ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸ್ವಾಮಿ ನಾನು ಇಂದು ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ. ಹಾಗಂತ ನನಗೇನು ಮನೆಗೆ ಹೋಗೋಕೆ ಇಷ್ಟ ಇರಲಿಲ್ಲ. ಸ್ನೇಹಿತೆಯರೊಂದಿಗೆ ಆಫೀಸಿನ ಕೆಲಸ ಮಾಡುತ್ತಾ ಮಾಡುತ್ತಾ 36 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.ಕೆಲಸಕ್ಕೆ ಸೇರಿದ ಹೊಸದರಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದೆ. ಮದುವೆ ಮಕ್ಕಳು ಗಂಡ ಸಂಸಾರ ಅಂತ ಜಂಜಾಟದಲ್ಲಿ ಬಿದ್ದ ನಂತರ ಶುರುವಾಯಿತು ನೋಡಿ. ಗಂಡನಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳ ಶಾಲೆಯಲ್ಲಿ ಮೀಟಿಂಗ್,ಅದು ಇದು ಕಾರ್ಯಕ್ರಮಗಳು,ಅತ್ತೆಯ ಸೇವೆಗೆ, ಮಾವನ ಸೇವೆಗೆ, ಜೀವತೇಯಲಿಕೆ ಶುರುವಾದಂತೆ ಆಫೀಸಿನಲ್ಲಿ ದಕ್ಷತೆ ಕಡಿಮೆ ಆಯಿತು ಅನ್ನಿಸುತ್ತೆ . ನನ್ನ ಸ್ನೇಹಿತೆಯರು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ದೋಣಿಯಲ್ಲಿ ಇದ್ದವರು. ಆಫೀಸಿಗೆ ಲೇಟ್ ಆದಾಗ,ಅನ್ಯ ಮನಸ್ಕಳಾಗಿ ಕೆಲಸ ಮಾಡುತ್ತಾ ತಪ್ಪು ಮಾಡಿದಾಗ,ಆಫೀಸರ್ ಕೆಂಗಣ್ಣಿಗೆ ತುತ್ತಾಗುವುದು ಕೊನೆ ಕೊನೆಗೆ ಅಭ್ಯಾಸವಾಗಿ ನನಗೆ ಅವಳು ಅಥವಾ ಇನ್ನೊಬ್ಬಳು, ಸಮಾಧಾನ ಮಾಡುವುದು ನಾನು ಅವಳಿಗೆ, ಇವಳಿಗೆ, ಸಮಾಧಾನ ಮಾಡುವುದು ಇದ್ದೇ ಇರುತ್ತಿತ್ತು. ಹೀಗೇ ಮಕ್ಕಳ ಜವಾಬ್ದಾರಿ,ಅವರ  ಮದುವೆ,ಬಸಿರು, ಬಾಣಂತನ,ಹೀಗಂತ 60 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.

ಈಗ ಮಕ್ಕಳೆಲ್ಲ ಅವರವರ ಕಾಲ ಮೇಲೆ ನಿಂತಿದ್ದಾರೆ. ರೆಕ್ಕೆ ಬಲಿತ ಹಕ್ಕಿಗಳು.ತಮ್ಮ ತಮ್ಮ ಗೂಡಿನಲ್ಲಿ ಮರಿಗಳೊಂದಿಗೆ ಸುಖವಾಗಿದ್ದಾರೆ.ನಾವೀಗ ಯಾವುದೇ ನಿರ್ಬಂಧ ವಿಲ್ಲದೆ ಸೊಗಸಾಗಿ ಸೇವೆ ಸಲ್ಲಿಸಬಹುದು ಅಂದುಕೊಂಡರೆ, ಸರಕಾರವೇ ನಮ್ಮನ್ನು 60 ತುಂಬಿತು,ಕಡಿದು ಕಟ್ಟೆ ಹಾಕಿದ್ದು ಸಾಕು,ಮನೆಯಲ್ಲಿ ಇರಿ,ಅಂತ ಕಳಿಸುತ್ತಿದೆ. ತಪ್ಪಲ್ಲವೇ ಇದು.  ಹೋಗ್ಲಿ ಬಿಡಿ ಸ್ವಾಮಿ.ನಾವೀಗ ಸ್ವಚ್ಛಂದ ಪಕ್ಷಿಗಳಂತೆ ಹಾರಾಡುತ್ತಾ ಇರಬಹುದು ನಮಗೆ ಬೇಕಾದ ಊರಿಗೆ ಬೇಕಾದ ಸಮಯದಲ್ಲಿ ಬೇಕಾದಂತೆ ತಿರುಗಾಡಬಹುದು ರಜ ಕೇಳುವ  ಗೋಜೆ ಇಲ್ಲ ಅಂದುಕೊಂಡಿದ್ದೆ.ಆದರೆ….. ಆದದ್ದೇ ಬೇರೆ. ಸದ್ದಿಲ್ಲದೆ ನೆಂಟರಾದ ಸಕ್ಕರೆ ಕಾಯಿಲೆ ಬಂತು . ಅದರ ಅಣ್ಣ ಬಿ.ಪಿ.   ಬಂದು ಎರಡು ವರ್ಷ ಆಯ್ತು. ಸಾಲದ್ದಕ್ಕೆ ಮಂಡಿ ನೋವು, ಬೆನ್ನು ನೋವು. ವಾಕಿಂಗ್ ಮಾಡಬೇಕು ಅಂತ ಡಾಕ್ಟರ್ ಸುಲಭವಾಗಿ ಸಲಹೆ ಕೊಡುತ್ತಾರೆ ಕಣ್ರೀ . ಹಿಮ್ಮಡಿನೋವು ಬೇರೆ , ವಾಕಿಂಗ್ ಮಾಡಲು ಆಗಲ್ಲ. ಬಿಡಪ್ಪ ಇನ್ನುಮೇಲೆ ಮನೆಯಲ್ಲಿ ಇರ್ತೀನಿ ರುಚಿ ರುಚಿ ಆಗಿ ಮಾಡಿಕೊಂಡು ತಿನ್ನೋಣ ಅಂದ್ರೆ, ಶುಗರ್ ಬಿಪಿ ಕಾಟ. ಮಕ್ಕಳ ಮನೆಗೆ ಹೋಗಿ ಮೊಮ್ಮಕ್ಕಳನ್ನು ನೋಡಿಕೊಳ್ಳೋಣ ಎಂದರೆ ಅವರ ಜೊತೆ ಆಟ ಆಡಲಿಕ್ಕೆ ಆಗಲ್ಲ,ಎತ್ತಿಕೊಳ್ಳೋಕೂ ಆಗಲ್ಲ. ಅವರ ಹಿಂದೆ ಓಡೋಕೆ ಸಾಧ್ಯವೇ ಇಲ್ಲ. ಅವರೇನಾದರೂ ಬಿದ್ರೆ, ಅಯ್ಯೋ ಅಮ್ಮ, ಸರಿಯಾಗಿ ನೋಡಿಕೊಳ್ಳುವುದು ಅಲ್ವಾ, ಬೀಳೋ ತನಕ ಏನು ಮಾಡ್ತಾ ಇದ್ರೋ ಏನೋ ಅಂತಾರೆ, ಒಂದೊಂದೇ ಮಕ್ಕಳನ್ನು ಹೆತ್ತಿರುವ ಮಕ್ಕಳು.ಕಿವಿ   ಸರಿಯಾಗಿ ಕೇಳಲ್ಲ, ಅಂತ ಎಲ್ಲರೂ ಉಪೇಕ್ಷೆ ಮಾಡಿ ಜೋರಾಗಿಯೇ ಹೇಳ್ತಾರೆ. ‘ನಿನ್ನ ಹತ್ತಿರ ಯಾರು ಗಂಟಲು ಹರಿದುಕೊಳ್ಳುತ್ತಾರೆ ಮಾರಾಯ್ತಿ  ಅಂತಾರೆ.ಇವರು ಚಿಕ್ಕವರಿದ್ದಾಗ ನಾವೇನು ಕಮ್ಮಿ ಗಂಟಲು ಹರ್ಕೊಂಡಿದ್ವ. ಅದು ಹೇಳೋರ್ಯಾರು.

     ಇಷ್ಟು ದಿನ ಆಫೀಸಿನಲ್ಲಿ ಸ್ನೇಹಿತೆಯರು ಕಷ್ಟ ಸುಖ ವಿಚಾರಿಸುತ್ತಿದ್ದರು. ಸಲಹೆ ಸೂಚನೆ ಕೊಡುತ್ತಿದ್ದರು. ಈಗ ನಮ್ಮ ದುಃಖ ದುಮ್ಮಾನಗಳನ್ನು ಕೇಳುವವರು ಯಾರು?. ಇದರ ಮೇಲೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸುವ ಮಕ್ಕಳಿಂದ ಹತ್ತು ಹಲವು ರಿಸ್ಟ್ರಿಕ್ಷನ್ ಬೇರೆ.’ಖಾರ ತಿನ್ನಬೇಡ’ ‘ಉಪ್ಪು ತಿನ್ನಬೇಡ, ‘ಸಿಹಿ ತಿನ್ನಬೇಡ,’ನೀರು ಕುಡಿ ನೀರು ಕುಡಿ ನೀರು ಕುಡಿ’. ಉಪ್ಪು, ಖಾರ, ಸಿಹಿ ಎಲ್ಲಾ ಬಿಟ್ಟು…..ಈ ಸಂಭ್ರಮಕ್ಕೆ ನಾವು ಯಾಕಾದರೂ ಬದುಕಿದ್ದೇವೆಯೋ ಅನಿಸುತ್ತೆ. ಒಂದು ಕ್ಷಣ ಮಾತ್ರ ಅಷ್ಟೇ ಹಾಗನಿಸೋದು ಕಣ್ರೀ.ಸ್ಮಶಾನ ವೈರಾಗ್ಯ ಅಂತಾರಲ್ಲ ಹಾಗೆ.ನಿರಂತರ ಆ ಡಾಕ್ಟರ್, ಈ ಡಾಕ್ಟರ್,ಆ ಮಾತ್ರೆ, ಯೋಗ, ಧ್ಯಾನ, ಪ್ರಾಣಾಯಾಮ ಅಂತ ಏನೆಲ್ಲ ಕಸರತ್ತು ಮಾಡಿ ಇನ್ನೂ ಬದುಕುವ ಆಸೆ. ಬಹುಶಹ ಇದುವೇ ಜೀವನ ಅಂತ ಈಗ ಅರ್ಥ ಆಗ್ತಿದೆ. ಪೂರ್ತಿ ಅರ್ಥಮಾಡಿಕೊಳ್ಳೋಣ ಅನ್ನುವಷ್ಟರಲ್ಲಿ ಮೇಲೆ ಕುಳಿತಾನಲ್ಲ ಅವನು ತುಂಬಾ ಜಾಣ.’ ಸಾಕು ಬಾ, ನಿನ್ನ ಆಟ ಏನು ನಡೆಯದು ನನ್ನ ಮುಂದೆ,’ ಅಂತ ಕರೆದುಕೊಂಡು ಬಿಡುತ್ತಾನೆ. ಬರೋಲ್ಲ ಅನ್ನೋಕೆ ಅದೇನು ನಮ್ಮ ಮಾವನ ಮನೆನಾ, ಹೋಗಲೇಬೇಕಲ್ಲ.
     ಇಷ್ಟೆಲ್ಲದರ ಮಧ್ಯ ನನಗೆ ತುಂಬಾ ಬೇಸರವಾಗಿದ್ದು ಏನು ಗೊತ್ತೆ?. ಮೊನ್ನೆ ಪೇಪರ್‌ನಲ್ಲಿ 60 ವರ್ಷದ ವಯೋ ವೃದ್ದೆಯ ಸಾವು ಎಂಬ  ವಿಚಾರ. 60 ವರ್ಷದ ಮಹಿಳೆ ಅಂದಿದ್ದರೆ ಸಾಕಾಗುತ್ತಿರಲಿಲ್ಲವೇ ‘ವಯೋ ವೃದ್ಧೆ’ ಎಂಬ ವಿಶೇಷಣದ ಅವಶ್ಯಕತೆ ಇತ್ತೇ?. ಹೆಂಗಸರಿಗೆ ಈ ವಿಶೇಷಣ ಎಷ್ಟು ಬೇಜಾರು ತರಿಸುತ್ತೆ ಅನ್ನುವ ಕಾಮನ್ ಸೆನ್ಸ್ ಇಲ್ಲವಲ್ಲ.

ಸರ್ಕಾರ ಬೇರೆ ಈಗ ಹಿರಿಯ ನಾಗರಿಕರಿಗೆ ಅಂತ ಏನೇನೋ ಸವಲತ್ತು ನೀಡುತ್ತಿದೆ. ಒಂದು 10 ವರ್ಷ ಮೊದ್ಲೇನಾದ್ರೂ ಕೊಟ್ಟಿದ್ರೆ ಆ ಸವಲತ್ತುಗಳನ್ನು ಅನುಭವಿಸಿಯಾದರೂ ನೋಡಬಹುದಿತ್ತು. ಊರು ಹೋಗು ಕಾಡು ಬಾ ಅನ್ನುವಾಗ, ಸವಲತ್ತಿನ ಮುಂಡಾಮೋಚುತು  ಅಲ್ವಾ. ಒಟ್ಟಿನಲ್ಲಿ ಹಲ್ಲಿದ್ದಾಗ ಕಡ್ಲೆ  ಇಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ , ಅನ್ನೋದೇ ಜೀವನದ ನೀತಿ ಪಾಠ. ಏನಂತೀರಾ?  ಹೂ ಅಂತೀರಾ?
ಹಹ್ಹಹ್ಹ ಇಲ್ಲಪ್ಪಾ ಇಲ್ಲ. ಆ ದೇವರು ನಮಗೆ ಎಷ್ಟೊಂದು ಎಂಡೋಮೆಂಟ್ ಪಾಲಿಸಿಗಳನ್ನು ಕೊಟ್ಟಿದ್ದಾನೆ ಗೊತ್ತಾ. ಹಾಗೇ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ಬನ್ನಿ.
     ನಿಮಗೆ ದೇವರು ಕೈ, ಕಾಲು, ಕಣ್ಣು, ಮೂಗು, ಬಾಯಿ, ಎಲ್ಲಾ ಅಂಗಗಳನ್ನು ನೀಡಿದ್ದಾನೆ ಅಲ್ವಾ. ನೀವೇನು ಕುಂಟರೆ,? ಕುರುಡರೆ,? ಅಥವಾ ಕೈಲಾಗದವರೇ,? ಅಲ್ಲವಲ್ಲ. ಕುಂಟರು,  ಕುರುಡರನ್ನು ನೋಡಿದಾಗ ನಾವೇ ಪುಣ್ಯವಂತರು ಅಂದುಕೊಂಡಿಲ್ಲವೇ. ಇನ್ನು ನಿಮಗೆ ಅಪ್ಪ-ಅಮ್ಮಂದಿರ ಪ್ರೀತಿ ಸಿಕ್ಕಿದೆ. ಸುಖವಾಗಿ ಅಂತಲೇ ಇಟ್ಟುಕೊಳ್ಳಿ. ಬೆಳೆದು ಓದಿ ವಿದ್ಯಾವಂತರಾಗಿದ್ದೀರಿ. ಈ ಭಾಗ್ಯ ಎಷ್ಟು ಜನರಿಗುಂಟು?. ಮೂರು ಹೊತ್ತು ಸುಖವಾಗಿ ಉಂಡು, ಉಟ್ಟು, ಬೆಳೆಯಲಿಲ್ಲವೇ? ನಾವೇ ಪುಣ್ಯವಂತರಲ್ಲವೇ?, ಜಗತ್ತಿನಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದವರನ್ನು ನೋಡಿದಾಗ.
     ಮೊದಲು ಕೆಲಸ ಸಿಕ್ಕಾಗ, ಮನವ ನರಿತು ನಡೆವ ಪತಿ/ ಪತ್ನಿ ಸಿಕ್ಕಾಗ, ಜೀವನ ಬಣ್ಣ ಬಣ್ಣವಾಗಿ ಎಷ್ಟು ಸುಂದರ ಇಂದು ಅನಿಸಲಿಲ್ಲವೇ?
ನಿಮ್ಮದೇ ಕನಸಿನ ಮನೆ ನೀವು ಕಟ್ಟಿದಾಗ, ಮೊದಲು ತಾಯಿ / ತಂದೆ ಆದಾಗ,ಸ್ವರ್ಗ ಮೂರೇ ಗೇಣು ಅನಿಸಲಿಲ್ಲವೇ? ನಿಮ್ಮ ಮಗು ನಿಮ್ಮ ಮನೆ,ಮಡಿಲು ತುಂಬಿದಾಗ, ಅದರ ಲಾಲನೆ ಪಾಲನೆ ಮಾಡುತ್ತಾ ಜಗತ್ತನ್ನೇ ಮರೆಯಲಿಲ್ಲವೇ ನೀವು?. ಮಗು ಬೆಳದಂತಿಲ್ಲ ಓದು,ವಿದ್ಯಾಭ್ಯಾಸ, ಉದ್ಯೋಗ,ಮದುವೆ, ಬಸಿರು, ಬಾಣಂತನಗಳಲ್ಲಿ ಸ್ವರ್ಗ ಸುಖ ಅನುಭವಿಸಲಿಲ್ಲವೇ?….. ಅದೇ ಜೀವನವಲ್ಲವೇ!!.
ವರ್ಷಗಳು ಉರುಳಿದ್ದು ಗೊತ್ತಾಗಲಿಲ್ಲ. ದೇವರು ಒಂದರ ಮೇಲೆ ಒಂದು ಸಂತಸದ ಕ್ಷಣಗಳನ್ನು ಕಲ್ಪಿಸಿಕೊಟ್ಟ. ಅದು ಹಲ್ಲು, ಕಡಲೆ, ಎರಡು ಇದ್ದ ಕಾಲವಲ್ಲವೇ.ಆಗ ನಿಮಗೆ ದೇವರಿಗೆ ಒಂದು thanks ಹೇಳೋಕು ಪುರುಸೊತ್ತಿರಲಿಲ್ಲ.
    ಅವನು ತುಂಬಾ ಜಾಣ. ನಮ್ಮಂತಹ ಕೋಟಿ ಕೋಟಿ ಜನರನ್ನು ನೋಡಿದವನಲ್ಲವೇ. ಇಳಿ ವಯಸ್ಸು ಕೇವಲ ಆತನ ಸ್ಮರಣೆಗೆ ಮಾತ್ರ ಮೀಸಲು ಇಡಬೇಕೆಂದು ಬೇರೆಲ್ಲಾ ಅವಯವಗಳನ್ನು, ಒಂದೊಂದಾಗಿ (ಅಂದರೆ  ಕಣ್ಣು, ಕಿವಿ ಇತ್ಯಾದಿ ), off ಮಾಡ್ತಾ ಬರ್ತಾನೆ. ಇನ್ನಾದರೂ ನಾವು ದೇವರನ್ನು  ಜಪಿಸಬೇಕಲ್ಲವೇ?   (  ಈಗಲಾದರೂ ಜಪಿಸ್ತಾರ ಅಂತ ಟೆಸ್ಟ್ ಮಾಡ್ತಾನೆ ಮಾರಾಯ್ರೆ ). ಗಂಡ ಹೇಳಿದ್ದು ಹೆಂಡತಿಗೆ ಕೇಳಲ್ಲ. ಹೆಂಡತಿ ಹೇಳಿದ್ದು ಗಂಡನಿಗೆ ಕೇಳಲ್ಲ. ಹಾಗಾಗಿ ಅವರ ನಡುವೆ ಜಗಳವೇ ಇಲ್ಲವಲ್ಲ. ಅದಕ್ಕೆ ಅವನನ್ನ ತುಂಬಾ ಬುದ್ಧಿವಂತ ಅಂದಿದ್ದು. ಕವಿಯೊಬ್ಬರು ಹೇಳಿದಂತೆ, ಹಲ್ಲು ಹೋಗಿ ಬೆನ್ನು ಬಾಗಿ ಶರೀರ ಗೂಡಾಗುವ ಮುನ್ನ —- ನೆನೆಯೋಣ ಆ ಶಿವನನ್ನ. ಏನಂತೀರಾ?.


,

About The Author

Leave a Reply

You cannot copy content of this page

Scroll to Top