ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎಲ್ಲಾ ವಿದಾಯವೂ ಅಂತ್ಯವೇನಲ್ಲ!

ಆ ಮಾಯಗಾರನಿಲ್ಲಿ
ಹಾದಿಯ ಮೇಲೆ ಬಿಳಿ ಬಿಳಿ ಹೂವಿನಕ್ಷರಗಳ
ಹರಡಿ ಬರೆದು ಹೋಗಿದ್ದಾನೆ—ಪತ್ರಗಳ
ಓದಲು ಬಾರದ ಭಾಷೆಯಲ್ಲಿ
ಕಣ್ಣಿನಾಳದ  ಕನ್ನಡಕ ತೆರೆದು ಓದುವವರಿಗಾಗಿ
 
ಮರದ ಕೊಂಬೆಗಳಲ್ಲಿ
ಇನ್ನೂ ಹಸಿರಾಗಿಯೇ ಇದೆ ಬದುಕು;
ಆದರೆ ಅದರ ಕೆಳಗೆ
ಎಷ್ಟು ಪುಟ್ಟ ವಿದಾಯಗಳ ಪಕಳೆಗಳು
ಈ ವಿದಾಯವನ್ನು ಕಾಣಲು
ಕಣ್ಣಿದ್ದರೆ ಸಾಲದು—
ಹೂವು ತೊಟ್ಟು ಕಳಚಿದ ಶಬದವನ್ನೂ
ಮೌನದಲ್ಲಿ ಆಲಿಸಬಲ್ಲ
ಅಂತ:ಕರಣ ಬೇಕು!

ಯಾವ ಶಬ್ದವೂ ಸಿಡಿಯದೆ
ಪರಿಮಳ ಮಾಯವಾಗದೆ
ಯಾವ ಕೈಯೂ ಬೀಳಿಸದೆ
ಯಾರ ಕೈಗೂ ಸಿಗದೆ
ಯಾರಿಗೂ ತಿಳಿಯದಂತೆ ಇಳಿಯುತ್ತಲೇ ಸಾಗಿದೆ
ಕೆಲವು ಸಂಬಂಧಗಳು ಹೀಗೆಯೇ ನಿರಂತರವಾಗಿ

ಬದುಕಿನಿಂದ ಕಳೆದು ಹೋಗುತ್ತಾರೆ
ಒಮ್ಮೆ ನೆರಳಾಗಿದ್ದವರು
ಒಂದು ದಿನ ನೆನಪಾಗುತ್ತಾರೆ;
ಆಪ್ತರೆನಿಸಿದ್ದವರು
ಮನೆಯ ದಾರಿಯಲ್ಲೇ
ಅಪರಿಚಿತರಂತೆ ಕಾಣುತ್ತಾರೆ.

ಆದರೆ ಈ ನೆಲ ಮಾತ್ರ
ಬಿದ್ದದ್ದನ್ನೂ ತನ್ನದಾಗಿಸಿಕೊಳ್ಳುತ್ತದೆ,
ಯಾರನ್ನೂ ಪ್ರಶ್ನಿಸುವುದಿಲ್ಲ!
ಮಣ್ಣಿಗೆ  ಬಿದ್ದಿದ್ದನ್ನು ತನ್ನದಾಗಿಸಿಕೊಂಡು
ಕಾಪಿಟ್ಟು ಕೊಳ್ಳುತ್ತದೆ

ಬದುಕಿನ ದೊಡ್ಡ ಸತ್ಯ ಇದೇ
ನಮ್ಮಿಂದ ದೂರವಾದದ್ದೆಲ್ಲ
ನಾಶವಾಗಿರುವುದಿಲ್ಲ
ಅದು ನಮ್ಮೊಳಗೆ
ಬೇರೆ ರೂಪದಲ್ಲಿ ಮುಂದುವರಿಯುತ್ತಿರುತ್ತದೆ
ಈ ಹೂವುಗಳಂತೆ
ಕೆಲವರು ನಮ್ಮ ಬದುಕಿನಿಂದ ಕಳಚಿಕೊಂಡರೂ
ಅವರನ್ನು ಹುಡುಕಲಾಗುವುದಿಲ್ಲಾ

ಅವರು
ನಡೆದುಹೋದ ಹೆಜ್ಜೆಗಳಲ್ಲಿರುವುದಿಲ್ಲ
ನಮ್ಮ ಮೌನದೊಳಗೆ ಕುಳಿತಿರುತ್ತಾರೆ.
ಮನಸ್ಸಿನೊಳಗೆ ಮಾತಾಡುತ್ತಾರೆ
ನೆನಪಿನಲ್ಲಿ ಕಥೆಯಾಗುತ್ತಾರೆ

ಇಂದು ಈ ಬಯಲು ಕೇವಲ
ಹೂವುಗಳಿಂದ ತುಂಬಿಲ್ಲ ಹಲವು
ರೂಪಾಂತರದಿಂದ
ಹಿಂದೆ ಯಾರೋ ಇದ್ದರು
ಎಂಬ ನೆನಪುಗಳಿಂದ ತುಂಬಿದೆ.

ಮೇಲಿನ ಕೊಂಬೆ
ತನ್ನ ಖಾಲಿತನವನ್ನು ನೋಡುತ್ತಿಲ್ಲ—
ಹೊಸ ಮೊಗ್ಗಿಗಾಗಿ
ಮೌನವಾಗಿ ಕಾಯುತ್ತಿದೆ
ಮುಗ್ಧತೆಯ ಹುಟ್ಟು
ಸಂಭ್ರಮದಲ್ಲಿ ಮುನ್ನುಗ್ಗಿ ಬರುತ್ತಿದೆ.

ಆದರೆ ಮರದ ಮೇಲಿರುವ ಈ ಹೂವುಗಳು
ನಮಗೆ  ಕೇಳುತ್ತಿವೆ:
“ಬದುಕಿನಿಂದ ಹೊರಟುಹೋಗುವುದೇ ಅಂತ್ಯವೇ?
ಅಥವಾ
ನಮ್ಮನ್ನು ಬಿಟ್ಟುಹೋದ ನಂತರವೂ
ನಮ್ಮೊಳಗೆ ಬದುಕುತ್ತಲೇ ಇರುತ್ತಾರೆಯೇ
 ಆಪ್ತರು  ನೋಯಿಸಿದವರು ಪ್ರೀತಿಕೊಟ್ಟವರು ದ್ವೇಷಿಸಿದವರೂ ..

ಪ್ರಕೃತಿ ಪ್ರತಿದಿನ
ಹುಟ್ಟುವುದನ್ನೂ ಕಳಚುವುದನ್ನೂ
ಒಂದೇ ಸೌಂದರ್ಯದಿಂದ
ಸಂಭ್ರಮದಿಂದ
ಆಚರಿಸುತ್ತಿರುತ್ತದೆ;
ನಾವು ಮಾತ್ರ
ಉಳಿದದ್ದನ್ನು ಬದುಕು ಎಂದೂ,
ಉದುರಿದ್ದನ್ನು ಅಂತ್ಯವೆಂದೂ
ತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ.


About The Author

Leave a Reply

You cannot copy content of this page

Scroll to Top