ್ಸಲ್ಯದ ಕವಿತೆಗಳು ಅನಾವರಣಗೊಳ್ಳಬೇಕು. ಅಂತ ಕವಿತೆಯನ್ನು ಬರೆಯುವ ಜವಾಬ್ದಾರಿ ಇಂದಿನ ಯುವ ಕವಿ, ಕವಯತ್ರಿಯರಿಗೆ ಇದೆ. ಹಾಗಾಗಿ ‘ಕವಿತೆ’ ಎಂದರೆ ಕೇವಲ ಸಾಲುಗಳಲ್ಲ..!!

ಆತನ ನೋವುಗಳು ಕಾವ್ಯವಾಗಬೇಕು. ಕಾವ್ಯಗಳು ಮಗುವಿನಂತೆ ರಮಿಸುವಂತಿರಬೇಕು. ಕತ್ತಲ ಕಾಲದಲ್ಲಿ ನಿನ್ನೊಂದಿಗೆ ನಾನಿರುವೆನೆಂದು ಹೇಳುವ ಬೆಳಕಾಗಬೇಕು.
“ನನಗೇನೂ ಇರದಿದ್ದರೂ ನಿನ್ನ ಎರಡು ಕಾವ್ಯದ ಸಾಲುಗಳು ನನ್ನ ಕಣ್ಣು ತೆರೆಸಿದವು..” ಎನ್ನುವಂತಿರಬೇಕು.

ಕಾವ್ಯದ ಸಾಲುಗಳು ಬರೀ ಹೇಳಿಕೆಗಳಾಗಬಾರದು, ಶಬ್ದಗಳಾಗಬಾರದು, ಸಾಲುಗಳಾಗಬಾರದು. ಅವು ಇಂದಿನ ತಲ್ಲಣಗಳನ್ನು ಪ್ರತಿಬಿಂಬಿಸುವಂತಿರಬೇಕು. ಕತ್ತಲ ಲೋಕಕ್ಕೆ ಬೆಳಕನ್ನು ಕಾಣುವಂತಾಗಬೇಕು. ವ್ಯವಸ್ಥೆಯ ವಿರುದ್ಧ ಕಾವ್ಯ ಪ್ರತಿರೋಧವಾಗಬೇಕು. ಕಾವ್ಯದ ಸಾಲುಗಳು ಇಂದಿನ ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು.

ಬರೀ ಪ್ರತಿಮೆಗಳು ರೂಪಕಗಳೇ ಕಾವ್ಯದಲ್ಲಿ ಹೇರುವಂತಿರಬಾರದು. ಅದೇ ಕಾವ್ಯವಲ್ಲ. ಪ್ರತಿಮೆಗಳು, ರೂಪಕಗಳು, ಜನಸಾಮಾನ್ಯರಿಗೂ ಅರ್ಥವಾಗುವಂತಿರಬೇಕು. ಒಂದು ಕಾವ್ಯ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವಂತಿರಬೇಕು. ಹೃದಯವನ್ನು ತೆರೆಯುವಂತಿರಬೇಕು. ಅದು ಕವಿಯಾದವನಿಗೆ ಸಮಾಜಿಕ ಜವಾಬ್ದಾರಿಯೂ ಕೂಡ ಹೌದು..!!

ಬಡತನ, ನೋವು, ಸಂಕಟ, ತಲ್ಲಣ, ಅಸಮಾನತೆ, ಶೋಷಣೆಗಳು, ಕಣ್ಣಿಗೆ ಕಾಣುವ ದೌರ್ಜನ್ಯಗಳು, ರಾಜಕೀಯ ವ್ಯಭಿಚಾರಗಳು, ಶ್ರೀಮಂತರ ದಬ್ಬಾಳಿಕೆಯ ಅಟ್ಟಹಾಸಗಳು, ಮಹಿಳಾ ದೌರ್ಜನ್ಯದ ಕ್ರೌರ್ಯಗಳು, ಕಾವ್ಯದಲ್ಲಿ ಮೂಡದೆ ಹೋದರೆ ಹೇಗೆ..?? ಅವೇ ಕಾವ್ಯದ ಮುಖ್ಯ ಆಶಯಗಳಾಗಬೇಕು. ಕವಿಯಾಗಲಿ, ಕವಯಾತ್ರಿಯಾಗಲಿ, ಸಾಮಾಜಿಕ ಹೊಣೆಗಾರಿಕೆಯಿಂದ ಬರೆದಾಗ ಮಾತ್ರ ಕಾವ್ಯ ಸಾಮಾಜಿಕ ಪ್ರಜ್ಞೆಯನ್ನು ಎಚ್ಚರಗೊಳಿಸುತ್ತದೆ. ಸಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಹೊಸ ಬೆಳಕಾದಾಗ ಕಾವ್ಯಕ್ಕೆ ಒಂದು ಹೊಸ ಅರ್ಥ ಬರುತ್ತದೆ.

ಪ್ರಕೃತಿ ಸೌಂದರ್ಯ ವರ್ಣಿಸುವುದರ ಜೊತೆ ಜೊತೆಗೆ ಕಾವ್ಯ ಮನುಷ್ಯ ಪ್ರೀತಿಯನ್ನು, ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು. “ರವಿ ಕಾಣದ್ದನ್ನು ಕವಿ ಕಂಡ” ಎನ್ನುವ ಮಾತೊಂದಿದೆ. ಸಣ್ಣ ವಿಷಯವನ್ನು ಕಾವ್ಯದ ಮೂಲಕ ಹೃದಯ ತಟ್ಟುವ ಕೆಲಸ ಕವಿಯಾದವನು ಮಾಡುತ್ತಾನೆ. ಕಾವ್ಯಕ್ಕೆ ಇಂತಹದೇ ವಸ್ತು ಇರಬೇಕೆಂಬ ನಿಯಮವಿಲ್ಲ. ಕಾವ್ಯ ಹೀಗೆ ಬರೆಯಬೇಕು ಎಂಬ ನಿಯಮಗಳಿರದಿದ್ದರೂ ಅದನ್ನು ಮೀರುವ ಕಾವ್ಯ ಪರಂಪರೆಯಿರುವುದು ವಾಸ್ತವಿಕ ಸತ್ಯ.

ಕವಿ ಮತ್ತು ಕಾವ್ಯ ಮನುಷ್ಯ ಪ್ರೀತಿಯನ್ನು ಹಂಚುವುದೇ ಅಂತಿಮ ಸತ್ಯ. “ಒಬ್ಬರ ನೋವು ತನ್ನ ನೋವು” ಎಂದು ಭಾವಿಸಿಕೊಂಡು ಬರೆಯುವ ಧಾರಾಳತನ ಕವಿಯಾದವನಿಗಿರಬೇಕು. ಕವಿಗೆ ಜಾತಿ, ಧರ್ಮ, ದೇಶ, ಭಾಷೆ, ಪ್ರಾದೇಶಿಕತೆ ಮುಂತಾದ ಅಡ್ಡಗೋಡೆಗಳ ಗೊಡವೆ ಇರುವುದೇ ಇಲ್ಲ.

ಅವನು ವಿಶ್ವಮಾನವ. ಜಾಗತಿಕ ಮನುಷ್ಯ ಕುಲಕ್ಕೆ ಸಂಬಂಧಿಸಿದವನು. ಯಾವತ್ತೂ ಅವನು ಸೀಮಿತವಾಗಿ ಆಲೋಚಿಸಬಾರದು. ಆ ರೀತಿ ಸೀಮಿತವಾಗಿ ಆಲೋಚಿಸುವ ವ್ಯಕ್ತಿ ಕವಿಯಾಗಲಾರ. ಕವಿಗೆ ವಿಶಾಲ ಮನೋಭಾವನಿರಬೇಕು. ಮನುಷ್ಯ ಪರಂಪರೆಯ ಮೌಲ್ಯಗಳನ್ನು ಬಿತ್ತುವ ಶಾಂತಿ, ದಯೆ, ಕರುಣೆ, ಮಮಕಾರ, ಪ್ರೀತಿ ವಾತ್ಸಲ್ಯ ಎನ್ನುವಂತಹ ಅಂತ:ಕರಣದ ಮೌಲ್ಯಗಳು ಕಾವ್ಯದೂದ್ದಕ್ಕೂ ಬಂದಾಗ ಮಾತ್ರ ಕವಿಗೆ ಒಂದು ಸ್ಥಾನ ದೊರಕಬಲ್ಲದು.

“ಓ ನನ್ನ ಚೇತನ
ಆಗೂ ನೀ ಅನಿಕೇತನ ರೂಪ ರೂಪಗಳನ್ನು ದಾಟಿ ನಾಮ ಕೋಟಿಗಳನ್ನು ಮೀಟಿ…” ಎನ್ನುವ ಕುವೆಂಪು ಅವರ ಕಾವ್ಯ ವಿಶ್ವ ಪ್ರೀತಿ, ವಿಶ್ವಾಸವನ್ನು ಬೆಸೆಯುತ್ತದೆ. ಇಂತಹ ಕಾವ್ಯ ಇಂದಿನ ಕವಿ ಕವಯತ್ರಿಯರಿಂದ ಬಂದಾಗ ಮಾತ್ರ ಕವಿಗೆ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆಯಿದೆ ಎನ್ನುವ ಮನೋಭಾವ ಮೂಡುತ್ತದೆ.

ಸಮೂಹ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಪೈಪೋಟಿಯ ಈ ಕಾಲದಲ್ಲಿಯೂ ಕಾವ್ಯವನ್ನು ಒಂದು ಫ್ಯಾಶನ್ ಆಗಿ ತೆಗೆದುಕೊಳ್ಳದೆ, ಅದು ಜೀವಪರತೆ, ಮನುಷ್ಯ ಪ್ರೀತಿ, ಮಾನವೀಯ ಮೌಲ್ಯಗಳ ಪ್ರಜ್ಞೆ ವಿಸ್ತಾರಗೊಳ್ಳುವ ಕಾವ್ಯ ರಚಿಸುವ ಹೊಣೆಗಾರಿಕೆಯನ್ನು ಇಂದಿನ ಕವಿ, ಕವಯತ್ರಿಯರು ವಹಿಸಿಕೊಳ್ಳಬೇಕು. ಅಂತಹ ಮಾನವೀಯ ಮೌಲ್ಯವುಳ್ಳ ಕಾವ್ಯ ಕಟ್ಟಿಕೊಡುವ ಕೆಲಸವಾಗಲಿ ಎಂದು ಆಶಿಸುತ್ತೇನೆ.


ರಮೇಶ. ಸಿ ಬನ್ನಿಕೊಪ್ಪ ಹಲಗೇರಿ

One thought on “

  1. ನನ್ನಂತಹ ಆರಂಭ ಬರಹಗಾರಿಗೆ ಒಳ್ಳೆಯ ಮಾರ್ಗದರ್ಶನ ನಿಮ್ಮ ಬರಹ ಸರ್.
    ಧನ್ಯವಾದಗಳು

Leave a Reply

Back To Top