ಕಾವ್ಯ ಸಂಗಾತಿ
ರೋಹಿಣಿ ಜೆ
“ಫ್ರಿಜ್ – ಫ್ಲವರ್”


ಚೆಲುವಿತ್ತು ಎಲೆಯನಲವಿತ್ತು
ಮೊಗ್ಗಾದುದಕ್ಕೆ ಹಿರಿಹಿರಿಹಿಗ್ಗಿತ್ತು
ಗಿಡದಲ್ಲೇ ಅರಳುವ ಕನಸೊಂದ ಕಟ್ಟಿತ್ತು!
ಯಾವುದೋ ಕಾಣದ ಕೈ ಬಂತು
ಹಾಗೆಯೇ ಚಿವುಟಿ ಗೋಣ ಮುರಿದಿತ್ತು!
ಆಸೆಯ ಹೊಸಕಿ ಪರವಶವಾಗಿ ಹೊರಟಿತ್ತು!?
ದಾರಿಯುದ್ದಕ್ಕೂ ಸಂಭ್ರಮ
ಎಲ್ಲೋ ಎತ್ತರಕ್ಕೇರುವೆನೆಂದು!
ಸ್ವಲ್ಪವೇ ಸ್ವಲ್ಪ ಮೈಯರಳಿಸತೊಡಗಿತ್ತು
ಬಂದು ಬಿದ್ದದ್ದು ಮಾರುಕಟ್ಟೆಗೆ
ತನ್ನಂತಿರುವ ಸುತ್ತಲವರ ಕಂಡು
ಚೂರು ಚೂರೇ ಚೂರು ಧೈರ್ಯ ದೊರೆಯಿತು
ನೂರು, ಇನ್ನೂರು, ಐನೂರು,
“ಅಬ್ಬಬ್ಬಾ ಎಷ್ಟು ಏರಿದೆ ಬೆಲೆ”
ಮಂದಿಯೊಳಗೆ ನಡೆದಿತ್ತು ಗೊಣಗು ಗುಸುಗುಸು
ಏನಾಗ್ತಿದೆ ತನ್ನ ಮಾರಾಟವೇ?
ನೀರು ಚಿಮುಕಿಸಿದ್ದು ಅಕ್ಕರೆಗಲ್ಲ!
ನೆರಳೊಳಗೂ ಸುಡುವಕಾವಿಗೆ ಅಳುತ್ತಿತ್ತು ಮುಸುಮುಸು!
ಯಾರೋ ಮಹನೀಯರ ಫೋಟೋಗೆ
ಸಂಭಾಷಣೆ ಕೇಳಿಬಂದಿತ್ತು ಮೊಬೈಲಲ್ಲಿ
ಹೀಗಾದರೂ ಪಾವನ ಜನುಮ ಪರಿಮಳ ಬೀರಿತು
ಸಂದಣಿಯಲಿ ನಜ್ಜುಗುಜ್ಜು ಬಜ್ಜಿಯಾಗಿ
ಬಂದರೆ ಇಲ್ಲೂ ದೊರೆಯಲಿಲ್ಲ ಪ್ರೀತಿಯ ಸ್ಪರ್ಶ
ಎಂದೂ ಕಾಣದ ನಂ(ಮಂ)ಜಿನ ಕೋಣೆಯ ಸೇರಿತು
ಮಾರನೆಯ ದಿನ ಬಂದರು ಮನುಷ್ಯರು
ಹೊರತೆಗೆದು ಖುಷಿಯಲ್ಲಿ ನೋಡಲು
ಹೃದಯಕ್ಕೆ ಆಘಾತ ಕಾದಿತ್ತು ಹೂ ಹಣ್ಣಾಗಿತ್ತು!
ನೋಟಿನ ರಾಣಿ ಪರ್ಸನು ತೆರೆದು
ಇತ್ತಳು ಹೊಸತೊಂದು ತಾ ಎನುತ
ಕಣ್ಮುಂದೆ ಕನಸಕೊಂದವರ ಶಪಿಸಿ ಅದು ತಾ ಮಣ್ಣಾಗಿತ್ತು!
ರೋಹಿಣಿ ಜೆ



