ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ತುಮುಲಗಳು

ಪುಸ್ತಕ ಸಂಗಾತಿ ತುಮುಲಗಳು ಹಿರಿಯ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರ ಕವನ ಸಂಕಲನವಾದ ” ತುಮುಲಗಳು ” ಹೆಸರೇ ತಿಳಿಸುವ ಹಾಗೆ ಅಂತರಾಳದ ಬೇಗುದಿಗಳನ್ನ, ತಳಮಳವನ್ನ ಹೊರ ಹಾಕುವ ಪ್ರಕ್ರಿಯೆಯಾಗಿ ಮೂಡಿ ಬಂದ ಸಂಕಲನವಾಗಿದೆ. ಅವರೇ ಬರೆದ ಹಾಗೆ ನನ್ನನ್ನು ಪ್ರೀತಿಸಿದ, ದ್ವೇಷಿಸಿದ, ಜೊತೆಯಾದ, ತೊರೆದ, ಗೌರವಿಸಿದ, ಅವಮಾನಿಸಿದ, ಪ್ರೋತ್ಸಾಹಿಸಿದ, ಹೀಗಳೆದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಹೇಳುವುದರಲ್ಲೇ ಅವರ ತುಮುಲಗಳನ್ನ ಅರ್ಥೈಸಿಕೊಳ್ಳಬಹುದು. ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರ ಕೆಲವು ಬರಹಗಳನ್ನ ಫೇಸ್ಬುಕ್ ನಲ್ಲಿ ಗಮನಿಸುತ್ತಲೇ ಬಂದಿರುವ ನಾನು ಅವರು ಆಲ್ಬರ್ಟ್ ಕಾಮೂ ಅವರ The Fall – “ಪತನ” ಕೃತಿಯನ್ನ ಕನ್ನಡಕ್ಕೆ ತಂದಿದ್ದನ್ನ ಗಮನಿಸಿ ಪುಸ್ತಕ ತರಿಸಿಕೊಂಡ ನನಗೆ “ತುಮುಲಗಳು” ಅಚ್ಚರಿಯಾಗೆ ಬಂದಿತ್ತು. ಆಮೇಲೆ ತಿಳಿಯಿತು ಇವರು ಕಾಮೂ ಅವರ ಕೃತಿಯನ್ನೇ  ಅನುವಾದಿಸಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೂ ಅವರ ಕವನ ಸಂಕಲನಕ್ಕೂ ಅವಿನಾಭಾವ ಸಂಬಂಧವನ್ನ ಗುರುತಿಸಿದೆ.    ವೈಯುಕ್ತಿಕವಾಗಿ ಕವಿತೆಗಳಲ್ಲಿ ಪ್ರೀತಿ-ಪ್ರೇಮಗಳ ಹೊರತಾಗಿ ಏನಾದರೂ ಇದೆಯೇ ಎಂಬುದನ್ನ ಹುಡುಕುವ ಮನೋಭಾವದವನಾದ ನನಗೆ “ತುಮುಲಗಳು” ಮೋಸ ಮಾಡಿಲ್ಲ. ವಾಸ್ತವದ ಜೊತೆ ಜೊತೆಗೆ ಅಸಂಗತ ಬದುಕಿನ ನೆಲೆಗಳನ್ನ ಶಬ್ದಗಳಲ್ಲಿ ಹಿಡಿದಿಡುವ ಕವಿತೆಗಾಗಿ ಹಾತೊರೆವ ಮನಸ್ಸುಗಳಿಗೆ ಈ ಸಂಕಲನದ ಕವಿತೆಗಳು ಮೋಸ ಮಾಡಲಾರವು.   ಬದುಕನ್ನ ಬೆರಗಿನಿಂದ ನೋಡುವ, ಅಲ್ಲಿನ ಸಂಗತಿಗಳನ್ನ ಅಂತರಾಳದಲ್ಲಿ ಒರೆಗೆ ಹಚ್ಚಿ ಅವಲೋಕಿಸುವ, ನಿರ್ಭೀತಿಯಿಂದ  ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಗುಣ, ಪೂರ್ವಾಗ್ರಹಕ್ಕೆ ಒಳಗಾಗದೇ ವಿಚಾರಗಳನ್ನ ಗ್ರಹಿಸುವ, ಶಾಶ್ವತವಾದವನ್ನ ಅಲ್ಲಗಳೆಯುತ್ತಲೇ ಒಂಟಿತನ, ಸಾವನ್ನ ಕುರಿತಾದ ಕೆಲವು ಭಾವನೆಗಳು  ನಾನೇ ಬರೆಯಬೇಕಂದುಕೊಂಡಿದ್ದ ಆದರೆ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರು ಬರೆದಿದ್ದಾರೆ ಎಂಬ ನಿರಾಳ ಭಾವ ಇಲ್ಲಿನ ಕವಿತೆಗಳದ್ದು.   ಮೊದಲ ಕವಿತೆಯಲ್ಲೇ ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುವ ಸಾಲುಗಳನ್ನ ಕಾಣಬಹುದು. ” ನನಗೆ ಹುಚ್ಚು ಹಿಡಿದ ದಿನ ಎಲ್ಲ ಸ್ಪಷ್ಟವಾಗಿತ್ತು ಅಲ್ಲಿಯವರೆಗೆ ನಾನು ಬದುಕಿನ ಅರ್ಥ ಹುಡುಕುತ್ತಿದ್ದೆ ಒಳತು–ಕೆಡುಕುಗಳನ್ನ ತೂಗಿ ನೋಡುತ್ತಿದ್ದೆ ಬೇಕು ಬೇಡಗಳನ್ನ ಅಳೆದು ನೋಡುತ್ತಿದ್ದೆ ….ಲೆಕ್ಕ ಅಳತೆಗಳೆಲ್ಲ ತಪ್ಪಿ ನನ್ನನ್ನು ಗೇಲಿ ಮಾಡತೊಡಗಿದ್ದವು … ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಅಂದು ತೋಳಗಲಿಸಿನಿಂತೆ ಆಮೇಲೆ ನನಗೆ ಹುಚ್ಚು ಹಿಡಿಯಿತು…” ಇಲ್ಲಿ ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಕೈ ತೋಳುಗಳನ್ನ ಅಗಲಿಸಿ ಹೊರಟ ಕವಿಗೆ ಕೊನೆಗೆ ಹುಚ್ಚುತನದ ಬದುಕಿನಿಂದ ಬಿಡುಗಡೆ ಹೇಗೆ ಅಸಾಧ್ಯವಾಯಿತು ಎಂಬುದನ್ನ ಮಾರ್ಮಿಕವಾಗೇ ಹೇಳುತ್ತದೆ. ಹೀಗೆ ಕವಿಯ ಮನಸ್ಸಿನ ಒಂದು ನಿರ್ದಿಷ್ಟ ಘಟನೆಯ ಸಾಲುಗಳು ಸಾರ್ವರ್ತ್ರಿಕ ಬದುಕನ್ನೇ ಬಿಂಬಿಸುವ ವಸ್ತುನಿಷ್ಠತೆಯನ್ನ ಪ್ರತಿನಿಧಿಸುತ್ತವೆ. ಇದು ಇವರ ಕವಿತೆಗಳ ಹೆಚ್ಚುಗಾರಿಕೆ. ಮತ್ತೊಂದು ಕವನದಲ್ಲಿ, ” ನಡೆಯಬಾರದ ಹಳೆಯ ದಾರಿಗಳಲ್ಲಿ, …ಕನಸುಗಳ ಬಂಡಿ ಮುಗ್ಗರಿಸಿ ಮುಕ್ಕಾದ, ಆ ಕ್ರೂರ ತಿರುವುಗಳಲ್ಲಿ ಹೊಂಚು ಹಾಕಿ ಕುಳಿತ ನೆನಪುಗಳ ಪ್ರೇತಗಳೆದುರು ನಿಲ್ಲಬಾರದು ಹೋಗಿ ಲಜ್ಜೆಗೆಟ್ಟು ಬಗ್ಗಿ, ಹೀಗೆಂದುಕೊಳ್ಳುತ್ತೇನೆ ಪ್ರತೀ ಸಾರಿ, ಅದೇ ಹಾದಿಗಳ ಅದೇ ತಿರುವುಗಳಲ್ಲಿ, ಅವೇ ಪ್ರೇತಗಳು ಸುತ್ತಲೂ ಕುಣಿವಾಗ ನೋವಿನಲಿ ಕುಗ್ಗಿ…”   ಹೀಗೆ ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಬವಣೆಗಳನ್ನ ಎದುರಿಸಲು ಮನಸ್ಸಿನ ತಲ್ಲಣಗಳನ್ನ ಪ್ರತಿಮೆಗಳ ಮೂಲಕ ಚಿತ್ರಿಸುವುದು ಸುಲಭವೂ ಅಲ್ಲ.  ಮತ್ತೊಂದು ಕವನದಲ್ಲಿ,  “ಬದುಕು ಕುಸಿದು ಕಣ್ಣೆದುರಿನಲ್ಲೇ ಮಣ್ಣಾಗುತ್ತಿರುವಾಗ ಮತ್ತೇನೂ ಮಾಡಲಾಗದೆ ನಾನು ಕುಣಿಯುತ್ತ, ಹೊರಳಾಡುತ್ತ, ಕೇಕೆ ಹಾಕುತ್ತಾ, ಮಕ್ಕಳಂತೆ, ಮಣ್ಣಾಡತೊಡಗಿದೆ…”    ಈ ಸಾಲುಗಳು ಪ್ರತಿಯೊಬ್ಬನ ಬದುಕಿನಲಿ ಧುತ್ತೆಂದು ಎಗರಿ ಬರುವ  ಸಂಗತಿಗಳಿಗೆ ಮನುಷ್ಯ ಹೇಗೆ ಅಸಹಾಯಕನಾಗಿರುವನು ಎಂಬುದನ್ನ ಮನೋಜ್ಞವಾಗಿ ಬಿಂಬಿಸುತ್ತವೆ. ಕೊನೆಗೆ ‘ಮಕ್ಕಳಂತೆ ಮನ್ನಾಡತೊಡಗಿದೆ’ ಎಂಬ ಮಾತುಗಳೇ ನಮ್ಮನ್ನ ಮಗುವಿನಂತಹ ಅಸಹಾಯಕತೆಯನ್ನ ಅನಿವಾರ್ಯವಾಗಿ ಮೈಗೂಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ತಂದೊಡ್ಡುತ್ತವೆ. ಮತ್ತೊಂದು ಕವಿತೆಯಲ್ಲಿ  ಬದುಕಿನ ಬಗ್ಗೆ ಇದೇ ಭಾವವನ್ನ ಮೂಡಿಸುವ ಅದ್ಭುತ ಸಾಲುಗಳಿವೆ. ಜೊತೆಗೆ ಗ್ರೀಕ್ ಪೌರಾಣಿಕತೆಯಲ್ಲಿ ಕಂಡುಬರುವ ನಾಟಕಗಳ ವಿಚಿತ್ರ ಪಾತ್ರವಾದ ಟೈರಿಶೀಯಸ್ ಎಂಬುವವನನ್ನು ಈ ಅಸಂಗತ ಪರಿಸ್ಥಿತಿಗಳಿಗೆ ತಗೆದುಕೊಂಡಿರುವುದು ಅವರ ಕವನ ಮತ್ತಷ್ಟು ಗಮ್ಯವಾಗಿ ಮೂಡಿಬರಲು ಕಾರಣವಾಗಿದೆ. ” ಹತಾಶೆಯ ಬಿಸಿಲಿನಲಿ ಒಣಗಿ ಬಿರಿದಿದೆ ನೆಲ ತೇವಗೊಳಿಸಲು ಭರವಸೆಯ ಒಂದು ಹನಿಯೂ ಇಲ್ಲ.. ಬಾ ಇಲ್ಲಿ  ಮತ್ತೊಮ್ಮೆ ಟೈರಿಶೀಯಸ್, ಜಗದ ಒಗಟುಗಳನ್ನೆಲ್ಲ ಬಿಡಿಸುವವ ನೀನು, ಆದಿ ಅಂತ್ಯಗಳನ್ನೆಲ್ಲ ಮೊದಲೇ ಕಂಡವನು….” ಮಗದೊಂದು ಕವಿತೆಯಲ್ಲಿ ಕವಿಯ ಮನಸ್ಸಿನ ತಲ್ಲಣಗಳನ್ನು ಸ್ಪಷ್ಟವಾಗೇ ಅರಿಯಹುದು – “ಪ್ರಶಾಂತ ಸರೋವರದಲ್ಲಿಯೂ ಏಳುವವು ಒಮ್ಮೊಮ್ಮ ಬಿರುಗಾಳಿ, ಸುತ್ತಿ ಸುಳಿವ ಅಲೆಗಳು ಮುಸ್ಸಂಜೆಯಲಿ ಕಾಗೆಗಳ ಗದ್ದಲದ ಹಾಗೆ– ಏನು ಕೂಗುವೆ, ಏಕೆ ಕೂಗುವೆ, ಕಾಗೆಗೂ ತಿಳಿಯದೇನೋ…! “ ಇನ್ನೂ ಕೆಲವು ಕವಿತೆಗಲ್ಲಿ ಕವಿಯು  ತನ್ನ ಸಮಾಜಕ್ಕೆ ಏನೋ ಹೇಳಲೇಬೇಕು ಎಂಬ ಇರಾದೆಯಿಂದ ಪೆನ್ನು ಹಿಡಿದು ಕೂತಿದ್ದಾನೆ ಎಂಬ ಭಾವನೆ ಕಾಣುವುದು, ” ಮಧ್ಯರಾತ್ರಿಯ ಖಾಲಿರಸ್ತೆಗಳ ಬೀದಿದೀಪಗಳ ಬೆಳಕಿನಲ್ಲಿ ಪ್ರೇತಗಳ ನೆರಳು ಸುಳಿದಾಡುವಂತೆ ಇತಿಹಾಸದ ದಟ್ಟ ನಿರ್ಜನ ಹೆದ್ದಾರಿಯಲ್ಲಿ ಮಾಯೆಯ ನೆರಳು ಮೂಡುತ್ತದೆ… ಸತ್ಯಕ್ಕೆ ದನಿಯಾದ ಗಂಟಲುಗಳು ರಸ್ತೆಯಲ್ಲೆಲ್ಲೋ ಕಳೆದು ಹೋದರೂ ಮೊಳಗುತ್ತಲೇ ಇರುವ ಕೂಗು… ಓಗೊಡಲು ಬಾಯಿ ತೆರೆದರೆ ಗಂಟಲುಬ್ಬುತ್ತದೆ… ಕಣ್ಣಿನ ದುಗುಡ ನೀರಾಗಿ ಸತ್ಯ ಅಗೋಚರವಾಗುತ್ತದೆ.. ಪ್ರೇತಗಳ ನೆರಳು ಸುಳಿದಾಡುತ್ತದೆ…” ಇನ್ನೊಂದು ಕವಿತೆಯಲ್ಲಿ ನಾಯಿಯ ರೂಪಕವನ್ನ ಸೂಚ್ಯವಾಗಿ  ಮನುಷ್ಯನಿಗೆ ಅನ್ವಯವಾಗುವಂತಹ ಸಾಲುಗಳನ್ನ ಕಾಣಬಹುದು, ” ಕೊಳಕು ಚರಂಡಿಗಳಲ್ಲಿ ಕುಂಟುತ್ತ ಓಡುವ ನಾಯಿ ಮೂಸುತ್ತಿದೆ ಕೇಸರನ್ನು ಕಸದ ತೊಟ್ಟಿಗಳಲ್ಲಿ ಹಳಸಿದ ನಿಧಿಗಳಿಗಾಗಿ ಕೆದಕಿ ನೋಡುತ್ತಿದೆ ಪಿಸುರುಗಟ್ಟಿದ ಕಣ್ಣಿನಿಂದ ….ನಾಳೆ ಸಾಯುವ ನಾಯಿಗೆ ಇಂದು ರೊಟ್ಟಿ ತಿನ್ನುವ ಆಸೆ “ ಇನ್ನೊಂದು ಕವನದ ಸಾಲುಗಳಲ್ಲಿ ಬೆತ್ತಲು ಮನಸ್ಸಿನ ಹಸಿ ಹಸಿ ಭಾವಗಳು ಮನೋಜ್ಞನವಾಗಿ ಮೂಡಿಬಂದಿವೆ ಈ ಸಲುಗಳಂತೂ ನನಗೆ ತುಸು ಹೆಚ್ಚೇ ಇಷ್ಟವಾಗಿವೆ. ಕಾರಣ ನಮ್ಮ ‘ಮನಸ್ಸು ಸತ್ತಿರುವ ಕನಸುಗಳ ರುದ್ರಭೂಮಿಯಾಗಿದೆ’ ಎಂದು ಹೇಳಬೇಕಾದರೆ ಮನುಷ್ಯನ ಬದುಕು ಇಷ್ಟು ಅಸಹನೀಯವೇ ಎಂಬ ಬೆರಗು ಮೂಡದೇ ಇರದು. “ಮನದ ಮೂಲೆಗಳಿಂದ ಹೊರಹೊಮ್ಮುವುದು ಆಗಾಗ ಉಸಿರುಗಟ್ಟುವ ದುರ್ಗಂಧ, ಅಲ್ಲಿ ಆಳಗಳಲ್ಲಿ ಕೊಳೆತು ನಾರುತ್ತಿರುವ ಕನಸುಗಳ ಕಳೇಬರಗಳಿಂದ; ಆಗ ಅರಿವಾಗುವುದು, ನಗುವ ಹೂಗಳ ನಂದನವಲ್ಲ ಮನಸು ಇಂದು ಸತ್ತ ಕನಸುಗಳ ರುದ್ರಭೂಮಿ…” ಇನ್ನೂ ಕೆಲವು ಸಾಲುಗಳು ಮನಸ್ಸಿಗೆ ಮುದ ನೀಡುವ ಹಾಗೇ ದೇಹಕ್ಕೂ ಮನಸ್ಸಿಗೂ ವಯಸ್ಸಿನ ಅರಿವನ್ನ ಮೂಡಿಸುವ ಜೊತೆಗೆ ನೆನಪುಗಳ ಹಾವಳಿಗಳನ್ನ ತೆರೆದಿಡುತ್ತ ತುಟಿಯಂಚಲಿ ನಗು ಮೂಡಿಸುತ ಹೌದು ಹೌದು.. ನಂದೂ ಅದೇ ಕತೆ ಅಂದುಕೊಂಡ ಸಾಲುಗಳು ಕಾಣುತ್ತವೆ.. ” ದಟ್ಟ ಕಪ್ಪಿನ ನಡುವೆ ಅಲ್ಲಲ್ಲಿ ಎದ್ದು ಕಾಣುವ, ಕಂಡು ನಗುವ ಹೀಗೆ ಅನೇಕ ಹೇಳಲೇಬೇಕಾದ ಸಾಲುಗಳು ಹಲವಿವೆ ಈ ಸಂಕಲನದಲ್ಲಿ. ಒಮ್ಮೆ ಕೊಂಡು ಓದಿಬಿಡಿ. ಜೊತೆಗೆ ನಮ್ಮದೇ ಭವಾನುರಾಗದಲ್ಲಿ ಮೀಯುವ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಕವಿ ಬರೆದ ಮೇಲೆ ಅದರ ಭಾವಗಳು ನಮ್ಮವೇ ಆಗಿರುವ ಕೆಲವು ಸಲುಗಳೂ ಎಲ್ಲರ ಕವಿತೆಗಳಲ್ಲಿ ಬಂದರೂ ಈ ಅಸಂಗತ ಬದುಕಿನ ತುಮುಲಗಳನ್ನ ಹಿಡಿದಿಡುವ ಸಾಲುಗಳು ಕಾಣುವುದು ಅಪರೂಪ.  ಈ ಸಂಕಲನಕ್ಕೆ ಚಂದದ ಮುನ್ನುಡಿ ಬರೆದವರು ಮೂಡ್ನಾಕೋಡು ವಿಶ್ವನಾಥ್ ಹಾಗೇ  ಬೆನ್ನುಡಿ ಬರೆದ ಶೌರಿ ಬಿ. ಪಿ. ಅವರು ಹೇಳುವ ಹಾಗೆ ಇಂದು ನಮ್ಮನ್ನು ಆವರಿಸಿರುವ ಸಾಮಾಜಿಕ ಹಾಗೂ ಬೌದ್ಧಿಕ ವಿಷಾದದ ಸ್ಥಿತಿಯನ್ನು ಈ ಕವಿತೆಗಳು ಮಾತಾಡುತ್ತವೆ ಎಂಬುದು ಉತ್ಪ್ರೇಕ್ಷೆ ಏನೂ ಅಲ್ಲ. ಹಾಗಾಗಿ ಅಲ್ಬರ್ಟ್ ಕಾಮೂ ಪುಸ್ತಕದ ಜೊತೆಗೆ ಅಮೂಲ್ಯ ಕವಿತೆಗಳ ಗುಚ್ಚವನ್ನ ಕಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರಿಗೆ ಧನ್ಯವಾದಗಳು. ಡಾ. ವಸಂತಕುಮಾರ ಎಸ್. ಕಡ್ಲಿಮಟ್ಟಿ

ತುಮುಲಗಳು Read Post »

ಪುಸ್ತಕ ಸಂಗಾತಿ

ಪುಟ್ಟನ ಕನಸು’

ಮನೆ ಬೀದಿ ದೇಗುಲದಲಿ ನಿರುತ ಸೇವೆಯು ಪ್ರತಿಪಲಾಕ್ಷೆ ಇಲ್ಲದಿರುವ ನಿಸರ್ಗ ದೈವವು’ ಪೊರಕೆಯನ್ನು ಎಲ್ಲಂದರಲ್ಲಿ ಬಳಕೆಯಾಗುವ ಮೌನವಾಗುವ ಪರಿಯನ್ನು ಸೂಚಿಸಿದ್ದಾರೆ. ಇದಲ್ಲದೆ ತಮ್ಮೂರಾದ ಜಮಖಂಡಿಯ ವರ್ಣನೆಯನ್ನು ಕವಿತೆಯಲ್ಲಿ ಮನೋಹರವಾಗಿ ಕಟ್ಟಿದ್ದಾರೆ

ಪುಟ್ಟನ ಕನಸು’ Read Post »

ಪುಸ್ತಕ ಸಂಗಾತಿ

ಗಾಂಧಿ ನೇಯ್ದಿಟ್ಟ ಬಟ್ಟೆ

ಪುಸ್ತಕ ಸಂಗಾತಿ ಗಾಂಧಿ ನೇಯ್ದಿಟ್ಟ ಬಟ್ಟೆ ಕೃತಿ: ಗಾಂಧಿ ನೇಯ್ದಿಟ್ಟ ಬಟ್ಟೆ ಲೇ: ರಾಯಸಾಬ ಎನ್ ದರ್ಗಾದವರ ಪೋ:7259791419 ಪ್ರಕಾಶಕರು: ಅನಾಯ ಪ್ರಕಾಶನ, ಕಟ್ನೂರು, ಹುಬ್ಬಳ್ಳಿ(ತಾ). ಪುಟಗಳು: ೮೦ ಬೆಲೆ: ೯0/- _________________________ “ಗಾಂಧಿ ನೇಯ್ದಿಟ್ಟ ಬಟ್ಟೆಯ ಬಿಡಿಸಿದಾಗ….” ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, *”ಗಾಂಧಿ ನೇಯ್ದಿಟ್ಟ ಬಟ್ಟೆ”* ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. “ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ ಶವಗಳ ದಿಬ್ಬದಂತಿದ್ದವು“ …ಎಂದು ಪ್ರಾರಂಭವಾಗುವ ‘ಬಿಟ್ಟು ಹೋದವರ ಚರಮಗೀತೆ’ ಎಂಬ ಕವಿತೆಯಿಂದ ಆರಂಭವಾಗುವ ಸಾಲುಗಳು, ತುಳಿತಕ್ಕೊಳಪಟ್ಟವರ ಪರವಾಗಿ, ಶೋಷಿಸುವವರ  ವಿರುದ್ಧವಾಗಿ ತಣ್ಣನೆಯ ಬಂಡಾಯದ ಬೂದಿ ಮುಚ್ಚಿದ ಕೆಂಡದಂತಿರುವ, ತಾಕಿದರೆ ಸುಡುವ ಸತ್ಯಗಳನ್ನು ಸಾರುವ, ಬೀಸುವ ಗಾಳಿಗೆ ಎದೆಯೊಡ್ಡಿ ಉರಿವ ಕಂದಿಲಿನಂತೆ ಭಾಸವಾಗುತ್ತದೆ. ಅನನ್ಯ ನುಡಿಗಟ್ಟುಗಳೊಂದಿಗೆ, ವಿಭಿನ್ನ ಶೀರ್ಷಿಕೆಗಳೊಂದಿಗೆ, ಅಂತರಂಗದ ಆಲಯಕ್ಕೆ ಸುಲಭವಾಗಿ ಬಿಟ್ಟುಕೊಳ್ಳುವ ರಾಯಸಾಬರ ಕವಿತೆಗಳು, ಅಷ್ಟು ಸುಲಭಕ್ಕೆ ಹೊರಹೋಗಲು ಬಿಡದೆ ಕಾಯ್ದುಕೊಳ್ಳುತ್ತವೆ, ಕಾಡುತ್ತವೆ, ಮತ್ತು ಚಿಂತನೆಗೆ ಹಚ್ಚುತ್ತವೆ. ಓದುಗನ ಮನದಲ್ಲಿ ಚಿಂತನೆಯನ್ನು ಬಿತ್ತುವ ಇಂತಹ ಕವಿತೆಗಳಿಂದಲೇ ಪ್ರಸ್ತುತ ಸಂಕಲನ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ. “ದುಡಿದು ದಣಿದ ದೇಹವೀಗ ಬಿಸಿಲು ಬೆನ್ನ ಮೇಲೆ ಹೊತ್ತು ಊರಾಚೆ ಗುಡ್ಡದಲ್ಲಿ ಮುಳುಗಿಸಿ“ (ದುಡಿಮೆ ದಣಿವು ಸಾರಾಯಿ) ಹಾಗೂ “ಕಾಲು ಮುರಿದು ಬಿದ್ದ ನೆರಳು” ಇಂತಹ ರೂಪಕ, ಪ್ರತಿಮೆಗಳನ್ನು ಕಾವ್ಯದಲ್ಲಿ ಸಮರ್ಪಕವಾಗಿ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. “ಕವಿತೆಯು ಎಂದೆಂದಿಗೂ ಸಾಯುವುದಿಲ್ಲ ಬದಲಾಗಿ ಬಸಿರಾಗುತ್ತವೆ“ (ಕವಿತೆಯ ಬಸಿರು) ಕವಿತೆಗಳು ಹುಟ್ಟುವ ಪರಿಯನ್ನು ತನ್ನದೇ ರೀತಿಯಲ್ಲಿ ದಾಖಲಿಸುವ, ರಾಯಸಾಬರವರ ರಚನೆಗಳನ್ನು ಓದುವಾಗ, ಸರಳ ಭಾಷೆ ಬಳಸಿ, ಮಾರ್ಮಿಕವಾಗಿ ಕವಿತೆ ಬರೆದರೆ… ಹೀಗೆ ಬರೆಯಬೇಕು ಅನಿಸಿವುದಂತು ಸತ್ಯ. “ಕನ್ನಡಿಯಲ್ಲಿ ನನ್ನದಲ್ಲದ ಬಿಂಬ ಕೇಕೆ ಹಾಕಿ ಕಣ್ಣೀರು ಬರುವಂತೆ ನಗುತಿದೆ ಆದೆಷ್ಟು ಸಲ ಕನ್ನಡಿಯನ್ನು ಯಾಮಾರಿಸಿದ್ದೇನೆ…” (ಮುಖವಾಡವಿಲ್ಲದ ಆ ದಿನ) ಇಂದಿನ ಜಗತ್ತಿನಲ್ಲಿ ಮುಖವಾಡವಿಲ್ಲದೆ, ಸತ್ಯಸಂಧನಾಗಿ, ನಿಸ್ವಾರ್ಥಿಯಾಗಿ ಬದುಕುವುದು ಎಷ್ಟು ಕಷ್ಟ ಎಂಬುದನ್ನು ವಾಸ್ತವಿಕ ನೆಲೆಯಲ್ಲಿ ಚರ್ಚಿಸುವ, ಅದರ ಕಾರಣ ಪರಿಣಾಮಗಳನ್ನು ವಿಶ್ಲೇಷಿಸುವ, ಬದುಕಿನ ತಲ್ಲಣಗಳಿಗೆ ತುಡಿಯುವ, ಮುಖಾಮುಖಿಯಾಗುವ – ‘ಮಾನವೀಯತೆ ಮಾರಾಟ’, ‘ಆತ್ಮ ನಿವೇದನೆ’, ‘ಬೆಳಕು ಕೊಲೆಯಾದ ರಾತ್ರಿ’, ‘ಒಂದು ಕವಿತೆಯ ಬದಲಾಗಿ’ ಈ ತೆರನಾದ ಸಾಂದರ್ಭಿಕ ಕವಿತೆಗಳು ಅರ್ಥಪೂರ್ಣ ರಚನೆಗಳಾಗಿ ರಾಯಸಾಬರ ಲೇಖನಿಯಿಂದ ಅನಾಯಾಸವಾಗಿ ಹೊರಹೊಮ್ಮಿವೆ. “ಶ್…! ಮತ್ಯಾರೋ ಬಾಗಿಲನ್ನು ಬಡಿಯುತ್ತಿದ್ದಾರೆ ಬರಿದಾಗ ಭಾವನೆಗಳನ್ನು ತುಂಬಬೇಕು ಹೊಸಬಳಂತೆ ನಟಿಸುವುದನ್ನು ಅಭ್ಯಾಸಿಸಬೇಕು ಅತ್ತು ಅತ್ತು ಉಪ್ಪುಗೊಂಡ ಮುಖವನ್ನೊಮ್ಮೆ ತೊಳೆದು ಮೇಕಪ್ಪು ಮೆತ್ತಬೇಕು ನಾನಿನ್ನು ಮತ್ತೆ ತುಂಬ ಬಿಜಿ…” (ದೀಪವಿಲ್ಲದ ಕೋಣೆಯೊಳಗೆ) ಕೇವಲ ಒಬ್ಬ ಹೆಣ್ಣಿಗೆ ಮಾತ್ರ ಬರೆಯಲು ಸಾಧ್ಯವಾಗುವ, ಹೆಣ್ಣಿನ ಮಾನಸಿಕ ತೊಳಲಾಟದ ವಸ್ತುವಿರುವ ಈ ಮೇಲಿನ ಕವಿತೆ, ಕವಿಯ ಸ್ತ್ರಿ ಸಂವೇದನೆಯ ಪರವಾಗಿ, ಅಂತಃಕರಣ ಮತ್ತು ಕಾಳಜಿಗೆ ಸಾಕ್ಷಿಯಾಗಿ…. ‘ಕ್ಯಾಲೆಂಡರಿನ ಕೆಂಪು ಗೆರೆಗಳು’, ‘ಬೀದಿಗೆ ಬಿದ್ದವಳು’ ಇದೆ ಸಂವೇದನೆಯ ಕವಿತೆಗಳ ಸಾಲಿನಲ್ಲಿ ನಿಲ್ಲುತ್ತವೆ. ಪ್ರೇಮ ಎಂಬ ಎರಡೂವರೆ ಅಕ್ಷರದ ಮೋಡಿಗೆ ಈಡಾಗದ ಕವಿಗಳೇ ವಿರಳ. ಪ್ರಾಯಶಃ ಇಲ್ಲದಿರಲೂಬಹುದು. ಅಂತಹ ಪ್ರೇಮದ ಪರಿಭಾಷೆಯ,ಉತ್ಕಟ ಮನೋಭಾವದ, ಹೃದಯ ವೇದನೆಯ,  ನಿದರ್ಶಕ ಕವಿತೆಗಳಾದ ಹಕೀಕತ್ತು, ನಮ್ಮಿಬ್ಬರ ಇತಿಹಾಸ, ಗೋಡೆಗಂಟಿದ ಮಾತುಗಳು, ಆ ಸಂಜೆ, ಮಾನವೀಯತೆ ಮಾತನಾಡಲಿ, ಕಾಲತೀತ, ಸುಳ್ಳು ಸಾಕ್ಷಿ, ರೀಚಾರ್ಜ್ ಖಾಲಿಯಾದ ದಿನ, ರೆಕ್ಕೆಗಳು ಕವಿತೆಗಳ ಮೂಲ ದ್ರವ್ಯವಾದ ಪ್ರೇಮ ಒಂದೆಯಾಗಿದ್ದರೂ, ಸಂಗತಿಗಳು, ಭಾವಗಳು ವಿಧವಿಧವಾಗಿ, ಪಕ್ವ ಪ್ರೇಮದ ಕುರುಹುಗಳಾಗಿ ಸಂಕಲನದ ಉದ್ದಕ್ಕೂ ಕರಚಾಚುತ್ತವೆ. “ಕವಿಯ ಮಾತು ಕೇಳಿ ಕವಿತೆ ಕೆಟ್ಟಿತು ಕವಿತೆ ಬಡೆದುಕೊಂಡ ಡಂಗೂರಕ್ಕೆ ಕವಿಪಾದ ಸೆರೆವಾಸ ಇಣುಕಿತು ಇದೆಲ್ಲವನ್ನು ಬರೆದ ಪೆನ್ನು ಮಾತ್ರ ನಿನ್ನೆ ಬರೆದು ಮುಚ್ಚಿದ ಕವಿತೆಯ ಒಡಲು ಹೊಕ್ಕು ಜೊಂಪು ಹತ್ತಿತು…” (ಕವಿತೆಗೇನು ಕೆಲಸ) ಸಮಾಜದ ಒರೆಕೋರೆಗಳನ್ನು ತಿದ್ದಲು ಹೋರಾಟ ಕವಿಯ ಇಂದಿನ ದಾರುಣ ಪರಿಸ್ಥಿತಿಯನ್ನು ಕವಿತೆ ಸೂಕ್ಷ್ಮವಾಗಿ ಸಾರಿದೆ. ಸಂಕಲನಕ್ಕೆ ಶೀರ್ಷಿಕೆಯಾದ ‘ಗಾಂಧಿ ನೇಯ್ದಿಟ್ಟ ಬಟ್ಟೆ‘ ಎಂಬ ಕವಿತೆ… “ಬಣ್ಣಗಳೀಗ ಜಾತಿಗಳಾಗಿ ಮಾರ್ಪಟ್ಟಿವೆ ಹೊತ್ತು ಮುಳುಗುವ ಹೊತ್ತಿನಲಿ ನೆತ್ತಿ ಮೇಲೆ ಇಟ್ಟ ಕತ್ತಿಗೂ ಒಂದು ಜಾತಿಯ ನಂಟಿದೆ…” ….ಎನ್ನುತ್ತ, ಗಾಂಧಿ ನೇಯ್ದಿಟ್ಟ ಬಟ್ಟೆಗೂ ಜಾತಿಯ ಬಣ್ಣ ಮೆತ್ತಿದೆ. ಇಂದಿನ ಧರ್ಮಗಳ ಕಲುಷಿತ ವಾತಾವರಣದ ಕುರಿತಾದ ವಿಡಂಬನೆ ಇಲ್ಲಿ ಕಂಡುಬಂದರೆ, ‘ಈ ದೇಶಕ್ಕೆ ಏನಿದ್ದರೇನು? – ನೀನೆ ಇಲ್ಲವಲ್ಲ ಗಾಂಧಿ!’ ಎಂದು, ಬಾಪುವಿನ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಪಟವನ್ನು ಮೊಳೆಗೆ ತೂಗು ಹಾಕಿ, ಸತ್ಯ-ನ್ಯಾಯ-ನೀತಿಗಳ ಕೊಲೆಗೈದು, ಅಂಧಕಾರ ಕವಿದ ವ್ಯಥೆಯ ಚಿತ್ರಣವನ್ನು ಕಾಣಬಹುದು. ‘ಅವನನ್ನು ಕ್ಷಮಿಸಿ’ ಎಂಬ ಕವಿತೆ ಮುಸ್ಲಿಮೇತರರನ್ನು ಸ್ವರ್ಗ ನರಕಗಳ ಖುರಾನಿನ ವಿವರಣೆಗಳೊಂದಿಗೆ ಸಂವಾದಿಸುತ್ತ, ಸಮರ್ಥಿಸಿಕೊಳ್ಳುತ್ತ, ಡೋಂಗಿ ಮುಸಲ್ಮಾನರ ವಿಡಂಬಿಸುತ್ತ …. “ನಿಮಗಿಂತ ಮೊದಲೇನಾದರೂ ಸತ್ತರೆ ನನ್ನನ್ನು ಖಬರಸ್ಥಾನಕ್ಕೆ ಹೊತ್ತೊಯ್ಯಬೇಡಿ ಮಣ್ಣಲ್ಲಿ ಆಡಲು ಬಿಡದ ನನ್ನಮ್ಮ ಮೈಮೇಲೆ ಮಣ್ಣು ಹಾಕಲು ಒಪ್ಪಲಾರಳು ಮಣ್ಣಲ್ಲಿ ಕೊಳೆತು ಹೋಗುವ ಭಯವೋ ನನ್ನಲ್ಲಿಯೂ ಇದೆ ಅಮ್ಮನ ಹೆರಿಗೆಯಾದ ಆಸ್ಪತ್ರೆಗೆ ನನ್ನನ್ನು ಕಳುಹಿಸಿ ಬಣ್ಣ ಗುರುತಿಸದವನ ಕಣ್ಣಾಗಿ ಇರುತ್ತೇನೆ ಕಲಿಯಲು ಬಂದವರಿಗೆ ನಿತ್ಯ ಪಾಠವಾಗುತ್ತೇನೆ“ ….ಎಂದು, “ದೇಹ ದಾನ”ದ ಮಹತ್ತರ ಸಂದೇಶ ನೀಡುವ ಕವಿತೆ ಮಹತ್ವ ಪಡೆದುಕೊಳ್ಳುತ್ತದೆ. ಬಹುಶಃ ಬುದ್ಧನನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅಂತೆಯೇ, ಬುದ್ಧನ ಬಗೆಗೆ ಕವಿತೆ ಬರೆಯದ ಕವಿಯೂ ಇರಲಾರರೇನೊ! ಅದಕ್ಕೆ ರಾಯಸಾಬರು ಹೊರತಾಗಿಲ್ಲ. “ರಾಮಕೃಷ್ಣ ಪರಮಹಂಸರು” ಹೇಳುವಂತೆ: ದರ್ಶನಾದಿ ಶಾಸ್ತ್ರಗಳಿಗಿಂತ ಸಂಗೀತ ಮಹತ್ತರವಾದುದು, ಸಂಗೀತಕ್ಕಿಂತ ಮೋಹಕವಾದುದು ಯುವತಿಯ ಮುಖದರ್ಶನ. ಆದರೆ ಹಸಿವು ಕಾಡಿದಾಗ ಮನುಷ್ಯನಿಗೆ ಶಾಸ್ತ್ರ, ಸಂಗೀತವಾಗಲಿ, ಸೌಂದರ್ಯವಾಗಲಿ ಮುಖ್ಯ ಎನಿಸದು. ಹೀಗೆ, ಬುದ್ಧನನ್ನು ನೆಪವಾಗಿಸಿ ಹಸಿವನ್ನು ಸಾಕ್ಷಾತ್ಕರಿಸುವ ಕವಿತೆ ಮಾನವೀಯ ನಿಲುವನ್ನು ಹೊಂದಿದೆ. ‘ಜೇಡರ ಬಲೆಯ ದಿಗ್ಬಂಧನ’ ದಂತಹ ಕವಿತೆ, ಹೆಣ್ಣಿನ ಮೇಲಿನ ಅತ್ಯಾಚಾರದ ಕರಾಳ ಛಾಯೆಗೆ ಹಿಡಿದ ಕನ್ನಡಿಯಾಗಿ ಬಿಂಬಿತವಾಗಿದೆ. “ಹಾರುತ್ತೇವೆಂದು ರೆಕ್ಕೆ ಕತ್ತರಿಸಬೇಡಿ, ನಾವು ಈಗೀಗ ಮೈ ಮುರಿದು ಈಜುವುದನ್ನೂ ಕಲಿತಿದ್ದೇವೆ.” ಒಟ್ಟಾರೆಯಾಗಿ, ರಾಯಸಾಬ ದರ್ಗಾದವರ ಕವಿತೆಗಳಲ್ಲಿ “ಖಲೀಲ್ ಗಿಬ್ರಾನ್” ನ ಕಾವ್ಯಸತ್ವ ಮತ್ತು “ಸಾದತ್ ಹಸನ್ ಮಾಂಟೋ” ವಿನ ಕತ್ತಿಯ ಅಲುಗಿನ ಪ್ರಖರತೆ ಪ್ರಕಾಶಿಸುತ್ತದೆ ಎಂದರೆ, ಅತಿಶಯೋಕ್ತಿ ಆಗಲಾರದು. ಉಪಸಂಹಾರ: “ಸಂಜೆಗತ್ತಲಿನಲ್ಲಿ ಹುಟ್ಟಿಕೊಂಡ ಕವಿತೆಯು ಅದೇ ಬಣ್ಣದಿಂದ ಬರೆದುಕೊಳ್ಳುತ್ತಿತ್ತು ಓದುವವ ಮಾತ್ರ ಅಸಹಾಯಕ ಆಗತಾನೆ ಮೂಡುತ್ತಿದ್ದ ನಕ್ಷತ್ರಗಳ ಮಿನುಗು ಸಂಜೆ ಕವಿತೆಯಲ್ಲೂ ಭರವಸೆ ಹುಟ್ಟಿಸಿರಬೇಕು.” ಹೌದು! ನಿಜಕ್ಕೂ ಗಾಂಧಿ ನೇಯ್ದಿಟ್ಟ ಬಟ್ಟೆ ಸಂಕಲನದ ಕವಿತೆಗಳು ಭರವಸೆ ಮೂಡಿಸಿವೆ. ರಾಯಸಾಬ ಎನ್. ದರ್ಗಾದವರು, ಮತ್ತಷ್ಟು ಸತ್ವಯುತ, ಜೀವಂತಿಕೆವುಳ್ಳ ಗಟ್ಟಿ ಕಾವ್ಯವನ್ನು ರಚಿಸುವುದರ ಮೂಲಕ ಉತ್ತಮ ಕವಿಯಾಗಬಲ್ಲ ಭರವಸೆಯನ್ನು ಹುಟ್ಟುಹಾಕಿದ್ದಾರೆ. “ಕರ್ನಾಟಕ ಸರ್ಕಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಕೃತಿ” ಇದಾಗಿದ್ದು, ಭವಿಷ್ಯದಲ್ಲಿ ಬೆಳಗಬಲ್ಲ ಶುಭ ಕೋರುತ್ತಾ… =========================  ಜಬೀವುಲ್ಲಾ ಎಮ್. ಅಸದ್.

ಗಾಂಧಿ ನೇಯ್ದಿಟ್ಟ ಬಟ್ಟೆ Read Post »

ಪುಸ್ತಕ ಸಂಗಾತಿ

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು

ಪುಸ್ತಕಸಂಗಾತಿ ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು ಡಾ. ರಮೇಶ್ ಕತ್ತಿ ಬಾಲ್ಯದಿಂದಲೂ ಅಳವಡಿಸಿಕೊಂಡಿರುವ ಅಧ್ಯಯನ ಶಿಸ್ತು, ಸಾಹಿತ್ಯ-ಸಾಂಸ್ಕೃತಿಕ ಕೂಟಗಳ ಒಡನೆ ನಡೆಸಿದ ಅನುಸಂಧಾನಗಳು ಈ ಕೃತಿಗೆ ಮೂಲ ಶ್ರೋತವಾಗಿವೆ.      ಈ ಕವನ ಸಂಕಲನದಲ್ಲಿ 27 ಕವನಗಳಿವೆ. ಏನನ್ನು ಹೇಳುವುದಿಲ್ಲ, ಕಲ್ಯಾಣ ಕ್ರಾಂತಿ, ಏನೋ ಹೇಳುವುದಿದೆ, ನೋಟ, ಕಾಡು, ಕುಸುಮ, ಹೂ- ಮುತ್ತು, ಉಪ್ಪಿನ, ಚಿತ್ರ ಪರದೆ, ಕಾಣದ ಚಂದ್ರ, ಹಕ್ಕು, ಮೌನ ಪ್ರಶ್ನೆ, ಗೀಗೀ ಗಾರುಡಿಗನಿಗೆ,ನಲವತ್ತಕ್ಕೆ ಚಾಲಿಸು, ಹುಡುಗಿಯರ ಗುಂಪಿನೊಳಗೆ, ಮಗಳು ಹುಟ್ಟಿದಳು, ಮಹಾಮಳೆಗೆ ನಲುಗಿದವರು, ಬಯಸಲಾರೆ, ಮನೆಯನೆಂದು ಕಟ್ಟದಿರುಯ ಮತ್ತು ಇನ್ನಷ್ಟು ಹನಿಗವನಗಳು ಸಂಕಲನದಲ್ಲಿ ಸಂಗ್ರಹಗೊಂಡಿವೆ.          ಇಂದಿನ ಶಿಕ್ಷಿತ ಜಗತ್ತಿನ ಜನರ ಆತ್ಮವಂಚನೆಯನ್ನು ವಸ್ತುವಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮತ್ತು ಸಾಮಾಜಿಕ ಅಧೋಗತಿಗೆ ಸಂಕೇತವಾಗಿದೆ ಕವಿತೆ.    ಮೆತ್ತನೆಯ ಸಿಹಿ ಮಾತುಗಳು ನಿತ್ಯಉಗಳುವ    ವಾಗ್ಮಿಗಳ ಮಧ್ಯ    ಕನಿಕರದಿ ಮಾತನಾಡುವವರ ಮಧ್ಯೆ    ತನ್ನ ಇಷ್ಟಕ್ಕೆ ಮಾತು ಕೃತಿ ಎಲ್ಲ ವಿರಬೇಕು    ಎನ್ನುವವರ ಮಧ್ಯೆ    ಮಾತು ಕರಗುತ್ತದೆ.                            (ಏನನ್ನು ಹೇಳುವುದಿಲ್ಲ) ಮೃದು ನುಡಿಗಳು ಮನ ನೋಯಿಸದೆ ಇರಲು, ಎದುರಿಗೆ ಇರುವವರನ್ನು ಸಂತೋಷಗೊಳಿಸಲು ಮಾತ್ರ ಬಳಕೆಯಾಗುತ್ತಿರುವುದು ಮೇಲಿನ ಕವನದಲ್ಲಿದೆ. ಹಾಗೆಯೇ ಮಾತಿನ ದುರುಪಯೋಗ ಆಗುತ್ತಿರುವ ಬಗ್ಗೆ ಕವಿಗಿರುವ ಕಳವಳವನ್ನು ಹೇಳುತ್ತವೆ ಈ ಸಾಲುಗಳು.    ………….. ಎಲ್ಲವನ್ನೂ ಗುತ್ತಿಗೆ    ಪಡೆದವರಲ್ಲಿ ಮಾತು–ಕೃತಿ ಎರಡು ವ್ಯರ್ಥ                              (ಏನನ್ನು ಹೇಳುವುದಿಲ್ಲ)       ಕವಿ ನುಡಿಯ ನಯವಂಚನೆ ಆಗುತ್ತಿರುವ ಬಗ್ಗೆ ಎಷ್ಟು ಸೂಕ್ಷ್ಮಸಂವೇದಿ ಆಗಿದ್ದಾನೆ ಎಂಬುದಕ್ಕೆ ಮೇಲಿನ ಎರಡು ಸಾಲುಗಳು ಸಾಕ್ಷಿ.    ಸುಖವನ ರಿಸಿದ ಬೆಳಕು ಕವಿತೆಯ ಸಾಲುಗಳಲ್ಲಿ          “ಬೆಳಕೆಂಬುದು ಸುಖದ ಸಂಗತಿ            ಈ ಸುಖದ ಸೆಲೆಗೆ ಜೀತ ವಾದವರು“                          (ಸುಖವನ ರಿಸಿದ ಬೆಳಕು) ಎಂಬ ಪ್ರಭಾವಶಾಲಿ ಸಾಲುಗಳ ಮೂಲಕ ಕವಿಯ ಆಂತರ್ಯ ಅಭಿವ್ಯಕ್ತಗೊಳ್ಳುತ್ತದೆ.        ಶರಣ ಚಳುವಳಿಯ ಋಜುತ್ವ ಕ್ಕೆ ಜಗದೇವ ಮಲ್ಲಿಬೊಮ್ಮಯ್ಯರು ಸಾಕ್ಷಿಯಾಗುವ ಸನ್ನಿವೇಶದ ವಸ್ತು ಹೊಂದಿರುವ ಈ ಕವನದ ಸಾಲುಗಳು ಕಲ್ಯಾಣ ಕ್ರಾಂತಿಯ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.           ಎಲ್ಲಿದ್ದರೋ ಶರಣ ಭಟರು           ಜಗದೇವ ಮಲ್ಲಿಬೊಮ್ಮಯ್ಯರು           ಬಿಜ್ಜಳನ ಠಾವ ಶೋಧಿಸಿ          ಶರಣರ ಅವಧಿಯ          ಪ್ರತಿಕಾರವನ್ನು ಬಯಸಿ ಬಿಮ್ಮನೆ          ಶರಣರು ಬಂದರು.          ಬಿಜ್ಜಳನ ವಧೆಯ ಪವಡಿಸಿ ಮೆಲ್ಲಗೆ          ದೂರ ಸರಿದರು.                           (ಕಲ್ಯಾಣ ಕ್ರಾಂತಿ).          ಒಂದೆಡೆ ಏನನ್ನು ಹೇಳುವುದಿಲ್ಲ ಎನ್ನುತ್ತಲೇ ಕವಿ ನೆಲದ ನಾಡಿನ ನಾಗರಿಕರಾಗಿ ಮಕ್ಕಳಿಗೆ ಹೀಗೆ ಹೇಳುತ್ತಾರೆ.        “ಮಿತ್ಯ- ಸತ್ಯವಾಗುವ ಸತ್ಯ-ಮಿಥ್ಯವಾಗುವ ಬಗೆಯನ್ನು ಮಕ್ಕಳಿಗಾಗಿ ಬರೆದ “ಏನೋ ಹೇಳುವುದಿದೆ” ಕವನದಲ್ಲಿ ವಿವರಿಸುತ್ತಾರೆ.         ಇಲ್ಲಿ ಪ್ರಸ್ತಾಪಿಸಲೆಬೇಕಾದ ಕವಿ-ಸಹೃದಯ, ವಿಮರ್ಶಕ ಎಲ್ಲರಿಗೂ ಕ್ಷಣಹೊತ್ತು ಹಿಡಿದು ನಿಲ್ಲಿಸುವ ಈ ಕವನದ ಗಮನಾರ್ಹ ಸಾಲುಗಳು ಮುಂದಿವೆ. ಸಾವಿರದ ಗೀಗೀ ಪದಗಳ ಮೋಡಿಕಾರ ಕಡಣಿ   ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಓದಿದವರಿಗೆ, ಕಲ್ಲಪ್ಪ ಕವಿಯ ಪರಿಚಯಸ್ಥರಿಗೆ ಮತ್ತು ಸಹೃದಯರಿಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ತನ್ನ ಊರಿನ ಅಭಿಜಾತ ಜಾನಪದ ಕವಿಯ ಕುರಿತು ಲೇಖಕನೊಬ್ಬನಿಗೆ ಇರುವ ಅಭಿಮಾನದ ಹೊಳೆ ಹರಿದು ಕಣ್ಣಂಚಿನಲ್ಲಿ ನೀರೂರಿಸಿಕೊಂಡು ಬರೆದಿರಬಹುದಾದ ಈ ಕವನ ಓದುಗನ ಮನೋಸಾಗರದಲ್ಲಿ ಸಂಚಲನ ಮೂಡಿಸುತ್ತದೆ. “ಪದಗಳ ಗಂಟುಕಟ್ಟಿ, ಗಂಟುಗಳ ರಾಶಿ ಇಟ್ಟವ,   ಸಾವಿರ ಪದಕಟ್ಟಿ ಹಾಡಿದವ ಸಾವಿರದ ಈ   ಪದಗಾರ“                                   (ಗೀ ಗೀ ಗಾರುಡಿಗನಿಗೆ) ಎಂದು ಸಂಬೋಧಿಸಿ ಈ ಜಾನಪದ ಜಂಗಮನಿಗೆ ಅಮರನಾಗಿಸುವ ಪ್ರಯತ್ನ ಮಾಡಿದ್ದಾರೆ. ಪದಗಳ ಸರದಾರ ಕಡಣಿ ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಒಂದು ಬಯೋಪಿಕ್ ನಂತೆ ಭಾಸವಾಗುತ್ತದೆ. ಹೀಗೆ ಹೇಳಿ ಈ ಜಾನಪದ ಜಂಗಮನಿಗೆ ಸಾವು ಇಲ್ಲ ಎಂಬ ಸಂದೇಶ ಕೊಡಲು ಯತ್ನಿಸುತ್ತಾರೆ ಕವಿ.       ಮನೆಯ ಹಿರಿಯಜ್ಜಿಯಿoದಾದಿಯಾಗಿ ಅಪ್ಪ-ಅವ್ವ ಅಷ್ಟೇಕೆ ಅರ್ಧಾಂಗಿ ಕೂಡ ತಾನು ಹೆತ್ತ ಹೆಣ್ಣು ಮಗುವನ್ನು ಕಂಡು ಮುಳು ಮುಳು ಅಳುತ್ತಿದ್ದ ಅಂದಿನ ನೆನಪು ಮಾಡಿಕೊಳ್ಳುತ್ತಾರೆ ಕವಿ. ಆದರೆ ಈಗ ಅದೇ ಮಗಳು ಮನೆಗೆ ನೆಮ್ಮದಿ ತಂದಿದ್ದಾಳೆ.    ಯಾರಿಗೂ ಕಾಡದ ತನ್ನವರಿಗೆ ಪ್ರೀತಿ ಹಂಚಿದ    ನೋಟದಲಿ, ಆಟದಲಿ ಮನಗೆದ್ದು ಸೈ ಎನಿಸಿ    ಸಂಭ್ರಮದಿ ಮನೆಮಾಡಿದ ಮಗಳು.                                      (ಮಗಳು ಹುಟ್ಟಿದಳು)     ಹೆಣ್ಣಿನ ಕುರಿತು ತನ್ನ ಪ್ರಜ್ಞೆ ಸಾಂಪ್ರದಾಯಿಕ ವಲ್ಲ,ಎಂಬುದನ್ನು ಕವಿ ಮೇಲಿನ ಸಾಲುಗಳಲ್ಲಿ ದಾಖಲಿಸುತ್ತಾರೆ.       ತನ್ನ ಕವಿತೆ ಎಂಥದ್ದು? ಎಂಬುದನ್ನು ಕವಿ ಹೀಗೆ ವಿವರಿಸುತ್ತಾರೆ.       ಬಯಲನೆ ಹೂ       ನೀ       ಧರೆಗೆ ಮುತ್ತಿಕ್ಕಿದ       ಧರೆಯ ಹಾಡಿದು                        (ಹೂ–ಮುತ್ತು)     ರಮೇಶ್ ಕತ್ತಿಯವರ “ಏನನ್ನು ಹೇಳುವುದಿಲ್ಲ”ಸಂಕಲನದ ಕವನಗಳ ಕುರಿತು —————-“ಈ ಕವಿತೆಗಳು ಮನುಷ್ಯತ್ವವನ್ನು ಕಳೆದುಕೊಂಡ ಜನರ ಹೃದಯದಲ್ಲಿ ಮಾನವೀಯತೆಯ ಪ್ರೀತಿ-ಪ್ರೇಮದ ಗುಟುಕನ್ನು ಹನಿಸುವ ಗುಣ ಹೊಂದಿವೆ,” ಕಾವ್ಯ ಕಟ್ಟುವ ತಂತ್ರದಲ್ಲಿ ರಮೇಶ್ ಕತ್ತಿಯವರಿಗೆ ಲಭಿಸಿದ ‘ಹದ’ ಅವರ ಲೇಖನಿಯಿಂದ ಇನ್ನಷ್ಟು ಕವನ ಸಂಕಲನ ತರುವ ಭರವಸೆ ಕೊಡುತ್ತದೆ. ಎನ್ನುತ್ತಾರೆ ಮುನ್ನುಡಿ ಬರೆದ ವಿಮರ್ಶಕಿ ಡಾ. ಸಿ. ಸುಜಾತಾ ಅವರು. ಕನ್ನಡ ಸಾರಸ್ವತ ಲೋಕಕ್ಕೆ ಇದುವರೆಗೆ 15 ಕೃತಿಗಳನ್ನು ಕೊಟ್ಟಿರುವ ರಮೇಶ್ ಕತ್ತಿ ಭೀಮಾತೀರದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಡಿ.ಎಂ. ನದಾಫ್

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು Read Post »

ಪುಸ್ತಕ ಸಂಗಾತಿ

“ಅವತಾರ ಮತ್ತು ಹಾರುವ ಕುದುರೆ “

ಕಲಘಟಗಿಯ ಸಮೀಪದ ಕಾರವಾರ ಸರಹದ್ದಿನ ಕಿರವತ್ತಿಯ ಹತ್ತಿರದ ಬೈಲಂದೂರ ಗೌಳಿವಾಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಹುಡೇದ ಅವರು ಸಾಹಿತ್ಯದ ಓದು ಒಲವಿನ ಸೆಳೆತದಿಂದ ಪರಿಚಿತರಾದವರು.
ನಾಗರಾಜ ಓರ್ವ ಕವಿಹೃದಯದ ಶಿಕ್ಷಕರು. ‘ನಗುವ ತುಟಿಗಳಲ್ಲಿ’ ‘ಭರವಸೆ’ ದೊಡ್ಡವರ ಕವನಸಂಕಲನಗಳನ್ನು ಪ್ರಕಟಿಸಿ ಓದುಗರ ವಲಯಕ್ಕೆ ಹರಿಬಿಟ್ಟಿದ್ದಾರೆ. ಇದಲ್ಲದೆ ತಾವು ಸೇವೆ ಸಲ್ಲಿಸುತ್ತಿರುವ ಆ ಊರಿನ ಗೌಳಿ ಜನಾಂಗದ ಭಾಷೆಯನ್ನು ಅರಿತುಕೊಂಡು ಕನ್ನಡ ಇಂಗ್ಲೀಷ್ ಭಾಷೆಯ ಶಬ್ದಕೋಶವನ್ನು ರಚಿಸಿ ಪ್ರಕಟಿಸಿದ್ದಾರೆ.
ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸಲು ಹಾಗೂ ಪೋಷಿಸಲು ಸ್ವತಃ ‘ ಅರಳು ಮೊಗ್ಗು’ ಎನ್ನುವ ದ್ವೈಮಾಸಿಕ ಮಕ್ಕಳ ಪತ್ರಿಕೆಯನ್ನು ಪ್ರಕಟಿಸುವ ಸಾಹಸಕ್ಕೂ ಕೈ ಹಾಕಿ ಯಶಸ್ವಿಯಾಗಿದ್ದಾರೆ. ದೊಡ್ಡವರು, ಚಿಕ್ಕವರು ಬರೆದ ಕಥೆ,ಕವನಗಳು ಇಂದಿಗೂ ಪ್ರಕಟವಾಗುತ್ತಿವೆ. ಈ ಪತ್ರಿಕೆಯನ್ನು ಯಲ್ಲಾಪೂರ ತಾಲೂಕಿನ ಬಹುತೇಕ ಶಾಲೆಗಳಿಗೂ ತಲುಪಿಸುತ್ತಿದ್ದಾರೆ.
ಇತ್ತೀಚಿಗೆ ಮಕ್ಕಳಿಗಾಗಿ ಹೊಸ ಬಗೆಯ ಕವಿತೆಗಳನ್ನು ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ದಾವಂತ ಮುಂದುವರೆದಿದೆ. ಹೊಸ ಬಗೆಯ ಪುಸ್ತಕಗಳನ್ನು ಓದುತ್ತಾ ಅವುಗಳ ಕುರಿತಾಗಿ ಪರಿಚಯಾತ್ಮಕ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಹೀಗೆ ಓದಿನೊಂದಿಗೆ, ಅಧ್ಯಯನದೊಂದಿಗೆ ಬರವಣಿಗೆ ಸಾಗಿದೆ.
ಇದರ ಜೊತೆಯಲ್ಲಿ ಮಕ್ಕಳಿಗಾಗಿ ಹೊಸ ಬಗೆಯ ಕತೆಗಳನ್ನು ರಚಿಸುತ್ತಿದ್ದಾರೆ ಇವೆಲ್ಲಾ ನಾಗರಾಜ ಹುಡೇದ ಅವರ ಸಾಹಿತ್ಯ ಸಮೃದ್ಧಿಯ ಕೆಲಸಗಳು.
ಹೊಸ ರಚನೆಗಾಗಿ ಹೊಸ ಓದಿಗೆ ನಮ್ಮನ್ನು ನಾವು ತೆರದುಕೊಳ್ಳಬೇಕು ಅಂದಾಗ ಹೊಸಹೊಳವಿನ ಬರವಣಿಗೆಗೆ ಅಣಿಯಾಗಬಹುದು.
ಮಕ್ಕಳ ನಡುವೆ ಸದಾ ಕಳೆಯುವ ನಾಗರಾಜ ಬಿಡಿ ಬಿಡಿಯಾದ ಎಲ್ಲಾ ಕಥೆಗಳನ್ನು ಒಗ್ಗೂಡಿಸಿ ಪ್ರಥಮ ಮಕ್ಕಳ ಕಥಾಸಂಕಲನ ಪ್ರಕಟಿಸಿದ್ದಾರೆ.
ಹದಿಮೂರು ಕಥೆಗಳಿವೆ. ಹತ್ತರಿಂದ ಮೇಲ್ಪಟ್ಟ ವಯೋಮಾನದ ಮಕ್ಕಳ ಓದಿಗೆ ನಿಲುಕಬಲ್ಲ ಕಥೆಗಳಿವು. ಕುತೂಹಲದಿಂದ ಸಾಗುವ ಕತೆಗಳ ಕಥಾತಂತ್ರ, ಬೆರಗುಗೊಳಿಸುವ ಕತೆಗಳ ಶೀರ್ಷಿಕೆಗಳು ಸಂಕಲನದ ವಿಶೇಷತೆ. ಬಹತೇಕ ಕತೆಗಳು ಪರಿಸರದ ಕಾಳಜಿಯನ್ನು ವ್ಯಕ್ತಪಡಿಸುತ್ತವೆ.
‘ಗೂಗಲ್ ಭೀಮಪ್ಪ’ ಈ ಕಥೆಯಲ್ಲಿ ಅಪ್ಪ ತನ್ನ ಮಗನಿಗೆ ತನ್ನ ಬಾಲ್ಯದ ಕತೆ ಹೇಳುವಾಗ ಭೀಮಪ್ಪ ಅಜ್ಜ ಏನೆಲ್ಲಾ ಸಂಗತಿಗಳನ್ನು ಹೇಳಿ ನಗಿಸುತ್ತಿದ್ದ. ಆತ ನಮ್ಮ ಪಾಲಿಗೆ ನಡೆದಾಡುವ ವಿಶ್ವಕೋಶವಾಗಿದ್ದ ಎಂದೆಲ್ಲಾ ವಿಷಯಗಳನ್ನು ಮಗನಿಗೆ ಹೇಳುವ ಬಗೆ ಕುತೂಹಲ ಹುಟ್ಟಿಸುತ್ತದೆ. ಈಗ ಮೊಬೈಲ್ ಆ ಸ್ಥಳವನ್ನು ಆಕ್ರಮಿಸಿಕೊಂಡಿದೆ ಎನ್ನುವ ಅಂಶ ಬದಲಾವಣೆ ಜಗದ ನಿಯಮ ಎನ್ನುವ ಸಂದೇಶ ಸಾರುತ್ತದೆ. ಇವೆಲ್ಲಾ ಮಕ್ಕಳಿಗೆ ಬಲು ಪ್ರೀತಿ ನೀಡುತ್ತದೆ.
ಮಕ್ಕಳ ಹಸಿರು ಪ್ರೀತಿಯ ಅನಾವರಣದ ಬಗ್ಗೆ ” ರಾಪಾ ದಿಬ್ಬ” ಕತೆ ಹೇಳುತ್ತದೆ. ಮಲೆನಾಡಿನ ಬೆಟ್ಟಗಳಲ್ಲಿ ಹಸಿರು ಹೆಚ್ಚಿಸುವ ಪ್ರಯತ್ನ ಇಲ್ಲಿದೆ. ಮಳೆಗಾಗಿ ಮಕ್ಕಳು ಕಪ್ಪೆಯ ಮದುವೆಗಾಗಿ ಕಪ್ಪೆಗಳನ್ನು ಹಿಡಿಯುವುದಕ್ಕಾಗಿ ತಡಕಾಡುವ ಮೋಜಿನ ಸಂಗತಿಗಳನ್ನು ” ಕಪ್ಪೆಗಳ ಮದುವೆ” ಕತೆಯಲ್ಲಿ ಕಾಣಬಹುದು.
” ಮಾತಾಡುವ ಮರಗಳು” ಪ್ಯಾಂಟಸಿಯ ಗುಣಹೊಂದಿರುವ ವಿಶೇಷ ಕಥೆಯಾಗಿದೆ. ಈ ಕತೆಯಲ್ಲಿ ಗಿಡ, ಮರ, ಬಳ್ಳಿಗಳು ಮನುಷ್ಯರಂತೆ, ನಡೆಯಬಲ್ಲವು. ತಮ್ಮದೇ ಆದ ಭಾಷೆಯಲ್ಲಿ ಮಾತಾಡಬಲ್ಲವು. ಮನಸ್ಸಿನ ಭಾವನೆಗಳನ್ನು ತಿಳಿಯಬಲ್ಲವು. ಗದುಗಿನ ಗುಂಡಣ್ಣ ಸಮುದ್ರಯಾಣದಲ್ಲಿ ಬಿರುಗಾಳಿಗೆ ಸಿಕ್ಕು ವಿಚಿತ್ರ ದ್ವೀಪದಲ್ಲಿ ಎಚ್ಚರಗೊಂಡಾಗ ಆಗುವ ವಿಚಿತ್ರ ಘಟನೆಗಳು ಮಕ್ಕಳಿಗೆ ಮೋಜು, ಖುಶಿ ನೀಡುತ್ತವೆ.
“ಯಾರು ಹೆಚ್ಚು” ಇದು ಜನಪದ ಶೈಲಿಯ ಕತೆಯಾಗಿದೆ. ಇಲ್ಲಿಯ ಕತೆಗಳಲ್ಲಿ ಅಜ್ಜನ ಪಾತ್ರ ಸೃಷ್ಠಿಸಿ ಆತನಿಂದಲೇ ಕತೆ ಹೇಳಿಸುವ ಶೈಲಿ ಓದುಗನಿಗೆ ಹಿಡಿಸುತ್ತದೆ.
“ಬಕ್ಕೂ ಅಂದ್ರೆ ಬಕ್ಕೂ” “ಹಾಂ! ಅದೇ ಬಸಪ್ಪ” ” ಬಂಗಾರದ ಸರ” ” ಸೊಂಡಿಲು, ಜಿಂಕೆಗಳ ಮೈ ಮುಟ್ಟೋಣ ಬನ್ನಿ” “ಬಂಗಾಳಿ ಮರ” ಕಬ್ಬಿನ ಗದ್ದೆ ಮತ್ತು ಗೊದ್ದಿರುವೆ” ಓದುಗರಿಗೆ ಮೆಚ್ಚಿಗೆಯಾಗುವ ಹಾಗೂ ಗಮನ ಸೆಳೆಯುವ ಕತೆಗಳಾಗಿವೆ. ಪ್ಯಾಂಟಸಿ, ಜಾನಪದ, ಹಾಗೂ ವಾಸ್ತವ ಅಂಶ ಇರುವ ವೈವಿಧ್ಯಮಯ ಕತೆಗಳಿವೆ.
ಗ್ರಾಮ್ಯ ಭಾಷೆಯ ಸಹಜ ಸಂಭಾಷಣೆಗಳು, ನವೀರಾದ ನಿರೂಪಣೆ ಇವು ಕತೆಗಳ ಸೊಗಸು ಹೆಚ್ಚಿಸಿವೆ. ಸಂತೋಷ ಸಸಿಹಿತ್ಲು ಬರೆದ ಚಿತ್ರಗಳು, ಮುಖಪುಟ ಆಕರ್ಷಕವಾಗಿವೆ.
ನಾಗರಾಜ ಹುಡೇದ ಅವರು ಪ್ರಥಮ ಪ್ರಯತ್ನದಲ್ಲಿ ಮಕ್ಕಳಿಗೆ ಸುಂದರವಾದ ಕತೆಗಳನ್ನು ನೀಡಿದ್ದಾರೆ.
ಮಕ್ಕಳ ಸಾಹಿತ್ಯಕ್ಕೆ ಮುಂಬರುವ ದಿನಗಳಲ್ಲಿ ವಿಭಿನ್ನ ವಿಷಯ ವಸ್ತುಗಳನ್ನು ಹೊತ್ತ ಕತೆಗಳನ್ನು ರಚನೆ ಮಾಡುವಂತಾಗಲಿ. ಉತ್ತಮ ಕೃತಿ ನೀಡಿದ್ದಕ್ಜೆ ಅವರನ್ನು ಅಭಿನಂದಿಸುತ್ತಾ, ಶುಭಕೋರುತ್ತೇನೆ.
– ವೈ,ಜಿ,ಭಗವತಿ ಕಲಘಟಗಿ 9448961199

“ಅವತಾರ ಮತ್ತು ಹಾರುವ ಕುದುರೆ “ Read Post »

ಪುಸ್ತಕ ಸಂಗಾತಿ

ಆದರ್ಶ ಶಿಕ್ಷಕಿಯ ಬಾಲ್ಯದೊಂದಿಗೆ ಮಕ್ಕಳು…

ಮಕ್ಕಳು ಓದಿದ ಟೀಚರ ಡೈರಿ
ಲೇ: ವೈ.ಜಿ.ಭಗವತಿ.
ಪ್ರಕಟಣೆ:೨೦೨೧
ಪುಟಗಳು:೧೧೪
ಬೆಲೆ:೧೧೦ರೂ.
ವಿಜಯಾ ಪ್ರಕಾಶನ.ಪರಿಶ್ರಮ ನಿಲಯ. ಕಲಘಟಗಿ.ಧಾರವಾಡ ೫೮೧೨೦೪. ಮೊ:9448961199

ಆದರ್ಶ ಶಿಕ್ಷಕಿಯ ಬಾಲ್ಯದೊಂದಿಗೆ ಮಕ್ಕಳು… Read Post »

ಪುಸ್ತಕ ಸಂಗಾತಿ

ಮಲ್ಲಿಗೆ ಸಿಂಚನ (ಗಜಲ್ ಹೂದೋಟ

ಪುಸ್ತಕ ಸಂಗಾತಿ ಮಲ್ಲಿಗೆ ಸಿಂಚನ (ಗಜಲ್ ಹೂದೋಟ) ಕೃತಿ ಹೆಸರು…. ಮಲ್ಲಿಗೆ ಸಿಂಚನ (ಗಜಲ್ ಹೂದೋಟ)ಲೇಖಕರು…ಡಾ.ಮಲ್ಲಿನಾಥ ಎಸ್ ತಳವಾರಪ್ರಕಾಶಕರು…ಅನ್ನಪೂರ್ಣ ಪ್ರಕಾಶನ.ಸಿರಿಗೇರಿ ತಾ.ಸಿರುಗುಪ್ಪ ಜಿಲ್ಲಾ ಬಳ್ಳಾರಿ ಮೊ೮೭೬೨೪೭೯೨೧೬ಪ್ರಕಟಿತ ವರ್ಷ ೨೦೨೧ ಸತತವಾದ ಅಧ್ಯಯನ ಶೀಲತೆ,ಉತ್ತಮವಾದ ಬರಹಗಳು,ಹಾಗೂ ಗಜಲ್ ಸಾಹಿತ್ಯ ಬಗ್ಗೆ ಆಳವಾದ ಅಭ್ಯಾಸ, ಗೂಗಲ್ ಮೀಟಗಳಲ್ಲಿ ಗಜಲ್ ಸಾಹಿತ್ಯ ಬಗ್ಗೆ ನಿರರ್ಗಳವಾಗಿ  ಉಪನ್ಯಾಸ ನೀಡಿ ಮೆಚ್ಚಿಗೆಯನು ಗಳಿಸಿದ ಡಾ,ಮಲ್ಲಿನಾಥ ಎಸ್ ತಳವಾರ ಇವರು ಕನ್ನಡ ಉಪನ್ಯಾಸಕರಾಗಿ ನೂತನ ಪದವಿ ಕಾಲೇಜ ಗುಲಬರ್ಗಾ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿ ಯಲ್ಲಿ ಸಾಹಿತಿಗಳಾಗಿ ವಿವಿಧ ಪ್ರಕಾರದ ೧೨ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಕಾವ್ಯ ನಾಮ “ರತ್ನರಾಯಮಲ್ಲ” ಎಂದಿ ಇದ್ದು ಗಜಲ್ ನಲ್ಲಿ “ಮಲ್ಲಿ” ಎಂಬ ತಖಲ್ಲುಸ್ ಬಳಸುತ್ತಿದ್ದಾರೆ.ಗಜಲ್ ಎಂಬುವುದು ಇವರ ಹೃದಯದ ಮಿಡಿತವಾಗಿದೆ ,ಸ್ವಭಾವತಃ ಮೃದು ಸ್ವಭಾವದವರಾಗಿದ್ದು ಗಜಲ್ ಸಾಹಿತ್ಯ ಕ್ಕೆ ಮೋಹಿತರಾಗಿದ್ದಾರೆ.ಮಿರ್ಜಾ ಗಾಲಿಬ್ ಇವರ ನೆಚ್ಚಿನ ಗಜಲ್ ಕವಿಯಾಗಿದ್ದಾರೆ,ಸಂಗಾತಿ ಆನ್ಲೈನ್ ಪತ್ರಿಕೆಯಲ್ಲಿ ಗಜಲ್ ಅಂಕಣಕ್ಕೆ ಲೇಖನಗಳನ್ನು ಬರೆಯುತ್ತಿದ್ದಾರೆ. ಗಜಲ್ ಎಂಬುವುದು ಉದು೯ ಸಾಹಿತ್ಯ ದ ಕಾವ್ಯ ರಾಣಿಯಾಗಿದೆ,ಹೃದಯದ ಭಾವನೆಗಳಾದ ನೋವು ನಲಿವು  ,ಮುನಿಸು,ಕಾಯುವಿಕೆ ಯನ್ನು ವ್ಯಕ್ತ ಪಡಿಸುವ ಕೋಮಲ ಕಾವ್ಯ ಪ್ರಕಾರವಾಗಿದೆ.ಪ್ರೀತಿ ,ಪ್ರೇಮ,ವಿರಹ,ಪ್ರಣಯ ಗಳೊಂದಿಗೆ ನಿರಾಕಾರ ರೂಪಿಯೊಂದಿಗೆ ಮಾತಾಡುವ ,ಲೌಕಿಕ ಪ್ರೇಮ ದಿಂದ ಅಲೌಕಿಕ ಪ್ರೀತಿಯೊಂದಿಗೆ ಮೇಲೇರುವುದು ,ಆಧ್ಯಾತ್ಮಿಕ, ದೇವರೊಂದಿಗೆ ಸಂವಾದಕ್ಕೆ ಇಳಿಯುವುದು ,ಕಾಣದ ಚೇತನವನ್ನು ಹೊಂದುವ ಹಂಬಲ ಇವೆಲ್ಲವೂ ಗಜಲ್ದ ಒಳ ತಿರುಳಾಗಿವೆ.ಇವೆಲ್ಲವನ್ನು  ಧ್ಯಾನಿಸಿ ಡಾ.ಮಲ್ಲಿನಾಥ ಎಸ್ ತಳವಾರ ಅವರು ಗಜಲ್ ಗಳನ್ನು ರಚನೆಮಾಡುತ್ತಿದ್ದಾರೆ.ಈಗಾಗಲೆ “ಗಾಲಿಬ್ ಸ್ಮೃತಿ” ಎಂಬ ಪ್ರಥಮ ಗಜಲ್ ಸಂಕಲನ ಕಳೆದ ವರ್ಷ ಪ್ರಕಟವಾಗಿದೆ.ಇತ್ತೀಚಿಗೆ “ಮಲ್ಲಿಗೆ ಸಿಂಚನ” ಎಂಬ ಗಜಲ್ ಸಂಕಲನವು ಪ್ರಕಟವಾಗಿ ಲೋಕಾರ್ಪಣೆ ಯಾಗಿದೆ. “ಮಲ್ಲಿಗೆ ಸಿಂಚನ” (ಗಜಲ್ ಹೂದೋಟ)ವು ಡಾ.ಮಲ್ಲಿನಾಥ ಎಸ್ ತಳವಾರ ಅವರ ಎರಡನೇ ಗಜಲ್ ಸಂಕಲನ ವಾಗಿದೆ .  ೬೦ ಗಜಲ್ ಗಳ ಗುಲ್ದಸ್ತ ವಾಗಿದೆ.ಇದು ಗಜಲ್ ಬರೆಯುವ ಆಸಕ್ತರಿಗೆ  ಹಾಗೂ ನಿಯಮ ಬದ್ಧವಾಗಿ ರಚಿಸುವವರಿಗೆ  ಇದು ಕಲಿಯುವವರಿಗೆ ಮನದಟ್ಟವಾಗುವಂತೆ ಒಂದು ಉತ್ತಮವಾದ ಮಾರ್ಗದಶಿ೯(ಕೈಪಿಡಿ) ಯಾಗಿದೆ.ಸಂಕಲನದ ಪ್ರಾರಂಭದಲ್ಲಿ ಭಾಷಾ ಬೆಳವಣಿಗೆ ,ಉದು೯ ಸಾಹಿತ್ಯ ದಲ್ಲಿ ಗಜಲ್ ಕಾವ್ಯ ದ ಬೆಳವಣಿಗೆ ಮತ್ತು ಗಜಲ್ ನಲ್ಲಿ ಬಳಿಸುವ “ಗಜಲ್ ಪಾರಿಭಾಷಿಕ ಪದಗಳಾದ” ಮತ್ಲಾ ,ಮಕ್ತಾ,ರದೀಫ್, ಕಾಫಿಯಾನ,ರವಿ,ಮುಂತಾದವುಗಳ ಅರ್ಥ ವಿನ್ಯಾಸ ,ಪದಬಳಿಕೆಯ ಕ್ರಮಗಳ ಬಗ್ಗೆ ಹಿರಿಯ ಗಜಲ್ ಕಾರರ ಗಜಲ್ಗಳನ್ನು ಉದಾಹರಣೆ ಯಾಗಿಸಿಕೊಂಡು ನಿಯಮಗಳನ್ನು ಹೇಗೆ ಪಾಲಿಸಬೇಕೆಂದು,ವಿಧದ ಪ್ರಕಾರಕದ ಗಜಲ್ ಗಳನ್ನು ಹೇಗೆ  ರಚಿಸಬೇಕೆಂದು ಶಿಕ್ಷಕ ವೃತ್ತಿಯ ಅನುಭವದಿಂದ  ಕಲಿಯುವವರಿಗೆ ಮನದಟ್ಟ ವಾಗುವಂತೆ ,ಉಪಯೋಗವಾಗುವಂತೆ ವಿವರವಾಗಿ ವಿವರಿಸಿದ್ದಾರೆ. “ಮಲ್ಲಿಗೆ ಸಿಂಚನ” ಕೃತಿಯು ಸಂಗ್ರಹಣೆಗೆ ಮತ್ತು ಓದಲು ಯೋಗ್ಯವಾಗಿದೆ. “ಮಲ್ಲಿಗೆ  ಸಿಂಚನ” ಗಜಲ್ ಹೂ ದೋಟದಲ್ಲಿ ೬೦ ವಿವಿಧ ಮಲ್ಲಿಗೆ ಸುಮ ಗಳು ತಮ್ಮ ಘಮಲನ್ನು ಹರಡಿ  ಓದುಗರನ್ನು ಮೈಮರೆಸುತಾ ಬಾನಲ್ಲಿ ತೇಲಾಡಿಸುತ್ತವೆ ,ಬಹುಭಾಷಾ ಕವಿ,ಗಜಲ್ ಕಾರರು,ಗಾಯಕರು ಆದ  ಶ್ರೀ. ಪ್ರಕಾಶ್ ಸಿಂಗ್ ರಜಪೂತ್ ವಿಜಯಪುರ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಸಂಕಲನದ ಗಜಲ್ ಗಳು ಓದುಗರಿಗೆ ಮುದನೀಡುತ್ತಾ ಓದಿಸಿಕೊಂಡು ಹೋಗುತ್ತವೆ.ಮಲ್ಲಿನಾಥ ಇವರ ಗಜಲ್ ಗಳಲ್ಲಿ ಗೇಯತೆ ,ಲಯಾ,ಭಾವತೀವ್ರತೆ,ಮೃದು ಭಾಷಾ ಪ್ರಯೋಗ,ಸಮಾಜಿಕ ಕಳಕಳಿ,ಅಧ್ಯಾತ್ಮಿಕ ಚಿಂತನೆ,ಮಹಿಳಾ ಸಂವೇದನೆ,ತಾಯಿಗೆ ಗಜಲ್ ಮೂಲಕ ಕೃತಜ್ಞತೆ ಹೇಳಿದ್ದಾರೆ, ಹಿರಿಯ ಮಹಿಳಾ ಸಾಹಿತಿ ಡಾ.ಗೀತಾ ನಾಗಭೂಷಣ ಮತ್ತು ಹಿಂದಿ ಚಲನಚಿತ್ರ ನಟ ರಷಿ ಕಪೂರ್ ಅವರಿಗೆ ಗಜಲ್ ಮೂಲಕ ಶ್ರದ್ಧಾಂಜಲಿ ಅಪಿ೯ಸಿದ್ದಾರೆ.ಹಿರಿಯ ಗಜಲ್ ಕಾರರ ಸಾನಿ ಮಿಸ್ರಾ ತೆಗೆದುಕೊಂಡು ತರಹೀ ಗಜಲ್ ಗಳನ್ನು ಭಾವಕ್ಕೆ ಧಕ್ಕೆ ಬರದಂತೆ ರಚಿಸಿದ್ದಾರೆ. ಇವು ಅಲ್ಲದೆ ಈ ಸಂಕಲನದಲ್ಲಿ  ಸ್ವರ ಕಾಫಿಯಾ ಗಜಲ್,ಜುಲ್ ಕಾಫಿಯಾ ಗಜಲ್,ಸಂಪೂರ್ಣ ಮತ್ಲಾ ಗಜಲ್,ಸೆಹ್ ಗಜಲ್,ಮಾತ್ರಾಯಾಧಾರಿತ ಗಜಲ್, ಹೀಗೆ ವಿವಿಧ ಪ್ರಕಾರದ ಗಜಲ್ ಗಳನ್ನು ಬರೆದಿದ್ದಾರೆ. ವಿವಿಧ ರೀತಿಯ ಮಲ್ಲಿಗೆ ಹೂ ಗಳನ್ನು ಸೇರಿಸಿ ಒಂದು ಸುಂದರವಾದ ಮಲ್ಲೆ ಮಾಲೆ ತಯಾರಿಸಿ ಓದಿಗರಿಗೆ ಆಸ್ವಾದಿಸಲು ಕೊಟ್ಟಿದ್ದಾರೆ. ನನಗೆ ಇಷ್ಟವಾದ ಕೆಲವು ಗಜಲ್ ಗಳ ಮಿಸ್ರಾ ಗಳು ನನ್ನ ಪ್ರೀತಿ ಯನು ಅರಿಯದೆ ಹೋದೆನೀನು ಅದೃಷ್ಟವನ್ನು ನಂಬಿ ನಿನಗಾಗಿ ಕಾಯುತಿರುವೆ  (ಗ ೨) ಇದು ಒಂದು ಭಗ್ನ ಪ್ರೇಮಿಯ ಹೃದಯದ ಅಳಲನ್ನು ಬಿತ್ತರಿಸುವ ಗಜಲ್ ಆಗಿದೆ ನೋವಿನ  ತೀವ್ರತೆ ಎದ್ದು ಕಾಣುತ್ತದೆ, ಪ್ರೀತಿಸಿದ ಹುಡುಗಿ(ಹುಡುಗ) ನಿಜವಾದ ಪ್ರೀತಿಯನು ಅರಿಯದೆ ಪ್ರೇಮಿಯನ್ನು ಧಿಕ್ಕರಿಸಿ ಹೋದಾಗ ಆಗುವ ನೋವಿನ ಪರಿ ಇದು ,ಅವಳು ತೊರೆದು ಹೋಗಿದ್ದರೂ ಹುಚ್ಚು ಮನಸ್ಸು ಬರುವಿಗಾಗಿ ಕಾಯುತ್ತದೆ ,ಅದು ಅದೃಷ್ಟವನ್ನು ನಂಬಿ,ಸುತ್ತೆಲ್ಲಾ ಕತ್ತಲೆ ಇದ್ದರೂ ಮಿಂಜು ಹುಳುವಿನ  ಮಿಣುಕು ಬೆಳಕನು ನಂಬಿ ಮತ್ತೆ ಮತ್ತೆ ಪ್ರೇಮಿಗಾಗಿ ಕಾಯುವುದು…… ಅದೃಷ್ಟವನ್ನು ನಂಬುವುದು ಪ್ರೇಮಿಗಳ ಹುಚ್ಚು . ಮಧು ಬಟ್ಟಲು ಕೈಯಿಂದ ಜಾರುತಿದೆ ಅವಳಲ್ಲಿ ಮಹೆಂದಿ ಕುಣಿಯುತಿದೆ ಸಾಕಿ   (ಗಜಲ್೯) ತಾ ಪ್ರೀತಿಸಿದ ಹುಡುಗಿ ತನಗೆ ಸಿಗದೆ  ಇನ್ನೊಬ್ಬನ ಮಡದಿ ಆಗುವುದು ತಿಳಿದ,  ಪ್ರೇಮಿ ಮಧುಶಾಲೆಗೆ ಹೋಗಿ ಅವಳನ್ನು ಮರೆಯಲು ಮಧು ಬಟ್ಟಲಿಗೆ ಶರಣಾಗುತ್ತಾನೆ,ಆದರೆ ಅವಳ ನೆನಪು ಬಂದು ಕೈಯಿಂದ ಮಧು ಬಟ್ಟಲು ಜಾರಿ ಬೀಳುತ್ತದೆ,ಅದಕ್ಕೆ ಕಾರಣ ಅವನ ಪ್ರೇಮಿಯ ಮುಂದೆ ಇನ್ನೊಬ್ಬನ ಹೆಸರಿನ ಮದರಂಗಿ ಕುಣಿಯುತಿದೆ ಸಾಕಿ ಹೇಗೆ ಮಧು ಕುಡಿಯಲಿ ಎಂದು ಮಧುಶಾಲೆಯಲ್ಲಿ ಕನವರಿಸುವ ಭಗ್ನ  ಪ್ರೇಮಿಯ ನೋವಿನ ಗಜಲ್ ಇದು ಹಗಲಿರುಳು ಒಂದೇ ಆಗುತಿದೆ ದುಡ್ಡಿಗಾಗಿ ಶಾಂತಿ–ನೆಮ್ಮದಿ ಹರಾಜಾಗುತಿದೆ ದುಡ್ಡಿಗಾಗಿ  (ಗಜಲ್೧೯) ಈ ಗಜಲ್ ಇಂದಿನ ವಾಸ್ತವಿಕ ಜಾಗತೀಗ ಜಗದ ಬದುಕನ್ನು ಬಿತ್ತರಿಸುತಿದೆ.ಕೇವಲ ದುಡ್ಡಿನಲ್ಲಿಯೇ ಮನುಷ್ಯ ಬದುಕುತ್ತಿದ್ದಾನೆ,ದುಡ್ಡು ಗಳಿಸುವುದಕ್ಕಾಗಿ ಇಂದು ಮನುಷ್ಯ ಹಗಲು ಇರುಳು ಅಂತರ ಮರೆತು ದುಡಿಯುತ್ತಿದ್ದಾನೆ ದುಡ್ಡಿಗಾಗಿ,ಮನ ಶಾಂತಿ ,ಮನೆ ನೆಮ್ಮದಿ ,ಸಂಬಂಧಗಳ ಪ್ರೀತಿ, ಗಂಡ ಹೆಂಡತಿ ಸಂಬಂಧ, ಎಲ್ಲಾ ಹರಾಜಾಗುತ್ತಿವೆ ದುಡ್ಡಿಗಾಗಿ,ದುಡ್ಡೇ ದೊಡ್ಡಪ್ಪ ಎಂಬುದನ್ನು ಗಜಲ್ ಕಾರರು ಒತ್ತಿ ಹೇಳಿದ್ದಾರೆ. ಬೆವರ ಹನಿಯ ರುಚಿ ಸವಿಯದವರು ಮನುಷ್ಯರೇ ಅಲ್ಲ ಉಪ್ಪು ನೀರಿನ ಜಳಕ ಮಾಡದವರು ಮನುಷ್ಯರೇ ಅಲ್ಲ    (ಗಜಲ್೨೫) ಇದು ವಿಶ್ವ ಕಾಮಿ೯ಕರ ದಿನಾಚರಣೆ ಯಂದು ಬರೆದ ಗಜಲ್ ಕಾಣುತ್ತದೆ.ಕಾಯಕದ ಬಗ್ಗೆ ಬರೆದ ಗಜಲ್  ,ನಮ್ಮ ಶರಣರು ಹೇಳಿದಂತೆ ಕಾಯಕ ಮಾಡದವನು ಊಟಕ್ಕೆ ಯೋಗ್ಯನಲ್ಲ,ದುಡಿದು ತಿನ್ನುತಾ ದಾಸೋಹ ಮಾಡುವವನು ನಿಜ  ಶರಣ,ಎಂಬಂತೆ ಬೆವರ ಹನಿ ಹರಿಸದೆ ಉಣ್ಣುವವನು ಮನುಷ್ಯನಲ್ಲ,ಬೆವರಿನ ಜಳಕ ಮಾಡದವನು ಮನುಷ್ಯನೇ ಅಲ್ಲ ವೆಂದು ಹೇಳುವ ಗಜಲ್ ಕಾಯಕದ ಮಹತ್ವ ಸಾರುತ್ತದೆ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿದ್ದಳು ತನ್ನದೇ ಲೋಕವನ್ನು ರೂಪಿಸಿ ಕೊಂಡಿದ್ದಳು   (ಗಜಲ್೩೦) ಈ ಗಜಲ್ ದಲ್ಲಿ ಮನೆಯ ಹೆಣ್ಣು ಮಗಳ ಬೆಳವಣಿಗೆಯ ಬಗ್ಗೆ ,ಅವಳ ನಗು ಮನೆಯ ನಂದಾ ದೀಪವಾಗಿತ್ತು,ಹೆತ್ತವರ ಮುದ್ದಿನ ತುಂಟಾಟದ ಚಿನಕುರುಳಿ ಯಾಗಿದ್ದಳು,ಎಂದು ಮಗಳ ಬೆಳವಣಿಗೆ  ಅವಳ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನೆ ತೊಡಗಿಸಿಕೊಂಡಿದ್ದಳು ,ಮನದ ನೋವು ಮರೆಸುವ ಜೀವ ಮುಖಿಯಾಗಿದ್ದಳೆಂದು ಮಗಳ ನೆನಪನ್ನು ಮರುಕಳಿಸುವ ಗಜಲ್ ಇದು. ನೀನು ನಗುವೆಯಾದರೆ ದುಃಖ ನನ್ನೊಂದಿಗೆ ಇರಲಿ ಬಿಡು ನೀನು ಮರೆಯುವೆ ಯಾದರೆ ನೆನಪುಗಳು ನನಗೆ ಇರಲಿ ಬಿಡು  (ಗಜಲ್೫೧) ಈ ಗಜಲ್ ಓದಿದಾಗ ಈಶ್ವರ ಸಣಕಲ್ ಅವರ ಕವಿತೆ ನೆನಪಾಯಿತು,”ಜಗವೆಲ್ಲಾ ನಗುತಿರಲಿ ಜಗದ ಅಳು ನನಗಿರಲಿ” ಎಂದು ಹೇಳಿದ್ದು ನೆನಪಾಯಿತು,ಈ ಗಜಲ್ ದಲ್ಲಿ ಪ್ರೇಮಿ ತನ್ನ ಪ್ರಿಯತಮೆಗೆ ಹೇಳುತ್ತಾನೆ ನೀನು ನಗುವೆಯಾದರೆ ಜಗದ ದುಃಖ ನನ್ನೊಂದಿಗೆ ಇರಲಿ,ನೀನು ನನ್ನ ಮರೆಯುವುದಾದರೆ ಆ ಸವಿ ನೆನಪುಗಳು ನನ್ನೊಂದಿಗೆ ಇರಲಿ ,ನಿನ್ನ ಸುಖವೇ ನನ್ನ ಸುಖ ವೆಂದು ಹೇಳುತ್ತಾ ಮಕ್ತಾದಲ್ಲಿ ನಿನ್ನ ಪಡೆಯಬೇಕೆಂದು ನಾನು ಹಂಬಲಿಸುತ್ತಿಲ್ಲ ನೀನು ಎಲ್ಲಿಯಾದರೂ ಸುಖವಾಗಿರು ನಮ್ಮ ಪ್ರೀತಿಯ ಸವಿ ನೆನಪುಗಳು ನನಗೆ ಇರಲೆಂದು ಉದಾರ ಗುಣವನ್ನು ತೋರಿಸುತ್ತಾನೆ ಇದೇ ನಿಜವಾದ ಪ್ರೀತಿ. ಕಂಬನಿಯನ್ನು ಒರೆಸುವ ಬೆರಳುಗಳು ದೂರವಾಗಿವೆ ಇಂದು ಹೃದಯ ಬಡಿತ ಆಲಿಸುವ ಕಿವಿಗಳು ದೂರವಾಗಿವೆ ಇಂದು ಈ ಗಜಲ್ ಓದಿದಾಗ ಇಂದು ವಿಶ್ವದಲ್ಲಿ ಕೊರೋನಾ ಮಹಾ ಮಾರಿ ಬಂದು ಜನರ ಜೀವನ ಹೇಗೆ ಅಸ್ತವ್ಯಸ್ತ ವಾಗಿದೆಂದು ತಿಳಿಸುತ್ತದೆ,ಯಾರ ದುಃಖ ಕ್ಕೆ ಯಾರೂ ಅಳುವಹಾಗೆ ಯಿಲ್ಲ,ಯಾರನ್ನು ಯಾರು ಸಮಾಧಾನ ಪಡಿಸುವಂತಿಲ್ಲ,ಎಲ್ಲರಿಗೂ ಒಂದು ರೀತಿಯ ಭಯ ಆವರಿಸಿದೆ,ಮನುಷ್ಯ ಸ್ವಾಥಿ೯ ಯಾಗಿದ್ದಾನೆಂದು ಅನಿಸುತ್ತಿಗೆ ,ಹೆತ್ತ ಕರುಗಳ ಶವಕ್ಕೆ ಹೆಗಲು ಕೊಡಲು ಅಂಜುವ ಸ್ಥಿತಿ ಬಂದಿದೆ.ಕೊರೋನಾ ವೈರಾಣು ಜಗದಲ್ಲಿನ ಸಂಬಂಧ ಅಂತಃಕರಣ ನುಂಗಿಹಾಕಿದೆ,ಇದು ಎಂಥಹ ದುರಿತ ಕಾಲ ವೆಂದು ಗಜಲ್ ಕಾರರು ನೊಂದಿದ್ದಾರೆ. ಇಂಥಹ ಮನ ಮಿಡಿಯುವಂತಹ ಅನೇಕ ಗಜಲ್ ಗಳು ಓದುಗರಿಗೆ ಸಿಗುತ್ತದೆ .ಒಟ್ಟಿನಲ್ಲಿ ಹೇಳುವುದಾದರೆ ಮಲ್ಲಿನಾಥ ತಳವಾರ ಅವರು ಒಬ್ಬ ಪ್ರೌಢ ಗಜಲ್ ಕಾರರೆಂದು ಹೇಳಲು ಹೆಮ್ಮೆ ಯಾಗುತ್ತದೆ.ಇವರಿಂದ ಇನ್ನೂ ಒಳ್ಳೆಯ ಗಜಲ್ ಗಳು ರಚನೆಯಾಗಿ ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಕೃತಿಗಳನ್ನು ಅಪಿ೯ಸಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ. ****************** ಪ್ರಭಾವತಿ ಎಸ್ ದೇಸಾಯಿ

ಮಲ್ಲಿಗೆ ಸಿಂಚನ (ಗಜಲ್ ಹೂದೋಟ Read Post »

ಪುಸ್ತಕ ಸಂಗಾತಿ

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.

ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು “ಚೆನ್ನಾಗಿದೆ, ಆದರೆ ನನ್ನದು  ಸುದೀರ್ಘ ಮತ್ತು ಅಂತ್ಯ ಕಾಣದ ಜೀವನಗಾಥೆ,  ಅದು ಯಾರಿಗೂ ತಿಳಿಯದು ಬೇರಾರು ಬರೆಯುವಂತಹದ್ದಲ್ಲ” ಎನ್ನುತ್ತಾರೆ. ‘ ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು  ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು. Read Post »

You cannot copy content of this page

Scroll to Top