ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಾವು ಏನನ್ನಾದರೂ ಪರಿಶೀಲಿಸಬೇಕೆಂದಾಗ ಮೊದಲು ನಮ್ಮ ಸುತ್ತಮುತ್ತಲನ್ನು ಗಮನಿಸುತ್ತೇವೆ. ನಮ್ಮ ದೃಷ್ಟಿಯ ವ್ಯಾಪ್ತಿಗೆ ಸಿಕ್ಕಷ್ಟು ವಿಚಾರಗಳನ್ನು ಗ್ರಹಿಸುತ್ತೇವೆ. ಆದರೆ ಕಂಡದ್ದರಾಚೆಗೂ ಅನೇಕ ಅರ್ಥಗಳು, ಅನುಭವಗಳು ಮತ್ತು ಒಳನೋಟಗಳು ಅಡಗಿರುತ್ತವೆ. ಅಂತಹ ಒಳನೋಟಗಳನ್ನು ತಮ್ಮ ಕಣ್ಣಳತೆಗೆ ಕಂಡ ವಿಚಾರಗಳ ಮೂಲಕ ಓದುಗರ ಮುಂದೆ ತೆರೆದಿಡುವ ಕೃತಿ ‘ಕಣ್ಣಳತೆಗೆ ಕಂಡದ್ದು’.

ಶೋಭಾ ಶಂಕರಾನಂದ ಅವರ ಮೊದಲ ಕೃತಿಯಾದ ಈ ಲೇಖನಮಾಲೆಯಲ್ಲಿ ಸಾಮಾಜಿಕ ಕಳಕಳಿ, ಸ್ತ್ರೀ ಸಂವೇದನೆ, ಮಕ್ಕಳ ಭವಿಷ್ಯದ ಕುರಿತ ಕಾಳಜಿ, ವ್ಯಕ್ತಿತ್ವ ವಿಕಸನ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳು, ಹಲವು ಗಣ್ಯ ವ್ಯಕ್ತಿಗಳ ಪರಿಚಯ ಹಾಗೂ ಅವರ ಬದುಕಿನ ಮೌಲ್ಯಗಳು ಹೀಗೆ ವೈವಿಧ್ಯಮಯ ವಿಚಾರಧಾರೆಗಳು ಹರಿದುಬಂದಿವೆ. ಒಂದೊಂದು ಲೇಖನವೂ ಒಂದೊಂದು ಚಿಂತನೆಯ ಕಿಟಕಿಯನ್ನು ತೆರೆದು, ಓದುಗರನ್ನು ಹೊಸ ದೃಷ್ಟಿಕೋನದತ್ತ ಕರೆದೊಯ್ಯುತ್ತದೆ.

ಈ ಕೃತಿಯ ಮೊದಲ ಲೇಖನ ‘ಕುಂಭಮೇಳ ಮತ್ತು ನಾಗ ಸಾಧುಗಳು’. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಹಿನ್ನೆಲೆಯಲ್ಲಿನ ಧಾರ್ಮಿಕ ವೈಭವ, ಸನಾತನ ಪರಂಪರೆಯ ಮಹತ್ವ ಹಾಗೂ ನಾಗ ಸಾಧುಗಳ ಜೀವನದ ಕುರಿತಾಗಿ ಲೇಖಕಿ ಮನಮುಟ್ಟುವಂತೆ ವಿವರಿಸಿದ್ದಾರೆ. ನಾಗ ಸಾಧುಗಳ ಜೀವನಶೈಲಿ, ಅವರ ವೈರಾಗ್ಯ ಮತ್ತು ಧರ್ಮದ ಮೇಲಿನ ನಿಷ್ಠೆಯನ್ನು ಓದುತ್ತಿದ್ದಂತೆ ಅವರ ಬದುಕಿನ ಬಗ್ಗೆ ಕುತೂಹಲವೂ ಗೌರವವೂ ಮೂಡುತ್ತದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಧರ್ಮಪರಂಪರೆಯನ್ನು ಕಾಪಾಡುವ ಅವರ ತ್ಯಾಗದ ಬದುಕಿನ ಪರಿಚಯ ಈ ಲೇಖನದ ವಿಶೇಷತೆ.

‘ಕೃಷ್ಣಶಿಲೆ ಮಂದಸ್ಮಿತ ರಾಮಲೀಲಾ’ ಲೇಖಕಿಯ ವೈಯಕ್ತಿಕ ಅನುಭವದ ಸ್ಪರ್ಶ ಹೊಂದಿರುವ ಮತ್ತೊಂದು ಮನೋಜ್ಞ ಲೇಖನ. ರಾಮಲಲ್ಲಾನ ದರ್ಶನದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾ, ಅಲ್ಲಿನ ಭಕ್ತಿ, ಸಂಭ್ರಮ ಮತ್ತು ಸಕಾರಾತ್ಮಕ ವಾತಾವರಣವನ್ನು ಓದುಗರಿಗೂ ಅನುಭವಿಸುವಂತೆ ಮಾಡಿದ್ದಾರೆ. 51 ಇಂಚು ಎತ್ತರದ ಕಪ್ಪು ಶಿಲೆಯಲ್ಲಿ ಮೂಡಿಬಂದ ಬಾಲರಾಮನ ವಿಗ್ರಹದ ಸೌಂದರ್ಯವನ್ನು ವರ್ಣಿಸುವಾಗ ಲೇಖಕಿಯ ಭಾವತೀವ್ರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಗ್ರಹದ ನಿರ್ಮಾತೃ ಶಿಲ್ಪಿ ಅರುಣ್ ಯೋಗಿರಾಜ್ ಅವರ ಪರಿಚಯದ ಜೊತೆಗೆ, ಅವರ ಕೈಚಳಕದಲ್ಲಿ ಅರಳಿದ ಇನ್ನಿತರ ಶಿಲ್ಪಗಳ ಕುರಿತೂ ಲೇಖಕಿ ಪರಿಚಯಿಸಿದ್ದಾರೆ.

‘ವೈರಾಗ್ಯ ನಿಧಿ ಅಕ್ಕ ಮಹಾದೇವಿ’ ಲೇಖನದಲ್ಲಿ ಹನ್ನೆರಡನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿಯ ವ್ಯಕ್ತಿತ್ವ ಮತ್ತು ವೈಚಾರಿಕತೆಯನ್ನು ಪರಿಚಯಿಸಲಾಗಿದೆ. ರಾಜಪ್ರಭುತ್ವದ ಬಂಧನಗಳನ್ನು ಧಿಕ್ಕರಿಸಿ, ತನ್ನದೇ ಆದ ಸ್ವತಂತ್ರ ಚಿಂತನೆ ಹಾಗೂ ವಚನಗಳ ಮೂಲಕ ಬದುಕಿನ ಸತ್ಯಗಳನ್ನು ಅನಾವರಣಗೊಳಿಸಿದ ಅಕ್ಕಮಹಾದೇವಿಯ ಜೀವನದ ಒಳನೋಟಗಳನ್ನು ಲೇಖಕಿ ವಿಶ್ಲೇಷಿಸಿದ್ದಾರೆ. ಸ್ತ್ರೀ ಅಸ್ತಿತ್ವ, ಆತ್ಮಗೌರವ ಮತ್ತು ಸ್ವತಂತ್ರ ಚಿಂತನೆಯ ನೆಲೆಯಲ್ಲಿ ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ನೋಡುವ ಪ್ರಯತ್ನ ಇಲ್ಲಿ ಗಮನಾರ್ಹವಾಗಿದೆ.

‘ವೀಕ್ಷಕರ ಸಮಯವೂ ಸಹ ಅತ್ಯಮೂಲ್ಯ’ ಎಂಬ ಲೇಖನದಲ್ಲಿ ಬಿಗ್‌ಬಾಸ್‌ನಂತಹ ಜನಪ್ರಿಯ ಕಾರ್ಯಕ್ರಮವನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡದೆ, ನಮ್ಮ ಅಮೂಲ್ಯ ಸಮಯವನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಲೇಖಕಿ ಮುಂದಿಡುತ್ತಾರೆ. ಪ್ರತಿಯೊಂದು ವಿಚಾರಕ್ಕೂ ತನ್ನದೇ ಆದ ದೃಷ್ಟಿಕೋನವನ್ನು ಹೊಂದಿರುವ ಲೇಖಕಿ, ಕಾರ್ಯಕ್ರಮದ ಒಳಿತು-ಕೆಡುಕುಗಳನ್ನು ಚರ್ಚಿಸುವುದರ ಜೊತೆಗೆ, ಸಮಯದ ಮೌಲ್ಯ ಮತ್ತು ಅದರ ಸದುಪಯೋಗದ ಕುರಿತು ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ.

ಇಂದಿನ ಮಕ್ಕಳ ಬದುಕಿನ ಮತ್ತೊಂದು ಸೂಕ್ಷ್ಮ ಆಯಾಮವನ್ನು ತೆರೆದಿಡುವ ಲೇಖನ ‘ಮುಗ್ಧ ಮಕ್ಕಳ ಬಾಲ್ಯ ಕಸಿಯದಿರಿ’. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ರಿಯಾಲಿಟಿ ಶೋಗಳ ಹಿಂದಿರುವ ಒತ್ತಡ, ಸ್ಪರ್ಧೆಯ ಮನೋಭಾವ, ಗೆಲುವು-ಸೋಲಿನ ಪರಿಣಾಮ ಮತ್ತು ಜನಪ್ರಿಯತೆಯ ಬೆನ್ನಟ್ಟುವಿಕೆಯ ಕುರಿತು ಲೇಖಕಿ ಗಂಭೀರವಾಗಿ ಚಿಂತಿಸಿದ್ದಾರೆ. ಬಾಲ್ಯವೆಂದರೆ ಸಹಜತೆ, ಆಟ, ನಗು ಮತ್ತು ಮುಗ್ಧತೆಯ ಕಾಲ. ಆದರೆ ವೇದಿಕೆಯ ಮೇಲಿನ ಅತಿಯಾದ ಸ್ಪರ್ಧೆ ಮತ್ತು ನಿರೀಕ್ಷೆಗಳು ಮಕ್ಕಳ ಸಹಜ ಬಾಲ್ಯವನ್ನು ಕಸಿದುಕೊಳ್ಳಬಹುದೆಂಬ ಆತಂಕವನ್ನು ಇಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಮಕ್ಕಳ ಮನಸ್ಸಿನ ಮೇಲೆ ಉಳಿಯಬಹುದಾದ ಪರಿಣಾಮಗಳತ್ತ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ.

‘ಸಾವಿನ ಮನೆ ಸಾಕೋ೯ ಪಾಡ್’ ಎಂಬ ಲೇಖನ ತಂತ್ರಜ್ಞಾನದ ಮತ್ತೊಂದು ಸಂಕೀರ್ಣ ಮುಖವನ್ನು ಪರಿಚಯಿಸುತ್ತದೆ. ಸಾವಿನ ಕುರಿತು ಮಾನವನ ಚಿಂತನೆ, ಜೀವನದ ನೋವು, ಅಸಹಾಯಕತೆ ಮತ್ತು ತಂತ್ರಜ್ಞಾನ ಇವುಗಳ ನಡುವಿನ ಸಂಬಂಧವನ್ನು ಲೇಖಕಿ ಪ್ರಶ್ನಿಸುತ್ತಾರೆ. ಬದುಕಿನ ಅಂತ್ಯವನ್ನು ತಂತ್ರಜ್ಞಾನದ ಮೂಲಕ ನಿರ್ಧರಿಸುವ ಸಾಧ್ಯತೆಗಳ ಕುರಿತು ಓದುಗರಲ್ಲಿ ಹಲವು ನೈತಿಕ ಹಾಗೂ ಮಾನವೀಯ ಪ್ರಶ್ನೆಗಳನ್ನು ಹುಟ್ಟಿಸುವ ಈ ಲೇಖನ, ವಿಜ್ಞಾನದ ಪ್ರಗತಿಯ ಜೊತೆಗೆ ಮಾನವೀಯ ಮೌಲ್ಯಗಳ ಅಗತ್ಯವನ್ನೂ ನೆನಪಿಸುತ್ತದೆ.

ಹೀಗೆ ‘ಕಣ್ಣಳತೆಗೆ ಕಂಡದ್ದು’ ಕೇವಲ ಲೇಖನಗಳ ಸಂಕಲನವಲ್ಲ; ಲೇಖಕಿಯ ಸೂಕ್ಷ್ಮ ಅವಲೋಕನ, ಸಾಮಾಜಿಕ ಕಳಕಳಿ ಮತ್ತು ಚಿಂತನಶೀಲ ಮನಸ್ಸಿನ ಪ್ರತಿಬಿಂಬವಾಗಿದೆ. ಧರ್ಮದಿಂದ ತಂತ್ರಜ್ಞಾನದವರೆಗೆ, ಅಕ್ಕಮಹಾದೇವಿಯಿಂದ ಇಂದಿನ ಮಕ್ಕಳವರೆಗೆ, ಮನರಂಜನೆಯಿಂದ ಸಮಯದ ಮೌಲ್ಯದವರೆಗೆ — ಹಲವು ವಿಭಿನ್ನ ವಿಚಾರಗಳನ್ನು ಒಂದೇ ಕೃತಿಯೊಳಗೆ ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ಕಣ್ಣಿಗೆ ಕಂಡ ಸಂಗತಿಯನ್ನು ಹಾಗೆಯೇ ದಾಖಲಿಸುವುದಕ್ಕಿಂತ, ಅದರ ಹಿಂದಿರುವ ಅರ್ಥವನ್ನು ಅರಿಯುವ ಪ್ರಯತ್ನವೇ ಈ ಕೃತಿಯ ಜೀವಾಳ. ಪ್ರತಿಯೊಂದು ಲೇಖನವೂ ಓದುಗರ ಮನದಲ್ಲಿ ಒಂದಲ್ಲ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಕೆಲವೊಮ್ಮೆ ಚಿಂತನೆಗೆ ಹಚ್ಚುತ್ತದೆ, ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ, ಮತ್ತೊಮ್ಮೆ ನಮ್ಮದೇ ಬದುಕಿನತ್ತ ತಿರುಗಿ ನೋಡುವಂತೆ ಮಾಡುತ್ತದೆ.

‘ಕಣ್ಣಳತೆಗೆ ಕಂಡದ್ದು’ ಓದಿದಾಗ ಕಣ್ಣಳತೆಗೆ ಕಂಡ ವಿಚಾರಗಳಾಚೆಗೂ ಬದುಕಿನ ಅನೇಕ ಆಯಾಮಗಳು ತೆರೆದುಕೊಳ್ಳುತ್ತವೆ. ಕೃತಿಯ ಹೊರಮೈಯನ್ನು ನೋಡಿದಷ್ಟೇ ಸಾಲದು; ಅದರೊಳಗಿನ ವಿಚಾರಧಾರೆಯ ಹೂರಣವನ್ನು ಸವಿಯಲು ಕೃತಿಯ ಪುಟಗಳನ್ನು ತಿರುವುದೇಬೇಕು. ಓದಿದಂತೆ ಅದರ ವೈಚಾರಿಕ ಸೊಗಡು ಮತ್ತು ಅನುಭವದ ಆಳ ಅರಿವಾಗುತ್ತದೆ.


About The Author

Leave a Reply

You cannot copy content of this page

Scroll to Top