ಅಮ್ಮನಿಗೊಂದು ನಮಸ್ಕಾರ

ಅಮ್ಮನಿಗೊಂದು ನಮಸ್ಕಾರ

ಪ್ರೇಮಾ ಟಿ.ಎಂ. ಆರ್.

ಅಮ್ಮ ನೆನಪಿನ ಮೆಲುಕಿಗೆ ಸಿಕ್ಕಷ್ಟು

ಅಮ್ಮ ಎಂದೊಡನೆ ನಿನಗೇನನ್ನಿಸುತ್ತದೆ..? ಅಮ್ಮ ಯಾವುದಕ್ಕೆ ಹೋಲಿಕೆ? ಹೀಗೊಂದು ಪ್ರಶ್ನೆಯನ್ನು ಎದುರಿಗಿಟ್ಟ್ಟುಕೊಂಡು ಕೂತೆ … ಉಹುಂ ಏನೂ ಅನ್ನಿಸೋದಿಲ್ಲ. ಯಾಕೆಂದರೆ ಅಮ್ಮ ಅಂದ್ರೆ ಬರೀ ಅಮ್ಮ ಅಷ್ಟೇ.. ಅವಳಿಗೆ ಸರಿಸಮವಾಗಿ ಅವಳಿಗೆ ಹೋಲಿಸುವಂತ ವಸ್ತು ಈ ಭೂಮಿಯಮೇಲೆ ಇಲ್ವೇ ಇಲ್ಲ..ಸ್ವತಃ ಈ ಭೂಮ್ತಾಯಿ ಕೂಡ ಈ ಅಮ್ಮನಿಗೆ ಸಮ ತೂಗಿಯಾಳೇ..? ಯಾಕೋ ಡೌಟು..ಹೀಗೆಲ್ಲ ಅಂದುಕೊಳ್ಳುವಾಗ ಎದೆಯ ಗೊಂದಲಗಳ ನಡುವೆ ಒಂದಷ್ಟು ಆಚೀಚೆ ಸರಿದು ಕೂತ ಅಮ್ಮ ಎದುರಿಗೆ ಬಂದು ಹಾಗೇ ಭಾವದ ನೆಲದ ಮೇಲೆ ಕುಕ್ಕರುಗಾಲಲ್ಲಿ ಕೂತಳು…ಆರಾಮಾಗಿ ಕೂತು ಸುಧಾರಿಸಿಕೊಳ್ಳಲು ಅವಳಿಗೆ ಪುರುಸೊತ್ತಿಲ್ಲ….ನೆನಪಿನ ಸುಳಿಗೆ ಸಿಕ್ಕ ಮನಸು ಅಮ್ಮನ ಕಾಲಕ್ಕೆ ಕೊಚ್ಚಿಕೊಂಡು ಹೋಗಿತ್ತು…. ಉಪ್ಪು ನೀರಿನ ನದಿಯಂಚಿಗೆ ತೆಂಗು ಅಡಿಕೆ ಹಲಸು ಮುರುಗಲ ಅಮಟೆ ಸೀಬೆಗಳ ತಂಪು ತಟದಲ್ಲಿ ಹುಟ್ಟಿ ಬೆಳೆದ ಅಮ್ಮ, ಅಪ್ಪಯ್ಯನ ಜೊತೆ ಸಪ್ತಪದಿ ತುಳಿದು ಅತ್ತ ಕರಾವಳಿಯೂ ಅಲ್ಲದ ಇತ್ತ ಮಲ್ನಾಡು ಅಲ್ಲದ ತೋಟ ಸಾಲಿನ ಗುಡಿಸಲಿಗೆ ಅದೆಷ್ಟು ಕನಸು ಹೊತ್ತು ಬಂದಿದ್ದಳೋ ಗೊತ್ತಿಲ್ಲ…ಆದರೆ ಅವಳಿಗೆ ದಕ್ಕಿದ್ದು ತುಂಬು ಕುಟುಂಬದ ಗಂಜಿಗೆ ಹಿಟ್ಟು ಒದಗಿಸುವ ಅಪ್ಪನ ಕನಸಿಗೆ ಜೋತು ಬೀಳಬೇಕಾದ ಅನಿವಾರ್ಯತೆ…. ಈ ಕಾರಣಕ್ಕೆ ಅವಳು ತೂರಿಕೊಂಡು ಹೋಗಿ ಬಿದ್ದದ್ದು ಘಟ್ಟದ ತಪ್ಪಲಿನ ದಟ್ಟಡವಿಯ ನಟ್ಟ ನಡುವಿನ ಚಿಮ್ಮಳ್ಳಿ ಎಂಬ ಮೂರೇ ಮನೆಯಿರುವ ಊರಿಗೆ.
ಬೇಸಿಗೆಯಲ್ಲಿ ಅಪ್ಪ ಎತ್ತಿನ ಗಾಡಿಯಲ್ಲಿ ಹುಲ್ಲು ಭತ್ತ ತುಂಬಿಕೊಂಡು ಕೆಳಗಿನ ಕರಾವಳಿಗೆ ವ್ಯಾಪಾರಕ್ಕೆಂದು ಹೊರಟರೆ ಅಂಗಳದ ತಗ್ಗಿನ ಹೊಳೆದಿಣ್ಣೆಯ ತನಕ ಬಂದು ಬೀಳ್ಕೊಡುವ ಅಮ್ಮ ಅಪ್ಪ ಎರಡು ದಿನ ಬಿಟ್ಟು ಮನೆಗೆ ಬರೋ ತನಕ ಒಂಟಿಯೇ.. ಊರಲ್ಲಿದ್ದರೂ ಆಜು ಬಾಜು ಕುಚಿನಾಡ ಮೂವತ್ತು ಹಳ್ಳಿಯಲ್ಲಿ ಎಲ್ಲೇ ಯಕ್ಷಗಾನ ಬಯಲಾಟ ಇರಲಿ ತನ್ನ ಹತ್ತಿರದ ಕಲ್ವೆ ಊರಿನ ಸರೀಕರೊಡನೆ ಎದ್ದು ಹೊರಟುಬಿಡುವ ನನ್ನಪ್ಪ.. ಒಟ್ಟಿನಲ್ಲಿ ಅಮ್ಮ ಒಂಟಿಯೇ.. ಕೈಚಾಚಿದರೆ ಪಕ್ಕದ ಮನೆಯಿರುವ ಸಿಟಿಯಲ್ಲಿ ಬದುಕುವ ನಾನು ಆಗಾಗ ಅಂದು ಬಂಧು ಬಳಗವ ನೆನೆದು ಒಂಟಿತನವನ್ನು ಅನುಭವಿಸುವಾಗೆಲ್ಲ ಹೆಚ್ಚು ಕಡಿಮೆ ಅರ್ಧ ಮೈಲಿ ಕಿಲೋಮೀಟರುಗಳ ಅಂತರದಲ್ಲಿ ಪಕ್ಕದ ಮನೆ ಹೊಂದಿದ ಅಮ್ಮ ಹೇಗೆ ಬದುಕಿರಬಹುದೆಂದು ಕಂಗಾಲು ಬೀಳುತ್ತೇನೆ. ಅತ್ಯಂತ ಸಂಘಜೀವಿ ಸ್ನೇಹಜೀವಿ ಅಮ್ಮನನ್ನು ವಿಧಿ ಎಸೆದಿದ್ದು ಅದೆಷ್ಟು ದೂರ. ಹಾಗೆಂದು ಬಿಟ್ಟಾಳೆ ನನ್ನಮ್ಮ.. ಕೊಟ್ಟಿಗೆಯ ದನಗಳನ್ನು, ಸಾಕಿದ ನಾಯಿ, ಬೆಕ್ಕು, ಕೋಳಿಗಳನ್ನೆ ಆಪ್ತವಾಗಿಸಿಕೊಂಡು ಹರಟಿದವಳು. ಮತ್ತೂ ಬೇಸರವೆನಿಸಿದರೆ ಮನೆ ಮುಂದಿನ ಮರಗಳ ಮೇಲೆ ಕೂತು ಗಿಜಗುಡುವ ಪಕ್ಷಿಗಳನ್ನು ಮಾತಿಗೆಳೆದು ಬಿಡುತ್ತಿದ್ದಳು. ಮುಸ್ಸಂಜೆ ಒಂದಷ್ಟು ಹೊತ್ತು ಮಿಕ್ಕಿದರೆ ಮೈಲು ದೂರದ ಬುಡಕಟ್ಟು ಜನಾಂಗದ ಕೇರಿಗೂ ತನ್ನ ಹೆಜ್ಜೆಗಳನ್ನು ವಿಸ್ತರಿಸಿ, ಕಷ್ಟ ಸುಖ ಹಂಚಿಕೊಂಡು, ಅಲ್ಲಿನ ಹಿರಿಕಿರಿಯರ ಆರೋಗ್ಯ ವಿಚಾರಿಸಿಕೊಂಡು, ಮಕ್ಕಳನ್ನು ನಿತ್ಯ ಸಾಲೆಗೆ ಕಳಿಸಿ ಓದಿಗೆ ಹಚ್ಚುವ ಬಗ್ಗೆ ತಿಳಿ ಹೇಳುವ ಅಮ್ಮನಿಗೆ ತನ್ನ ಹಿರಿಮೆಯೇನೆಂಬುದರ ಅರಿವೇ ಇಲ್ಲ….
ಬೆಳಗಿನ ಬೆಳ್ಳಿ ಚುಕ್ಕಿ ಬಾನಲ್ಲಿ ಮೂಡುವ ಹೊತ್ತಿಗೆ ಎದ್ದು ಬಿಡುವ ಅಮ್ಮ ಉಂಡು ಮಲಗುವತನಕ ಕೆಲಸ ಕಚ್ಚಿಕೊಂಡೇ ಇರುತ್ತಾಳೆ.. ಕತ್ತಲು ದಟ್ಟವಾಗಿರುವಾಗಲೇ ಲಾಟೀಣು ಹಿಡಿದು ಕಳದಂಗಳ ಹೊಕ್ಕುವ ಅಮ್ಮ ಅಲ್ಲೊಂದಷ್ಟು ಹುಲ್ಲು ಕಟ್ಟಿ, ತಳಿ ಜಪ್ಪಿ, ಬತ್ತ ಗೇರಿ, ಹೊಟ್ಟು ತೂರಿ, ಇನ್ನೇನು ಕಣ್ಣು ಕತ್ತಲಿಗೆ ಹೊಂದಿಕೊಳ್ಳುತ್ತಿದೆ ಅಂದುಕೊಳ್ಳುವಾಗ ಕತ್ತಿ ಸಿಂಬಿ ಹಿಡಿದು ಮನೆ ಪಕ್ಕದ ಸಹ್ಯಾದ್ರಿಯ ದಟ್ಟ ಕಾಡನ್ನು ಹೊಕ್ಕುತ್ತಾಳೆ.. ಎರಡು ಹೊರೆ ಕಟ್ಟಿಗೆ ಕಡಿದು ಸೂರ್ಯನ ಮೊದಲ ಕಿರಣ ನೆಲ ಸೋಕುವದರೊಳಗೆ ಮನೆಯೆದುರಿನ ಗದ್ದೆಗೆ ತಂದು ರಾಶಿ ಹಾಕುತ್ತಾಳೆ.. ಬೇಸಿಗೆಯಲ್ಲಿ ಮನೆಯೆದುರಿಗೆ ಜುಳುಗುಡುವ ನದಿ ಬತ್ತಿದರೆ ದೂರದ ಹಳ್ಳದ ತಗ್ಗಿನಲ್ಲಿ ತೋಡಿದ ಹೊಂಡದಿಂದ ಇಡೀದಿನಕ್ಕೆ ಬೇಕಾಗುವ ನೀರು ಸಂಗ್ರಹಿಸುತ್ತಾಳೆ.. ಹಾಲು ಕರೆದು ದನಕರುಗಳನ್ನು ಮೇಯಲು ಬಿಟ್ಟು, ಕೊಟ್ಟಿಗೆಯ ಸಗಣಿಯೆತ್ತಿ ಗುಡಿಸಿ, ಅಂಗಳ ಸಾರಿಸಿ, ರಾತ್ರಿ ಬೇಯಿಸಿಟ್ಟ ಬತ್ತ ಹರವಿ ಒಣಗಲು ಬಿಟ್ಟು, ತುಳಸಿಗೊಂದಷ್ಟು ನೀರೆರೆದು ಸುತ್ತಿಬಂದು, ಮೇಲೆದ್ದು ಬರುವ ಸೂರಿದ್ಯಾವ್ರಿಗೆ ಸಣ್ಣಮಾಡಿ(ನಮಸ್ಕಾರ ಮಾಡಿ)ದ ನಂತರವೇ ಅಮ್ಮ ಒಲೆಹಚ್ಚುತ್ತಾಳೆ.. ಹಾಗೇ ಗಡಿಬಿಡಿಯಲ್ಲೇ ಒಂದ್ಗಳಿಗೆ ಕುಂಡೆ ಊರಿ ಒಂದು ದೋಸೆ ತಿಂದು ಒಂದ್ಗುಟ್ಗಿ ಚಾ ಕುಡ್ದು ಮತ್ತೆ ಕಾಯಕಕ್ಕಿಳಿಯುತ್ತಾಳವಳು… ಸುದ್ದಿಯಿಲ್ಲದೇ ಬದುಕಿ ಸದ್ದಿಲ್ಲದೇ ಇಹದ ಹಂಗು ಹರಿದುಕೊಂಡ ಅಮ್ಮನೆಂಬ ಅನುಭಾವಿ ಇಂದು ನೆನಪಿನ ಮೆಲುಕಿಗೆ ಸಿಕ್ಕಿದ್ದಿಷ್ಟು. ಮತ್ತೊಂದಷ್ಟು ಇನ್ಯಾವಾಗಲೋ ಈ ನೆನಪಿಗೆ ಸೌಡು ಸಿಕ್ಕಾಗ ನಿಮ್ಮ ಮುಂದಿಡುತ್ತೇನೆ… ನಮಸ್ಕಾರ


ಪ್ರೇಮಾ ಟಿ.ಎಂ.ಆರ್.

Leave a Reply

Back To Top