ಅಂಕಣ ಸಂಗಾತಿ

ನೆನಪಿನದೋಣಿಯಲಿ

ಅಲಾರಾಂ ಗಡಿಯಾರ 

ಇತ್ತೀಚೆಗೆ ನಾ ನನ್ನ ಕಥೆಯೊಂದರ ಆರಂಭ “ಅಲಾರಂ ಗಡಿಯಾರ ಟ್ರಿಣ್ ಟ್ರಿಣ್ ಎಂದಾಗ” …… ಎಂದಿತ್ತು .ಕೆಲ ಗೆಳೆಯರು ಪ್ರಶ್ನಿಸಿದರು ಏಕೆಂದರೆ ಆ ಕಥೆಯಲ್ಲಿ ಫೇಸ್ ಬುಕ್ ವಾಟ್ಸಾಪ್ ಗಳ ವಿಷಯವೂ ಬರುತ್ತದೆ . ಈ ಯುಗದಲ್ಲೂ ಅಲರಾಂ ಗಡಿಯಾರ ಇಟ್ಟುಕೊಳ್ಳುವವರುಂಟಾ ?  ಎಂದು ಹೌದು ನನಗೂ ಅನಿಸಿತು ಅಲಾರಂ ಅಂದರೆ ಗಡಿಯಾರ ಸೆಟ್ ಮಾಡಿಕೊಳ್ಳಬಹುದು ಅನ್ನುವುದೇ ಮೊದಲು ಮನಸ್ಸಿಗೆ ಬರುವುದು ಬಿಟ್ಟು ಮೊಬೈಲ್ ನೆನಪಿಗೆ ಬರುವುದಿಲ್ಲವಲ್ಲ ಅಂದರೆ ಬಾಲ್ಯದ ನೆನಪುಗಳು ಅಷ್ಟೊಂದು ಮನಸ್ಸಿನೊಳಗೆ ಆಳವಾಗಿ ಹುದುಗಿಕೊಂಡಿರುತ್ತದೆ ಎಂದ ಹಾಗಾಯಿತು.  ಅಲಾರಾಂ ಅಂದರೆ ನಮ್ಮ ಮನೆಯಲ್ಲಿ ಮೊದಲಿದ್ದ ಅಂಗೈಗಿಂತ ಒಂಚೂರು ಅಗಲವಾಗಿದ್ದ ಅಲಾರಮ್ ಗಡಿಯಾರವು ನೆನಪಿಗೆ ಬರುವುದು . ಅದಕ್ಕೆ ತಲೆಯ ಮೇಲೊಂದು ಹಿಡಿ ಬೇರೆ .ಅಲ್ಲದೆ ರೋಮನ್ ಅಂಕೆಗಳಲ್ಲದೆ ಮಾಮೂಲಿ ಇಂಗ್ಲೀಷ್ ಅಂಕಿಗಳಿದ್ದ ಸೆಕೆಂಡಿನ ಮುಳ್ಳು ಇದ್ದ ಪುಟ್ಟ ಮುದ್ದು ಆಕಾರ . ಆಗೆಲ್ಲ ಬಹಳ ಜನರ ಮನೆಯಲ್ಲಿ ಗೋಡೆಗೆ ಹಾಕುವ ದೊಡ್ಡ ಟಣ್ ಟಣ್ ಎಂದು ಪಡೆಯುವ ಗಡಿಯಾರ ಇರುತ್ತಿರಲಿಲ್ಲ .ನಾನು ತೀರಾ ಚಿಕ್ಕವಳಿದ್ದಾಗ  ವಟಾರದ ಕೆಲವು ಮನೆಗಳಲ್ಲಿ ಯಾವ ತರಹದ ಗಡಿಯಾರವೂ ಇರದೆ ಸಮಯ ಬಂದು ಕೇಳುತ್ತಿದ್ದದ್ದು ನೆನಪುಂಟು . ಟೇಬಲ್ ಮೇಲೆ ರೇಡಿಯೋದ ಪಕ್ಕಾ ಇದರ ಸ್ಥಾನ. ಬಾಗಿಲಿಗೆ ಕಾಣುತ್ತಿದ್ದರಿಂದ ಕೆಲವು ಸಾರಿ ಕೇಳುವ ಗೋಜಿಗೂ ಇಲ್ಲದ ಬಾಗಿಲಲ್ಲಿ ಹಣಕಿ ನೋಡಿಕೊಂಡು ಹೋಗುತ್ತಿದ್ದವರೂ ಉಂಟು. 

ಮೊದಲು ಒಂದನೇ ಕ್ಲಾಸ್ಸಿನಲ್ಲಿ ಇದ್ದಾಗ ಸಮಯ ನೋಡುವುದನ್ನು ನನಗೆ  ಅಣ್ಣ ಅಂದರೆ ನಮ್ಮ ತಂದೆ ಕಲಿಸಿದ್ದು ಅಲಾರಂ ಗಡಿಯಾರದಲ್ಲೇ. 

ಸ್ವಲ್ಪ ಸ್ವಲ್ಪ ಹೊತ್ತಿಗೊಮ್ಮೆ ಗಂಟೆ ನಿಮಿಷ ನೋಡಿಕೊಂಡು ಹೋಗಿ ಹೋಗಿ ಅಮ್ಮನಿಗೋ ಅಪ್ಪನಿಗೋ ವರದಿ ಒಪ್ಪಿಸಿ ಗುಡ್  ಎನಿಸಿಕೊಳ್ಳುವ ಬಾಲ್ಯ ಸಹಜ ನಡವಳಿಕೆ ಆಗ. ಹಾಗೆಯೇ ನನ್ನ ತಂಗಿಯರಿಗೂ ಗಡಿಯಾರ ನೋಡುವುದನ್ನು ಆ ಅಲಾರಂ ಗಡಿಯಾರದಲ್ಲಿ ನಾನು ಹೇಳಿಕೊಟ್ಟೆ ಎಂಬ ಹೆಮ್ಮೆ ನನಗೆ.  

ಹೀಗೆ ರೇಡಿಯೋ ಪಕ್ಕದಲ್ಲೇ ಸದಾ ಗಡಿಯಾರ ಇರುತ್ತಿದ್ದರೂ ಶಾಲೆಗೆ ಹೊರಡುವ ತನಕ ಅದನ್ನು ನೋಡಿ ಗಂಟೆ ಹೇಳುವ ಅವಶ್ಯಕತೆಯೇ ಇರುತ್ತಿರಲಿಲ್ಲ.  ಏಕೆಂದರೆ ಬೆಳಿಗ್ಗೆ ಆರಂಭವಾಗುತ್ತಿದ್ದ ರೇಡಿಯೋ ನಿಲ್ಲುತ್ತಿದ್ದಂತೆ ಪ್ರಸಾರ ನಿಂತಾಗ . ಹಾಗಾಗಿ ಕಾರ್ಯಕ್ರಮ ಕೇಳುತ್ತ ಕೇಳುತ್ತಲೇ ಸಮಯ ಗೊತ್ತಾಗಿಬಿಡುತ್ತಿತ್ತು .  ಆದರೆ ನಂತರ ಕಾಲೇಜಿಗೆಲ್ಲಾ ಹೊರಡುವಾಗ ಅದನ್ನು ನೋಡಿಯೇ ಬಸ್ ಸಮಯವನ್ನು ಹೊಂದಿಸಿಕೊಳ್ಳುವ ಕಾರ್ಯಕ್ರಮ . ಇನ್ನೂ ಸಂಜೆಯ ಹೊತ್ತು ರೇಡಿಯೋ ಕೇಳದೆ ಆಟದಲ್ಲಿ ಇರುವಾಗ ಮತ್ತೆ ವಾಪಸ್ ಬರಲು ಸಮಯ 7ಗಂಟೆ ಎಂದು ನಿಗದಿ ಮಾಡಿದ್ದರಿಂದ ಮಧ್ಯೆ ಮಧ್ಯೆ ಹೋಗಿ ಇನ್ನೂ ಎಷ್ಟು ಹೊತ್ತಿಗೆ ಎಂದು ನೋಡುತ್ತಿದ್ದುದು. 

ರೇಡಿಯಂ ಮುಳ್ಳುಗಳು  ರಾತ್ರಿಯ ಹೊತ್ತು ಸಹ ಸಮಯ ಕಾಣಿಸುತ್ತಿತ್ತು . ಆದರೆ ಎಸ್ ಎಸ್ ಎಲ್ ಸಿ ಗೆ ಬರುವತನಕ ಅಲಾರಾಮ್ ಇಟ್ಟುಕೊಂಡು ಓದುವಂತಹ ಕಷ್ಟಜೀವಿ ನಾನಾಗಿರಲಿಲ್ಲ . ಆಗೆಲ್ಲ ಫ್ಯಾನ್ ಸಹಿತ ಇಲ್ಲದಿದ್ದುದರಿಂದ ನಿದ್ರೆ ಬರುವ ತನಕ ಗಡಿಯಾರದ ಟಿಕ್ ಟಿಕ್ ಟಿಕ್ ಟಿಕ್ 1ರೀತಿ ನಿರಂತರ ಸಂಗಾತಿಯಾಗಿತ್ತು . 

ನಾನು ಐದನೆಯ ತರಗತಿಗೆ ಬಂದಾಗ ಅಣ್ಣ ನನಗೆ ಗಡಿಯಾರಕ್ಕೆ ಕೀ ಕೊಡುವ ಕೆಲಸ ಹೇಳಿಕೊಟ್ಟು ಆ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದರು .ಅಲ್ಲದೆ ರೇಡಿಯೋದ ವಾರ್ತೆಗಳು ಬರುವ ಸಮಯದಲ್ಲಿ ರೇಡಿಯೋದ ಸಮಯಕ್ಕೂ ಗಡಿಯಾರದ ಸಮಯಕ್ಕೂ ತಾಳೆನೋಡಿ ಹಿಂದೆಯೋ ಮುಂದೆಯೋ ಇದ್ದರೆ ಸರಿ ಮಾಡುವ ಗುರುತರ ಹೊಣೆಯನ್ನು ನನಗೆ ಹೊರಿಸಿದ್ದರು. ಮುಂದೆ ಎಷ್ಟೋ ವರ್ಷಗಳ ತನಕ ಈ ಕೆಲಸ ಮಾಡಿದ ಗರ್ವ ನನಗೆ. 

ಕಾಲೇಜಿಗೆ ಬಂದಾಗ ಟೈಪಿಂಗ್ ಶಾರ್ಟ್ ಕ್ಲಾಸ್ ಗಳಿಗೆ ಸೇರಿ 6ಗಂಟೆಯ ಮೊದಲನೆಯ ಬ್ಯಾಚಿಗೆ ಹಾಕಿಸಿಕೊಂಡಿತ್ತು ಆಗಂತೂ 5ಗಂಟೆಗೆ ಏಳಲೇಬೇಕಾದ ಪರಿಸ್ಥಿತಿ ಅಮ್ಮನಿಗೆ ತೊಂದರೆ 

ಕೊಡುವುದೇಕೆ ಎಂದು ಆಗಿನಿಂದ ಅಲಾರಾಂ ಇಟ್ಟುಕೊಳ್ಳುತ್ತಲೇ ಬರುತ್ತಿದ್ದೇನೆ . ಅಂದಿನಿಂದ ಇಂದಿನವರೆಗೂ ಈಗಲೂ 1ಪುಟ್ಟ ಅಲರಾಂ ಗಡಿಯಾರ ನನ್ನ ಬಳಿ ಇದೆ ಅದೇ ನನಗೆ ಸಲೀಸು.  ಶಾರ್ಟ ಹಾಂಡ್ ಡಿಕ್ಟೇಷನ್ನುಗಳನ್ನು ಕೊಟ್ಟು ತೆಗೆದುಕೊಂಡು ಅಭ್ಯಾಸ ಮಾಡುವಾಗ ಈ ಅಲರಾಂ ಗಡಿಯಾರ ತುಂಬಾನೇ ಸಹಾಯ ಮಾಡಿತ್ತು. ನನಗೆ ಅದಕ್ಕೆ 1 ರೀತಿಯ ವಿಶೇಷ ಅಕ್ಕರೆ ಈ ಗಡಿಯಾರದ ಮೇಲೆ . 

ಮುಂದೆಲ್ಲ ಕೆಲಸಕ್ಕೆ ಹೋಗುವ ಸಮಯದಲ್ಲಿ ಗಡಿಯಾರದ ಮೇಲೆ ಕಣ್ಣಿಟ್ಟು ಮುಳ್ಳಿನ ಜತೆಗೆ ವೇಗವಾಗಿ ಚಲಿಸುವ ಅನಿವಾರ್ಯತೆಯಲ್ಲಿ ಈ ಪುಟ್ಟ ಗಡಿಯಾರಗಳು ಎಲ್ಲ ಕಡೆಯೂ ಇದ್ದರೆ ವಾಸಿಯೆನಿಸಿತ್ತು ಹಜಾರದಲ್ಲಿ ದೊಡ್ಡದೊಂದು ಗೋಡೆ ಗಡಿಯಾರ ಎಚ್ಚರ ಅಡುಗೆ ಮನೆ ಬೆಡ್ ರೂಮಿನಲ್ಲಿ ಒಂದೊಂದು ಅಲಾರಂ ಸ್ಥಾನ ಪಡೆದುಕೊಂಡಿದ್ದವು. 

ಹೀಗೆ ಇದರ ಅವಶ್ಯಕತೆ ಮನಗಂಡಿದ್ದರಿಂದಲೇ ಒಮ್ಮೆ 1 ಶಾಖೆಯಿಂದ ವರ್ಗವಾಗಿ ಬರುವಾಗ ಅಲ್ಲಿನ ಕೆಲವು ಗೆಳತಿಯರಿಗೆ ಒಂದೊಂದು ಅಲಾರಂ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದೆ.  ಮುಂದೆ ಎಷ್ಟೋ ವರ್ಷಗಳಾದ ನಂತರ ಸಹೋದ್ಯೋಗಿ ಅವರ ಮಗಳೊಂದಿಗೆ ಸಿಕ್ಕಾಗ ನನ್ನನ್ನು ಮಗಳಿಗೆ ಪರಿಚಯಿಸಿದ್ದು “ಅಡುಗೆಮನೆ ಗಡಿಯಾರ ಕೊಟ್ಟ ಆಂಟಿ” ಎಂದು . ಈಗಲೂ ನಾ ಕೊಟ್ಟ ಗಡಿಯಾರವೇ ಅವರ ಅಡಿಗೆ ಮನೆಯಲ್ಲಿ ಇದೆ ಎಂದು ತಿಳಿದು ತುಂಬಾ ಖುಷಿಯಾಯಿತು ಸಾರ್ಥಕ ಉಡುಗೊರೆ ಕೊಟ್ಟ ಭಾವ ಮನದಲ್ಲಿ ಮೂಡಿತ್ತು. 

ಕೆಳಗೆ ಬೀಳಿಸಿ ಗಾಜು ಸೀಳಿ  ಒಡೆದು ಹೋದಾಗೆಲ್ಲಾ ಬೇರೆ ಗಾಜಿನ ಕವಚ ಹಾಕಿಸುವುದು,  ಕೆಟ್ಟ ಗಡಿಯಾರಗಳನ್ನು ರಿಪೇರಿ ಮಾಡಿಸುವುದು ಆಗ ಸರ್ವೇಸಾಮಾನ್ಯ .ಯಾವುದಾದರೂ ಉಪಕರಣ ಕೆಟ್ಟರೆ ಆಚೆಗೆ ಎಸೆದು ಹೊಸದು ಕೊಳ್ಳುವ ಈ ಕಾಲದಲ್ಲಿ ಯಾವುದರ ಬಗ್ಗೆಯೂ ಮೋಹ ಬೆಳೆಸಿಕೊಳ್ಳುವುದಿಲ್ಲ . ಆದರೆ ಅಂದಿನ ಕಾಲಗಳಲ್ಲಿ ತೆಗೆದುಕೊಳ್ಳುವುದೇ ಅಪರೂಪ ವಾಗಿದ್ದಾಗ ತೆಗೆದುಕೊಂಡ ವಸ್ತುಗಳ ಮೇಲೆ ಮನೆಯ ಸದಸ್ಯರಂತೆಯೇ ಪ್ರೀತಿ ವಿಶ್ವಾಸ ಅಕ್ಕರೆ ಮೂಡಿರುತ್ತಿತ್ತು ಅಂತೆಯೇ ನೆನಪಿನ ಭಿತ್ತಿಯಲ್ಲಿ ಸ್ಮರಣಿಕೆಯ ಮೆಲುಕುಗಳೂ ಸಹ.  ಹಾಗಾಗಿಯೇ ಈ ಬರಹ ಮೂಡಿ ಬಂದಿರುವುದು ಅನ್ನಿಸುತ್ತೆ .

ಈಗ ಸಮಯ ನೋಡಲಾಗಲಿ ಅಲಾರಂ ನೀಡಲಾಗಲಿ ಗಡಿಯಾರದ ಸ್ಥಾನವನ್ನು ಮೊಬೈಲ್ ಅಕ್ರಮಿಸಿಕೊಂಡಿದೆ ನೇಪಥ್ಯಕ್ಕೆ ಸರಿದ ಎಷ್ಟೋ ಉಪಕರಣಗಳಲ್ಲಿ ಇದೂ ಒಂದಾಗಿದೆ ಆದರೂ ಅಲಾರಾಂಗೆ ಗಡಿಯಾರವೇ ಸೂಕ್ತ. ತಲೆಯ ಹತ್ತಿರ ಇಟ್ಟುಕೊಳ್ಳಲು ಮೊಬೈಲ್ ತರಂಗಗಳು ಆರೋಗ್ಯಕ್ಕೆ ಹಾನಿಕರ . ಗಡಿಯಾರವನ್ನು ಆದರೆ ಪಕ್ಕದ ಪುಟ್ಟ ಟೇಬಲ್ ಮೇಲೆ ಆರಾಮವಾಗಿ ಇಡಬಹುದು ಅಲ್ವಾ ? ಏಳಕ್ಕೆ ಇಷ್ಟವಿಲ್ಲದೆ ಕಿರಿಕಿರಿ ಎನಿಸಿದರೆ ತಲೆಯ ಮೇಲೆ ಮೊಟಕಲೂ  ಸುಲಭ ಏನಂತೀರಿ? 

ನನ್ನ ಈ ಅಲಾರಂ ಗಡಿಯಾರದ ಬಗ್ಗೆಗಿನ ಮೋಹದಿಂದ ಕೆಲವೊಂದು ಕವನ ಗಝಲ್ ಗಳು ಸಹ ಇದರ ಬಗ್ಗೆ ಬರೆದಿದ್ದೇನೆ ಅದರಲ್ಲಿ ಒಂದೇ 1 ನಿಮಗಾಗಿ.

ಕಾಲನ ರಾಯಭಾರಿ

ಪುಡಿಯಾದ ಕಾಲದವಶೇಷಗಳ  ನಡುವೆ

ಮುಕ್ಕಾಗದಂತೆ ನಿಂತಿಹ ಅಲಾರಾಂ ಗಡಿಯಾರ

ಬಾಲ್ಯದ ನೆನಪುಗಳ ಮುತ್ತಿನ ಹಾರದಲಿ

ಹೊಳೆವಂತ ಪದಕˌನೀ ನನ್ನ ಜೊತೆಗಾರ.

ಸಮಯದ ಅರಿವು ನೀ ಮೂಡಿಸಿದೆ ಅಂದು

ಕಾಲ ಕಾಲಕೆ ಕರ್ತವ್ಯಗಳ ನೆನಪಿಸುತ್ತಾ

ಹೊತ್ತಿಗೆ ಸರಿಯಾಗಿ ಎಚ್ಚರಿಸುವೆ ಇಂದೂ

ನಿನ್ನ ಅಸ್ತಿತ್ವದ ಇರುವು ಪ್ರಕಟಿಸುತ್ತಾ.

ಸಮಯ ಪ್ರವಾಹದಲಿ ಕೊಚ್ಚಿ ಹೋದರೂ ಎಲ್ಲಾ

ಕಾಲನ  ರಾಯಭಾರಿಯಾಗಿ ನೀ ನಿಂತಿರುವೆಯಲ್ಲಾ

ಏನೇ ಉಳಿದಿರಲಿ  ಯಾರೇ ಅಳಿದಿರಲಿ

ನೀನು ಸ್ಛಾವರ ಎಂದು ಪ್ರಚುರ ಪಡಿಸಿಹೆಯಲ್ಲ.

ಸುಜಾತಾ ರವೀಶ್ 

ಇಲ್ಲಿಗೆ ನನ್ನ ಗಡಿಯಾರ ಪುರಾಣ ಮುಗಿಸ್ತಾ ಇದ್ದೀನಿ. ನೀವೂ ನಿಮ್ಮ ಅನುಭವಗಳನ್ನ ಹೇಳುತ್ತೀರಾ ತಾನೆ? 


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top