ಕಾವ್ಯ ಸಂಗಾತಿ
ವಿಮಲಾರುಣ ಪಡ್ಡಂಬೈಲು
“ಬಣ್ಣದ ಧಿರಿಸು”


ಬಚ್ಚಿಟ್ಟ ಬಣ್ಣದ ಧಿರಿಸಿಗೆ
ಹಚ್ಚಿಟ್ಟ ಹಣತೆಯ ಕಣ್ಣವನು
ಸಾಲು ದೀಪಗಳ
ಹೊನ್ನ ಕಿರಣದ ತಾರೆ ತಂದವನು
ತನ್ನ ಮನದಲ್ಲಿ ಭಿತ್ತಿದ ಭಾವಗಳ ಹಸೆಗೆ
ಸಾವಿರ ಚುಕ್ಕೆಗಳ ಇಟ್ಟವನು.
ಹಸಿರುಸಿರ ಸೀರೆಯೊಳು
ನೂತ ನೂಲುಗಳೇ ಸಾಕು
ಚಿತ್ತಾರ ತಂದ
ಭಾವಭಿತ್ತಿಯ ಬಣ್ಣಗಳ ಹೇಳಲು.
ಬಿದ್ದ ಮಳೆಗೆ ಮೊಳೆತ ನೆಲದ
ಹಸಿ ಪ್ರೀತಿಯಂಥವನ
ಮೋಹಕ್ಕೋ ಮೋದಕ್ಕೋ
ಒಲುಮೆಗೋ ನಲುಮೆಗೋ
ಪ್ರೀತಿ ಪ್ರೇಮದ ಅರ್ಥವ ಹೇಳಲು
ಯಾವ ಹೆಸರಿಡಲಿ?
ಸುಳಿ ಮಿಂಚ ಮಿಣುಕು ಕಂಗಳ
ಮಾಯಕಾರನ
ಮೊಗದಲ್ಲಡಗಿದ ಕೋಲ್ಮಿಂಚ
ಮುಗುಳು ನಗೆಯನೇನೆಂದು ಬಣ್ಣಿಸಲಿ?
ಉಜ್ವಲ ಬದುಕಿನ
ಅನಂತ ಕ್ಷಣಗಳ ಸಾಕ್ಷೀಕರಿಸಲು
ಸಂತಸ ಹಂಚಿ
ಸಮೀಪ ಬರಲು ತವಕಿಸುವ
ಜೀವದುಜ್ಜೀವದಲಿ
ನಾನಿರುವೆನೆಂದು
ಹೇಗೆ ಹೇಳಲಿ?
ಉಟ್ಟ ಸೀರೆಯ ಅಂಚಿನಲಿ
ಸೆರಗ ಸಿಕ್ಕಿಸಿಕೊಂಡಂತಿರುವ
ಮುಚ್ಚಿಟ್ಟ ಮನ ನನ್ನದು
ಎಲ್ಲವು ಬಚ್ಚಿಟ್ಟ ಭಾವದೊಳಡಗಿವೆ
ಎಂದು ಹೇಳದಿದ್ದರೂ
ಜೊತೆಗಿರುವ ಭಾವ ಕೊಡುವ ಭರದಲಿ
ಸೋತು ಹೋದವಳು….
ವಿಮಲಾರುಣ ಪಡ್ಡoಬೈಲು



