ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅಗೋ ಆ ಆಕಾಶದಲ್ಲಿ
ಮೋಡಗಳು ಚಲಿಸುವುದು ನಿಲ್ಲುವುದಿಲ್ಲ!
ಯಾರ ಕಣ್ಣೀರಿದ್ದರು ಇಲ್ಲದಿದ್ದರು
ಮಳೆಯು ಬರುವುದು ನಿಲ್ಲುವುದಿಲ್ಲ!

ಸ್ಮೃತಿಯ ಬಾಗಿಲ ಮೇಲೆ
ಒಂದಾದ ಮೇಲೊಂದು ಋತುಗಳ ಬೆರಳುಗಳು
ಮುಚ್ಚಿದ ಗುರುತು ಬಿಡುವುದು
ನಿಲ್ಲುವುದಿಲ್ಲ!

ನನಗೆ ಗೊತ್ತು ಈ ಕಾಲದ ಜಾತ್ರೆಯೊಳಗೆ
ಹೃದಯ ತಪ್ಪಿಹೋಗುವುದು ನಿಲ್ಲುವುದಿಲ್ಲ!
ಕೈಚೆಲ್ಲಿದ ಕ್ಷಣಗಳಿಗೆ ಇಲ್ಲಿ
ಮತ್ತೆ ಹೆಸರು ಕೊಡಲಾಗುವುದಿಲ್ಲ!

ಇಷ್ಟಾದರೂ ಹಾರಿ ಹೋದ ಹಕ್ಕಿಗಳ
ರೆಕ್ಕೆಗಳ ಸದ್ದು
ನನ್ನ ಅಂತರಂಗದೊಳಗೆ ಉಳಿಯುವುದಿಲ್ಲ!
ಅವು ಗೂಡಿನಲ್ಲಿ ಬಿಟ್ಟುಹೋದ
ಬೆಚ್ಚಗಿನ ನಿಶ್ಶಬ್ದ ನನ್ನದಾಗುವುದಿಲ್ಲ!
ಒಮ್ಮೆ ದೀಪ ಹಚ್ಚಿದ ಕೈಗಳು
ಮತ್ತೆ ಈ ಕತ್ತಲಿನಲ್ಲಿ
ನನಗಾಗಿ ಬೆಳಕು ಹಂಚುವುದಿಲ್ಲ!

ಈಗ ನೋಡಿ ಈ ಒಣಗಿದ ನದಿಯ ತಳದಲ್ಲಿ
ಚಿಕ್ಕ ಜಲಧಾರೆ
ಮೌನವಾಗಿ ಹುಟ್ಟಿ ಜಿನುಗುವುದು
ನಿಲ್ಲುವುದಿಲ್ಲ!
ನಾ ಕಂಡರೂ ಕಾಣದಿದ್ದರೂ
ನದಿ ಸಮುದ್ರದ ದಾರಿ ಬಿಟ್ಟು ಬರುವುದಿಲ್ಲ!


About The Author

Leave a Reply

You cannot copy content of this page

Scroll to Top