ಕಾವ್ಯ ಸಂಗಾತಿ
ರತ್ನರಾಯ ಮಲ್ಲ ಅವರ ಗಜಲ್

ನನ್ನೆದೆಯಲಿ ಅರಳಿದ ಚಿತ್ರವ ವರ್ಣಿಸಲು ಪದಗಳು ಸೋಲುತಿವೆ
ಭಾವದ ಕುಲುಮೆಯಲಿ ಗಜಲ್ ರಚಿಸಲು ಪದಗಳು ಸೋಲುತಿವೆ
ದಿನವೂ ನಿನ್ನ ಕಾಣುತಿರುವೆ ಅವನಿಗೆ ಬೆಳಕಾಗಿರುವ ನೇಸರನಲಿ
ಹೃದಯದಲಿ ನಿನ್ನ ಇರುವಿಕೆ ತೋರಿಸಲು ಪದಗಳು ಸೋಲುತಿವೆ
ಪ್ರೇಮದ ಹಸಿವು ನೀಗಿಸಲು ನಿನ್ನ ಅಂತರಂಗದ ಕದ ತಟ್ಟುತಿರುವೆ
ನಿನ್ನಧರಗಳ ಸವಿ ಪುಟದಲಿ ಜೋಡಿಸಲು ಪದಗಳು ಸೋಲುತಿವೆ
ಪ್ರೀತಿಸುತಿಲ್ಲ ಅಕ್ಷರಗಳಲಿ ನಿನ್ನನು ಉಸಿರಾಡುತಿರುವೆ ಬೇಬಿಮಾ
ನನ್ನಾರುಮೆಯ ಆಳದ ಅಳತೆ ತಿಳಿಸಲು ಪದಗಳು ಸೋಲುತಿವೆ
ಮಲ್ಲಿಗೆ ಸುಮದಂತೆ ನೆನಪು ದೂರವಿದ್ದರೂ ಕನಸಲಿ ಅರಳುವುದು
ಅಂತರದಲಿ ಜಿನುಗುವ ಕಂಬನಿ ರಮಿಸಲು ಪದಗಳು ಸೋಲುತಿವೆ

ರತ್ನರಾಯಮಲ್ಲ



