ಮಲ್ಲಿಗೆ ಸಿಂಚನ (ಗಜಲ್ ಹೂದೋಟ

ಪುಸ್ತಕ ಸಂಗಾತಿ

ಮಲ್ಲಿಗೆ ಸಿಂಚನ (ಗಜಲ್ ಹೂದೋಟ)

ಕೃತಿ ಹೆಸರು…. ಮಲ್ಲಿಗೆ ಸಿಂಚನ (ಗಜಲ್ ಹೂದೋಟ)
ಲೇಖಕರು…ಡಾ.ಮಲ್ಲಿನಾಥ ಎಸ್ ತಳವಾರ
ಪ್ರಕಾಶಕರು…ಅನ್ನಪೂರ್ಣ ಪ್ರಕಾಶನ.ಸಿರಿಗೇರಿ ತಾ.ಸಿರುಗುಪ್ಪ ಜಿಲ್ಲಾ ಬಳ್ಳಾರಿ ಮೊ೮೭೬೨೪೭೯೨೧೬
ಪ್ರಕಟಿತ ವರ್ಷ ೨೦೨೧

ಸತತವಾದ ಅಧ್ಯಯನ ಶೀಲತೆ,ಉತ್ತಮವಾದ ಬರಹಗಳು,ಹಾಗೂ ಗಜಲ್ ಸಾಹಿತ್ಯ ಬಗ್ಗೆ ಆಳವಾದ ಅಭ್ಯಾಸ, ಗೂಗಲ್ ಮೀಟಗಳಲ್ಲಿ ಗಜಲ್ ಸಾಹಿತ್ಯ ಬಗ್ಗೆ ನಿರರ್ಗಳವಾಗಿ  ಉಪನ್ಯಾಸ ನೀಡಿ ಮೆಚ್ಚಿಗೆಯನು ಗಳಿಸಿದ ಡಾ,ಮಲ್ಲಿನಾಥ ಎಸ್ ತಳವಾರ ಇವರು ಕನ್ನಡ ಉಪನ್ಯಾಸಕರಾಗಿ ನೂತನ ಪದವಿ ಕಾಲೇಜ ಗುಲಬರ್ಗಾ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿ ಯಲ್ಲಿ ಸಾಹಿತಿಗಳಾಗಿ ವಿವಿಧ ಪ್ರಕಾರದ ೧೨ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಕಾವ್ಯ ನಾಮ “ರತ್ನರಾಯಮಲ್ಲ” ಎಂದಿ ಇದ್ದು ಗಜಲ್ ನಲ್ಲಿ “ಮಲ್ಲಿ” ಎಂಬ ತಖಲ್ಲುಸ್ ಬಳಸುತ್ತಿದ್ದಾರೆ.ಗಜಲ್ ಎಂಬುವುದು ಇವರ ಹೃದಯದ ಮಿಡಿತವಾಗಿದೆ ,ಸ್ವಭಾವತಃ ಮೃದು ಸ್ವಭಾವದವರಾಗಿದ್ದು ಗಜಲ್ ಸಾಹಿತ್ಯ ಕ್ಕೆ ಮೋಹಿತರಾಗಿದ್ದಾರೆ.ಮಿರ್ಜಾ ಗಾಲಿಬ್ ಇವರ ನೆಚ್ಚಿನ ಗಜಲ್ ಕವಿಯಾಗಿದ್ದಾರೆ,ಸಂಗಾತಿ ಆನ್ಲೈನ್ ಪತ್ರಿಕೆಯಲ್ಲಿ ಗಜಲ್ ಅಂಕಣಕ್ಕೆ ಲೇಖನಗಳನ್ನು ಬರೆಯುತ್ತಿದ್ದಾರೆ.

ಗಜಲ್ ಎಂಬುವುದು ಉದು೯ ಸಾಹಿತ್ಯ ದ ಕಾವ್ಯ ರಾಣಿಯಾಗಿದೆ,ಹೃದಯದ ಭಾವನೆಗಳಾದ ನೋವು ನಲಿವು  ,ಮುನಿಸು,ಕಾಯುವಿಕೆ ಯನ್ನು ವ್ಯಕ್ತ ಪಡಿಸುವ ಕೋಮಲ ಕಾವ್ಯ ಪ್ರಕಾರವಾಗಿದೆ.ಪ್ರೀತಿ ,ಪ್ರೇಮ,ವಿರಹ,ಪ್ರಣಯ ಗಳೊಂದಿಗೆ ನಿರಾಕಾರ ರೂಪಿಯೊಂದಿಗೆ ಮಾತಾಡುವ ,ಲೌಕಿಕ ಪ್ರೇಮ ದಿಂದ ಅಲೌಕಿಕ ಪ್ರೀತಿಯೊಂದಿಗೆ ಮೇಲೇರುವುದು ,ಆಧ್ಯಾತ್ಮಿಕ, ದೇವರೊಂದಿಗೆ ಸಂವಾದಕ್ಕೆ ಇಳಿಯುವುದು ,ಕಾಣದ ಚೇತನವನ್ನು ಹೊಂದುವ ಹಂಬಲ ಇವೆಲ್ಲವೂ ಗಜಲ್ದ ಒಳ ತಿರುಳಾಗಿವೆ.ಇವೆಲ್ಲವನ್ನು  ಧ್ಯಾನಿಸಿ ಡಾ.ಮಲ್ಲಿನಾಥ ಎಸ್ ತಳವಾರ ಅವರು ಗಜಲ್ ಗಳನ್ನು ರಚನೆಮಾಡುತ್ತಿದ್ದಾರೆ.ಈಗಾಗಲೆ “ಗಾಲಿಬ್ ಸ್ಮೃತಿ” ಎಂಬ ಪ್ರಥಮ ಗಜಲ್ ಸಂಕಲನ ಕಳೆದ ವರ್ಷ ಪ್ರಕಟವಾಗಿದೆ.ಇತ್ತೀಚಿಗೆ “ಮಲ್ಲಿಗೆ ಸಿಂಚನ” ಎಂಬ ಗಜಲ್ ಸಂಕಲನವು ಪ್ರಕಟವಾಗಿ ಲೋಕಾರ್ಪಣೆ ಯಾಗಿದೆ.

“ಮಲ್ಲಿಗೆ ಸಿಂಚನ” (ಗಜಲ್ ಹೂದೋಟ)ವು ಡಾ.ಮಲ್ಲಿನಾಥ ಎಸ್ ತಳವಾರ ಅವರ ಎರಡನೇ ಗಜಲ್ ಸಂಕಲನ ವಾಗಿದೆ .  ೬೦ ಗಜಲ್ ಗಳ ಗುಲ್ದಸ್ತ ವಾಗಿದೆ.ಇದು ಗಜಲ್ ಬರೆಯುವ ಆಸಕ್ತರಿಗೆ  ಹಾಗೂ ನಿಯಮ ಬದ್ಧವಾಗಿ ರಚಿಸುವವರಿಗೆ  ಇದು ಕಲಿಯುವವರಿಗೆ ಮನದಟ್ಟವಾಗುವಂತೆ ಒಂದು ಉತ್ತಮವಾದ ಮಾರ್ಗದಶಿ೯(ಕೈಪಿಡಿ) ಯಾಗಿದೆ.ಸಂಕಲನದ ಪ್ರಾರಂಭದಲ್ಲಿ ಭಾಷಾ ಬೆಳವಣಿಗೆ ,ಉದು೯ ಸಾಹಿತ್ಯ ದಲ್ಲಿ ಗಜಲ್ ಕಾವ್ಯ ದ ಬೆಳವಣಿಗೆ ಮತ್ತು ಗಜಲ್ ನಲ್ಲಿ ಬಳಿಸುವ “ಗಜಲ್ ಪಾರಿಭಾಷಿಕ ಪದಗಳಾದ” ಮತ್ಲಾ ,ಮಕ್ತಾ,ರದೀಫ್, ಕಾಫಿಯಾನ,ರವಿ,ಮುಂತಾದವುಗಳ ಅರ್ಥ ವಿನ್ಯಾಸ ,ಪದಬಳಿಕೆಯ ಕ್ರಮಗಳ ಬಗ್ಗೆ ಹಿರಿಯ ಗಜಲ್ ಕಾರರ ಗಜಲ್ಗಳನ್ನು ಉದಾಹರಣೆ ಯಾಗಿಸಿಕೊಂಡು ನಿಯಮಗಳನ್ನು ಹೇಗೆ ಪಾಲಿಸಬೇಕೆಂದು,ವಿಧದ ಪ್ರಕಾರಕದ ಗಜಲ್ ಗಳನ್ನು ಹೇಗೆ  ರಚಿಸಬೇಕೆಂದು ಶಿಕ್ಷಕ ವೃತ್ತಿಯ ಅನುಭವದಿಂದ  ಕಲಿಯುವವರಿಗೆ ಮನದಟ್ಟ ವಾಗುವಂತೆ ,ಉಪಯೋಗವಾಗುವಂತೆ ವಿವರವಾಗಿ ವಿವರಿಸಿದ್ದಾರೆ. “ಮಲ್ಲಿಗೆ ಸಿಂಚನ” ಕೃತಿಯು ಸಂಗ್ರಹಣೆಗೆ ಮತ್ತು ಓದಲು ಯೋಗ್ಯವಾಗಿದೆ.

“ಮಲ್ಲಿಗೆ  ಸಿಂಚನ” ಗಜಲ್ ಹೂ ದೋಟದಲ್ಲಿ ೬೦ ವಿವಿಧ ಮಲ್ಲಿಗೆ ಸುಮ ಗಳು ತಮ್ಮ ಘಮಲನ್ನು ಹರಡಿ  ಓದುಗರನ್ನು ಮೈಮರೆಸುತಾ ಬಾನಲ್ಲಿ ತೇಲಾಡಿಸುತ್ತವೆ ,ಬಹುಭಾಷಾ ಕವಿ,ಗಜಲ್ ಕಾರರು,ಗಾಯಕರು ಆದ  ಶ್ರೀ. ಪ್ರಕಾಶ್ ಸಿಂಗ್ ರಜಪೂತ್ ವಿಜಯಪುರ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಸಂಕಲನದ ಗಜಲ್ ಗಳು ಓದುಗರಿಗೆ ಮುದನೀಡುತ್ತಾ ಓದಿಸಿಕೊಂಡು ಹೋಗುತ್ತವೆ.ಮಲ್ಲಿನಾಥ ಇವರ ಗಜಲ್ ಗಳಲ್ಲಿ ಗೇಯತೆ ,ಲಯಾ,ಭಾವತೀವ್ರತೆ,ಮೃದು ಭಾಷಾ ಪ್ರಯೋಗ,ಸಮಾಜಿಕ ಕಳಕಳಿ,ಅಧ್ಯಾತ್ಮಿಕ ಚಿಂತನೆ,ಮಹಿಳಾ ಸಂವೇದನೆ,ತಾಯಿಗೆ ಗಜಲ್ ಮೂಲಕ ಕೃತಜ್ಞತೆ ಹೇಳಿದ್ದಾರೆ, ಹಿರಿಯ ಮಹಿಳಾ ಸಾಹಿತಿ ಡಾ.ಗೀತಾ ನಾಗಭೂಷಣ ಮತ್ತು ಹಿಂದಿ ಚಲನಚಿತ್ರ ನಟ ರಷಿ ಕಪೂರ್ ಅವರಿಗೆ ಗಜಲ್ ಮೂಲಕ ಶ್ರದ್ಧಾಂಜಲಿ ಅಪಿ೯ಸಿದ್ದಾರೆ.ಹಿರಿಯ ಗಜಲ್ ಕಾರರ ಸಾನಿ ಮಿಸ್ರಾ ತೆಗೆದುಕೊಂಡು ತರಹೀ ಗಜಲ್ ಗಳನ್ನು ಭಾವಕ್ಕೆ ಧಕ್ಕೆ ಬರದಂತೆ ರಚಿಸಿದ್ದಾರೆ. ಇವು ಅಲ್ಲದೆ ಈ ಸಂಕಲನದಲ್ಲಿ  ಸ್ವರ ಕಾಫಿಯಾ ಗಜಲ್,ಜುಲ್ ಕಾಫಿಯಾ ಗಜಲ್,ಸಂಪೂರ್ಣ ಮತ್ಲಾ ಗಜಲ್,ಸೆಹ್ ಗಜಲ್,ಮಾತ್ರಾಯಾಧಾರಿತ ಗಜಲ್, ಹೀಗೆ ವಿವಿಧ ಪ್ರಕಾರದ ಗಜಲ್ ಗಳನ್ನು ಬರೆದಿದ್ದಾರೆ. ವಿವಿಧ ರೀತಿಯ ಮಲ್ಲಿಗೆ ಹೂ ಗಳನ್ನು ಸೇರಿಸಿ ಒಂದು ಸುಂದರವಾದ ಮಲ್ಲೆ ಮಾಲೆ ತಯಾರಿಸಿ ಓದಿಗರಿಗೆ ಆಸ್ವಾದಿಸಲು ಕೊಟ್ಟಿದ್ದಾರೆ.

ನನಗೆ ಇಷ್ಟವಾದ ಕೆಲವು ಗಜಲ್ ಗಳ ಮಿಸ್ರಾ ಗಳು

ನನ್ನ ಪ್ರೀತಿ ಯನು ಅರಿಯದೆ ಹೋದೆನೀನು ಅದೃಷ್ಟವನ್ನು ನಂಬಿ ನಿನಗಾಗಿ ಕಾಯುತಿರುವೆ  ( )

ಇದು ಒಂದು ಭಗ್ನ ಪ್ರೇಮಿಯ ಹೃದಯದ ಅಳಲನ್ನು ಬಿತ್ತರಿಸುವ ಗಜಲ್ ಆಗಿದೆ ನೋವಿನ  ತೀವ್ರತೆ ಎದ್ದು ಕಾಣುತ್ತದೆ, ಪ್ರೀತಿಸಿದ ಹುಡುಗಿ(ಹುಡುಗ) ನಿಜವಾದ ಪ್ರೀತಿಯನು ಅರಿಯದೆ ಪ್ರೇಮಿಯನ್ನು ಧಿಕ್ಕರಿಸಿ ಹೋದಾಗ ಆಗುವ ನೋವಿನ ಪರಿ ಇದು ,ಅವಳು ತೊರೆದು ಹೋಗಿದ್ದರೂ ಹುಚ್ಚು ಮನಸ್ಸು ಬರುವಿಗಾಗಿ ಕಾಯುತ್ತದೆ ,ಅದು ಅದೃಷ್ಟವನ್ನು ನಂಬಿ,ಸುತ್ತೆಲ್ಲಾ ಕತ್ತಲೆ ಇದ್ದರೂ ಮಿಂಜು ಹುಳುವಿನ  ಮಿಣುಕು ಬೆಳಕನು ನಂಬಿ ಮತ್ತೆ ಮತ್ತೆ ಪ್ರೇಮಿಗಾಗಿ ಕಾಯುವುದು…… ಅದೃಷ್ಟವನ್ನು ನಂಬುವುದು ಪ್ರೇಮಿಗಳ ಹುಚ್ಚು .

ಮಧು ಬಟ್ಟಲು ಕೈಯಿಂದ ಜಾರುತಿದೆ

ಅವಳಲ್ಲಿ ಮಹೆಂದಿ ಕುಣಿಯುತಿದೆ ಸಾಕಿ   (ಗಜಲ್೯)

ತಾ ಪ್ರೀತಿಸಿದ ಹುಡುಗಿ ತನಗೆ ಸಿಗದೆ  ಇನ್ನೊಬ್ಬನ ಮಡದಿ ಆಗುವುದು ತಿಳಿದ,  ಪ್ರೇಮಿ ಮಧುಶಾಲೆಗೆ ಹೋಗಿ ಅವಳನ್ನು ಮರೆಯಲು ಮಧು ಬಟ್ಟಲಿಗೆ ಶರಣಾಗುತ್ತಾನೆ,ಆದರೆ ಅವಳ ನೆನಪು ಬಂದು ಕೈಯಿಂದ ಮಧು ಬಟ್ಟಲು ಜಾರಿ ಬೀಳುತ್ತದೆ,ಅದಕ್ಕೆ ಕಾರಣ ಅವನ ಪ್ರೇಮಿಯ ಮುಂದೆ ಇನ್ನೊಬ್ಬನ ಹೆಸರಿನ ಮದರಂಗಿ ಕುಣಿಯುತಿದೆ ಸಾಕಿ ಹೇಗೆ ಮಧು ಕುಡಿಯಲಿ ಎಂದು ಮಧುಶಾಲೆಯಲ್ಲಿ ಕನವರಿಸುವ ಭಗ್ನ  ಪ್ರೇಮಿಯ ನೋವಿನ ಗಜಲ್ ಇದು

ಹಗಲಿರುಳು ಒಂದೇ ಆಗುತಿದೆ ದುಡ್ಡಿಗಾಗಿ

ಶಾಂತಿನೆಮ್ಮದಿ ಹರಾಜಾಗುತಿದೆ ದುಡ್ಡಿಗಾಗಿ  (ಗಜಲ್೧೯)

ಈ ಗಜಲ್ ಇಂದಿನ ವಾಸ್ತವಿಕ ಜಾಗತೀಗ ಜಗದ ಬದುಕನ್ನು ಬಿತ್ತರಿಸುತಿದೆ.ಕೇವಲ ದುಡ್ಡಿನಲ್ಲಿಯೇ ಮನುಷ್ಯ ಬದುಕುತ್ತಿದ್ದಾನೆ,ದುಡ್ಡು ಗಳಿಸುವುದಕ್ಕಾಗಿ ಇಂದು ಮನುಷ್ಯ ಹಗಲು ಇರುಳು ಅಂತರ ಮರೆತು ದುಡಿಯುತ್ತಿದ್ದಾನೆ ದುಡ್ಡಿಗಾಗಿ,ಮನ ಶಾಂತಿ ,ಮನೆ ನೆಮ್ಮದಿ ,ಸಂಬಂಧಗಳ ಪ್ರೀತಿ, ಗಂಡ ಹೆಂಡತಿ ಸಂಬಂಧ, ಎಲ್ಲಾ ಹರಾಜಾಗುತ್ತಿವೆ ದುಡ್ಡಿಗಾಗಿ,ದುಡ್ಡೇ ದೊಡ್ಡಪ್ಪ ಎಂಬುದನ್ನು ಗಜಲ್ ಕಾರರು ಒತ್ತಿ ಹೇಳಿದ್ದಾರೆ.

ಬೆವರ ಹನಿಯ ರುಚಿ ಸವಿಯದವರು ಮನುಷ್ಯರೇ ಅಲ್ಲ

ಉಪ್ಪು ನೀರಿನ ಜಳಕ ಮಾಡದವರು ಮನುಷ್ಯರೇ ಅಲ್ಲ    (ಗಜಲ್೨೫)

ಇದು ವಿಶ್ವ ಕಾಮಿ೯ಕರ ದಿನಾಚರಣೆ ಯಂದು ಬರೆದ ಗಜಲ್ ಕಾಣುತ್ತದೆ.ಕಾಯಕದ ಬಗ್ಗೆ ಬರೆದ ಗಜಲ್  ,ನಮ್ಮ ಶರಣರು ಹೇಳಿದಂತೆ ಕಾಯಕ ಮಾಡದವನು ಊಟಕ್ಕೆ ಯೋಗ್ಯನಲ್ಲ,ದುಡಿದು ತಿನ್ನುತಾ ದಾಸೋಹ ಮಾಡುವವನು ನಿಜ  ಶರಣ,ಎಂಬಂತೆ ಬೆವರ ಹನಿ ಹರಿಸದೆ ಉಣ್ಣುವವನು ಮನುಷ್ಯನಲ್ಲ,ಬೆವರಿನ ಜಳಕ ಮಾಡದವನು ಮನುಷ್ಯನೇ ಅಲ್ಲ ವೆಂದು ಹೇಳುವ ಗಜಲ್ ಕಾಯಕದ ಮಹತ್ವ ಸಾರುತ್ತದೆ.

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿದ್ದಳು

ತನ್ನದೇ ಲೋಕವನ್ನು ರೂಪಿಸಿ ಕೊಂಡಿದ್ದಳು   (ಗಜಲ್೩೦)

ಈ ಗಜಲ್ ದಲ್ಲಿ ಮನೆಯ ಹೆಣ್ಣು ಮಗಳ ಬೆಳವಣಿಗೆಯ ಬಗ್ಗೆ ,ಅವಳ ನಗು ಮನೆಯ ನಂದಾ ದೀಪವಾಗಿತ್ತು,ಹೆತ್ತವರ ಮುದ್ದಿನ ತುಂಟಾಟದ ಚಿನಕುರುಳಿ ಯಾಗಿದ್ದಳು,ಎಂದು ಮಗಳ ಬೆಳವಣಿಗೆ  ಅವಳ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನೆ ತೊಡಗಿಸಿಕೊಂಡಿದ್ದಳು ,ಮನದ ನೋವು ಮರೆಸುವ ಜೀವ ಮುಖಿಯಾಗಿದ್ದಳೆಂದು ಮಗಳ ನೆನಪನ್ನು ಮರುಕಳಿಸುವ ಗಜಲ್ ಇದು.

ನೀನು ನಗುವೆಯಾದರೆ ದುಃಖ ನನ್ನೊಂದಿಗೆ ಇರಲಿ ಬಿಡು

ನೀನು ಮರೆಯುವೆ ಯಾದರೆ ನೆನಪುಗಳು ನನಗೆ ಇರಲಿ ಬಿಡು  (ಗಜಲ್೫೧)

ಈ ಗಜಲ್ ಓದಿದಾಗ ಈಶ್ವರ ಸಣಕಲ್ ಅವರ ಕವಿತೆ ನೆನಪಾಯಿತು,”ಜಗವೆಲ್ಲಾ ನಗುತಿರಲಿ ಜಗದ ಅಳು ನನಗಿರಲಿ” ಎಂದು ಹೇಳಿದ್ದು ನೆನಪಾಯಿತು,ಈ ಗಜಲ್ ದಲ್ಲಿ ಪ್ರೇಮಿ ತನ್ನ ಪ್ರಿಯತಮೆಗೆ ಹೇಳುತ್ತಾನೆ ನೀನು ನಗುವೆಯಾದರೆ ಜಗದ ದುಃಖ ನನ್ನೊಂದಿಗೆ ಇರಲಿ,ನೀನು ನನ್ನ ಮರೆಯುವುದಾದರೆ ಆ ಸವಿ ನೆನಪುಗಳು ನನ್ನೊಂದಿಗೆ ಇರಲಿ ,ನಿನ್ನ ಸುಖವೇ ನನ್ನ ಸುಖ ವೆಂದು ಹೇಳುತ್ತಾ ಮಕ್ತಾದಲ್ಲಿ ನಿನ್ನ ಪಡೆಯಬೇಕೆಂದು ನಾನು ಹಂಬಲಿಸುತ್ತಿಲ್ಲ ನೀನು ಎಲ್ಲಿಯಾದರೂ ಸುಖವಾಗಿರು ನಮ್ಮ ಪ್ರೀತಿಯ ಸವಿ ನೆನಪುಗಳು ನನಗೆ ಇರಲೆಂದು ಉದಾರ ಗುಣವನ್ನು ತೋರಿಸುತ್ತಾನೆ ಇದೇ ನಿಜವಾದ ಪ್ರೀತಿ.

ಕಂಬನಿಯನ್ನು ಒರೆಸುವ ಬೆರಳುಗಳು ದೂರವಾಗಿವೆ ಇಂದು

ಹೃದಯ ಬಡಿತ ಆಲಿಸುವ ಕಿವಿಗಳು ದೂರವಾಗಿವೆ ಇಂದು

ಈ ಗಜಲ್ ಓದಿದಾಗ ಇಂದು ವಿಶ್ವದಲ್ಲಿ ಕೊರೋನಾ ಮಹಾ ಮಾರಿ ಬಂದು ಜನರ ಜೀವನ ಹೇಗೆ ಅಸ್ತವ್ಯಸ್ತ ವಾಗಿದೆಂದು ತಿಳಿಸುತ್ತದೆ,ಯಾರ ದುಃಖ ಕ್ಕೆ ಯಾರೂ ಅಳುವಹಾಗೆ ಯಿಲ್ಲ,ಯಾರನ್ನು ಯಾರು ಸಮಾಧಾನ ಪಡಿಸುವಂತಿಲ್ಲ,ಎಲ್ಲರಿಗೂ ಒಂದು ರೀತಿಯ ಭಯ ಆವರಿಸಿದೆ,ಮನುಷ್ಯ ಸ್ವಾಥಿ೯ ಯಾಗಿದ್ದಾನೆಂದು ಅನಿಸುತ್ತಿಗೆ ,ಹೆತ್ತ ಕರುಗಳ ಶವಕ್ಕೆ ಹೆಗಲು ಕೊಡಲು ಅಂಜುವ ಸ್ಥಿತಿ ಬಂದಿದೆ.ಕೊರೋನಾ ವೈರಾಣು ಜಗದಲ್ಲಿನ ಸಂಬಂಧ ಅಂತಃಕರಣ ನುಂಗಿಹಾಕಿದೆ,ಇದು ಎಂಥಹ ದುರಿತ ಕಾಲ ವೆಂದು ಗಜಲ್ ಕಾರರು ನೊಂದಿದ್ದಾರೆ.

ಇಂಥಹ ಮನ ಮಿಡಿಯುವಂತಹ ಅನೇಕ ಗಜಲ್ ಗಳು ಓದುಗರಿಗೆ ಸಿಗುತ್ತದೆ .ಒಟ್ಟಿನಲ್ಲಿ ಹೇಳುವುದಾದರೆ ಮಲ್ಲಿನಾಥ ತಳವಾರ ಅವರು ಒಬ್ಬ ಪ್ರೌಢ ಗಜಲ್ ಕಾರರೆಂದು ಹೇಳಲು ಹೆಮ್ಮೆ ಯಾಗುತ್ತದೆ.ಇವರಿಂದ ಇನ್ನೂ ಒಳ್ಳೆಯ ಗಜಲ್ ಗಳು ರಚನೆಯಾಗಿ ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಕೃತಿಗಳನ್ನು ಅಪಿ೯ಸಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ.

******************

ಪ್ರಭಾವತಿ ಎಸ್ ದೇಸಾಯಿ

Leave a Reply

Back To Top