ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು.

ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು. 

ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು.

“ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.


About The Author

Leave a Reply

You cannot copy content of this page

Scroll to Top