ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.

ಪುಸ್ತಕ ಸಂಗಾತಿ

ಆತ್ಮಕಥನ:

ಬಾಬಾಸಾಹೇಬರ ಆಲೋಚನೆಗಳು.

ಸುಧಾರಕರ-ಸಾಧಕರ ವ್ಯಕ್ತಿಗತ ಜೀವನದ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ, ಕೆಲವೊಮ್ಮೆ ತೀವ್ರ ಕುತೂಹಲ ಇರುವುದು ಸಾಮಾನ್ಯ ಸಂಗತಿ. ಅದನ್ನು ನೀಗಿಸಿಕೊಳ್ಳುವದಕ್ಕಾಗಿ ಅವರು ತಮ್ಮ ಆದರ್ಶ ವ್ಯಕ್ತಿಗಳ ಆತ್ಮಚರಿತ್ರೆಗಳನ್ನು ಓದಿ, ಇಲ್ಲವೇ ಬಯೋಪಿಕ್ ಗಳನ್ನು ತೆರೆಯ ಮೇಲೆ ನೋಡಿ ತಮ್ಮ ಕುತೂಹಲ ತಣಿಸಿಕೊಳ್ಳುತ್ತಾರೆ. ಭಾರತ ಸಂವಿಧಾನದ ಶಿಲ್ಪಿ, ವಿಶ್ವಜ್ಞಾನಿ, ಬಾಬಾಸಾಹೇಬ ಅಂಬೇಡ್ಕರರ ಸಂದರ್ಭದಲ್ಲಿ ಈ ಸಂಗತಿ ವ್ಯತಿರಿಕ್ತವಾಗಿದೆ. ಸಂವಿಧಾನ ಸಮಿತಿಯ ಚರ್ಚೆಗಳು, ಜನ ಸಂಘಟನೆಯ ತಲ್ಲಣಗಳು, ಕಾನೂನು ಹೋರಾಟಗಳು, ವೈಚಾರಿಕ-ರಾಜಕೀಯ ವಿರೋಧಗಳು ಇವೆಲ್ಲವುಗಳ ನಡುವೆ ಅಂಬೇಡ್ಕರರು ತಮ್ಮ ಜೀವನ ಮತ್ತು ಹೋರಾಟದ ಖಾಸಗಿ ಲೋಕವನ್ನು ಜಗತ್ತಿಗೆ ಪರಿಚಯಿಸುವ ಪ್ರಾಮುಖ್ಯತೆಗೆ ಒತ್ತು ಕೊಡಲಿಲ್ಲ. ಆತ್ಮಚರಿತ್ರೆಯನ್ನು ಬರೆಯುವುದಕ್ಕಿಂತ ದೇಶವನ್ನು ಬದಲಾಯಿಸಬಲ್ಲ ಗ್ರಂಥಗಳನ್ನು ರಚಿಸಿ ಜನರ ಕಣ್ತೆರೆಸುವ ಕಾಯಕಕ್ಕೆ ಬದ್ಧರಾದರು.

                 ಆದ್ದರಿಂದ  1954ರಲ್ಲಿ “ನಾನು ಆತ್ಮಚರಿತ್ರೆಯನ್ನು ಬರೆಯುವುದಿಲ್ಲ” ಎಂದು ಬಹಿರಂಗ ಘೋಷಣೆ ಮಾಡಿ ಎಲ್ಲಾ ಅಭಿಮಾನಿಗಳ ಸ್ನೇಹಿತರ ನಿರೀಕ್ಷೆಗೆ ತೆರೆ ಎಳೆದುಬಿಟ್ಟರು.(ಫೋಕಸ್ ಇಂಪ್ರೆಷನ್ಸ್: ನವದೆಹಲಿ ಪ್ರಕಟಿಸಿರುವ ನಾನಕ್ ಚಂದ್ ರತ್ತು ಅವರು ಬರೆದಿರುವ “ಲಿಟಲ್ ನೋನ್ ಫ್ಯಾಕ್ಟ್ಸ್ ಆಫ್ ಡಾಕ್ಟರ್ ಅಂಬೇಡ್ಕರ್”ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವನ್ನು ಕಾಣಬಹುದು).

“ವೀಸಾದ ನಿರೀಕ್ಷೆಯಲ್ಲಿ”ಪುಸ್ತಕದ ಸಂದರ್ಭದಲ್ಲಿ ಅವರು ತಮ್ಮ ಅನುಭವದ ಕೆಲವು ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು ಎನ್ನಲಾದ ಆರು ಚಿಕ್ಕ ಚಿಕ್ಕ ಲೇಖನಗಳನ್ನು ಸಂಗ್ರಹಿಸಿ ಈ ಪುಸ್ತಕ ಪ್ರಕಟಿಸಲಾಗಿದೆ. ಈ ಎಲ್ಲಾ ವಿವರಗಳನ್ನು ಕೂಡ ಅನುವಾದಕರಾದ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ತಮ್ಮ ,”ಅನುವಾದಕರ ಮಾತು”ಗಳಲ್ಲಿ ವಿವರಿಸಿದ್ದಾರೆ. ಈ ಕಿರು ಹೊತ್ತಿಗೆಯ ಉದ್ದೇಶವನ್ನು ಅನುವಾದಕರು ಸ್ಪಷ್ಟವಾಗಿ ಹೀಗೆ ಹೇಳಿಕೊಂಡಿದ್ದಾರೆ.

“ಅಂಬೇಡ್ಕರ್: ಅನುಭವದ  ಆರು ಕಥನಗಳು, ಪುಸ್ತಕ ಸಾಮಾನ್ಯ ಓದುಗರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಪ್ರಕಟವಾಗುತ್ತಿದೆ”. ಈ ಮಾತುಗಳಿಗೆ ಪುಷ್ಠಿ ಕೊಡುವಂತೆ ಇಲ್ಲಿನ ಆರೂ ಬರಹಗಳು ಸರಳ ನೇರ ಮತ್ತು ಸುಂದರ ಕಥಾನಕಗಳಂತೆ ಓದಿಸಿಕೊಂಡು ಹೋಗುತ್ತವೆ. ವಿದ್ವತ್ತಿನ, ಸಿದ್ಧಾಂತದ, ಆಶಯಗಳ, ಪ್ರತಿಪಾದನೆಗಳ ಯಾವುದೇ ಭಾರವಿಲ್ಲದೆ ದಾಖಲೆಗೊಂಡಿವೆ. ಘಟನಾ ಪ್ರಧಾನವಾದ ವಸ್ತುವನ್ನು ಸ್ಥಳ-ವ್ಯಕ್ತಿ-ದಿನಾಂಕ ಸಮೇತ ಕಥನಗಳನ್ನಾಗಿಸಿ ಸಾಮಾನ್ಯರಿಗೂ ಈ ದೇಶದ ಜಾತಿ ವ್ಯವಸ್ಥೆಯ ದೌರ್ಜನ್ಯವನ್ನು  ಮನಗಾಣಿ ಸುವಂತೆ ದಾಖಲಿಸಲಾಗಿದೆ.

          ಇಲ್ಲಿರುವ ನಾಲ್ಕು ಘಟನೆಗಳು ಸ್ವತಃ ಬಾಬಾಸಾಹೇಬರು ಅನುಭವಿಸಿದ ಜೀವನ ಗಾಥೆಗಳು.ಸುಬೇದಾರ್ ರಾಮಜಿ ಸಕಪಾಲ್ ರು

ಗೋರೆಗಾಂವ್ ನಲ್ಲಿ ಬ್ರಿಟಿಷ್ ಸರಕಾರವು ನಡೆಸುತ್ತಿದ್ದ ಬರಗಾಲ ಕಾಮಗಾರಿ ಕ್ಯಾಷಿಯರ್  ಆಗಿ ಕೆಲಸ ಮಾಡುತ್ತಿದ್ದಾಗ ಭೀಮಜಿ ವಯಸ್ಸು ಕೇವಲ ಒಂಭತ್ತು ವರ್ಷ. ಸಾತಾರಾದಿಂದ ಸೋದರರೊಂದಿಗೆ ಗೊರೆಗಾoವ್ ತಲುಪುವ ಪ್ರಯಾಣದಲ್ಲಿ ಆದ ಕಹಿ ಅನುಭವವನ್ನೇ ಮೊದಲ ಕಥನದಲ್ಲಿ ವಿವರಿಸಲಾಗಿದೆ. ಬಾಬಾಸಾಹೇಬರ ಅಣ್ಣ ತಾವೆಲ್ಲ ಗೊರೆಗಾoವ್ ಗೆ ಬರುತ್ತಿರುವುದಾಗಿ ಬರೆದ ಪತ್ರವನ್ನು ಜವಾನ ರಾಮಜಿ ಅವರಿಗೆ ತಲುಪಿಸದಿರುವದಕ್ಕೆ ಅಸ್ಪೃಶ್ಯತೆ ಆಚರಣೆ, ಜಾತಿ ವ್ಯವಸ್ಥೆಗಳೇ ಕಾರಣ. ಅಸ್ಪೃಶ್ಯತೆ ಎಂಬುದು ಭಾರತದ ಜಾತಿಗಳ ಸಾಮಾನ್ಯ ನಡವಳಿಕೆ ಎಂದುಕೊಳ್ಳಲಾಗದು, ಎಂಬ ಸೂಚನೆ ಈ ಘಟನೆಯಿಂದ  ಬಾಬಾಸಾಹೇಬರಿಗೆ ಸಿಕ್ಕಿತ್ತು .ಈ ಬಗ್ಗೆ ಗಂಭೀರ ಪ್ರಯತ್ನಗಳು ಅಗಬೇಕು ಎಂದುಕೊಂಡರು.

        1918 ರಲ್ಲಿ ಬಾಬಾ ಸಾಹೇಬರು ಬರೋಡಾದಲ್ಲಿ ಸಲ್ಲಿಸಿದ ಸೇವೆಯ ಸಂದರ್ಭದ ಬವಣೆಗಳನ್ನು ಎರಡನೇ ಲೇಖನದಲ್ಲಿ ದಾಖಲಿಸಲಾಗಿದೆ. ಬರೋಡ ಮಹಾರಾಜರ ಸರಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರೂ ತಂಗಲು ಒಂದು ಬಾಡಿಗೆ ಮನೆ ಸಿಗದಿದ್ದಾಗ ಫಾರ್ಸಿ ಮಾಲೀಕರೊಬ್ಬರ ವಸತಿ ಗೃಹದಲ್ಲಿ ಬಾಬಾಸಾಹೇಬರು ಕೆಲವು ದಿನ ನೆಲೆಸಿರುತ್ತಾರೆ. ಈ ವಿಷಯವನ್ನು ತಿಳಿದ ಪಾರ್ಸಿ ಯುವಕರ ಗುಂಪೊಂದು ಅವರನ್ನು ಅಲ್ಲಿಂದ ಹೊರಗಟ್ಟುತ್ತದೆ. “ಅಸ್ಪೃಶ್ಯನಾದವನು ಹಿಂದುಗಳಿಗೆ ಹೇಗೋ ಹಾಗೆಯೇ ಪಾರ್ಸಿಗಳಿಗೆ ಕೂಡ ಅಸ್ಪೃಶ್ಯನೇ ಆಗಿರುತ್ತಾನೆ ಎಂಬುದನ್ನು ನಾನು ಮೊದಲ ಬಾರಿಗೆ ಅರಿತೆ” ಎಂದು ಬಾಬಾಸಾಹೇಬರು ಉದ್ಗರಿಸುತ್ತಾರೆ!

             ಅಸ್ಪೃಶ್ಯರು ನೀರನ್ನು ಮುಟ್ಟಬಾರದೆಂಬ ಅಮಾನುಷ ಆಚರಣೆಗೆ ಭಾರತದಲ್ಲಿ ಯಾವುದೇ ಧರ್ಮ ಭೇದ ಇರಲಿಲ್ಲ. ಹಿಂದೂ,ಮುಸ್ಲಿಂ, ಪಾರ್ಸಿ- ಧರ್ಮ ಯಾವುದಾದರೂ ಇರಲಿ, ಧರ್ಮದ ಆಚರಣೆಗಳು ಅಸ್ಪೃಶ್ಯರ ಪಾಲಿಗೆ ಅಮಾನುಷವೇ  ಆಗಿದ್ದವು.1934ರಲ್ಲಿ ತಮ್ಮ ವಕೀಲ ಮಿತ್ರರೊಂದಿಗೆ ಎಲ್ಲೋರಾದ ಬೌದ್ಧ ಗುಹೆಗಳಿಗೆ ಭೇಟಿಕೊಡಲು ಹೊರಟಾಗ

ಔರಂಗಾಬಾದನ ಮಸೀದಿಯೊಂದರಲ್ಲಿ ನಡೆದ ಘಟನೆಯಲ್ಲಿ ಕೊನೆಗೂ ಇವರಿಗೆ ನೀರು   ಸಿಗುವುದೇ ಇಲ್ಲ. “ಸವರ್ಣೀಯ ಹಿಂದುಗಳಿಗೆ ಒಬ್ಬ ಅಸ್ಪೃಶ್ಯನು ಹೇಗೋ ಹಾಗೆಯೇ ಮುಸ್ಲಿಮರಿಗೂ ಅವನು ಅಸ್ಪೃಶ್ಯ ವ್ಯಕ್ತಿಯೇ ಆಗಿರುತ್ತಾನೆ ಎಂದು ನಿರ್ಣಯಕ್ಕೆ ಬರುತ್ತಾರೆ.

                ಈ ಮೂರ್ನಾಲ್ಕು ಘಟನೆಗಳು ಬಾಬಾಸಾಹೇಬರು ಅನುಭವಿಸಿದ ಪುಟ್ಟ ಬರಹಗಳು. 1929ರಲ್ಲಿ ಶಿಕ್ಷಕರೊಬ್ಬರ ಪತ್ನಿ ಅಸ್ಪೃಶ್ಯಳು ಎಂಬ ಕಾರಣಕ್ಕಾಗಿ ವೈದ್ಯರು ಚಿಕಿತ್ಸೆ ನಿರಾಕರಿಸಿದಾಗ ಮರಣವನ್ನಪ್ಪುತ್ತಾರೆ.

         1938ರಲ್ಲಿ ಬಾಬಾಸಾಹೇಬರು ‘ಅಸ್ಪೃಶ್ಯತೆ ಅಧ್ಯಯನ ಸಮಿತಿ ಸದಸ್ಯ’ ರಾದ ಸಂದರ್ಭದಲ್ಲಿ ಗುಜರಾತಿನವನೆ ಆದ ಭಂಗಿ ಜನಾಂಗದ ಗ್ರಾಮಲೆಕ್ಕಿಗನೊಬ್ಬ

ತವರೂರಲ್ಲೇ ನೌಕರಿ ಮಾಡಲು ಸಾಧ್ಯವಾಗದೆ ಮತ್ತೆ ಮುಂಬೈಗೆ ಹಿಂತಿರುಗುವ ಘಟನೆಯನ್ನೂ ಇಲ್ಲಿ ವಿವರಿಸಿದ್ದಾರೆ.

          ಒಟ್ಟಿನಲ್ಲಿ ಈ ಕಿರುಹೊತ್ತಿಗೆಯಲ್ಲಿ ಭಾರತೀಯ ಸಮಾಜದ ಯಾವ ಧರ್ಮವೂ ಅಸ್ಪೃಶ್ಯತೆಯನ್ನು ಪ್ರಬಲವಾಗಿ ತಿರಸ್ಕರಿಸಿಲ್ಲ ಎಂಬುದಕ್ಕೆ ಸಾಕ್ಷಿ ಸಿಗುತ್ತವೆ. ಧರ್ಮ ಯಾವುದಾದರೂ, ಜಾತಿ ಯಾವುದಾದರೂ ಅಸ್ಪೃಶ್ಯರಿಗೆ ಭಾರತೀಯ ಸಮಾಜದಲ್ಲಿ ದೌರ್ಜನ್ಯದಿಂದ ಮುಕ್ತಿ ಸಿಕ್ಕಿಲ್ಲ ಎಂಬುದನ್ನು ಕಾಣುತ್ತೇವೆ.

             ಆತ್ಮಕಥನದ ಶೈಲಿಯಲ್ಲಿ ಈ ಕೃತಿ ಇರಬಹುದೆಂಬ ಕುತೂಹಲದಿಂದ ಓದ  ಲಾರಂಭಿಸಿದರೆ ನಮಗೆ ಇಲ್ಲಿ ಬಾಬಾಸಾಹೇಬರ ವ್ಯಕ್ತಿಗತ ಬದುಕಿನ ಪರಿಚಯ ಅವರದೇ ಮಾತುಗಳಲ್ಲಿ ಕಂಡುಬರುವುದಿಲ್ಲ. ಏಕೆ ಎಂಬುದಕ್ಕೆ ಇದೇ ಕೃತಿಯಲ್ಲಿ ಉತ್ತರವಿದೆ.

             ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು “ಚೆನ್ನಾಗಿದೆ, ಆದರೆ ನನ್ನದು  ಸುದೀರ್ಘ ಮತ್ತು ಅಂತ್ಯ ಕಾಣದ ಜೀವನಗಾಥೆ,  ಅದು ಯಾರಿಗೂ ತಿಳಿಯದು ಬೇರಾರು ಬರೆಯುವಂತಹದ್ದಲ್ಲ” ಎನ್ನುತ್ತಾರೆ. ‘ ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು  ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.


                                        ಡಿ.ಎಮ್.ನದಾಫ

Leave a Reply

Back To Top