ಮಹಿಳಾ ದಿನದ ವಿಶೇಷ

ಮಹಿಳಾ ಸ್ಥಾನಮಾನದ ಆತ್ಮಾವಲೋಕನ

ಡಾ.ದಾನಮ್ಮ ಝಳಕಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day). ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ ಇದಾಗಿದೆ. ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಯು ಎನ್‌ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಪ್ರತಿ ವರ್ಷವು ವಿಶ್ವಸಂಸ್ಥೆಯು ಹೊಸ ಹೊಸ ಥೀಮ್‌ ನೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಆಚರಣೆಯ ಮುಖ್ಯ ಉದ್ದೇಶ ಲಿಂಗ ಸಮಾನಸತೆಯನ್ನು ಎತ್ತಿಹಿಡಿಯುವುದು, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿದೆ. ಈ ದಿನದಂದು ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕೀಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆಯನ್ನು ಮಾಡಲು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಈ ಜಗತ್ತನ್ನು ಉತ್ತಮ ಮತ್ತು ಸುರಕ್ಷಿತ ಸ್ಥಳವನ್ನಾಗಿ ಬದಲಾಯಿಸಬೇಕಾಗಿದೆ. ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆ, ಸಾಕ್ಷರತೆ ಸಾಧಿಸಲು ಮಹಿಳಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.
ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್ ಅನ್ನು ವಿಶ್ವಸಂಸ್ಥೆಯು “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದು ಘೋಷಿಸಿದೆ. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ಥೀಮ್‌ನೊಂದಿಗೆ ಈ ಥೀಮ್ ಅನ್ನು ಹೊಂದಿಸಲಾಗಿದೆ. “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ” ಎನ್ನುವುದಾಗಿದೆ.
ಆದರೆ ವಾಸ್ತವಾಗಿ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆ ಮಹಿಳೆಯರ ಸ್ಥಾನಮಾನ ಉತ್ತಮಪಡಿಸಬಲ್ಲದೇ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಮಹಿಳೆ ಸ್ಥಾನಮಾನದ ಆತ್ಮಾವಲೋಕನ

ಪ್ರಾಚೀನ ಕಾಲದಿಂದಲೂ ಮಹಿಳೆ ಸ್ಥಾನಮಾನ ವಿಭಿನ್ನವಾದ ಸಮಸ್ಯೆಗಳ ಸುಳಿಯಲ್ಲಿ ಬಳಲುತ್ತಿರುವುದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ. ಪ್ರಾಚೀನ ಕಾಲದಲ್ಲಿ ಮಹಿಳೆಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ದ್ವಿತೀಯ ದರ್ಜೆಯ ನಾಗರಿಕಳಾಗಿ ಪರಿಗಣಿಸಲಾಗಿದೆ. ಕೆಲವೇ ಕೆಲವು ಮೇಲ್ವರ್ಗದ ಮಹಿಳೆ ಅಂದರೆ ಮೈತ್ರಾಯಿಣಿ ಹಾಗೂ ಘಾರ್ಗಿಯಂತಹ ಮಹಿಳೆಯ ಹೆಸರಿನ ಮೂಲಕ ಎಲ್ಲ ಮಹಿಳೆಯರಿಗೆ ಉನ್ನತ ಸ್ತಾನವನ್ನು ನೀಡಲಾಗಿದೆ ಎಂದು ಬಿಂಬಿಸುತ್ತಿರುವುದು ದುರ್ದೈವದ ಸಂಗತಿಯೇ ಆಗಿದೆ.. ಪೂಜೆ ಮಾಡುವ, ನಿರ್ಣಯ ಕೈಗೊಳ್ಳುವ, ಉದ್ಯೋಗ ಮಾಡುವ ಹಾಗೂ ಮತ ಹಾಕುವ ಹಕ್ಕನ್ನು ಸಹ ನಿರಾಕರಿಸಿ ಮಹಿಳೆಯನ್ನು ಸಮಾಜದಲ್ಲಿ ಅಸಮಾನತೆಯಿಂದ ಕಾಣಲಾಗಿತ್ತು. ಮಹಿಳೆಯನ್ನು ದೇವತೆ ಎಂದು ಪೂಜಿಸುವ ಜನ ಅವಳನ್ನು ಮನುಷ್ಯಳನ್ನಾಗಿ ನೋಡುವ, ಪರಿಭಾವಿಸುವ ಕಾರ್ಯ ಮಾಡಲಿಲ್ಲ. ಇನ್ನು ಜನಪದ ಹಾಡುಗಳು ಮಹಿಳೆಯ ಸ್ಥಾನವನ್ನು ಪುರುಷರ ಅಧೀನದಲ್ಲಿರುವಂತೆ ಹಾಡು ಕಟ್ಟಿ ಅದರಂತೆ ಇರಲು ಒತ್ತಾಸೆಯನ್ನು ಮಾಡಿದ್ದರು.
ಮರಭೂಮಿಯಲ್ಲಿ ಓಯಾಸಿಸ್‌ ಕಂಡಂತೆ 12 ನೇಯ ಶತಮಾನದಲ್ಲಿ ಶರಣರು ಮಹಿಳೆಗೆ ಸಮಾನತೆಯ ಸ್ಥಾನಮಾನ ದೊರಕಿಸಿ, ತಲೆಎತ್ತಿ ತಿರುಗುವಂತೆ ಮಾಡಿದರು. ಆದರೆ ಇದು ಕೇವಲ ಆ ಶತಮಾನಕ್ಕೆ, ಅವರ ಕಾಲಕ್ಕೆ ಮೀಸಲಾಗಿತ್ತು.
ಇನ್ನು ಮಧ್ಯಕಾಲದಲ್ಲಿ ಮಹಿಳೆಯ ಸ್ಥಾನಮಾನ ಇನ್ನೂ ಅಧೋಗತಿಗೆ ಹೋಗಿತ್ತು. ಮಹಿಳೆಗೆ ಯಾವ ಹಕ್ಕುಬಾಧ್ಯತೆಗಳನ್ನು ನೀಡದೇ ಎಲ್ಲ ರೀತಿಯ ಶೋಷಣೆಯನ್ನು ಮಹಿಳೆ ಅನುಭವಿಸಿದ ಕಾಲ ಎನ್ನಬಹುದು. ಇಲ್ಲಿ ಮಹಿಳೆ ಎಂದರೆ ಬಡ ಮಹಿಳೆ ಅಥವಾ ಅಲ್ಪಸಂಖ್ಯಾತರ ಮಹಿಳೆ ಅಥವಾ ಬುಡಕಟ್ಟು ಮಹಿಳೆ ಎಂದು ಭಾವಿಸದೇ ಇಡೀಯಾಗಿ ಎಲ್ಲ ಮಹಿಳೆಯರು ಎಂದೇ ಭಾವಿಸಬೇಕು. ಏಕೆಂದರೆ ಎಲ್ಲ ಶೋಷಣೆಯಲ್ಲಿ ತಾರತಮ್ಯ ಮಾಡದೇ ಎಲ್ಲ ಮಹಿಳೆಯರು ಒಂದೇ ರೀತಿಯ ಶೋ಼ಷಣೆ ಅನುಭವಿಸಿದರು. ಅಲ್ಲದೇ ಮಾನಸಿಕ ಹಾಗೂ ದೈಹಿಕವಾಗಿ ಶೋಷಣೆಗೆ ಬಲಿಪಶುವಾದವರು.
ಇನ್ನು ಆಧುನಿಕ ಕಾಲದಲ್ಲಿ ಮಹಿಳೆಗೆ ಶಿಕ್ಷಣದ ಮೂಲಕ ಅಭಿವೃದ್ಧಿ ಹಾಗೂ ಸಬಲೀಕರಣದ ಕೀಲಿಕೈ ಆದರೂ ಸಹ ವಿಭಿನ್ನವಾದ ಶೋಷಣೆ ಅನುಭವಿಸುತ್ತಿರುವುದು ಮಾಧ್ಯಮದ ಮೂಲಕ ನೋಡುತ್ತಿದ್ದೇವೆ. ಮಹಿಳೆಯನ್ನು ಬೋಗದ ವಸ್ತುವಾಗಿ, ಜಾಹೀರಾತಿನ ಸರಕಾಗಿ ಹಾಗೂ ವರದಕ್ಷಿಣೆಯ ಭಾಗವಾಗಿ ಪರಿಗಣಿಸಲಾಗುತ್ತಿದೆ. ಉದ್ಯೋಗ ಮಾಡುವ ಮಹಿಳೆಯ ಸಂಬಳಕ್ಕಾಗಿ ಅವಳ ವಿವಾಹ ಆಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಉದ್ಯೋಗಸ್ಥ ಮಹಿಳೆಯ ಸಂಬಳದ ಮೇಲೆ ಅವಳ ಹಕ್ಕಿಲ್ಲ. ಹೊರಗಡೆ ದುಡಿದ ಮಹಿಳೆಗೆ, ಮನೆಕೆಲಸ ಅವಳನ್ನು ಬಿಟ್ಟಿಲ್ಲ. ಒಟ್ಟಾರೆ ಅವಳ ದುಡಿಮೆ ಮನೆಯ ಹೊರಗೆ ಹಾಗೂ ಒಳಗೆ ಎರಡೂ ಕಡೆ ಕಡ್ಡಾಯವಾಗಿರುವಂತೆ ಸಂಪ್ರದಾಯಸ್ಥರು ಮಾಡಿದ್ದಾರೆ. ಅಲ್ಲದೇ ಅವಳ ಮೇಲೆ ಸದಾ ಸಂಶಯದ ಕಣ್ಣುಗಳನ್ನು ಅವಳನ್ನು ಒಳಗೊಳಗೆ ಬೇಯುವಂತೆ ಮಾಡುತ್ತಿವೆ.
ಇಂತಹ ಪರಿಸ್ಥಿಯಲ್ಲಿಯೂ ಮಹಿಳೆ ತನ್ನ ಸ್ವಸಾಮರ್ಥ್ಯದಿಂದ ಸಾಧಿಸುವ ಛಲದಿಂದ, ಪ್ರಯತ್ನದಿಂದ ಅನೇಕ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿರುವದನ್ನು ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಎಲ್ಲ ಮಹಿಳೆಯರು ಉತ್ತಮ ಸ್ಥಾನಪಡೆಯಲು ಇನ್ನೂ ಹೆಣಗಾಡಬೇಕಿದೆ.
ಈ ಮೇಲಿನ ಸ್ಥಾನಮಾನಗಳನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಅಂತರಾಷ್ಟ್ರೀಯ ಮಾಹಿಳಾ ದಿನಾಚರಣೆಯ ಆಚರಿಸಬೇಕಿದೆ. ಕೇವಲ ಒಂದು ದಿನ ಆಚರಣೆ ಮಾಡಿ, ವೇದಿಕೆಯಲ್ಲಿ ಅಬ್ಬರದ ಮಾತುಗಳನ್ನಾಡುವದಕ್ಕಿಂತಲೂ ಮಹಿಳೆಯ ಸ್ಥಾನ ಹೇಗೆ ಎತ್ತರಿಸಬೇಕಿದೆ ಎಂದು ಆಲೋಚಿಸಬೇಕಿದೆ. ಇಲ್ಲಿ ಒಂದು ಘಟನೆ ನೆನಪಿಗೆ ಬರುತ್ತದೆ. ಮಹಿಳಾ ದಿನಾಚರಣೆಯ ಅಧ್ಯಕ್ಷೀಯ ಭಾಷಣ ಮಾಡುವ ಮಹಿಳೆಯೊಬ್ಬಳು ಆರ್ಭಟದಿಂದ ಮಾತನಾಡುತ್ತಿದ್ದಳು. ನಾವು ಮಹಿಳೆಯರು ಯಾರ ಕೈಗೊಂಬೆ ಅಲ್ಲ ನಮಗೂ ನಮ್ಮದೇ ಆಧ ಸ್ತಾನಮಾನ ಇದೆ. ನಮ್ಮದೇ ಆದ ಜವಾಬ್ದಾರಿಗಳಿವೆ. ನಮ್ಮ ಕೌಶಲವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಮಾತನಾಡುತ್ತಿರುವಾಗ ಅವಳ ಮನೆಯಿಂಧ ಫೋನ ಕರೆ ಬಂದಿತು. ಅವಳ ಪತಿಯು ಸಾಕು ಬಾರೇ? ಹಸಿವಾಗುತ್ತಿದೆ. ನೀನು ಆ ಕಾರ್ಯಕ್ರಮ ಈ ಕಾರ್ಯಕ್ರಮ ಎಂದು ಓಡಾಡುತ್ತಿದ್ದರೆ ಹೇಗೆ ಎಂದು ಗದರಿಸಿನು. ಹೀಗಾದರೆ ಮನೆಯಿಂದಲೇ ಹೊರಹಾಕಬೇಕಾಗುತ್ತದೆ ಎಂದು ಹೇಳಿದ ದ್ವನಿ ಕೇಳಿ, ಆ ಮಹಿಳೆ ವೇದಿಕೆಯನ್ನು ಬಿಟ್ಟು ಮನೆಯೆಡೆಗೆ ನಡೆದಳು. ಈ ಘಟನೆ ಮಹಿಳೆಯ ಪರಿಸ್ಥಿತಿಯನ್ನು ಹೇಳುತ್ತದೆ. ಅಂದರೆ ಮಹಿಳೆಯ ಸ್ಥಾನಮಾನ ಉತ್ತಮವಾಗಲು ಪುರುಷರ ಸಹಾಯ, ಸಹಕಾರ ಅತ್ಯಗತ್ಯವಾಗಿ ಬೇಕು. ಮಹಿಳೆಗೆ ಉತ್ತಮ ಸ್ಥಾನಮಾನ ಒದಗಿಸಿದರೆ ಪುರುಷರ ಸ್ತಾನಮಾನ ಕಡಿಮೆ ಆಗುವದಿಲ್ಲ. ಬದಲಾಗಿ ಸಬಲೀಕರಣಕ್ಕಾಗಿ ಕೈಜೋಡಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ದಿನಾಚರಣೆಯ ಅರ್ಥಪೂರ್ಣ ಆಚರಣೆ ಅತ್ಯಗತ್ಯವಾಗಿದೆ. ಇದು ಒಂದು ದಿನದ ಆಚರಣೆ ಆಗದೇ, ಅವಳ ಜೀವನದ ಅತ್ಯಮೂಲ್ಯ ಸ್ತಾನಮಾನದ ಭರವಸೆಯ ಆಚರಣೆ ಮಾಡಬೇಕಾಗಿರುವುದು ಎಲ್ಲ ಪುರುಷಪ್ರಾಧಾನ ಸಮಾಜದ ಕಾರ್ಯ ಹಾಗೂ ಜವಾಬ್ದಾರಿಯಾಗಿದೆ.


ಡಾ.ದಾನಮ್ಮ ಝಳಕಿ

Leave a Reply

Back To Top