ಇತರೆ

“ಸರಕಾರಿ ಶಾಲೆಗಳು ಮತ್ತುಕನ್ನಡ” ವನಜ ಮಹಾಲಿಂಗಯ್ಯ

ಕನ್ನಡ ಸಂಗಾತಿ ವನಜ ಮಹಾಲಿಂಗಯ್ಯ “ಸರಕಾರಿ ಶಾಲೆಗಳು ಮತ್ತುಕನ್ನಡ” 1. ಸರ್ಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ? ಬಲಪಡಿಸುವುದು ಕಷ್ಟವಲ್ಲ , ಮನಸ್ಸು ಮಾಡಬೇಕು ಅಷ್ಟೇ.ಶಿಕ್ಷಕರನ್ನು ಕೊಡಬೇಕು:ಒಬ್ಬರೇ ಮಾಸ್ತರು 5 ಕ್ಲಾಸು ನಡೆಸಿದರೆ ಹೇಗೆ? ಪ್ರತಿ ಶಾಲೆಗೆ ವಿಷಯವಾರು ಶಿಕ್ಷಕರು ಬೇಕು. ಇಂಗ್ಲಿಷ್ ಭಯ ಹೋಗಿಸಬೇಕು:ಸರ್ಕಾರಿ ಶಾಲೆ ಎಂದರೆ ಕನ್ನಡ ಮಾತ್ರ ಎಂಬ ಭ್ರಮೆ ಬೇಡ. 1ನೇ ತರಗತಿಯಿಂದಲೇ ಚೆನ್ನಾಗಿ ಇಂಗ್ಲಿಷ್ ಕಲಿಸಿದರೆ, ಪೋಷಕರು ಖಾಸಗಿ ಶಾಲೆಗೆ ಹೋಗಲ್ಲ.ಶಾಲೆ ಶಾಲೆಯಂತೆ ಇರಬೇಕು:ಚೆನ್ನಾಗಿ ಟಾಯ್ಲೆಟ್, ಕುಡಿಯುವ ನೀರು, ಆಟದ ಮೈದಾನ, ಕಂಪ್ಯೂಟರ್. ಖಾಸಗಿ ಶಾಲೆಯಲ್ಲಿ ಏನಿದೆಯೋ ಅದೆಲ್ಲ ಸರ್ಕಾರಿ ಶಾಲೆಯಲ್ಲೂ ಕೊಟ್ಟರೆ ಸಾಕು. 2. ಶೇ. 90 ರಷ್ಟು ಸರ್ಕಾರಿ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಏಕೆ ಕಳುಹಿಸುವುದಿಲ್ಲ? ಇದು ಕಹಿ ಸತ್ಯ, ಆದರೆ ನಿಜ.ಶಿಕ್ಷಕರಿಗೆ ಗೊತ್ತಿದೆ – ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು. ಒಬ್ಬ ಟೀಚರ್ ರಜೆ ಹಾಕಿದರೆ ಆ ದಿನ ಪೂರ್ತಿ ಕ್ಲಾಸು ಖಾಲಿ. ಮೂಲಭೂತ ಸೌಕರ್ಯ ಇಲ್ಲ. ಸರ್ಕಾರದಿಂದ ಬರುವ ಕೆಲಸದ ಒತ್ತಡ – ಜನಗಣತಿ, ಚುನಾವಣೆ ಡ್ಯೂಟಿ, ಮಧ್ಯಾಹ್ನದ ಬಿಸಿಯೂಟದ ಲೆಕ್ಕ – ಇದೆಲ್ಲದರಲ್ಲಿ ಮಕ್ಕಳಿಗೆ ಪಾಠವೇ ಆಗುವುದಿಲ್ಲ. ತನ್ನ ಮಗು ಚೆನ್ನಾಗಿ ಇಂಗ್ಲಿಷ್ ಮಾತನಾಡಬೇಕು, ದೊಡ್ಡ ಶಾಲೆಯ ಸಮವಸ್ತ್ರ ಹಾಕಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ತಂದೆ ತಾಯಿಗೂ ಇರುತ್ತದೆ. ಶಿಕ್ಷಕರೂ ಮನುಷ್ಯರೇ ತಾನೇ? ತಮ್ಮ ಕೈಯಲ್ಲೇ ವ್ಯವಸ್ಥೆ ಸರಿ ಇಲ್ಲ ಎಂದ ಮೇಲೆ, ತಮ್ಮ ಮಕ್ಕಳನ್ನು ಹೇಗೆ ಅಲ್ಲಿಗೆ ಕಳುಹಿಸುತ್ತಾರೆ? ಇದು ಶಿಕ್ಷಕರ ತಪ್ಪಲ್ಲ, ವ್ಯವಸ್ಥೆಯ ತಪ್ಪು. 3. ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು? ಕನ್ನಡ ಉಳಿಯುವುದು ಭಾಷಣದಿಂದಲ್ಲ, ಕೆಲಸದಿಂದ.ಸರ್ಕಾರ ಮಾಡಬೇಕಾದ್ದು:ಕನ್ನಡದಲ್ಲಿ ಓದಿದವರಿಗೆ ನೌಕರಿಯಲ್ಲಿ 5% ಮೀಸಲಾತಿ ಕೊಡಲಿ. ಆಗ ತಾನೇ ತಾನಾಗಿ ಎಲ್ಲರೂ ಕನ್ನಡ ಕಲಿಯುತ್ತಾರೆ. ಬರೀ ನಾಮಫಲಕ ಕನ್ನಡದಲ್ಲಿ ಹಾಕಿಸಿದರೆ ಸಾಲದು. ಸಾಹಿತ್ಯ ಪರಿಷತ್ತು ಮಾಡಬೇಕಾದ್ದು:ಪರಿಷತ್ತು ಅಂದರೆ ವರ್ಷಕ್ಕೊಮ್ಮೆ ಸಮ್ಮೇಳನ ಮಾಡಿ ಬಿರಿಯಾನಿ ತಿಂದು ಹೋಗುವ ಜಾಗ ಆಗಬಾರದು. ಹಳ್ಳಿ ಹಳ್ಳಿಗೆ ಹೋಗಿ, ಕನ್ನಡದ ನಾಟಕ, ಕವಿಗೋಷ್ಠಿ, ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ ಮಾಡಬೇಕು. ಕನ್ನಡವನ್ನು ಮನೆಯ ಭಾಷೆಯಾಗಿ ಉಳಿಸಬೇಕು, ವೇದಿಕೆಯ ಭಾಷೆಯಾಗಿ ಅಲ್ಲ. ಕೊನೆಗೆ ಒಂದು ಮಾತು,ಸರ್ಕಾರಿ ಶಾಲೆ ಮತ್ತು ಸಂಸಾರ ಎರಡೂ ಒಂದೇ. ತಾಳ್ಮೆಯಿಂದ, ಹೊಂದಾಣಿಕೆಯಿಂದ ಕಟ್ಟಿ ಬೆಳೆಸಿದರೆ ಮಾತ್ರ ಉಳಿಯುತ್ತದೆ. ಬಿಟ್ಟುಬಿಟ್ಟರೆ ಕುಸಿದು ಬೀಳುತ್ತದೆ. ಶ್ರೀಮತಿ ವನಜಾ ಮಹಾಲಿಂಗಯ್ಯ                   

“ಸರಕಾರಿ ಶಾಲೆಗಳು ಮತ್ತುಕನ್ನಡ” ವನಜ ಮಹಾಲಿಂಗಯ್ಯ Read Post »