ಪುಸ್ತಕ ಸಂಗಾತಿ
ಆದರ್ಶ ಶಿಕ್ಷಕಿಯ ಬಾಲ್ಯದೊಂದಿಗೆ ಮಕ್ಕಳು…
ಮಕ್ಕಳು ಓದಿದ ಟೀಚರ ಡೈರಿ
ಲೇ: ವೈ.ಜಿ.ಭಗವತಿ.
ಪ್ರಕಟಣೆ:೨೦೨೧
ಪುಟಗಳು:೧೧೪
ಬೆಲೆ:೧೧೦ರೂ.
ವಿಜಯಾ ಪ್ರಕಾಶನ.ಪರಿಶ್ರಮ ನಿಲಯ. ಕಲಘಟಗಿ.ಧಾರವಾಡ ೫೮೧೨೦೪. ಮೊ:9448961199
ಮಕ್ಕಳು ಯಾವಾಗಲೂ ತಮ್ಮ ಟೀಚರನ್ನು ಕುತೂಹಲದಿಂದ ನೋಡುತ್ತಾರೆ. ಶಿಕ್ಷಕರ ಪ್ರೀತಿಯ ಮುಖ ಇರಬಹುದು… ಯಾವಾಗಲೂ ಬಯ್ಯುವ ಸಿಡುಕಿನ ಮುಖ ಇರಬಹುದು… ಆ ಮುಖಗಳ ಹಿಂದಿನ ಕಾರಣಗಳನ್ನು ಅವರು ಹುಡುಕುತ್ತಾರೆ. ಮಕ್ಕಳನ್ನು ಪ್ರೀತಿಸುವ, ಅವರ ನಡೆಯನ್ನು ಪ್ರೋತ್ಸಾಹಿಸುವ, ಅವರೊಂದಿಗೆ ಆಟ ಆಡುವ, ಮಕ್ಕಳ ಯಾವುದೋ ಹವ್ಯಾಸವನ್ನು ಎತ್ತಿ ಖುಷಿಯ ಮಾತಾಡುವ ಶಿಕ್ಷಕರಾದರೆ… ಮಕ್ಕಳಿಗೆ ಅದೆಷ್ಟು ಪ್ರೀತಿ ಎಂಬುದನ್ನು ಅನುಭವಿಸಿಯೇ ನೋಡಬೇಕು, ಮಾತಿನಿಂದ ಹೇಳಲಾಗದು ಎಂದು ನನಗೆ ಅನಿಸುತ್ತದೆ. ಇಲ್ಲಿ ಒಬ್ಬ ಶಿಕ್ಷಕಿಯ ಕಥೆ ಇದೆ. ಅವರೊಂದಿಗೆ ಅವರನ್ನು ಪ್ರೀತಿಸುವ ಮಕ್ಕಳಿದ್ದಾರೆ. ಮಕ್ಕಳ ಮೂಲಕ ಅವರು ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ. ಹೀಗೆ ಒಬ್ಬ ಶಿಕ್ಷಕಿಯಾಗಿ ಸಾರ್ಥಕತೆ ಪಡೆದ ಶಾಲಿನಿ ಟೀಚರನ್ನು ಸ್ನೇಹಿತ ವಾಯ್ ಜಿ ಭಗವತಿಯವರು ನಿರೂಪಿಸಿದ್ದಾರೆ. ಹೌದು, ಅವರು ಇತ್ತೀಚೆಗೆ ಪ್ರಕಟಿಸಿರುವ ‘ಮಕ್ಕಳು ಓದಿದ ಟೀಚರ ಡೈರಿ’ ಕೃತಿ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿಯ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ. ಈ ಕಾದಂಬರಿ ಓದಿನಲ್ಲೇ ಮೇಲಿನದೆಲ್ಲ ನೆನಪಾದದ್ದು.
ಶಾಲಿನಿ ಟೀಚರ ಊರಿಗೆ ಹೋಗಿದ್ದಾಗ ಅವರ ರೂಮನ್ನು ಸ್ವಚ್ಛಗೊಳಿಸಲು ತೊಡಗಿದ ಮಕ್ಕಳಿಗೆ ಅವರು ಬರೆದಿದ್ದ ಡೈರಿಯೊಂದು ಅಕಸ್ಮಾತ್ತಾಗಿ ಸಿಗುತ್ತದೆ. ಈ ಡೈರಿಯ ಓದಿನ ಮೂಲಕ ಕಾದಂಬರಿ ತೆರೆದುಕೊಳ್ಳುತ್ತದೆ.
ಮಕ್ಕಳನ್ನು ತನ್ನ ಕೆಲಸವನ್ನು ಪ್ರೀತಿಸುವ ಶಾಲಿನಿ ಟೀಚರ, ಬೇರೆಯವರ ಮಗಳಾದರೂ ಪ್ರೀತಿಗೆ ಒಂದಿಷ್ಟೂ ಚ್ಯುತಿ ಬಾರದಂತೆ ಸಲಹುವ ಶಾಲಿನಿಯವರ ಸಾಕು ತಂದೆ ತಾಯಿ, ತನಗೆ ಮೊದಲು ಸಿಕ್ಕಿದ ಮಗುವೆಂದು ಅದರ ಸಹಾಯಕ್ಕೆ ಸದಾ ತುಡಿಯುವ ದುಡಿಯುವ ತನ್ಮೂಲಕ ಸಮಾಜದಲ್ಲಿ ಸೌಹಾರ್ಧತೆಯನ್ನು ಸಂಕೇತಿಸುವ ರುಸ್ತುಂ ಕಾಕಾ, ಪಕ್ಕೀರ ಮತ್ತು ಅವನ ತಾಯಿ ಟೀಚರ ಪ್ರೀತಿಯ ಅಪ್ಪುಗೆಯಲ್ಲಿ ತೇಲಿ ಹೋಗುವುದು, ರೇಶ್ಮಾ ಮೇರಿ ಹಮೀದಾ ಕಸ್ತೂರಿಯರು ಟೀಚರ ಡೈರಿ ಓದುತ್ತ ಅದರೊಳಗೆ ಒಂದಾಗುತ್ತ ತಮ್ಮ ಸುತ್ತಲಿನ ಸಂಗತಿಗಳನ್ನು ಬಿಚ್ಚಿಕೊಳ್ಳುತ್ತ ತಾವೂ ಡೈರಿ ಬರೆಯುವಂತಾಗುವುದು ಎಲ್ಲ ಈ ಕಾದಂಬರಿಯಲ್ಲಿ ಇದೆ.
ಯಲ್ಲಮ್ಮನ ಗುಡ್ಡದಲ್ಲಿ ಯಾರೋ ಕೊಟ್ಟುಹೋದ ಮಗುವೊಂದು ಓದಿನಲ್ಲಿ ಜಾಣೆಯಾಗಿ, ಆಟದಲ್ಲಿ ಚಾಂಪಿಯನ್ ಆಗಿ ಕೊನೆಗೆ ಉತ್ತಮ ಶಿಕ್ಷಕಿಯಾಗುವುದು ಮಕ್ಕಳಿಗೆ ಸಹಜವಾಗಿ ಒಂದು ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳುವ ಕ್ರಿಯೆಯನ್ನು ಪ್ರಾಕೃತಿಕವಾಗಿ ಅರಿತುಕೊಳ್ಳುವಂತೆ ಆಗಿದೆ. ಬಡತನ ಹಾಗೂ ಇತರ ಸಂಕಷ್ಟಕ್ಕೆ ಒಳಗಾಗಿರುವ ಮಕ್ಕಳು ಒಳಿತಿನ ಆಶಯ ಹೊತ್ತರೆ ಪ್ರಕೃತಿಯೂ ಹೇಗೆಲ್ಲ ಸಹಕರಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ತುಂಟ ಹುಡುಗಿಯಾಗಿದ್ದ ಶಾಲಿನಿ ಚಿಕ್ಕಮ್ಮ ಹೇಳಿದ ಮಾತು ಕೇಳಿ ನೊಂದುಕೊಳ್ಳುವುದು ಮತ್ತು ತನ್ನ ನಿಜವಾದ ತಂದೆ ತಾಯಿ ಯಾರೆಂದು ತಿಳಿದುಕೊಳ್ಳ ಬಯಸುವುದು… ರುಸ್ತುಂ ಕಾಕಾ ಶಾಲಿನಿಗೆ ಹೇಳುವ ಅವಳ ಬದುಕಿನ ಸತ್ಯಗಳೆಲ್ಲ ಓದುಗರನ್ನು ಭಾವುಕತೆಗೆ ಕೊಂಡೊಯ್ಯುವ ಹಾಗೆ ಭಗವತಿ ಚಿತ್ರಿಸಿದ್ದಾರೆ.
ಬಾಲಕಿ ದೊಡ್ಡವಳಾಗಿ ಶಿಕ್ಷಕಿಯಾಗುವುದು… ಶಿಕ್ಷಕಿಯ ಕಣ್ಣಿಂದ ತಾನು ಸೇವೆ ಸಲ್ಲಿಸುವ ಊರಿನ ಕುರಿತಾದ ನೋಟವೆಲ್ಲ ನಮಗೆ ಇಂದು ಅತಿ ಅಗತ್ಯವಾದ ಸಾಮಾಜಿಕ ಐಕ್ಯತೆಯನ್ನು ಪುಷ್ಠೀಕರಿಸುವಂತೆ ಲೇಖಕರು ಹೆಣೆದಿದ್ದಾರೆ.
ಉದ್ಯೋಗಕ್ಕಲೆ ಸೇರಿದಾಗ ಅಲ್ಲಿ ಎದುರಾಗುವ ಬುದ್ಧಿಮಾಂದ್ಯ ಬಾಲಕ ಹಾಗೂ ಅವನ ಕುರಿತು ಶಿಕ್ಷಕಿಯ ಕಾಳಜಿ… ಹಂತ ಹಂತವಾಗಿ ಅವನನ್ನು ಪರಿವರ್ತಿಸಿ ಸಾಮಾನ್ಯ ಬಾಲಕನನ್ನಾಗಿಸಿದ ರೀತಿ ಮೆಚ್ಚುಗೆ ಆಗುವಂತಿದೆ. ಸಾಮಾನ್ಯವಾಗಿ ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಹೊಂದುವುದಿಲ್ಲ ಎನ್ನುವುದು ಹಾಗೂ ಹೆಚ್ಚಾಗಿ ಇರುವ ಬಡತನದ ಕಾರಣಕ್ಕಾಗಿ ಅವರ ಕುರಿತು ತಿರಸ್ಕಾರ ಭಾವ ಹೊಂದಿರುವಿಕೆಯನ್ನು ಹಲವರಲ್ಲಿ ಕಾಣುತ್ತೇವೆ. ಆದರೆ ಶಾಲಿನಿ ಟೀಚರ ಮುಖಾಂತರ ವಿಶೇಷ ಚೇತನರೂ ಪ್ರೀತಿಯ ಮಾತೃಭಾವ ಶಿಕ್ಷಕರಲ್ಲಿದ್ದರೆ ಬದಲಾವಣೆ ಸಾಧ್ಯ ಎನ್ನುವುದನ್ನು ಹೇಳುವುದಲ್ಲದೇ ಮಕ್ಕಳಲ್ಲೂ ಅಂತಹ ಭಾವ ಬೆಳೆಯಲು ಉತ್ತೇಜಿಸುತ್ತದೆ ಕಾದಂಬರಿ. ಟೀಚರ ಡೈರಿ ಓದಿದ ಮಕ್ಕಳು ತಮ್ಮ ಜೀವನದ ಘಟನೆಗಳನ್ನು ಸಮರ್ಥವಾಗಿ ಬರೆದು ಬಹುಮಾನ ಗೆಲ್ಲುವುದು ಕಾದಂಬರಿಯ ಕೊನೆಯಲ್ಲಿ ಇದೆ.
ಕಾದಂಬರಿಯನ್ನು ಟೀಚರ ಡೈರಿ ಮಕ್ಕಳು ಓದುವಂತೆ ನಿರೂಪಿಸಿದ್ದು ವಿಶೇಷ. ಇಲ್ಲಿ ಮಕ್ಕಳು ತಮ್ಮ ಬಾಲ್ಯಕ್ಕೆ ಹಾಗೂ ಮಕ್ಕಳ ಬಾಲ್ಯಕ್ಕೆ ಮುಖಾಮುಖಿಯಾಗುತ್ತಾರÉ ಮತ್ತು ತಮ್ಮ ಕುರಿತಾಗಿಯೂ ತಾವೇ ತಾವಾಗಿ ತಮ್ಮದೇ ಆದ ನಿರ್ಧಾರಕ್ಕೆ ಬರುವುದೆಲ್ಲ ಮಕ್ಕಳ ಒಳಿತಿನ ನಡೆಯಾಗುತ್ತದೆ.
ಕೂಡು ಕುಟುಂಭದ ಬಾಂಧವ್ಯ, ಗ್ರಾಮ ಜೀವನದ ಸಂತಸಗಳು ಹಾಗೂ ಪ್ರೀತಿ ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿದೆ. ಟೀಚರ ತಂದೆ ಶ್ರಮ ಸಂಸ್ಕøತಿಯ ಪ್ರತೀಕವಾದರೆ… ರುಸ್ತುಂ ಕಾಕ ಸಮಾಜದ ಸೌಹಾರ್ಧ ಪ್ರೀತಿಯಿಂದ ತಾನೇ ತಾನಾಗಿ ಬೆಸೆಯುವ ಪಾತ್ರವಾಗಿದ್ದಾರೆ. ಶಾಲಿನಿ ಟೀಚರ ಸಾಕುತಾಯಿ, ಪಕ್ಕೀರನ ಅಮ್ಮ ಇವರೆಲ್ಲ ಮಾತೃ ಭಾವವನ್ನು ಸಮರ್ಥವಾಗಿ ಪ್ರತಿನಿಧಿಸುವ ತಾಯಂದಿರಾಗಿ ಹಾಗೂ ತಮ್ಮ ಮುಗ್ಧ ಭಾವದಿಂದಾಗಿ ಓದುಗರ ಮನದಲ್ಲಿ ಗಟ್ಟಿಯಾಗಿ ಉಳಿಯುತ್ತಾರೆ.
ಭಗವತಿಯವರು ಈಗಾಗಲೇ ಎರಡು ಕಥಾಸಂಕಲನ ಹಾಗೂ ಮತ್ತೆ ಹೊಸಗೆಳೆಯರು ಎನ್ನುವ ಕಾದಂಬರಿಯನ್ನು ಹೊರತಂದು ಕನ್ನಡದ ಮಕ್ಕಳ ಕಥಾ ಲೋಕದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈಗ ‘ಮಕ್ಕಳು ಓದಿದ ಟೀಚರ ಡೈರಿ’ ಕಾದಂಬರಿಯ ಮೂಲಕ ತನ್ನದೇ ಆದ ಒಂದಿಷ್ಟು ಹೊಸತನ್ನು ನೀಡುತ್ತ ಕಾದಂಬರಿಯ ಕೊನೆಯಲ್ಲಿ ಪಕ್ಕೀರ ಚಿತ್ರಗಳಿಗೆ ಬಣ್ಣ ತುಂಬುತ್ತಿರುವಂತೆ ಮಕ್ಕಳ ಲೋಕಕ್ಕೆ ಖುಷಿಯ ಬಣ್ಣ ಹಚ್ಚಲು ತೊಡಗಿದ್ದಾರೆ. ಭಗವತಿಯವರು ಮುಂದಿನ ದಿಗಳಲ್ಲಿ ಬಣ್ಣ ಬಣ್ಣದ ಚಿತ್ರಗಳಂತಹ ಕಥೆಗಳನ್ನು ಹೊತ್ತು ಬಂದು ಮಕ್ಕಳ ಸಾಹಿತ್ಯ ಲೋಕಕ್ಕೆ ನೀಡಲಿ. ಅವರ ಸಾಹಿತ್ಯ ಎಲ್ಲರ ಪ್ರೀತಿಗೆ ಪಾತ್ರವಾಗಲಿ ಎಂದು ಹೇಳುತ್ತ ಮಕ್ಕಳಿಗೆ ಇಷ್ಟವಾಗುವ ಹೊಸ ಪುಸ್ತಕ ನೀಡಿರುವುದಕ್ಕೆ ಹಾಗೂ ಪ್ರಶಸ್ತಿ ಪುರಸ್ಕøತರಾಗಿರುವುದಕ್ಕೆ ಅವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ. ಈ ಪುಸ್ತಕ ಹೆಚ್ಚು ಓದುಗರ ಕೈ ತಲುಪಿ ಓದಿನ ಖುಷಿ ನೀಡಲಿ. ವಂದನೆಗಳು.
*************************
ತಮ್ಮಣ್ಣ ಬೀಗಾರ.
Chennagide congrats
ಧನ್ಯವಾದಗಳು
ಚೆಂದದ ಪುಸ್ತಕ ವಿಶ್ಲೇಷಣೆ. ಓದುವ ಕುತೂಹಲ.
ಧನ್ಯವಾದಗಳು ಸರ್
ಬೀಗಾರ ಸರ್ ಅವರ ವಿಸ್ತೃತ ಬರವಣಿಗೆಗೆ ಧನ್ಯವಾದಗಳು. ಕಾದಂಬರಿಯ ಆಶಯವನ್ನು ಚೆನ್ನಾಗಿ ವಿವರಿಸಿದ್ದಾರೆ. ತಮ್ಮಣ್ಣ ಬೀಗಾರ ಸರ್ ಹಾಗೂ ಸಂಗಾತಿ ಪತ್ರಿಕಾ ಬಳಗಕ್ಕೂ ಧನ್ಯವಾದಗಳು.
ತಮಗೂ ಆತ್ಮೀಯ ವಂದನೆಗಳು