ಅಂಕಣ ಸಂಗಾತಿ

ಬೀಳುವುದು ಸಹಜ.

ಇಲ್ಲಿಂದ ಮುಂದೆ-

ಇಲ್ಲಿಂದ ಮುಂದೆ-

ಯಾಕಾಯ್ತೋ ಗೊತ್ತಿಲ್ಲ ಒಟ್ಟಾರೆ ನಾನು ಯಾವುದಕ್ಕೆ ತಯಾರಿರಲಿಲ್ಲವೋ ಅದು ಆಗಿ ಹೋಗಿತ್ತು. ಡಾಕ್ಟರ್ ಮಾತುಕತೆ ಇವರ ಜೊತೆ ಮುಗಿದಿತ್ತು ಮುಂದಿನ ಟ್ರಿಟ್ಮೆಂಟ್ ಕುರಿತು ಇವರಿಗೆ ಸವಿವರವಾಗಿ ಎಲ್ಲ ಹೇಳಿಯಾಗಿತ್ತು.

  ‌ ಡಾಕ್ಟರ್ ನರ್ಸ್ ಗೆ ಒಂದಿಷ್ಟು ಇನ್ಟ್ಸ್ರಕ್ಷನ್ ಕೊಟ್ಟರು. ನಾನು ಸಿಸ್ಟರ್ ನಾ ಹತ್ತಿರ ಕರೆದು ನಾ ವಾಷ್ ರೂಮ್ ಹೋಗ್ಬೇಕು ಅಂದೆ. ಅವರು ಆಯಾ ಆಂಟಿ ಬೆಡ್ ಪ್ಯಾನ್ ತಗೋಬನ್ನಿ ಅಂತಾ ಕೂಗಿ ಹೊರ‌ಹೋದ್ರು. ಆಯಾ ಅಂಟಿ ಒಂದು ಸ್ಟೀಲ್ ಬೆಡ್ ಪ್ಯಾನ್ ಹಿಡಿದು ಬಂದ್ರು. ಅಯ್ಯೋ ದೇವ್ರೆ ಇದೇನಪ್ಪಾ ಅಂದುಕೊಂಡೆ .

ತುಸು ಪ್ರೀತಿಯಿಂದ ಆಂಟಿ ನಾನು ವಾಷ್ ರೂಮ್ ಗೆ ಹೋಗ್ತಿನಿ ನಮಗೆ ಇದೆಲ್ಲ ಸರಿ ಹೋಗಲ್ಲ ಅಂದೆ ಆ ಯಮ್ಮ ಎರಡ ನಿಮಿಷ ಆಚೆ ಹೋಗಿ ಈಚೆ ಬಂದು ಇಲ್ಲ ನೀವಿನ್ನು ಕೆಳಗಿಳಿಬಾರದಂತೆ ಬೇಗ ಬೇಗ ಮುಗಿಸ್ಕೊಳ್ಳಿ ಅಂದ್ರು..

    ಬೆಳಿಗ್ಗೆ ಏಳ್ನೀರ ಬೆರೆ ಕುಡದ ಬಿಟ್ಟಿದ್ದೆ ಇದೊಳ್ಳೆ ಫಜೀತಿ ಆಯ್ತಲ್ಲಪ್ಪಾ ಅನಿಸ್ತು .. ಸರಿ ಅಂಟಿ ಏನೇನೊ ಮಾಡಿ ಬೆಡ್ ಪ್ಯಾನ್ ನನ್ನ ಕೆಳಗಿಟ್ರು ಆದರಿದು ಅನ್ನ್ಯಾಚುರಲ್ ನನಗೆ ಅವಸರ ಇದ್ದದ್ದು ನ್ಯಾಚುರಲ್ ಕಾಲ್. ಅಂಟಿಗೆ ಹೇಳಿದೆ ತೆಗೆದ ಬಿಡಿ ಸರಿ ಹೋಗಲ್ಲಾ ಅಂತಾ ಆಂಟಿ ಮತ್ತೆ ಡಾಕ್ಟರ್ ಹತ್ರ ಓಡಿದ್ರು ಬಂದು ಹೇಳಿದ್ರು ಕಾಲು ಕೇಳಗಿಡೊಕೆ ಬಿಡ್ಬಾರ್ದಂತೆ ಇದ್ರಲ್ಲೆ ಮಾಡಿ ನಾ ಕಾಯ್ತಿನಿ ಅಂತು ಪಾಪ ಅಂಟಿ .. ಏನಾದ್ರು ಹೇಳಿ ಕೊಡಿ ಅಂದೆ. ಆ ಯಮ್ಮ ನನ್ನ ಮೊಕ ನೋಡ್ತು ಹೇಳಿಕೊಡೊಕೆನಿರುತ್ತೆ ಘಟ್ಟದ ಕನ್ನಡದಲ್ಲಿ ಒಂದಿಷ್ಟು ಮಾತಾಡಿದ್ರು, ಅಂತು ಅಖಂಡ ಹದಿನೈದು ನಿಮಿಷದ ನಂತರ ಈ ಪ್ರಹಸನ ಮುಗೀತು. ನನಗೆ ನಾಚಿಕೆ ಆಗೋಕೆ ಶುರುವಾಯ್ತು.

     ಮತ್ತೆ ಹತ್ತ ನಿಮಿಷದ ನಂತ್ರ ಸಿಸ್ಟರ್ ಬಂದ್ರು ಇಬ್ರು ಅದೆ ಅವಾಗ್ಲೆ ಹೇಳಿದೆನಲ್ಲ ನಮ್ಮ ಜ್ಯೋತಿ ಸಿದ್ಧಿ ತರ ಇದ್ರು ಅಂತಾ ಅವರೊಬ್ರು ಮತ್ತೊಬ್ಬರು. ಬ್ಯಾಂಡೇಜು, ಕಾಟನ್ನು ತಂದಿಟ್ರು ಜೊತೆಗೆ ಒಂದು ಸ್ಟೀಲಿನ ಬೆಸನ್ಬುಟ್ಟಿಲಿ ಬಿಸಿ ಬಿಸಿನೀರು.. ಬಿಸಿ‌ನೀರ ನೋಡಿದ್ದೆ ಮನಸಲ್ಲೆ ಅಂದುಕೊಂಡೆ ಆಹಾ ಎಷ್ಟ ಒಳ್ಳೆ ಜನ ಸ್ಪಾಂಜ್ ನಾ ಬಿಸಿನೀರಲ್ಲಿ ಅದ್ದಿ ನನ್ನ ಕಾಲೆಲ್ಲ ಒರೆಸಿ ಆಮೇಲೆ ಬ್ಯಾಂಡೇಜ್ ಹಾಕ್ತಾರೇನೊ ಅಂದುಕೊಂಡೆ. ಪಾರ್ಲರ್ ಲಿ ಕ್ಲೀಂಸಿಂಗ್,ಸ್ಕ್ರಬ್,ಫೇಸಿಯಲ್ ಸ್ಕ್ರೀಮ್ ಪ್ರತಿ ಸಲ ಒಂದೊಂದು ಅಪ್ಲೈ ಮಾಡಿದಾಗಲೂ ಸ್ಪಾಂಜ್ ಇಂದಾ ಮೊಖಾ ಒರಸ್ತಾರೆ ಪಾರ್ಲರ್ ಅಂಟಿ ತರ ಇವರು ಕಾಲೊರಸ್ತಾರೆ ಅಂತೆಲ್ಲ ಕಾನಸ ಕಾಣ್ತಿದ್ದೆ ಡಾಕ್ಟರ್ ಬಂದ್ರು ಅಂಗಾಲಿಗೆ ಮೊದ್ಲು ಒಂದಿಷ್ಟು ಅಳ್ಳೆನಾ ಇಟ್ಟಂಗಿ ತರ ಮಡಚಿ ಇಟ್ಕೊಂಡ್ರು. ಇಬ್ರು ರೂಮ್ ಬಾಯ್ ಬಂದ್ರು ಅವರಿಬ್ರು ನನ್ನ ಕಾಲನ್ನ ಗಟ್ಟಿ ಹಿಡಕೊಂಡ್ರು ಒಬ್ರು ಮೀನಗಂಡದ ಹತ್ರ ಹಿಡಿದು ಕಾಲು ಸ್ಟ್ರೆಟ್ ಮಾಡ್ಸಿದ್ರು(ಯಮ ಯಾತನೆ, ಬೇಕಿದ್ರೆ ಬ್ರಾಕೆಟಲ್ಲಿ ಅಮ್ಮಾ ಅಯ್ಯೋ ಸೇರಿಸ್ಕೊಳ್ಳಿ) ಮತ್ತೊಬ್ಬರು ನನ್ನ ಪಾದವನ್ನ ೯೦° ಲಿ ಹಿಡದ ನಿಂತ್ರು ನನಗೊ ಜೀವ ಬಾಯಿಗೆ ಬರೋದೊಂದು ಬಾಕಿ .. ಡಾಕ್ಟರು ಅರಳೆ ಇಟ್ಟಂಗಿನಾ ಅಂಗಾಲಿಗೆ ಬೆಡ್ ತರ ಇಟ್ರು ಒಂದಿಷ್ಟು ಬ್ಯಾಂಡೇಜನ್ನ ಸುತ್ತತಾ ಸುತ್ತತಾ ಫ್ರ್ಯಾಕ್ಚರ್ ಆದ ಜಾಗದಲ್ಲಿ ಹೆಬ್ಬರಳಿಂದ ಅದುಮಿ ಹಿಡಿದು ಬ್ಯಾಂಡೇಜ್ ಬಿಗಿ ಮಾಡ್ತಾ ಬಂದ್ರು ಅದರ ನಂತ್ರ ಸಿಸ್ಟರ್ ಒಂದು ಪುಡಿ ಹಾರತಿದ್ದ ಬ್ಯಾಂಡೇಜನ್ನ ನನ್ನ ಪಕ್ಕದ ಬೆಡ್ ಮೇಲಿಟ್ರು ಡಾಕ್ಟರ್ ಬಳಿಯಿದ್ದ ರೂಮ್ ಬಾಯ್ ನನ್ನ ಮೀನಗಂಡದಿಂದ ಅಂಗಾಲಿನ ಅಳತೆ ತಗೊಂಡು ಅವರಿಗೆ ಮೇಜರಮೆಂಟ್ ಕೊಟ್ಟರು. ಅದೆ ಅಳತೆಗೆ ಇಡೀ ಪುಡಿಹಾರೋ ಬ್ಯಾಂಡೇಜನ್ನ ಡಾಕ್ಟರ್ ಉದ್ದಗೆ ಹಾಸಿ ಮಗು ಮಲಗಸೋಕೆ ದುಪಟಿ ಹಾಸಿದಂಗೆ ಹಾಸಿ ಅದರ ಮೇಲೆ ಒಂದರ ಮೇಲೊಂದು ಪದರ ಪದರ ಹೊರಳಿಸಿ ಹಾಕ್ತಾ ಬಂದ್ರು ಆ ಪ್ಯಾಕ್ ಪೂರ್ತಿ ಖಾಲಿ ಆಯ್ತು ಮತ್ತೊಂದು ತಂಗೊಂಡ್ರು ಅದರ ಮೇಲೆ ಮತ್ತೆ ಹಾಕ್ತಾ ಹೋದ್ರು. ಅದು ಖಾಲಿ.

ಈಗ ಅದನ್ನ ನನ್ನ ಕಾಲಿನ ಕೆಳಗಿಟ್ರು ಮೀನಗಂಡದಿಂದ ಅಂಗಾಲಿನ ತನಕ ಆ ಬಿಸಿನೀರಿನ ಬುಟ್ಟಿಯಿಂದ ಕೈ ತೋಯಿಸಿಕೊಂಡು ಈ ಬ್ಯಾಂಡೇಜ್ ಅದುಮಿ ಹಿಡಿದು ನಾರ್ಮಲ್ ಬ್ಯಾಂಡೇಜ್ ಕ್ಲಾತ್ ಸುತ್ತತಾ ಕೈಗೆ ಮತ್ತೆ ಮತ್ತೆ ನೀರು ಚಿಮುಕಿಸಿಕೊಂಡು ಒತ್ತಿಒತ್ತಿ ಬ್ಯಾಂಡೇಜ್ ಮಾಡಿದ್ರು ಅದೆ ಬೇಸನ್ ಬುಟ್ಟಿಲಿದ್ದ ಬಿಸಿನೀರದು. ನಂಗೇನು ಅರ್ಥ ಆಗ್ಲಿಲ್ಲ. ನಾನು ಆ ಪ್ರಾಸೆಸ್ ನಾ ಎಡಬಿಡದೆ ನೋಡೊದು ಕಂಡು ಆಗಾಗ ಡಾಕ್ಟರ್ ಮಾತಾಡಸ್ತಿದ್ರು ಯಾವ ಗಾಡಿ ನಿಮ್ದು,? ಗಾಡಿ ತಗೊಂಡ ಬೆಳಬೆಳಗ್ಗೆ ಎಲ್ಲಿಗೆ ಹೊರಟಿದ್ರಿ? ಏನ ಕೆಲ್ಸ ಮಾಡೋದು? ಯಾವುರಲ್ಲಿ? ಓಹ್ ಹಾನಗಲ್ಲಾ ಅಲ್ಲಿ ಮಕ್ಕಳ ಡಾಕ್ಟರ್ ಇದಾರಲ್ಲ ಸಂಗೂರಮಠ ಅಂತಾ ಗೊತ್ತಾ.. !? ಇತ್ಯಾದಿ ಅಂತು ಹಂಗು ಹೀಂಗೂ ಮಾತಾಡಸ್ತಾ ತಮ್ಮ ಕೆಲಸ ಮುಗಿಸಿಕೊಂಡಿದ್ರು- ನಮಗ್ಗೊತ್ತಿಲ್ವಾ ರೈಲ್ವೇ ಸ್ಟೆಷನ್ ವೇಟಿಂಗ್ ರೂಮ್ಲಿ ದೊಡ್ಡ ದೊಡ್ಡ ಟಿವಿ ಯಾಕಾಹಾಕಿರ್ತಾರೆ ಅಂತಾ. ಅವರೇನೆ ಮಾತಾಡ್ಸಿದ್ರು ನನ್ನ ಲಕ್ಷ್ಯ ನನ್ನ ಆಪ್ತ ನೋವಿನ ಕಡೆಗೆ ಇತ್ತು.

   ಸರಿ ಐದು ದಿನ ಬಿಟ್ಟು ಬಂದು ಬ್ಯಾಂಡೇಜ್ ಚೇಂಜ್ ಮಾಡಿಕೊಂಡು ಹೋಗಿ ಕಾಲನ್ನ ಯಾವ ಕಾರಣಕ್ಕು ನೆಲಕ್ಕಿಡೊ ಹಾಗಿಲ್ಲ ಅಂದ್ರು.

   ಬಿಲ್ ಕಟ್ಟೋರು ಕಟ್ಟಿಬಂದ್ರು ನಾವು ಮಲಗಿದಲ್ಲಿಂದಲೇ ದೂಡೊಗಾಡಿಲಿ ಕಾರ್ ಬಾಗಿಲಿಗೆ ಬಂದ್ವು ಅಲ್ಲಿಂದ ಕಾರಲ್ಲಿ ಕಾಲೆತ್ತಿ‌ ಇಡಬೇಕು ಕಾಲೆತ್ತೋಕೆ ಪ್ರಯತ್ನಿಸಿದ್ರೆ ಉಹುಂ ಸಾಧ್ಯವೇ ಇಲ್ಲ ಕಾಲು ಆನೆಕಾಲಿನ‌ತೂಕ ಬಂದ್ಬಿಟ್ಟಿತ್ತು ಬ್ಯಾಂಡೇಜೇನೊ ಮೊಲದ ಬಣ್ಣ ಆದರೆ ಗಜಭಾರ ಒಂದೂ ಅರ್ಥ ಆಗ್ಲಿಲ್ಲ. ಹಿಂದಿನ ಪೂರ್ತಿ ಸೀಟಲ್ಲಿ ನನ್ನ ಮಲಗಿಸಿ ಅದರೊಳಗೆ ಸುಜಾತಕ್ಕ ಜಾಗ ಮಾಡ್ಕೊಂಡು ಕೂತ್ರು. ಪಯಣ ಶುರು, ಮೊದಲು ಹಸಿವಾಗಿದೆ  ಯಾವ್ದಾರ ಹೋಟೆಲ್ಲಿಗೆ ಹೋಗಣ ಅಂದೆ. ಬೃಂದಾವನ ಹೊಟೆಲ್ ಲಿ ಅವರೆಲ್ಲ ಇಳದೋಗಿ ತಿಂದಬಂದ್ರು ನಾ ಅಲ್ಲೆ ಕಾರಲ್ಲೆ ಸಿಂಗಲ್ ಪೂರಿ ಸಿಂಗಲ್ ಕಟ್ಲೆಟ್ಟು ಹೊಡೆದದ್ದಾಯ್ತು ಕಡೆಗೆ ಮೇಷ್ಟ್ರಪ್ಲ ಒಂದು ಆರೆಂಜ್ ಜ್ಯುಸ್ ಹಿಡ್ಕೊಂಬಂದ್ರು ನಾ ಜಪ್ಪಯ್ಯ ಅಂದ್ರು ಕುಡಿಲಿಲ್ಲ ನನ್ನ ತಲೆಲಿ ಆ ಬೆಡ್ ಪ್ಯಾನ್ ಮತ್ತೆ ಆಯಾ ಆಂಟಿ ಅನ್ ನ್ಯಾಚುರಲ್ ಕಾಲ್ ಭಯ ಬೀಳಿಸಿತ್ತು.

      ನನಗೆ ಸಿ ಸೆಕ್ಷನ್ ಆದಾಗ ಸಹ ನನಗೆ ಯುರಿನ್ ಪೈಪ್ ಹಾಕಿದ್ದು ಗೊತ್ತಾದ ತಕ್ಷಣ ಸಿಸ್ಟರ್ ನ ಕರೆದು ಅದೆನದು ತೆಗೆದ ಬಿಡ್ರಿ ಎಷ್ಟಾದ್ರು ಕಷ್ಟಾ ಆಗ್ಲಿ ನಾ ಬಾತ್ ರೂಮ್ ಗೆ ಹೋಗ್ತಿನಿ ಅಂತಾ ಹಠ ಮಾಡಿ ತೆಗೆಸಿ ಬಿಟ್ಟಿದ್ದೆ. ಅಸಲು ಅದನ್ನ ಹಾಕಿ ಒಂದುವರೆ ದಿನಕ್ಕೆ ನನಗ್ಗೊತ್ತಾಗಿದ್ದು. ಓಟಿ ಲಿ ಹಾಕಿ ಕಳಸಿದಾರೆ ಆಗ ನನಗೆ ಅನಸ್ತೆಷಿಯಾ ಇಫೆಕ್ಟ್ ಇಂದ ಅದು ನನ್ನ ಅರಿವಿಗೆ ಬಂದಿಲ್ಲಾ ಅನ್ನೋದು ತಿಳಿದು ಕಂಗಾಲಾಗಿ ಹೋಗಿದ್ದೆ ಅದೆಲ್ಲ ಕಾರಲ್ಲಿ ಕುಳಿತಾಗ ನೆನಪಾಗ್ತಾ ಇತ್ತು.


(ಮುಂದುವರೆಯುತ್ತೆ..)

ದೀಪಾ ಗೋನಾಳ

ಕವಯಿತ್ರಿ-
ತಂತಿ ತಂತಿಗೆ ತಾಗಿ ಪ್ರಕಟಿತ ಸಂಕಲನ
ಅಂಚೆ ಇಲಾಖೆಯಲ್ಲಿ ಕರ್ತವ್ಯ.
ಊರು‌ಕೇರಿ-ಹಾನಗಲ್ – ಹಾವೇರಿ

Leave a Reply

Back To Top