ಗಾಯತ್ರಿ ರಾಜ್ ಅವರ ಕಾದಂಬರಿ “ಒಲವಿನ ಭಿನ್ನರಾಶಿ” ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ಪುಸ್ತಕ ಸಂಗಾತಿ ವರದೇಂದ್ರ ಕೆ ಮಸ್ಕಿ ಗಾಯತ್ರಿ ರಾಜ್ಅವರ ಕಾದಂಬರಿ “ಒಲವಿನ ಭಿನ್ನರಾಶಿ”ಅವಲೋಕನ “ಒಲವಿನ ಭಿನ್ನರಾಶಿ” ಒಂದು ತ್ರಿಕೋನ ಪ್ರೇಮ ಕಥೆ ÷ ಕಾದಂಬರಿಲೇಖಕಿ : ಗಾಯತ್ರಿ ರಾಜ್ಪ್ರಕಾಶಕರು: ಪುಸ್ತಕಾಗಾರಬಳ್ಳಾರಿ “ರಾಶಿ ರಾಶಿ ಒಲವನ್ನು ಸಾರುವ ಒಲವಿನ ಭಿನ್ನರಾಶಿ” ಕೃತಿ ಚೌರ್ಯ ಅನ್ನೋದು ಒಬ್ಬ ಲೇಖಕ ಬರೆದ ಸಾಹಿತ್ಯವನ್ನು ಅವನಿಗೆ ತಿಳಿಸದೇ ಅವನ ಹೆಸರನ್ನು ಅಳಿಸಿ ಹಾಕಿ ತಮ್ಮ ಹೆಸರಿನೊಂದಿಗೆ ಇಡೀ ಲೇಖನವನ್ನೋ, ಕಥೆ, ಕವನವನ್ನೋ ಅಥವಾ ಅದರೊಳಗಿನ ಕೆಲವು ಸಾಲುಗಳನ್ನೋ, ಇನ್ನೂ ನವಿರಾಗಿ ಎಂದರೆ ಅದೇ ಭಾವದ ಸಾಲುಗಳನ್ನು ಕೊಂಚ ಬದಲಿಸಿ ಪ್ರಕಟಿಸೋದು. ಆದರೆ ಭಾವನಾತ್ಮಕವಾಗಿ ಒಬ್ಬರೊಂದಿಗೆ, ಪ್ರೀತಿಯ, ಆತ್ಮೀಯತೆಯ, ಕಾಳಜಿಯ, ಸ್ನೇಹದ ಸೋಗಿನ ಪರದೆಯನ್ನು ಎಳೆದು ಒಂಥರಾ ಭಾವನಾತ್ಮಕವಾಗಿ ಪರವಶಗೊಳಿಸಿ ನೇರಾ ನೇರಾ ಅವರಿಂದ ಸಾಹಿತ್ಯ ಬರೆಸಿ ಅದನ್ನು ತಮ್ಮ ಹೆಸರಿನಲ್ಲಿ ಲೋಕಾರ್ಪಣೆಗೊಳಿಸುವುದಿದೆಯಲ್ಲಾ ಇದು ಕೇವಲ ಕೃತಿ ಚೌರ್ಯವಲ್ಲ, ಮೂಲ ಸಾಹಿತಿಯ ಕಗ್ಗೊಲೆ. ಹೌದು ಇದನ್ನೇಕೆ ಇಲ್ಲಿ ಹೇಳ್ತಿದಾರೆ ಅಂತ ನಿಮಗನಿಸಿದರೆ ಒಮ್ಮೆ ನನ್ನ ಆತ್ಮೀಯ ನೆಚ್ಚಿನ ಬರಹಗಾರ್ತಿ, ಸಹೋದರಿ ಶ್ರೀಮತಿ ಗಾಯತ್ರಿ ರಾಜ್ ಅವರ “ಒಲವಿನ ಭಿನ್ನರಾಶಿ” ಕಾದಂಬರಿಯನ್ನು ನೀವು ಓದಲೇಬೇಕು. ಈಗಾಗಲೇ ಆಮ್ರಪಾಲಿ, ಟ್ರಾಯ್ ನಂತಹ ಜನಪ್ರಿಯ ಕಾದಂಬರಿಗಳಿಂದ ಮುನ್ನೆಲೆ ಸಾಹಿತಿಗಳ ಸಾಲಿನಲ್ಲಿ ನಿಂತಿರವ ಗಾಯತ್ರಿ ರಾಜ್ ಅವರ ಈ “ಒಲವಿನ ಭಿನ್ನರಾಶಿ” ಕಾದಂಬರಿ ಸುದೀರ್ಘವಾದ ಒಂದು ತ್ರಿಕೋನ ಪ್ರೇಮ ಕಥೆಯ ಕಾದಂಬರಿ. ಹಾಗಂತ ಒಬ್ಬರನ್ನೊಬ್ಬರು ಪ್ರೀತಿಸುವ, ಕೈ ಕೈ ಹಿಡಿದು ಸುತ್ತಾಡುವ, ಪ್ರಣಯ ಭರಿತ ಮಾತುಗಳು, ಸನ್ನಿವೇಶಗಳು ಈ ಕಾದಂಬರಿಯಲ್ಲಿ ಕಾಣಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಇಲ್ಲಿ ಪ್ರೇಮವಿದೆ ಪ್ರಣಯವಿಲ್ಲ, ಭಾವನಾತ್ಮಕ ಸಂಬಂಧಗಳಿವೆ ಆದರೆ ಅವು ಮುಳ್ಳಿನ ಮೇಲೆ ಕುರುಡನ ನಡಿಗೆಯಂತಿವೆ. ಕಾಳಜಿ ಇದೆ ಆದರೆ ಅದರ ಹಿಂದೆ ಕಪಟ ನಾಟಕವಿದೆ. ಸಾಂತ್ವನ ಇದೆ ಆದರೆ ಅದು ಸ್ವಾರ್ಥದ ಬೇಲಿಯಿಂದ ಕೂಡಿದಂತಿದೆ. ತಾನೇ ತನ್ನ ಸುತ್ತ ರಕ್ಷಣಾತ್ಮಕ ಪರಿಧಿಯನ್ನು ಹಾಕಿಕೊಂಡ ಅನಾಥೆ ಅನ್ವಿತಾ ಅಕ್ಷರಶಃ ಎದೆ ತಟ್ಟುವ ಶಬ್ದಗಳ ಅಧೀಶ್ವರಿ. ಉದಾತ್ತ, ಅತ್ಯುನ್ನತ ಚಿಂತನೆಗಳ ಅದರಲ್ಲೂ ಸ್ತ್ರೀ ಸಂವೇದನೆಯ ಬರಹಗಳ ಒಡತಿ. ಒಂದೊಂದು ಸಾಲುಗಳೂ ಅವಳ ಎದೆಯ ನೆತ್ತರಿನಿಂದ ಪುಟಿದ ಭಾವನಾತ್ಮಕ ಮುತ್ತುಗಳು. ಕೇಳುಗರ ಅರಿವಿಗೆ ಬರದೇ ಅವರ ಕರಗಳು ತಾಡನ ಮಾಡಿಬಿಡುತ್ತಿದ್ದವು. ಅಂತಹ ಚತುರಾತ್ಮಕ ಭಾವೋಕ್ತಿಗಳು ಅವಳ ಕಂಠದಿಂದ, ಲೇಖನಿಯಿಂದ ಬರುತ್ತಿದ್ದವು. ಅದನ್ನು ಸೂಕ್ಷ್ಮವಾಗಿ ಅರಿತ ಅನ್ವಿತಾಳ ಸಹಪಾಠಿ ಆದಿತ್ಯ ಭಾರಜ್ವಾಜ್ ಅವಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾನೆ. ಅದೂ ಮುಳ್ಳುಗಳಿರುವ ಪ್ರೇಮದ ಹೂವಿನ ಪಂಜರದಲ್ಲಿಟ್ಟು. ಅತ್ತ ಚುಚ್ಚುವುದೂ ಇಲ್ಲ, ಇತ್ತ ಹೊರಬರಲೂ ಆಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ನಲುಗಿ ನಲುಗಿ ಆದಿತ್ಯನ ಸಾಹಿತ್ಯ ಲೋಕದ ಸಾಧನೆಯ ಹಿಂದೆ; ಅಕ್ಷರ ಲೋಕದ ಧೃವತಾರೆ ಆಗಬೇಕಾದವಳು ತನ್ನನ್ನು ಪ್ರೇಮಿಸುತ್ತಾನೆ, ತನ್ನ ಒಂಟಿತನದ ಅನಾಥ ಬದುಕಿಗೆ ಜಂಟಿಯಾಗುತ್ತಾನೆ ಎಂಬ ಭ್ರಮೆಯಲ್ಲಿಯೇ ಎಲ್ಲವನ್ನು ಬರೆದು ಕೊಟ್ಟು ಕೊಟ್ಟು ತಾನು ಮಾತ್ರ ಹಿನ್ನೆಲೆಯಲ್ಲಿಯೇ ಉಳಿಯುತ್ತಾಳೆ. ಪ್ರಾರಂಭದಲ್ಲಿ ಪ್ರಬಂಧ, ಭಾಷಣ ಅಂತ ಶುರುವಾದದ್ದು ಹತ್ತು ಕಾದಂಬರಿಗಳವರೆಗೂ ಈ ಕೃತಿಚೌರ್ಯ ಸಾಗುತ್ತದೆ. ಆದಿತ್ಯ ಕೆಲವೇ ವರುಷಗಳಲ್ಲಿ ಸಾಹಿತ್ಯ ಲೋಕದ ದಿಗ್ಗಜನಾಗಿ ಮೆರೆಯುವಷ್ಟು ಬೆಳೆಯುತ್ತಾನೆ. ಈ ಅನ್ವಿತಾ ಮಾತ್ರ ತನಗೆ ಸಲ್ಲಬೇಕಾದುದನ್ನು ಒಂದೇ ಒಂದಿಷ್ಟು ಹಿಡಿ ಪ್ರೀತಿಯ ಆಸೆಗೆ, ಆದಿತ್ಯ ತನ್ನವನು ತನಗಾಗಿಯೇ ಇರುವವನು ಎಂಬ ಭ್ರಮೆಯಲ್ಲಿ ಎಲ್ಲ ಬರಹವನ್ನೂ ಧಾರೆ ಎರೆಯುತ್ತಾಳೆ. ಆದಿತ್ಯ ಸಾಹಿತಿ ಎಂಬ ಮಿಥ್ಯ ಭ್ರಮರವಾಗಿ ಕೋಮಲ, ಪರಿಶುದ್ಧ ಮನಸಿನ ಅನ್ವಿತಾಳ ಸತ್ವಯುತ ಬರಹದ ರಸವನ್ನು ಹೀರುತ್ತಲೇ ಸಾಗುತ್ತಾನೆ. ಅನ್ವಿತಾಳ ಜೀವದ ಗೆಳತಿ ಸೌಮ್ಯ ಪ್ರಾರಂಭದ ಕಾಲೇಜಿನ ದಿನಗಳಿಂದಲೂ ಅನ್ವಿತಾಳನ್ನು ಎಚ್ಚರಿಸುತ್ತಲೇ ಸಾಗಿದರೂ ಒಂಟಿತನಕ್ಕೆ ಮುಕ್ತಿ ನೀಡುತ್ತಾನೆಂಬ ನಂಬಿಕೆಯಿಂದಲೇ ಅನ್ವಿತಾ ಸೋಲುತ್ತಾ ಅವನಿಗಾಗಿ ಬರೆಯುತ್ತಾ ಸಾಗುತ್ತಾಳೆ. ಆದರೆ ಕೊನೆಗೂ ಒಂದೇ ಒಂದು ಚಿಕ್ಕ ಕೋರಿಕೆಯ ಕ್ಷಣದಿಂದ ಒಮ್ಮೆ ಆದಿತ್ಯನ ವಿಕೃತ ಮನಸು ಅನ್ವಿತಾಳಿಗೆ ತಿಳಿಯುತ್ತದೆ. ಇಷ್ಟು ದಿನ ಆದಿತ್ಯ ಪ್ರೀತಿಸಿದ್ದು ನನ್ನನ್ನಲ್ಲ. ಇದು ಕೇವಲ ಪ್ರೇಮದ ನಾಟಕ, ನನ್ನೊಳಗಿನ ಸಾಹಿತ್ಯ ಝರಿಯಿಂದ ಅವನು ಸಾಹಿತ್ಯ ಲೋಕದ ದಿಗ್ಗಜನಾಗಲು ಬಯಸಿದ್ದನೆಂಬ ಸತ್ಯ ಒಂದೇ ಒಂದು ಪರಿಕ್ಷೆಯಿಂದ ಅನ್ವಿತಾಳಿಗೆ ಗೊತ್ತಾಗುತ್ತದೆ. ಅಲ್ಲಿಂದ ಅನ್ವಿತಾ ಆದಿತ್ಯನಿಂದ ಪರಿತ್ಯಕ್ತಳಾಗಿ ದೂರ ಸಾಗುತ್ತಳೆ. ಮೊದಲ ಪ್ರೇಮ, ಮೊದಲ ಕಾಳಜಿ, ಮೊದಲ ಸಾಂತ್ವನವೇ ಭ್ರಮೆ, ಸುಳ್ಳು ಎಂಬುದು ಅವಳನ್ನು ಸುಪೂರ್ಣವಾಗಿ ಕುಗ್ಗಿಸಿಬಿಡುತ್ತದೆ. ಪೂರ್ತಿ ಖಿನ್ನತೆಗೆ ಒಳಗಾಗಿ ಗೆಳತಿ ಸೌಮ್ಯಳಿಗೆ ಹೇಳಿ ಊರು ಬಿಟ್ಟ ಅನ್ವಿತಾಳಿಗೆ ಪ್ರಯಾಣದಲ್ಲೇ ಜೊತೆಯಾದದ್ದು ವಿಹಾನ್. ಅಲ್ಲಿಂದ ಅನ್ವಿತಾ ಹಾಕಿದ ಎಲ್ಲ ಅಂತರಗಳನ್ನು, ಅವಳ ಸುತ್ತ ಇರುವ ಚೌಕಟ್ಟನ್ನು ದಾಟಿ ಬಂದ ವಿಹಾನ್ ಕೊನೆಗೆ ಅನ್ವಿತಾಳ ಬದುಕಿಗೆ ಬರಲು ಪ್ರಯತ್ನಿಸುತ್ತಾನೆ. ಖಿನ್ನತೆಗೆ ಒಳಗಾಗಿ ಗೋವಾಗೆ ಬಂದ ಅನ್ವಿತಾಳಿಗೆ ಮೊದಲು ಜೊತೆಯಾದದ್ದು ಮೇರಿ ಮತ್ತು ಜೋಸೆಫ್ ದಂಪತಿಗಳು. ಮೇರಿ ಜೋಸೆಫ್ ದಂಪತಿಗಳ ಹಾಜರಿ ಅನ್ವಿತಾಳನ್ನು ಮುದಗೊಳಿಸಿದ್ದು, ಅವರ ಪ್ರೀತಿ, ಕಾಳಜಿ, ಅಂತಃಕರಣ ಅನ್ವಿತಾಳ ಖಿನ್ನತೆಯನ್ನು ತುಸು ಕಡಿಮೆ ಮಾಡಿದ್ದು, ಅವಳ ಬದುಕಿಗೆ ಖುಷಿ ತಂದದ್ದು ಓದುಗನಿಗೆ ತುಸು ತೃಪ್ತಿ ತರುತ್ತದೆ. ಗೋವಾದಲ್ಲಿ ಅನ್ವಿತಾ ಮತ್ತು ವಿಹಾನ್ ನಡುವೆ ಏನೆಲ್ಲಾ ಘಟನೆಗಳು ನಡೆಯುತ್ತವೆ? ಅವರನ್ನು ಸಮಯ ಹೇಗೆ ಕ್ಷಣ ಕ್ಷಣಕ್ಕೂ ಹತ್ತಿರಗೊಳಿಸುತ್ತದೆ? ಅವರಿಬ್ಬರ ನಡುವೆ ಉಂಟಾದ ಸ್ನೇಹ, ಪ್ರೇಮಕ್ಕೆ ತಿರುಗುತ್ತದೆಯೇ? ಇವರ ಬಾಂಧವ್ಯದಿಂದ ಅನ್ವಿತಾ ಖಿನ್ನತೆಯಿಂದ ಹೊರಬರುತ್ತಾಳಾ? ಮತ್ತೆ ವಿಹಾನ್ ಕೂಡ ಮೋಸದ ಬಲೆ ಹೆಣೆಯುತ್ತಾನಾ? ಅವಳ ಸಾಹಿತ್ಯವನ್ನು ವಿಹಾನನೂ ಕದ್ದು ಒಯ್ಯುತ್ತಾನಾ? ಎಂಬೆಲ್ಲ ಸನ್ನಿವೇಶಗಳನ್ನು ತೆರೆದ ಕಣ್ಣನ್ನು ಪಿಳುಕಿಸದೆ ಓದುವಂತೆ ಗಾಯತ್ರಿ ಅವರು ಪದ ಪೋಣಿಕೆ ಮಾಡಿದ್ದಾರೆ. ಮತ್ತೆ ಮತ್ತೆ ಅನ್ವಿತಾಳಿಗೆ ಆಗುವ ಅನ್ಯಾಯ, ಮೋಸ ಓದುಗನನ್ನೂ ತಲ್ಲಣಕ್ಕೆ ಒಳಗಾಗುವಂತೆ ಮಾಡುತ್ತದೆ. ಒಬ್ಬ ಗಂಡಸಿನಿಂದ ಮೋಸ ಹೋಗಿ ಪ್ರೇಮ ವೈಫಲ್ಯ ಕಂಡ ಜೀವಕ್ಕೆ ಮಂತ್ತೊಂದು ಗಂಡು ಆಸರೆಯಾಗುತ್ತಾನೆ ಎಂದು ಕೊಂಡರೆ ಅವನೂ ಅದೇ ದಾರಿ ಹಿಡಿಯುತ್ತಾನೆ ಎಂಬುದು ಕಳವಳವಾಗಿ ಓದುಗನನ್ನು ಕಾಡುತ್ತದೆ. ಪ್ರೇಮದ ನಾಟಕವಾಡಿ ಅನ್ವಿತಾಳ ಕೊನೆಯ ಉಸಿರಾಗಿ ರಚನೆ ಆಗಿದ್ದ “ಒಲವಿನ ಭಿನ್ನರಾಶಿ” ಕಾದಂಬರಿಯನ್ನೂ ಸಹ ಕದ್ದ ವಿಹಾನ್ ನಿಜಕ್ಕೂ ಮಾಡಿದ್ದು ಏನು? ಮತ್ತೆ ಅನ್ವಿತಾಳ ಸಾಹಿತ್ಯ, ಕೃತಿ ಚೌರ್ಯ ಆಯಿತೇ?! ಎಂಬ ಅನುಮಾನ ಓದುಗನನ್ನು ಸಹ ಖಿನ್ನತೆಗೆ ದೂಡುತ್ತದೆ. ಸಾಹಿತ್ಯ ಕೃತಿ ಚೌರ್ಯದ ವಿಷಯವನ್ನಿಟ್ಟುಕೊಂಡು ತ್ರಿಕೋನ ಪ್ರೇಮ ಕಥೆಯನ್ನು ಹೆಣೆದ ಗಾಯತ್ರಿ ಅವರ ಜಾಣ್ಮೆ ನಿಜಕ್ಕೂ ಮೆಚ್ಚುವಂತದ್ದು. ಒಂದು ಹುಡುಗ ಒಬ್ಬ ಹುಡುಗಿಯನ್ನು ಆ ಹುಡುಗಿ ಬೇರೋಬ್ಬ ಹುಡುಗನನ್ನು ಪ್ರೇಮಿಸುವುದು ಅಥವಾ ಇಬ್ಬರೂ ಒಂದೇ ಹುಡುಗಿಯನ್ನು ಪ್ರೇಮಿಸುವುದು ಒಂದು ತ್ರಿಕೋನ ಪ್ರೇಮ ಕಥೆ ಎಂದು ತಿಳಿದ ಓದುಗನಿಗೆ ಈ ಕಾದಂಬರಿ ವಿಭಿನ್ನ ಎನಿಸುತ್ತದೆ. ಹೀಗೂ ತ್ರಿಕೋನ ಪ್ರೇಮ ಕಥೆ ಇರಬಹುದಾ!? ಅನಿಸುತ್ತದೆ. ಪ್ರೇಮಿಸಿ ಅಚಾತುರ್ಯ ಎಸಗಿ ನಡುನೀರಿನಲ್ಲಿ ಕೈ ಬಿಡುವ ಕಥೆ ಗೊತ್ತು ಆದರೆ ಒಬ್ಬರ ಮೈ ಮುಟ್ಟದೇ ಮನಸನ್ನು ಅತ್ಯಾಚಾರಗೊಳಿಸುವ ಕಥೆ ವಿಶೇಷ ಎನಿಸುತ್ತದೆ. ಪ್ರಾರಂಭದಲ್ಲಿ ಮೋದಲ ಆತ್ಮೀಯ ಹುಡುಗ ಎನಿಸಿಕೊಂಡವ ಒಬ್ಬ ಮನಸನ್ನು ಮುರಿದರೆ, ನಂತರ ಬದುಕಿಗೆ ಧಾಪುಗಾಲಿಟ್ಟ ಮತ್ತೊಬ್ಬ ಹುಡುಗ ಬದುಕನ್ನು ಕಟ್ಟಿಕೊಡುತ್ತಾನೆಯೇ? ನಾಯಕಿಯ ಸಾಹಿತ್ಯ ಕದಿಯದೇ ಕಸಿದುಕೊಂಡ ಒಬ್ಬ ಮಹಾನ್ ಪುರುಷ ಸಾಹಿತಿಯಾಗಿ ದೇಶದಲ್ಲಿ ಉನ್ನತ ಹೆಸರು ಮಾಡಿದರೆ, ಸಾಹಿತ್ಯದಿದಂಲೇ ನಾಯಕಿಯನ್ನು ದೇಶಕ್ಕೆ ಪರಿಚಯಿಸಲು ಒಬ್ಬ ಸಾಮಾನ್ಯ ಪುರುಷ ಪ್ರಯತ್ನಿಸುತ್ತಾನೆಯೇ? ಅಥವಾ ಅವನೂ ಅದ್ಭುತ ಸಾಹಿತ್ಯ ಕಂಡು ಸ್ವಾರ್ಥಿಯಾಗಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಾನೆಯೇ? ಎಂಬುದೇ ಈ ಕಾದಂಬರಿಯ ಪ್ರಮುಖ ತಿರುವಾಗಿದೆ. ಅನೇಕ ಪ್ರಮುಖ ತಿರುವುಗಳನ್ನು ಹೊಂದಿದ ಸಂಪೂರ್ಣ ಕಥಾ ಹಂದರವನ್ನು ಅರಿಯಲು, ಕಥೆಯ ಸ್ವಾದವನ್ನು ಸವಿಯಲು ಖುದ್ದಾಗಿ ಕಾದಂಬರಿಯನ್ನು ಓದಲೇಬೇಕು. ಓದಿದಾಗ ಮಾತ್ರ ನಾವು ಕಥೆಯಲ್ಲಿ ಲೀನವಾಗಲು ಸಾಧ್ಯ. ಭಾವಗಳ ಏರಿಳಿತಕ್ಕೆ ಒಳಗಾಗಲು ಸಾಧ್ಯ ಎಂಬುದು ನನ್ನ ಅಭಿಮತವಾಗಿದೆ. ಒಟ್ಟಿನಲ್ಲಿ 348 ಪುಟದ ಈ ಕಾದಂಬರಿ ಬಹು ಪ್ರೌಢಿಮೆಯಿಂದ ಕೂಡಿದೆ. ಲೇಖಕಿ ಇದನ್ನು 3 ಭಾಗಗಳಲ್ಲಿ ಪ್ರಸ್ತಾಪಿಸಿದ್ದು ಒದುತ್ತಾ ಸಾಗವಾಗ ಮಧ್ಯೆ ಅಲ್ಪ ವಿರಾಮವನ್ನೂ ಪಡೆದು ಓದನ್ನು ನಿಲ್ಲಿಸಲು ನಮಗೆ ಮನಸು ಬರುವುದಿಲ್ಲ. ಗಾಯತ್ರಿ ರಾಜ್ ಅವರು ಇದರಲ್ಲಿ ಬರೆದ ಅನೇಕ ಅರ್ಥಪೂರ್ಣ, ಬದುಕನ್ನು ಬದಲಿಸುವ ಸಾಲುಗಳನ್ನು ನಾವು ಬರೆದಿಟ್ಟುಕೊಳ್ಳುವಂತಿವೆ. ಈ ಸಾಲುಗಳು* ಬದುಕಲ್ಲಿ ಕುಗ್ಗಿದವರಿಗೆ ಪ್ರೋತ್ಸಾಹ ನೀಡಿ ಎಬ್ಬಿಸಿ ನಿಲ್ಲಿಸುವಂತಿವೆ.* ಸೋತವರಿಗೆ ಸಾಂತ್ವನ ನೀಡಿ ಗೆಲುವಿನ ಹಾದಿಗೆ ಕರೆದೊಯ್ಯುವಂತಿವೆ. * ಮೋಸ ಹೋದವರ ಮನಸಿಗೆ ಧೈರ್ಯ ನೀಡಿ ಮತ್ತೆ ಪುಟಿದು ನಿಲ್ಲುವಂತಿವೆ. ಜೊತೆಗೆ ಲೇಖಕಿಯವರೇ ಪ್ರತೀ ವಿಭಾಗಕ್ಕೂ ಆ ಭಾಗದ ಸಮಗ್ರ ಭಾವರ್ಥವನ್ನು ಒಂದೊಂದು ವಿಶೇಷ ಸಾಲಿನಲ್ಲಿ ಪ್ರತಿಬಿಂಬಿಸಿದ್ದಾರೆ. ಆ ಸಾಲುಗಳನ್ನು ಪೋಣಿಸಿ ಓದಿದರೆ ಸಾಕು ಕಾದಂಬರಿಯ ಗೂಢಾರ್ಥ ಅರಿತಂತಾಗುತ್ತದೆ. ಒಟ್ಟಾರೆಯಾಗಿ ಈ “ಒಲವಿನ ಭಿನ್ನರಾಶಿ” ಕಾದಂಬರಿ ಓದುಗನ ಎದೆಗೆ ರಾಶಿ ರಾಶಿ ಸಂದೇಶಗಳನ್ನು ನೀಡುತ್ತದೆ. ಎಲ್ಲಾ ಸಂದೇಶಗಳೂ ಹೃದಯದಲ್ಲಿ ಉಳಿದುಬಿಡುತ್ತವೆ. ಕಣ್ಣಲ್ಲೇ ಮನಸಿನ ಭಾವ ಗೋಚರಗೊಂಡು ಅಂತ್ಯಕ್ಕೆ ದೀರ್ಘವಾದ ನಿಟ್ಟುಸಿರು ಹೊರಬರುತ್ತದೆ. ಇಂತಹ ಕಥಾ ವಸ್ತುವಿನಿಂದನೂ ಕಾದಂಬರಿಯನ್ನು ತ್ರಿಕೋನ ಪ್ರೇಮ ಕಥೆಯನ್ನಾಗಿಸಬಹುದೇ ಎನ್ನುವಂತೆ ಸ್ವಾಭಾವಿಕವಾಗಿ ಮೂಡಿ ಬಂದ ಕೃತಿ ನಿಜಕ್ಕೂ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಸದ್ದು ಮಾಡುತ್ತದೆ. ಎರಡನೇ ಮುದ್ರಣದ ತಯಾರಿಯಲ್ಲಿಯೂ ಇರುವ ಕೃತಿ ಅನೇಕ ಮರುಮುದ್ರಣಗಳನ್ನು ಕಾಣಲಿ, ಎಲ್ಲ ಓದುಗರು ಕೃತಿಯನ್ನು ಕೊಂಡು ಓದಲಿ ಎಂಬ ಆಶಯದೊಂದಿಗೆ ಲೇಖಕಿ ಶ್ರೀಮತಿ ಗಾಯತ್ರಿ ರಾಜ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ ನನ್ನ ಅವಲೋಕನಕ್ಕೆ ವಿರಾಮ ನೀಡುತ್ತೇನೆ. ಕೃತಿಗಳಿಗಾಗಿ ಸಂಪರ್ಕಿಸಿ ಗಾಯತ್ರಿ ರಾಜ್ 91485 68846 ವರದೇಂದ್ರ ಕೆ ಮಸ್ಕಿ
ಗಾಯತ್ರಿ ರಾಜ್ ಅವರ ಕಾದಂಬರಿ “ಒಲವಿನ ಭಿನ್ನರಾಶಿ” ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »




