ಕಾವ್ಯ ಸಂಗಾತಿ
ಜ್ಯೋತಿ ಮಾಳಿ ಬೆಳಗಾವಿ
ಗಜಲ್


ಸುಂದರ ಬಾಳಿಗೆ ಅಂದ ಅನುಭೂತಿಯೇ ಗೆಳೆತನ
ಹಸಿರು ಹಂದರ ಹಾಕಿ ತಂಪೆರೆಯುವುದೇ ಗೆಳೆತನ
ಕರೆಯದೆ ಬರುವ ನಿಜ ಆಪತ್ಬಾಂಧವನಿವನು
ಪ್ರತಿಕ್ಷಣಗಳಲಿ ಜೊತೆಯಲಿ ಇರುವುದೇ ಗೆಳೆತನ
ನಡೆದ ಹಾದಿ ಬದಲಾಗಲುಬಹುದು ಬಾಳಿನಲಿ
ಎಂದೂ ಬದಲಾಗದೆ ಉಳಿಯುವುದೇ ಗೆಳೆತನ
ನಗುವಿನಲಿ ಅಳುವಿನಲಿ ಮೌನದಲೂ ಜೊತೆಗೆ
ದೂರದಲ್ಲಿದ್ದರೂ ಮನವನಾಳುವುದೇ ಗೆಳೆತನ
ಬಾಳ ದಾರಿಗಳು ಬಲು ದುಸ್ತರವಾಗಿವೆ ಸಾಕಿ,
ಗುರುಗುಟ್ಟದೆ ಹೆಜ್ಜೆಗುರುತಾಗಿರುವುದೇ ಗೆಳೆತನ
ಅಂಟೆ ತಂಟೆಗಳಿಲ್ಲದ ಪ್ರಾಮಾಣಿಕ ಹೃದಯ
ಒಂಟಿತನವ ಕುಂತು ನೀಗಿಸುವುದೇ ಗೆಳೆತನ
ನೋವಿನಲೂ ನವಿರಾದ ಭಾವಗಳ ಸಂಗಾತಿ
ನಲಿವಿನ ಸವಿ ಸುಧೆ ಸುರಿಸುವುದೇ ಗೆಳೆತನ
ಗೆಳೆತನಕ್ಕೆ ಒಂದು ದಿನವಿರಬಹುದು ವರುಷದಿ
ಹಗಲಿರುಳೂ ನಿತ್ಯ ಹಸಿರಾಗಿರುವುದೇ ಗೆಳೆತನ
ಜ್ಯೋತಿಯ ನೋವುಗಳಿಗೆ ಮದ್ದಿನ ಬರವಿಲ್ಲ
ಮಂದ ಬೆಳಕಿರಲಿ ಸದಾ ಬೆಳಗುವುದೇ ಗೆಳೆತನ
ಜ್ಯೋತಿ ಮಾಳಿ ಬೆಳಗಾವಿ



