ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

*ಕೃತಿ ಶೀಷಿ೯ಕೆ…..ಭಾವಬಂಧುರ* (ಗಜಲ್ ಸಂಕಲನ)
*ಲೇಖಕರು………ಉಮೇಶಬಾಬು ಎಂ ಸಾಸಾಬಾಳ*  
ಮೊ.ನಂ.೭೦೧೯೨೯೩೩೨೫
*ಪ್ರಥಮ ಮುದ್ರಣ…..೨೦೨೬*  
ಬೆಲೆ…೨೦೦₹
*ಪ್ರಕಾಶಕರು….ಸುವನಾ ಪ್ರಕಾಶನ ಕಲಬುರಗಿ*

*ಭಾವ ಬಂಧುರದ ಗಜಲ್ ಗಳಲ್ಲಿ ಬಂಧಿ ಯಾಗುವುದೇ ಒಂದು ಸುಖದ ಅಮಲು*

ನಿಸರ್ಗದಲ್ಲಿ ಹುಟ್ಟಿ ಬೆಳೆಯುವ ಪ್ರತಿಯೊಂದು ಜೀವಿಗಳು ತಮ್ಮ ಹೃದಯದ ಭಾವನೆಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸಿ ಆನಂದಿಸುತ್ತವೆ. ಪಶು ಪಕ್ಷಿಗಳು ತಮ್ಮ ಮನದ ಭಾವನೆಯನ್ನು ಸುಖ ದುಃಖವನ್ನು ದ್ವನಿ ಮೂಲಕ ವ್ಯಕ್ತಪಡಿಸುತ್ತವೆ. ಮನುಷ್ಯನು ಅವುಗಳಿಗಿಂತ ಭಿನ್ನವಾದ ರೂಪದಲ್ಲಿ ತನ್ನ ಹೃದಯದ ಭಾವನೆಗಳಾದ ನೋವು ನಲಿವು ಆಶ್ಚರ್ಯಗಳನ್ನು  ನಗು ಅಳುವಿನಲ್ಲಿ ವ್ಯಕ್ತಪಡಿಸುತ್ತಾನೆ. ಕೆಲವು ಸಾರಿ ಮನುಷ್ಯನು ತನ್ನ ವಿದ್ವತ್ತಿನಿಂದ ಕಾವ್ಯ, ಕಥೆ, ಹಾಡು, ರೂಪಕದಲ್ಲಿ ವ್ಯಕ್ತಪಡಿಸಿ ಮನಸ್ಸು ಹಗುರ ಮಾಡಿಕೊಳ್ಳುತ್ತಾನೆ. ಇಂತಹ  ಹೃದಯದ ಭಾವನೆಗಳನ್ನು ಸಶಕ್ತವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಕಾವ್ಯವೆಂದರೆ ಗಜಲ್ ಕಾವ್ಯ ವೆಂದು ಹೇಳಬಹುದು. ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮವಾದ ಅಭಿವ್ಯಕ್ತಿ ಇದಾಗಿದೆ. ಗಜಲ್ ಕಾವ್ಯ  ಒಂದು  ಹೃದಯದ ಭಾವನೆಗಳನ್ನು ಇನ್ನೊಂದು ಹೃದಯಕ್ಕೆ ಪಿಸುಮಾತಿನಲ್ಲಿ ಮುಟ್ಟಿಸುವ ಮಧುರವಾದ ಮೃದುವಾದ ಶಬ್ದಗಳ ರೂಪಕಗಳ ಕಾವ್ಯವಾಗಿದ್ದು ಎಲ್ಲರ ಮನ ಗೆಲ್ಲುತ್ತದೆ .

 ಗಜಲ್ ಸಾಹಿತ್ಯ ಭಾರತಕ್ಕೆ ಫಾರ್ಸಿ ಉರ್ದುವಿನಿಂದ ವಲಸೆ ಬಂದ ಕಾವ್ಯ. ಗಜಲ್ ಎಂಬ ಮೋಹಕ ಕಾವ್ಯ ಕನ್ನಡ ಕವಿಗಳ ಹೃದಯದಲ್ಲಿ ಇಂದು ನೆಲೆಸಿದೆ. ಉರ್ದು ಕಾವ್ಯದ ರಾಣಿಯಾದ ಗಜಲ್ ಇಂದು ಭಾರತದ ಎಲ್ಲಾ ಭಾಷೆಗಳನ್ನು ಅಪ್ಪಿಕೊಂಡಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆ. ಗಜಲ್ ಕಾವ್ಯ ಕೋಮಲ, ಮಧುರ, ಲಯ, ಲಾಲಿತ್ಯ, ಗೇಯತೆ ಮತ್ತು ಮಾಧುರ್ಯದಿಂದ ಮೈಗೂಡಿಸಿಕೊಂಡು ಎಲ್ಲರ ಹೃದಯದಲ್ಲಿ ನೆಲೆಸಿದೆ. ಈ ಕಾವ್ಯ ಸುಂದರಿ ಒಯ್ಯಾರಿ, ಮಯೂರಿ, ಬಿನ್ನಾಣೆಗಿತ್ತಿ ಎಲ್ಲರಿಗೆ ಒಲಿಯುತ್ತಾಳೆಂಬ ಭರವಸೆ ಇಲ್ಲ. ಯಾರು ಆಕೆಯನ್ನು ಹಗಲು ರಾತ್ರಿ ಧ್ಯಾನಿಸುತ್ತಾರೋ ಅವರಿಗೆ ಮಾತ್ರ ಒಲಿದು ಲೌಕಿಕ ಮತ್ತು ಅಲೌಕಿಕ ಪ್ರೀತಿಯ ಕಡಲಲ್ಲಿ ತೇಲಿಸುತ್ತಾಳೆ ಮತ್ತು ವಿರಹ, ಕಾಯುವಿಕೆಯ ಕಿಚ್ಚಿನಲ್ಲಿ ಬೇಯಿಸುತ್ತಾಳೆ.

ಇಂಥ ಮೋಹಕವಾದ ಕಾವ್ಯಕ್ಕೆ ಉಮೇಶಬಾಬು ಎಂ. ಸಾಸಾಬಾಳ  ಅವರು ಮೋಹಿತರಾಗಿದ್ದಾರೆ ಮತ್ತು ಅವಳು ಇವರಿಗೆ ಒಲಿದಿದ್ದಾಳೆ.‌‌ ಇವರು ಪ್ರಸಿದ್ಧ ಚಿತ್ರಕಲಾವಿದರು ಹಾಗೂ ಚಿತ್ರಕಲಾ ಶಿಕ್ಷಕರಾಗಿದ್ದವರು. ರಾಷ್ಟ್ರೀಯ, ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮತ್ತು ಬಹುಮಾನಗಳನ್ನು ಪಡೆದಿದ್ದಾರೆ. ಕಲೆಯ ಜೊತೆಗೆ ಸಾಹಿತ್ಯವನ್ನು ಅಪ್ಪಿಕೊಂಡು ಈಗಾಗಲೇ *ನಮ್ಮೂರ ತೇರು*  *ಮೌನಡಂಗುರ* ಕವನ ಸಂಕಲನ ಹಾಗೂ *ಭಾವಭೃಂಗ*  ಗಜಲ್ ಸಂಕಲನ, ಹೀಗೆ ನಾಲ್ಕು ಸಂಕಲಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಕಲಾವಿದರಾಗಿ ತಮ್ಮ ಭಾವನೆಗಳನ್ನು ರೇಖೆ ಮತ್ತು ಬಣ್ಣಗಳ ಮೂಲಕ ಚಿತ್ರಗಳನ್ನು ಚಿತ್ರಿಸಿ ಎಲ್ಲರ ಮನ ಗೆದ್ದ ಇವರು ತಮ್ಮ ಗಜಲ್ ಸಾಹಿತ್ಯದಲ್ಲಿಯೂ ತಮ್ಮ ಭಾವನೆಗಳನ್ನು ಮೃದು, ಮಧುರ ಶಬ್ದಗಳಿಂದ, ರೂಪಕಗಳಿಂದ ಗಜಲ್  ರಚಿಸಿ ಓದುಗರ ಮನ ಗೆದ್ದಿದ್ದಾರೆ .

ಉಮೇಶಬಾಬು ಅವರ ಮೊದಲನೇ ಗಜಲ್ ಸಂಕಲನ  *ಭಾವ ಬಂಧುರ*  ಶೀರ್ಷಿಕೆ ಓದುಗರನ್ನು ಭಾವನೆಯಲ್ಲಿ ಬಂಧಿಸುತ್ತದೆ. ಈ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರು ಮತ್ತು ವಿಮರ್ಶಕರು ಆದ ವೈ. ಎಂ. ಯಾಕೊಳ್ಳಿ ಸರ್ ಅವರು ಮೌಲಿಕವಾದ ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ. ಇನ್ನೊಬ್ಬ ಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಶೇರಿ ಸೇಡಂ ಅವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಮುಖಪುಟ ವಿನ್ಯಾಸ ವನ್ನು ಎ. ಕಮಲಾಕರ್ ಸುರಪುರ  ಅವರು ಅಂದವಾಗಿ ಅರ್ಥಪೂರ್ಣವಾಗಿ ಸಿದ್ಧಪಡಿಸಿದ್ದಾರೆ. ಇದರಿಂದ ಸಂಕಲನದ ಸೌಂದರ್ಯ ಹೆಚ್ಚಾಗಿದೆ.

ಉಮೇಶಬಾಬು ಸಾಸಾಬಾಳ ಅವರ  ಗಜಲ್ ಕೃತಿ *ಭಾವ ಬಂಧುರ*  ಸಂಕಲನದಲ್ಲಿ 70 ಗಜಲ್ ಗಳಿದ್ದು ಎಲ್ಲಾ ಗಜಲ್ ಗಳು ಐದು ದ್ವಿಪದಿಯಲ್ಲಿವೆ. ಉಮೇಶ‌ಬಾಬು ಅವರು *ಬಾಬು* ಎಂಬ ತಖಲುಸ್ ( ಕಾವ್ಯನಾಮ) ವನ್ನು ಬಳಸಿದ್ದಾರೆ. ಗಜಲ್  ಕಾವ್ಯದ ಸ್ಥಾಯಿ ಗುಣವಾದ ಪ್ರೀತಿ, ಮೋಹ, ವಿರಹ, ಕಾಯುವಿಕೆ, ಇವುಗಳನ್ನು ವ್ಯಕ್ತಪಡಿಸುವ ಗಜಲ್‌ಗಳು ಈ ಸಂಕಲನದಲ್ಲಿ ಇವೆ. ಮೃದು, ಮಧುರವಾದ, ಮಾಧುರ್ಯಪೂರ್ಣವಾದ ಶಬ್ದಗಳಿಂದ ಗಜಲ್ ಗಳನ್ನು ರಚಿಸಿದ್ದಾರೆ.  ಗಜಲ್ ಗಳು ಓದುಗರ ಮನ ಸೆರೆ ಹಿಡಿಯುತ್ತವೆ.

*ಕೊಸರಿ ಹೋದ ಕೊನೆಯ ಸ್ಪರ್ಶವಿತ್ತ ಬೆರಳು ನೆನಪಿದೆ
*ಹುಸಿ ನೆಪಗಳ ಏದುಸಿರು ಬಿಟ್ಟ ಕೊರಳು ನೆನಪಿದೆ*    (ಗ.೧೧)

ಪ್ರಿಯತಮೆ ಮುನಿದು  ಕೈ ಕೊಸರಿಕೊಂಡು ಹೋದಾಗ ಅವಳ ಬೆರಳ ಸ್ಪರ್ಶದ ನೆನಪು ಯಾವ ರೀತಿ ಕಾಡುತ್ತದೆ ಎಂದು ಗಜಲ್ ಕಾರರು ಇಲ್ಲಿ ವಿವರಿಸಿದ್ದಾರೆ. ಪ್ರೇಮಿಯು ಹೃದಯದಲ್ಲಿ ಬೆಸೆಗೊಂಡು ಒಲವಿಂದ ಇದ್ದ ಆ ಸವಿ ನೆನಪುಗಳು ಎಂದೂ ಮಾಸುವುದಿಲ್ಲ. ಅವಳ ಸಂಗ ಮನವು ಮತ್ತೆ ಮತ್ತೆ ಬಯಸುತ್ತಿರುತ್ತದೆ. ಅವಳ ರೂಪ, ಸ್ಪರ್ಶ ಸುಖ, ಕಾಡುವುದನ್ನು ಗಜಲ್ ಕಾರರು ಇಲ್ಲಿ ರೂಪಕಗಳೊಂದಿಗೆ ಸಾಕ್ಷಿಕೊಡುತ್ತಾ ವಿವರಿಸಿದ್ದಾರೆ .

*ಚಂದ್ರೋದಯಕೆ ಅಂಬುಧಿ ಅಲೆಗಳ ಎತ್ತರಿಸುವುದು ಏಕೆ ಸಖಿ*
*ಸುಂದರಿಯೇ ನೀ ಬಂದರೆ ತಳಮಳ ಒತ್ತರಿಸುವುದು  ಏಕೆ ಸಖಿ*   ( ಗ ೧೬)

ಈ ಗಜಲ್ ದಲ್ಲಿ ನಿತ್ಯ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಸುಂದರವಾದ ನಿಸರ್ಗದ ಚಲುವನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ .  ಸೂಯೋ೯ದಯ  ಚಂದ್ರೋದಯ  ಋತುಗಳ ಆಗಮನದಿಂದಾಗುವ ನಿಸರ್ಗದ ಬದಲಾವಣೆಯನ್ನು ಕಡಲ ಅಲೆಗಳ ಉಕ್ಕುವಿಕೆ, ಜಲಚರ ಪ್ರಾಣಿಗಳ ಜೀವನ ಶೈಲಿಯನ್ನು, ಹೀಗೆ ಪ್ರಕೃತಿಯ ಸೊಬಗನ್ನು ಹಿಡಿದಿಟ್ಟಿದ್ದಾರೆ ಮತ್ತು ಪ್ರಕೃತಿಯ ಬದಲಾವಣೆ ಏಕೆ ಎಂದು ಪ್ರಶ್ನಿಸುತ್ತ ಉತ್ತರ  ಹುಡುಕಿದ್ದಾರೆ.

*ದುಂಬಿ ಪ್ರದಕ್ಷಿಣೆ ಹಾಕುವಾಗ ಹೂ ಒಂದೂ ಮಾತಾಡಲಿಲ್ಲ*
*ತುಂಬಿ ಬಂದು ನದಿ ಸೇರಲು ಸಾಗರ ಎಂದೂ ಮಾತಾಡಲಿಲ್ಲ*     (ಗ೨೨)

ಈ ಗಜಲ್ ದ ರದೀಫ್  ಮಾತಾಡಲಿಲ್ಲ ಎಂಬುದು ಒಂದು ವಿಶಿಷ್ಟವಾದ ಅರ್ಥ ಕೊಡುತ್ತದೆ. ಕೆಲವೊಂದು ಕ್ರಿಯೆಗಳಿಗೆ ಮಾತು ಬೇಕಾಗಿಲ್ಲ. ಮೌನವೇ ಸಮ್ಮತಿಯಾಗಿರುತ್ತದೆ. ಆ ಮೌನದಲ್ಲಿ 100 ಮಾತುಗಳು ಅಡಗಿರುತ್ತವೆ ಎಂಬುದನ್ನು ಗಜಲ್ ದ  ಪ್ರತಿ ಶೇರ್ ನಲ್ಲಿ ಎತ್ತಿ ತೋರಿಸಿದ್ದಾರೆ. ದುಂಬಿ ಹೂವನ್ನು ಮೋಹಿಸಿ ಹೂವು ಸುತ್ತಲೂ ಪ್ರದಕ್ಷಿಣೆ ಹಾಕುತ್ತದೆ. ಅದು ಹೂವಿಗೆ ಹಿತವಾಗಿರುತ್ತದೆ. ಅದಕ್ಕಾಗಿ ಅದು ಒಂದೂ ಮಾತಾಡುವುದಿಲ್ಲ. ಹಾಗೆ ಓಡುವ ನದಿ ಸಾಗರದಲ್ಲಿ ಸಂಗಮವಾಗಲು ಕಾತರಿದಿಂದ ಸಾಗರದತ್ತ ಓಡುತ್ತದೆ. ಇದು ಸಾಗರಕ್ಕೂ ಬೇಕಾಗಿರುತ್ತದೆ ಸಾಗರ ಎಂದೂ  ಮಾತನಾಡದೆ ನದಿಯನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತದೆ. ಹೀಗೆ ಉತ್ತಮವಾದ ರೂಪಕಗಳಿಂದ ಗಜಲ್ ಸುಂದರವಾಗಿ ಅರ್ಥಪೂರ್ಣವಾಗಿ ರಚಿಸಿದ್ದಾರೆ.

*ಹೇಳಬೇಕಾದ ಮಾತನು ಆಡುವದೇಕೆ ಸುತ್ತಿ ಬಳಸಿ*
*ಬೀಳಿಸಿ ಸೆರಗನು ಎತ್ತುತ ನೋಡುವದೇಕೆ ಸುತ್ತಿ ಬಳಿಸಿ*    ( ಗ. ೩೩)

ಎಷ್ಟೋ ಸಾರಿ ನಮ್ಮ ಮನದಲ್ಲಿ ಇರುವ ಭಾವನೆಗಳನ್ನು ನೇರವಾಗಿ ಹೇಳಲಾಗದೆ ಹೇಳಿದರೆ ಅವರಿಗೆ ನೋವಾಗಬಹುದೆಂದು ಸುತ್ತಿ ಬಳಸಿ ಹೇಳುತ್ತೇವೆ. ಇದೇ ವಿಷಯವಾಗಿ  ಗಜಲ್ ಕಾರರು ತಮ್ಮ ಬಾಳ ಸಂಗಾತಿಗೆ ಕೇಳುತ್ತಾರೆ. ನಿನ್ನ ಮನದಲ್ಲಿರುವ ಮಾತುಗಳನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಯಾಕೆ ಹೇಳುವೆ, ಮನದ ಬಯಕೆಯನ್ನು ಹೇಳಲಾಗದೆ ಸೆರಗನ್ನು ಬೀಳಿಸಿ ಅದನ್ನು ಎತ್ತುತ್ತಾ ಆಸೆ ಕಂಗಳಿಂದ ನೋಡುವೆ ಏಕೆ ಎಂದು ಕೇಳುತ್ತಾರೆ. ಇದು ಒಂದು ದಾಂಪತ್ಯದ ಸರಸದ ಗಜಲ್ ಆಗಿದೆ.

*ವಿರಹದ ವ್ಯಥೆಯ ಹೇಳಲರಿಯೆ ನಾಲಿಗೆ ಇರದ ಹೃದಯ*
*ತರತರಹದ ಕಥೆಯಾದ ಬದುಕು ಬರೆಯಲು ಬರದ ಹೃದಯ*   ( ಗ ೪೯)

ಇದು ಒಂದು ವಿರಹದ ಗಜಲಾಗಿದೆ ಪ್ರೇಮಿಯ ಅಗಲಿಕೆಯಿಂದ ಹೃದಯ ನೊಂದು ಬೆಂದು ವ್ಯಥೆಪಡುತ್ತದೆ. ಆದರೆ ಹೃದಯಕ್ಕೆ ಬಾಯಿ ಇಲ್ಲ ತನ್ನ ಸ್ಥಿತಿಯನ್ನು ಹೇಳಲು ಕವಿ ಹೃದಯಕ್ಕೆ ನಾಲಿಗೆ ಇರಬೇಕಾಗಿತ್ತೆಂದೂ, ಇದ್ದರೆ ಅದು ತನ್ನ ಭಾವನೆಗಳನ್ನು ಹೇಳುತ್ತಿತೆಂದು ವಿವರಿಸುತ್ತಾರೆ. ಮನದಲ್ಲಿ ಉಂಟಾಗುವ ಭಾವನೆಗಳನ್ನು ಬದುಕಿನಲ್ಲಿ ಅನುಭವಿಸಿದ ನೋವುಗಳನ್ನು ಕಥೆಯ ರೂಪದಲ್ಲಿ ಬರೆಯಬೇಕೆಂದರೆ ಹೃದಯಕ್ಕೆ ಕೈ ಇಲ್ಲ ಇದರಿಂದ ಬರೆಯಲು ಆಗುವುದಿಲ್ಲವೆಂದು ವ್ಯಥೆಪಡುತ್ತ ವಿರಹದ ತಾಪವನ್ನು ಗಜಲ್ ದಲ್ಲಿ ತೋರಿಸಿದ್ದಾರೆ.

*ಅನುಗಾಲ ಅಗಲದ ಮಾತನಿತ್ತು ನಿಯತ್ತು ಮುರಿದೆ ಏಕೆ*
*ಕೊನೆಯವರೆಗೆ ಜೊತೆಗಿರುವ ಇರಾದೆಗೆ ಮಣ್ಣು ಸುರಿದೆ ಏಕೆ*    (ಗ. ೫೦)

ಪ್ರೀತಿಯಲ್ಲಿ ಒಂದಾದ ಹೃದಯಗಳು ಜನ್ಮ ಪೂರ್ತಿ ಜೊತೆಯಲ್ಲಿ ಇರಬೇಕು ಅದರಂತೆ ಒಬ್ಬರಿಗೊಬ್ಬರು ಮಾತು ಕೊಟ್ಟಿರುತ್ತಾರೆ. ಅದರಲ್ಲಿ ಒಬ್ಬರು ಕೊಟ್ಟ ಮಾತನ್ನು ಮುರಿದು ದೂರಾದಾಗ  ಹೃದಯವು ತನ್ನ ಪ್ರಿಯತಮೆ ಅಥವಾ ಪ್ರಿಯಕರ ನೀನು ಅನುಗಾಲ ಅಗಲದೆ ಇರುವೆನೆಂದು ಮಾತುಕೊಟ್ಟು ಏಕೆ  ಭಾಷೆಯನ್ನು ಮುರಿದೆ. ಕೊನೆಯವರೆಗೆ ಜೊತೆಯಾಗಿರುತ್ತೇನೆಂದು ಹೇಳಿ ಸುಂದರ ಬದುಕಿಗೆ ಮಣ್ಣು ಯಾಕೆ ಸುರಿದೆ? ಎಂದು ಪ್ರಶ್ನೆ ಮಾಡುವುದನ್ನು ಕವಿ ಇಲ್ಲಿ ಸುಂದರವಾದ ರೂಪಕಗಳೊಂದಿಗೆ ವಿವರಿಸಿದ್ದಾರೆ.

*ದಕ್ಕದ ಹೋದವಳೆ ನೆನಸದಿರು ಬಿಕ್ಕ ಹತ್ತತಾವ ಸಮ್ಮನೆ*
*ಲೆಕ್ಕಕೆ ಸಿಗದ ನೆನಪುಗಳು ದುಃಖ ಬಿತ್ತತಾವ‌‌ ಸುಮ್ಮನೆ*    ( ಗ೬೪)

ಇದು ಒಂದು ನಿರಾಶೆಯ ಗಜಲಾಗಿದ್ದು ತನ್ನವಳಾಗಬೇಕಾದ ಪ್ರಿಯತಮೆ ಬೇರೊಬ್ಬನ ಪಾಲಾದಾಗ ನೊಂದ ಹೃದಯ ಹಳಹಳಿಸುವ ರೀತಿಯನ್ನು ಸುಂದರವಾದ ರೂಪಕಗಳೊಂದಿಗೆ ವಿವರಿಸಿದ್ದಾರೆ. ನೀನು ನನಗೆ ಸಿಗಲಾರದವಳು ನನ್ನಿಂದ ದೂರ ಆದ ಮೇಲೆ ಯಾಕೆ ಮತ್ತೆ ನನ್ನನ್ನು ನೆನೆಸುವೆ, ನೀ ನೆನೆಸುವುದರಿಂದ ನನಗೆ ಬಿಕ್ಕಳಿಕೆ ಬರುತ್ತವೆ. ನಿನ್ನೊಂದಿಗೆ ಕಳೆದ ದಿನಗಳು ನೆನಪಾದರೆ ದುಃಖವೂ ಉಮ್ಮಳಿಸಿ ಬರುತ್ತದೆ. ನನ್ನನ್ನು ನೀ ಮರೆತೇ ಬಿಡು ಎಂದು ಹೇಳುವ ಮನದ ನೊಂದ  ಕಳಕಳಿಯ ಗಜಲ್ ಇದಾಗಿದೆ.

ಉಮೇಶಬಾಬು ಅವರು ತಮ್ಮ *ಭಾವ ಬಂಧುರ* ಗಜಲ್  ಸಂಕಲನದಲ್ಲಿ ತೂಕ ಬದ್ಧವಾದ ಕಾಫಿಯಾಗಳು ಮತ್ತು ಅದಕ್ಕೆ ಹೊಂದುವಂತಹ ಅರ್ಥಪೂರ್ಣವಾದ ರದೀಫ್ ಗಳನ್ನು ಬಳಸಿ ಗಜಲ್ ಗಳನ್ನು ರಚಿಸಿದ್ದಾರೆ. ಸಂಕಲನದಲ್ಲಿ ವಿಶಿಷ್ಟವಾದ ನುಡಿಗಟ್ಟುಗಳನ್ನು ಕಾಣುತ್ತೇವೆ. ಉಮೇಶ ಬಾಬು ಅವರು ಹುಟ್ಟು ಕಲಾವಿದರಾಗಿದ್ದು ಕೇವಲ ಚಿತ್ರಗಳಲ್ಲದೆ ಭಾವಪೂರ್ಣ ಗಜಲ್ ಕಟ್ಟುವ ಕಲೆಯಲ್ಲಿಯೂ ನಿಪುಣರಾಗಿದ್ದಾರೆ. ನವಿರಾದ ಮೃದುವಾದ ಮಾಧುರ್ಯದ ಭಾವಪೂರ್ಣವಾದ ಶಬ್ದಗಳ ಕುಸಿರಿನ ಕಲೆಯಿಂದ ಗಜಲನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. *ಭಾವ ಬಂಧುರ* ಗಜಲ್ ಸಂಕಲನದ ಗಜಲ್ ಗಳು ಓದುಗರ ಹೃದಯವನ್ನು ಬಂಧಿಸಿ ಗಜಲ್ ರಾಣಿಯನ್ನು ಅಪ್ಪುವಂತೆ ಮಾಡುತ್ತವೆ. ಇದು ಒಂದು ಉತ್ತಮವಾದ ಗಜಲ್ ಕೃತಿಯಾಗಿದ್ದು ಓದಲು ಮತ್ತು ಸಂಗ್ರಹಿಸಲು ಯೋಗ್ಯವಾಗಿದೆ. ಇವರಿಂದ ಇನ್ನೂ ಉತ್ತಮವಾದ ಗಜಲ್ ಸಂಕಲನಗಳು ಪ್ರಕಟವಾಗಿ ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಅರ್ಪಿತವಾಗಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ.


About The Author

Leave a Reply

You cannot copy content of this page

Scroll to Top