ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ “ಪ್ರೀತಿ ಆಸರೆ”

ಕಾವ್ಯ ಸಂಗಾತಿ ಅಕ್ಕಮಹಾದೇವಿ ತೆಗ್ಗಿ “ಪ್ರೀತಿ ಆಸರೆ” ಬದುಕಿನ ಸುಡು ಬಿಸಿಲ ಹಾದಿಯಲಿ,ನೀನೇ ತಂಪಾದ ನೆರಳಿನ ಆಸರೆ.ನೊಂದ ಜೀವಕ್ಕೆ ಸಾಂತ್ವನ ನೀಡುವ,ಪ್ರೀತಿಯೇ ಎಂದಿಗೂ ಹಿರಿದಾದ ಆಸರೆ. ಸಾಗರದ ಅಲೆಯಂತೆ ಏಳುವ ನೋವಿಗೆ,ನಿನ್ನ ಮೌನವೇ ಒಂದು ತಂಗಾಳಿ.ನಿರಾಶೆಯ ಕತ್ತಲು ಆವರಿಸಿದಾಗ,ನಿನ್ನ ಪ್ರೀತಿಯೇ ದಾರಿದೀಪದ ಸೂರೆ. ಜಗದ ಕೋಲಾಹಲದೂರ ತಳ್ಳಿ,ನಿನ್ನ ಮಡಿಲಲಿ ಸಿಗುವುದು ನೆಮ್ಮದಿ.ಏನೂ ಬೇಡದ ಈ ಜಗತ್ತಿನಲ್ಲಿ,ಕೊನೆ ತನಕ ಇರಲಿ ನಿನ್ನ ಆಸರೆ. ಮಾತುಗಳೇ ಇಲ್ಲದ ಭಾವಯಾನ ,ಹೃದಯಗಳ ಬೆಸೆಯುವ ಮಧುರ ಗಾನ.ಸೋತು ನಿಂತಾಗಬೆನ್ನು ತಟ್ಟುವ,ಪ್ರೀತಿಯ ಆಸರೆಯೇ ಬದುಕಿನ ಹೃನ್ಮನ. ಅಕ್ಕಮಹಾದೇವಿ ತೆಗ್ಗಿ 

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ “ಪ್ರೀತಿ ಆಸರೆ” Read Post »

ಇತರೆ, ಜೀವನ

“ನಗುವಿನ ನಯ – ಬದುಕಿನ ಲಯ” ಜಯಶ್ರೀ. ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ನಗುವಿನ ನಯ – ಬದುಕಿನ ಲಯ” ಹಾಡಿನ ಹಕ್ಕಿಗೆ ಗಾನದ ಮಾಧುರ್ಯವಿರಬೇಕು, ಆಡುವ ಮಾತಿಗೆ ಸಂಸ್ಕಾರದ ಸೌಂದರ್ಯವಿರಬೇಕು. ನಗು ಎಂಬುದು ಮಾನವನಿಗೆ ಪ್ರಕೃತಿ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆ. ಆದರೆ, ಆ ನಗು ಮತ್ತೊಬ್ಬರ ಕಣ್ಣೀರ ಹನಿಯಾಗಬಾರದು. ತಮಾಷೆಯು ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕೇ ಹೊರತು, ಕ್ರೌರ್ಯವನ್ನಲ್ಲ. ಇದನ್ನೇ ನಮ್ಮ ಹಿರಿಯರು “ನಗುವಿನಲ್ಲೂ ನಯವಿರಬೇಕು, ತಮಾಷೆಯಲ್ಲೂ ತತ್ವವಿರಬೇಕು” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಜನಪದ ಕಥೆ ಕೆರಿಬಿಯನ್ ಕಡಲ ತೀರದ ವೆಸ್ಟ್ ಇಂಡೀಸ್ ಜನಪದ ಕಥೆಯೊಂದರಲ್ಲಿ ಅತ್ಯಂತ ಅದ್ಭುತವಾದ ವರ್ಣನೆಯಿದೆ. ಹಸಿರು ಕಾಡಿನ ನಡುವೆ ವಾಸಿಸುತ್ತಿದ್ದ ಹಳದಿ ಹಕ್ಕಿಯೊಂದು ಪ್ರತಿದಿನ ಬೆಳಿಗ್ಗೆ ಜೋರಾಗಿ ನಗುತ್ತಿತ್ತಂತೆ. ಅದರ ಕಟುವಾದ ನಗು ಕಾಡಿನ ಇತರ ಪ್ರಾಣಿ-ಪಕ್ಷಿಗಳಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಒಂದು ದಿನ, ಜ್ಞಾನಿ ಆಮೆಯೊಂದು ಆ ಹಕ್ಕಿಯ ಬಳಿ ಬಂದು, “ಮಿತ್ರನೇ, ನಿನ್ನ ನಗುವಿನಲ್ಲಿ ಕಾಡಿನ ಅಂದವನ್ನು ಕೊಂಡಾಡುವ ನಯವಿಲ್ಲ, ಕೇವಲ ಇತರರನ್ನು ಹಂಗಿಸುವ ಸೊಕ್ಕಿದೆ. ಸಮುದ್ರದ ಅಲೆಗಳು ದಡವನ್ನು ಮುತ್ತಿಕ್ಕುವಾಗ ಸದ್ದು ಮಾಡುತ್ತವೆ, ಆದರೆ ಅವು ಮರಳಿನ ಶಿಲ್ಪವನ್ನು ಒಡೆಯುವುದಿಲ್ಲ. ನಿನ್ನ ನಗು ಆ ಅಲೆಯಂತೆ ಮೃದುವಾಗಿರಲಿ, ಕಲ್ಲು ಬಂಡೆಯಂತೆ ಕಠಿಣವಾಗಿರಬಾರದು” ಎಂದು ವಿವರಿಸಿತು. ಅಂದಿನಿಂದ ಆ ಹಕ್ಕಿ ಮಧುರವಾದ ಹಾಡಿನೊಂದಿಗೆ ಕಿರುನಗೆ ಬೀರಲು ಕಲಿತಾಗ, ಇಡೀ ಕಾಡೇ ಅದರೊಂದಿಗೆ ಸಂಭ್ರಮಿಸಿತು. ನಮ್ಮ ಬದುಕಿನ ಹಾಸ್ಯವೂ ಸಹ ಈ ಕಡಲ ತೀರದ ತಂಗಾಳಿಯಂತೆ ಹಿತವಾಗಿರಬೇಕು. ವಿಶ್ವದ ಜ್ಞಾನದ ಜೊತೆ ಸುಂದರ ಸಮ್ಮಿಲನ ಹಾಸ್ಯಕ್ಕೆ ಭಾಷೆಯ ಗಡಿಯಿಲ್ಲ. ಭಾರತದ ಉತ್ತರ ಭಾಗದ ಮಹಾನ್ ಸಾಧಕರ ಚಿಂತನೆಗಳು ಹಾಗೂ ಬ್ರಿಟನ್‌ನ ಕೆಲವು ಆಳವಾದ ಗಾದೆ ಮಾತುಗಳು ಈ ಸತ್ಯಕ್ಕೆ ಸಾಕ್ಷಿ ನುಡಿಯುತ್ತವೆ. ಮಹಾತ್ಮ ಗಾಂಧೀಜಿಯವರು, “ನನ್ನಲ್ಲಿ ಹಾಸ್ಯ ಪ್ರಜ್ಞೆ ಇಲ್ಲದೇ ಹೋಗಿದ್ದರೆ ನಾನು ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ” ಎನ್ನುತ್ತಾರೆ. ಅಂದರೆ ನಗು ಬದುಕಿನ ಭಾರವನ್ನು ಹಗುರಗೊಳಿಸಬೇಕು. ಕಬೀರದಾಸರು ತಮ್ಮ ದೋಹಾಗಳಲ್ಲಿ ಹೇಳುವಂತೆ, “ಮಾತನಾಡುವ ಮುನ್ನ ಹೃದಯದ ತಕ್ಕಡಿಯಲ್ಲಿ ತೂಗಿ ನೋಡು, ನಿನ್ನ ಹಾಸ್ಯವೂ ಪರರಿಗೆ ಅಮೃತವಾಗಬೇಕೇ ಹೊರತು ವಿಷವಾಗಬಾರದು”. ಆಧುನಿಕ ಸಾಧಕ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಕಾರ, “ರಾಜಕೀಯದಲ್ಲೂ ವಿರೋಧಿಗಳನ್ನು ನಗಿಸುವಂತಿರಬೇಕು, ಆದರೆ ಆ ನಗು ಅವರ ಆತ್ಮಗೌರವಕ್ಕೆ ಧಕ್ಕೆ ತರಬಾರದು”. ಸ್ವಾಮಿ ವಿವೇಕಾನಂದರು, “ಯಾವ ನಗು ಕಣ್ಣೀರನ್ನು ಒರೆಸಲು ಸಾಧ್ಯವಿಲ್ಲವೋ, ಅದು ಕೇವಲ ಅಹಂಕಾರದ ಪ್ರದರ್ಶನ” ಎಂದು ಎಚ್ಚರಿಸುತ್ತಾರೆ. ಇದಕ್ಕೆ ಪೂರಕವಾಗಿ ಬ್ರಿಟನ್‌ನ ಜನಸಾಮಾನ್ಯರ ಗಮನಿಸಿದರೆ, ಅಲ್ಲಿನ ಹಳೆಯ ನಾಣ್ಣುಡಿಯೊಂದು ಹೇಳುತ್ತದೆ: “ಒಡೆದ ಹಾಲನ್ನು ನೋಡಿ ನಗುವವನು ಮೂರ್ಖ, ಆದರೆ ಆ ಹಾಲಿನಿಂದ ಗಿಣ್ಣು ಮಾಡುವುದನ್ನು ಕಲಿಸುವವನೇ ನಿಜವಾದ ಹಾಸ್ಯಗಾರ” (Do not laugh at spilled milk, make cheese). ಮತ್ತೊಂದು ಬ್ರಿಟಿಷ್ ಗಾದೆ ಹೇಳುವಂತೆ, “ಮುಖದ ಮೇಲಿನ ನಗು ಹೃದಯದ ಕನ್ನಡಿಯಾಗಿರಬೇಕೇ ಹೊರತು, ಕತ್ತಿಯ ಒರೆಯಾಗಬಾರದು”. ಅಲ್ಲಿನ ಗ್ರಾಮೀಣ ಭಾಗದಲ್ಲಿ “ಗೆಳೆಯನ ಕುಂಟತನವನ್ನು ನೋಡಿ ನಗುವವನಿಗೆ ತನ್ನದೇ ನೆರಳು ಕಾಲಿಗೆ ಅಡ್ಡಬೀಳುತ್ತದೆ” ಎಂಬ ಮಾತಿದೆ. ಬ್ರಿಟನ್‌ನ ಸಾಹಿತ್ಯ ಲೋಕದ ಹಿನ್ನೆಲೆಯಲ್ಲಿ “ಸತ್ಯವನ್ನು ಹಾಸ್ಯದ ಚಾಕಲೇಟ್‌ನಲ್ಲಿ ಸವರಿ ನೀಡಬೇಕು, ಕಹಿ ಮಾತ್ರೆಗಿಂತ ಸಿಹಿ ತಮಾಷೆ ಬೇಗ ಗುಣಪಡಿಸುತ್ತದೆ” ಮತ್ತು “ಸಂಪ್ರದಾಯಸ್ಥರ ಸಭೆಯಲ್ಲಿ ಅತಿರೇಕದ ನಗು ಕತ್ತಲೆಯಲ್ಲಿ ಕಲ್ಲು ಎಸೆದಂತೆ” ಎಂಬ ಅತ್ಯಂತ ಅಪರೂಪದ ಚಿಂತನೆಗಳಿವೆ. ಈ ಎಲ್ಲ ಮಾತುಗಳು ನಗುವಿನ ಹಿಂದಿರುವ ವಿವೇಕದ ಪ್ರಾಮುಖ್ಯತೆಯನ್ನು ಸಾರುತ್ತವೆ. ದೈನಂದಿನ ಜೀವನದ ಪ್ರಾಯೋಗಿಕ ಉದಾಹರಣೆಗಳು ಇಲ್ಲಿವೆ  ಕುಟುಂಬದ ಹರಟೆ  ಭಾನುವಾರದ ರಜಾದಿನಗಳಲ್ಲಿ ಮನೆಯವರೆಲ್ಲ ಒಟ್ಟಿಗೆ ಕುಳಿತು ಹರಟೆ ಹೊಡೆಯುವಾಗ ನಗು ಸಹಜ. ಆದರೆ, ಅಲ್ಲಿ ತಂದೆ ಅಥವಾ ತಾಯಿಯ ವಯಸ್ಸಾದ ನಡಿಗೆಯನ್ನು ನೋಡಿ ತಮಾಷೆ ಮಾಡುವುದು ಸರಿಯಲ್ಲ. ಬದಲಿಗೆ, ಬಾಲ್ಯದ ತುಂಟಾಟಗಳನ್ನು ನೆನೆದು ಎಲ್ಲರೂ ಒಟ್ಟಾಗಿ ನಗಬೇಕು. ಹಾಸ್ಯವು ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಅಂಟಾಗಬೇಕೇ ಹೊರತು, ಮನಸ್ಸುಗಳನ್ನು ಒಡೆಯುವ ಕೊಡಲಿಯಾಗಬಾರದು. ಮಾತು ಮೃದುವಾಗಿದ್ದಾಗ ಇಡೀ ಮನೆ ನಂದನವನವಾಗುತ್ತದೆ. ಕಚೇರಿಯ ವಾತಾವರಣ ಆಫೀಸ್ ಮೀಟಿಂಗ್‌ಗಳಲ್ಲಿ ಸಹೋದ್ಯೋಗಿಯೊಬ್ಬರು ಪ್ರೆಸೆಂಟೇಷನ್ ಮಾಡುವಾಗ ತಪ್ಪು ಮಾಡಿದರೆ, ಅದನ್ನು ಇಡೀ ತಂಡದ ಮುಂದೆ ಹಾಸ್ಯ ಮಾಡುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಅದರ ಬದಲು, ವಿರಾಮದ ಸಮಯದಲ್ಲಿ ಕಾಫಿ ಕುಡಿಯುತ್ತಾ ಲಘು ಧಾಟಿಯಲ್ಲಿ ತಪ್ಪನ್ನು ತಿದ್ದಿ, “ನಾವೆಲ್ಲರೂ ಆರಂಭದಲ್ಲಿ ಹೀಗೆಯೇ ಇದ್ದೆವು” ಎಂದು ನಗುತ್ತಾ ಹೇಳಿದಾಗ ಅಲ್ಲಿ ನಯವೂ ಇರುತ್ತದೆ, ಸಹೋದ್ಯೋಗಿಗೆ ಕಲಿಯುವ ತತ್ವವೂ ಸಿಗುತ್ತದೆ.  ಸಾಮಾಜಿಕ ಜಾಲತಾಣಗಳು (Social Media) ಇಂದಿನ ಡಿಜಿಟಲ್ ಯುಗದಲ್ಲಿ ಮೀಮ್ಸ್ (Memes) ಮತ್ತು ಟ್ರೋಲ್ ಮಾಡುವುದು ಒಂದು ದೊಡ್ಡ ಫ್ಯಾಷನ್ ಆಗಿದೆ. ಯಾರೋ ಒಬ್ಬರು ಸಾರ್ವಜನಿಕವಾಗಿ ಎಡವಿ ಬಿದ್ದಾಗ ಅಥವಾ ತಪ್ಪು ಉಚ್ಚಾರಣೆ ಮಾಡಿದಾಗ ಅದನ್ನು ವಿಡಿಯೋ ಮಾಡಿ ಲಕ್ಷಾಂತರ ಜನರು ನಗುತ್ತಾರೆ. ಇದು ಅಮಾನವೀಯ. ತಮಾಷೆಯು ಸಮಾಜದ ತಪ್ಪುಗಳನ್ನು ತಿದ್ದುವ ಹರಿತವಾದ ವ್ಯಂಗ್ಯಚಿತ್ರದಂತಿರಬೇಕೇ ಹೊರತು, ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹರಣ ಮಾಡುವ ಅಸ್ತ್ರವಾಗಬಾರದು. ಸ್ನೇಹಿತರ ಬಳಗ  ಗೆಳೆಯರ ಗುಂಪಿನಲ್ಲಿ ಕಪ್ಪು-ಬಿಳುಪು, ದಪ್ಪ-ತೆಳ್ಳಗಿರುವ ದೈಹಿಕ ರೂಪವನ್ನು ಹಿಡಿದು ತಮಾಷೆ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. “ಜಸ್ಟ್ ಫಾರ್ ಫನ್” ಎಂದು ಹೇಳುವ ಇಂತಹ ಮಾತುಗಳು ಗೆಳೆಯನ ಮನಸ್ಸಿನಲ್ಲಿ ಆಳವಾದ ಗಾಯವನ್ನು ಉಂಟುಮಾಡುತ್ತವೆ. ನಿಜವಾದ ಸ್ನೇಹದ ನಗುವಿನಲ್ಲಿ ಪರಸ್ಪರ ಗೌರವವಿರಬೇಕು. ಗೆಳೆಯನನ್ನು ಕಾಲೆಳೆಯುವಾಗಲೂ ಅವನ ಕೈಹಿಡಿದು ನಡೆಸುವ ನಯ ಮತ್ತು ವಿವೇಕ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು.  ಸಾರ್ವಜನಿಕ ಸಮಾರಂಭಗಳು  ಸಭೆ-ಸಮಾರಂಭಗಳಲ್ಲಿ ನಿರೂಪಕರು ಅಥವಾ ಭಾಷಣಕಾರರು ಜನರನ್ನು ರಂಜಿಸಲು ದ್ವಂದ್ವಾರ್ಥದ (Double meaning) ಜೋಕುಗಳನ್ನು ಅಥವಾ ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಹಾಸ್ಯಗಳನ್ನು ಬಳಸುತ್ತಾರೆ. ಇದು ಸಭ್ಯ ಸಮಾಜದ ಲಕ್ಷಣವಲ್ಲ. ಮಹಾನ್ ಸಾಹಿತಿಗಳಾದ ಜಿ.ಪಿ. ರಾಜರತ್ನಂ ಅಥವಾ ಬೀಚಿ ಅವರ ಹಾಸ್ಯದಲ್ಲಿ ಸಮಾಜಕ್ಕೆ ಬೇಕಾದ ಸಂದೇಶವಿರುತ್ತಿತ್ತು. ನಮ್ಮ ಸಾರ್ವಜನಿಕ ಹಾಸ್ಯವು ಎಲ್ಲ ವಯಸ್ಸಿನವರೂ ಒಟ್ಟಿಗೆ ಕುಳಿತು ಆನಂದಿಸುವಂತಿರಬೇಕು.  ವಿದ್ಯಾರ್ಥಿ ಮತ್ತು ಶಿಕ್ಷಕರ ಸಂವಹನ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳನ್ನು ಕೇವಲ ಗದರಿಸದೇ, ಮೋಜಿನ ಉದಾಹರಣೆಗಳ ಮೂಲಕ ಕಠಿಣ ವಿಷಯಗಳನ್ನು ಕಲಿಸಬಹುದು. ವಿದ್ಯಾರ್ಥಿಯೊಬ್ಬ ದಡ್ಡತನದ ಪ್ರಶ್ನೆ ಕೇಳಿದಾಗ ಇಡೀ ಕ್ಲಾಸ್ ನಗುವಂತೆ ಮಾಡದೇ, “ನಿನ್ನ ಪ್ರಶ್ನೆ ವಿಭಿನ್ನವಾಗಿದೆ, ಆದರೆ ಉತ್ತರ ಹೀಗಿದೆ” ಎಂದು ನಗುತ್ತಾ ವಿವರಿಸಿದಾಗ ಆ ವಿದ್ಯಾರ್ಥಿಗೆ ಕಲಿಯುವ ಆಸಕ್ತಿ ಹೆಚ್ಚುತ್ತದೆ. ಅಲ್ಲಿ ಜ್ಞಾನದ ಜೊತೆ ಪ್ರೀತಿಯೂ ಸಮ್ಮಿಲನಗೊಳ್ಳುತ್ತದೆ. ಕನ್ನಡದ ಪ್ರಸಿದ್ಧ ಕವಿ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಇಲ್ಲಿ ನೆನಪಾಗುತ್ತವೆ: ಹಾಸ್ಯದೊಳಗೊಬ್ಬರನು ಹಂಗಿಸುವುದೆಲ್ಲ ಕಡು- ದೋಷವದು ಸಾತ್ವಿಕದ ನಗುವಿನುಲಿ ಹಿತವು | ದಾಸಿಯನು ಕುವರಿಯನು ಸರಿಸಮನೆ ಕಾಣುತಲಿ ಲಾಸ್ಯವನು ಗೈವಂತೆ – ಮಂಕುತಿಮ್ಮ || ನಗು ಹನಿ  ಜೀವನವೆಂಬ ಮಹಾಕಾವ್ಯದಲ್ಲಿ ನಗು ಎಂಬುದು ಪ್ರತಿಯೊಂದು ಪುಟಕ್ಕೂ ಚೈತನ್ಯ ನೀಡುವ ವಿರಾಮಚಿಹ್ನೆಯಾಗಿದೆ. ನಮ್ಮ ಮಾತು ಮತ್ತು ತಮಾಷೆಗಳು ಸದಾ ಹಸನ್ಮುಖಿಯಾಗಿರಬೇಕು, ಆದರೆ ಅವುಗಳ ಆಳದಲ್ಲಿ ಸದಾಚಾರದ ಸತ್ವವಿರಬೇಕು. ಹೂವು ಕಂಪನ್ನು ಬೀರುವಾಗ ಮುಳ್ಳುಗಳನ್ನು ಮರೆಮಾಚುವಂತೆ, ನಮ್ಮ ನಗುವೂ ಸಹ ಪರರ ನೋವನ್ನು ಮರೆಸಿ ಹೊಸ ಭರವಸೆಯನ್ನು ಮೂಡಿಸುವಂತಿರಬೇಕು. ವಿವೇಕಯುತವಾದ ಹಾಸ್ಯವು ಕತ್ತಲೆಯ ಮನಸ್ಸಿನಲ್ಲಿ ಜ್ಞಾನದ ದೀಪವನ್ನು ಹಚ್ಚುತ್ತದೆ. ಜಗತ್ತಿನ ಎಲ್ಲ ಸಾಹಿತ್ಯ ಮತ್ತು ಮಹನೀಯರು ಸಾರಿದಂತೆ, ನಮ್ಮ ನಾಲಿಗೆಯಿಂದ ಹೊರಡುವ ಪ್ರತಿಯೊಂದು ಮಂದಸ್ಮಿತವೂ ಸಮಾಜವನ್ನು ಒಗ್ಗೂಡಿಸುವ, ಪ್ರೀತಿಯನ್ನು ಬಿತ್ತುವ ಸುಂದರ ಕಾವ್ಯವಾಗಲಿ. ಆ ಮೂಲಕ ನಮ್ಮ ಒಳಮನಸ್ಸಿನ ಸಂಸ್ಕಾರವು ಲೋಕಕ್ಕೆ ಆದರ್ಶವಾಗಲಿ. ಅಲ್ಲವೇ? ಜಯಶ್ರೀ ಜೆ.ಅಬ್ಬಿಗೇರಿ

“ನಗುವಿನ ನಯ – ಬದುಕಿನ ಲಯ” ಜಯಶ್ರೀ. ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ “ಹೊರಟಿದ್ದೇನೆ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಹೊರಟಿದ್ದೇನೆ” ಕಾಲಾನುಕ್ರಮದಿ ನಡೆಯತೊಡಗಿದ್ದೇನೆಎಡರು ತೊಡರುಗಳನೇಕಮುಗ್ಗುರಿಸಿದಾಗಲೇ ತಿಳಿವುದುನಾ ಎಡವಿದ್ದೆಲ್ಲಿ ಎಂದು ನಿರಾಶೆ ಹತಾಶೆ ಬದಿಗೊತ್ತಿಅವಿತಿರುವ ಮಿಣುಕು ಹುಡುಕಿಭರವಸೆಯ ದೀವಿಗೆ ಹಿಡಿದುಕಾಲದ ಮಹಿಮೆಯಲಿ ಎಲ್ಲವೂ ನೋವು ನುಂಗಿ ಮೂಕನಾಗಿಒಳಗೊಳಗೆ ಕುದಿದು ಕಪ್ಪಾಗಿಬೆಪ್ಪನಂತೆ ಮತ್ತೆ ಮೆತ್ತಗೆತಪ್ಪು ಒಪ್ಪಿ ನಡೆಯುತೊಡಗಿದ್ದೇನೆ ಕನಸ ಗೋಪುರ ಕಳಚಿದರುನಿರಾಶೆಯ ಹೊಸ್ತಿಲು ದಾಟಿಗಸ್ತು ತಿರುಗುತ್ತಿದ್ದೇನೆ ತಿದ್ದಿ ತೀಡಲುಹೊಂಗನಸು ಬಿತ್ತಲೂ ಮತ್ತೆ ಹೊರಟಿದ್ದೇನೆ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ ಅವರ ಕವಿತೆ “ಹೊರಟಿದ್ದೇನೆ” Read Post »

ಕಾವ್ಯಯಾನ, ಗಝಲ್

ಬಾಗೇಪಲ್ಲಿ  ಅವರ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲ ಗಜಲ್*(ತರಹಿ ಪ್ರಕಾರ)(ಮಾನ್ಯ ಜಿ.ಪಿ. ರಾಜರತ್ನo ಅವರ ಕವನದ ಎರಡು ಸಾಲು ಹಿಡಿದು) ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೇ ರತ್ನಂಗ ಪ್ರಾಣಬುಂಡೇನೆತ್ತಿ ಕುಡುದುಬುಟ್ಟಾಂದ್ರೇ ತಗೋ ಪದಗಳ್ ಬಾಣ ಮಾನ್ಯ ಹಿರಿಕವಿ ರೃಜರತ್ನಂ ಅವರ ಕವನದ ಸಾಲುಗಳಿವುಆಡಗಿರುವ ಕನ್ನಡ ಅಭಿಮಾನವನರಿತು ಆಗು ನೀ ಜಾಣ ದ್ರಾವಿಡ ಭಾಷೆಗಳೆಲ್ಲಾ ಪ್ರಚೀನ ವಾದುದು ಕನ್ನಡ ಕೇಳ್ಕರ್ನಾಟಕವದುವೇ ಆ ತಾಯಿ ನೆಲಸಿಹ ಸುಂದರ ತಾಣ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯವದು ಬಹು ಮಧುರ ತಮಕಾವ್ಯ ಓದಿ ಬರೆದವನು ಜಗದಲಿ ಉತ್ತಮೋತ್ತಮನು ತಾ ಕಾಣ ಕಾವ್ಯವರಿದವನ ಬಾಳದು ಬಾಳಲ್ಲ ಆದು ಅಪೂರ್ಣಕವಿತೆಯನರಿಯದ ಜೀವನ  ಎತ್ತುಗಳು ಕಟ್ಟದ ಗಾಣ ಕವಿತಾ ಮಾತೆ ಒಲಿದೊಡೆ ಜೀವನದ ಹಾದಿ ಸುಗಮಆ ದೇವಿಯ ಒಲುಮೆ ಪಡೆಯಲು ತೊಡು ಇಂದೇ ಪಣ ಕೃಷ್ಣಾ! ನೀ ಬೋಧಿಸಿದ ಗೀತೆಯದು ಬಲು ಕಾವ್ಯ ಮಯಆದರೂ ಹೊಡೆದಾಡುವರು ದ್ವೈತ -ಅದ್ವೈತ ವೆಂಬ ಬಣ. ಬಾಗೇಪಲ್ಲಿ 

ಬಾಗೇಪಲ್ಲಿ  ಅವರ ಗಜಲ್ Read Post »

ಇತರೆ

“ಪ್ರಶಸ್ತಿಯ ಸಂಭ್ರಮ ಹಾಗೂ  ಸಂಕಟಗಳು” ಸಿದ್ದರಾಮ ಹೊನ್ಕಲ್

ಕಾವ್ಯ ಸಂಗಾತಿ ಸಿದ್ದರಾಮ ಹೊನ್ಕಲ್ “ಪ್ರಶಸ್ತಿಯ ಸಂಭ್ರಮ ಹಾಗೂ  ಸಂಕಟಗಳು” ಆತ್ಮೀಯರೇ,ಹಿರಿಯರೇ, ಸ್ನೇಹಿತರೇ,ಹಿರಿ ಕಿರಿಯ ಲೇಖಕ ಲೇಖಕಿಯರೇ,ಮಾನ್ಯರೇ,ಎಲ್ಲರಿಗೂ ಗೌರವದ ವಂದನೆಗಳು.ದಿನಾಂಕ ೩೦-೧೦-೨೬ ರಂದು ಮಧ್ಯಾಹ್ನ ಮಾನ್ಯ ಸಂಸ್ಕೃತಿ ಸಚಿವರು ಪ್ರೆಸ್ ಮೀಟ್ ಮಾಡಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡುತಿದ್ದಂತೆಯೇ ನಾಡಿನ ಸಾಕ್ಷಿಪ್ರಜ್ಞೆಯಂತಹ ಹಿರಿಯ ಲೇಖಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸರ್ ಅವರು ಒಳಗೊಂಡಂತೆ ನೂರಾರು ಹಿರಿಯ ಹಾಗೂ ಯುವ ಸಾಧಕರಾದ ತಾವೆಲ್ಲರೂ ಖುಷಿಯಿಂದ ಫೋನ್, ಹಾಗೂ ಸಂದೇಶಗಳ ಮೂಲಕ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿನಂದನೆಗಳ ಮಳೆ ಸುರಿಸಿ ನನಗೆ ಹರಸಿ ಹಾರೈಸಿದ್ದೀರಿ. ನಿಮ್ಮೆಲ್ಲರ ಸೌಜನ್ಯಕ್ಕೆ ಶರಣು ಶರಣಾರ್ಥಿಗಳು. ನಮ್ಮ ಮಾಧ್ಯಮಗಳ ಸ್ನೇಹಿತರು ಫೋನ್ ಮಾಡಿದರು, ಅಭಿನಂದನೆಗಳು ಹೇಳಿದರು.ಸಂದೇಶ ಹಾಕಿ ನನ್ನ ಕೆಲವು ವಿವರ ಹಾಗೂ ಅನೇಕ ಭಾವಚಿತ್ರ ಕೇಳತೊಡಗಿದ್ದರು. ಆ ಒತ್ತಡದಲ್ಲಿ ೪-೫ ವರ್ಷಗಳ ಹಿಂದಿನ ಅನೇಕ ಪ್ರಮುಖ ಭಾವಚಿತ್ರಗಳು ಸಹ ನನಗೆ ಗ್ಯಾಲರಿ ಹೋಗಿ ಹುಡುಕಿ ಕೊಡಲು ಆಗದೇ ಕ್ಷಮೆ ಕೇಳಬೇಕಾಯಿತು.ಕಳೆದ ಹತ್ತಾರು ವರ್ಷಗಳಿಂದ ನಮ್ಮ ಯಾದಗಿರಿ ಜಿಲ್ಲೆಯ ಪತ್ರಕರ್ತರು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಒಂದಷ್ಟು ನಮ್ಮಗಳ ಭಾವಚಿತ್ರ ಹಾಕಿ ಯಾರಿಗೆ ಒಲಿಯಲಿದೆ ಈ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಂದು ಸುದ್ದಿ ಮಾಡುತ್ತಾ ಇದ್ದರು. ಅಂತೂ ಅವರ ಹಾರೈಕೆಯಂತೆ ಈ ಸಲ ನನಗೆ ಒಲಿದಿದೆ. ಆ ಪತ್ರಕರ್ತ ಮಿತ್ರರಿಗೆ ವಂದನೆಗಳು. ಅವರ ಫೋನ್ ಬಂದಾಕ್ಷಣ ನನ್ನ ಗ್ಯಾಲರಿ ಹುಡುಕಾಟ ಕಟ್ ಆಗುತ್ತಿತ್ತು.ಸರಿಯಾಗಿ ಯಾವ ಭಾವಚಿತ್ರ ಕೊಡಲು ಆಗಲೇ ಇಲ್ಲ. ಅವರೆಲ್ಲರ ಪ್ರೀತಿ ದೊಡ್ಡದು. ಅಪಾರ ಕವರೇಜ್ ನೀಡಿದ ಎಲ್ಲಾ ಮಾಧ್ಯಮಗಳ ಮಿತ್ರರಿಗೂ ಕೃತಜ್ಞತೆಗಳು. ಸಹಸ್ರಾರು ಜನ ಆತ್ಮೀಯರು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪೋಸ್ಟ್ ಹಂಚಿಕೊಂಡಿದ್ದೀರಿ. ನಮ್ಮ ಜಿಲ್ಲೆಯ ಹಾಗೂ ಇಡೀ ಕಲ್ಯಾಣ ಕರ್ನಾಟಕ ಹಾಗೂ ನಾಡಿನಾದ್ಯಂತ ಇರುವ ಆತ್ಮೀಯ ಲೇಖಕ ಲೇಖಕಿಯರ ಸಂಭ್ರಮ ಹೇಳತೀರದು. ತಮಗೆ ಬಂದಷ್ಟು ಖುಷಿ ಹಂಚಿಕೊಂಡಿದ್ದೀರಿ. ಸ್ಟೇಟಸ್ ಇಟ್ಟು ಸಂತಸ ಪಟ್ಟಿರಿ. ನಿಮಗೆಲ್ಲರಿಗೂ ವೈಯಕ್ತಿಕವಾಗಿ ಉತ್ತರಿಸಲಾಗದ ಆ ದಿನಗಳ ಒತ್ತಡ ತಮಗೆ ಅರ್ಥ ಆಗಿರುತ್ತದೆ ಅಂದುಕೋತೇನೆ. ಅನೇಕರ ಫೋನ್ ಗಳಿಗೆ ಹಾಗೂ ಸಂದೇಶಗಳಿಗೆ ಈಗಲೂ ಉತ್ತರಿಸುತ್ತಾ ಇದ್ದೇನೆ. ಕೆಲವರು ನಮ್ಮ ಫೋನ್ ತೆಗೆದಿಲ್ಲ. ಮೆಸೇಜ್ ಗೆ ಉತ್ತರಿಸಿಲ್ಲ ಎಂದು ನೊಂದು ಹೇಳಿರಿ.ನಿಜ. ಅಂದು ನೂರಾರು ಆತ್ಮೀಯರ ಪೋಸ್ಟ್ ಗಳು ಗಮನಿಸಿಲ್ಲ.ಎಲ್ಲರ ಫೋನ್ ಸ್ವೀಕರಿಸಲು ಆಗಲಿಲ್ಲ. ನಿಜ. ನನ್ನನ್ನು ಕ್ಷಮಿಸಿರಿ. ತಪ್ಪು ಭಾವಿಸಬೇಡಿ. ಬೆಳಗಿನ ನಾಲ್ಕು ಗಂಟೆಯವರೆಗೆ ಸಾಧ್ಯ ಆದಷ್ಟು ಜನ ಆತ್ಮೀಯರಿಗೆ ರಿಪ್ಲೈ ಮಾಡಿದ್ದೇನೆ. ನೀವು ನನಗೆ ಟ್ಯಾಗ್ ಮಾಡಿದವುಗಳು ಮಾತ್ರ ನನ್ನ ಕಣ್ಣ ಮುಂದೆ ಬರುತ್ತವೆ. ಸಾಧ್ಯ ಆದಷ್ಟು ನೋಡಿದಾಗ ಧನ್ಯವಾದಗಳು ಹೇಳಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ಬಂತು, ಉತ್ತರ ಕೊಡಲಾಗದಷ್ಟು ದೊಡ್ಡವರು ಆದರೇನೋ ಅಂದುಕೋಬೇಡಿ. ದಯವಿಟ್ಟು ಕ್ಷಮಿಸಿರಿ. ನಾಡಿನಲ್ಲಿ ನನಗಿಂತ ಹಿರಿಯರು,ಸಾಧಕರು ಸಾಕಷ್ಟು ಜನ ಲೇಖಕ ಲೇಖಕಿಯರು ಇದ್ದಾರೆ. ಯಾವುದೇ ಪ್ರಶಸ್ತಿ ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯದ ಹಿನ್ನೆಲೆಯಲ್ಲಿ ಆಯ್ಕೆ ಆಗುತ್ತವೆ. ನನ್ನ ಸಾಧನೆಯ ಜೊತೆಗೆ ಬಹಳ ವರ್ಷಗಳಿಂದ ಯಾದಗಿರಿ ಜಿಲ್ಲೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬಂದಿರಲಿಲ್ಲ ಎಂಬ ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನನಗೆ ಲಭಿಸಿದೆ ಎಂಬ ವಿನಯ ನನ್ನದು. ನಾನು ಹಿಂದೆ ಅಕಾಡೆಮಿಯ ಸದಸ್ಯನಾಗಿ ಕೆಲಸ ಮಾಡುತ್ತಾ ಇದ್ದಾಗಲೂ ಇದೇ ಮಾನದಂಡದಿಂದ ಆಯ್ಕೆ ಮಾಡುತ್ತಾ, ಹೆಸರು ಸೂಚಿಸುತ್ತಾ ಇದ್ದೇವು.ಅಂತಿಮ ತೀರ್ಮಾನ ನಮ್ಮ ಮಾನ್ಯ ಅಧ್ಯಕ್ಷರು ಹಾಗೂ ಮಾನ್ಯ ರಿಜಿಸ್ಟ್ರಾರ್ ಅವರು ಇದೇ ನ್ಯಾಯದ ಅಡಿಯಲ್ಲಿ ಅರ್ಥಪೂರ್ಣವಾಗಿ ತಗೋತಿದ್ದರು. ಇಲ್ಲಿಯ ರಾಜ್ಯೋತ್ಸವ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮಾನ್ಯ ಮುಖ್ಯಮಂತ್ರಿಗಳು, ಸಂಸ್ಕೃತಿ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳು ಫೈನಲ್ ಮಾಡುತ್ತಾರೆ. ಅದು ಸಹಜ. ಹೀಗಾಗಿ ಪ್ರಶಸ್ತಿ ಬಂತು ಅಂದಾಕ್ಷಣ ನಾನು ದೊಡ್ಡ ಸಾಧಕ ಎಂದು ಭಾವಿಸಲಾರೆ. ಖಂಡಿತಾ ಬದಲಾಗಲಾರೆ. ಇನ್ನಷ್ಟು ವಿನಯದಿಂದ ಇರುತ್ತೇನೆ. ಇದು ಸಂದಿರೋದು ನನಗಲ್ಲ. ಕಲ್ಯಾಣ ಕರ್ನಾಟಕಕ್ಕೆ, ಆ ಮೂಲಕ ಗಿರಿ ನಾಡಿನ ಯಾದಗಿರಿ ಜಿಲ್ಲೆಗೆ, ಸಗರ ನಾಡಿನ ಎಲ್ಲಾ ಹಿರಿ ಕಿರಿಯ ಲೇಖಕರಿಗೆ, ಹಾಗೂ ನಾಡಿನಾದ್ಯಂತ ಇರುವ ಆತ್ಮೀಯ ಹಿರಿಯ ಹಾಗೂ ಯುವ ಲೇಖಕ ಲೇಖಕಿಯರಿಗೆ ಎಂದು ಭಾವಿಸಿ ಅತ್ಯಂತ ಸಂಕೋಚದಿಂದ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ. ಇದೋ ನಿಮಗೆಲ್ಲರಿಗೂ ಕೃತಜ್ಞತೆಗಳು.ನಿಮ್ಮ ಎಲ್ಲರ ಪ್ರೀತಿ ಎಂದಿನಂತೆ ಇರಲಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ನಾಡಿನ ಮುಖ್ಯಮಂತ್ರಿಗಳು ಆದ ಮಾನ್ಯ ಶ್ರೀ ಡಿಕೆ ಸಾಹೇಬರಿಂದ, ಮಾನ್ಯ ಸಂಸ್ಕೃತಿ ಸಚಿವರು ಆದ ಮಾನ್ಯ ಶ್ರೀ ಶಿವರಾಜ್ ತಂಗಡಗಿ ಸಾಹೇಬರಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳಾದ ಮಾನ್ಯ ಕಾರ್ಯದರ್ಶಿಗಳು, ಮಾನ್ಯ ನಿರ್ದೇಶಕರಿಂದ ಆರು ಕೋಟಿ ಕನ್ನಡಿಗರ ಆಶೀರ್ವಾದದಿಂದ ನವೆಂಬರ ಒಂದರಂದು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಸಂತಸ ನನ್ನದು. ಯಾರು ನಮಗೆ ಸ್ಪಂದಿಸಿಲ್ಲ ಎಂದು ದಯವಿಟ್ಟು ಭಾವಿಸಬೇಡಿ. ಒಮ್ಮೆಲೇ ಹೇಗೆ ಸ್ಪಂದಿಸಲಿ. ನೀವೇ ಯೋಚಿಸಿ. ನಿಮ್ಮ ಎಲ್ಲರ ಪ್ರೀತಿ ಸ್ನೇಹ ಮೆಚ್ಚುಗೆ ಪಡೆದ ನಾನು ಧನ್ಯನು ಎಂದು ನಿಮಗೆಲ್ಲರಿಗೂ ಈ ಪೋಸ್ಟ್ ಮೂಲಕ ಅನಂತ ಧನ್ಯವಾದಗಳು ಅರ್ಪಿಸುತ್ತಿದ್ದೇನೆ. ಇದು ನಿಮಗೆ ಸಂದ ಗೌರವ ಅಂದುಕೊಳ್ಳಿ.ಆ ಕಾರಣ ಪ್ರಶಸ್ತಿಯ ಮೊತ್ತವನ್ನು ಸಹ ದತ್ತಿನಿಧಿ ಆಗಿ ಇಟ್ಟು ಪ್ರತಿವರ್ಷ ವಿವಿಧ ಕ್ಷೇತ್ರಗಳ ಐದು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಈ ನೆಲದ ನಿಮ್ಮ ಎಲ್ಲರ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಋಣವನ್ನು ತೀರಿಸಲು ಯತ್ನಿಸುತ್ತೇನೆ. ನಿಮ್ಮ ಎಲ್ಲರ ಪ್ರೀತಿ ವಿಶ್ವಾಸ ಸಲಹೆ ಸಹಕಾರ ಎಂದಿನಂತಿರಲಿ. ಯಾರು ದಯವಿಟ್ಟು ತಪ್ಪು ಭಾವಿಸಬೇಡಿ ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಸುದ್ದಿ ತಿಳಿದಾಗಿನಿಂದ ಎಲ್ಲಿದ್ದೀರಿ ಸರ್,ನಿಮಗೆ ಗೌರವಿಸಲು ಊರಿಗೆ ಬರುತ್ತಿದ್ದೇವೆ ಎಂದು ಫೋನ್ ಮೇಲೆ ಫೋನ್.ನಾನು ಜಾಸ್ತಿ ಊರಲ್ಲಿ ಇರೋಲ್ಲ ಎಂಬ ಅವರ ಸಂದೇಹ ಸಹ ನಿಜ. ನಾನು ಊರಲ್ಲಿ ಇಲ್ಲ.ತಮ್ಮ ಈ ಹಾರೈಕೆ ಸಾಕು.ದಯವಿಟ್ಟು ಈ ಶಾಲು ಹಾರ ಬೇಡಿ.ದೂರದಿಂದಲೇ ಆಶೀರ್ವಾದ ಮಾಡಿರಿ.ಶುಭ ಕೋರಿರಿ.ನಿಮ್ಮ ಪ್ರೀತಿ ಸಾಕು ಎಂದು ಹೇಳುತ್ತಾ ಬಂದಿದ್ದೇನೆ. ಈಗಲೂ ಅದೇ ಮಾತು.ದಯವಿಟ್ಟು ಅಲ್ಲಿಂದಲೇ ನನಗೂ ನಮ್ಮ ಕುಟುಂಬಕ್ಕೆ ನಿಮ್ಮ ಶುಭ ಹಾರೈಕೆಗಳು ಇರಲಿ ಸಾಕು.ನನಗೆ ಅದೇ ದೊಡ್ಡದು.ಆದರೂ ಸ್ಥಳಿಯರ ಕೈಯಲ್ಲಿ ಸಿಕ್ಕು ಅವರ ಪ್ರೀತಿಗೆ ಮಣಿದಿದ್ದೇನೆ.ಅದು ಅನಿವಾರ್ಯ. ೨೦೧೩ ರಲ್ಲಿ ಯಾದಗಿರಿ ಜಿಲ್ಲೆಯ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,೨೦೧೭ ರಲ್ಲಿ ಶಹಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ,೨೦೧೮ ರಲ್ಲಿ ಯಾದಗಿರಿ ಜಿಲ್ಲಾ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ, ೨೦೨೨ ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನ ನಡೆದ ೧೦ ನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೨೩ ರಲ್ಲಿ ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ನಾಡಿನ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಹೀಗೆ ಅನೇಕ ಗೌರವದ ಸ್ಥಾನ ಮಾನಗಳು ಬಂದಾಗ, ಪುರಸ್ಕಾರ ಸಂದಾಗ, ಸಹಸ್ರಾರು ಜನ ಆತ್ಮೀಯರಿಂದ ನಿತ್ಯ ನಿರಂತರವಾಗಿ ಸನ್ಮಾನಗೊಂಡಿದ್ದೇನ. ಏನಿತು ಜನ್ಮಗಳಲ್ಲಿ ಏನಿತು ಜೀವಿಗಳಿಗೆ ನಾವು ಋಣಿಯೋ,ಈ ಜನ್ಮವೆಂಬುದು ಹಲವು ಋಣಗಳ ರತ್ನಗಣಿಯೋ ಅನ್ನುವಂತಾಗಿದೆ.ದಯವಿಟ್ಟು ಬೇಡಿ…ಈ ಸಲ ಆದರೂ ದೂರದಿಂದ ಹಾರೈಸಿ ಎಂದು ಕೋರುತ್ತೇನೆ. ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಮುಂದೆ ಸರ್ಕಾರದ ಅನೇಕ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ತಗೋತಾರೆ ಎಂಬ ಮಾತಿದೆ. ಹಾಗೇನಾದ್ರೂ ನನಗೆ ಮುಂದೆಅಂತಹ ಆ ಅವಕಾಶ ಬಂದರೆ ಖಂಡಿತಾ ಸಾಧಕರನ್ನು ನಮ್ಮ ಭಾಗದಲ್ಲಿ ಹಾಗೂ ನಾಡಿನಾದ್ಯಂತ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಕಾಳಜಿ ನನ್ನದು ಸದಾ ಇರುತ್ತದೆ. ನಮಸ್ಕಾರಗಳು. ———— ಸಿದ್ಧರಾಮ ಹೊನ್ಕಲ್,ಯಾದಗಿರಿ ಜಿಲ್ಲೆ.೬-೧೦-೨೬.

“ಪ್ರಶಸ್ತಿಯ ಸಂಭ್ರಮ ಹಾಗೂ  ಸಂಕಟಗಳು” ಸಿದ್ದರಾಮ ಹೊನ್ಕಲ್ Read Post »

You cannot copy content of this page

Scroll to Top