ಕಾವ್ಯ ಸಂಗಾತಿ
ಜ್ಯೋತಿ ಮಾಳಿ ಬೆಳಗಾವಿ
ಗಜಲ್


ಒಡವೆ ತೊಡುವ ಆಸೆಯಲಿ ಕಿವಿ ಚುಚ್ಚಿಸಿಕೊಳ್ಳುತಿರುವೆನು
ಮರೆಯಾಗಲೆಂದು ಮಣ್ಣಿನಲಿ ಮುಖ ಮುಚ್ಚಿಸಿಕೊಳ್ಳುತಿರುವೆನು
ಇರುವ ಗಾಯಗಳ ಲೆಕ್ಕ ಸಾಲದಾಯಿತು ಈ ಜೀವನಕೆ
ನಯವಂಚಕರ ನಾಲಿಗೆಯಲಿ ಬಾಳ ಕೊಚ್ಚಿಸಿಕೊಳ್ಳುತಿರುವೆನು
ಪುಟ ತಿರುವಿದಷ್ಟು ಪೂರ್ಣ ವಿರಾಮವಿರದ ಸಾಲುಗಳಿವೆ
ಬೇಡವಾಗಿರುವ ಬದುಕಿನಲಿ ವಿಧಿ ಮೆಚ್ಚಿಸಿಕೊಳ್ಳುತಿರುವೆನು
ಬೆವರು ಬಸಿದರೆ ಸಾಲದೇನು ಈ ಹಾಳು ಜನುಮಕೆ
ರಕುತ ಸುರಿಸಿ ಭಕುತಿಯಲಿ ದೈವ ನೆಚ್ಚಿಸಿಕೊಳ್ಳುತಿರುವೆನು
ನಡೆದ ದಾರಿಯಲಿ ನರಳುತಿವೆ ಜ್ಯೋತಿ ಹೆಜ್ಜೆ ಗುರುತುಗಳು
ಸುಮ್ಮನಿರದೆ ಗದ್ದಲದಲಿ ಹಾವು ಕಚ್ಚಿಸಿಕೊಳ್ಳುತಿರುವೆನು
ಜ್ಯೋತಿ ಮಾಳಿ ಬೆಳಗಾವಿ



