ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇ
ವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ

ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವು
ಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ

ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ ತುಂಬಿಸುವ ಹೊಣೆ ನಿನ್ನದಾಗಿದೆ
ಉತ್ತು ಬಿತ್ತಿ, ಸಮೃದ್ಧ ಫಸಲ ಬಯಸುವ ರೈತನೊಡನೆ ನೇಗಿಲ ಹೂಡಲು ಬಾ ಮುಂಗಾರು ಮಳೆಯೇ

ಓಡುತಿಹ ಕರಿಮೋಡಗಳ ಕಂಡು ಗಿರಿನವಿಲು, ಮಳೆ ಸುರಿಸಿರಿ, ನಾ ಗರಿಗೆದರಿ ನರ್ತಿಸುವೆ ಎನುತಿದೆ
ಕಾಡಿನ ಕೋಗಿಲೆಯೊಡನೆ ಮೇಘಮಲ್ಹಾರ ರಾಗದಿ ಋತುಗೀತೆ ಹಾಡಲು ಬಾ ಮುಂಗಾರು ಮಳೆಯೇ

ಅಡ್ಡಾದಿಡ್ಡಿಯಾಗಿ ಸುರಿಯುತ ನಿನ್ನೆಲ್ಲ ಉತ್ಸಾಹ ಉಲ್ಲಾಸವನು ಧರಣಿಯೊಡನೆ ಹಂಚಿಕೊಂಡುಬಿಡು
ಗುಡ್ಡಗಾಡಿನಿಂದಿಳಿದು ಶರಧಿಯ ಸೇರಲು ತುಡಿವ ನದಿಯೊಡನೆ ಓಡಲು ಬಾ ಮುಂಗಾರು ಮಳೆಯೇ

ಗುಡುಗು ಸಿಡಿಲುಗಳ ನಡುವೆ ಮಿಂಚುತ ಆರ್ಭಟಿಸುತ ಆಕಾಶದಿಂದ ಧರೆಯೆಡೆಗೆ ಸುರಿಯಬಾರದೇ
ಗಡಗಡ ನಡುಗುತ ಶಾಲೆಗೆ ಹೋಗುವ ಮಕ್ಕಳೊಡನೆ ನೀರಾಟ ಆಡಲು ಬಾ ಮುಂಗಾರು ಮಳೆಯೇ

ಮಧುರ ಭಾವದ ಕಬ್ಬಿಗರ ಮನದಲಿ ಮೊದಲ ಮಳೆ ಸ್ಪೂರ್ತಿ ಕಾರಂಜಿಯನು ಉಕ್ಕಿಸಬಲ್ಲದು
ಅಧರದಂಚಲಿ ನಗೆ ಸೂಸುವಂತಹ ಚೆಂದದ ಕವಿತೆಯಾಗಿ ಮೂಡಲು ಬಾ ಮುಂಗಾರು ಮಳೆಯೇ

————-

About The Author

Leave a Reply

You cannot copy content of this page

Scroll to Top