ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಈ ಹೊತ್ತಿನ ದಿನಗಳಲ್ಲಿ 
ನಿನ್ನ ಹಾಗೆ ಬದುಕಲುಂಟೆ ಗಾಂಧಿ
ಕ್ಷಣ ಕ್ಷಣಕೂ ಹೊರಳಿಸುವ ನಾಲಗೆಗಳ ನಡುವೆ
ಸತ್ಯವನ್ನೆ ಉಸಿರಾಡಿದಂತೆ ಬದುಕಲುಂಟೆ?!
ಶತಾಯ ಗತಾಯ ಗಳಿಸುವ ಉಳಿಸುವ
ಯೋಚನೆ ಯೋಜನೆಗಳ ನಡುವೆ ತಡವರಿಸುವ ನಾವು
ನಿನ್ನ ಹಾಗೆ ಅರೆಫಕೀರನಂತೆ ಬದುಕಲುಂಟೆ ಗಾಂಧಿ?!

ಧರ್ಮಗಳಿಗೆ ಬಣ್ಣಬಳಿದು,
ಜಾತಿಗೊಂದು ಮಠ ಕಟ್ಟಿ 
ಹೆಮ್ಮೆಯಿಂದ ಬೀಗುತಿರುವವರು ನಾವು
ನಿನ್ನ ಹಾಗೆ ಶ್ವೇತ ಭಾವದಿ ಬದಕುಲುಂಟೆ ಗಾಂಧಿ?!
ಬೆರಳುಮಾಡುವುದನ್ನೆ ಗುರಿಯಾಗಿಸಿಕೊಂಡವರು
ಲೋಪಗಳ ಹುಡುಕುವುದರಲ್ಲೇ ಕಳೆದು ಹೋದವರು
ನಿನ್ನ ಸತ್ಯ ಪ್ರಯೋಗಗಳ ಅರ್ಥವ ತಿಳಿಯದೆ 
ಫೋಟೋ ಫ್ರೇಮಿನಲ್ಲಿ ಬಂಧಿಸಿಟ್ಟು ಪೂಜೆಗೈಯುವವರು
ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?!

ಮೊದಲು ನೀನು ಬೆಲ್ಲವ ತ್ಯಜಿಸಿ ಆ ನಂತರ
ಅದರ ವರ್ಜ್ಯದ ಬಗ್ಗೆ ಮಾತಾಡಿದೆ 
ಉಪನ್ಯಾಸ, ಭಾಷಣಗಳೆ ಇಂದು ಮುನ್ನೆಲೆಯಲ್ಲಿರುವಾಗ
ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?
ಅನ್ಯರೆನಿಸಿದ ವಿದೇಶಿಗರಿಗೆ ಏಸುವಿನಂತೆ ಕಂಡ
ನಿನ್ನ ನಿಲುವು ನಮಗಿನ್ನೂ ಅರ್ಥವಾಗದಿರುವಾಗ 
ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?!

ಗಾಂಧಿ ಎಂಬ ಹೆಸರೇ ಭಾರವಾದ ಈ ಹೊತ್ತಿನಲಿ
“ಸರಳ ಜೀವನ ಉನ್ನತ ಚಿಂತನೆ”
“ಸೇವೆಯ ಪ್ರತಿಫಲ ಸೇವೆಯೇ”
ಎದೆಯೊಳಿಳಿಸಲಾಗದ ತತ್ವಗಳಾಗಿರುವಾಗ,
ಈಶ್ವರ-ಅಲ್ಲಾ, ರಾಮ-ರಹೀಮ ಎಲ್ಲಾ ಒಂದೇ
ಎಂದ ನಿನ್ನ ದೇಶದಲ್ಲಿ ಹೆಸರು, ಬಣ್ಣಗಳೇ ರಾರಾಜಿಸುತ್ತಿರುವಾಗ
ನಿನ್ನ ಹಾಗೆ ಬದುಕಲುಂಟೆ ಗಾಂಧಿ?!

ಆದರೂ ಹತಾಶೆಯ ಮೀರುವೆ
ನಿನ್ನಂತೆ  ಬದುಕಲಾಗದಿದ್ದರೂ 
ಆತ್ಮ ವಂಚನೆಯಲಿ ಬಳಲದಂತೆ 
ಬದುಕುವ ಸರಳ ಮಾರ್ಗವನ್ನು ಕಲಿತಿದ್ದೇನೆ.
ಮತ್ತೆ ಮತ್ತೆ ನನ್ನೊಳಗೆ ನಿನ್ನ ಕರಗಿಸಿಕೊಳ್ಳುತ್ತೇನೆ.
ನೀ ತೋರಿದ ಬದುಕಿನ ಸಂತಸದ 
ಸರಳ ನಡೆಯ ಕಂಡು ಪುಳಕಿತನಾಗುತ್ತೇನೆ.
ಜೀವಿಸುತ್ತೇನೆ, ಜೀವನವನ್ನು ಸಂಭ್ರಮಿಸುತ್ತೇನೆ.


About The Author

1 thought on “ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?””

Leave a Reply

You cannot copy content of this page

Scroll to Top