ಸಂಗಾತಿ ವಾರ್ಷಿಕ ವಿಶೇಷಾಂಕ

ಹನಿಬಿಂದು

ಕನ್ನಡ ಭಾಷೆಯ ಸಾಹಿತ್ಯಕ್ಕೆ ಜಾಲತಾಣಗಳ ಕೊಡುಗೆ


ಇಂದಿನ ದಿನಗಳಲ್ಲಿ ಹೆಚ್ಚಿನವರು ಹೇಳೋದಿದೆ. ಏನಂತ ಹೇಳಿದ್ರೆ ಇಂದಿನ ದಿನದಲ್ಲಿ ಪುಸ್ತಕಗಳ ಓದು ಕಡಿಮೆಯಾಗಿದೆ ಹಾಗೂ ಮೊಬೈಲ್ ಬಳಕೆ ಜಾಸ್ತಿಯಾಗಿದೆ. ಜನರ ಜ್ಞಾನಮಟ್ಟ ಕಡಿಮೆಯಾಗಿದೆ ಮತ್ತು ಪುಸ್ತಕ ಓದದೇ ಇರುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಮತ್ತು ಜ್ಞಾನದ ಮಟ್ಟ ಕಡಿಮೆಯಾಗಿದೆ. ನೇರವಾಗಿ ಬೆಳಕು ಬಿದ್ದಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಓದು ಉತ್ತಮವಲ್ಲ ಬದಲಾಗಿ ಕಣ್ಣಿಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ಬೆಳಕು ಬಿದ್ದು ಅದನ್ನು ಓದಿದರೆ ಅದು ಬಹಳ ಕಾಲ ನೆನಪಲ್ಲಿ ಉಳಿಯುತ್ತದೆ ಎಂಬ ವೈಜ್ಞಾನಿಕ ತತ್ವವು ಮೊಬೈಲಿಗೂ ಅನ್ವಯಿಸುತ್ತದೆ ಎಂದು ಇನ್ನೂ ಕೆಲವರು ಹೇಳುತ್ತಾರೆ. ಅದರ ಜೊತೆ ಜೊತೆಗೆ ಲೇಖಕರು ಹಿಂದಿನ ಕಾಲದಲ್ಲಿ ಪುಸ್ತಕವನ್ನು ಆನ್ಲೈನಲ್ಲಿ ಬಿಡುಗಡೆ ಮಾಡುತ್ತಾ ಇರುವವರೂ ಇದ್ದಾರೆ.
ಹೇಳಿ ಕೇಳಿ ಎಲೆಕ್ಟ್ರಾನಿಕ್ ಯುಗವಿದು. ಲೈಬ್ರರಿಗೆ ಹೋಗಿ ಕುಳಿತುಕೊಳ್ಳಲು ಯಾರಿಗೆ ಸಮಯವಿದೆ ಹೇಳಿ? ಹಾಗೆಯೇ ಪುಸ್ತಕದ ಕಟ್ಟನ್ನು ಎದುರಿಗಿಟ್ಟುಕೊಂಡು ಓದುವಂತವರು ಎಂದು ಕಡಿಮೆ ಎಂದು ಹೇಳಬೇಕು. ಆದರೆ ಮೊಬೈಲನ್ನು ಕೈಯಲ್ಲಿಟ್ಟುಕೊಂಡು ಒತ್ತುತ್ತಾ ಗಂಟೆಗಟ್ಟಲೆ ಅದರಲ್ಲೇ ಕಳೆಯುವವರು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನಾವೆಂದು ಕಾಣುತ್ತೇವೆ. ಆದಕಾರಣ ಓದುವುದು ಕೂಡ ಎಂದು ಹೆಚ್ಚಾಗಿ ಮೊಬೈಲ್ ಗಳಲ್ಲಿ ನಡೆಯುತ್ತದೆ ಅಥವಾ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಹೀಗಿರುವಾಗ ಕನ್ನಡ ಸಾಹಿತ್ಯಕ್ಕೂ ಕೂಡ ಜಾಲತಾಣಗಳ ಕೊಡುಗೆ ಬಹಳಷ್ಟು ಇದೆ ಎಂದೇ ಹೇಳಬಹುದು.
ಹಿಂದಿನ ಕಾಲದಲ್ಲಿ ಕವಿಗಳು ಅದೆಷ್ಟೇ ಬರೆದರೂ ಕೂಡ ಅದನ್ನು ಪ್ರಚಾರ ಮಾಡಲು ಪುಸ್ತಕಗಳೇ ಬೇಕಿತ್ತು. ಅದಕ್ಕೆ ಲೈಬ್ರರಿಗಳು ಹುಟ್ಟಿಕೊಂಡವು. ಸಣ್ಣ ಸಣ್ಣ ಗ್ರಾಮಗಳಲ್ಲಿ ಗ್ರಾಮಾಂತರ ಲೈಬ್ರರಿಗಳು ಹಾಗೆಯೇ ತಾಲೂಕು ಕೇಂದ್ರಗಳಲ್ಲಿ ದೊಡ್ಡದಾದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಲೈಬ್ರರಿಗಳು ತೆರೆದು ಕೊಂಡವು. ಆದರೆ ಇಂದಿನ ದಿನಗಳಲ್ಲಿ ಈ ಲೈಬ್ರರಿಗಳು ಹೆಚ್ಚು ಕೆಲಸ ಮಾಡುತ್ತಿವೆ ಅನ್ನಿಸುತ್ತಿದೆ.
ಹೆಚ್ಚಿನ ಜನ ಓದಲಿ ಎಂಬ ಆಸೆಯಿಂದ ಚಿತ್ರವಿಚಿತ್ರವಾಗಿ ಬರೆಯುವುದು, ಅತಿ ಹೆಚ್ಚು ಜನರಿಂದ ಲೈಕುಗಳನ್ನು ಗಿಟ್ಟಿಸಿಕೊಳ್ಳಲು ಅಶ್ಲೀಲವಾಗಿ ಬರೆಯುವುದು, ಹುಡುಗಿಯರ ಬಗ್ಗೆ ಹೆಚ್ಚಾಗಿ ಬರೆದು ಜನಮನ್ನಣೆ ಪಡೆದುಕೊಳ್ಳುವುದು, ತನ್ನ ಪ್ರೇಮಿಗೆ ಅಥವಾ ಪ್ರಿಯಕರಣಿಗೆ ಹೇಳಲು ಸಾಧ್ಯವಾಗದನ್ನು ಕವನದ ಮೂಲಕ ಅಥವಾ ಕಥೆಗಳ ಮೂಲಕ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ತನ್ನದೇ ಕಥೆಯನ್ನು ಸ್ವಲ್ಪ ಹೆಸರು ಬದಲಾಯಿಸಿ ಬೇರೆ ತರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಇದೆಲ್ಲವನ್ನು ಕೂಡ ನಾವು ಇಂದು ಕಾಣತ್ತೇವೆ. ಆದರೂ ಕೂಡ ಸಾಮಾಜಿಕ ಜಾಲತಾಣಗಳು ಕನ್ನಡ ಸಾಹಿತ್ಯಕ್ಕೆ ಏನನ್ನು ಕೊಡುಗೆಯಾಗಿ ಕೊಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ವಾಟ್ಸಪ್ ಗುಂಪುಗಳಲ್ಲಿ ಮತ್ತು ಫೇಸ್ಬುಕ್ ಗುಂಪುಗಳಲ್ಲಿ ನಾನು ಪ್ರತಿನಿತ್ಯ ಕನ್ನಡ ಬರವಣಿಗೆಗಳನ್ನು ಕಾಣುತ್ತೇನೆ. ಬೇರೆ ಬೇರೆ ರೀತಿಯ ಬರಹಗಳು ಪ್ರತಿನಿತ್ಯವೂ ಜಾಲತಾಣಗಳಲ್ಲಿ ಸಿಗುತ್ತವೆ. ಒಂದೇ ರೀತಿ ಕವನವನ್ನು ಮಾತ್ರ ಎಂದು ಕವಿಗಳು ಬರೆಯುತ್ತಿಲ್ಲ. ಬದಲಾಗಿ ಜಾಲತಾಣಗಳ ಸಹಾಯದಿಂದ ಹಲವಾರು ಹಿರಿಯ ಕವಿಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಅವರ ಜೊತೆಯಲ್ಲಿ ಕೇಳಿ ಕಲಿತು ಗಜಲ್, ಭಾವಗೀತೆ, ಕವನ, ಕವಿತೆ , ಲಾವಣಿ , ಚುಟುಕು , ಹಾಯ್ಕು ಇದೇ ಮುಂತಾದ ಹಲವರು ವಿವಿಧ ಪ್ರಕಾರಗಳಲ್ಲಿ ಬರೆಯುವುದು ಹೇಗೆ ಎಂದು ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುತ್ತಾ, ಒಬ್ಬರನ್ನು ಮತ್ತೊಬ್ಬರು ತಿದ್ದುತ್ತಾ, ಪ್ರತಿ ಕವಿಯ ವಿಮರ್ಶೆಯನ್ನು ಮಾಡುತ್ತಾ ಕಲಿಕೆ ಮತ್ತಷ್ಟು ಮಗದಷ್ಟು ಸಾಗಿದೆ. ಬರವಣಿಗೆಯನ್ನು ತಿಳಿದುಕೊಂಡವರು ಮತ್ತಷ್ಟು ಮಗದಷ್ಟು ಓದಿ ಇನ್ನೂ ಒಂದಷ್ಟು ಬರೆದು ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಹಲವಾರು ಕವನಗಳ ಕವಿತೆಗಳ ಪುಸ್ತಕಗಳು ಬಿಡುಗಡೆಯಾಗುವುದನ್ನು ನಾವು ನೋಡುತ್ತಿದ್ದೇವೆ.


ಸಹಜವಾಗಿಯೂ ಉಪಯೋಗ ಮತ್ತು ದುರುಪಯೋಗ ಎಲ್ಲಾ ಕಡೆ ಕಂಡು ಬರುತ್ತದೆ ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಒಬ್ಬರ ಕವನಗಳನ್ನು ಮತ್ತು ಬರಹಗಳನ್ನು ಕದ್ದು ಮತ್ತೊಬ್ಬರು ತಮ್ಮ ಬ್ಲಾಗ್ ಗಳಲ್ಲಿ ಹಾಕಿಕೊಳ್ಳುವುದು, ಹಿರಿಯ ಕವಿಗಳ ಕವನದ ಸಾಲುಗಳನ್ನು ಕದ್ದು ತಮ್ಮ ಕವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆ ಬೇರೆ ಭಾಷೆಯ ಕವಿಗಳ ಕವನದ ಸಾಲುಗಳನ್ನು ಭಾಷಾಂತರಿಸಿ ಅವರ ಗಮನಕ್ಕೆ ತರದೆ ತಮ್ಮ ಕವನಗಳ ಮಧ್ಯದಲ್ಲಿ ಸೇರಿಸಿಕೊಳ್ಳುವುದು, ನಿಜವಾದ ಕವನ ಬರೆದವರ ಹೆಸರನ್ನು ತೆಗೆದು ತನ್ನ ಹೆಸರನ್ನು ಸೇರಿಸಿ ಪೋಸ್ಟ್ ಮಾಡುವುದು ಇದೆಲ್ಲ ನಡೆದೇ ಇದೆ. ಆದರೆ ನಿಜವಾದ ಬುದ್ಧಿಮತ್ತೆ ಇರುವ ಕವಿಗಳು ಎಲ್ಲಾ ಕಡೆಯೂ ಗುರುತಿಸಲ್ಪಡುತ್ತಾರೆ ಅವರು ಸಾಮಾಜಿಕ ಜಾಲತಾಣಗಳನ್ನು ಕೂಡ ಅತ್ಯುತ್ತಮವಾಗಿ ಬಳಸಲು ಕಲಿತುಕೊಂಡಿರುತ್ತಾರೆ.
ಒಂದು ಕಡೆ ನೋಡಿದರೆ ನಮಗೆ ಪಾಸಿಟಿವ್ ಥಿಂಕಿಂಗ್ ಅಥವಾ ಧನಾತ್ಮಕ ಆಲೋಚನೆಗಳು ಉತ್ತಮ ಎಂದು ಹೇಳುವಂತೆ ಧನಾತ್ಮಕವಾಗಿ ಯೋಚನೆ ಮಾಡುವುದಾದರೆ ಹೆಚ್ಚಿನ ಕವಿಗಳನ್ನು ನಾವು ಮಾತನಾಡಿಸಲು ಸಾಧ್ಯವಾಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಅವರ ಬರಹಗಳನ್ನು ಕೂಡ ಓದಲು ಸುಲಭವಾಗಿ ಸಿಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಕೇವಲ ಕನ್ನಡ ಸಾಹಿತ್ಯದ ಬರಹ ಮಾತ್ರವಲ್ಲ ಸಾಹಿತ್ಯದ ಓದು ಹಾಡು ಅಭಿನಯ ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳ ಬಳಕೆ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ ಅಲ್ಲವೇ?
ನಿಜವಾಗಿ ಓದಿ ಬರೆಯುವವನು ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದಿರುವವನು ಸಾಮಾಜಿಕ ಜಾಲವಾದರೆ ಏನು ಪುಸ್ತಕವಾದರೆ ಏನು ಎಲ್ಲಾ ಕಡೆಯೂ ಓದಿಕೊಂಡು ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಬರೆಯುತ್ತಾನೆ. ಕಳ್ಳ ಕವಿಗಳಿಗೆ ವಾಚನಾಲಯ ಗ್ರಂಥಾಲಯಗಳಿಂದ ಪುಸ್ತಕಗಳನ್ನು ತಂದು ಓದಿ ಅದರಿಂದಲೂ ಹಲವಾರು ಸಾಲುಗಳನ್ನು ಕದಿಯಬಹುದಲ್ಲವೇ? ಜಾನಕ್ಕೆ ಯಾವಾಗಲೂ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ . ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಜ್ಞಾನಿಯಾದವ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಜ್ಞಾನದಿಂದ ಉತ್ತಮವಾದ ಸಾಹಿತ್ಯವನ್ನು ಹೊರಗೆ ತಂದು ಅದರ ಮೂಲಕ ಹಲವಾರು ಬರಹಗಳಿಂದ ಕನ್ನಡದ ಸಾಹಿತ್ಯ ಸೇವೆಯನ್ನು ಮಾಡುತ್ತಾ ತನ್ನ ಮಾತೃಭಾಷೆಯ ಋಣವನ್ನು ತೀರಿಸಲು ಇದು ಅತ್ಯಂತ ಸುಲಭದ ವಿಧಾನವಾಗಿದೆ.
ಎಲ್ಲೋ ಅಲ್ಲಿ ಇಲ್ಲಿ ಒಂದಷ್ಟು ಕಡೆ ಇದರ ಋಣಾತ್ಮಕತೆ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಆಲೋಚಿಸುತ್ತಾ ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಾ ವಾರ್ತಾ ಪತ್ರಿಕೆಗಳಿಗೆ ಈಮೇಲ್ ಮೂಲಕ ತನ್ನ ಬರಹವನ್ನು ಕಳುಹಿಸುತ್ತಾ ಹಾಗೆಯೇ ಅವುಗಳಿಂದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಓದುತ್ತಾ ಹೀಗೆ ಸಾಮಾಜಿಕ ಜಾಲ ತಾಣಗಳು ಕನ್ನಡದ ಸಾಹಿತ್ಯದ ಪ್ರಚಾರಕ್ಕೆ ಮತ್ತು ತಮ್ಮದೇ ಆದ ಸಾಹಿತ್ಯದ ಬಳಕೆಯನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನನ್ನ ಅನಿಸಿಕೆ. ನೀವೇನಂತೀರಿ?

————————

ಹನಿಬಿಂದು

Leave a Reply

Back To Top