ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಮೆದುಳೊಂದು..ಕಾರ್ಯತಂತ್ರಗಳು ಮೂರು”‌ ವೀಣಾ ಹೇಮಂತ್ ಗೌಡ ಪಾಟೀಲ

ವಿಶೇಷ ಸಂಗಾತಿ “ಮೆದುಳೊಂದು..ಕಾರ್ಯತಂತ್ರಗಳು ಮೂರು”‌ ವೀಣಾ ಹೇಮಂತ್ ಗೌಡ ಪಾಟೀಲ ಚಿಕ್ಕಂದಿನಲ್ಲಿ ಓದಿನಲ್ಲಿ ಆತ ತುಂಬಾ ಜಾಣನಾಗಿದ್ದ.. ಆದರೆ ಇದೀಗ ಆತ ಯಾವುದೇ ಕೆಲಸ ಮಾಡದೆ ಅಲೆದಾಡಿಕೊಂಡಿದ್ದಾನೆ. ಮಾತಿನಲ್ಲಿ ಚತುರನಾಗಿದ್ದವ ಇದೀಗ ಎಲ್ಲರ ಬೇಸರಕ್ಕೆ ಗುರಿಯಾಗಿದ್ದಾನೆ. ಅಂದಿನ ಕಾಲಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಕೇಂದ್ರ ಸರ್ಕಾರದ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಆ ವ್ಯಕ್ತಿ ಬದುಕಿನಲ್ಲಿ ತನ್ನ ಎಲ್ಲ ಕೆಲಸಗಳನ್ನು ಮುಂದೂಡುವುದರಲ್ಲಿಯೇ ಇರುತ್ತಾನೆ. ಯಾವುದೇ ಕೆಲಸ ಮಾಡಲು ಹೋದರೂ ಇದು ತನ್ನಿಂದ ಸಾಧ್ಯವೇ ಎಂದು ಅನುಮಾನಿಸುತ್ತಾನೆ.ಬಹಳಷ್ಟು ವಿಷಯಗಳಲ್ಲಿ ವಿನಾಕಾರಣದ ಅನುಮಾನ, ಆತಂಕಗಳಿಂದಾಗಿ ಹಾಗೂ ತನ್ನ ಮೇಲಿನ ಅಪನಂಬಿಕೆಯಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ ಹಲವಾರು ಜನರನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ನೋಡುತ್ತೇವೆ. ಮತ್ತೆ ಕೆಲವರು ತಮ್ಮ ಬದುಕಿನಲ್ಲಿ ತಾವು ತೆಗೆದುಕೊಂಡ ನಿರ್ಧಾರಗಳ ಪರಿಣಾಮಗಳನ್ನು ಇತರರ ಮೇಲೆ ಹಾಕಿ ತಮ್ಮ ಬದುಕಿನ ಎಲ್ಲ ವಿಫಲತೆಗಳಿಗೆ ಇತರರೇ ಕಾರಣ ಎಂದು ಬಿಂಬಿಸುತ್ತಾರೆ.ನನ್ನ ಹೆಚ್ಚಿನ ಓದನ್ನು ಕೌಟುಂಬಿಕ ಕಾರಣದಿಂದಾಗಿ ಪೂರೈಸಲು ಸಾಧ್ಯವಾಗಲಿಲ್ಲ, ನನ್ನ ತಂದೆ-ತಾಯಿ ನನಗೆ ಪ್ರೋತ್ಸಾಹ ನೀಡಲಿಲ್ಲ ಎಂಬುದರಿಂದ ಹಿಡಿದು ತಮ್ಮ ಜೀವನದಲ್ಲಿ ತಾವು ಸೃಷ್ಟಿಸಿಕೊಂಡ ಎಲ್ಲ ಸಮಸ್ಯೆಗಳಿಗೆ ಬೇರೊಬ್ಬರನ್ನು ಹೊಣೆಯಾಗಿಸುತ್ತಾರೆ.ಆದರೆ ಮನಶ್ಯಾಸ್ತ್ರದ ಪ್ರಕಾರ ವ್ಯಕ್ತಿಯ ಆಲಸ್ಯ, ಅಪನಂಬಿಕೆ ಹಾಗೂ ಆತಂಕಗಳಿಗೆ  ಆತನ ಬಾಲ್ಯಾವಸ್ಥೆಯ ಬದುಕು ಕಾರಣವಾಗಿರುತ್ತದೆ.ನಮ್ಮ ಮೆದುಳಿನಲ್ಲಿ ನಾವು ಮೂರು ಬಗೆಯ ತಂತ್ರಗಳನ್ನು ಕಾಣುತ್ತೇವೆ ಒಂದು ರಕ್ಷಣಾತ್ಮಕ ತಂತ್ರ, ಒಂದು ಪ್ರತಿಕ್ರಿಯಾತ್ಮಕ ತಂತ್ರ ಮೂರನೆಯದು ಕಾರ್ಯನಿರ್ವಾಹಕ ಸಾಮರ್ಥ್ಯ ಹೊಂದಿರುವ ಮೆದುಳು.ಬಾಹ್ಯವಾಗಿ ಒಂದು ಉದಾಹರಣೆಯನ್ನು ನಾನು ಕೊಡ ಬಯಸುತ್ತೇನೆ. ಯಾರಾದರೂ ನಮ್ಮ ಮುಖದ ಬಳಿ ತಮ್ಮ ಕೈ ತಂದಾಗ ನಮಗರಿವಿಲ್ಲದೆ ನಮ್ಮ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. …ಇದು ರಕ್ಷಣಾತ್ಮಕ ತಂತ್ರ.ಎರಡನೆಯದು ನಮ್ಮ ದೇಹದ ಯಾವುದೇ ಭಾಗಕ್ಕೂ ಸೊಳ್ಳೆ ಮತ್ತಿತರ ಕೀಟಗಳು ಕಚ್ಚಿದಾಗ ನಾವು ಜೋರಾಗಿ ಬಡಿದು ಅದನ್ನು ಸಾಯಿಸಲು ಪ್ರಯತ್ನಿಸುತ್ತೇವೆ. ಇದು ತತ್ ಕ್ಷಣದ ಪ್ರತಿಕ್ರಿಯೆ… ಇಲ್ಲಿ ಸಣ್ಣ ಕ್ರಿಯೆಯನ್ನು ಸರಿಯೆಂದು ತೋರಿಸಲು  ತೀವ್ರವಾಗಿ ಪ್ರತಿಕ್ರಿಯೆ ತೋರುವುದು. ಈ ರೀತಿಯ ಮೆದುಳನ್ನು ಪ್ರತಿಕ್ರಿಯಾತ್ಮಕ ಮೆದುಳು ಎಂದು ಹೇಳಬಹುದು.ಮೂರನೆಯದು ಕ್ರಿಯಾಶೀಲ ಮೆದುಳು….ಯಾವುದೇ ವಿಷಯವನ್ನು ಅಳೆದು ತೂಗಿ ಯೋಚಿಸಿ ಕಾರ್ಯನಿರ್ವಹಣೆ ಮಾಡುವ ಈ ಮೆದುಳು ಕಾರ್ಯತಂತ್ರಜ್ಞನಿದ್ದಂತೆ. ತಪ್ಪು ಸರಿ ಒಳಿತು ಕೆಡುಕುಗಳ ಕುರಿತು ತುಲನೆ ಮಾಡುವ ಶಕ್ತಿಯನ್ನು ಈ ರೀತಿಯ ಮೆದುಳು ಹೊಂದಿರುತ್ತದೆ. ರಕ್ಷಣಾತ್ಮಕ ತಂತ್ರವನ್ನು ಹೊಂದಿರುವ ಮೆದುಳು ಸದಾ ಭಯ, ಆತಂಕ ಹಾಗೂ ಒತ್ತಡವನ್ನು ಹೊಂದಿರುತ್ತದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದು ತನ್ನ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂದರೆ ಈ ರೀತಿಯ ಮಾನಸಿಕತೆಯನ್ನು ಹೊಂದಿರುವ ವ್ಯಕ್ತಿ ಅಂತಹ ತುರ್ತು ಪರಿಸ್ಥಿತಿಗಳಲ್ಲಿ ಏನು ಮಾಡಲೂ ತೋಚದೆ ದಿಗ್ಮೂಢನಾಗಿ ಉಳಿಯುತ್ತಾನೆ.ತನ್ನ ಮೇಲೆ ಒದಗಬಹುದಾದ ಅಪಾಯಗಳಿಂದ ರಕ್ಷಿಸಿಕೊಳ್ಳಲು ಬಯಸುತ್ತಾನೆ. ಅಪಾಯ ಎದುರಾದ ಕೂಡಲೇ ಆಮೆ ತನ್ನ ಚಿಪ್ಪಿನಲ್ಲಿ ಹುದುಗಿಕೊಳ್ಳುವಂತೆ ಆತನು ಕೂಡ ತನ್ನದೇ ವೈಯಕ್ತಿಕ ಪರಿಧಿಯಲ್ಲಿ ಉಳಿದು ಹೋಗುತ್ತಾನೆ. ಮತ್ತೆ ಕೆಲವೊಮ್ಮೆ ಆತ ಏನು ಮಾಡಬೇಕೆಂದು ಅರಿಯದೇ  ಹೋಗುತ್ತಾನೆ.ಸದಾ ಭೂತಕಾಲದಲ್ಲಿ ಜೀವಿಸುವ ಇಂತಹ ವ್ಯಕ್ತಿಗಳು ತಮ್ಮ ಬದುಕಿನ ಎಲ್ಲಾ ಅವಘಡಗಳಿಗೆ ಇತರರನ್ನು ದೂಷಿಸುತ್ತಾ ಸಾಗುತ್ತಾರೆ… ಇನ್ನೂ ಹೇಳಬೇಕೆಂದರೆ ಚಿಕ್ಕ ಮಕ್ಕಳಂತೆ ಇತರರ ಮೇಲೆ ಆಪಾದನೆ ಮಾಡುತ್ತಾ ಮಾತಿಗೆ ಮಾತು, ಕ್ರಿಯೆಗೆ ಪ್ರತಿಕ್ರಿಯೆ, ಪ್ರಶ್ನೆಗೆ ಪ್ರತ್ಯುತ್ತರ ನೀಡುತ್ತಾ ಸಾಗುತ್ತಾರೆ. ತಮ್ಮ ವರ್ತನೆಗಳಿಗೆ ಸದಾ ಒಂದು ಬಗೆಯ ಸಮರ್ಥನೆಯನ್ನು ನೀಡುವ ಅವರು ಇತರರ ಸಹಜ ಮಾತುಗಳಿಗೆ ಕೂಡ ತಮ್ಮದೇ ಆದ ರೀತಿಯ ಕೊಂಕುಗಳನ್ನು, ಗೂಡಾರ್ಥಗಳನ್ನು ಹುಡುಕಿ ತಲೆ ಕೆಡಿಸಿಕೊಳ್ಳುತ್ತಾರೆ…. ಮತ್ತೆ ಕೆಲವೊಮ್ಮೆ ತಮ್ಮ ಕುಟುಂಬದ ಸದಸ್ಯರ ತಲೆ ಕೂಡ ಕೆಡಿಸುತ್ತಾರೆ. ಇನ್ನು ಮುಂದೆ ಹೋಗಿ ತಮ್ಮ ಅತಿ ಹತ್ತಿರದ ಸಂಬಂಧಿಗಳ ಜೊತೆ ಶೀತಲವಾದ ಸಂಬಂಧವನ್ನು ಹೊಂದುತ್ತಾರೆ. ಅಪಾಯ ಎಂದು ತೋರುವ ಯಾವುದೇ ವಿಷಯಗಳನ್ನು ಸವಾಲುಗಳನ್ನು ಅವರು ಸ್ವೀಕರಿಸುವುದಿಲ್ಲ ಬದಲಾಗಿ ಕುಂಟು ನೆಪಗಳನ್ನು ಒಡ್ದುತ್ತಾರೆ . ಪರಿವರ್ತನೆಗೆ ಅವರ ಮನಸ್ಸಿನಲ್ಲಿ ಜಾಗವೇ ಇರುವುದಿಲ್ಲ. ಫಲಿತಾಂಶ… ಆಲಸ್ಯ ಇವರ ಬದುಕನ್ನು ಆಳುತ್ತದೆ. ಸದಾ ಕೆಲಸಗಳನ್ನು ಮುಂದೂಡುವ ಅವರು ಕುಂಟು ನೆಪಗಳನ್ನು ಹೇಳುವುದರಲ್ಲಿ ನಿಸ್ಸೀಮರು. ಅತ್ಯಂತ ಸಣ್ಣತನದ ನಡವಳಿಕೆ  ಅವರದ್ದಾಗಿರುತ್ತದೆ.ಎರಡನೆಯದ್ದು ಪ್ರತಿಕ್ರಿಯಾತ್ಮಕ ಮೆದುಳು… ಸದಾ ವಿಚಲಿತವಾಗಿರುವ ಈ ಮೆದುಳು ಒಂದು ಯೋಚನೆಯಿಂದ ಮತ್ತೊಂದು ಯೋಚನೆಗೆ ಒಂದೇ ಸಮನೆ ಹಾರುತ್ತಾ ಸಾಗುತ್ತದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ತಡಬಡಾಯಿಸುತ್ತವೆ ಅತಂತ್ರ ಮನಸ್ಥಿತಿ ಅವರದ್ದಾಗಿರುತ್ತದೆ. ಬಲು ಬೇಗ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡು ವಿಷಯಾಂತರ ಮಾಡುವುದರಲ್ಲಿ ಅವರು ಜಾಣರು. ಮರ್ಕಟನಂತೆ ಅವರ ಮನಸ್ಸು ಮತ್ತು ಮನಸ್ಥಿತಿ. ಸದಾ ಆರಾಮದಾಯಕತೆ  ಹಾಗೂ ಸಂತೋಷವನ್ನು ಅವರು ಬಯಸುತ್ತಾರೆ… ಯಾವುದೇ ಬಗೆಯ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಾಗುವುದಿಲ್ಲ. ಎಲ್ಲ ಬಗೆಯ ಸುಖಗಳನ್ನು ಬಯಸುವ ಅವರು ಅದಕ್ಕಾಗಿ ಇನಿತು ಕೂಡ ಪ್ರಯತ್ನ ಮಾಡುವುದಿಲ್ಲ ಬದಲಾಗಿ ತಮ್ಮ ಅದೃಷ್ಟವನ್ನು ಹಳಿಯುತ್ತಾ ಎಲ್ಲವೂ ತಮಗೆ ಕುಳಿತಲ್ಲಿಯೇ ದೊರೆಯಬೇಕು ಎಂದು ಬಯಸುತ್ತಾರೆ. ಭೂತಕಾಲದಲ್ಲಿ ನಡೆದುಹೋದ ವಿಷಯಗಳ ಕುರಿತು ಯೋಚನೆಗಳನ್ನು ಮಾಡುತ್ತಾ,  ಭವಿಷ್ಯದ ಬದುಕಿನ ಬಗ್ಗೆ ಚಿಂತಿಸುವ ಅವರು ವರ್ತಮಾನದಲ್ಲಿ ಜೀವಿಸುವುದನ್ನು ಮರೆತುಬಿಡುತ್ತಾರೆ.ಅಂತಹವರು ತಮ್ಮ ಪ್ರಸ್ತುತ ಬದುಕಿನ ಎಲ್ಲ ಅವಶ್ಯಕತೆಗಳನ್ನು ತಮ್ಮ ಪಾಲಕರು,ಸಂಗಾತಿಯಾದವರು, ಮಕ್ಕಳು  ಒದಗಿಸಲೇಬೇಕು ಎಂಬ ಬಲವಾದ ಆಶಯವನ್ನು ಹೊಂದಿರುತ್ತಾರೆಯೇ ಹೊರತು ತಮ್ಮಿಂದ ಇತರರಿಗೆ ಒಂದಿನಿತು ಸಹಾಯ ಮಾಡುವ ಮನಸ್ಥಿತಿ, ದೇಹ ಸ್ಥಿತಿ ಹಾಗೂ ಪರಿಸ್ಥಿತಿಗಳನ್ನು ಅವರು ಹೊಂದಿರುವುದಿಲ್ಲ.ಫಲಿತಾಂಶ… ಸಮಯ ವ್ಯರ್ಥ ಮಾಡುವುದರಲ್ಲಿ /ಕಾಲ ಹರಣ ಮಾಡುವುದರಲ್ಲಿ ಸದಾ ಮುಂದು. ಕೆಲಸವನ್ನಾಗಲಿ, ದೈಹಿಕ ಅಥವಾ ಮಾನಸಿಕ ಆರೋಗ್ಯವನ್ನಾಗಲಿ ನಿರ್ವಹಿಸಲು ಅವರಿಂದ ಸಾಧ್ಯವಿಲ್ಲ. ಸದಾ ಎಲ್ಲ ವಿಷಯಗಳಲ್ಲಿ ನಿರ್ಲಕ್ಷ ವಹಿಸುವ ಅವರು ತಮ್ಮ ವೈಯಕ್ತಿಕ ಏಳ್ಗೆಯ ವಿಷಯಗಳಲ್ಲಿ ಹಿಂದೆ ಬೀಳುತ್ತಾರೆ. ಜಗತ್ತಿನ ಎಲ್ಲಾ ಸುಖಗಳು ತಮಗೆ ಲಭಿಸಬೇಕು ಎಂದು ಆಶಿಸುವ ಅವರು ಅದಕ್ಕಾಗಿ ಒಂದು ಇನಿತು ಪ್ರಯತ್ನ ಪಡುವುದಿಲ್ಲ ಬದಲಾಗಿ ತಮ್ಮೊಂದಿಗೆ ಇರುವವರನ್ನು ತಮಗಾಗಿ ಎಲ್ಲವನ್ನು ಮಾಡಲು ಒತ್ತಾಯಿಸುತ್ತಾರೆ. ಮೂರನೆಯದು ಕಾರ್ಯನಿರ್ವಹಣಾ ಮೆದುಳು… ಅತ್ಯಂತ ಲೆಕ್ಕಾಚಾರದ ಕಾರ್ಯತಂತ್ರವನ್ನು ಹೊಂದಿರುವ ಈ ಬಗೆಯ ಮೆದುಳು ಉತ್ತಮ ಕಾರ್ಯ ನಿರ್ವಹಣೆಗೆ ಯೋಜಿತವಾಗಿರುತ್ತದೆ. ಶಾಂತವಾದ ಮನಸ್ಸು ಕ್ರಿಯಾಶೀಲವಾದ ಮೆದುಳು ಹಾಗೂ ಸ್ಪಷ್ಟತೆಯನ್ನು ಹೊಂದಿರುವ ಮನಸ್ಥಿತಿ ಅವರದ್ದಾಗಿರುತ್ತದೆ.ವರ್ತಮಾನದ ಅರಿವು ಮತ್ತು ತಿಳುವಳಿಕೆಯನ್ನು ಹೊಂದಿರುವ ಈ ಬಗೆಯ ಮೆದಳು ಪರಿಸ್ಥಿತಿಯನ್ನು ಶೀಘ್ರ ನಿಭಾಯಿಸುವ ಎಲ್ಲ ಬಗೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಗಮನ ಹಾಗೂ ಲಕ್ಷ್ಯಗಳು ಉದ್ದೇಶದ ಸ್ಥಿರ ಹಾಗೂ ಒಮ್ಮುಖ  ಹಾದಿಯಲ್ಲಿ ಸಾಗುತ್ತವೆ.ದೂರ ದೃಷ್ಟಿತ್ವವನ್ನು ಹೊಂದಿರುವ ಈ ಬಗೆಯ ಮೆದುಳು ಸಮಸ್ಯೆಗಳನ್ನು ಶೀಘ್ರ ಬಗೆಹರಿಸುತ್ತದೆ. ಈ ಮೆದುಳು ಗೊಂದಲ ಹಾಗೂ ಕಿರಿಕಿರಿಗೆ ಒಳಗಾಗುವುದಿಲ್ಲ.ಹೊಸ ಅವಕಾಶಗಳನ್ನು ಸೃಷ್ಟಿಸುವ ಇತರರಿಗೆ ಸ್ಪೂರ್ತಿಯಾಗುವ ವ್ಯಕ್ತಿತ್ವವನ್ನು ಈ ಮೆದುಳು ಹೊಂದಿರುತ್ತದೆ. ಫಲಿತಾಂಶ… ಉತ್ತಮವಾದ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ, ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಯಶಸ್ಸಿನ ಹಾದಿಯನ್ನು ತಮಗೆ ತಾವೇ ನಿರ್ಮಿಸಿಕೊಳ್ಳುವ ಹಾಗೂ ಇತರರನ್ನು ಕೂಡ ಆ ಹಾದಿಯಲ್ಲಿ ಕರೆದೊಯ್ಯುವ ನಿಟ್ಟಿನಲ್ಲಿ ಇಂತಹ ಮೆದುಳನ್ನು ಹೊಂದಿರುವ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಾರೆ.ಸ್ನೇಹಿತರೆ, ನಮ್ಮ ಬಾಲ್ಯದ ಬದುಕು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಮೇಲಿನ ಒಂದೇ ಮೆದುಳು ಮೂರು ಬಗೆಯ ತಂತ್ರಗಳನ್ನು ಹೂಡುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಆದರೆ ಮೊದಲ ಎರಡು ಬಗೆಯ ಮೆದುಳಿನ ರಕ್ಷಣಾ ತಂತ್ರಗಳು ನಮ್ಮ ಮೆದುಳಿನದ್ದಾಗಿದ್ದರೆ ಅವುಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಸ್ಪಷ್ಟ ಹಾಗೂ ಸ್ಥಿರ ನಡತೆಯನ್ನು ಹೊಂದಿದ ವ್ಯಕ್ತಿ ನಾವಾಗಬಹುದು. ಅಯ್ಯೋ! ನಮ್ಮ ಮೆದುಳು ಈ ಬಗೆಯ ಕಾರ್ಯತಂತ್ರವನ್ನು ಹೊಂದಿದೆ ಎಂದು ವ್ಯಥೆ ಪಡಬೇಕಾಗಿಲ್ಲ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಬೇಡವೇ ಬೇಡ.  ಈಗಲೂ ಕಾಲಮಿಂಚಿಲ್ಲ. ನಮ್ಮ ಮೆದುಳಿನ ಕಾರ್ಯ ಶೈಲಿಯನ್ನು ಬದಲಿಸುವ ಶಕ್ತಿ ನಮ್ಮ ಕೈಯಲ್ಲಿದೆ.ನಿಮ್ಮ ರಕ್ಷಣಾತ್ಮಕ ಮೆದುಳನ್ನು ಶಾಂತಗೊಳಿಸಿ. ಅದೆಷ್ಟೇ ನಿಮ್ಮ ದೇಹ ಮತ್ತು ಮನಸ್ಸುಗಳು ಬೇಡ ಎಂದು ಮುಷ್ಕರ ಹೂಡಿದರೂ ಬಿಡದೆ ಅವುಗಳನ್ನು ಯೋಗ, ಧ್ಯಾನ, ವ್ಯಾಯಾಮ, ಓದು, ವ್ಯವಹಾರ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿ.ನಿಮ್ಮ ದೈನಂದಿನ ಬದುಕನ್ನು ನಿಯಮಿತತೆಗೆ ಒಳಪಡಿಸಿ. ಪ್ರತಿದಿನ ಸರಿಯಾದ ಸಮಯಕ್ಕೆ ಏಳುವುದರಿಂದ ಹಿಡಿದು ನಿಮ್ಮ ಕೆಲಸಗಳನ್ನು ಆಯಾ ಸಮಯದಲ್ಲಿ ಮುಗಿಸಲು ಪ್ರಯತ್ನ ಮಾಡಿ. ನಿಧಾನವಾಗಿ ಒಂದೊಂದೇ ಸವಾಲುಗಳನ್ನು ಎದುರಿಸುತ್ತಾ ಪ್ರಗತಿಯನ್ನು ಹೊಂದಿರಿ. ಒಂದೇ ಬಾರಿಗೆ ಎಲ್ಲವನ್ನು ಮಾಡಲು ಹೋಗುವುದು ಬೇಡ. ಒಂದು ನಿರ್ದಿಷ್ಟ ಸಮಯ ಮಿತಿಯಲ್ಲಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ.ನಿಮ್ಮ ಪ್ರತಿಕ್ರಿಯಾತ್ಮಕ ಮೆದುಳನ್ನು ತರಬೇತುಗೊಳಿಸಿ…. ಸೂರ್ಯನಿಗೆ ಉಗುಳುವ ಪ್ರಯತ್ನ ಬೇಡ. ಅದು ನಮ್ಮ ಮೇಲೆಯೇ ಮರಳಿ ಬೀಳುತ್ತದೆ. ಎಲ್ಲಾ ಸಮಯದಲ್ಲಿಯೂ ಅಸಹನೆ, ಕೋಪ, ಕಿರಿಕಿರಿ ಮಾಡಿಕೊಳ್ಳುವುದರಿಂದ ಕಾರ್ಯಸಿದ್ಧಿಯಾಗುವುದಿಲ್ಲ.ನಿಮ್ಮ ಬಲಹೀನತೆಗಳನ್ನು ನಿಮಗಿಂತ ಚೆನ್ನಾಗಿ ಅರಿತವರು ಯಾರೂ ಇಲ್ಲ. ಒಂದೊಂದಾಗಿ ಪಟ್ಟಿ ಮಾಡಿ ಅವುಗಳನ್ನು ಕ್ರಮೇಣವಾಗಿ ತೊರೆಯುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಿ. ಒಂದು ನಿಗದಿತ ಟೈಮ್ ಟೇಬಲ್ ಹಾಕಿಕೊಂಡು ಅದಕ್ಕೆ ಅನುಸಾರವಾಗಿ ನಡೆಯಲು ಪ್ರಯತ್ನಿಸಿ ಎಲ್ಲೋ ಒಂದೆರಡು ದಿನ ವ್ಯತ್ಯಾಸವಾದರೆ, ಇದೆಲ್ಲಾ ನಮ್ಮಂತವರ ಕೈಯಲ್ಲಿ ಆಗುವ ಹೋಗುವ ಕಾರ್ಯ ಅಲ್ಲ ಎಂದು ಅದನ್ನು ಸಂಪೂರ್ಣವಾಗಿ ಕೈ ಬಿಡುವ ಬದಲು ಮತ್ತೆ ಮೊದಲಿನಿಂದ ಪ್ರಾರಂಭಿಸಿ. ಪ್ರತಿ ಹೊಸ ದಿನವೂ ಹೊಸ ಸವಾಲುಗಳನ್ನು ಹೊತ್ತು ತರುತ್ತದೆ. ಅವುಗಳನ್ನು ಎದುರಿಸಲು ನಿಮ್ಮ ಮನಸ್ಸನ್ನು ದೇಹವನ್ನು ಸಜ್ಜುಗೊಳಿಸಿ.ನಿಮ್ಮ ದೇಹ ಮತ್ತು ಮನಸ್ಸಿಗೆ ನಿಮ್ಮ ಮಾತು ಕೇಳುವಂತೆ ಅವುಗಳಿಗೆ ಒಳ್ಳೆಯ ಹವ್ಯಾಸಗಳಾದ ಯೋಗ ಧ್ಯಾನ ನಡಿಗೆ ಉತ್ತಮ ಸ್ನೇಹಿತರೊಂದಿಗಿನ ಒಡನಾಟಗಳನ್ನು ನಿಮ್ಮದಾಗಿಸಿಕೊಳ್ಳಿ. ಮನರಂಜನೆ ಕೂಡ ಊಟದಲ್ಲಿ ಉಪ್ಪಿನಕಾಯಿಯಂತೆ ನಿಮ್ಮ ಬದುಕಿನ ಭಾಗವಾಗಲಿ… ನಿಮ್ಮ ಒತ್ತಡಗಳನ್ನು ಪರಿಹರಿಸಲು ಅದು ಕೂಡ ಒಂದು ಉತ್ತಮ ಕಾರ್ಯತಂತ್ರವಾಗಿರುತ್ತದೆ. ಒಳ್ಳೆಯ ಪುಸ್ತಕಗಳ ಓದು ನಿಮ್ಮ ಮನಸ್ಥಿತಿಯನ್ನು ಬದಲಿಸಬಹುದು ಅದರ ಜೊತೆಗೆ ಪುಸ್ತಕದ ಮೂಲಕ ನಿಮ್ಮ ಮಸ್ತಕಕ್ಕೆ ಇಳಿದ ವಿಷಯ ನಿಮಗೆ ಹಸ್ತಗತವಾಗಲೇಬೇಕು ಅಂದಾಗ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ನೆನಪಿಡಿ.ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎರಡು ಆಯ್ಕೆಗಳನ್ನು ಇಟ್ಟುಕೊಂಡು ಅದರ ಸಾಧಕ ಬಾಧಕಗಳನ್ನು ಯೋಚಿಸಿ ಅಂತಿಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ ನಂತರ ಅದು ನಿಮ್ಮ ಆತ್ಮವಿಶ್ವಾಸವನ್ನು ಖಂಡಿತವಾಗಿಯೂ ಹೆಚ್ಚಿಸಲು ಸಹಾಯಕವಾಗುತ್ತದೆ. ಅಕಸ್ಮಾತ್ ನಿಮ್ಮ ತಪ್ಪಾಗಿದ್ದರೆ ಒಳ್ಳೆಯ ಪಾಠ ಕಲಿಯುತ್ತಿರಿ ಹಾಗೂ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ಮತ್ತಷ್ಟು ಶ್ರದ್ಧೆಯಿಂದ ಮುನ್ನಡೆಯುವಿರಿ. ನಿಮ್ಮ ನಿರ್ಧಾರ ಸರಿಯಾಗಿದ್ದರೆ ಬದುಕಿನ ಹಾದಿಯಲ್ಲಿ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯುತ್ತೀರಿ ಸ್ನೇಹಿತರೆ, ನೀವು ಪಾಲಕರಾಗಿದ್ದರೆ ನಿಮ್ಮ ಮಕ್ಕಳ ಮೆದುಳನ್ನು ತರಬೇತುಗೊಳಿಸಲು ಅವಶ್ಯಕ ವಿಷಯಗಳನ್ನು ಯೋಚಿಸಿ. ನೀವೇ ಆ ತೊಂದರೆಗಳಿಂದ ಬಳಲುತ್ತಿದ್ದರೆ ಮೊದಲು ನಿಮ್ಮನ್ನು ನೀವು ಸರಿಪಡಿಸಿಕೊಳ್ಳಿ. ಇನ್ನು ವಿದ್ಯಾರ್ಥಿಗಳಾಗಿದ್ದರೆ ಈಗಿನಿಂದಲೇ ನಿಮ್ಮ ಮನಸ್ಥಿತಿಯನ್ನು ಉತ್ತಮ, ಕ್ರಿಯಶೀಲ ಹಾಗೂ ಸದಭಿರುಚಿಯ ವ್ಯಕ್ತಿಯಾಗುವ ನಿಟ್ಟಿನಲ್ಲಿ ತರಬೇತುಗೊಳಿಸಿ.ಅತ್ಯಂತ ದೊಡ್ಡ ಪರ್ವತವನ್ನು ಏರಲು ಕೂಡ ಒಂದು ಹೆಜ್ಜೆಯ ಪ್ರಯತ್ನ ಬೇಕೇ ಬೇಕು… ಅಂತಹ ಪ್ರಯತ್ನ ನಿಮ್ಮದಾಗಲಿ ಎಂಬ ಆಶಯ ಹಾಗೂ ಗೆದ್ದೇ ಗೆಲ್ಲುವೆ ಎಂಬ ಭರವಸೆ ಹೊಂದಿ ಮುಂದೆ ಸಾಗಿರಿ… ಯಶಸ್ಸು ಖಂಡಿತ ದೊರೆಯುತ್ತದೆ.  ವೀಣಾ ಹೇಮಂತಗೌಡ ಪಾಟೀಲ

“ಮೆದುಳೊಂದು..ಕಾರ್ಯತಂತ್ರಗಳು ಮೂರು”‌ ವೀಣಾ ಹೇಮಂತ್ ಗೌಡ ಪಾಟೀಲ Read Post »

ಕಾವ್ಯಯಾನ

ಡಾ. ಲತಾ ಎ. ಆರ್ ಬಾಳೆಹೊನ್ನೂರು”ದೀಪಾವಳಿ”

ಕಾವ್ಯ ಸಂಗಾತಿ ಡಾ. ಲತಾ ಎ. ಆರ್ ಬಾಳೆಹೊನ್ನೂರು “ದೀಪಾವಳಿ” ದೀಪಾವಳಿಯ ಸಂತಸದ ಬೆಳಕಿನ ಹಬ್ಬದಲ್ಲಿಸಿಹಿ ಹೋಳಿಗೆಯ ಸವಿ ಊಟದಲ್ಲಿಸಿಡಿದ ಸಿಡಿ ಪಟಾಕಿಯ ಶಬ್ದದಲ್ಲಿಕಣ್ಣಲ್ಲಿ ತುಂಬಿಸಿದೆ ಪ್ರೀತಿ ಅರಮನೆಯಲ್ಲಿ ದೀಪಗಳ ಸಾಲು ಸಾಲು ಹಣತೆ ಗಳಲ್ಲಿಸುಂದರ ಪ್ರತಿಬಿಂಬ ನನ್ನ ಮನಸಿನಲ್ಲಿಹೊಳಪಿನ ಛಾಯೆ ಮರೆಯಲಾರೆ ಬದುಕಿನಲಿಅಚ್ಚರಿಯ ಮೂಡಿಸಿದೆ ಬಾಳ ಬೆಳದಿಂಗಳಲಿ ಹೊಸತನದ ಹೊಸ ಆಸೆ ಭರವಸೆಯಲಿಮನದಿ ಮೂಡಿಸಿದೆ ಮಲ್ಲಿಗೆಯ ಘಮದಲಿಬಿಂಬಿಸಿದೆ ಹೊಸರಾಗ ಹೃದಯದಲಿಜೊತೆ ನಿಂತೆ ಆರದ ದೀಪದಲಿ ನವಜೀವನದ ತಿಳಿ ತಂಗಾಳಿ ಬೀಸಿದಂತೆಚೈತನ್ಯದ ಚಿಲುಮೆ ಬಾಳಲಿ ಚಿಮ್ಮಿದಂತೆಜೊತೆಯಾಗಿರು ಮರೆಯದ ಮಾಣಿಕ್ಯದಂತೆಬರಿದಾದ ಬದುಕಲಿ ಜ್ಯೋತಿಯ ಬೆಳಕಂತೆ. ———- ಡಾ. ಲತಾ ಎ. ಆರ್ ಬಾಳೆಹೊನ್ನೂರು

ಡಾ. ಲತಾ ಎ. ಆರ್ ಬಾಳೆಹೊನ್ನೂರು”ದೀಪಾವಳಿ” Read Post »

ಕಾವ್ಯಯಾನ

ಡಾ. ಸುಮಂಗಲ ಅತ್ತಿಗೇರಿ ಕವಿತೆ “ಹೊನ್ನಬಿತ್ತಬೇಕಿದೆ ಹೊಲಕ್ಕೆಲ್ಲ!”

ಕಾವ್ಯ ಸಂಗಾತಿ ಡಾ. ಸುಮಂಗಲ ಅತ್ತಿಗೇರಿ “ಹೊನ್ನಬಿತ್ತಬೇಕಿದೆ ಹೊಲಕ್ಕೆಲ್ಲ ಎಲ್ಲ ಇಲ್ಲಗಳ ನಡುವೆ ಕಟ್ಟಬೇಕಿದೆ ಮತ್ತೆಒಡೆದ ಮನಸ್ಸುಗಳ ಹಿರಿಯರು ಕಂಡ ಕನಸುಗಳ ಉಳಿಸಬೇಕಿದೆ ಬೆಳೆಸಬೇಕಿದೆಜನಪದ ಸಿರಿ ಸಂಪದವಪಸರಿಸಬೇಕಿದೆನೆಲದ ನೆನಪುಗಳ ನೊಂದ ಮನದ ನೋವುಗಳಿಗೆಸಂತಸದ ಮುಲಾಮಿನ ಲೇಪವಾಗಿನಿಂತ ನೀರಿನ ಕೊಳೆಗೆಹರಿಯುವ ದಾರಿಯಾಗಿಎಲ್ಲರನ್ನು ಸಮತೆಯಿಂದ ಜೊತೆ ಕರೆದು ಸಾಗಬೇಕಿದೆ ನಮ್ಮ ನೆಲದ ಸಾಂಸ್ಕೃತಿಕ ಸಿರಿಯ ತೇರನೆಳೆಯಬೇಕಿದೆ! ಪಾಳು ಬಿದ್ದ ಹೊಲದಲ್ಲಿಕಳೆಯನೆಲ್ಲ ಕಿತ್ತುಒಲವಿನ ಮಳೆಗರೆದುಹೊನ್ನ ಬಿತ್ತಬೇಕಿದೆ!ಮತ್ತೆ ಹೊನ್ನ ಬೆಳೆಯಬೇಕಿದೆ! ಅದಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ ದುಡಿಯಬೇಕಿದೆ ದಣಿಯಬೇಕಿದೆ ಹೊಲಕ್ಕೆಲ್ಲ ಹೊನ್ನ ಬಿತ್ತಲು ಡಾ. ಸುಮಂಗಲ ಅತ್ತಿಗೇರಿ

ಡಾ. ಸುಮಂಗಲ ಅತ್ತಿಗೇರಿ ಕವಿತೆ “ಹೊನ್ನಬಿತ್ತಬೇಕಿದೆ ಹೊಲಕ್ಕೆಲ್ಲ!” Read Post »

ಕಾವ್ಯಯಾನ

ಶಂಕರರಾವ ಉಭಾಳೆ ಅವರ ಕವಿತೆ “ಮರದೊಳಗಣ ಅಗ್ನಿ”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ “ಮರದೊಳಗಣ ಅಗ್ನಿ” ಬೋಧಿಸತ್ವ ಹೇಳಿತು,“ಬುದ್ಧ ನನ್ನ ಕೆಳಗೆ ಧ್ಯಾನಕ್ಕೆ ಕುಳಿತಾಗಆತನೊಂದಿಗೆ ನನಗೂಮನಃಶಾಂತಿ ದೊರಕಿತ್ತು.ಅರಮನೆಯ ಬೇಲಿಯೊಳಗೆಸೆರೆಮನೆಯ ಗಾಳಿಯಿತ್ತು.ಹಂಗಿನ ಒಡ್ಡಿನಲ್ಲಿ ಬೆಳೆದ ಮರಸಾಲದ ಬಡ್ಡಿಯಂತೆ ಫಲ ನೀಡಲೇಬೇಕು.ಮರ ಅಮರವಾಗೋದುಸಮರ ನಿಂತಾಗಲೇ…..” ಮರಾ….. ಎಂದು ಜಪಿಸಿದವರಾಮನ ರಾರಾಜಿಸಿದ.ಆದಿ ಪೂಜಿತನಾದಕೆಲವೊಮ್ಮೆ ಗಿಡದ ಎಲೆಯಿಂದಗಿರಿಧರನನ್ನೇ ತೂಗಿದ ದೃಷ್ಟಾಂತವಿದೆತಿಮ್ಮಕ್ಕ ನೆಟ್ಟು ಬೆಳೆಸಿದದಾರಿಯ ಇಕ್ಕೆಲಗಳ ಮರಇಂದು ಕಲ್ಪವೃಕ್ಷವಾಗಿದೆ ತಾಯ ಒಡಲು ಶಸ್ತ್ರಗಳನ್ನ ಒಡಲಲ್ಲಿಟ್ಟುಕೊಂಡಬನ್ನಿ ಮರಕ್ಕಿಂತದಾರಿಯಲ್ಲಿ ನೆರಳು ನೀಡುವಸಾಲು ಮರದ ತಿಮ್ಮಕ್ಕ ಬೆಳೆಸಿದಮರ ಶ್ರೇಷ್ಠವೆನಿಸಿತು ಮದ್ದು ಗುಂಡುಗಳ ಬೆಂಕಿಯಲಿ ಉಕ್ರೇನ್ಬೂದಿಯಾಗುವಾಗಹಸಿರ ಹುಲ್ಲಿನ ಓಕ್ ಮರದ ಇಬ್ಬನಿಕಂಬನಿಯಲಿ ಆವಿಯಾಯಿತು ಪೂರ್ವದಿಂದಲೂ ಮರಕ್ಕೂ ಮಹರ್ಷಿಗಳಿಗೂ ಅದೇನೋ ಸಾಂಗತ್ಯಕಾಲಾನುಕ್ರಮದಲ್ಲಿ ಮರವು ಪಿಶಾಚಿಗಳಮನೆಯಾಗಿತ್ತುಮನುಷ್ಯರಿಲ್ಲದ ಲೋಕದಲ್ಲಿ ಮರಅರಸನಂತಿತ್ತುದಾನವರ ವಿಷಪ್ರಾಶನದಿಂದ ಮಸಣವಾದನೆಲದಲ್ಲಿ ಬೀಜ ನೆಟ್ಟರೆಬರೀ ಕೆಂಪು ದಾಸವಾಳವೇ ಹುಟ್ಟಿತು ಭವಿಷ್ಯ ನುಡಿದ ತಾಳೇಗರಿಗಳು ಬೆಚ್ಚಿಬಿದ್ದಿವೆಕೆಟ್ಟ ಗಾಳಿಯಿಂದ ಜನ ಪಟಪಟನೆ ಸಾಯುವಾಗಮರದ ತಾಕತ್ತು ಗೊತ್ತಾಗಿತ್ತು ಪಾರಿಜಾತ ಬೇಕೆಂದರೆ ಸ್ವರ್ಗಕ್ಕೆ ಹೋಗಬೇಕೆಂದಿಲ್ಲಮನದ ಪೊರೆ ಕಳಚಿದರೆ ಸಾಕು..! ಅಳಿವ ಮನೆಗಿಂತಬೆಳೆವ ಮರಭವಿಷ್ಯದ ರಾಯಭಾರಿಯಂತೆಅಂತರಂಗದಿ ಅಗ್ನಿಯಿದ್ದರೂ ಜಗಕೆಗಾಳಿಯನ್ನೇ ಕೊಡುವೆನೀರಿಗೂ ಕರ ವಿಧಿಸಿದಂತೆನನ್ನ ಸಂತತಿ ನಾಶವಾದರೆಗಾಳಿಗೂ ಕರ ಕೊಟ್ಟು ಕರಗದಂತೆಮೆರವಣಿಗೆ ಮಾಡಬೇಕಾದೀತು  ಶಂಕರರಾವ ಉಭಾಳೆ

ಶಂಕರರಾವ ಉಭಾಳೆ ಅವರ ಕವಿತೆ “ಮರದೊಳಗಣ ಅಗ್ನಿ” Read Post »

ಕಾವ್ಯಯಾನ

ಶ್ರೀದೇವಿ.‌ಮ. ಗುಮ್ಮಗೋಳ ಅವರ ಕವಿತೆ”ಚಳಿಯ ಬೆಳಗು”

ಕಾವ್ಯ ಸಂಗಾತಿ ಶ್ರೀದೇವಿ.‌ಮ. ಗುಮ್ಮಗೋಳ “ಚಳಿಯ ಬೆಳಗು” ಚಳಿಗಾಲದ ಮುಂಜಾನೆಗೆತಣ್ಣನೇಯ ಗಾಳಿಗೆ ನಂಜಾಗಿತನವು ಮುದಡಿ ಮಗ್ಗಲಾಯಿತು|| ಮುತ್ತಿನಂತೆ ಬಿದ್ದ ಇಬ್ಬನಿ ಮಾಲೆಗಿಡಗಂಟಿ ರಂಬೆಕೊಂಬೆಗಳಿಗೆ ಹೂಮಾಲೆಹುಳುವಾಗಿ ಆಡುವಾಸೆಯಾಯಿತು|| ರಂಗೋಲಿ ಇಟ್ಟಾಯಿತು ಅಂಗಳಕೆಚಿತ್ತಾರವನೇ ದಿಟ್ಟಿಸುತ ಕುಳಿತ ಅಂಗನೆಗೆದೂರದಲ್ಲಿಂದ ನವಿಲ ದ್ವನಿಯೊಂದು ಕೇಳಿತು|| ಬಾನದ ಬಾಸ್ಕರ ಕಣ್ಣು ಬೆದರಿಸಿದಕಾನನದ ಎಲೆಗಳ ಉದರಿಸಿದಈ ಜಗದಲಿ ಸಮನಾರು ನನಗೆಂದ|| ಹಸಿರು ಹೊದ್ದು ಮಲಗಿದ ಅವನಿಗೆಆಗಸದಲಿ ಬೊಗಸೆ ಪ್ರೀತಿ ತಂದ ಬಾನವನುಬಿಸಿ ಮುತ್ತೊಂದನಿತ್ತು ಬೆಳಗಾಯಿತೇಳೆಂದ|| ಶ್ರೀದೇವಿ.‌ಮ. ಗುಮ್ಮಗೋಳ

ಶ್ರೀದೇವಿ.‌ಮ. ಗುಮ್ಮಗೋಳ ಅವರ ಕವಿತೆ”ಚಳಿಯ ಬೆಳಗು” Read Post »

ಅನುವಾದ, ಕಾವ್ಯಯಾನ

ಬ್ರೆಜಿಲ್‌ನ ಪ್ರಖ್ಯಾತ ಕವಿ ಮರಿ ಯೋ ಡೀ ಅಂಡ್ರೇಡ್ ಅವರ ಕವಿತೆ “ಆತ್ಮ ತುರಾಯಿಗೊಂದು ಗರಿ”ಯ ಕನ್ನಡಾನುವಾದಡಾ. ಎಂ ಪ್ರಹ್ಲಾದ.

ಅನುವಾದ ಸಂಗಾತಿ “ಆತ್ಮ ತುರಾಯಿಗೊಂದು ಗರಿ” ಬ್ರೆಜಿಲ್‌ನ ಪ್ರಖ್ಯಾತ ಕವಿಮರಿ ಯೋ ಡೀ ಅಂಡ್ರೇಡ್ಕನ್ನಡಾನುವಾದ ಡಾ. ಎಂ ಪ್ರಹ್ಲಾದ. ಹಾಗೇ ವರ್ಷಗಳನು ಎಣಿಸುವಾಗ ಅನಿಸಿತ್ತುಕಳೆದ ವರ್ಷಗಳಿಗಿಂತ ಉಳಿದ ವರ್ಷಗಳು ಬಹು ಕಡಿಮೆಯೆಂದು!ಕಲ್ಲು ಸಕ್ಕರೆ ಸಿಕ್ಕ ಮಗುವಿನಂತಾಗಿತ್ತು ಮನಸುಮೊದಮೊದಲು ಚೀಪಿ ಚೀಪಿ ನೆಕ್ಕಿ ನೆಕ್ಕಿ ತಿಂದಿದ್ದೇ ತಿಂದಿದ್ದುನಿಜವಾದ ರುಚಿ ತಿಳಿಯುವ ವೇಳೆಗೆ ಉಳಿದದ್ದೇ ಕೆಲವೆರಡುರುಚಿಯ ತೀವ್ರತೆ ಹೆಚ್ಚಿತ್ತು,ಆದರೆ ಬದುಕು ಬರಡು ಬರಡು ಎನಿಸಿತ್ತು. ಎಂದೂ ಮುಗಿಯದ ಸಭೆಗಳಿಗೆ ನನ್ನಲ್ಲಿ ಸಮಯವೇ ಇಲ್ಲಾ!ಸಾಂವಿಧಾನಿಕ ಸಮಸ್ಯೆಗಳುಕಾನೂನು ಕಟ್ಟಳೆಗಳುನಿಯಮ ನಿರ್ಭಂದಗಳುಚರ್ಚೆಯೆಲ್ಲಾ ಬರೀ ಗೋಳು ಬೋಳುಅಲ್ಲಿ ಏನೂ ಸಾಧನೆಯಾಗುವುದಿಲ್ಲವೆಂದೂಎಂದೂ ಬಗೆಯರೆಯದ ಕಗ್ಗಂಟೆಂದೂ ಅರಿವಾಗಿದೆ. ಅಸಂಗತ ವ್ಯಕ್ತಿಗಳ ಬಗ್ಗೆ ಚಿಂತಿಸಲುವಯಸ್ಸಿನ ಬದಲಾವಣೆ ಹೊರತು ಮತ್ತಾವ ಬೆಳವಣಿಗೆಯೂ ಇಲ್ಲದ ಜನರ ಬಗ್ಗೆ ಯೋಚಿಸಲುತಾಳ್ಮೆಯೇ ಉಳಿದಿಲ್ಲಾ!ನನಗಿರುವ ಸಮಯ ಅತ್ಯಲ್ಪ, ಬೇಕಾಗಿರುವುದು ಜೀವನ ಸಾರನನ್ನ ಚೇತನವು ಹರಿಹಾಯುತಿದೆನನ್ನ ಬಳಿ ಉಳಿದಿರುವುದು ಕೆಲವಷ್ಟೇ ಕಲ್ಲು ಸಕ್ಕರೆ ಚೂರುಗಳು ಮಾತ್ರ! ಯಾರು ತಮ್ಮ ತಪ್ಪುಗಳ ನೋಡಿ ಹುಸಿನಗೆ ಬೀರಬಲ್ಲರುಯಾರು ತಮ್ಮ ಜಯದ ಬಗ್ಗೆ ಹಿಗ್ಗಲೊಲ್ಲರುಯಾರು ತಮ್ಮ ಎಲ್ಲಾ ಸಾಧಕ ಭಾದಕಗಳ ಜವಾಬ್ದಾರಿ ಹೊರಬಲ್ಲರುಅಂತಹ ಸಹಜ ನೈಜ ಜನರ ನಡುವೆ ಬದುಕ ಬದುಕುವಾಸೆ.ಇದರಿಂದ ಮನುಷ್ಯನ ಘನತೆ ಕಾಪಾಡಿಸತ್ಯ ಮತ್ತು ಪ್ರಾಮಾಣಿಕ ಬದುಕ ಬದುಕಬಲ್ಲೆವುಅವಶ್ಯಕತೆಗಳು ಬದುಕನ್ನ ಪ್ರಯೋಜನಕಾರಿಯಾಗಿಸಬಲ್ಲವು. ಹೃದಯಗಳ ಮುಟ್ಟಬಲ್ಲಕಠಿಣ ಕಷ್ಟಗಳಿಂದ ಕಲಿಯುವ ಕಲೆಯಬಲ್ಲಸ್ವಾದ ನೀಡುವ ಸ್ಪರ್ಶ ಚೇತನಗಳ ನಡುವೆ ಬದುಕುವಾಸೆ.ಹೌದು! ಪರಿಪಕ್ವತೆ ಮಾತ್ರ ನೀಡಬಲ್ಲ ಗಾಢಬದುಕ ಬದುಕುವ ತುಡಿತ ನನಗೆ. ಅಳಿದುಳಿದ ಸಿಹಿತಿನಿಸುಗಳ ವ್ಯರ್ಥ ಮಾಡುವ ಯೋಚನೆ ಯಂತೂ ಇಲ್ಲಾಈ ಮುಂಚೆ ಸವಿದು ಉಳದವುಗಳಿಗಿಂತಲೂ ಸೊಗಸೆಂದು ಬಲ್ಲೆ. ನನ್ನ ಆತ್ಮ ಸಾಕ್ಷಿ ಯಾಗಿಶಾಂತ, ಸಂತೃಪ್ತ ಆತ್ಮೀಯ ಜನರ ನಡುವೆತೃಪ್ತ ಜೀವನ ನಡೆಸುವುದು ನನ್ನ ಗುರಿ. ನಮಗೆ ಎರಡು ಜೀವನಗಳಿಹವೆಂಬ ಭ್ರಮೆಮೊದಲನೆಯದು ಕೊನೆಯಾಗಿ ಎರಡನೆಯದು ಶುರುವಾಗುವಾಗಲೇ ಅರಿವಿಗೆ ಬಂದಿದ್ದುಇರುವುದೊಂದೇ ಜೀವನ ವೆಂದು!. —————ಅನುವಾದ: ಡಾll ಎಂ ಪ್ರಹ್ಲಾದ.ಮೂಲ: ಮರಿ ಯೋ ಡೀ ಅಂಡ್ರೇಡ್ಬ್ರೆಜಿಲ್ ನ ಪ್ರಖ್ಯಾತ ಕವಿ

ಬ್ರೆಜಿಲ್‌ನ ಪ್ರಖ್ಯಾತ ಕವಿ ಮರಿ ಯೋ ಡೀ ಅಂಡ್ರೇಡ್ ಅವರ ಕವಿತೆ “ಆತ್ಮ ತುರಾಯಿಗೊಂದು ಗರಿ”ಯ ಕನ್ನಡಾನುವಾದಡಾ. ಎಂ ಪ್ರಹ್ಲಾದ. Read Post »

You cannot copy content of this page

Scroll to Top