ಅಂಕಣ ಸಂಗಾತಿ
ನೆನಪಿನದೋಣಿಯಲಿ
ನೆತ್ತಿಯಲಿ ಉ0ಬುವುದು ಸುತ್ತಲೂ ಸುರಿಸುವುದು
ಎತ್ತಿದರೆ ಎರಡು ಹೋಳಹದು
ಕವಿಗಳಿದಕುತ್ತರವ ಪೇಳಿ ಸರ್ವಜ್ಞ
ನಿಮಗೆಲ್ಲಾ ಖಂಡಿತ ಗೊತ್ತಾಗಿದೆ ಅನ್ಕೋತೀನಿ. ಕರೆಕ್ಟ್ ಅದೇ ರೀ ನಮ್ಮ ಬೀಸುವಕಲ್ಲು!
ಈಗಿನ ಮಕ್ಕಳಿಗೆ ಒಗಟಿಗೆ ಉತ್ತರ ಇರಲಿ ಬೀಸುವ ಕಲ್ಲುಅಂದರೆ ಏನೂ ಅಂತಲೇ ಗೊತ್ತಿಲ್ಲ .
ಮಾನವ ಶಿಲಾಯುಗ ಬಿಟ್ಟು ಕೃಷಿ ನೆಚ್ಚಿಕೊಂಡು ಧಾನ್ಯ ಬೆಳೆಯುವಾಗ ಕೆಲವೊಂದು ಧಾನ್ಯಗಳನ್ನು ಹಾಗೆೇ ಬೇಯಿಸಲಾಗದು .ಪುಡಿ ಅಥವಾ ತರಿ ಮಾಡಿಕೊಂಡು ಬೇರೆ ರೂಪದಲ್ಲಿ ತಿನ್ನಬೇಕು ಅಂದು ಕೊಂಡಾಗ ಇದು ಹುಟ್ಟಿದ್ದು ಅನ್ಸತ್ತೆ . ನಮ್ಮ ಕರ್ನಾಟಕದಲ್ಲೂ ರಾಗಿ ಜೋಳ ನವಣೆ ಇದನ್ನೆಲ್ಲ ತರಿ ಅಥವಾ ಹಿಟ್ಟಿನ ರೂಪದಲ್ಲೇ ಬಳಸೋದು ಅಲ್ವಾ? ಹಾಗಾಗಿ ಬೀಸುವಕಲ್ಲು ಮನೆಯ ಪಾಕ ವ್ಯವಸ್ಥೆಯ ಮೂಲಭೂತ ಅಗತ್ಯತೆಯಾಗಿತ್ತು. ರೊಟ್ಟಿ ಗಾಗಲೀ ಮುದ್ದೆಗಾಗಲಿ ಬೇಕೇ ಬೇಕಾದ ಹಿಟ್ಟನ್ನು ಮನೆಯಲ್ಲೇ ಬೀಸಿಕೊಳ್ಳುವ ಅನಿವಾರ್ಯತೆಯೂ ಇತ್ತು . ಪ್ರತಿ ಮನೆಯಲ್ಲಿಯೂ ಸಾಮಾನ್ಯವಾಗಿ ಬೀಸುವಕಲ್ಲು ಇದ್ದೇ ಇರುತ್ತಿತ್ತು . ಹತ್ತೊಂಬತ್ತನೆಯ ಶತಮಾನದ ಕೈಗಾರಿಕಾ ಕ್ರಾಂತಿಯ ಬಳಿಕ ಎಲ್ಲದಕ್ಕೂ ಯಂತ್ರಗಳ ಆವಿಷ್ಕಾರವಾಗಿ ಹಿಟ್ಟು ನುಣ್ಣಗೆ ಪುಡಿ ಮಾಡಲು ಯಂತ್ರಗಳು ಬಂದವು . ಫ್ಲೋರ್ ಮಿಲ್ ಗಳು ಸಹ ತಲೆಯೆತ್ತಿದವು .ಅಲ್ಲಿಂದ ಬೀಸುವಕಲ್ಲಿನ ರಾಜ್ಯಭಾರದ ಅವನತಿ ಆರಂಭವಾಯಿತು.
ದಿನವಿಡೀ ಬೇರೆ ಕೆಲಸಗಳಿಗೆ ಬೇಕಾದರೆ ಮನೆಯ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಅಥವಾ ತಡರಾತ್ರಿಯಲ್ಲಿ ಈ ಬೀಸುವ ಕೆಲಸ ಮುಗಿಸಬೇಕಿತ್ತು . ಹೆಚ್ಚಾಗಿ ನಸುಕಿನಲ್ಲಿಯೇ ಬೀಸುವ ಕೆಲಸ ಸುನಾಯಾಸ. ಬೀಸುವ ಕೆಲಸದ ಜತೆಗೆ ಗುನುಗುವ ಪದ್ಯಗಳು ಬೆಳಗಿನ ಸುಪ್ರಭಾತ ಹಾಡುತ್ತಿದ್ದವು. ಹೀಗೆ ಸಂಚಯವಾದ ಈ ರೀತಿಯ ಜನಪದ ಸಾಹಿತ್ಯಕ್ಕೆ “ಬೀಸುವ ಕಲ್ಲಿನ ಪದಗಳು” ಅಂತಲೇ ಹೆಸರು. ಕನ್ನಡದ ಜಾನಪದ ಸಿರಿ ಗೆ ಒಂದು ಗರಿ ಈ ತೆರನ ಸಾಹಿತ್ಯಪ್ರಕಾರ. ಬಾಯಿಂದ ಬಾಯಿಗೆ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಈ ವಾಂಜ್ಞ್ಮಯವೂ ಬೀಸುವ ಕಲ್ಲಿನಂತೆ ಮೂಲೆಗೆ ಸರಿಯದ ಹಾಗೇ ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ .
ಈಗ ಬೀಸುವಕಲ್ಲು ಅಂದರೆ ಹೇಗಿರುತ್ತೆ ತಿಳಿಯೋಣ ಬನ್ನಿ. ಎರಡು ಕಲ್ಲಿನ ವೃತ್ತಗಳಿರುತ್ತವೆ . ಮೇಲಿನ ಕಲ್ಲಿನ ವೃತ್ತಕ್ಕೆ ಒಂದು ಮರದ ಗೂಟವಿರುತ್ತದೆ ಕೆಳಗಿನ ಕಲ್ಲಿನ ಮಧ್ಯೆ ಒಂದು ಕಬ್ಬಿಣದ ಮೊಳೆ ಇರುತ್ತದೆ. ಕೆಲವೊಮ್ಮೆ ಇಲ್ಲೂ ಮರದ ಗೂಟವೇ ಇರಬಹುದು. ಇದರ ಮೇಲೆ ವೃತ್ತಾಕಾರದ ಮೇಲಿನ ಕಲ್ಲನ್ನು ಸರಿಯಾಗಿ ಕೂಡಿಸಬೇಕು. ಮೇಲಿನ ಕಲ್ಲಿನ ಮಧ್ಯೆ ಬಾಯಿ ಅಥವಾ ರಂಧ್ರವಿದ್ದು ಅದರೊಳಗೆ ಬೀಸಬೇಕಾದ ಧಾನ್ಯವನ್ನು ಹಾಕಬೇಕು. ಮೇಲಿನ ಕಲ್ಲಿನ ಮರದ ಗೂಟ ಹಿಡಿದು ತಿರುಗಿಸುವಾಗ ಧಾನ್ಯಗಳು ಎರಡು ಕಲ್ಲುಗಳ ಮಧ್ಯೆ ಬಂದು ನುರಿಯುತ್ತಾ ಪುಡಿಯಾಗಿ ಸುತ್ತ ಸುರಿಯುತ್ತದೆ. ಒಂದು ಕೈನಲ್ಲಿ ಗೂಟ ತಿರುಗಿಸುತ್ತಾ ಇನ್ನೊಂದು ಕೈನ ಮುಷ್ಟಿಯಲ್ಲಿ ಧಾನ್ಯ ಹಾಕುತ್ತಿರಬೇಕು.
ಮೊದಲಿಗೆ ಗೋಣಿ ಚೀಲ ಹಾಸಿ ಅದರ ಮೇಲೆ ಹಳೆಯದೊಂದು ಬೆಡ್ಶೀಟ್ ಹಾಕಿ ಅದಕ್ಕೂ ಮೇಲೆ ಶುಭ್ರ ಬಿಳಿಯ ಪಂಚೆ ಹಾಸುತ್ತಿದ್ದುದು ವಾಡಿಕೆ. ಮಧ್ಯದಲ್ಲಿ ಬೀಸುವಕಲ್ಲು ಪಕ್ಕದಲ್ಲಿ ಧಾನ್ಯಗಳ ಕುಕ್ಕೆ ಹಿಟ್ಟು . ಸಂಗ್ರಹಿಸಲು ಇನ್ನೊಂದು ಪಾತ್ರೆಯನ್ನು ಜೋಡಿಸಿಟ್ಟುಕೊಂಡು ಬೀಸುವ ಕೆಲಸ ಶುರು .ಒಮ್ಮೊಮ್ಮೆ ಒಬ್ಬರೇ ಕೆಲವೊಮ್ಮೆ ಇಬ್ಬರು ಕೂತು ಬೀಸುವುದು. ಏಕತಾನತೆಯ ಈ ದೈನಂದಿನ ಕೆಲಸಕ್ಕೆ ವೈವಿಧ್ಯತೆ ತುಂಬಲು ನಮ್ಮ ಹೆಂಗಸರು ಕಂಡುಕೊಂಡ ಮಾರ್ಗವೆಂದರೆ ಪದ ಹಾಡುವುದು. ಪ್ರಸಿದ್ಧ “ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ” ಈ ಹಾಡನ್ನು ಕೇಳದವರ್ಯಾರು?
ಈಚೆಗೆ ನಾಲ್ಕನೆಯ ಕ್ಲಾಸಿನ ಕನ್ನಡ ಪಠ್ಯಪುಸ್ತಕದಲ್ಲಿ “ಬೀಸುವ ಕಲ್ಲಿನ ಹಾಡು” ಸೇರ್ಪಡೆಯಾಗಿರುವುದು ಸಂತಸದ ವಿಷಯ. ಬೀಸುವಕಲ್ಲಿನ ವರ್ಣನೆ ಅದರ ಮೂಲಕವೇ ಮಾಡಿದರೆ ಚೆನ್ನ ಎಂದು ಇಲ್ಲಿ ಪ್ರಸ್ತಾಪಿಸಿದ್ದೇನೆ
ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆ ಬೆಲ್ಲದಾರತಿಯ ಬೆಳಗೇನು
ಪ್ರತಿಯೊಂದರಲ್ಲೂ ದೈವೀಕತೆಯನ್ನು ಕಾಣುತ್ತಿದ್ದ ನಮ್ಮ ಜಾನಪದರು ತಮ್ಮ ಕೆಲಸ ಬೇಗನೆ ಮಾಡಿ ಕೊಟ್ಟರೆ ನಿನಗೆ ಬೆಲ್ಲದಾರತಿ ಎಂದು ಬೀಸುವ ಕಲ್ಲಿಗೆ ಆಮಿಷ ತೋರಿಸುತ್ತಾರೆ .
ಬೀಸುವ ಕಲ್ಲಿನ ರಚನೆ ಹಾಡುವ ಈ ಪದ ನೋಡಿ
ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು ಚಂದ್ರಮತಿಯೆಂಬೋ ಹಿಡಿಗೂಟ ಹಿಡಕೊಂಡು ತಂದೆತಾಯಿಗಳ ನೆನೆದೇನ
ಅಡಿಗಲ್ಲು ಮೇಲುಗಲ್ಲು ಹಿಡಿ ಕೂಟಗಳನ್ನು ವರ್ಣಿಸಿ ಹಳ್ಳಿಯ ಹೆಣ್ಣು ತನ್ನ ತಂದೆ ತಾಯಿ ತವರನ್ನು ನೆನೆದು ಹಾಡುತ್ತಾಳೆ. ಇಲ್ಲಿ ಚಂದ್ರಮತಿ ಎಂದರೆ ಹರಿಶ್ಚಂದ್ರನ ಹೆಂಡತಿ. ಎಷ್ಟೇ ಕಷ್ಟ ಬಂದರೂ ತನ್ನ ಗಂಡನನ್ನು ಬಿಟ್ಟು ಕೊಡದೆ ಪಾತಿವ್ರತ್ಯವನ್ನು ಮೆರೆದವಳು. ಅಂತಹವಳ ಹೆಸರು ತೆಗೆದು ತಾವು ಅವರಂತಾಗುವ ಪ್ರಯತ್ನ ನಮ್ಮ ವನಿತೆಯರದು.
ರಾಗಿ ಎಂದಿಗೂ ಬಡವರ ಧಾನ್ಯ ಎಂದೇ ಹೆಸರುವಾಸಿ. ಹಾಗಾಗಿ ಸಿರಿಸಂಪದ ಒದಗಿ ಅನ್ನ ತಿನ್ನುವ ದಿನಗಳು ಬಂದಿವೆಯಂತೆ ಈಗ . ಬೀಸುವ ಬಲತೋಳಿಗೆ ವಿಶ್ರಾಂತಿ ಕೊಟ್ಟು ಕೆಳಗೆ ತೂಗಿ ಬಿಡುವೆ ಎನ್ನುತ್ತಾಳೆ.
ರಾಗಿಯು ಮುಗಿದಾವು ರಾಜಾನ್ನ ಹೆಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು (ರಾಗಿ)ಕಲ್ಲೆ
ನಾ ತೂಗಿಬಿಡುತೇನವ ಬಲದೋಳು
ಆದರೂ ಇಲ್ಲಿ ಗರ್ವ ತಿರಸ್ಕಾರ ಇಲ್ಲ ಕೋಪ ಬೇಡ ಮತ್ತೆ ಬರುವೆ ಎನ್ನುತ್ತಾಳೆ . ಬೀಸುವ ಕಲ್ಲನ್ನು ಸರಸ್ವತಿಯೆಂದರೆ ಬಾಳ ಪಾಠ ಕಲಿಸಿದ ದೇವತೆಯ ರೂಪದಲ್ಲಿ ಕಾಣುತ್ತಾಳೆ.
ಕಲ್ಲು ಬಿಟ್ಟೆನೆಂದು ಸಿಟ್ಯಾಕೆ ಸರಸತಿಯೆ
ಕುಕ್ಕೇಲಿ ರಾಗಿ ಬೆಳೆಯಾಲಿ ತಕ್ಕೊಂಡು
ಮತ್ತೆ ರಾತ್ರಿಗೆ ಬರುತೀನಿ
ಕಡೆಯಲ್ಲಿ ಎಲ್ಲ ಹೆಣ್ಣುಮಕ್ಕಳಂತೆ ತವರಿಗೆ ಶುಭಕೋರುವ ಈ ಪದ
ಕಲ್ಲು ಕೊಟ್ಟವ್ವನಿಗೆ ಎಲ್ಲ ಭಾಗ್ಯವು ಬರಲಿ ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸೆ ಬರಲಿ
ಆಗಿನ ಕಾಲದಲ್ಲಿ ಬಾಯ್ಬಿಟ್ಟು ಹೇಳಲಾಗದ ತುಮುಲ ಗೊಂದಲ ಆತಂಕಗಳು ಯಾರೊಡನೆಯೂ ಹಂಚಿಕೊಳ್ಳಲಾಗದ ಹರುಷ ನಲಿವುಗಳು ತಮ್ಮೊಳಗಿನ ಹರಕೆ ಹಾರೈಕೆಗಳು ಹೆಂಗಳೆಯರ ಹೃದಯದ ಭಾವಗಳು ಹೀಗೆ ಜನಪದ ಸಾಹಿತ್ಯವಾಗಿ ಹೊರಹೊಮ್ಮಿವೆ. ಕಟ್ಟಿಹಾಕಿದ ದುಃಖ ದುಮ್ಮಾನಗಳು ಪದರೂಪದಲ್ಲಿ ಹರಿದು ಸ್ವಲ್ಪವಾದರೂ ಸಮಾಧಾನ ಕೊಟ್ಟು ಮನಸ್ಥೈರ್ಯ ನೆಮ್ಮದಿ ಪಡೆಯಲು ಸಹಾಯಕವಾಗಿದೆ ಎನ್ನಬಹುದು. ಏನೇ ಆದರೂ ಸಂಸ್ಕೃತಿ ಪರಂಪರೆಯ ಒಳನೋಟಗಳ ಅರಿವು ಮೂಡಿಸುವ ಇವು ಅಗೆದಷ್ಟು ಸಿಗುವ ನಿಕ್ಷೇಪಗಳು .
ನಾನು ಕಣ್ಬಿಡುವಷ್ಟರಲ್ಲಾಗಲೇ ಹಿಟ್ಟಿನ ಗಿರಣಿಗಳು ಬಂದಿದ್ದರಿಂದ ದಿನಬಳಕೆಗೆ ಹಿಟ್ಟು ಮಾಡಲು ಬೀಸುವಕಲ್ಲಿನ ಉಪಯೋಗವಿರಲಿಲ್ಲ . ಅಮ್ಮ ಮದುವೆಯಾಗಿ ಬಂದ ಹೊಸದರಲ್ಲಿ 1ರೂ. ಕೊಟ್ಟು ಮಾಟವಾದ ಮುದ್ದಾದ ಬೀಸುವಕಲ್ಲು ಕೊಂಡಿದ್ದರಂತೆ . ನಾವು ಮೂವರು ಚಿಕ್ಕಮಕ್ಕಳಾಗಿದ್ದಾಗ ವಡ್ಡ ರಾಗಿಯ ಹಿಟ್ಟು ಬೀಸಿದ್ದು ಅದರಲ್ಲೇ ಎಂದು ಹೇಳುತ್ತಿದ್ದರು .ನಂತರದ ದಿನಗಳಲ್ಲಿ ನಾಗರಪಂಚಮಿಯ ನೈವೇದ್ಯಕ್ಕೆ ಅದರಲ್ಲೇ ಅಕ್ಕಿತೊಳೆದ ಹಿಟ್ಟು ಮಾಡುತ್ತಿದ್ದುದು. ಮಿಕ್ಸಿ ಬರುವವರೆಗೆ ಚಟ್ನಿ ಪುಡಿ ಅನ್ನದ ಪುಡಿಗಳನ್ನು ಅದರಲ್ಲೇ ಬೀಸಿ ಪುಡಿ ಮಾಡುತ್ತಿದ್ದುದು. ಅವರೆಕಾಳು ಕಾಲಕ್ಕೆ ಉಪ್ಪಿಟ್ಟಿಗೆಂದು ಅಕ್ಕಿತರಿ ಬೀಸುತ್ತಿದ್ದುದು ಮತ್ತು ತಪ್ಪಲೆ ದೋಸೆ ಹಿಟ್ಟಿಗೂ ಸಹ ಹಿಟ್ಟು ಬೀಸುತ್ತಿದ್ದುದು ಬೀಸುವ ಕಲ್ಲಿನಲ್ಲಿಯೇ. ಮನೆಗೆ ಹಿರಿಯಳಾದ ನಾನು ಅಮ್ಮನಿಗೆ ಆಗದಿದ್ದಾಗಲೆಲ್ಲಾ ಬೀಸುವ ಕೆಲಸ ಇಷ್ಟವಾಗೇ ಮಾಡುತ್ತಿದ್ದೆ .ಹಿಂದಿನವರು ಬೀಸುವ ಕಲ್ಲಿನ ಪದ ಹಾಡಿದರೆ ನಾನು ಮಾತ್ರ ಬರುವ ಸಿನೆಮಾ ಹಾಡು, ಭಾವಗೀತೆ ದೇವರನಾಮಗಳ ವಾದ್ಯರಹಿತ ಆರ್ಕೆಸ್ಟ್ರಾ ಮಾಡುತ್ತಲೇ ಬೀಸುತ್ತಿದ್ದುದು. ಬೀಸುವ ಕಲ್ಲಿಗೆ ಮಧ್ಯೆಮಧ್ಯೆ ಗೂಟ ಹಾಕಿಸುವುದು, ತರಿತರಿಯಾಗಿರಲು ಕಲ್ಮುಳ್ಳು ಹೊಡಿಸುವುದು ಹೀಗೆ ಸರ್ವಿಸ್ ಗಳು ನಡೆಯುತ್ತಿದ್ದವು . ಈಗಲೂ ಅದೇ ಬೀಸುವ ಕಲ್ಲನ್ನು ಅಮ್ಮನಿಂದ ಪಡೆದು ಇಟ್ಟುಕೊಂಡಿದ್ದೇನೆ ಆದರೆ ಬೀಸುವ ಕೆಲಸ ಮಾತ್ರ ನಿವೃತ್ತಿ ನಂತರದ ಜೀವನದ ಯೋಜನೆ . ಬೀಸುವುದಕ್ಕೂ 1ಕ್ರಮ ಇತ್ತು. ಧಾನ್ಯವನ್ನು ಜಾಸ್ತಿ ತುಂಬಿ ಜೋರಾಗಿ ಬೀಸಿದರೆ ತರಿತರಿಯಾಗಿ ಬೀಳುತ್ತಿತ್ತು .ಚಟ್ನಿಪುಡಿ ಮತ್ತು ಅಕ್ಕಿ ತರಿಗೆ ಹೀಗೆ ಬೀಸಬೇಕಿತ್ತು. ಸ್ವಲ್ಪಸ್ವಲ್ಪವೇ ಧಾನ್ಯ ತುಂಬಿ ನಿಧಾನವಾಗಿ ಬೀಸಿದರೆ ನುಣ್ಣನೆ ಹಿಟ್ಟು ದೊರೆಯುತ್ತಿತ್ತು. ಅನ್ನದ ಪುಡಿ ಅಕ್ಕಿಹಿಟ್ಟು ಹುರಿಟ್ಟು ತಪ್ಪಲೆ ದೋಸೆ ಹಿಟ್ಟು ಇವುಗಳಿಗೆಲ್ಲಾ ಈ ರೀತಿ ಬೀಸುತ್ತಿದ್ದೆವು .
ಕಾಲ ಬದಲಾಗಿದೆ. ಸಮಯಕ್ಕೆ ಈಗ ಹೆಚ್ಚಿನ ಪ್ರಾಶಸ್ತ್ಯ .ಅನುಕೂಲತೆಗಳಿರುವಾಗ ಮೈನೋವು ಮಾಡಿಕೊಳ್ಳುವುದೇಕೆ? ಹಾಗಾಗಿ ಪರಿಶ್ರಮವಿರದ ಹಾದಿ ಈಗ. ಆದರೂ ಬೀಸಿದ ಹಿಟ್ಟಿನ ಪುಡಿಗಳ ರುಚಿಯ ನೆನಪು ಇನ್ನೂ ಮನದಿಂದ ಮಾಸಿಲ್ಲ. ತೊಗರಿನುಚ್ಚಿನುಂಡೆಗೆ ಬೇಳೆ ಬೀಸಿ ತಯಾರಿಸಿದ ಆ ರುಚಿ ಈಗ ನೆನೆಸಿ ಮಿಕ್ಸಿಯಲ್ಲಿ ರುಬ್ಬಿದಾಗ ಬರುವುದಿಲ್ಲ ಹೀಗೇ ಒಮ್ಮೊಮ್ಮೆ ಅದರ ಬಗ್ಗೆ ನೆನೆಸಿಕೊಂಡು ಖುಷಿ ಪಡುವುದಷ್ಟೇ ಪಾಲಲ್ಲಿ ಉಳಿದಿರುವ ಪಂಚಾಮೃತ..
ಈಗಾಗಲೇ ಜಾನಪದ ಮ್ಯೂಸಿಯಂಗಳಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಬೀಸುವಕಲ್ಲಿನ ಪ್ರಸ್ತಾಪವಿರದ ಜಾನಪದ ಸಾಹಿತ್ಯ ಇಲ್ಲವೇ ಇಲ್ಲ ಎನ್ನಬಹುದು .
ಇನ್ನು ದಾಸಸಾಹಿತ್ಯದಲ್ಲಿ “ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ” ಎಂಬ ಪುರಂದರದಾಸರ ದೇವರನಾಮದಲ್ಲಿ ಈ ಬೀಸುವಕಲ್ಲಿನ ಪ್ರಸ್ತಾಪ ಬರುತ್ತದೆ. “ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ” ಶಾವಿಗೆ ತಯಾರಿಸುತ್ತಾರೆ. ಒಮ್ಮನ ಅಂದರೆ ಏಕಾಗ್ರತೆ ಭಕ್ತಿಗಳನ್ನು ವೈರಾಗ್ಯವೆಂಬ ಕಲ್ಲಿನಲ್ಲಿ ಬೀಸುವುದು ಎಂಥ ಸುಂದರ ಪರಿಕಲ್ಪನೆ ಅಲ್ಲವೇ? ಹಾಗೆಯೇ ಗಟ್ಟಿಯಾಗಿರುವ ಕಾಳು ತನ್ನ ಸ್ವಂತ ವ್ಯಕ್ತಿತ್ವ ಅಹಂಕಾರವನ್ನು ಕಳೆದುಕೊಂಡು ಪುಡಿಯಾಗಿ ಸೇವನೆಗೆ ಯೋಗ್ಯವಾಗಿ ಸಾಯುಜ್ಯ ಪಡೆಯುತ್ತದೆ . ಹೀಗೆ ವ್ಯಕ್ತಿಯನ್ನು ಮಾಗಿಸಿ ಬಾಗಿಸುವ ಸಾಧನ ಕಾಲ ಬದುಕು ಅನುಭವ ಎಂಬುವ ಬೀಸುವಕಲ್ಲು ತಾನೇ? ಬೀಸುವ ವನು ಮೇಲಿರುವ ಆ ಭಗವಂತ .
ಮತ್ತೊಂದು ಒಗಟಿನ ಮೂಲಕ ಬೀಸುವ ಕಲ್ಲಿನ ಕಥೆಗೆ ಮಂಗಳ ಹಾಡೋಣ
ಎರಡು ಚಕ್ರಗಳುಂಟು ಬಂಡಿಯಲ್ಲ
ಎರಡು ಕಣ್ಣುಂಟು ಮನುಷ್ಯನಲ್ಲ
ಅದ ಹೇಳಿದವನಿಗೆ ಒಂದುಂಡೆ ಬೆಲ್ಲ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು.