ಸಂಕ್ರಾಂತಿ ವಿಶೇಷ-ಕನ್ನಡ ಸಂಸ್ಕೃತಿಯಲ್ಲಿ ಸಂಕ್ರಾಂತಿಸಂಕ್ರಾಂತಿ ವಿಶೇಷ-

ಸಂಕ್ರಾಂತಿ ವಿಶೇಷ

ಕನ್ನಡ ಸಂಸ್ಕೃತಿಯಲ್ಲಿ ಸಂಕ್ರಾಂತಿ

ಸುಜಾತಾ ರವೀಶ್

ಬದಲಾವಣೆ ಪ್ರಕೃತಿಯಲ್ಲಿ ಒಂದು ರೀತಿಯ ಕ್ರಾಂತಿಯ ವಾತಾವರಣವೇ ಸಂಕ್ರಾಂತಿ . ಹೇಮಂತದ ವಿಷಾದ ಥಂಡಿತನ ಜಡ್ಡುಗಟ್ಟಿದ ಮಬ್ಬು ಹರಿಯುತ್ತಾ ಪಥ ಬದಲಿಸಿದ ನೇಸರನ ಕಾವು ಏರತೊಡಗುವ ನಾಂದಿಯ ದಿನ . ಋತು ರಾಜ ವಸಂತನ ಆಗಮನಕ್ಕೆ ಪ್ರಕೃತಿ ಸಜ್ಜಾಗುವ ವೇಳೆ.  

ನಮ್ಮ ಸಂಸ್ಕೃತಿಯಲ್ಲಿ ವರ್ಷವಿಡೀ ಹಬ್ಬಗಳ ಆಚರಣೆ ಕೆಲವಕ್ಕೆ ಧಾರ್ಮಿಕ ನೆಲೆಗಟ್ಟು ಕೆಲವಕ್ಕೆ ಪೌರಾಣಿಕ ಹಿನ್ನೆಲೆ ಹಲವು ಸಡಗರ ಸಂಭ್ರಮ ಕೆಲವಕ್ಕೆ ದೀಪಗಳ ವಿಭ್ರಮ.  ಆದರೆ ಸಂಕ್ರಾಂತಿ  ಇವೆಲ್ಲವುಗಳನ್ನು ಸಮ್ಮಿಲಿತಗೊಂಡ ಹೊಸತು ವೈಭವ.  ಅದಕ್ಕೆ ಇದನ್ನು ಜನಪದರ ಹಬ್ಬ ಎನ್ನುವುದು ದೇಶದ ಬೆನ್ನೆಲುಬು ಎನಿಸಿಕೊಂಡ ರೈತನ ಪರಿಶ್ರಮ ಸಫಲವಾಗುವ ಕಾಲ ;ಸಾರ್ಥಕ ದುಡಿಮೆಯ ಪ್ರತಿಫಲ ಮನೆ ಸೇರುವ ಕಾಲ; ಸುಗ್ಗಿಯ ಸಂಭ್ರಮದ ಹೊಸ ಪರ್ವಕಾಲ.  ನೆಮ್ಮದಿ ಸಂತೃಪ್ತಿ ಗಳು ತುಂಬಿ ತುಳುಕುವಾಗ ಮನೆ ಮನಗಳಲ್ಲೆಲ್ಲ ಹರುಷದ ಹೊಳೆ ಉಕ್ಕಿ ಹರಿಯುವ ವೇಳೆ .

ಹಾಗೆಯೇ ಈ ಸಂದರ್ಭದಲ್ಲಿ ಜಿ ಎಸ್ ಶಿವರುದ್ರಪ್ಪ ಅವರ ಕವನದ ಈ ಕೆಳಗಿನ ಸಾಲುಗಳನ್ನು ನೆನಪಿಸಿಕೊಳ್ಳಬಹುದು

ಮುಕ್ತವಾಯಿತು ಮಾಘಮಾಸದ ಕೊರೆವ ಶೀತಲ ಶಾಪವು

ತೀವ್ರ ತಪದಲಿ ಕೊಚ್ಚಿಹೋಯಿತು ಹಳೆಯ ಜಡತೆಯ ತಾಪವು

ಯೌವನೋದಯವಾಯಿತಿಗೋ  ಕಣ್ಣು ತುಂಬುವ ರೂಪವು

ನೂರು ತರುವಿನ ತಳಿರ ಕೈಯಲ್ಲಿ ನೂರು ಹೂವಿನ ದೀಪವು  

ಸಂಕ್ರಾಂತಿ ಧಾರ್ಮಿಕ ಆಚರಣೆ ಅನ್ನುವುದಕ್ಕಿಂತ ಒಂದು ಸಾಮಾಜಿಕ ಆಚರಣೆಯಾಗಿ ಹೆಚ್ಚು ಗುರುತಿಸಲ್ಪಟ್ಟಿದೆ . ಬಹುತೇಕ ಎಲ್ಲಾ ಹಬ್ಬಗಳು ಚಾಂದ್ರಮಾನ ರೀತ್ಯಾ ಆಚರಿಸಿಕೊಳ್ಳುವುದಾದರೆ ಸಂಕ್ರಾಂತಿಯ ಆಚರಣೆ ಸೌರಮಾನ ರೀತ್ಯಾ. ಯಾವಾಗಲೂ ಜನವರಿ ಹದಿನಾಲ್ಕು ಅಥವಾ ಹದಿನೈದರಂದು ಬರುತ್ತದೆ .ಇದು ಸೂರ್ಯನ ಆರಾಧನೆಗೆ ಮೀಸಲಾದ ದಿನ.  ಸೂರ್ಯ ತನ್ನ ಚಲನೆಯನ್ನು ಉತ್ತರಾಭಿಮುಖವಾಗಿ ಆರಂಭಿಸುವ ದಿನ. ಚಳಿಯ ತೀವ್ರತೆ ಕಡಿಮೆಯಾಗುತ್ತಾ ಧೀರ್ಘ ಹಗಲುಗಳು ಶುರುವಾಗುತ್ತದೆ. ಒಟ್ಟಿನಲ್ಲಿ ವಾತಾವರಣದಲ್ಲಿ ಚೈತನ್ಯ ತುಂಬಿಸುವ ಕಾಲ.

ಖಗೋಳ ಶಾಸ್ತ್ರ ರೀತ್ಯಾ ಇಡೀ ಸೃಷ್ಟಿಯಲ್ಲಿ 3ರೀತಿಯ ಚಲನೆಗಳು ಭೂಮಿ ತನ್ನ ಅಕ್ಷದ ಮೇಲೆ ಚಲಿಸುವ ದಿನ ರಾತ್ರಿ ಗಳಿಗೆ ಕಾರಣವಾದ ಮೊದಲನೆಯ ಚಲನೆ ಎರಡನೆಯದು ಸೂರ್ಯನ ಸುತ್ತ ಭೂಮಿ ಸುತ್ತುವ ಋತುಮಾನಗಳನ್ನು ಉಂಟುಮಾಡುವ ಚಲನೆ .ಮೂರನೇಯ ಚಲನೆಗೆ  ಅಯನ ಎಂದು ಹೆಸರು .     ಭೂಮಿಯು ತನ್ನ  ಅಕ್ಷದ ಸುತ್ತ ಸುತ್ತುತ್ತಾ ಕಾಂತಿವೃತ್ತಕ್ಕೆ ೨೩೧/೨ ಡಿಗ್ರಿ ಓರೆಯಾಗಿ ಚಲಿಸುತ್ತದೆ ಈ ಅಕ್ಷದ ತುದಿ ದಿಕ್ಕು ಬದಲಾಯಿಸುವುದೇ ಅಯನ. ಗ್ರೆಗೋರಿಯನ್ ಪಂಚಾಂಗದ ಪ್ರಕಾರ ವು ಈ ದಿಕ್ಕು ಬದಲಾಯಿಸುವ ದಿನ ಜನವರಿ 14 ಅಥವಾ15 ನೆಯ ತಾರೀಕು ಬರುತ್ತದೆ . ಹಗಲು ಮತ್ತು ಇರುಳು ಗಳು ಒಂದೇ ಸಮನಾಗಿರುವ ಈಕ್ವಿನಾಕ್ಸ್ ಈಗ ಡಿಸೆಂಬರ್ 22ನೆಯ ತಾರೀಕು ಬಂದರೂ ಆಚರಣೆ ರೀತ್ಯ ಹಿರಿಯರು ಪಾಲಿಸಿಕೊಂಡು ಬಂದ ಜನವರಿ ಹದಿನಾಲ್ಕು ಸಂಕ್ರಮಣ. 

ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಪ್ರತಿಯೊಂದು ರಾಶಿಯಲ್ಲಿ ಒಂದೊಂದು ಮಾಸದಲ್ಲಿ ಪ್ರವೇಶಿಸುತ್ತಾನೆ ಹಾಗೂ ಆ ದಿನವನ್ನು ಸಂಕ್ರ    ಮಣ ಎಂದು ವಿಶೇಷವಾಗಿ ಆಚರಿಸುತ್ತಾರೆ. ಹನ್ನೆರಡು ಸಂಕ್ರಮಣಗಳು ಬಂದರೂ ಮಕರ ಸಂಕ್ರಮಣ ಹಾಗೂ ತುಲಾ ಸಂಕ್ರಮಣ ಗಳು ವಿಶೇಷವಾಗಿ ಆಚರಿಸಲ್ಪಡುವುದು. ಹೀಗೆ ಸೂರ್ಯನು ಉತ್ತರ ದಿಕ್ಕಿಗೆ ತನ್ನ ಚಲನೆಯನ್ನು ಪ್ರಾರಂಭಿಸುವ ಕಾಲದಿಂದ ಉತ್ತರಾಯಣವು ಆರಂಭವಾಗುತ್ತದೆ. ಈ ಉತ್ತರಾಯಣವನ್ನು ದೇವತೆಗಳ ಹಗಲು ಎಂದು ಪರಿಗಣಿಸುವುದರಿಂದ ದಕ್ಷಿಣಾಯಣದ ರಾತ್ರಿಯು ಕಳೆದು ಇಂದಿನಿಂದ ಬೆಳಗು ಪ್ರಾರಂಭವಾಗುತ್ತದೆ.  ಈ ದಿನಗಳಲ್ಲಿ ನಡೆಯುವ ಪುಣ್ಯ ಕಾರ್ಯಗಳಿಗೆ ಹೆಚ್ಚಿನ ಫಲ ಪ್ರಾಪ್ತಿ ಎಂದು ನಂಬುತ್ತಾರೆ .ಶುಭ ಕಾರ್ಯಕ್ರಮಗಳು ಸಹ ಈ ಸಮಯದಲ್ಲೇ ನಡೆಯುವುದು ಹೆಚ್ಚು. ಹಾಗಾಗಿಯೇ ಮಹಾಭಾರತದಲ್ಲಿ ಭೀಷ್ಮರು ಎಷ್ಟೇ ಗಾಯ ಹೊಂದಿದ್ದರೂ ಉತ್ತರಾಯಣದ ಆಗಮನಕ್ಕಾಗಿ ನಿರೀಕ್ಷಿಸಿ ಆ ಸಮಯದಲ್ಲೇ ತಮ್ಮ ದೇಹತ್ಯಾಗ ಮಾಡಿದ್ದು.

ಸಂಕರಾಸುರ ಎಂಬ ರಾಕ್ಷಸನನ್ನು ಸಂಕ್ರಾಂತಿ ದೇವತೆಯು ಈ ದಿನ ಸಂಹರಿಸಿದ್ದು ಪುರಾಣೋಕ್ತ. 

ಮೊದಲೇ ಹೇಳಿದಂತೆ ಇದು ಸಾಮಾಜಿಕ ಹಬ್ಬವೂ ಕೂಡ. ಪೈರು ಕಟಾವಾಗಿ ಮನೆಗೆ ಬರುವ ಸಮಯವಾದ್ದರಿಂದ ರೈತಾಪಿ ವರ್ಗಕ್ಕೆ ಸಂಭ್ರಮ .ಹೀಗಾಗಿ ಸುಗ್ಗಿಯ ಸಂಭ್ರಮವನ್ನು ಸಡಗರ ಹಬ್ಬವಾಗಿಯೂ ಸಂಕ್ರಾಂತಿ ಪ್ರಚಲಿತ. ಬೇಸಾಯದ ಕಾರ್ಯ ಮುಗಿದು ಪುರುಸೊತ್ತಾಗಿರುವುದರಿಂದ ಜಾತ್ರೆ ಮೇಳ ತೇರು ಉತ್ಸವಗಳ ಭರಾಟೆಯೂ ಜೋರಿರುತ್ತದೆ.  ಒಟ್ಟಿನಲ್ಲಿ ಮನೆ ಮನಗಳಲ್ಲಿ ಖುಷಿಯ ವಾತಾವರಣ .ಹಬ್ಬ ಆಚರಿಸಲು ಇದಕ್ಕಿಂತ ಇನ್ನೇನು ಬೇಕು ?

ಸುಗ್ಗಿ ಹಬ್ಬ ಅಥವಾ ಸಂಕ್ರಾಂತಿ ಎಂದು ಕರೆಸಿಕೊಳ್ಳುವ ಈ ದಿನದ ವಿಶೇಷ.  ಹೊಸ ಅಕ್ಕಿಯಿಂದ ಮಾಡಿದ ಹುಗ್ಗಿ ಹಾಗೂ ಹೆಂಗಳೆಯರು ಎಳ್ಳು ಬೀರುವುದು. ಎಳ್ಳು ಹುರಿಗಡಲೆ ಹುರಿದ ಕಡಲೆಕಾಯಿ ಬೀಜ ಕೊಬ್ಬರಿ ಹಾಗೂ ಬೆಲ್ಲದ ಚೂರುಗಳಿಂದ ತಯಾರಿಸಿದ ಎಳ್ಳನ್ನು ತಟ್ಟೆಯಲ್ಲಿಟ್ಟು ವಿವಿಧ ಆಕಾರದಲ್ಲಿ ತಯಾರಿಸಿದ ಸಕ್ಕರೆ ಅಚ್ಚುಗಳು ಸೂಕ್ತ ಉಡುಗೊರೆಗಳೊಂದಿಗೆ ಕಬ್ಬು ಬಾಳೆಹಣ್ಣು ಸಹಿತ ಬಂಧು ಮಿತ್ರರೊಂದಿಗೆ ವಿನಿಮಯ . “ಎಳ್ಳು ತಿಂದು ಒಳ್ಳೆ ಮಾತನಾಡು ” ಎಂದು ನಾಣ್ನುಡಿ .ಈ ದಿನಗಳಲ್ಲಿ ಚಳಿ ಹೆಚ್ಚಿರುವುದರಿಂದ ತಾಪ ಹೆಚ್ಚಿಸುವಂತಹ ಎಳ್ಳು ಕಡಲೆ ಬೀಜ ಬೆಲ್ಲ ಇವುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು ಆಯುರ್ವೇದದಲ್ಲಿಯೂ ಹೇಳಲ್ಪಟ್ಟಿದೆ .

ನಮ್ಮ ಹಿರಿಯರು  ಯಾವಾಗಲೂ ಋತುಮಾನಕ್ಕೆ ತಕ್ಕಂತೆ ಆಹಾರ ಪದ್ದತಿಯನ್ನು ಸಂಪ್ರದಾಯದ ರೀತಿಯಲ್ಲಿ ಹಬ್ಬಗಳ ಆಚರಣೆಯಲ್ಲಿ ಅಳವಡಿಸಿಕೊಂಡಿರುವುದು ಇದರಿಂದ ವಿದಿತವಾಗುತ್ತದೆ . ಎಳ್ಳಿನ ಬಳಕೆ ಸಂಕ್ರಾಂತಿಯೊಡನೆ ಸಮೀಕರಿಸಿಕೊಂಡಿದೆ.

“ತಿಲೋದ್ವರ್ತೀ ತಿಲಸ್ನಾಯೀ ತಿಲ ಹೋಮೀ ತಿಲಪ್ರದಃ ತಿಲಭುಕ್ ತಿಲವಾಚೀ ಚ ಷಟ್  ತಿಲೇನಾವಸೀದತಿ ”  ಹೀಗೆ 6 ರೀತಿಯಲ್ಲಿ ಎಳ್ಳನ್ನು ಬಳಸಬಹುದು ಎಂದು  ಶಾಸ್ತ್ರಗಳು ತಿಳಿಸುತ್ತವೆ .ಎಳ್ಳಿನ ಸೇವನೆ ಹಾಗೂ ದಾನವನ್ನು ಪ್ರತಿಬಿಂಬಿಸುವುದು ಸಂಕ್ರಾಂತಿ .

ಮದುವೆಯಾದ ಮೊದಲ ಐದು ವರ್ಷ ಹೆಣ್ಣುಮಕ್ಕಳು ಐದರಿಂದ ಆರಂಭಿಸಿ ವರ್ಷ ವರ್ಷಕ್ಕೆ ಐದರಂತೆ ಹೆಚ್ಚಿಸುತ್ತಾ ಬಾಳೆಹಣ್ಣಿನ ಬಾಗಿನವನ್ನು ಐದು ಜನರಿಗೆ ಕೊಡುವ ಪದ್ಧತಿ ಇದೆ .ಅಂತೆಯೇ ಮಕ್ಕಳು ಹುಟ್ಟಿದಾಗ ಮೊದಲ ವರ್ಷ ಹೆಣ್ಣು ಮಗುವಾದರೆ ಬೆಳ್ಳಿಯ ಪುಟ್ಟ ಅರಿಶಿನ ಕುಂಕುಮದ ಬಟ್ಟಲು ಗಂಡು ಮಗುವಾದರೆ ಅಂಬೆಗಾಲಿಡುವ ಪುಟ್ಟ ಬಾಲಕೃಷ್ಣನ ಮೂರ್ತಿಯನ್ನು ಹತ್ತಿರದ ಬಂಧು ಮಿತ್ರರಿಗೆ ಕೊಡುವ ಪರಿಪಾಠ.  ಸಕ್ಕರೆ ಮಣಿಗಳಿಂದ ಆಭರಣ ತಯಾರಿಸಿ ಮಕ್ಕಳಿಗೆ ತೊಡಿಸುತ್ತಾರೆ .

ಸಂಜೆಯ ವೇಳೆ ಸಣ್ಣ ಎಲಚಿ ಹಣ್ಣು ಕೊಬ್ಬರಿ ಚೂರು ಕಾಸುಗಳನ್ನು ಹಾಕಿ ಮಕ್ಕಳಿಗೆ ಎರೆದು ಆರತಿ ಮಾಡುತ್ತಾರೆ ಹೀಗೆ ಮಾಡುವುದರಿಂದ ದೃಷ್ಟಿ ಪರಿಹಾರ ಆಗುವುದೆಂಬ ನಂಬಿಕೆ . ಇದಕ್ಕೆ ” ಬೋರೆ

ಹುಯ್ಯುವುದು”  ಅಥವಾ “ಕರಿ ಹೊಡಿಸುವುದು” ಎಂಬ ಹೆಸರು.

ಮಾರನೆಯ ದಿನ ಪುಟ್ಟ ಮಕ್ಕಳ ಕೈಲಿ ಬೊಂಬೆಗಳನ್ನು ಕೊಡಿಸಿ ಎಳ್ಳು ಬೀರುತ್ತಾರೆ .ಬೊಂಬೆ ಎಳ್ಳು ಅಂತ ಕರೆಯುವ ಕ್ರಮ.

ಇನ್ನು ರಾಸುಗಳನ್ನು ಸಾಕಿದವರು ಅವುಗಳ ಮೈತೊಳೆದು ಅಲಂಕಾರ ಮಾಡಿ ಸಂಜೆಯ ಹೊತ್ತು ಕಿಚ್ಚು ಹಾಯಿಸುವುದನ್ನು ನೋಡುವುದೇ ಒಂದು ಆನಂದ .ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ನೆರವಾಗುವ ಹಸು ಕರು ಎತ್ತುಗಳನ್ನು ರೈತ ತನ್ನ ಮಕ್ಕಳಂತೆಯೇ ಭಾವಿಸಿ ಸಲ ಹೊತ್ತಿರುತ್ತಾನೆ ಅವುಗಳ ಮೇಲಿನ ಪ್ರೀತಿ ವಿಶ್ವಾಸವನ್ನು ತೋರುವ ಈ ಪರಿಕ್ರಮ ಜಾನಪದರ  ಪ್ರಕೃತಿಯ ಪ್ರತಿಯೊಂದು ಅಂಶವನ್ನು ಒಳಗೊಳ್ಳುವ ಸಂಪ್ರೀತಿಯನ್ನು ಎತ್ತಿಹಿಡಿಯುತ್ತದೆ . ಅಂದು ರಾಸುಗಳನ್ನು ಚೆನ್ನಾಗಿ ತೊಳೆದು ವಿವಿಧ ಬಣ್ಣಗಳನ್ನು ಹಚ್ಚಿ ಕೊಂಬುಗಳಿಗೆ ಗೆಜ್ಜೆಗಳನ್ನು ಕಟ್ಟಿ ಬೆಲೂನುಗಳನ್ನು ಇನ್ನಿತರ ಅಲಂಕಾರಿಕ ಮಣಿಗಳನ್ನು ಹಾಕಿ ಸಿಂಗರಿಸುತ್ತಾರೆ ನಂತರ ಹುಲ್ಲು ಗಳಿಗೆ ಬೆಂಕಿ ಹಚ್ಚಿ ಅವುಗಳ ಮೂಲಕ ದನಕರುಗಳನ್ನು ಓಡಿಸುತ್ತಾರೆ . ನಂತರ ಅವುಗಳಿಗೆ ಆರತಿ ಮಾಡಿ ಕೊಟ್ಟಿಗೆಯ ಒಳಗೆ ಕರೆದುಕೊಳ್ಳುತ್ತಾರೆ. ಇದನ್ನು ದೃಷ್ಟಿಪರಿಹಾರಾರ್ಥವಾಗಿ ನೆರವೇರಿಸುವರು ಎಂಬ ಪ್ರತೀತಿ.  ಪ್ರತಿಯೊಂದರಲ್ಲೂ ದೈವಿಕತೆಯನ್ನು ಕಾಣುವ ನಮ್ಮ ಸಂಸ್ಕೃತಿಯ ಪ್ರತೀಕ ಇದು .

ಸಂಕ್ರಾತಿಯ ಮತ್ತೊಂದು ಜಾನಪದ ಆಚರಣೆಯೆಂದರೆ ಬಣ್ಣ ಬಣ್ಣದ ರಂಗವಲ್ಲಿ ಹೆಣ್ಣುಮಕ್ಕಳು ಬೀದಿಯ ತುಂಬೆಲ್ಲ ದೊಡ್ಡದೊಡ್ಡ ರಂಗವಲ್ಲಿಗಳನ್ನು ಹಾಕಿ ಬಣ್ಣಗಳನ್ನು ತುಂಬಿ ಸಂಭ್ರಮಿಸುತ್ತಾರೆ . ಕೆಲವೆಡೆ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸುವ ಪರಿಪಾಠವೂ ಉಂಟು .

ದಕ್ಷಿಣ ಕರ್ನಾಟಕದಲ್ಲಿ ಹೊಸ ಅಕ್ಕಿಯಿಂದ ಮಾಡಿದ ಹುಗ್ಗಿ (ಇಂದಿನ ಕಾಲದಲ್ಲಿ ಪೊಂಗಲ್ ಎಂಬ ತಮಿಳು ಹೆಸರೇ ಹೆಚ್ಚಿನ ರೂಢಿ) ಮಾಡುವ ಸಂಪ್ರದಾಯ. ಗೆಣಸು ಅವರೆಕಾಳು ನೆಲಗಡಲೆ ಸಿಹಿಗುಂಬಳಕಾಯಿ ಇಂದಿನ ದಿನದ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ.

ಬೇಳೆ ಒಬ್ಬಟ್ಟು ಇಂದಿನ ಪ್ರಮುಖ ಭಕ್ಷ್ಯ.  ಒಬ್ಬಟ್ಟು ಮಾಡಿದ ಮೇಲೆ ಪಾಂಗಿತವಾಗಿ 2 ಪಲ್ಯ  ೨ ಕೋಸಂಬರಿ ಹುಳಿಯನ್ನ ಆಂಬೊಡೆಗಳು ಎಲೆಯನ್ನು ಅಲಂಕರಿಸುತ್ತವೆ . ಇಲ್ಲಿಯೂ ಆಯಾ ಋತುಗಳಲ್ಲಿ ಸಿಗುವ ತರಕಾರಿ ಕಾಳುಗಳ ಬಳಕೆಗೆ ಹೆಚ್ಚಿನ ನಿಗಾ ವಹಿಸುವುದನ್ನು ಗಮನಿಸಿದರೆ ಆರೋಗ್ಯದ ಬಗೆಗಿನ ನಮ್ಮ ಹಿರಿಯರ ಕಾಳಜಿ ಮೆಚ್ಚುವ ಹಾಗಾಗುತ್ತೆ .

ಇನ್ನೂ ನಮ್ಮ ಉತ್ತರ ಕರ್ನಾಟಕದ ಅಡುಗೆಯ ವೈಖರಿ ಏನು ಹೇಳುವುದು! ಕಟಕರೊಟ್ಟಿ ಖರ್ಜಿಕಾಯಿ ಹೂರಣದ ಹೋಳಿಗೆ ಎಳ್ಳು ಹೋಳಿಗೆ ಗೋಧಿ ಹುಗ್ಗಿ ಮುಳಗಾಯಿ ಪಲ್ಯ ಹೆಸರು ಕಾಳು ಪಲ್ಯೆ ಬುತ್ತಿ ಮಾಡಿಕೊಂಡು ಮನೆ ಜನರೆಲ್ಲಾ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ತೆರಳುವ ಆ ಸಂಭ್ರಮ ನೋಡಲು 2 ಕಣ್ಣು ಸಾಲದು ಎತ್ತುಗಳನ್ನು ವಿವಿಧ ಬಣ್ಣಗಳಿಂದ ಸಿಂಗರಿಸಿ ಕಾಲಿಗೆ ಕೊರಳಿಗೆ ಗೆಜ್ಜೆ ಕಟ್ಟಿ ಬಂಡಿಗಳಲ್ಲಿ ಹೊಲಕ್ಕೆ ತೆರಳುವ ಆ ಸೊಬಗು ಆಸ್ವಾದಿಸಿದವರಿಗಷ್ಟೇ ಗೊತ್ತು . ದಂಡಿ ಗಾಳಿಯೊಳಗ ಕಟಕರೊಟ್ಟಿ ಸಪ್ಪನ ಬ್ಯಾಳಿ ಕೆಂಪಿಂಡಿ ಮೆಲ್ಲುವುದು ಇದೆಯಲ್ಲ ಬಾಯಲ್ಲಿ ಜಳಜಳ ನೀರು ತರಿಸುವಷ್ಟು ಸೊಗಸು. ಉತ್ತರ ಕರ್ನಾಟಕದ ಕೆಲವು ಕಡೆ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ . 

ಸಂಕ್ರಾಂತಿ ಎಂದರೆ ನಿಸರ್ಗದ ಹಬ್ಬ ಪ್ರಕೃತಿಯ ಸೂರ್ಯನ ಆರಾಧನೆಯ ಪರ್ವ ಹಾಗಾಗಿಯೇ ಪ್ರಕೃತಿಗೆ ಸಂಬಂಧಿಸಿದ ಪೂಜೆಗಳಿಗೆ ಹೆಚ್ಚಿನ ಮಹತ್ವ. ರಾಮನಗರ ಮತ್ತು ಮಂಡ್ಯದ ಕೆಲವು ಪ್ರದೇಶಗಳಲ್ಲಿ ಕಾಟಮರಾಯ ಎಂಬ ದೈವದ ಪೂಜೆಯ ಪದ್ಧತಿ ಇದೆ ಊರಿನ ಕೆರೆ ಕುಂಟೆಗಳ ಬಳಿ ಹಸಿ ಜೇಡಿ ಮಣ್ಣಿನಿಂದ ಗೋಪುರದ ಆಕಾರದ ಮೂರ್ತಿಯನ್ನು ಮಾಡಿ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಕಾರೆಗಿಡದ ಮುಳ್ಳಿನ ಕೊಂಬೆ  ಮುಳ್ಳಿನ ತುದಿಗೆ ಉಗುನಿ ಹೂ ವನ್ನು ಸಿಕ್ಕಿಸುತ್ತಾರೆ ಮಣ್ಣಿನ ತಳಭಾಗದಲ್ಲಿ ಗೂಡು ಮಾಡಿ ದೀಪ ಹಚ್ಚಿಡುತ್ತಾರೆ.  ಇದಕ್ಕೆ ಪೂಜೆ ಸಲ್ಲಿಸಿದ ನಂತರವೇ ದನಗಳ ಮೆರವಣಿಗೆ ಹಾಗೂ ಕಿಚ್ಚು ಹಾಯಿಸುವ ವಿಧಿವಿಧಾನ ಆರಂಭವಾಗುತ್ತದೆ .

ಹಾಗೆಯೇ ಸಗಣಿಯಿಂದ ಪಿಳ್ಳೇರಾಯ ನನ್ನು ಮಾಡಿ ತುಂಬೆ ಹೂ ಉಗುನಿ ಹೂವುಗಳನ್ನು ಚುಚ್ಚಿ ಹೊಸ್ತಿಲಿನ ಎರಡೂ ಬದಿಗಳಲ್ಲಿ ಇಡುವುದು ಸಹ ಕೆಲ ಪ್ರದೇಶಗಳ ರೂಢಿಯಲ್ಲಿವೆ .     ಜನಪದರಿಗೆ ಕಳೆ ಅಥವಾ ಬೆಳೆ ಎರಡರಲ್ಲೂ ಭೇದಭಾವ ಇಲ್ಲ. ಕಳೆಗಳೂ ಸಹ ಪವಿತ್ರ ಎಂದು ಈ ವಿಧಿ ವಿಧಾನಗಳು ತೋರಿಸುತ್ತದೆ .ಹಾಗಾಗಿಯೇ ಸಂಕ್ರಾಂತಿ ಆಚರಣೆಯಲ್ಲಿ ಅಣ್ಣೆ ಹೂವು ಮತ್ತು ಉಗುನಿ ಹೂವು ನಂತಹ ಕಳೆಯ ಹೂವುಗಳಿಗೂ ಪ್ರಾಶಸ್ತ್ಯ . ಕಳೆನಾಶಕಗಳ ಭರಾಟೆಯಲ್ಲಿ ಈಗ ಅವುಗಳು ಸಿಗುವುದು ತುಂಬಾ ದುರ್ಲಭವಾಗಿಯೇ ಹೋಗಿದೆ.

ನಮ್ಮ ಜನಪದ ಗೀತೆಗಳಲ್ಲಿ ನಿಸರ್ಗಕ್ಕೆ ಭೂಮಿತಾಯಿಗೆ ಹೆಚ್ಚಿನ ಮಹತ್ವ ಬೆಳಿಗ್ಗೆ ಎದ್ದು ಯಾರ್ಯಾರ ನೆನೆಯಲಿ ಎಂದು ಭೂಮಿತಾಯಿಯನ್ನೇ ನೆನೆಯುವ ಸಂಸ್ಕೃತಿ ನಮ್ಮದು ಅದಕ್ಕೆ ಹೀಗೆ ಹಾಡುತ್ತಾರೆ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ

ಎಳ್ಳು ಜೀರಿಗೆ ಬೆಳೆಯೋಳ

ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ ನಾವೆದ್ದು ಕೈಯ ಮುಗಿದೇವು….

ಸೃಷ್ಟಿಯ ಆರಂಭದ ದಿನಗಳಿಂದ ಸೂರ್ಯ ಭೂಮಿಗೆ ಚೈತನ್ಯದಾಯಕ .ಭೂಮಿಯ ಎಲ್ಲಾ ಜೀವರಾಶಿಗಳಿಗೂ ಪೂಜನೀಯ. ಪ್ರಕೃತಿ ಪೂಜೆಯ ಸೂರ್ಯನ ಆರಾಧನೆಯ ಈ ಹಬ್ಬ ಜನ ಮಾನಸದಲ್ಲಿ ಗೆ ಸಂತಸವನ್ನೇ ಎಂಬುದು ತಮಗೆ ನೆರವಾಗುವ ಪ್ರಕೃತಿಯ ಎಲ್ಲ ಅಂಶಗಳಿಗೆ ಪೂಜೆ ಸಲ್ಲಿಸಿ ಗೌರವ ಸೂಚಿಸುವ ದ್ಯೋತಕ.

ಆದರೆ ಈ ಆಧುನಿಕತೆಯ ಭರಾಟೆಯಲ್ಲಿ ಹಬ್ಬದ ನಿಜ ಆಚರಣೆ ಹೋಗಿ ಬರಿ ಆಡಂಬರ ವೈಭವಗಳು ಮೆರೆಯುತ್ತಿರುವುದು ನಿಜಕ್ಕೂ ಶೋಚನೀಯ . ಮಾನವ ಹಾಗೂ ನಿಸರ್ಗದ ಮಧ್ಯೆ ಅಂಟು ನಂಟು ಗಳನ್ನು ಬೆಸೆಯುವಂತೆ ಆಚರಣೆಗಳು ನೆಲೆಗೊಳ್ಳಬೇಕು . ಎಷ್ಟೇ ಆಧುನಿಕತೆಯ ಹಿಂದೆ ಬಿದ್ದರು ಕಡೆಗೆ ನಿಸರ್ಗದ ಮಡಿಲಿಗೆ ಮೊರೆ ಹೋಗಬೇಕು ಎಂಬುದನ್ನು ಇಂದಿನ ಪೀಳಿಗೆ ಅರಿಯಬೇಕು . ಹಾಗಾದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ .


ಸುಜಾತಾ ರವೀಶ್

One thought on “ಸಂಕ್ರಾಂತಿ ವಿಶೇಷ-ಕನ್ನಡ ಸಂಸ್ಕೃತಿಯಲ್ಲಿ ಸಂಕ್ರಾಂತಿಸಂಕ್ರಾಂತಿ ವಿಶೇಷ-

  1. ಮಾಹಿತಿಪೂರ್ಣ ಲೇಖನ,ಧನ್ಯವಾದಗಳು

Leave a Reply

Back To Top