ಸ್ವಾಭಿಮಾನದ ಸಂಕೇತ ಭೀಮಾ ಕೋರೆಗಾಂವ ಚಳುವಳಿ

ವಿಶೇಷ ಲೇಖನ

ಸ್ವಾಭಿಮಾನದ ಸಂಕೇತ

ಭೀಮಾ ಕೋರೆಗಾಂವ ಚಳುವಳಿ

ಡಾ.ಸುಜಾತ ಸಿ.

Bhima Koregaon - YouTube

ಸ್ವಾಭಿಮಾನದ ಸಂಕೇತ ಭೀಮಾ ಕೋರೆಗಾಂವ ಚಳುವಳಿ

ಪೇಶ್ವಗಳ ಆಡಳಿತ ಸಂದರ್ಭದಲ್ಲಿ ಅಸ್ಪ್ರಷ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ. ವೈದಿಕ ಆಡಳಿತವನ್ನು ವಿಜೃಂಭಿಸುತ್ತಿದ್ದ ಕಾಲವದು. ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪ್ರಷ್ಯರದ್ದಾಗಿತ್ತು. ಕಿತ್ತು ತಿನ್ನುವ ಬಡತನ, ಹಸಿವುಗಳ ಅಟ್ಟಹಾಸ.ಅಶಿಕ್ಷಿತರಾದ ಅಸ್ಪ್ರಷ್ಯರು ಅನ್ಯಾಯದ ವಿರುದ್ದ ಹೋರಾಟ ಮಾಡುವದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಮನುಷ್ಯನನ್ನು ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವೆಗಳು ಶೂದ್ರರ ಮೇಲೆ ತಮ್ಮ ಅಟ್ಟಹಾಸವನ್ನು ಮೇರೆಯುತ್ತಿದ್ದರು. ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು,ಮಾಂಗರು,ಚಮ್ಮಾರರು, ದೇಢರು ಮತ್ತು ಮಹಿಳೆಯರು ಪೇಶ್ವಾ ಆಳಿಕೆಯಲ್ಲಿ ತತ್ತರಿಸಿ ಹೋಗಿದ್ದರು. ಮಹಾರಾಷ್ಟ ರಾಜ್ಯದ ಆಡಳಿತದ ಅವಧಿಯಲ್ಲಿ ನಡೆದ ಈ ಘಟನೆಯನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ಪೇಶ್ವೆಗಳ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳುವಳಿಯನ್ನು ಬರಹದ ರೂಪದಲ್ಲಿ ನಮ್ಮ ಮುಂದೆ ಇರಿಸಿದ್ದಾರೆ.

೧ನೇ ಜನೇವರಿ ೧೮೧೮ ರಲ್ಲಿ ಅಂದರೆ ಇಂದಿಗೆ ೨೦೪ ವರ್ಷಗಳ ಹಿಂದೆ ಪೇಶ್ವೆ ಸೈನ್ಯದ ಎದುರು ಬೆರಳೆಣಿಕೆಯಷ್ಟು ಅಸ್ಪ್ರಷ್ಯ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ. ಕೋರೆಗಾಂವ ಯುದ್ಧ ‘ನ್ಯಾಯದ ಯುದ್ಧ’ ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತ ಕೂಡಾ ಹೌದು. ಈ ದಿನವನ್ನು ಯಾವ ಅಸ್ಪ್ರಷ್ಯರು ಮರೆಯುವ ಹಾಗಿಲ್ಲ. ಡಾ.ಬಾಬಾಸಾಹೇಬರು ಈ ದಿನದ ಸ್ಮರಣಿಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ಥಂಭ ಸ್ಮಾರಕಕ್ಕೆ ವಂದಿಸಲು ಜನೇವರಿ ೧ ರಂದು ತಪ್ಪದೇ ಹೋಗುತ್ತಿದ್ದರು.

          ಮರಾಠರ ಆಡಳಿತ ಕಾಲದಲ್ಲಿ ಪೇಶ್ವೆಗಳು ಮತ್ತು ಕೊಂಕಣಿ ಬ್ರಾಹ್ಮಣರು ಆಡಳಿತವನ್ನು ಮಾಡುತ್ತಿದ್ದ ಕಾಲವದು. ೧೭ನೇ ಎಪ್ರೀಲ್ ೧೭೨೦ ರಲ್ಲಿ ಬಾಜೀರಾವನಿಗೆ ಪೇಶ್ವೇ ಪದವಿಯನ್ನು ನೀಡಿದರು. ನಂತರ ಇತನ ಮಗ ಉಪ್ ನಾನಾ ಸಾಹೇಬನಿಗೆ ಛತ್ರಪತಿ ಶಾಹು ಮಹಾರಾಜ ೨೫ನೇ ಜೂನ್ ೧೭೬೧ ರಲ್ಲಿ ಪೇಶ್ವೇ ಪದವಿಯನ್ನು ನೀಡುತ್ತಾರೆ.

Rare Photo of Dr. Babasaheb Ambedkar at Bhima Koregaon | Dr. B. R.  Ambedkar's Caravan

ಅಸ್ಪ್ರಷ್ಯರ ಸ್ಥಿತಿ ಚಿಂತಾಜನಕವಾದದ್ದು ಹೇಗೇ?

ಜಾತಿ ಪದ್ಧತಿಯೇ ಮುಖ್ಯವಾದ ಕಾಲದಲ್ಲಿ ಅಸ್ಪ್ರಷ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ವಿಜೃಂಭಿಸುತ್ತಿದ್ದ ಕಾಲ. ಮನುಸ್ಮಿತಿಯನ್ನು ಚಾಚು ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪ್ರಷ್ಯರನ್ನು ಕಂಡರೇ, ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪ್ರಷ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು. ಶೂದ್ರಾತಿ ಶೂದ್ರರೆಲ್ಲರೂ ರಸ್ತಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಒಂದು ವೇಳೆ ಬೀದಿಯಲ್ಲಿ ಹೋಗಬೇಕಾದ ಅನಿವಾರ್ಯತೆ ಬಂದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು. ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗಳಿಕೊಳ್ಳಬೇಕು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ನೆತ್ತಿಯಲ್ಲಿಯೇ ಉಳಿಯುವ ಹಾಗೇ ಮದ್ಯಾನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಹೊರಗೆ ಬರಬೇಕು. ನಡೆದುಕೊಂಡು ಹೊಗುವಾಗ ಹೆಜ್ಜೆಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಪೋರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಇತ್ತು. ಹಾಗೇ ಅಸ್ಪ್ರಷ್ಯನೊಬ್ಬ ಬರುವದನ್ನು ಸಂಬೋಳಿ (ಶೂದ್ರನೊಬ್ಬ ಬರುತ್ತಿದ್ದಾನೆ)ಅಂತಾ ಕೂಗಿ ಹೇಳಬೇಕು. ಇಲ್ಲ ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ನೆಲಕ್ಕೆ ಕುಕ್ಕಿಕೊಂಡು ಸದ್ದು ಮಾಡುತ್ತಲೇ ಹೋಗಬೇಕು. ಹೆಣ್ಣು ಮಕ್ಕಳ ಮೇಲೆ ನಿರಂತರ ಅನ್ಯಾಯ ಮತ್ತು ಅತ್ಯಾಚಾರ ಮಾಡುತ್ತಿದ್ದರು. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪ್ರಷ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಮೊಗಲರ ಬೃಹತ್ತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವೇಗಳು ಮತ್ತು ಸವರ್ಣಿಯರು ಮಹಾರ್ ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು. ೧೭೫೮ ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರಿಗೆ ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿ ಕೊಟ್ಟುದದರ ಪರಿಣಾಮವಾಗಿ ಸ್ವಲ್ಪ ಮಟ್ಟಿಗೆ ತಿಳುವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು ಭಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿ ವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ,ಅನ್ಯಾಯ,ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

          ೧೮೧೭ ರಲ್ಲಿ ಎರಡನೇ ಬಾಜಿರಾವ್ ಪೇಶ್ವೇ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ ೩೧ ನೇ ಡಿಸೆಂಬರ ೧೮೧೭ ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಟಿನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೇಗಳ ಮೇಲೆ ದಾಳಿ ಮಾಡಿತು. ಪೇಶ್ವೇಗಳ ಸೈನ್ಯ ಕೊರೆಗಾಂವ್ ಪ್ರದೇಶದ ಭೀಮಾ ನದಿಯ ಬಲ ದಂಡೆಯ ಮೇಲೆ ಈಡಿ ಸೈನ್ಯ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ಸೈನಿಕ ಬ್ರೀಟಿಷರ್ ಪರವಾಗಿ ರೆಜೆಮೆಂಟ್ ಯುದ್ದಕ್ಕೆ ಇವರೂ ಕೂಡಾ ಸಜ್ಜಾಗಿದ್ದರು. ಬೃಹತ್ ಸೈನ್ಯವಾದ ಪೇಶ್ವೆಗಳು ಸೇನೆಯಲ್ಲಿ ೨೫,೦೦೦ ಕುದುರೆ ಸವಾರರು ಮತ್ತು ೫,೦೦೦ ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಪದಾಧಿ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡು ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಟನ್ ತಾನು ಸೋಲುತ್ತೇನೆ ಎಂದು ಕೊಂಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ದದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. ಬ್ರಿಟಿಷ ಅಧಿಕಾರಿ ಲೆಪ್ಟಿನೆಂಟ್ ಚಿಕೊಲಮನನ್ನು ಪೇಶ್ವೇ ಸೈನಿಕರು ಸೆರೆ ಹಿಡಿದು ಅವನ ತಲೆಯನ್ನು ಕಡಿದು, ಮುಂಡವಿಲ್ಲದ ರುಂಡವನ್ನು ತಮ್ಮ ಖಡ್ಗಕ್ಕೆ ಸಿಕ್ಕಿಸಿ ಯುದ್ಧ ಭೂಮಿಯ ಸುತ್ತ ಸುತ್ತತೊಡಗಿದರು. ೧ನೇ ಜನೆವರಿ ೧೮೧೮ ರ ರಾತ್ರಿ ೯ ಗಂಟೆಗೆ ಪೇಶ್ವೇ ಸೈನಿಕರು ಹಿಂದೆ ಸರಿಯತೊಡಗಿದರು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೇಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ೮ನೇ ಬಾಜಿರಾವ್ ಪೇಶ್ವೇಯು ಪಲಾಯನ ಮಾಡುವದಲ್ಲಿ ಮೊದಲಿಗನೆಂದು ಡಾ.ಬಾಬಾ ಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ. ಬೆಳ್ಳಿಗ್ಗೆ ೯ ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ೯ ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು ತಮ್ಮ ಮೇಲೆ ಅಮಾನವೀಯವಾದ ಅಸ್ಪ್ರಷ್ಯತೆಯನ್ನು ಹೇರಿದ್ದ ಪೇಶ್ವೇ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರೀಟಿಷರು ಕೊರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ,ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾ ಕಾಲ ಸ್ಮರಿಸುವಂತೆ ಕೊರೆಗಾಂವನ ಭೀಮಾ ನದಿ ತೀರದ ಪ್ರಶಸ್ಥವಾದ ಮೈದಾನದಲ್ಲಿ ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

          ೨೬ ನೇ ಮಾರ್ಚ ೧೮೨೧ ರಲ್ಲಿ ಈ ಭವ್ಯ ವಿಜಯಸ್ಥಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. ೬೩ ಅಡಿ ಎತ್ತರ ಇರುವ ಈ ವಿಜಯ ಸ್ಥಂಭವು ೧೮೨೨ ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ಥಂಭವನ್ನು ಮಹಾರ್ ಸ್ಥಂಭವೆಂದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ಥಂಭವೆಂದು ಹೆಸರಿಸಲಾಯಿತು. ವಿಜಯಸ್ಥಂಭದ ಮೇಲೆ ೨೦ ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಜನೇವರಿ ೧ ರಂದು ಬಾಬಾಸಾಹೇಬರು ಕೊರೆಗಾಂವ್ ವಿಜಯಸ್ಥಂಭಕ್ಕೆ ಬೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೊಗಾಂವ ಚಳುವಳಿಯನ್ನು ಮತ್ತೇ ಮತ್ತೇ ನೆನೆಯುವುದು ಇಂದಿನ ಅನಿವಾರ್ಯ ಕೂಡಾ ಹೌದು ಯಾಕೆಂದರೆ ಬಾಬಾ ಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದು ಹೇಳಿದ್ದಾರೆ. ಇತಿಹಾಸದ ಪುಟಗಳಲ್ಲಿ ಮತ್ತೇ ಮತ್ತೇ ದಾಖಲಿರಣಗೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅಂತೇಲೇ ಕರ್ನಾಟಕದ ಅನೇಕ ಕಡೆಗಳಲ್ಲಿ ಅಂದರೆ ೨೦೧೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಮತ್ತು ೨೦೧೯ ರಲ್ಲಿ ಸಿಂದಗಿ ಪಟ್ಟಣದಲ್ಲಿ ಕೋರೆಗಾಂವ ವಿಜಯಸ್ಥಂಭವನ್ನು ನಿರ್ಮಿಸಿದ್ದಾರೆ. ಶೌರ್ಯ, ಪರಾಕ್ರಮದ ಸಂಕೇತಗಳು ಹಾದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮಹಾರ್ ಸೈನಿಕರ ಪರಾಕ್ರಮವನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ.


7 thoughts on “ಸ್ವಾಭಿಮಾನದ ಸಂಕೇತ ಭೀಮಾ ಕೋರೆಗಾಂವ ಚಳುವಳಿ

  1. ಸ್ವಾಭಿಮಾನದ ಮೊದಲ ಗೆಲುವಿನ ಸಂಭ್ರಮದ ಸವಿಯನ್ನು ಬಡಿಸುವುದರ ಜೊತೆಗೆ ಪ್ರಸ್ತುತವಾಗಿ ನಾವು ಸಾಧಿಸಬೇಕಾದ ಜವಾಬ್ದಾರಿಗಳನ್ನು ತಿಳಿಸಿದ್ದೀರಿ. ಉತ್ತಮ ನಿರೂಪಣೆ..

Leave a Reply

Back To Top