ನುಡಿ- ಕಾರಣ.

ಪುಸ್ತಕಸಂಗಾತಿ

ನುಡಿ- ಕಾರಣ.

 ಅತ್ಮೀಯ ಸ್ನೇಹಿತರು, ಉಭಯ ಭಾಷಾ ವಿಶಾರದರು, ಉತ್ತಮ ಕವಿ, ಬರಹಗಾರರು ಆಗಿರುವ, ಶೀ ಚಂದಕಚರ್ಲ ರಮೇಶಬಾಬು ಅವರ ಅನುವಾದಿತ ಕವನ ಸಂಕಲನ ಸುಧೆ ಸುರಿಸಿದ ರಾತ್ರಿ ಕುರಿತು ಕೆಲವೊಂದು, ಅನಿಸಿಕೆಗಳು.

ಮಹಾನ  ತೆಲುಗು ಕವಿ, ಅಲ್ಪಾಯುಷಿಯಾಗಿದ್ದರೂ‌ ಅಚ್ಚಳಿಯದ ಛಾಪನ್ನು ತೆಲುಗು ಸಾಹಿತ್ಯದ ಮೇಲೆ ಮೂಡಿಸಿದ ದೇವರಕೊಂಡ ಬಾಲಗಂಗಾಧರ ತಿಲಕ ಅವರು ನನ್ನ ಮೆಚ್ಚಿನ ಕವಿಗಳೂ ಸಾಹಿತಿಗಳೂ ಹೌದು.

ಅವರ ಕುರಿತಂತೆ ಒಂದೆರಡು ಮಾತು ಹೇಳಿ ,ಸಂಕಲನ ಕುರಿತಂತೆ ನಂತರ ಹೇಳಲು, ಇಲ್ಲಿ  ಪ್ರಯತ್ನಿಸಲಾಗಿದೆ.

ಎಲ್ಲರಿಗೂ ತಿಳಿದಂತೆ ತೆಲುಗು ಸಾರಸ್ವತ ಲೋಕದಲ್ಲಿ ಅಜಂತಾ,ಶ್ರೀ ಶ್ರೀ, ದೇವರಕೊಂಡ ಬಾಲಗಂಗಾಧರ ತಿಲಕ್, ಈ ಮೂವರು,’ಅಭ್ಯುದಯ ಕಾವ್ಯದ ಹರಿಕಾರರು   ಎಂದು ಹೇಳಲಾಗುತ್ತದೆ.  ಇವರನ್ನು ತೆಲುಗು ಸಾರಸ್ವತ ಲೋಕ, ತ್ರಿಮೂರ್ತಿಗಳು ಎಂದೂ ಗುರುತಿಸಿದೆ.

 ಕೇವಲ‌ ೪೪ ವರುಷ ಜೀವಿಸಿದ್ದ  ದೇವರ ಕೊಂಡ ಬಾಲ ಗಂಗಾಧರ ತಿಲಕ್ ಅವರು ತೆಲುಗು ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ದೆಶೆ ಕಲ್ಪಿಸಿದ ಮಹಾನನ ಕವಿ, ಕತೆಗಾರ.

‘ಪ್ರಭಾತಮು-ಸಂದ್ಯ’ ಅವರ ಪ್ರಥಮ‌ ಕವನ ಸಂಕಲನ, ಆನಂತರ ‘ಪದ್ಯ ಕವಿತಾಲು’ ‘ಗೊರವಂಕಲು’ ‘ಅಮೃತಂ ಕುರಿಸಿನ ರಾತ್ರಿ’,ಅವರ ಇನ್ನುಳಿದ ಕವನ  ಸಂಕಲನಗಳಾದರೆ,  ‘ಸುಂದರಿ ಸುಬ್ಬಾರಾವ್’,’ಊರು ಚಿವರಿ ಇಲ್ಲು’,’ತಿಲಕ್ ಕಥಲು’ ಅವರ ಕಥಾ ಸಂಕಲನಗಳು.

1969 ರಲ್ಲಿ ಪ್ರಕಟವಾದ ಅವರ ಆಮೃತ ಕುರಿಸಿನ ರಾತ್ರಿ ಸಂಕಲನಕ್ಕೆ ಅವರಿಗೆ 1970 ರಲ್ಲಿ ಮರಣೋತ್ತರ,  ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅ ಪ್ರಶಸ್ತಿ, ಪ್ರಸಿದ್ಧಿಗೆ ಕಾರಣರಾಗಿದ್ದ, ಅವರು,  ತೆಲುಗು ಸಾಹಿತ್ಯದ ಹೊಸ ಮಾರ್ಗಕಾರರಾಗಿರುವುದಲ್ಲದೆ,  ಸಂಪ್ರದಾಯ ಕಾವ್ಯ ದಿಂದ ಹೊರಬಂದ ಕವಿ.

ಮುಂದಿನ ಪೀಳಿಗೆಗೆ ಮತ್ತು, ಅನೇಕ ಯವ ಕವಿ ಗಳಿಗೆ  ಕತೆಗಾರರಿಗೆ,ಮಾರ್ಗ ದರ್ಶಕರಾಗಿದ್ದರು. ಎನ್ನುವುದು   ಇಂದಿಗೂ ಒಪ್ಪಬಹುದಾದ ಸತ್ಯ.

ನಾ ಅಕ್ಷರಾಲು ಕನ್ನೀಟಿ  ಜಡಲೋ ತಡಿಸೆ ದಯಾ ಪರಾತಾರಾಲು

ನಾ ಅಕ್ಷರಾಲು ಪ್ರಜಾಶಕ್ತಿ  ವಹಿಂಚೆ ವಿಜಾಯೈ ಐರಾವತಾಲು

ನಾ ಅಕ್ಷರಾಲು ವೆನ್ನೆಲೋ ಆಡುಕುನೆ ಅಂದಮೈನ ಆಡಪಿಲ್ಲಲು.

ರಮೇಶಬಾಬು ಅವರ ಅನುವಾದ :

[  ನನ್ನ ಅಕ್ಷರಗಳು‌ ಕಣ್ಣೀರ ಹೊಳೆಯಲ್ಲಿ ನೆನೆಯುವ ಕರುಣಾ ಕಪೋತಗಳು

ನನ್ನ ಅಕ್ಷರಗಳು ಪ್ರಜಾ ಶಕ್ತಿ ಯನ್ನು ಹೊರುವ ವಿಜಯ ಐರಾವತಗಳು

ನನ್ನ ಅಕ್ಷರಗಳು ಬೆಳದಿಂಗಳಲ್ಲಿ ಆಡಿ, ಕೊಳ್ಳುವ ಚಂದದ ಕನ್ನೆಯರು.]

ಎನ್ನುವ ಅವರ ‘ನಾ ಕವಿತ್ವ’  ಕವಿತೆಯ ಸಾಲುಗಳು ಅವರ ‘ಅಮೃತ ಕುರಿಸಿನ ರಾತ್ರಿ’ ಸಂಕಲನದ ಉದ್ದೇಶವನ್ನು ಸ್ಪಷ್ಟ ಪಡಿಸಿವೆ. ಮತ್ತು  ಈ ಸಂಕಲನ ತೆಲುಗು ಸಾಹಿತ್ಯದಲ್ಲಿ ಸಂಚಲನ ಮೂಡಿಸಿತು . ಆದುನಿಕ ತೆಲುಗು ಕಾವ್ಯ ಎಂದರೆ ಧುತ್ತೆಂದು ಬಂದು ನಿಲ್ಲುವ ಕವಿ ದೇವರ ಕೊಂಡ ಬಾಲ ಗಂಗಾಧರ  ತಿಲಕ್.

ಶ್ರೀ ಯುತ ರಮೇಶ ಬಾಬು ಅವರು ಈ ಸುಪ್ರಸಿದ್ಧ ಕವನಸಂಕಲನ ‘ಅಮೃತ ಕುರಿಸಿನ ರಾತ್ರಿ’ಯನ್ನು  ‘ ಸುಧೆ ಸುರಿದ ರಾತ್ರಿ’ ಶೀರ್ಷಿಕೆಯಡಿ,    ಕನ್ನಡಕ್ಕೆ ತಂದಿರುವುದು  ನಮಗೆಲ್ಲ ಬಹಳ ಸಂತೋಷ ತಂದಿದೆ. ಇವರು,ಈಗಾಗಲೇ ತೆಲುಗು ಮತ್ತು ಕನ್ನಡ ಭಾಷೆ ಸೇರಿಸಿ ಏಳು ಪುಸ್ತಕಗಳನ್ನು ಹೊರ ತಂದಿದ್ದಾರೆ ಕನ್ನಡದ ಜೊತೆಗೆ ತೆಲುಗು ಭಾಷೆಯ ಮೇಲೆ ಇರುವ ಅವರ ಆಳವಾದ ಜ್ಞಾನ ಈ ಸಂಕಲನದ ಪುಟ ಪುಟಗಳಲ್ಲಿ ಎದ್ದು ಕಾಣುತ್ತದೆ.ಮೂಲ ಸಂಕಲನದ 93 ಕವಿತೆಗಳಲ್ಲಿ ಕೇವಲ‌ 69 ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೂಲ ಸಂಕಲನದ ಕ್ರಮವನ್ನು,  ಅನುಸರಿಸಿಲ್ಲವೆಂದು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಅನುವಾದದ ಪರಿವಿಡಿ ಮೂಲಕ್ಕಿಂತ ಭಿನ್ನವಾಗಿದೆ.

ಇಡೀ ಕವಿತೆಗಳ ಬಗ್ಗೆ ಹೇಳುವದಕ್ಕಿಂತ ನಾನು ಕೆಲವು ಪ್ರಾತಿನಿಧಿಕ ಕವನಗಳ  ಕುರಿತಂತೆ ನನ್ನ ಕೆಲವೊಂದು ಮಾತುಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಷ್ಟಪಡುತ್ತೇನೆ.

ಅನುವಾದಕರ ಅನುಕ್ರಮಣಿಕೆಯನ್ನು ಅನುಸರಿಸಿ

ಅವರ ಮೊದಲ ಅನುವಾದ ಕವಿತೆ ಪ್ರಾರ್ಥನೆಯನ್ನೇ ನೋಡೋಣ:

 ದೇವರೆ ಕಾಪಾಡು ನನ್ನ ದೇಶವನ್ನ

ಪವಿತ್ರರಿಂದ  ಪತಿವ್ರತೆಯರಿಂದ ರಿಂದ

ಎಂದು  ಪ್ರಾರಂಭವಾಗುವ  ಕವಿತೆ

 ಮುಂದುವರಿಯುತ್ತ,

ಲಕ್ಷಗಟ್ಟಲೆ ದೇವತೆಗಳಿಂದ

ಅವರ ಪೂಜಾರಿಗಳಿಂದ

ಸಿದ್ದಾಂತ ಕೇಸರಿಗಳಿಂದ ಸಿದ್ಧರಿಂದ

ಶ್ರೀ ಸದ್ಗುರು ಪರಂಪರೆಯಿಂದ.

ವಿಚಿತ್ರವಾದ ಪ್ರಾರ್ಥನೆ ಎನಿಸಿತು.ಲಕ್ಷಗಟ್ಟಲೆ ದೇ ವತೆಗಳಿಂದ  ರಕ್ಷಿಸು ಎಂದು,  ದೇವರನ್ನೇ ಪ್ರಾರ್ಥಿಸುವುದು !! ದೇವರನ್ನು ನಿಂದಿಸುವ ಮತ್ತು‌ ಅಷ್ಟೇ ಗಾಢವಾಗಿ ದೇವರನ್ನು ಪ್ರೀತಿಸುವ ನಮ್ಮ ಹರಿದಾಸ ಸಾಹಿತ್ಯದ  ‘ ನಿಂದಾ ಸ್ತುತಿ ‘ ನೀನ್ಯಾಕೋ ನಿನ್ನ ಹಂಗ್ಯಾಕೋ  ಕೀರ್ತನೆಯನ್ನು ನೆನಪಿಸಿತು.

ಕವಿತೆ ಮುಂದುವರಿಯುತ್ತ

ದೇವರೆ,ಕತ್ತಿಯ ಅಲುಗಿಗೆ ಮತ್ತ ರಚಿಸಿ ಕಂಠದಲ್ಲಿ

ಥಟ್ಟನೆ ನಿಂತು ಹೋದ ಸಂಗೀತವ ಕೇಳಿಸು

ಮನುಷ್ಯನ ಇತಿಹಾಸ ಪುಟಗಳಲ್ಲಿ ರಕ್ತ ಚೆಲ್ಲಿ

ಅಳಿಸಿ ಹೋದ ಅಕ್ಷರಗಳನ್ನು ಬಿಡಿಸಿ ಹೇಳು

ಕಾಂತಿ ಪ್ರಪಾತವನ್ನು ತೋರಿಸು

ನನ್ನ ಮೇಲೆ ದಯೆ ತೋರು.

                                          ೧೯೬೩.

 ಓದುತ್ತಿದ್ದಂತೆ

ಏನೇನು ಬೇಕು ಎಂದು ಕೇಳುವ ರೀತಿ‌ ನನಗೆ ನಮ್ಮ ನವ್ಯ ಕವಿ ಗೋಪಾಲ ಕೃಷ್ಣ ಅಡಿಗರ  ಇದೇ ಹೆಸರಿನ ಪದ್ಯ ನೆನಪಿಗೆ ಬಂತು. ಭೂಮಿಗೀತ ಕವನ ಸಂಕಲನದ ‘ಪ್ರಾರ್ಥನೆ ‘ ಕವಿತೆಯ  ಈ

 ಸಾಲುಗಳು ನಿಮಗಾಗಿ :

‍ಕಲಿಸು ಬಾಗದೆ ಸೆಟೆವುದನ್ನು,ಬಾಗುವುದನ್ನು;

ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನು ಹಾಗೆ

ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನು ;

ಕಲಿಸು ಸವಾರಿ ಕುದುರೆಯಾಗದ ಹಾಗೆ

ಕಾಡು ಕುದುರೆಯ ಕೆನೆತಕೊಬ್ಬನ್ನು,ಹಾಗೆಯೇ

ಜಗಭಾರಗಾಳಿತೊಡೆ ತಾಳಿ ಹೊರುವಭ್ಯಾಸ

ಕುದುರಿಸು ; ನಿನ್ನಂತೆ ಊರ್ಧ್ವರೇತಸ್ಕನಾಗೊಬ್ಬಂಟಿ

ಮೇಲು ಮಾಳಿಗೆಯ ಕಿರುಕೋಣೆ ಮೈಮರೆವನ್ನು ;

ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ.

                                               ೧೯೫೭

ಕನ್ನಡದಲ್ಲಿ,ಈ ಹೊತ್ತಿಗೆ ನವ್ಯ ಕಾವ್ಯ ಬಂದಾಗಿತ್ತು.

ತೆಲುಗುಕಾವ್ಯ ಅಭ್ಯುದಯದ ಉಚ್ಛ್ರಾಯ ಸ್ಥಿತಿಯನ್ನು ಪ್ರವೇಶಿಸಿತ್ತು.ನೆನಪಿಡಿ ಯವುದೇ ಭಾಷೆಯ ಸಾಹಿತ್ಯಿಕ ಘಟ್ಟಗಳನ್ನು,ಮತ್ತು  ಎರಡು ಕವಿತೆಗಳ ತೌಲನಿಕ ವಿಮರ್ಶೆ ನನ್ನ ಈ ಬರಹದ, ಉದ್ದೇಶ ಅಲ್ಲವೇ ಅಲ್ಲ  ಎಂದು ಸ್ಪಷ್ಟ ಪಡಿಸುತ್ತಿದ್ದೇನೆ.

ಇಲ್ಲಿ ಮನಕ್ಕೆ ತಾಕಿದ ಸಂಗತಿಗಳು ಎರಡು.

ತಿಲಕ್ ಅವರ ಕವಿತೆಗೆಲ್ಲವೂ ಪ್ರಾಸಬದ್ಧ ವಾಗಿರುವುದು. ಸಂಕಲನದ ಕೊನೆಯ ಹಂತಕ್ಕೆ ಬರುವಾಗ, ಪ್ರಾಸ ಕಮ್ಮಿಯಾಗುತ್ತ ಹೋಗಿವೆ ಮತ್ತು ಅವು ಅರ್ಥಕ್ಕೆ ಪೂರಕವಾಗಿವೆ.  ಬಹುಮುಖ್ಯವಾಗಿ

 ಗಮನಿಸಬೇಕಾದ ಸಂಗತಿ ಒಂದಿದೆ.ಒಂದು:

ಅದು ಕವಿಗಳ‌  ಮನಸುಗಳು     ಭಾಷಾತೀತವಾಗಿರುತ್ತವೆ  ಎನ್ನುವುದು !  ರಮೇಶಬಾಬು ಅವರ ಅನುವಾದ ಪರಿಣಾಮಕಾರಿಯಾಗಿ‌ ಮೂಡಿಬಂದಿರುವುದು ಎರಡನೆಯದು

 ಬಹಳ ಹಿಡಿಸಿದ ಮತ್ತೊಂದು ‌ಕವಿತೆ,  ಅನುವಾದ ಎಷ್ಟು ಸಶಕ್ತ ಎನ್ನುವುದಕ್ಕೆ ಉತ್ತಮ ಉದಾಹರಣೆ. ಕವಿತೆಯ ಶೀರ್ಷಿಕೆ.’ಈ ರಾತ್ರಿ’ ಮೊದಲು ಮೂಲ‌ ಅನಂತರ ಅನುವಾದ ನೋಡಿದಾಗ, ವಿಶ್ಲೇಷಣೆ ಸ್ಪಷ್ಟವಾದೀತು.

ಈ ರಾತ್ರಿ

ಬರುವು ಬರುವುಗಾ

ಬ್ರತುಕು‌ ಕೀಳ್ಳ ಸಂದುಲೋನೆ

ಚೀಕಟಿ ಕವೇಲ್ಮನಿ ಕದಿಲಿಂದಿ

ಈ ರಾತ್ರಿ

ವಿಲುವು ವಿಲುವುನಾ

ಪರಚಿಕುನಿ ಅವನಿ ಗುಂಡೆ ಪದರಲೋನಿ

ವಿಂತ ಬಾದಲನು ವಿಪ್ಪಿ ಚೂಪಿಂದಿ

ಈ ರಾತ್ರಿ

ಮೂಗತೋ ಪೈಗತೋ

ಮೇಲುಕೊನ್ನ ನಿರಾಶತೋ ಮಾಟ ಲಾಡಾನು.

ಅನುವಾದ

ಈ ರಾತ್ರಿ

ಭಾರ ಭಾರವಾಗಿ

ಬದುಕು, ಮಂಡಿ ಸಂದುಗಳಲ್ಲಿ

ಕತ್ತಲು ನೋಯಿಸುತ್ತ ಕದಲಿದೆ.

ಈ ರಾತ್ರಿ ಉದ್ದವಾಗಿ

ಹರಡಿಕೊಂಡು ಅವನಿಯ ಎದೆಯ ಪದರಗಳಲ್ಲಿ

ಅಪರಿಚಿತ ನೋವನ್ನು ಬಿಚ್ಚಿ ತೋರಿಸಿದೆ

ಈ ರಾತ್ರಿ

ಮೂಕನಾಗಿ ಸಂಜ್ಞೆ ಮಾಡಿ

ಎಚ್ಚರವಿದ್ದ, ನಿರಾಶೆಯಿಂದ

ಮಾತನಾಡಿದೆ.

 ಕೊನೆಯದಾಗಿ ಸಂಕಲನದ ಶೀರ್ಷಿಕೆ ಹೊತ್ತ ಕವನ

‘ಸುಧೆ ಸುರಿದ ರಾತ್ರಿ’.

ಕವನದದುದ್ದಕ್ಕೂ ಪ್ರತಿಮೆಗಳು ಸಂಕೇತಗಳು

 ಹಾಸುಹೊಕ್ಕಾಗಿದ್ದು ಕವನಕ್ಕೆ ಆಧುನಿಕತೆಯನ್ನು ತಂದು‌ಕೊಟ್ಟಿವೆ. ಕವಿತೆ ಮತ್ತು ಕವಿ ಬೆಳೆಯುತ್ತ ಹೋಗುತ್ತಾರೆ, ಆರಂಭದ ಸಾಲುಗಳು ಅವಕಾಶ ಕಲ್ಪಿಸಿದರೆ,  ಭೂಮಿ- ಆಕಾಶ ಸೇರಿದಂತೆ ಪರಿಸರದ ಚಟುವಟಿಕೆಗಳು, ಯಾರಿಗೂ ದಕ್ಕದ ರಹಸ್ಯವನ್ನು ಕೈವಶ ಮಾಡಿಕೊಂಡು, ಜೀವನವನ್ನು ಪ್ರೀತಿಸುವ, ಜೀವಿಸುವದನ್ನು ಅರಿಯುವ,ಎಂದರೆ ಕವಿತೆಯ ಸಂದರ್ಭದಲ್ಲಿ,ಸೃಜನಶೀಲತೆ (ನಾನಂದುಕೊಂಡಂತೆ)

ಮತ್ತು ಅದು ಕವಿಗೇ ಲಭಿಸುವ ಸಾಧ್ಯತೆ.ಇವನೇ ‘ಪ್ರಿಯನು, ನರನು ನಮಗೆ ವರನು’.

ಹಳೆಯದನ್ನು ಕಳಚಿಕೊಳ್ಳುವಿಕೆ, ಹೊಸದನ್ನು ಅನ್ವೇಷಿಸುವಿಕೆ :

ಪ್ರತಿಭಾ ನವನವೋನ್ಮೇಷಶಾಲಿನಿ ಎಂಬ ಸೂಕ್ತಿಯಂತೆ,

ಜ್ಞಾನಿಯಾಗುವ ದಾರಿ ಹಿಡಿದು ಸಾಗುವ ಕವಿತೆ,

‘ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ’  ಬುದ್ದ ಸಾಂಕೇತಿಕವಾಗಿ ಬಂದಿರುವನು ಎಂದು ಅನಿಸೀತು. ‘ಎದ್ದವರಿಗೆ ಜ್ಞಾನಭಂಡಾರ.ಸುಧೆ ಸುರಿಯುವುದು’ !! ಎಲ್ಲವನ್ನೂಎಲ್ಲರನ್ನೂ ಮೀರಿ ಪಡೆಯುವ ಅಮರತ್ವ. ಬಹಳ ಅತ್ಯದ್ಭುತವಾದ ಕಾವ್ಯ ಕಲ್ಪನೆ.

ಆರಂಭದಲ್ಲಿ,ಪ್ರಾಸ ಕಳಚಿಕೊಂಡ ಕವನ ದೂರ ಸರಿಯುತ್ತ ,  ಕೊನೆಗೆ ಬರುವಾಗ ಅದು ಯಾಕೆ ಪ್ರಾಸಕ್ಕೆ ಜಾರಿತು ಎನ್ನುವುದ ಸ್ವಲ್ಪಮಟ್ಟಿಗೆ ವೈರುಧ್ಯವೆನಿಸಿತು.

ಮೊದಲ ನುಡಿ  ಮತ್ತು ಕೊನೆಯ ಮೂರು ಸಾಲಿನ ಮೊದಲು ಇರುವ ನುಡಿ.ಕೇಳಿ :

ಸುಧೆ ಸುರಿದ ರಾತ್ರಿ

ಎಲ್ಲರೂ ನಿದ್ರೆಯಲ್ಲಿದ್ದಾರೆ

ನಾನು ಮಾತ್ರ

ಬಾಗಿಲು ತೆಗೆದು ಮನೆ ಬಿಟ್ಟು

ಎಲ್ಲಿಗೋ ದೂರ

ಬೆಟ್ಟ ಗುಡ್ಡ ದಾಟಿ

ಬೆಳದಿಂಗಳ ಮೈದಾನದೊಳಗೆ

ಹೋಗಿ ನಿಂತಿದ್ದೇನೆ.

………………………….

ಸುಧೆ ಸುರಿದ ರಾತ್ರಿ

ಎಲ್ಲರೂ ನಿದ್ರೆಯಲ್ಲಿದ್ದಾರೆ

ದಣಿದು ನಿತ್ಯ ಜೀವನದಲ್ಲಿ ಸೋತು ಸುಷುಪ್ತಿಗೆ ಜಾರಿದ್ದಾರೆ.

ರೂಢಿಯನ್ನು ಅಸ್ವತಂತ್ರತೆಯನ್ನು ಅಪ್ಪಿ ಹಿಡಿದಿದ್ದಾರೆ.

ಅಧೈರ್ಯದಲ್ಲಿ ತಮ್ಮನ್ನು ತಾವೇ ಮುದುರಿಕೊಂಡು

ಮಲಗಿದ್ದಾರೆ.

 ವಿವರಣೆ ಬೇಕಾಗಿಯೇ ಇಲ್ಲ .ಪರಿಣಾಮ ಅತೀ ಸ್ಪಷ್ಟ. ಅದು ಕವಿವಾಣಿಯೇ. ಬೇರಾರು ಅಲ್ಲ.

ಅದಕ್ಕೆ ಪಾಪ

ಇವತ್ತಿಗೂ ಯಾರಿಗೂ ಗೊತ್ತಿಲ್ಲ.

ನಾನು ಅಮರನೆಂದು  !

ಸಂಕಲನದ ಇನ್ನುಳಿದ, ಕೆಲವು ಕವಿತೆಗಳ ಸಾಲುಗಳು ಮಾತ್ರ, ಅನುವಾದ ಅಲ್ಲ ಅವು ಸ್ವತಂತ್ರ  ಕವಿತೆಗಳು ಎನ್ನುವಂತೆ ನಿಮ್ಮನ್ನು ತಮ್ಮಡೆಗೆ ಸೆಳೆದು ಕೊಳ್ಳುತ್ತವೆ.ಅದು ಅನುವಾದಕನ ವೈಶಿಷ್ಟ್ಯ.

‘ನಿಶೆಗೆ

ಎಳೆಯ ಕತ್ತಲ ಮಚ್ಚರದಾನಿ

ಕಟ್ಟಿದಂತೆ ‘  – ಮಳೆ ಬಂದ ರಾತ್ರಿ

‘ವಯಸು ಅಮಲಿನ ಎಳೆ

ಕರಗುವ ಮೋಡಗಳಲ್ಲಿ

ತೇಲಲು ಗಗನವು

ಒಂದು ಎಸಳು’  — ಸಂಜೆ

‘ದೇವರಿಗೂ ಮನುಜನಿಗೂ

ಎಂದಿಗೂ ಹೊಂದದ ದಾಂಪತ್ಯ

ಇಬ್ಬರಿಗೂ ಯಾವ ಕೋರ್ಟ್ ನೀಡಲಿಲ್ಲ

ವಿಚ್ಛೇದನದ ಅಂತ್ಯ’. –  ಪ್ಲಸ್ ಇಂಟೂ ಮೈನಸ್.

ಆ ದಿನಗಳ ನೆನೆದಾಗೆಲ್ಲ

ಸಂತೋಷದಂತಿರುವ

ದುಃಖ ವಾಗುತ್ತದೆ ‘– ಆ ದಿನಗಳು.

ಮೂಲಕ್ಕೆ ಅತೀವ ನಿಷ್ಠೆ ಅನುವಾದಕರದು . ಅವರ  ಕೃತಿಯ ಪ್ರಾಂಭಿಕ ಲೇಖನ,

 “ಅನುವಾದದ ಹಿಂದೆ …….”.  ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, ” ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ , ಯುದ್ಧದ ಉನ್ಮಾದವಿದೆ, ಬಡವರ,ಬವಣೆಯಿದೆ.ದೇಶಾಭಿಮಾನ ವಿದೆ.ಕವಿತೆ ನಮ್ಮನ್ನು ಹಿಡಿದಿಡುತ್ತದೆ.ಕಾವ್ಯ ದೋಣಿಯ ಪಯಣಿಗರು”.  ಎನ್ನುವ ಸಾಲುಗಳು,  ಕವಿತೆಗಳನ್ನು ಓದುವ , ಓದುಗರ ಸಾಲುಗಳೂ ಆಗಿಬಿಡುತ್ತವೆ.

ಅವರಿಂದ , ಇನ್ನೂ ಹೆಚ್ಚು ಹೆಚ್ಚು  ಅನುವಾದಗಳು ಬರಲಿವೆ ಅವುಗಳ  ಜೊತೆಗೆ,  ಅವರ,ಸ್ವಂತ,ಸ್ವಚ್ಚಂದ ಸೃಜನಶೀಲತೆಯೂ ಮೂಡಿಬರಲಿವೆ ಎಂದು ನಿರೀಕ್ಷಿಸಬಹುದು.

***

ಗೋನವಾರ ಕಿಶನ್ ರಾವ್

One thought on “ನುಡಿ- ಕಾರಣ.

  1. ದೇವರಕೊಂಡ ಬಾಲಗಂಗಾಧರ ತಿಲಕರ ಅಮೃತಂ ಕುರಿಸಿನರಾತ್ರಿಯ ಕನ್ನಡ ಅನುವಾದ *ಸುಧೆ ಸುರಿದ ರಾತ್ರಿ*
    ಪುಸ್ತಕದ ಬಗ್ಗೆ ಕಿಶನ್ ರಾವ್ ಅವರ ವಿಮರ್ಶೆ ತುಂಬಾ ಅಧ್ಯಯನ ಪೂರ್ಣವಾಗಿದೆ, ಅಭಿನಂದನೆಗಳು ಸರ್.

Leave a Reply

Back To Top