ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯ  ನಿರ್ವಹಿಸುತ್ತಿದ್ದ ನಮ್ಮ ಪ್ರೀತಿಯ ತಂದೆಯವರೊಂದಿಗೆ ನಾವು ೭೦ ರ ದಶಕದಲ್ಲಿ ತರೀಕೆರೆಯಲ್ಲಿದ್ದೆವು. ಆ ಊರು ಮಲೆನಾಡಿನಲ್ಲಿತ್ತು. ಆಗ ನಾವು ೩ ಜನ ಹೆಣ್ಣುಮಕ್ಕಳಲ್ಲಿ ನಾನು ಹಾಗು ಚಿಕ್ಕಅಕ್ಕ ಹೈಸ್ಕೂಲಿನಲ್ಲಿ, ದೊಡ್ಡಕ್ಕ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಿದ್ದೆವು.ತುದಿಪೇಟೆ ಬಡಾವಣೆಯಲ್ಲಿ ನಮ್ಮ ಮನೆಯಿದ್ದು, ನಮ್ಮ ಶಾಲೆಗೆ ಬಹಳ ಸಮೀಪದಲ್ಲಿತ್ತು. ನನ್ನ ತಮ್ಮ ಇನ್ನು ಚಿಕ್ಕವನು, ಶಿಶುವಿಹಾರಕ್ಕೆ ಹೋಗುತ್ತಿದ್ದನು. ನಮ್ಮ ತಂದೆಗೆ ಬೆಂಗಳೂರಿನಿಂದ ವರ್ಗಾವಣೆಯಾದ್ದರಿಂದ ನಾವೆಲ್ಲರು ತರೀಕೆರೆಗೆ ಹೋಗಿದ್ದೆವು. ಅಲ್ಲಿಗೆ ಹೋದ ಹೊಸದರಲ್ಲಿ ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಹೆಣಗಾಡಿದ್ದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.
ಅಲ್ಲಿ ಪ್ರತಿ ಶುಕ್ರವಾರ “ಸಂತೆ” ನಡೆಯುತಿತ್ತು.(ಈಗಿನ ಮಕ್ಕಳಿಗೆ ಪಾಪ,ಸಂತೆಯೆಂದರೆ ಗೊತ್ತಿರುವುದು   ಸ್ವಲ್ಪ ಅನುಮಾನವೇ?)ಆಗ ಆಫೀಸಿನ ನೌಕರರಾದ ಶಂಕರಪ್ಪ ಮತ್ತು ‘ಕಂಬಳಿ’ ಅವರೊಂದಿಗೆ ನಾವು ಮಕ್ಕಳು ಏನೋ ಕುತೂಹಲದಿಂದ ಸಂತೆಗೆ ಹೋಗಿ ಇಡೀ ವಾರಕ್ಕೆ ಬೇಕಾಗುವಷ್ಟು ತರಕಾರಿ, ಹಣ್ಣುಗಳು ಇತ್ಯಾದಿ ಸಾಮಾನುಗಳನ್ನು ತರುತ್ತಿದ್ದ ನೆನಪು ಈಗಲೂ ನನಗಿದೆ
.ಅಲ್ಲಿನ ಜೀವನ ಎಷ್ಟು ಸರಳ ಹಾಗೂ ಸುಂದರವಾಗಿತ್ತು ಎಂದರೆ ಈಗ ನೆನಪಿಸಿಕೊಂಡರೂ ಖುಷಿಯೆನಿಸುತ್ತದೆ.ಮಲೆನಾಡಿನ ಸೆರಗಿನಂತೆ ಇದ್ದ  ಆ ಊರು ತೀರ ಹಳ್ಳಿಯಂತಿರದೆ,ಎಲ್ಲಾ ಸೌಕರ‍್ಯಗಳೂ ಇದ್ದವು.
 ನಿಸರ್ಗ ಸೌಂರ‍್ಯವಂತೂ ಕಣ್ಣು ಸೆಳೆಯುವಂತಿತ್ತು.ಅಲ್ಲಿನ “ರೋಟರಿ ಕ್ಲಬ್” ಗೆ ನಮ್ಮ ತಂದೆ ಅಧ್ಯಕ್ಷರಾಗಿದ್ದರೆ, ಅಮ್ಮ “ಇನ್ನರ್ ವೀಲ್ ಕ್ಲಬ್”ನ ಸೆಕ್ರೆಟರಿಯಾಗಿದ್ದರು.ಅಲ್ಲಿ ಸಾಮಾಜಿಕ ಚಟುವಟಿಕೆಗಳು ಆಗಾಗ್ಗೆ ನಡೆಯುತ್ತಿದ್ದು, ನಾವೆಲ್ಲರೂ ತಪ್ಪದೆ ಹೋಗುತ್ತಿದ್ದೆವು.ನಮ್ಮ ಜೀವನದ ಸುವರ್ಣ ಸಮಯವದು ಎನ್ನಲಡ್ಡಿಯಿಲ್ಲ. ಅಲ್ಲಿದಾಗ ನಮ್ಮ ಜೊತೆೆಯಲ್ಲಿದ್ದ ನಮ್ಮ ಅಜ್ಜಿಯನ್ನುಕರೆದುಕೊಂಡು ನಾವೆಲ್ಲರೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು,ಯಾತ್ರ ಸ್ಥಳಗಳಿಗೆ ಶಾಲೆಯ ರಜಾದಿನಗಳಲ್ಲಿ ಹೋಗುತ್ತಿದ್ದೆವು. ಕೆಮ್ಮಣ್ಣುಗುಂಡಿ,ಕೂಡ್ಲಿ, ಶಿವಮೊಗ್ಗ, ಶೃಂಗೇರಿ,ಹರಿಹರ, ಬಾಣಾವರ ಇತ್ಯಾದಿ  ಊರುಗಳನ್ನು ನೋಡಿದ್ದು,ಆ ಸವಿನೆನಪು ಮನದಲ್ಲಿ ಅಚ್ಚಳಿಯಂತಿದೆ.
ಇನ್ನು ಅಲ್ಲಿದ್ದ ನಮ್ಮ ಮನೆಯು ಬಡಾವಣೆಯೊಂದರಲ್ಲಿ ಇತ್ತು,ಹಾಗಾಗಿ ಗಲಾಟೆ,ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.(ಅಂದಿನ ಕಾಲವೇ ಹಾಗಿತ್ತು) ಮನೆಯ ಮುಂದಿನ ಕೈತೋಟದಲ್ಲಿ ಬಗೆಬಗೆಯ ಹೂವಿನ ಗಿಡಗಳಿದ್ದವು. ಕಣಿಗಿಲೆ, ಕಾಕಡ,ಮಲ್ಲಿಗೆ, ಜಾಜಿ, ಬಸವನಪಾದ,ಅನೇಕ ವರ್ಣದ ಸ್ಪಟಿಕ ಹಾಗೂ ಬಸಳೆ,ಮೆಂತ್ಯ ಸೊಪ್ಪು, ನಿಂಬೆ ಮತ್ತು ದಾಳಿಂಬೆ,ಬಾಳೆ ಗಿಡಗಳೂ ಇದ್ದವು. ಮನೆಯ ಹಿತ್ತಲಿನಲ್ಲಿ ದನದ ಕೊಟ್ಟಿಗೆಯೂ ಇತ್ತು! ಆದರೆ ನಾವು ಹಸುಗಳನ್ನು ಸಾಕಿಕೊಂಡಿರಲಿಲ್ಲ.ಆಗ ನಮ್ಮ ಮನೆಯಲ್ಲಿ ಬಚ್ಚಲುಮನೆ(ಈಗ ಯಾರೂ ಹೀಗೆ ಹೇಳುವುದಿಲ್ಲ) ಅಂದರೆ ಬಾತ್ರೂಮಿನಲ್ಲಿ ಇದ್ದ ‘ನೀರೊಲೆಯ’ಬಗ್ಗೆ ಹೇಳದ್ದಿದ್ದರೆ ಸ್ವಾರಸ್ಯವೇ ಇರುವುದಿಲ್ಲ. ಅಮ್ಮ/ಅಜ್ಜಿ ರಾತ್ರಿಯೇ ನೀರೊಲೆಯ ಗೂಡಿಗೆ ಮರದಹೊಟ್ಟು, ತೆಂಗಿನ ಚಿಪ್ಪು, ನಾರು…. ತುಂಬಿಸಿ ಸಿದ್ದ ಮಾಡಿಟ್ಟುಕೊಂಡಿರುತ್ತಿದ್ದರು.ಕೆಲವು ಬಾರಿ ನಮ್ಮ ಮನೆಯ ಸದಸ್ಯಳಂತಿದ್ದ ಸುಶೀಲ ಎನ್ನುವ ಮನೆಕೆಲಸದ ಯುವತಿಯೂ ಹೀಗೆ ಸಿದ್ದಮಾಡಿಡುತ್ತಿದ್ದಳು. ಬೆಳಗಿನ ಜಾವ ಅಮ್ಮ ತೆಂಗಿನ ಚಿಪ್ಪಿಗೆ ನಾರು/ಹೊಟ್ಟು ತುಂಬಿ ಚೂರು ಸೀಮೆಎ ಣ್ನಯನ್ನು ಹಾಕಿ ಒಲೆ ಹೊತ್ತಿಸುವುದನ್ನು ನಾವು ಮಕ್ಕಳು ಏನೋ ಕುತೂಹಲದಿಂದ ನೋಡುತ್ತಿದ್ದೆವು. ಹೀಗಾಗಿ ದಿನವಿಡೀ ನಮ್ಮ ಮನೆಯಲ್ಲಿ ಬಿಸಿನೀರು ಇರುತ್ತಿತ್ತು.
ಬೇಸಿಗೆರಜೆಯಲ್ಲಿ ನಾವೆಲ್ಲರೂ ಗೆಳತಿಯರೊಂದಿಗೆ ಕೊಟ್ಟಿಗೆಯಲ್ಲಿ ಕುಂಟೆಬಿಲ್ಲೆ, ಕಲ್ಲಾಟ, ಅಂತಾಕ್ಷರಿ, ಕಣ್ಮುಚ್ಚಾಲೆ ಆಟಗಳನ್ನು ಆಡುತ್ತಿದ್ದೆವು. ಎಂತಹ
ಸುಮಧುರ ಗಳಿಗೆಗಳವು. ಅಂದಿನ ದಿನಗಳನ್ನು ನೆನಪಿಸಿಕೊಂಡರೆ
ಈಗಲೂ ಖುಷಿಯೆನಿಸುತ್ತದೆ. ಆದರೆ ಈಗ ನಮ್ಮೊಂದಿಗೆ ಅಪ್ಪ, ಅಮ್ಮ, ಅಜ್ಜಿ ಯಾರೂ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.


About The Author

Leave a Reply

You cannot copy content of this page

Scroll to Top