ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

ಪುಸ್ತಕ ಸಂಗಾತಿ

ಭಾವ ಜೀವಿ ಕಂಡ ಬಾಲ್ಕನಿಯ ನೋಟ-

ಬಾಲ್ಕನಿ ಕಂಡ ಕವಿತೆಗಳು

ಕವಿತೆಯ ಬಗ್ಗೆ ಬರೆಯುವುದು ಅಗತ್ಯವೇ? ಕವಿಯ ಭಾವ ಹಿಡಿಯುವ ಅನಿವಾರ‍್ಯ ಕಾರ್ಯವೇನಿದೆ?. ಕವಿತೆ ತಾನೇ ತಾನೇ ಚಂದದ ಹೆಣ್ಣಲ್ಲವೇ? ಹಾಗೇ ಆ ಸೌಂದರ‍್ಯವನ್ನ ಆಸ್ವಾದಿಸಬೇಕಲ್ಲದೇ, ಅವಳನ್ನು ಹಿಗ್ಗಿಸಿ, ಕುಗ್ಗಿಸಿ, ಇಲ್ಲದ ಮೆರವಣಿಗೆಯಲ್ಲಿ ಮೆರೆಸಿ, ಇಲ್ಲ ಕಂದಕದ ತೋಡಿಗೆ ದೂಡಿ ಹೀಗೆಲ್ಲ ಮಾಡುವಾಗ ನನಗೆ ಕೆಲವೊಮ್ಮೆ ಯಾವ ಕವಿಯೇ ಆಗಲಿ ಆತನ ಭಾವಲೋಕದ ಸುಂದರದ ರೂಪಕ್ಕೆ ಈ ಡಿಸೆಕ್ಸನ್ ಯಾಕಪ್ಪ ಅನ್ನಿಸುವುದು. ಆದರೂ ಈ ಪುಸ್ತಕ ಓದಿದ ಮೇಲೆ ಏನಾದರೂ ಬರೀಬಹುದು ಅನ್ನಿಸಿದ್ದು ಸಹಜ.

ಬೆಂಕಿಯ ಕೆನ್ನಾಲಿಗೆಗೆ ಬಳಲಿದ ಹೊತ್ತು, ಹೊಸ ಕನಸುಗಳು ಮೂಡಿದ ಹೊತ್ತು, ಹಕ್ಕಿ ರೆಕ್ಕೆಗಳಂತೆ ತೆರೆದುಕೊಂಡ ಹೊತ್ತು, ಚುಕ್ಕಿಗಳು ಕವಿಯ ಜೊತೆಯಾದ ಸಮಯ, ಆ ಸುಂದರತೆಯನ್ನು ಪದಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳುವವನೇ ಭಾವಜೀವಿ. ಅಂತಹ ಭಾವ ಜೀವಿಯಂತವಳು ಗೆಳತಿ ವಿಭಾ ಪುರೋಹಿತ್. ನಿತ್ಯ ಬದುಕಿನ ಸಂತೆಯಲ್ಲಿ ಕಳೆದುಹೋಗುವ ಖುಷಿಯನ್ನು ಹಿಡಿದಿಟ್ಟುಕೊಳ್ಳಲಾಗದ ಅಸಹಾಯಕತೆ ಹೆಚ್ಚು ಕಡಿಮೆ ಸ್ತ್ರೀ  ಜಗತ್ತಿನ ಪ್ರತಿ ಪುಟವನ್ನು ತುಂಬಿದೆ ಎಂದರೆ ಅದು ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ. ಗೃಹಮಂತ್ರಿ ಎನ್ನಿಸಿಕೊಂಡು ಮೆರೆಯುವ ಹೆಣ್ಣನಿಂದ ಹಿಡಿದು, ಪೈಸೆ ಪೈಸೆಗೂ ಲೆಕ್ಕ ಕೇಳುವ ಮನೆಯೊಡನೆಯನ ಪತ್ನಿಯರೂ, ಸಮಾಜದ ಉನ್ನತ ಸ್ಥಾನಗಳಲ್ಲಿ ಮಿಂಚುತ್ತಿರುವ ಹೆಣ್ಣುಗಳಿಂದ ಹಿಡಿದು, ತೀರಾ ಬಡತನದಲ್ಲೇ ದಿನದೂಡುವ ಕಾರ್ಮಿಕ ಮಹಿಳೆಯರು ಎಲ್ಲರೂ ಒಂದರ್ಥದಲ್ಲಿ ಸಂತೋಷದ ಬೆನ್ನು ಹತ್ತಿಯೇ ಬೆವರಿನ ಮಹಲಿನಲ್ಲಿ ಏಗುತ್ತಿದ್ದಾರೆ.

ಅಂತಹ ಭಿನ್ನ ಆರ್ಥಿಕ ಹಿನ್ನೆಲೆಯ ಎರಡು ಸ್ತ್ರೀ ಮುಖಗಳ ದರ್ಶನ ಮಾಡಿಸುತ್ತವೆ ವಿಭಾ ಅವರ ನಾಲ್ಕನೇಯ ಸಂಕಲನ ಮೊದಲಿನ ಈ ಎರಡು ಕವಿತೆಗಳು.

ಬೆಳಿಗೇ ಆಗುವುದಿಲ್ಲ

ಒಂದು ಕಪ್ ಚಹಾ ಹೀರುವ ತನಕ

ಉಳಿದೆಲ್ಲ ತಟಸ್ಥ

ಬೂದಿಯಲ್ಲಿ ಹೊರಳಾಡಿ

ಹೊಳೆವ ಕಣ್ಮಿಂಚಲ್ಲಿ ಕನಸ ಕುದುರಿಕೊಂಡಿದ್ದ

ಮಾರ್ಜಾಲ ಹುಲಿಯಂಥ ಪ್ರಾಣಿ

ಪೇಯ ಸಿಗಲಿಲ್ಲವಾದರೆ

ದಿನವೇ ಗಾಯಗೊಳ್ಳುವುದು” ಇದು ಸಂಕಲನದ ಮೊದಲ ಕವಿತೆ ‘ಒಂದು ಕಪ್ ಚಹಾ’ದ ಸಾಲುಗಳು. ಬಾಲ್ಕನಿಯ ಸಿರಿಯಲ್ಲಿ ಮೈದಳೆದ ಹೆಣ್ಣೊಬ್ಬಳ ವ್ಯಥೆ ಇದಾದರೆ

ಮರಗಟ್ಟಿದ ಬೆಂಕಿಯಿದು

ನೀಲಿಬೆಂಕಿ ಮೊದಲಹಾಗೆ

ಮೈಬಿಸಿ ಮಾಡುವುದಿಲ್ಲವೆಂದು

ಅಹವಾಲು ಹಾಕಿದ್ದಾನೆ ಅವನು

ಋತುಬಂಧದಾ ಸತ್ವಪರೀಕ್ಷಗೆ

ಸಿಲುಕಿದ್ದಾಳೆ, ದಿನಕ್ಕೊಂದು ಹೊಸಪ್ರಶ್ನೆಪತ್ರಿಕೆ!

ಸುಮ್ಮನೇ ಆರಿ ಹೋಗುವ ಜಾಯಮಾನವಲ್ಲ

ಋತುಬಂಧ

ಕಣ್ಣೀರ ಕೋಡಿ ಹರಿಸಿಯೇ ಕೆಡಹುವದು

ಅರ್ಥಮಾಡಿಕೊಳ್ಳುವ ಮಾನ ಯಜಮಾನಗಿಲ್ಲ!

ಇದು ಎರಡನೇ ಕವಿತೆ “ನೀಲಿಬೆಂಕಿ” ಕವನ ಹೇಳುವ ಮಧ್ಯವಯಸ್ಕ ಶ್ರಮಿಕ ಹೆಣ್ಣೊಬ್ಬಳ ಕರುಣಾಜನಕ ವ್ಯಥೆ.

 ಮಹಿಳಾ ಶೋಷಣೆಯೇ ಆಗಿರಬಹುದು ಇಲ್ಲ ಹೆಣ್ಣ ಭಾವ ಜಗತ್ತಿನ ಅನುಬಂಧಗಳೇ ಆಗಿರಬಹುದು, ವಿಭಾ ಕವಿತೆಗಳು ಸ

ಸ್ತ್ರೀ ಬದುಕಿನ ಸುತ್ತಲೇ ಸುತ್ತುತ್ತವೆ ಎಂಬುದು ಮೊದಲ ವಿಚಾರ.

 ಇಲ್ಲೊಂದು ಪದ್ಯವಿದೆ. ಬೆಳದಿಂಗಳಂತಹ ಅವನ ಕುರಿತು,

ನನ್ನೆದೆಯ ಸ್ವಚ್ಛಮುಗಿಲಾಗ

ತುಟಿಅಚ್ಚ ಒತ್ತಿರುವಿ

ನಿಚ್ಚಳಾಗ್ಯಾವ ನಿಹಾರಿಕೆಗಳು

ಪ್ರತಿಯಿರುಳು ಬೆಳದಿಂಗಳಾತ” ಈ ನುಡಿಯಲ್ಲಿ ತನ್ನೊಲವ ಪಡೆದ ಅವನನ್ನು ತಂಪು ಬೆಳದಿಂಗಳಿಗೆ ಹೋಲಿಸಿ ತನ್ನೆದೆಯ ಶುಭ್ರ ಮುಗಿಲನ್ನು ಆತ ಆವರಿಸಿಕೊಂಡ ಬಗೆಯನ್ನು ರಮ್ಯವಾಗಿಸಿದ್ದಾರೆ ವಿಭಾ. ಇಂತಹ ಮೋಹಕ ಕವಿತೆಗಳ ಜೊತೆಗೆ ಜೀವನದ ನೈಜ ವಾಸ್ತವತೆಯನ್ನು ಕಟ್ಟಿಕೊಡುವ ಕೆಲವು ಕವಿತೆಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.

ಪರಿಭಾಷೆ ಬದಲಾಗಿದೆ ಕವಿತೆ ಹೊಸ ಆಧುನಿಕತೆಯ ಮುಖವನ್ನು , ನೈಜ ಸಂವೇದನೆಗಳೆ ಇಲ್ಲದ ಬಾಳಿನ ಸೋಗಲಾಡಿತನವನ್ನು, ಹೊಸ ರೂಪದಲ್ಲಿ ವಿಜೃಂಭಿಸುತ್ತಿರುವ ಸಂಬಂಧಗಳ ರೀತಿಯನ್ನು ಹತಾಶೆಯ ಧ್ವನಿಯಲ್ಲಿ ಮೂಡಿಸಿದ್ದು, ಸಭ್ಯರಿಗೆ ಕಾಲವಲ್ಲದ ಕಾಲದಲ್ಲಿ ನಾವಿರುವುದನ್ನು ಮನಗಾಣಿಸುತ್ತಾರೆ. ಕೋರೋನಾ ಕಾಲದ ಬದುಕನ್ನು “ಲಾಕಡೌನ ಮುಂಜಾವು” ,“ಕೋರೋನಾ ಕೈಯಲ್ಲೊಂದು ಕರಪತ್ರ “ಇವು ತೆರೆದಿಟ್ಟಿವೆ. ಇಲ್ಲಿಯ ಕವಿತೆಗಳಲ್ಲಿ ಜೀವನದ ಸಾಚಾತನ ಮತ್ತು ವಂಚನತನಗಳ ಕುರಿತಾಗಿ ಕವಿಯಲ್ಲಿ ಎದ್ದಿರುವ ಸೂಕ್ಷ್ಮ ಮಾನಸಿಕ ತಲ್ಲಣಗಳ ಕುದಿ ಇದೆ. ಬಾಲ್ಕನಿಯ ಕಿಟಕಿಯಲ್ಲಿ ಕಂಡ ಹಲವು ಅನುಭವಗಳ ಚಿತ್ರಣವಿದೆ. ವೈವಿಧ್ಯಮಯ ವಿಷಯವಸ್ತುಗಳಿವೆ. ಕವಿತೆಗಳು ಸೂಚ್ಯದ ಭಾರದಲ್ಲಿ ಬಳಲಿದಂತಿವೆ, ಕೊಂಚ ಸರಳ ಶೈಲಿಯಲ್ಲಿ ಬಳಸಿದ್ದರೆ ಇನ್ನಷ್ಟು ಸಶಕ್ತವಾಗಿ ಮೂಡಿಬರುವ ಸಾಮರ್ಥ್ಯ ಇಲ್ಲಿಯ ಕವಿತೆಗಳಿಗಿತ್ತು ಎಂಬುದು ಕವಿತೆಗಳ ಓದಿದಾಗ ಅನಿಸಿದ ಭಾವನೆ. ಪ್ರಾಮಾಣಿಕ ಎನ್ನಿಸುವ ಅಭಿವ್ಯಕ್ತಿಗೆ ಹೆಚ್ಚಿನ ಕಲಾವಂತಿಕೆಯ ಅಗತ್ಯವಿಲ್ಲ. ಅವು ತಾನೇ ತಾನೇ ಓದಿಸಿಕೊಳ್ಳುತ್ತಾ ಓದುಗನ ಕೂಡಾ ಸಂವಾದಿಸಕೊಳ್ಳುತ್ತಾ ಹೋಗಬಲ್ಲವು. ವಿಭಾ ಅವರಿಂದ ಇನ್ನು ಹೆಚ್ಚು ಕವಿತೆಗಳು ಮೂಡಿಬರಲಿ ಎಂಬ ಸದಾಶಯ ನನ್ನದು.


******************

ನಾಗರೇಖಾ ಗಾಂವಕರ

3 thoughts on “ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

  1. ಚೆಂದದ ಸಮೀಕ್ಷೆ ನಾಗರೇಖಾ
    ಥ್ಯಾಂಕ್ಸ ಗೆಳತಿ

  2. ಮುಗಿಲಿಗೆ ತುಟಿ ಅಚ್ಚು ಒತ್ತುವುದು…ಕವಿತೆ.

    ಕವಯಿತ್ರಿ ಹಾಗೂ ಒಳನೋಟ ಕೊಟ್ಟ ವಿಮರ್ಶಕಿ ಇಬ್ಬರಿಗೂ ಅಭಿನಂದನೆಗಳು ..

Leave a Reply

Back To Top