ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಣ್ಣು ಮುಚ್ಚಿವೆ
ಮಣ್ಣು ಮುಚ್ಚುವ ಮುನ್ನ
ನಿನ್ನ ಮುಖವನ್ನೋಮ್ಮೆ
ನನ್ನ ಮುಚ್ಚಿದ ಕಣ್ಣುಗಳೊಳಗಿಂದ ನೋಡುವಾಸೆ

ಉಸಿರಾಡುವದ ಮರೆತ ನನ್ನ
ಉಸಿರ ತಿತ್ತಿಗಳ
ಪ್ರತಿ ಪದರಲಿ
ನಿನ್ನ ಹೆಸರಿರುವದ ನಿನಗೆ ತೋರಿಸುವಾಸೆ

ನಿನ್ನವಳು ನಾನೆಂದು
ಡಂಗುರ
ಸಾರಿದ ಸಮಕರಿಗೇ
ನೀನು ನನ್ನವನೆಂದು ತೋರಿಸುವಾಸೆ

ಮರಳಿ ಬಾರದೂರಿಗೆ ಹೊರಟಿರುವೆ
ಹೂವಿನಾ ತೇರನೇರಿ.
ಮುಡಿಗೆ ಮೊಳ ಮಲ್ಲಿಗೆ ಇಲ್ಲೆಂಬ
ಸುದ್ದಿ ಹಬ್ಬಬಾರದೆಂಬಾಸೆ.

ನಿನ್ನ ಆರುಮೆ ಅಮೂರ್ತ !
ಅರಿವಿದೆ ನನಗೆ.ಅರ್ಥಕಪಾರ್ಥ ಕಲ್ಪಿಸುವ
ಕಮಂಗಿ ತಿಮಿಂಗಿಲಗಳ
ಹಸಿವಿಗಹಾರ ನೀನಾಗ ಬಾರದೆಂಬಾಸೆ

ಒಂದೇ ವಾಕ್ಯದಲ್ಲೊಮ್ಮೆ
ಮರಣಕ್ಕೆ ಮದ್ದಿಲ್ಲ
ನನ್ನೊಲುಮೆಗೆ ಸಾವಿಲ್ಲ ಎಂದು
ನೀ ಉಸುರ ಬೇಕೆಂಬಾಸೆ

ಬಿಂದುಗಳಿಂದಲೇ ಬಿಗಿದ ನಿನ್ನ ಕಣ್ಣುಗಳಿಂದ
ನನ್ನ ನೋಡುತ್ತಾ..ನನ್ನ ಹಣೆಬರಹ ದಲ್ಲಿಲ್ಲದ ನೀನು ನನ್ನ
ಹಣೆಗೊಮ್ಮೆ ಮುತ್ತಿಕ್ಕಿ ಮಣ್ಣಿನಾ ದೇಹ
ತಣ್ಣಗೆ ಮಣ್ಣಿಗೆ ಕಳಿಸುವೆ ಎಂಬಾಸೆ


About The Author

Leave a Reply

You cannot copy content of this page

Scroll to Top