ಕ್ಷಮಿಸಿ ಬಿಡು ಬಸವಣ್ಣ ಎನ್ನುವ ಕಕ್ಕುಲಾತಿಗೆ ಶರಣಾಗಿ

ಪುಸ್ತಕ ಸಂಗಾತಿ

ಕ್ಷಮಿಸಿ ಬಿಡು ಬಸವಣ್ಣ ಎನ್ನುವ ಕಕ್ಕುಲಾತಿಗೆ ಶರಣಾಗಿ

ಡಾll ಶಿವಕುಮಾರ ಮಾಲಿ ಪಾಟೀಲರು 

ಕಾವ್ಯಲೋಕವು ಗಂಗಾವತಿಯಲ್ಲಿ ಪ್ರಾರಂಭವಾಗುವ ಮುಂಚೆಯೇ “ಪ್ರಥಮ ಕಿರಣ” ಎಂಬ ಕವನ ಸಂಕಲನ ಪ್ರಕಟಿಸಿ,ಸುಮಾರು ಒಂಭತ್ತು ವರುಷಗಳ ಸುದೀರ್ಘ ಕಾವ್ಯದ ಮಡುವುಗಟ್ಟಿಕೊಂಡು,ಮೊನ್ನೆ “ಕ್ಷಮಿಸಿ ಬಿಡು ಬಿಡು” ಬಸವಣ್ಣ ಕವನ ಸಂಕಲನ ಲೋಕಾರ್ಪಣೆಯಾದದ್ದು ಸಂತಸದ ಸಂಗತಿಯಾಗಿದೆ.

          ವೈಧ್ಯಕೀಯ ವೃತ್ತಿಯಲ್ಲಿ ಕರ್ತವ್ಯದ ಜೊತೆ-ಜೊತೆಯಾಗಿ ಬರವಣಿಗೆಯ ಬದುಕನ್ನು ಹಸಿ ಹಸಿಯಾಗಿ ಸ್ವೀಕರಿಸಿ,ಸಮಾಜದ ಬೆಳವಣಿಗೆಗೆ ಸವಾಲು-ಸಮಸ್ಯೆಗಳಿಗೆ ಮುಖಾಮುಖಿಯಾಗುವುದೆಂದರೆ,ಶಾಯದ್  ಬಂಜರು ಭೂಮಿಯಲ್ಲಿ ಹಸಿರುಗೊಳಿಸುವ ಯತ್ನವೇ ಸರಿ.ಮನುಷ್ಯ-ಮನುಷ್ಯರ ನಡುವಿನ ಸ್ನೇಹವು ತೀವ್ರತೆರನಾಗಿ ಮಗ್ಗಲು ಬದಲಾಯಿಸುವ ವಿಷಾದದ ಕಾಲನ ಕನ್ನಡಿಯ ಕಂಡು, ಧರ್ಮದ ಅಡ್ಡಗೋಡೆಯ ಮೇಲಿಟ್ಟ  ದೀಪವು ಬಿದ್ದು,ಬೆಂಕಿ ಹೊತ್ತಿ ಉರಿಯುವ  ದಿನಮಾನಗಳು ಬಹುವಾಗಿ  ಕಾಡಿ, ಮುಳ್ಳನ್ನು ತುಳಿದ ನೋವಿನಂತೆ ಸಾಲುಗಳು ಒಡಮೂಡಿದಾಗ  ಲೇಖಕರು ತಮ್ಮ ಎದೆಯಿಂದ ಹೊರ ಹಾಕಿದ್ದಾರೆ.ಭಾವನೆಯಲ್ಲಿಳಿದ ಹಾಗೆ ಬರೆದಿಟ್ಟ ಭಾಷೆಯು ಸವಾಲಾಗಿದೆ.ಸ್ವಂತಿಕೆ ವ್ಯಕ್ತಪಡಿಸುವ ಉಪಕ್ರಮವು ಸಂದೇಶಗಳ ಕಾಕು ಓದುಗರ ಕಣ್ಣಿಗೆ  ಜೀವಂತಿಕೆಯಿಂದ ತಿವಿದಿವೆ.

ಕ್ಷಮಿಸಿ ಬಿಡು ಬಸವಣ್ಣ ಕವನ ಸಂಕಲನವು ಅರಿವಿನ ಸಂಕೇತವಾಗಿದೆ.ಪುಸ್ತಕದೊಳಗಿನ ಕೆಲವು ಕವಿತೆಗಳು ಆರ್ತದನಿಯಾಗಿವೆ.ಆಧುನಿಕ ಸಮಾಜದ ಬದುಕು ಭವಣೆಯ ಅಬ್ಬರವನ್ನು,ಹೃದಯವಿದ್ರಾವಕ ವಿಷಾದವನು ಬಿತ್ತಲಾಗಿದೆ.

ನೀನು ಗಳಿಸಿದ ನೈತಿಕ ಆಸ್ತಿಯ ಮಾರಿ

ಮಹಾ ಮನೆಯ

ಜಂತಿಯ ಮುರಿದು

ಉರುವಲಾಗಿ ಬಳಸುತ್ತಿದ್ದೇವೆ

ಕ್ಷಮಿಸುಬಿಡು ಬಸವಣ್ಣ

ಹನ್ನೆರಡನೆಯ ಶತಮಾನದಿಂದ ಇಂದಿನವರೆಗೆ ಬಾಳಿ ಬದುಕಿದ ಶರಣ ಸಂತರ ಪ್ರಮಾಣಿಕ ಜೀವನವನ್ನು ದರ್ಶಿಸಿ,ಸ್ಪರ್ಶಿಸಿ,ಆರಾದಿಸಿ,ಚಿಂತಿಸಿ, ಬರೆದಿರುವ ಹಲವಾರು ವೈಚಾರಿಕ ಲೇಖಕರಲ್ಲಿ ಒಬ್ಬರಾಗಿರುವ

ಡಾll ಶಿವಕುಮಾರ ಮಾಲಿ ಪಾಟೀಲರು (ದಂತ ವೈದ್ಯರು) ವಚನ ಸಾಹಿತ್ಯನ್ನರಿತವರು, ಅಂತರಂಗ ಶುದ್ಧಿಗೊಳಿಸುವ  ನಡೆಯಾದದು ನುಡಿಯಾಗಬೇಕು ಎನ್ನುವ ಬಸವಾದಿ  ಪ್ರಮಥರ ಪ್ರಗತಿ ಪರತೆಯ ಕುರಿತು ಚಿಂತಿಸಿದ್ದಾರೆ.ಈಗೀಗಿನ ಸಮಾಜದಲ್ಲಿ ಪಾತಕಿಯೊಳಗಿನ ದ್ರೋಹ,ಭ್ರಷ್ಟ ನಡೆತೆಯನ್ನು,ಲೋಕದ ಒಳಮುಚುಗುತನವನ್ನು  ವಿಭಿನ್ನವಾಗಿ,ಯೋಚನಾ ಪರವಾಗಿ ತಮ್ಮ ಕಾವ್ಯದಲ್ಲಿ ಲೇಖಿಸಿದ್ದಾರೆ.

ವಿಶ್ವವನು ಬೆಳಗಿಸಿದ ಬೆಳಗಿನೊಳಗೆ ಮಹಾಬೆಳಗು, ಮಹಾ ವೈಚಾರಿಕ ಜಂಗಮನಾದ ಬಸವಣ್ಣನೇ ಮಹಾ ಮಾನವ.

ಅಂದಿನ ಮಹಾಮನೆಯನ್ನು ,ಈಗಿನವರಾದ ನಾವುಗಳು  ಅಕ್ಷರಶಃ ವ್ಯಸನಗಳಿಂದ  ನಮ್ಮೊಳಗಿನ ಅರಿವನ್ನು ಮರೆತು ವಿಚಾರ,ಆಚಾರ,ಬಸವ ಪಥವನ್ನು ಕಡೆಗಣಿಸಿದ ಕಳಕಳಿಯ  ಕೂಗು, ಮಾತ್ರ ಕವಿಗಳ ಲೇಖನಗಳಲ್ಲಿ ಮಾತ್ರ ಕಾಣಸಿಗುತ್ತದೆ.ಲೋಕದ ಸತ್ಪಾತ್ರಗಳು ಕತ್ತಲ ಕುರುಹು ಆಗಿದೆಂದು,ಅಸತ್ಯ ಅಪ್ರಮಾಣಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ನಮ್ಮೆಲ್ಲರನ್ನೂ ಕ್ಷಮಿಸು ಬಿಡು ಬಸವಣ್ಣ ಎಂದು ಕಾಲದ ಜೊತೆಗೆ ಧಾವಂತದ  ಬದುಕಿನ ಅಸಹನೀಯತೆಯನ್ನು ಕಾವ್ಯದ ಮುಖಾಂತರ ಕಟ್ಟಿಕೊಟ್ಟಿದ್ದಾರೆ.

ಜಾತಿ ಅಳಿಸಲು ನೀನು-

ಚಳುವಳಿಯ ರೂಪಿಸಿದಿ

ಜಾತಿ ಉಳಿಸಲು

ನಾವು……..

ಪೀಠಗಳ ಸ್ಥಾಪಿಸಿ

ಜಾತಿ ಸಮಾವೇಶಗಳ

ಧೂಳಲ್ಲಿ ನಿನ್ನನು- ಹುಡುಕಲು ಹೊರಟಿದ್ದೇವೆ

ಕ್ಷಮಿಸುಬಿಡು ಬಸವಣ್ಣ

ಕ್ಷಮಿಸು ಎನ್ನುವುದು ಪುಣ್ಯದ ಮಾತು. ಕ್ಷಮಿಸುಬಿಡು ಎನ್ನುವುದು ಕಟ್ಟ ಕಡೆಯ ಉನ್ನತೀಕರಿಸಿದ ವೇದನೆಯ ಚಹರೆಯಾಗಬಹುದೇನೋ…..‌? ಎಂದೆನಿಸಿದೆ. ಸಮಾನತೆಯನ್ನು ಉಸಿರಾಡುವ ನಾಳಿನ ಪೀಳಿಗೆಗೆ ಅಥವಾ ಮುಂದಿನ ಭವಿಷ್ಯದಲ್ಲಾದರೂ ಸಿಗಬಹುದಾದ ಸಮಾನತೆಯ ಆಶಯ ಸ್ಪಷ್ಟವಾಗಿರಲೆಂಬ ಚಿಂತನೆಯಾಗಿದೆ.ಸಂಸ್ಕ್ರೃತಿಯ ಕಟ್ಟುಪಾಡುಗಳು,ಮೂಡನಂಬಿಕೆಗಳು,ಅಮಾನುಷ ಆಚರಣೆಗಳನ್ನು,ವಾತಾವರಣವನ್ನು ನೋಡುತ್ತಾ……ಅನುಭವಿಸಿ, ಲೇಖಕರು ಲೇಖಿಸಿದ್ದಾರೆ.ಒಂದು ವಿಶಿಷ್ಟ ಗಮನಾರ್ಹ ಸಂಗತಿಯೆಂದರೆ, ಡಾll ಶಿವಕುಮಾರ ಮಾಲಿ ಪಾಟೀಲರು,ತಮ್ಮನ್ನು ಮತ್ತು  ವ್ಯವಸ್ಥೆಯನ್ನು ಪ್ರಶ್ನಿಸುತ್ತಾ,ಅತ್ಯಂತ ನೋವಿನ ತಹತಹಿಯಲ್ಲಿ ದಂತ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗೆ,ಸದೃಢವಾದ ಆತ್ಮ ಚೈತನ್ಯ ತುಂಬುವ ಕಾರ್ಯದಂತೆಯೇ ರೂಢಿಸಿಕೊಂಡು, ಕಾವ್ಯಕ್ಕೆ ವೃತ್ತಿ-ಪ್ರವೃತ್ತಿಯ ಹಂಗಿಲ್ಲ ಎಂಬುದು ಸಾಬೀತು ಪಡಿಸಿದ್ದಾರೆ.ಈ ಕೃತಿಯಲ್ಲಿ ನಯ ನಾಜೂಕು,ಗುಣಾವಗುಣಗಳ ಏಕೋನಿಷ್ಠೆಯ ಘನತೆ ಹೆಚ್ಚಿಸಿದೆ.ಒಬ್ಬ ಶಕ್ತ ಕವಿಗಿರಬೇಕಾದ ಎತ್ತರ-ಬಿತ್ತರಗಳು,ಬದುಕಿನ ಉತ್ಕಟ ಭಾವಗಳು,ಕಾವ್ಯಪಂಕ್ತಿಯಲ್ಲಿ ಸ್ಥಾಯಿಯಾಗಿ ಉಳಿಯುತ್ತವೆ.

“ಮೌನ ಪ್ರತಿಭಟನೆ” ಕವನ ಒಂದರಲ್ಲಿ ಲೇಖಕರ ಜೀವದನಿಯ ಪ್ರಶ್ನೆಯು,ಪ್ರಶ್ನೆಯಾಗಿ ಉಳಿದಿದೆ.

ಈ ಬಸವಣ್ಣ ಕೊಂಬು ಇದ್ದರೂ ಇರಿದವನಲ್ಲ

ಆ ಬಸವಣ್ಣ- ಕಿರೀಟವಿದ್ದರೂ

ಮೆರೆದವನಲ್ಲ

ಈ ಬಸವಣ್ಣ……

ದೇವಸ್ಥಾನದಲ್ಲಿ ನಂದಿಯಾದ

ಆ ಬಸವಣ್ಣ ಮನೆ-

ಮಠಗಳಲ್ಲಿ ಬಂಧಿಯಾದ

ಇಬ್ಬರದೂ ಮೌನ-

ಪ್ರತಿಭಟನೆ ಕಾಲ *

ಚಕ್ರದಲಿ

ಭಾಷೆಯ ಅನುಭವದೊಳಗೆ ವಿಪರ್ಯಾಸದ ಹಲವಾರು ಅರ್ಥಗಳು ಮನಸ್ಸಿಗೆ ಚುಚ್ಚುತ್ತವೆ.ನಾವೆಲ್ಲರೂ ವಿದ್ಯಾವಂತರು,ಸುಶಿಕ್ಷಿತರಾದರೂ ನಾಗರಿಕ ಸಮಾಜದ  ಅನಾಗರಿಕರಾಗಿದ್ದೇವೆ.ನಮ್ಮ ನಡತೆಯಲ್ಲಿ ಕ್ಷಣ ಕ್ಷಣ ಬದಲಾವಣೆ ಹುಡುಕುತ್ತೇವೆ.ಇದು ಪ್ರಜ್ಞೆಗೆ ಸಂಬಂದಿಸಿದ್ದಾಗಿದೆ.ಮೂಕ ಎತ್ತು(ಬಸವಣ್ಣ)ಕೃಷಿಯೊಂದಿಗೆ ತನ್ನ ಜೀವನ ಮುಡಿಪಾಗಿಸುತ್ತದೆ.ಸೀದಾ ಸಾದಾ ಸಾಕು ಪ್ರಾಣಿಯು,ತನ್ನ ಒಡೆಯನನ್ನು ತೊರೆದು ಎತ್ತಕಡೆಗಾದರೂ ಸ್ವೆಚ್ಛೆಯಾಗಿ  ಓಡಾಡಿಕೊಂಡಿರಬಹುದಲ್ಲಾ…..ಅದು. ಸಾಕು ಯಜಮಾನನ ಋಣವ ತ್ಯಜಿಸಿ  ಓಡಬಾರದೇಕೆ….? ರೈತನ ಹಿತೈಷಿಯಾಗಿ,ಸೂರ್ಯನ ಪ್ರಖರ ಬಿಸಿಲಿನ ತತ್ತರ ಸಹಿಸಿ,ಹಗಲಿರುಳು ಸಮಯದ ವ್ಯವಧಾನ ಲೆಕ್ಕಕ್ಕಿರಿಸದೆ,ತನ್ನ ಸಾಕು ಒಡೆಯನ ಬಾರುಕೋಲಿನ ಸೆಳೆತವನು ಸಹನೆಯಲಿ ನುಂಗಿ,ತನ್ನ ಕರಾಳ ದುಸ್ಥಿತಿಯನ್ನು ನೆನೆಯದೆ,ಉಪದ್ರವ ಎನ್ನದೆ , ಮನೆ-ಹೊಲದಲಿ ದುಡಿಯುವ ಮೂಕ ಬಸವ ಗೆ  ಬಸವಣ್ಣ ಎನ್ನುತ್ತೇವೆ.ಅಂತಹ ಬಸವನನ್ನು ಜೀವಂತ ಪೂಜಿಸುವ ಹಬ್ಬವೂ ನಮಗಿದೆ.ಬಸವಣ್ಣನನ್ನೂ ನಾವು ಕಡೆಗಣಿಸಿದ ಕಾರಣವನು ಕೊಡುತ್ತಾರೆ.ಬಸವಣ್ಣನನ್ನು  ಸರ್ಕಲ್ ನಲ್ಲಿ ನಿಲ್ಲಿಸಿ,ಬಸವ ಜಯಂತಿಯ  ದಿನ ಒಂದು ಮಾಲೆ ಹಾಕುವ ನಾಟಕೀಯ  ಬೂಟಾಟಿಕೆಯ ಚಿತ್ರವು ಪತ್ರಿಕೆಯಲ್ಲಿ ಬಂದರೆ ಸಾಕು ಎಂಬ ಭವಿಷ್ಯವನ್ನು ಕನವರಿಸುವ ಕುಹಕದವರಿಗೆ  ತಿವಿದಿದ್ದಾರೆ. ಮೀರಿದ ಅಪ್ಯಾಯತೆಯನ್ನು,ಬಲಾಬಲವನ್ನು ,ವೇಗವಾಗಿ ಬಯಸುತ್ತಾರೆ.ಸಹನೆಯಿಲ್ಲದ ಬದುಕಿಗೇನು ಅರ್ಥವಿದೆ.ಬದುಕಿನಲ್ಲಿ ಪ್ರಿಯವಾದದ್ದನ್ನು ಮರೆಯುವುದು,ನಿರ್ಲಕ್ಷಿಸುವುದು,ತಾತ್ಸಾರದಿಂದ ಕಾಣುವುದು ಒಳಿತಲ್ಲ.ಮನುಷ್ಯನಾದವನಿಗೆ ಕೃತಜ್ಞತೆ ಬೇಕು.ಬದುಕಿನ ಗಲಿಬಿಲಿಗೆ ಒಳಗಾಗಿ ನಾಳಿನ ಭರವಸೆಗೆ ಲೇಖಕರು ತಮ್ಮ ಹೊರದೃಷ್ಟಿ ಒಳದೃಷ್ಟಿಗೆ ಲಭಿಸಿದ ಭಾವನೆಯನ್ನು ಅರ್ಪಿಸಿದ್ದಾರೆ. “ಆ ಬಸವಣ್ಣ ಮನೆ ಮಠಗಳಲ್ಲಿ ಬಂಧಿಯಾದ” ಎನ್ನುವ ಬಸವ ಮತ್ತು ಬಸವಣ್ಣ ನವರ ಸಾತ್ವಿಕ ಗುಣಗಳನ್ನು,ಕಠೋರ ಕಹಿ ಸತ್ಯಗಳನ್ನು ಬಿತ್ತರಿಸಿದ್ದಾರೆ.

ಹಾವು…….

ದೇವರೆಂದೆವು

ಮನೆಯಲಿ ಬಂದರೆ

ಕೊಂದು ಬಿಡುವೆವು

ಇಲಿ ದೇವರೆಂದೆವು

ದವಸ ಧಾನ್ಯ ತಿಂದರೆ-

ವಿಷ ಇಡುವೆವು

ಕಲ್ಲು ಮಣ್ಣು ಕಟ್ಟಿಗೆ

ದೇವರಾದವು

ಪಶು ಪಕ್ಷಿ ಜಂತುಗಳೂ-

ದೇವರಾದವು

ಮನುಷ್ಯ……..?

ಕೊನೆಗೂ…..

ಮನುಷ್ಯನಾಗಲಿಲ್ಲ

ಈ ಕವಿತೆಯಲ್ಲಿ,ಕವಿಗೊಂದು  ಭಾವದೆಳೆ ಸಿಕ್ಕಿದೆ.ಮನುಷ್ಯರ ಗುಣಾವಗುಣಗಳ ಬಗ್ಗೆ ಅಸಹನೆಯಿದೆ.ಮನುಷ್ಯನ ಮನದೊಳಗವಿತಿರುವ ಅವಕಾಶವಾದಿತನವನ್ನು,ಸೂರ್ಯನಿಗೆ ಕನ್ನಡಿ ಹಿಡಿದು ತೋರಿಸಿದಂತ ನಿರರ್ಥಕವು ಸಾಬೀತಾಗಿದೆ. “ಪರಹಿತಾರ್ಥಾಯ ಶರೀರಂ ಇದಂ” ಎಂಬ ಮಾತಿನ ಸಾರಂಶವನ್ನು ನಾವೆಲ್ಲರೂ ಮರೆತುಬಿಟ್ಟಿದ್ದೇವೆ.ಹಿಂದಿನ ಕಾಲವಾದರೇನು? ಹೀಗಿನ ಕಾಲವಿದ್ದರೇನು? ಎಲ್ಲಾ ಕಾಲದಲ್ಲೂ  ಮೌಡ್ಯದ  ತವಕ ತಲ್ಲಣಗಳು ಕಾಡುತ್ತಲೇ ಬಂದಿವೆ.ನಾವುಗಳು ಬೆಳಕಿನ ಹಾದಿಯಲ್ಲಿ ಸಾಗಬೇಕಾದರೆ,ಮನಸ್ಸಿನ ಭಾವನೆಯನ್ನು ನಿರ್ಮಲವಾಗಿಟ್ಟುಕೊಂಡೆ ಸಾಗಬೇಕು.ಅಂತಹ ನಿರ್ಮಲ ಭಾವನೆ ನೀಡಿದ ಭಗವಂತನನ್ನು ಮರೆಯುತ್ತೇವೆ ಎಂಬುದು ಲೇಖಕರ ಅಭಿವ್ಯಕ್ತಿ ಎನ್ನಬಹುದು.ಪಶು ಪ್ರಾಣಿ ಪಕ್ಷಿ,ಜೀವ ಸಂಕುಲಕ್ಕೆಲ್ಲಾ ದೇವರು ಎಂದು ಕರೆಯುತ್ತೇವೆ. ಒಂದು ಕಾಗೆ ನೀರಿನ ದಾಹವಾಗಿ ಮನೆ ಮುಂದೆ  ಕೂಗಿದರೆ “ಉಸ್ಸೋ” ಎಂದು ಓಡಿಸುತ್ತೇವೆ.ಯಾವುದೋ ಹಸಿದ ನಾಯಿಯೊಂದು ಅಗಳು ಅನ್ನ ಸಿಗಬಹುದೆಂದು  ಮನೆ ಮುಂದೆ ಬಂದು ನಿಂತರೆ, “ಹಚಾ” ಎಂದು ಕೂಗಿ ಹೊರದೂಡುತ್ತೇವೆ.ಇದು ಅಸಂಸ್ಕ್ರೃತಿ ಮತ್ತು ಸಮಾಜದ ಬದುಕಿನೊಳಗೆ ನಮ್ಮ ಶೂನ್ಯ ಪ್ರಜ್ಞೆಯ ಸಂಗತಿಯನ್ನು ತೆರೆದಿಡುತ್ತದೆ.ಹಳೆಯಕಾಲದ ಜನ ಜೀವನ ಪರಂಪರೆಯಿಂದಿಡಿದು,ಈಗಿನ ನಮ್ಮ ವೈಜ್ಞಾನಿಕ ಯುಗದ ಜೀವಂತಿಕೆಯ ಪರಸ್ಥಿತಿಯನ್ನು,ಎದುರುಗೊಳ್ಳುವ ಅಂಶಗಳು ಕಾಣುತ್ತೇವೆ.ಯಾವುದೇ ಪ್ರಾಣಿಯನ್ನು  ದೇವರೆಂದು ನಂಬಲಿ ಬಿಡಲಿ.,ಅದು ಅವರವರ ಭಾವನೆಗೆ ದಕ್ಕಿದ್ದು.ಮಾನವೀಯತೆಯಿಂದ ದಯೆ ತೋರುವ ಪ್ರಯತ್ನ ಮಾಡಬೇಕಾಗಿದೆ.ಅವಿವೇಕದಿಂದ,ಅಮಾನವೀಯ ನಡೆಯಿಂದ ಒಂದು ಕೀಟವನ್ನಾದರೂ ಹಿಂಸಿಸಬಾರದೆಂಬ ಮುಗ್ಧ ಪ್ರಶ್ನೆಯನ್ನು , ಡಾll ಶಿವಕುಮಾರ ಮಾಲಿ ಪಾಟೀಲರು ಜೀವಂತಿಕೆಯ ಸಂಕೇತದಂತೆ ಕವಿತೆ ರಚಿಸಿದ್ದಾರೆ.

ಮುಕ್ಕಾಗಿ ಹೋಗಿವೆ

ಅರಸರ ಶಾಸನಗಳು

ಅಚ್ಚಳಿಯದೆ

ಉಳಿದಿವೆ

ಶರಣರ ವಚನಗಳು

ಕೋಟೆ ಕಟ್ಟಿ ಮೆರೆದವರ  ವಂಶಗಳು ಇವತ್ತಿಗೆ ಇದ್ದಾವೋ…ಇಲ್ಲವೋ…ಗೊತ್ತಿಲ್ಲ.ಅವತ್ತಿನ ದಿನಮಾನಗಳಲ್ಲಿ ಸಿಂಹಾಸನವೇರಿದ ರಾಜ ಮಹಾರಾಜರುಗಳ ಸ್ವಾರ್ಥಗಳನ್ನು ಕಂಡಾಗ ನಿಜಕ್ಕೂ ಬೇಸರವಾಗುತ್ತದೆ.ಈಗಂತೂ ಖಡ್ಗವಿಡಿದು ಸಮರಗೈಯುವ ರಾಜರುಗಳು ಕಥೆಯೊಳಗಿದ್ದಾರಷ್ಟೆ.ಆದರೆ ಶರಣರ ವಚನಗಳು ಜೀವಂತವಾಗಿದ್ದು ಅಕ್ಷರ ಕಲಿಸಿಕೊಡುತ್ತಿವೆ.ಬುದ್ಧ,ಬಸವ, ಅಲ್ಲಮ, ರನ್ನ,ಪಂಪ,ರಾಘವಾಂಕ,ಗಾಂಧಿ,ಅಂಬೇಡ್ಕರ್,ಕುವೆಂಪು, ಬೇಂದ್ರೆ, ಕಲ್ಬುರ್ಗಿ,ಮತ್ತು ಉಳಿದ ಹಲವಾರು  ದಾರ್ಶನಿಕರ ಅಕ್ಷರಗಳನ್ನು ಸ್ಪರ್ಶಿಸಿದಾಗ,ನಾವುಗಳು ಮತ್ತೆ….ಮತ್ತೆ….ಅನುಭವ ಪೂರ್ಣರಾಗುತ್ತೇವೆ.

ಎಲ್ಲ ಉಟ್ಟು

ಇಲ್ಲೇ ಬಿಟ್ಟು

ಹೋಗುವುದಿದೆ-

ಒಂದು ದಿನ

ಎಲ್ಲಾ ಮಾಯೆಯ

ಬೆನ್ನು ಹತ್ತಿ…..

ಮರೆತೆ ಬಿಟ್ಟಿದೆ-

ಈ ಮನ…..!

ಸರ್ವ ಭ್ರಮೆಯು ಒಂದು ದಿನ ಮೌನವಾಗಬಹುದು.

ಸರ್ವ ಭೋಗವೂ ಒಂದು ದಿನ ನಿರುಮ್ಮಳವಾಗಬಹುದು.

ಹಲವು ದಿಕ್ಕಿನೆಡೆಗೆ ಹೊಯ್ದಾಡುವ ಮನುಷ್ಯನ ಮನಸ್ಸಿನ ಗಮ್ಯತೆಯನ್ನು,ಮಸಣ ಸೇರುವ  ಅನಾಥ ಸ್ಥಿತಿಯ ಬಗೆಗೆ ನಾವೆಲ್ಲ ನಮ್ಮೊಳಗೆ ಬಚ್ಚಿಟ್ಟುಕೊಂಡೇ ಜೀವಿಸುತ್ತಾ ಮಣ್ಣಿನಲಿ  ಮಣ್ಣಾಗಿ  ಸಮಧಾನದ ತಾಣ ಸೇರುವ ತಾತ್ವಿಕ  ಅರಿತರೂ ಸಹ ಗಾಳಿಯ ಜೊತೆ ಗುದ್ದಾಡುವುದು ಬಿಡುವದಿಲ್ಲ ಎನ್ನುವ ಪ್ರಯೋಗವಿದು.ಕಾವ್ಯಕ್ಕೂ,ಕವಿಗೂ ಎಂದೆಂದಿಗೂ ಏಕಾಂತದ ಸಂಬಂಧ.ಇಂಥಹ ಸಾಲುಗಳು ಈ ನೆಲದಲ್ಲಿ ಪ್ರಭಾವಿತಗೊಳ್ಳುತ್ತವೆ. ಆಪ್ತವಾಗಿ ಸೃಜಿಸುವುದು ಒಂದು ಮನಮೋಹಕ ಅನುಭವವೇ ಸರಿ.

ಬಸವನ ಅರಿತರೆ

ಬಹಿರಂಗದ ಭಯವಿಲ್ಲ

ಅಂತರಂಗದಿ ಅಳುಕಿಲ್ಲ

ಸ್ಥಾನಮಾನದ ಹಂಗಿಲ್ಲ

ಅಧಿಕಾರದ ಗುಂಗಿಲ್ಲ

ಮಾನ ಅವಮಾನದ

ಆತಂಕವಿಲ್ಲ

ಬಸವಣ್ಣನ ಅನುಯಾಯಿಗಳು,ಸಂತ ಸೂಫಿ,ಶರಣರು ಅವತ್ತಿನ ದಿನಗಳಲ್ಲಿ ಬಸವನೆಮಗೆ ದೇವರು ಎಂದು ವಚನಕಾರರು ವಿವಿಧ ಮಾದರಿಯಲಿ  ಬರೆದಿದ್ದಾರೆ.

ಬಸವ ತತ್ವವನು ಅರಗಿಸಿಕೊಳ್ಳದ ದುಃಖವೂ ನಮಗಿದೆ. ಆ ಕಾಲದಲ್ಲೂ ಕೂಡ ಶರಣರ ಚಳುವಳಿಯಲ್ಲಿ ರಕ್ತವು ಹೆಪ್ಪುಗಟ್ಟಿತ್ತು ಎಂದು ಅಕ್ಷರ ಲೋಕವು ತನ್ನೆದೆಯನು ತೆರೆದು ತೋರಿಸುತ್ತದೆ.ಬಸವಣ್ಣನ ಆಪ್ತತೆ ಚೆಂದ.ತನಗಾಗಿ ಬೆಳಗಲಿಲ್ಲ.ಮನುಷ್ಯ ಪ್ರೀತಿಯೆಂದರೆ ಬೆಳಕು ಎಂದು ಸಾರಿದ.ಅಜ್ಞಾನದ  ತೆರೆಗಳ ಸರಿದಾತ.,ತೆರೆಯದ ನಯನಗಳನು ತೆರಸಿದಾತ.,ಡಾಂಬಿಕ ಭಾವಗಳಿಗೆ ತಿರುವು ನೀಡಿದಾತ.,ಆಳ ಪಾತಾಳದಲ್ಲಿ ಮಲಗಿದವರನು ಎಬ್ಬಿಸಿದಾತ….‌..ಎನ್ನುವ ಪರಿಯಲ್ಲಿ ಪ್ರತಿ ಜೀವಿಯ ದುಃಖವನು,ವೇದನೆ ಯಾತನೆಯನು,ನೋವಿನ ಗಾಯಗಳನು ಅಳತೆ ಮಾಡಿದಾತನು ನಿಜವಾದ ದೇವರು ಎಂದು ಲೇಖಕರು  ಸ್ಪಷ್ಟವಾಗಿ ಊಹಿಸಿದ್ದಾರೆ.

ನರಕ ಸೃಷ್ಟಿಸಿ-

ಮಕ್ಕಳ,ವಿಧವೆಯರ,

ಕಣ್ಣೀರಾಗಬೇಡ……

ಗೆಳೆಯ…….?

ದಯೆ ಇರಲಿ

ಯಾವ ಧರ್ಮಕ್ಕೂ…

ರಕ್ತವ ಸವರಬೇಡ-

ಗೆಳೆಯಾ……?

ಬಾ ಗೆಳೆಯ ಗಡಿದಾಟಿ

ಮಾನವೀಯತೆ ಮೀಟಿ

ಇದೇ ರೀತಿಯ ಒಂದಲ್ಲ ಒಂದು ನೋವಿನಿಂದ ಹುಟ್ಟಿಕೊಂಡ ಕವಿತೆಗಳು,ಕಾಲದ ಬದುಕು ಛಿದ್ರಗೊಳ್ಳುವ ಕವಿಯ ಆತಂಕಗಳ ಅನುಭವ ಈ ಕೃತಿಯೊಳಗೆ ದಟ್ಟೈಸುತ್ತಾ ಸಾಗುತ್ತದೆ.ಇಡೀ ಸಂಕಲನವು ಅಖಂಡ ಖಂಡಕಾವ್ಯ ಮತ್ತು ನಮ್ಮ ಸುತ್ತಲಿನ ಹಲವು ಲೋಕಾನುಭವಗಳ ಗ್ರಹಿಕೆಯಲ್ಲಿ ರೂಪ ಪಡೆದಿವೆ.

ನಾವೆಲ್ಲಾ ಕೂಡಿ-

ಆಡುತ್ತಿದ್ದ ಗುಡಿ-

ಗುಂಡಾರ,ಮಸೀದಿ…

ಮಂದಿರ

ಮುಂದss ಒಂದು ದಿನ

ನಮ್ಮನ್ನ ಹಿಂಗsss

ಬ್ಯಾರೆ ಮಾಡತಾವು…

ಅಂತssss

ನಮಗss ಗೊತ್ತೇ ಇರಲಿಲ್ಲ

ಈ ಕವಿತೆಯು,ಕೇವಲ ಊಹಾ ಜಗತ್ತಿನಲ್ಲಿ ಮಿಂಚಿ ಮಾಯವಾಗುವುದಲ್ಲ.ಇದು ವಾಸ್ತವ ಜಗದ ರೂಪಕವಾಗಿದೆ.ಇಲ್ಲಿ ಜಾತಿಯ ನೋವುಗಳನ್ನು ಗ್ರಹಿಸಬೇಕು.ಇದು ಬಹು ಸಂಕಟದ ಪ್ರತೀಕ.ಇಲ್ಲಿ ಶೋಷಿತ ಮುಖಗಳನು ನಿರ್ಮಿಸಿದ ಜಾತಿಹೀನರ ನೋವುಗಳೆ ಮತ್ತೆ…..ಮತ್ತೆ….ಘಾಸಿಗೊಳಿಸಿದೆ.ಈ ಕವಿತೆ ಬರೆದ ಲೇಖಕರ ಕವಿತೆಯಲ್ಲವಿದು. ಇದು ಜಾತಿಯ ಚಹರೆಗಳ ಹೊಂದಿದ ಓದುಗರ ಕವಿತೆಯಿದು.ಮನುಷ್ಯ.,ಮನುಷ್ಯನಿಗೆ ಜಾತಿಯ ಭೂತಕ್ಕೆ ಆಹುತಿಯಾಗುವದನ್ನು.,ಅಮಾಷ ಮಾನವ ಶೋಷಿತವನ್ನು.,ಕೀಳು ಜಾತಿಯೆಂದು ಹೆಸರಿಸಿ ದೂರವಿಟ್ಟು ಅವರ ಮೇಲೆ ಹಲ್ಯೆ,ಹತ್ಯೆ,ಸೌಖ್ಯವನ್ನು ಕಸಿದುಕೊಂಡ ವೈಧಿಕಶಾಹಿಗಳ ದರ್ಭಾರವನು ಅರಿವಿಗೆ ಬರುವಂತೆ ಸಂಕೇತಿಸಿದ್ದಾರೆ. “ನಮ್ಮ ಜಾತಿ ಮೇಲು.,ನಿಮ್ಮ ಜಾತಿ ಕೀಳು.,ನಿಮ್ಮ ಜಾತಿ ಏನು ಮಾಡಿದೆ.,ನಮ್ಮ ಜಾತಿ ಏನೆಲ್ಲಾ ನೀಡಿದೆ” ಎಂಬ ವಾಗ್ವಾದಗಳ ಮುಖಾಂತರವೆ ಬಸವಣ್ಣ ನನು ಹಿಡಿದು ಇವತ್ತಿಗೂ ಗುಂಜಾಡುತ್ತಿವೆ. ಅದು ಸಾಲದು ಎಂಬಂತೆ  ಮಠ ಪೀಠಗಳ ಅಧಿಕಾರ ಪಧವಿಗಾಗಿ,ಅನ್ನ ನೀರಿಗಾಗಿ, ಹಣಕ್ಕಾಗಿ,ನೆಲಕ್ಕಾಗಿ ,ಗಾಳಿಗಾಗಿ,ಕೀರ್ತಿಯ ದಾಹಕ್ಕಾಗಿ ಹೃದಯಶೂನ್ಯರು ಬಸವಣ್ಣನನ್ನು ಹೊಣೆ ಮಾಡುತ್ತಾರೆ.ಈ ನೆಲೆಯಲ್ಲಿ ಡಾllಶಿವಕುಮಾರ ಮಾಲಿ ಪಾಟೀಲರು ಜಾತಿ-ವಿಜಾತಿಗಳ ಅಘಾತವನು ವಿಸ್ತಾರಪಡಿಸಿ ಕ್ಷಮಿಸಿಬಿಡು ಬಸವಣ್ಣ ಎನ್ನುವ ಶೀರೋನಾಮೆಯನ್ನು ಕನ್ನಡಿಕರಿಸಿದ್ದಾರೆ.

ಸಮಾಜ ಮತ್ತು ,ಪರಿಸರದ ಕಳಕಳಿಯ ಆರಾಧಕರಾದ ಲೇಖಕರ ಮುಗ್ಧ ಮನಸ್ಥಿತಿಯುಳ್ಳವರಾಗಿದ್ದಾರೆ. ಹೀಗಾಗಿ ಅವರು ತಮ್ಮ ಕಾವ್ಯದಿಂದ  ನಿವೇದಿಸಿಕೊಳ್ಳುವ ಆಶಯ ನಿಷ್ಠೆಯು ತಾತ್ವಿಕ ನಿಲುವು ಪಡೆದದ್ದು ಸತ್ಯ.  ಇಲ್ಲಿನ ಸರಳ ಅಕ್ಷರಗಳು ಈ ನೆಲದ ಆಂತರ್ಯದ ಸಂವೇದನೆಯ ಗುರುತಾಗಿವೆ.ಈ ಸಂಕಲದಲ್ಲಿ  ಕ್ಷಮಿಸಿಬಿಡು ಬಸವಣ್ಣ,ಭೂಮಿಗೆ ಬಿತ್ತಿದ ಬೀಜ,ಮೌನ ಪ್ರತಿಭಟನೆ,ನಮಗೆ ಮಳೆ ಯಾಕೆ ಬೇಕು,ಪರವಾಗಿಲ್ಲ ನಾನೂ ಮತ ಹಾಕುತ್ತೇನೆ,ಒಂದು ಕನಸು ಬಿದ್ದಿತ್ತಾ….?,ನಿನ್ನೊಳಗೆ ನೀನು ತಿಳಿದು ನೋಡಣ್ಣ,ಹಿಂಗಾಗ್ತೀವಿ ಅಂತಾ..ನಮಗೆ ಗೊತ್ತಿರಲಿಲ್ಲ, ಉಗ್ರ ಗೆಳೆಯನಿಗೊಂದು ಪತ್ರ, ಮತ್ತು ಹಲವಾರು ಕವಿತೆಗಳು ಹದದ ಅನುಭವದ ಬಳ್ಳಿ ಹಿಡಿದು,ಸರಳತೆಯನ್ನು ತಾಗಿಸಿಕೊಂಡೇ ಪ್ರತೀಕಗಳ ಸಾಲುಗಳಾಗಿ ಅರಳಿವೆ.

 ಪ್ರಸ್ಥಾಪಿಸುವ ಮನಸ್ಸಾಯಿತು.ಜೀವಂತ ಕವಿತೆಗಳಿವು.

        ಡಾll ಶಿವಕುಮಾರ ಮಾಲಿ ಪಾಟೀಲರು  ತುಂಬ ತಾಳ್ಮೆ ಹಾಗೂ ನೇಯ್ಗೆಯ ಪರಿಪೂರ್ಣತೆಯಿಂದ ಈ ಕೃತಿಯನ್ನು  ನಮ್ಮ ಕೈಗಿತ್ತಿದ್ದಾರೆ.ಕಾವ್ಯವು ಸೀಮಾತೀತವಾದದ್ದು.ಆಕಾಶದಲ್ಲಿ ಹಾರುವ ಗುಣ ಕಾವ್ಯಕ್ಕಿದೆ.ಇಂಥಹ ಹಲವಾರು ಕವಿತೆಗಳೊಂದಿಗೆ ಸೃಜನರಾದ ಡಾll ಶಿವಕುಮಾರ ಮಾಲಿ ಪಾಟೀಲರು  ಇನ್ನೂ ಹಲವಾರು ಪುಸ್ತಕಗಳನು ನೀಡಿ,ಸಾಹಿತ್ಯ ಲೋಕದೊಳಗೆ  ಗುರುತರ ಜವಬ್ದಾರಿ ಪಡೆಯಲಿ ಎಂದು ಬಯಸುವೆ.


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Leave a Reply

Back To Top