ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು

ಪುಸ್ತಕಸಂಗಾತಿ

ಮಾನವೀಯತೆ,

ಪ್ರೀತಿ-ಪ್ರೇಮ ಹನಿಸುವ

ಒಗರು ಕವನಗಳು

ಡಾ. ರಮೇಶ್ ಕತ್ತಿ ಬಾಲ್ಯದಿಂದಲೂ ಅಳವಡಿಸಿಕೊಂಡಿರುವ ಅಧ್ಯಯನ ಶಿಸ್ತು, ಸಾಹಿತ್ಯ-ಸಾಂಸ್ಕೃತಿಕ ಕೂಟಗಳ ಒಡನೆ ನಡೆಸಿದ ಅನುಸಂಧಾನಗಳು ಈ ಕೃತಿಗೆ ಮೂಲ ಶ್ರೋತವಾಗಿವೆ.

     ಈ ಕವನ ಸಂಕಲನದಲ್ಲಿ 27 ಕವನಗಳಿವೆ. ಏನನ್ನು ಹೇಳುವುದಿಲ್ಲ, ಕಲ್ಯಾಣ ಕ್ರಾಂತಿ, ಏನೋ ಹೇಳುವುದಿದೆ, ನೋಟ, ಕಾಡು, ಕುಸುಮ, ಹೂ- ಮುತ್ತು, ಉಪ್ಪಿನ, ಚಿತ್ರ ಪರದೆ, ಕಾಣದ ಚಂದ್ರ, ಹಕ್ಕು, ಮೌನ ಪ್ರಶ್ನೆ, ಗೀಗೀ ಗಾರುಡಿಗನಿಗೆ,ನಲವತ್ತಕ್ಕೆ ಚಾಲಿಸು, ಹುಡುಗಿಯರ ಗುಂಪಿನೊಳಗೆ, ಮಗಳು ಹುಟ್ಟಿದಳು, ಮಹಾಮಳೆಗೆ ನಲುಗಿದವರು, ಬಯಸಲಾರೆ, ಮನೆಯನೆಂದು ಕಟ್ಟದಿರುಯ ಮತ್ತು ಇನ್ನಷ್ಟು ಹನಿಗವನಗಳು ಸಂಕಲನದಲ್ಲಿ ಸಂಗ್ರಹಗೊಂಡಿವೆ.

         ಇಂದಿನ ಶಿಕ್ಷಿತ ಜಗತ್ತಿನ ಜನರ ಆತ್ಮವಂಚನೆಯನ್ನು ವಸ್ತುವಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮತ್ತು ಸಾಮಾಜಿಕ ಅಧೋಗತಿಗೆ ಸಂಕೇತವಾಗಿದೆ ಕವಿತೆ.

   ಮೆತ್ತನೆಯ ಸಿಹಿ ಮಾತುಗಳು ನಿತ್ಯಉಗಳುವ

   ವಾಗ್ಮಿಗಳ ಮಧ್ಯ

   ಕನಿಕರದಿ ಮಾತನಾಡುವವರ ಮಧ್ಯೆ

   ತನ್ನ ಇಷ್ಟಕ್ಕೆ ಮಾತು ಕೃತಿ ಎಲ್ಲ ವಿರಬೇಕು

   ಎನ್ನುವವರ ಮಧ್ಯೆ

   ಮಾತು ಕರಗುತ್ತದೆ.

                           (ಏನನ್ನು ಹೇಳುವುದಿಲ್ಲ)

ಮೃದು ನುಡಿಗಳು ಮನ ನೋಯಿಸದೆ ಇರಲು, ಎದುರಿಗೆ ಇರುವವರನ್ನು ಸಂತೋಷಗೊಳಿಸಲು ಮಾತ್ರ ಬಳಕೆಯಾಗುತ್ತಿರುವುದು ಮೇಲಿನ ಕವನದಲ್ಲಿದೆ. ಹಾಗೆಯೇ ಮಾತಿನ ದುರುಪಯೋಗ ಆಗುತ್ತಿರುವ ಬಗ್ಗೆ ಕವಿಗಿರುವ ಕಳವಳವನ್ನು ಹೇಳುತ್ತವೆ ಈ ಸಾಲುಗಳು.

   ………….. ಎಲ್ಲವನ್ನೂ ಗುತ್ತಿಗೆ

   ಪಡೆದವರಲ್ಲಿ ಮಾತುಕೃತಿ ಎರಡು ವ್ಯರ್ಥ

                             (ಏನನ್ನು ಹೇಳುವುದಿಲ್ಲ)

      ಕವಿ ನುಡಿಯ ನಯವಂಚನೆ ಆಗುತ್ತಿರುವ ಬಗ್ಗೆ ಎಷ್ಟು ಸೂಕ್ಷ್ಮಸಂವೇದಿ ಆಗಿದ್ದಾನೆ ಎಂಬುದಕ್ಕೆ ಮೇಲಿನ ಎರಡು ಸಾಲುಗಳು ಸಾಕ್ಷಿ.

   ಸುಖವನ ರಿಸಿದ ಬೆಳಕು ಕವಿತೆಯ ಸಾಲುಗಳಲ್ಲಿ

         “ಬೆಳಕೆಂಬುದು ಸುಖದ ಸಂಗತಿ

           ಸುಖದ ಸೆಲೆಗೆ ಜೀತ ವಾದವರು

                         (ಸುಖವನ ರಿಸಿದ ಬೆಳಕು)

ಎಂಬ ಪ್ರಭಾವಶಾಲಿ ಸಾಲುಗಳ ಮೂಲಕ ಕವಿಯ ಆಂತರ್ಯ ಅಭಿವ್ಯಕ್ತಗೊಳ್ಳುತ್ತದೆ.

       ಶರಣ ಚಳುವಳಿಯ ಋಜುತ್ವ ಕ್ಕೆ ಜಗದೇವ ಮಲ್ಲಿಬೊಮ್ಮಯ್ಯರು ಸಾಕ್ಷಿಯಾಗುವ ಸನ್ನಿವೇಶದ ವಸ್ತು ಹೊಂದಿರುವ ಈ ಕವನದ ಸಾಲುಗಳು ಕಲ್ಯಾಣ ಕ್ರಾಂತಿಯ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.

          ಎಲ್ಲಿದ್ದರೋ ಶರಣ ಭಟರು

          ಜಗದೇವ ಮಲ್ಲಿಬೊಮ್ಮಯ್ಯರು

          ಬಿಜ್ಜಳನ ಠಾವ ಶೋಧಿಸಿ

         ಶರಣರ ಅವಧಿಯ

         ಪ್ರತಿಕಾರವನ್ನು ಬಯಸಿ ಬಿಮ್ಮನೆ

         ಶರಣರು ಬಂದರು.

         ಬಿಜ್ಜಳನ ವಧೆಯ ಪವಡಿಸಿ ಮೆಲ್ಲಗೆ

         ದೂರ ಸರಿದರು.

                          (ಕಲ್ಯಾಣ ಕ್ರಾಂತಿ).

         ಒಂದೆಡೆ ಏನನ್ನು ಹೇಳುವುದಿಲ್ಲ ಎನ್ನುತ್ತಲೇ ಕವಿ ನೆಲದ ನಾಡಿನ ನಾಗರಿಕರಾಗಿ ಮಕ್ಕಳಿಗೆ ಹೀಗೆ ಹೇಳುತ್ತಾರೆ.

       “ಮಿತ್ಯ- ಸತ್ಯವಾಗುವ ಸತ್ಯ-ಮಿಥ್ಯವಾಗುವ ಬಗೆಯನ್ನು ಮಕ್ಕಳಿಗಾಗಿ ಬರೆದ “ಏನೋ ಹೇಳುವುದಿದೆ” ಕವನದಲ್ಲಿ ವಿವರಿಸುತ್ತಾರೆ.

        ಇಲ್ಲಿ ಪ್ರಸ್ತಾಪಿಸಲೆಬೇಕಾದ ಕವಿ-ಸಹೃದಯ, ವಿಮರ್ಶಕ ಎಲ್ಲರಿಗೂ ಕ್ಷಣಹೊತ್ತು ಹಿಡಿದು ನಿಲ್ಲಿಸುವ ಈ ಕವನದ ಗಮನಾರ್ಹ ಸಾಲುಗಳು ಮುಂದಿವೆ. ಸಾವಿರದ ಗೀಗೀ ಪದಗಳ ಮೋಡಿಕಾರ ಕಡಣಿ   ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಓದಿದವರಿಗೆ, ಕಲ್ಲಪ್ಪ ಕವಿಯ ಪರಿಚಯಸ್ಥರಿಗೆ ಮತ್ತು ಸಹೃದಯರಿಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ತನ್ನ ಊರಿನ ಅಭಿಜಾತ ಜಾನಪದ ಕವಿಯ ಕುರಿತು ಲೇಖಕನೊಬ್ಬನಿಗೆ ಇರುವ ಅಭಿಮಾನದ ಹೊಳೆ ಹರಿದು ಕಣ್ಣಂಚಿನಲ್ಲಿ ನೀರೂರಿಸಿಕೊಂಡು ಬರೆದಿರಬಹುದಾದ ಈ ಕವನ ಓದುಗನ ಮನೋಸಾಗರದಲ್ಲಿ ಸಂಚಲನ ಮೂಡಿಸುತ್ತದೆ.

ಪದಗಳ ಗಂಟುಕಟ್ಟಿ, ಗಂಟುಗಳ ರಾಶಿ ಇಟ್ಟವ,

  ಸಾವಿರ ಪದಕಟ್ಟಿ ಹಾಡಿದವ ಸಾವಿರದ

  ಪದಗಾರ

                                  (ಗೀ ಗೀ ಗಾರುಡಿಗನಿಗೆ)

ಎಂದು ಸಂಬೋಧಿಸಿ ಈ ಜಾನಪದ ಜಂಗಮನಿಗೆ ಅಮರನಾಗಿಸುವ ಪ್ರಯತ್ನ ಮಾಡಿದ್ದಾರೆ. ಪದಗಳ ಸರದಾರ ಕಡಣಿ ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಒಂದು ಬಯೋಪಿಕ್ ನಂತೆ ಭಾಸವಾಗುತ್ತದೆ. ಹೀಗೆ ಹೇಳಿ ಈ ಜಾನಪದ ಜಂಗಮನಿಗೆ ಸಾವು ಇಲ್ಲ ಎಂಬ ಸಂದೇಶ ಕೊಡಲು ಯತ್ನಿಸುತ್ತಾರೆ ಕವಿ.

      ಮನೆಯ ಹಿರಿಯಜ್ಜಿಯಿoದಾದಿಯಾಗಿ ಅಪ್ಪ-ಅವ್ವ ಅಷ್ಟೇಕೆ ಅರ್ಧಾಂಗಿ ಕೂಡ ತಾನು ಹೆತ್ತ ಹೆಣ್ಣು ಮಗುವನ್ನು ಕಂಡು ಮುಳು ಮುಳು ಅಳುತ್ತಿದ್ದ ಅಂದಿನ ನೆನಪು ಮಾಡಿಕೊಳ್ಳುತ್ತಾರೆ ಕವಿ. ಆದರೆ ಈಗ ಅದೇ ಮಗಳು ಮನೆಗೆ ನೆಮ್ಮದಿ ತಂದಿದ್ದಾಳೆ.

   ಯಾರಿಗೂ ಕಾಡದ ತನ್ನವರಿಗೆ ಪ್ರೀತಿ ಹಂಚಿದ

   ನೋಟದಲಿ, ಆಟದಲಿ ಮನಗೆದ್ದು ಸೈ ಎನಿಸಿ

   ಸಂಭ್ರಮದಿ ಮನೆಮಾಡಿದ ಮಗಳು.

                                     (ಮಗಳು ಹುಟ್ಟಿದಳು)

    ಹೆಣ್ಣಿನ ಕುರಿತು ತನ್ನ ಪ್ರಜ್ಞೆ ಸಾಂಪ್ರದಾಯಿಕ ವಲ್ಲ,ಎಂಬುದನ್ನು ಕವಿ ಮೇಲಿನ ಸಾಲುಗಳಲ್ಲಿ ದಾಖಲಿಸುತ್ತಾರೆ.

      ತನ್ನ ಕವಿತೆ ಎಂಥದ್ದು? ಎಂಬುದನ್ನು ಕವಿ ಹೀಗೆ ವಿವರಿಸುತ್ತಾರೆ.

      ಬಯಲನೆ ಹೂ

      ನೀ

      ಧರೆಗೆ ಮುತ್ತಿಕ್ಕಿದ

      ಧರೆಯ ಹಾಡಿದು

                       (ಹೂಮುತ್ತು)

    ರಮೇಶ್ ಕತ್ತಿಯವರ “ಏನನ್ನು ಹೇಳುವುದಿಲ್ಲ”ಸಂಕಲನದ ಕವನಗಳ ಕುರಿತು —————-“ಈ ಕವಿತೆಗಳು ಮನುಷ್ಯತ್ವವನ್ನು ಕಳೆದುಕೊಂಡ ಜನರ ಹೃದಯದಲ್ಲಿ ಮಾನವೀಯತೆಯ ಪ್ರೀತಿ-ಪ್ರೇಮದ ಗುಟುಕನ್ನು ಹನಿಸುವ ಗುಣ ಹೊಂದಿವೆ,”

ಕಾವ್ಯ ಕಟ್ಟುವ ತಂತ್ರದಲ್ಲಿ ರಮೇಶ್ ಕತ್ತಿಯವರಿಗೆ ಲಭಿಸಿದ ‘ಹದ’ ಅವರ ಲೇಖನಿಯಿಂದ ಇನ್ನಷ್ಟು ಕವನ ಸಂಕಲನ ತರುವ ಭರವಸೆ ಕೊಡುತ್ತದೆ. ಎನ್ನುತ್ತಾರೆ ಮುನ್ನುಡಿ ಬರೆದ ವಿಮರ್ಶಕಿ ಡಾ. ಸಿ. ಸುಜಾತಾ ಅವರು. ಕನ್ನಡ ಸಾರಸ್ವತ ಲೋಕಕ್ಕೆ ಇದುವರೆಗೆ 15 ಕೃತಿಗಳನ್ನು ಕೊಟ್ಟಿರುವ ರಮೇಶ್ ಕತ್ತಿ ಭೀಮಾತೀರದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ


ಡಿ.ಎಂ. ನದಾಫ್

Leave a Reply

Back To Top