ಆದಿಯೂ ನೆಟ್ ನ ಪಾಠವೂ

ಪುಸ್ತಕ ಪರಿಚಯ

ಆದಿಯೂ ನೆಟ್ ನ ಪಾಠವೂ

ಪುಸ್ತಕ ಪರಿಚಯ

ಆದಿಯೂ ನೆಟ್ ನ ಪಾಠವೂ

( ಮಕ್ಕಳ ಕವಿತೆಗಳು)

ಲೇ: ಬೆಂ ಶ್ರೀ ರವೀಂದ್ರ.

ಹೂಬಳ್ಳಿ ಪ್ರಕಾಶನ

ದೂ: 9448994199

ಅಗಸ್ಟ್ ಏಳರಂದು ಲೋಕಾರ್ಪಣೆಗೊಂಡ ಆದಿಯೂ ನೆಟ್ ನ ಪಾಠವೂ ಕನ್ನಡದಲ್ಲಿ ವಿರಳವಾಗಿರುವ ಮಕ್ಕಳ ಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ.

” ಆದಿಯೆಂಬ ತುಂಟ ಹುಡುಗ

ತುಂಬಾ ಜಾಣ ಪೋಕರಿ

ಕೂಡಿ ಕಲಿವ ಕುಣಿದು ನಲಿವ

ಮೇಡಂ ಗೆ ಮೆಚ್ಚು ರೀ”  ( ಆದಿ ಪೋಕರಿ)

ಈಗಿನ ಮಕ್ಕಳ ತುಂಟಾಟ ಬೇಡಿಕೆ , ಮತ್ತು ಕೇಳುವ ಪ್ರಶ್ನೆಗಳೆಲ್ಲಾ ಇಲ್ಲಿ ಮಕ್ಕಳ ಓದುವ ಕವನಗಳಾಗಿ ತೆರೆದುಕೊಂಡಿವೆ.

” ಎಚ್ಚರವವಗೆ ಬೆಳಗಿನ ಜಾವಕೆ

ಮನದಲ್ಲೇನೋ ಪುಳಕ

ಹೊಸತಿದು ಕಣ್ಣಿನ ನೋಟಕೆ

ಜಗಕಾಗಿದೆಯೇ ಜಳಕ”(ಪುಟ್ಟನ ಪಾಕ)

ಕವಿ  ಆಯ್ದು ಬಳಸಿರುವ ಕನ್ನಡ ಪದಗಳು ಸಾಲಿನ ಸೊಗಸು ಹೆಚ್ಚಿಸಿವೆ.ಕವನಗಳಲ್ಲಿ ಬೇರೆ ಬೇರೆ ಪ್ರಾಂತ್ಯದ ಪದಗಳೂ ಬಳಕೆಯಾಗಿರುವುದರಿಂದ  ಮಕ್ಕಳಿಗೆ ಹಲವು ಹೊಸ ಪದಗಳು ಪರಿಚಯವಾಗುತ್ತವೆ

“ಬಂತೈ ಬಂತೈ ಮುಂಗಾರು

ತಂತೈ ತೋಟಕೆ ಸಿಂಗಾರು

ತಕಥೈ ರೈತಗೆ ಬಂಗಾರು

ಕೈ ಕೈ ಕೂಡಿಸಿ ಎಲ್ಲಾರು” ( ಮುಂಗಾರಂದ್ರೆ ಮುಂಗಾರು)

ಮುಂತಾದ ಪ್ರಕೃತಿ ಕವನಗಳು ಲಯಬದ್ಧವಾಗಿ ಹಾಡುವಂತಿದ್ದು ಮಕ್ಕಳನ್ನು ಮಾತ್ರವಲ್ಲದೆ ಹಿರಿಯರಿಗೂ ಸಂತಸ ನೀಡುತ್ತವೆ

ಲೇಖಕರು ಯಾವುದೇ ಮಡಿ ಇಲ್ಲದೆ ಕೆಲವು ಕವನಗಳಲ್ಲಿ ಇಂಗ್ಲೀಷ್ ಪದಗಳನ್ನೂ ಅಲ್ಲಲ್ಲಿ ಬಳಸಿದ್ದಾರೆ.ಸಂಕಲನದ ಶೀರ್ಷಿಕೆಯಲ್ಲೇ ಇದು ವ್ಯಕ್ತವಾಗಿದೆ.ನಗರದ ಮಕ್ಕಳು ಬಳಸುವ ಕಂಗ್ಲೀಷಿಗೆ ಕನ್ನಡಿ ಹಿಡಿದಂತೆ ಕೆಲವು ಕವನ ಕಂಡರೆ ಅಚ್ಚರಿಯಿಲ್ಲ.  ಮಕ್ಕಳು ಆನಂದಿಸಲು ಅಡೆತಡೆಯಿಲ್ಲ.

 ” ಟ್ವಿಂಕಲ್ಲು ಮನೆಯಲ್ಲಿ ವೀಡಿಯೋ ಗೇಮು

ಅಂಕಲ್ಲು ತರಿಸ್ತಾರೆ ಪಿಜ್ಜಾ ಐಸ್ ಕ್ರೀಮು” (ಆದಿಯ ಬೇಸಿಗೆ ದಿನಚರಿ)

ರಜಾ ಬಂದರೆ ಹೋಗಲೇ ಬೇಕು ಊರೂರು ಟೂರು ಅನ್ನುವ ಆದಿಗೆ ನಾಯಿ ಬೆಕ್ಕುಗಳ ಕಂಡರೆ ಪ್ರೀತಿ.

ತಪ್ಪಿಸಿಕೊಂಡು ಎಲ್ಲೋ ಹೋದ ಬೆಕ್ಕು ಮರಳಿ ಬರುವುದು, ಬೀದಿ ನಾಯಿ ಮರಿಗಳು ಸುರಿದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗುವುದು,ಸಂಕ್ರಾಂತಿ ಎಳ್ಳು ಬೀರುವುದು,ಮನೆಯವರೆಲ್ಲ ಸೇರಿ ನಾಯಿಗೆ ಹೆಸರಿಡುವುದು,

ಹೀಗೆ ಕೌಟುಂಬಿಕ ವಾತಾವರಣವನ್ನೂ ,ಸುಂದರ ಪರಿಸರವನ್ನೂ,ಹಬ್ಬಗಳನ್ನೂ ಮಗುವಿನ ಕಣ್ಣಲ್ಲಿ ಬೆರಗಿನಿಂದ ನೋಡುತ್ತಾರೆ.

 ‘ಬಂತು ಬಂತು ದಸರ

 ಗೊಂಬೆ ತನ್ನಿ ಸರಸರ ‘

‘ಹೋಳಿಗೆಗಿಂತ ಹೋಳಿಯು ಸಿಹಿಯು

ಅಮ್ಮನ ತಲೆ ಮೇಲೆ ಬಣ್ಣದ ಹುಡಿಯು ‘

ಮುಂತಾಗಿ ಹಬ್ಬಗಳ ಸಡಗರದ ಆಚರಣೆಯನ್ನು ಸರಳ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

‘ಮಂತ್ರಕೆ ಉದರದು ಮಾವಿನ ಕಾಯಿ

ಬುದ್ಧಿ ವಿವೇಕಕೆ ಸರಸ್ವತಿ ಸಹಕಾರಿ’ ( ಕಪ್ಪೆಗಳ ಮದುವೆ) ಎಂದು ಮೌಢ್ಯವನ್ನು ದೂರ ಮಾಡುವ ಪ್ರಯತ್ನವಿದೆ.

ನಲಿವಿನ ಜೊತೆಗೆ ಕಲಿಕೆಗೂ ಸಹಕಾರಿಯಾಗುವ  ,ಕಲ್ಪನೆಗೆ ಇಂಬು ಕೊಡುವ ಕವನಗಳು ಸಂಕಲನದಲ್ಲಿವೆ.

‘ ತಲೆಗೆ ಹತ್ತದು ನೆಟ್ ನ ಪಾಠ

ಮೊಬೈಲಾಟಕೆ ನೆಟ್ಟಿದೆ ನೋಟ

ಯಾಕಪ್ಪಾ ದೇವರೇ ಇಂಥಾ ಕಾಟ’ ಎನ್ನುವ ಆದಿಗೆ ‘ ಮೆಚ್ಚಿ ನ ಸ್ಕೂಲು ತೆರೆಯಲಿ ಬೇಗ’ ಎಂಬ ಬಯಕೆ.

ಆದಿಗೆ ತಾತನ ಮೊಬೈಲ್ ಬೇಕು.ಹುಟ್ಟು ಹಬ್ಬಕ್ಕೆ  ” ಈಗ ಮೊಬೈಲ್ ಕೊಡ್ಸು,ಜಾಸ್ತಿ ಗೇಮ್ ಹಾಕ್ಸು’ ಎಂದು ಕೇಳುವ ಆದಿ ನಿಮ್ಮ‌ಮನೆಯ ಹುಡುಗನೇ ಅನಿಸಿಬಿಡುತ್ತಾನೆ.

‘ ಕಾಗೆ ಗುಬ್ಬಿ ಕಥೆನಾ ಅಜ್ಜಿ

ಹೇಳಿದ್ಲು ನಿನ್ನೆರಾತ್ರೆ

ಕಾಗಕ್ಕನೆಲ್ಲೋ ನೋಡಿದೀನಿ

ಗುಬ್ಬಕ್ಕ ಅಂದ್ರೆ ಯಾರಮ್ಮಾ’

ಅನ್ನುವ ಮುಗ್ದ ಪ್ರಶ್ನೆ ಬೆರಗಾಗಿಸಿ ಚಿಂತನೆಗೆ ದೂಡದಿರದು.

ರಿಸಲ್ಟ್ ಬಂದರೆ,ಬಂದರೆ ಬರಲಿ

ಫಸ್ಟ್ ಕ್ಲಾಸಲಿ ಪಾಸಾಗುವೆನು

ಸಿಹಿಯನು ಹಂಚಿ ಮುಂದಿನ ಕ್ಲಾಸಿಗೆ ಹೋಗುವೆನು’ ಎಂಬ ಆತ್ಮವಿಶ್ವಾಸ  ತುಂಟ ಆದಿಗೆ.

ಕೆಲವು ಜನಪ್ರಿಯ ಪಂಚತಂತ್ರದ ಕತೆಗಳನ್ನೂ ಇಲ್ಲಿ ಸುಂದರ ಕವನವಾಗಿಸಿದ್ದಾರೆ.

ಗಾಂಧಿ ,ವಿವೇಕಾನಂದರ ಬಗ್ಗೆ,ನಾಡು ನುಡಿಯ  ಬಗ್ಗೆಯೂ ಕವನಗಳಿವೆ. ‘ ಓ ಭಾರತಿ ಬಹುಭಾಷಾ ಸರಸ್ವತಿ’ ಎಂಬ ಕವನ  ಹಿರಿ ಕಿರಿಯರೆಂಬ ಭೇಧವಿಲ್ಲದೆ ಹಾಡಬಹುದಾದ ಸುಂದರ ದೇಶಭಕ್ತಿ ಗೀತೆ. ಬಹುವಾಗಿ ಪೀಡಿಸುತ್ತಿರುವ ಕರೋನಾ ದ ಬಗ್ಗೆಯೂ ಕವನವಿದ್ದು  ‘ ಮನುಕುಲಕೆ ಶಾರ್ವರಿಯು ಕಲಿಸಿಹಳು ವಿನಯದ ಪಾಠ’ ಎನ್ನುತ್ತಾರೆ.

 ‘

ಯಾಕಳತಾ ಕುಂತಿ ಎಂಬ ಕವನದಲ್ಕಿ ಸಿಯಾಚಿನ್ ನಲ್ಲಿ ಮಡಿದ ವೀರ ಯೋಧ  ಶ್ರೀ ಹನುಮಂತಪ್ಪ ಕೊಪ್ಪದ್  ಅವರ ಪುತ್ರಿ ಕೇಳುವ ಮುಗ್ದ ಪ್ರಶ್ನೆಗಳು ಹೃದಯಸ್ಪರ್ಶಿಯಾಗಿವೆ.

 ‘ ಸಾಲಿ ಮಕ್ಕಳು ಸಾಲಾಗ್ಬಂದ್ರು

ಕಣ್ತುಂಬಾ ನೀರು ತುಂಬ್ಕಂಡ್ರು

ಆ ಡಬ್ಬದಾಗೆ ಏನೈತೆ ಹೇಳು

ನನ್ನೆತ್ಕೊಂಡು ಸೆಲ್ಯೂಟ್ ಹೊಡಸಿದ್ರು

ಅಗೊಷ್ಟು ತಿಂಗಳ ಬಾವುಟ ಬಟ್ಟೆ

ಡಬ್ಬದ  ಮ್ಯಾಲ್ಯಾಕೆ ಐತಿ ಹೇಳು’

ಹೀಗೆ ಕವನದುದ್ದಕ್ಕೂ ಮುಗ್ದ ಬಾಲೆ ಕೇಳುತ್ತಾ ಹೋಗುವ ಪ್ರಶ್ನೆ ಗಳು ಓದುಗರಿಗೂ ಕಣ್ತುಂಬಿ ಬರುವಂತಿವೆ.

ಝಾಡಿಸಿ ಜಡವ ಜಾಲಿಸಿ ಮನವ

ರೂಢಿಸಿ ಛಲವ ಕೂಡಿಸಿ ಬಲವ

ಕಟ್ಟೋಣ ಬನ್ನಿ ಬದುಕಿನ ನಂಟು

ಇಲ್ಲವೆ ಜಾರೀತು ಜನುಮದ ಗಂಟು’ ಎನ್ನುವ ಕವಿ ರವೀಂದ್ರರು

ಬ್ಯಾಂಕಿನ ಅಧಿಕಾರಿಯಾಗಿ ಸಂಘಟನೆಯ ನೇತ್ರತ್ವ ವಹಿಸಿದ್ದ ವರು. ಪ್ರಬುಧ್ದ ಕವನಗಳ  ಕೃತಿ ” ಶೂನ್ಯವಲ್ಲದೆ ಬೇರೆ” ಹೊರತಂದ ಹಲವು ವರ್ಷಗಳ ನಂತರ ಇದೀಗ ನಿವೃತ್ತಿಯ ಬಳಿಕ ಮಕ್ಕಳಿಗಾಗಿ  ಈ ಕೃತಿಯನ್ನು ಬರೆದಿರುವುದು ಸ್ತುತ್ಯಾರ್ಹ.

ಆಕರ್ಷಕ ಮುಖಪುಟ ಮತ್ತು ಒಳಗಿನ ಎಲ್ಲ ಕವನಗಳಿಗೂ ಸುಂದರವಾದ ರೇಖಾಚಿತ್ರಗಳಿವೆ.ಹಿರಿಯ ಸಾಹಿತಿ ಶ್ರೀ ಬೊಳುವಾರು ಮಹಮದ್ ಕುಂಞ ಯವರ ಬೆನ್ನುಡಿ ಇದೆ.

ಕೃತಿಯು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರ ಮುಖಾಂತರ ಮಕ್ಕಳನ್ನು ತಲುಪುವಂತಾಗಲೆಂದು ಹಾರೈಸುವೆ.

ಆಸಕ್ತರು ಪ್ರತಿಗಳಿಗಾಗಿ ಲೇಖಕರಾದ ಶ್ರೀ ಬೆಂ.ಶ್ರೀ ರವೀಂದ್ರರವರ ದೂರವಾಣಿ ಸಂಖ್ಯೆ 9448994199 ಸಂಪರ್ಕಿಸಬಹುದು.

************************

ಹು.ವಾ.ಶ್ರೀಪ್ರಕಾಶ್

Leave a Reply

Back To Top