ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಕನ್ನಡದಾಗ ಮಾತಾಡಬೇಕ್ರಿ, ಕನ್ನಡದಾಗ ಹಾಡಬೇಕ್ರಿ, ಕನ್ನಡಕ್ಕ ನಾವು ಹೋರಾಡಬೇಕ್ರಿ.
ತಿನ್ನುವ ಅನ್ನ ಕನ್ನಡದ್ದು, ಕುಡಿಯೋ ನೀರು ಕನ್ನಡದ್ದು,
ಉಸಿರಾಡೋ ಗಾಳಿನೂ ಕನ್ನಡದ್ದು, ಅಲ್ವೇನ್ರಿ?
ಹಂಗಿದ್ದಾಗ ಹೆಮ್ಮೆಯಿಂದ ಕನ್ನಡದಾಗ ಮಾತಾಡಬೇಕ್ರಿ.

ಖರೆ, ಸಾವಿರ ವರ್ಷದ ಇತಿಹಾಸ ಐತ್ರಿ,
ಹಳೇ, ಹೊಸ ಕನ್ನಡಾನ ನೀವು ಓದಬೇಕ್ರಿ.
ರನ್ನ, ಪೊನ್ನ, ಜನ್ನ, ಪಂಪ, ಹರಿಹರನ್ನ ನೆನೆಸಿಕೊಳ್ಳ್ರಿ,
ಬೇಂದ್ರೆ, ಕುವೆಂಪು, ಗುಂಡಪ್ಪ, ಕಂಬಾರರ
ಕಾವ್ಯ ರಸಧಾರೆ ಒಮ್ಮೆ ಸವಿದು ನೋಡ್ರಿ.
ಜ್ಞಾನಪೀಠ ಸುಮ್ ಸುಮ್ನ ಕೊಡ್ತಾರೆನ್ರಿ?
ಹಿತ್ತಲ ಗಿಡದ ಮದ್ದು ಮೊದ್ಲು ಮಾಡಿ ನೋಡ್ರಿ,
ಆಗ ಖರೇನ ನೀವು ಒಪ್ಕೋತೀರಿ.

ನಮ್ಮ ಮಕ್ಕಳ ಪಾಠದೊಳಗ
ಲಂಡನ್ ಬ್ರಿಡ್ಜ್ ಯಾಕ ಬೇಕ್ರಿ, ಬೆಳದಿಂಗಳಲ್ಲಿ
“ಚಂದಮಾಮ ಓಡಿ ಬಾ” ಹೇಳಿಕೊಡ್ರಿ,
ಉಂಡಾಡಿ ಗುಂಡನ ಹಾಡು ಕೇಳ್ರಿ,
ನಕ್ಕು ನಲಿವ ಮಕ್ಕಳನ್ನ ನೋಡ್ರಿ.
ನಮ್ಮ ನೆಲದ ಸೊಗಡನ್ನ ತಿಳಿಸಿಕೊಡ್ರಿ,
ಸ್ವಾಭಿಮಾನ ಬೆಳೆಸಿಕೊಳ್ಳ್ರಿ, ನಮ್ಮ ಭಾಷೆ ಉಳಿಸಿಕೊಳ್ಳ್ರಿ.
ಕನ್ನಡ ಅಂದ್ರ ಮನಸು ಥೈ ಥಕ ಕುಣಿಬೇಕ್ರಿ.

ಇನ್ನು ನಿಮಗ ಹ್ಯಾಂಗ ತಿಳಿಸಿ ಹೇಳಬೇಕ್ರಿ,
ಆಜುಬಾಜು ಭಾಷೆ ಕಲಿಯೋದ ಮೊದ್ಲು ಬಿಡ್ರಿ,
ಒಂದೇಟು ನಮ್ಮ ಭಾಷೆ ಅವರಿಗೂ ಕಲಿಸಿಕೊಡ್ರಿ.
ಭಾಷೆ ನಮ್ಮದು ಹಂಗೇನು ಕಳಪೆಯಿಲ್ಲರಿ,
ಇದನ್ನ ಎಲ್ಲರಿಗೂ ತಿಳಿಸಿ ಹೇಳ್ರಿ,
ಎದೆತಟ್ಟಿ ಹೆಮ್ಮೆಯಿಂದ ಮಾತನಾಡ್ರಿ.

ಇನ್ನೂ ನೀವು ಮಾತಾಡಿಲ್ಲ ಅಂದ್ರ
ಅಭಿಮಾನಶೂನ್ಯ ನಿಮ್ಮಂತ ಜನರ
ಪಡೆದ ಕನ್ನಡಾಂಬೆ ಸುಮ್ಮನ
ಕಣ್ಣೀರು ಹಾಕ್ತಾ ಸೊರಗ್ತಾಳ್ರಿ.
ಹೇಳೋವಷ್ಟು ಹೇಳಿದ್ದೀವ್ರಿ,
ಇನ್ನು ನಿಮ್ಮ ವಿವೇಚನೆಗೆ ಬಿಟ್ಟಿದ್ದೀವ್ರಿ.
ಎಂದೂ ಮನಿ ಗೆದ್ದು ಮಾರು ಗೆಲ್ಲಬೇಕ್ರಿ.


About The Author

Leave a Reply

You cannot copy content of this page

Scroll to Top