ʼಕನಸಿನದನಿʼ

ಪುಸ್ತತಕಪರಿಚಯ

ʼಕನಸಿನದನಿʼ

            ಸಾಹಿತ್ಯ ಲೋಕದ ಪಯಣ ಹಲವು ಅಚ್ಚರಿಗಳಿಗೆ ಕಾರಣ. ಹಾಗೆ ನೋಡಿದರೆ ಜೀವನವೇ ಒಂದು ಸುದೀರ್ಘ ಪ್ರಯಾಣ.ಈ ಪ್ರಯಾಣದಲ್ಲಿ ಪರಿಚಿತರು ಅಪರಿಚಿತರಾಗುವುದು ಅಪರಿಚಿತರು ಪರಿಚಿತರಾಗುವುದು ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಆದರೆ ಇದು ಎಣಿಸಿದಷ್ಟು ಸುಲಭವೂ ಸಹಜವೂ ಅಲ್ಲ. ಇಲ್ಲಿ ಅನೂಹ್ಯವಾದುದು ಘಟಿಸುತ್ತದೆ ಊಹಿಸಿಕೊಂಡದ್ದು ನಡೆಯುವುದೇ ಇಲ್ಲ. ಪರಸ್ಪರ ಭೇಟಿಯಾಗದ ಎಷ್ಟೋ ಚೇತನಗಳು ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಒಂದುವಿಶೇಷ ಪ್ರಕ್ರಿಯೆ. ಒಂದು ಸಹೃದಯ ಪರಿಚಯ ಹೇಗೆ ವಿಶ್ವಾಸವನ್ನು ಉಳಿಸಿಕೊಂಡು ಎಷ್ಟೇ ಅಂತರದಲ್ಲಿದ್ದರೂ ಸ್ನೇಹವನ್ನು ಕಾಪಿಟ್ಟುಕೊಂಡಿರುತ್ತದೆ ಎಂಬುದನ್ನು ನನಗೆ ಇಲ್ಲಿ ವಿವರಿಸಬೇಕಿತ್ತು. ಅದಕ್ಕಾಗಿ ಹೀಗೆ ಪಯಣ, ಪರಿಚಯ, ಪ್ರಕ್ರಿಯೆ ಎಂದೆಲ್ಲಾ ಕೊಂಕಣ ಸುತ್ತಿಮೈಲಾರಕ್ಕೆ ಬರಬೇಕಾಯ್ತು.

            ಡಾ|| ಅಜಿತ್ ಹರೀಶಿ ಎಂಬ ಸಹೃದಯ ವ್ಯಕ್ತಿತ್ವ ನನಗೆ ಪರಿಚಯವಾದುದು ಆನ್ಲೈನ್ ಸಾಹಿತ್ಯ ವೇದಿಕೆ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ. ಪ್ರಾಮಾಣಿಕತೆಯ ಸೆಲೆ ಇರುವ ಬರವಣಿಗೆಗಳು ಮೂಲಕ ಅಜಿತರು ನನಗೆ ಪರಿಚಯವಾದರು. ಒಮ್ಮೆ ಶಿರಸಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ನೇರ ಕಾಣುವಂತಾಯಿತು.ಸಾಮಾನ್ಯ ಹಾಗೂ ಸಾಹಿತ್ಯದ ಪರಿಭಾಷೆಯಲ್ಲಿ ಹೇಳುವಂತೆ ಅಜಿತರದು ಸ್ಫುರದ್ರೂಪಿ ನಿಲವು. ಅಷ್ಟೇ ಗಾಂಭೀರ್ಯದ ನಡವಳಿಕೆ. ವಿನಯವಂತಿಕೆಬೆರೆತ ಜಾಣ್ಮೆ. ಸೌಜನ್ಯ ಪೂರ್ಣ ಸ್ನೇಹ. ಅಂದು ಮುಖಾಮುಖಿಯಾಗಿ ಭೇಟಿಯಾದ ಅನಂತರ ಫೋನಿನಲ್ಲಿ ಒಂದೆರಡು ಬಾರಿ ಮಾತನಾಡಿರಬಹುದು. ನಾಲ್ಕಾರು ಸಂದೇಶ ವಿನಿಮಯವಾಗಿರಬಹುದು. ಇಷ್ಟರ ಹೊರತು ಪರಿಸ್ಪರ ಪರಿಚಿತರಾದ ಅಪರಿಚಿತರು ನಾವಿಬ್ಬರು.

            ಅಜಿತರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವುದು ನನಗೆ ಅವರ ಮೇಲಿನ ಮಮಕಾರವನ್ನು ಹೆಚ್ಚು ಮಾಡಲಿಕ್ಕೆ ಒಂದು ಕಾರಣ ಇರಬಹುದು. ಏಕೆಂದರೆ ನನ್ನ ತಂದೆಯವರೂ ಸಹ ವೈದ್ಯರೇ ಆಗಿದ್ದುದು ಅಜಿತರಲ್ಲಿ ಒಂದು ವಿಶ್ವಾಸ ಮೂಡಲು ಕಾರಣ ಇರಬಹುದು. ಉಳಿದಂತೆ ನಗರದ ಆಡಂಬರಕ್ಕೆ ಮೋಹಗೊಂಡು, ವ್ಯಾಪಾರೀ ತಂತ್ರವಾಗಿ ರೂಪಿಸಿಕೊಳ್ಳಬಹುದಾಗಿದ್ದ ತಮ್ಮ ವೃತ್ತಿಯನ್ನು ತನ್ನೂರಿನ ಜನರ ಸೇವೆಗೆ ಮೀಸಲಿರಿಸಿಕೊಂಡು ಸಹಜವಾಗಿ ಸರಳವಾಗಿ ಜೀವನ್ಮುಖಿಯಾಗಿ ಬದುಕುವ ವಿವೇಕವುಳ್ಳ ತರುಣರಾಗಿ ಕಂಡುಬರುವ ಡಾ|| ಅಜಿತರ ಬಗೆಗೆ ನನಗೆಒಂದು ಅಭಿಮಾನದ ಭಾವ ಮೂಡುತ್ತದೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಾಗಿ ಬರವಣಿಗೆ, ಓದಿನ ಹವ್ಯಾಸವನ್ನು ಹೊಂದಿರುವ ಇವರ ಸಾಹಿತ್ಯದ ಮೇಲಿನ ವ್ಯಾಮೋಹ ಸ್ವತಃ ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನನ್ನು ಚಕಿತಗೊಳಿಸುತ್ತದೆ. ಇಂಥಾಸಾಹಿತ್ಯಪ್ರೇಮಿ, ಸಹೃದಯಿ ಸಾಹಿತಿ ಅವರ ಬರಹಗಳನ್ನು ನನಗೆ ಮರೆಯದೆ ಕಳುಹಿಸುವುದು ನನಗೆ ವಿಶೇಷ ಸಂತಸವನ್ನು ತಂದುಕೊಡುತ್ತದೆ. ಕಾವ್ಯ ರಚನೆಯಲ್ಲಿ ಆಸಕ್ತಿ ಇದ್ದ ನನ್ನನ್ನು ಕಥಾ ರಚನೆಯತ್ತಲೂ ಚಿತ್ತ ಹರಿಸುವಂತೆ ಪ್ರೋತ್ಸಾಹಿಸಿದ ಅಜಿತರು ಮೂಲತಃ ಸೊಗಸಾಗಿ, ಸಹಜ ಸರಳವಾಗಿ ಕಥೆ ಬರಯುತ್ತಾರೆ. ಕನ್ನಡ ನಾಡಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ಪ್ರಸಿದ್ಧ ಆನ್ಲೈನ್ ಪತ್ರಿಕೆಗಳಲ್ಲಿ ಹಾಗೂ ಮುದ್ರಣ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿದ್ದು, ತಮ್ಮದೇ ಆದ ಓದುಗ ವರ್ಗವನ್ನು ಅಜಿತರು ಹೊಂದಿರುತ್ತಾರೆ. ಹಾಗೆಯೇ ತಮಗೆ ದೊರೆತ ಎಲ್ಲರ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವ ಸಂಯಮ ಹಾಗೂ ಆರ್ದ್ರತೆ ಇರುವ ಇವರು ಈ ಕಾಲಕ್ಕೆ ಅಪರೂಪ ಎನಿಸುವಷ್ಟು ಸ್ನೇಹಜೀವಿ. ಅಜಿತರ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಮೊನ್ನೆ ಅಚಾನಕ್ ಬಂದು ತಲುಪಿದ ಅವರ ಹೊಸ ಕವನ ಸಂಕಲನ ʻಕನಸಿನ ದನಿʼ.

            ಒಟ್ಟು ೪೬ ಕವನಗಳುಳ್ಳ ʻಕನಸಿನ ದನಿʼಯ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆಯುತ್ತವೆ. ʻʻಕನಸು’ ಎಂದರೆ ಅದೊಂದು ಆಶಾಭಾವನೆಯೂ ಹೌದು. ಅದಕ್ಕೆ ಒಂದು ದನಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲʼʼ. ಎನ್ನುವ ಕವಿ ಕನಸಿನ ಮೌನದ ಸದ್ದನ್ನು ಹಿಡಿದು ಸಾಗಿಬರುವ ಹಾದಿಯಲ್ಲಿ ದೊರೆತ ಸಾಲುಗಳನ್ನೇ ಕಾವ್ಯವಾಗಿಸಿ ಈ ಕೃತಿಯಲ್ಲಿ ನೀಡಿದ್ದಾರೆ ಎನಿಸುತ್ತದೆ. ʻಹಳೆಯ ಟ್ರಂಕಿಗೂ ಮೆಟ್ರೋ ರೈಲಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ..!ʼ ಎನ್ನುವ ಸ್ವಗತವೇ ʼಕನಸಿನ ದನಿʼ ಕವನದ ಭಾವ. ಕಳೆದ ಭೂತಕಾಲ, ವಾಸ್ತವದ ವರ್ತಮಾನ ಹಾಗೂ ಕನಸಿನ ಭವಿಷ್ಯವನ್ನು ಒಂದೇ ಗುಕ್ಕಿನಲ್ಲಿ ಹಿಡಿದಿಡುವ ಕವನವಿದು. ೭೦ ರಿಂದ  ೯೦ರ ದಶಕವನ್ನು ಸಾವಕಾಶವಾಗಿ ಕಂಡ ಪೀಳಿಗೆಯವರು ಅತ್ಯಾಧುನಿಕ ಜಗತ್ತಿನೊಡನೆಯೂ ಕಲೆತು ಬದುಕುತ್ತಿದ್ದರೂ ಯಾವುದೋ ನಿಧಿಯನ್ನು ಕಳೆದು ಕೊಂಡಂತೆ, ಭವಿಷ್ಯದ ಅನಾಹುತಗಳ್ನು ನೆನೆದು ಬೆಚ್ಚಿಬೀಳುವ ಆತಂಕದ ತಲ್ಲಣದ ಚಿತ್ರಣವಿದೆ. ಜೊತೆಗೆ ಈ ಸಂಕಲನದಲ್ಲಿನ ಹಲವಾರು ಕವನಗಳು ಕವಿಯ ಹಳೆಯ ಸೊಗಸಿನ ಕನವರಿಕೆ ಹಾಗೂ ಭವ್ಯಭವಿಷ್ಯದ ಪರಿಕಲ್ಪನೆಗಳಂತೆ ಕಾಣುತ್ತದೆ. ಆಶಾವಾದಿ ಮನಸ್ಸಿನ ಅಜಿತರ ಸಾಕ್ಷಿ ಪ್ರಜ್ಞೆಯಂತೆ.

ʼಹೇಳಿಕೆ ʼಕವನ ವಿಮರ್ಶೆಯನ್ನು ಒಪ್ಪದ ಜಿಗುಟು ಮನಃಸ್ಥಿತಿಯನ್ನು ಗೇಲಿ ಮಾಡುವಂತಿದೆ.

                                    ʼʼಚೆನ್ನಾಗಿಲ್ಲ

                                    ಅಂತಹೇಳುವಂತಿಲ್ಲ

                                    ಕಳೆದುಹೋಯಿತು ಕಾಲ..ʼʼ

            ಸಂಬಂಧ ಹಳಸುವುದು, ಹದಗೆಡುವುದು ದೃಷ್ಟಿಕೋನದ ಪ್ರತಿಫಲ. ಸಾವರಿಸಿಕೊಂಡು, ಸುಧಾರಿಸಿಕೊಂಡು ಹೋಗುವುದಾದರೆ ಜೀವನ ಸರಿ. ನಮ್ಮ ತಪ್ಪಿಲ್ಲದಿದ್ದರೂ ಸಾರಿ ಹೇಳಿ, ಎಲ್ಲಾ ಚೆಂದ ಎಲ್ಲಾ ಚೆಂದ ಎಂದರೆ ನೆಮ್ಮದಿ ಎನ್ನುವ ಜ್ಞಾನಮೀಮಾಂಸೆಯನ್ನು ಈ ಕಾವ್ಯ ಕಟ್ಟಿಕೊಡುತ್ತದೆ.

ಸಮಾಜಕ್ಕೆ, ಸುತ್ತಲಿನ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ ಹೋಗುವಾಗ ಒಮ್ಮೆ ಸರಿಕಂಡದ್ದನ್ನು ಮತ್ತೊಮ್ಮೆ ನಿರಾಕರಿಸುತ್ತಾ, ನಿರಾಕರಿಸಿದ್ದನ್ನು ಸ್ವೀಕರಿಸುತ್ತಾ ಕವಿ ಪರಸ್ಪರ ವೈರುಧ್ಯ ಭಾವ ಕವಿಗೆ ಸಹಜ ಎನಿಸುತ್ತಾನೆ. ʼಸವಾಲುʼ ಕವನದಲ್ಲಿ,

ʼʼವಂಶವಾಹಿಯಾಗಿ ಹರಿದು ಬಂದ

ಜೀವತಂತು ವಿನಕಾರಣಕ್ಕೆಲವು ನಡವಳಿಕೆ

ಆತ್ಮವಿಮರ್ಶೆ ಮದ್ದು ಸ್ವಯಂಕೃತ ಅಪರಾಧಕೆ

ಪಶ್ಚಾತ್ತಾಪಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲʼʼ

ಎನ್ನುವುದು ಜೀವತಂತುವಿನ ಅಧ್ಯಯನಾ ವರದಿ ಮಾತ್ರವಲ್ಲ. ಸಾಬೀತಾದ ಸತ್ಯ!

ಅಜಿತರ ಕವನಗಳು ಕೇವಲ ಕಾವ್ಯ ಭಾಷೆಯಲ್ಲಿ ಮಾತನಾಡುವ ಕ್ಲೀಷೆಗೆ ಸೇರುವುದಿಲ್ಲ. ಅವರ ವೃತ್ತಿ ಬದುಕಿನ ಪರಿಭಾಷೆಗಳು ಹಾಗೂ ಪಾರಿಭಾಷಿಕ ಪದಗಳು ಕವಿತೆಗೆ ವಿಶೇಷ ಜೀವ ತುಂಬುತ್ತವೆ. ಉದಾಹರಣೆಗೆ, ʼಭುಕ್ತಿʼ ಕವನದ ಈ ಸಾಲುಗಳು,

ʼʼಎರಡು ಗೆರೆ ಬಿದ್ದಿದೆ ಡೆಲಿವರಿ ಸಂಕೇತ

ಪ್ರೆಗ್ನೆನ್ಸಿ ಕಿಟ್ನಲ್ಲಲ್ಲ! ವಾಟ್ಸಾಪಿನ ವರಾತ

ನೋಡಿದರೆ ನೀಲಿಗೆರೆ, ಆರೋಪ ಉತ್ತರಿಸದಿರೆ

ಸಿಕ್ಕು ಸೆಟ್ಟಿಂಗ್ ಬದಲಿಸಿದರೆʼʼ

ಹಾಗೂ ʼಸಾವಂಚಿನ ಕೂಗುʼ ಕವನದ,

ʼʼಗಂಟಲೊಳಗೆ ತೂರಿಸಿದ ಆಳ

ತೂಗಾಕಿದ ಡ್ರಿಪ್ಪು, ಕೈಗೆ ಚುಚ್ಚಿದ ಕ್ಯಾನುಲ

ಆಷ್ಸಿಮೀಟರು, ಪಲ್ಸಬಿಪಿಮಾನಿಟರು

ಕಫದಸಕ್ಷನ್ನು, ಚೆಕ್ಕಾಗುವರಕ್ತ, ಶುಗರು

ನರ್ಸುಇಂಟೆನ್ಸಿವಿಷ್ಟು, ಮೂತ್ರಕೆ ಕಾಥೆಟರು..ʼʼ

ರೋಗಿಯೊಬ್ಬರ ವೈದ್ಯಕೀಯ ವರದಿಯನ್ನು ವೈದ್ಯರು ನೀಡುತ್ತಿರುವಂತೆ ಕಂಡರೂ, ಇದು ಕರಾಳ ಸತ್ಯದ ಅನಾವರಣ ಮಾಡುವ ಕವಿತೆಯಾಗಿದೆ. ಹೊರಗಿನ ಸೋಗು ಒಳಿನ ಕೂಗನ್ನು ಹೇಗೆ ಕಡೆಗಣಿಸಿದೆ ಎಂದು ಕವಿತೆ ವಿಶದಪಡಿಸುತ್ತದೆ.

ಮಾಫಲೇಶು ಕದಾಚನ ಕವಿತೆ ನೋಡಿ,

ʼʼನೋಡಿ ಪುಷ್ಪಗಳ

ನೀಡುತ್ತವೆ ಉಚಿತವಾಗಿ

ಪರಿಮಳ ಮಕರಂದಗಳ

ಸುವಾಸನೆ ಬೀರಿ

ಮುಗಿಸಿ ಕಾರ್ಯವ

ತೊಟ್ಟು ಕಳಚಿ

ಬಿದ್ದು

ಮಾಯವಾಗಿ ಬಿಡುತ್ತವೆ

ನಾವು ಹೊಲಸು

ನಾರಿಯೇತೀರುತ್ತೇವೆ

ತೀರಿದ ಮೇಲೂ

ಹೊಲಸು ನಾರುತ್ತೇವೆ!ʼʼ

ಇದನ್ನು ಕೇವಲ ನಾಕಾರು ಸಾಲಿನ ಕವಿತೆ ಎಂದು ಮೂಗು ಮುರಿಯಲಾದೀತೆ?! ಜೀವನ ಸಾರ್ಥಕತೆಯ ತತ್ತ್ವ ದರ್ಶನವನ್ನೇ ಇದು ಕಾಣಿಸುತ್ತದೆ.

            ವಿದಳನ, ಊನ,  ವಜನು, ಐ ರಿಪೀಟ್, ಇಲಿ, ಬೋನು ಮತ್ತು ಸಾಬೂನು, ಶರಾವತಿಯ ಅಳಲು ಮೊದಲಾದವು ಜೀವನದ ವಿವಿಧ ಮಗ್ಗಲುಗಳ ವಿಮರ್ಶೆಯಂತಿವೆ. ಸಾಮಾನ್ಯದಂತೆ ಕಾಣುವ ಈ ಕೆಲವು ಕವಿತೆಗಳು ಗಹನವಾದ ಆಧ್ಯಾತ್ಮದ ಚಿಂತನೆಗೆ ತೊಡಗುವಂತೆ ಮಾಡತ್ತವೆ. ಮೇಲು ಮೇಲಿನ ಓದಿಗೆ ದಕ್ಕುವಂತೆ ಆಳ ವಿಶ್ಲೇಷಣೆಗೂ         ಡಾ|| ಅಜಿತರ ಕಾವ್ಯಗಳನ್ನು ಸಂಯೋಜಿಸಬಹುದು.

            ಇಡೀ ಸಂಕಲನದ ಕವಿತೆಯ ವಸ್ತುಗಳಿಗಾಗಿ ಕವಿ ತಿಣುಕಾಡಿಲ್ಲ. ಸುತ್ತಲಿನ ಘಟನೆಗಳನ್ನೇ ತಮ್ಮ ಎಕ್ಸರೇ ಕಂಗಳಿಂದ ಪರೀಕ್ಷಿಸಿ ಕವಿತೆಗೆ ವಸ್ತುವಾಗಿಸಿ ಕೊಂಡಿದ್ದಾರೆ. ಇದು ಕಾವ್ಯ ರಚನೆಗೆ ಪೂರಕವಾಗಿದ್ದರೂ ಮತ್ತಷ್ಟು ವಸ್ತು ವೈವಿಧ್ಯತೆಯನ್ನು ಕವಿ ಸಮರ್ಥವಾಗಿ ಕೊಡಬಲ್ಲರೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ನಿಟ್ಟಿನಲ್ಲಿಡಾ|| ಅಜಿತರು ಹೆಚ್ಚಿನ ಗಮನ ಹರಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನನ್ನ ಒಂದು ಓದಿನ ಅಳವಿಗೆ ಸಿಕ್ಕ ಭಾವಗಳಿಗೆ, ಮಾತುಗಳಿಗೆ ಹೀಗೆ ಅಕ್ಷರ ರೂಪ ಕೊಟ್ಟಿರುತ್ತೇನೆ.

            ತಮ್ಮ ಕತೆಗಳಲ್ಲಿ, ದೈನಂದಿನ ಘಟನಾವಳಿಗಳನ್ನು ಚಿತ್ತಿಸುತ್ತಲೇ ಅಚ್ಚರಿಯ ತಿರುವುಗಳನ್ನು ನೀಡುವ ಮೂಲಕ ಓದುಗರ ಗಮನವನ್ನು ಸೆಳೆಯುವ ಅಜಿತರು ಕವನ ರಚನೆಗೆ ಏಕಾಗ್ರಚಿತ್ತರಾದರೆ. ಅವರಿಂದ ಇನ್ನೂ ಮೌಲಿಖ ಕವನಗಳನ್ನು ನಿರೀಕ್ಷಿಸಬಹುದು. ಎಂದಿನಂತೆ,  ನನ್ನೊಂದಿಗಿರುವ ಅಜಿತರ ನಿರ್ಮಲ ಸ್ನೇಹಕ್ಕೆ ಹಾಗೂ ಬರಹದ ಮೇಲೆ ಅವರಿಗಿರುವ ಮೋಹಕ್ಕೆ ಖುಷಿಪಡುತ್ತಾ, ಒಂದೊಳ್ಳೆ ಕವನ ಸಂಕಲನ ಓದಿಸಿದ್ದಕ್ಕೆ ಧನ್ಯವಾದಗಳನ್ನು ಹೀಗೆ ಹೇಳಬಯಸುವೆ.

.

.

.

**************************

  • ವಸುಂಧರಾಕದಲೂರು.

2 thoughts on “ʼಕನಸಿನದನಿʼ

  1. ಸುಂದರ ನಿರೂಪಣೆ ಮತ್ತು ಪರಿಚಯ. ಇಬ್ಬರಿಗೂ ಅಭಿನಂದನೆಗಳು

Leave a Reply

Back To Top